ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಪಿಲ್, ಧೋನಿ ಸಾಲಿಗೆ ರೋಹಿತ್; ವಿರಾಟ್ ಪಂದ್ಯಶ್ರೇಷ್ಠ, ಬೂಮ್ರಾ ಸರಣಿಶ್ರೇಷ್ಠ

Published 30 ಜೂನ್ 2024, 2:39 IST
Last Updated 30 ಜೂನ್ 2024, 2:39 IST
ಅಕ್ಷರ ಗಾತ್ರ

ಬಾರ್ಬಡೋಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್ ಅಂತರದ ರೋಚಕ ಗೆಲುವು ಗಳಿಸಿದ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕದ (76) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಹೆನ್ರಿಚ್ ಕ್ಲಾಸೆನ್ (52) ದಿಟ್ಟ ಹೋರಾಟದ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕಪಿಲ್, ಧೋನಿ ಸಾಲಿಗೆ ರೋಹಿತ್...

ದಿಗ್ಗಜ ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ಬಳಿಕ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದ ಮೂರನೇ ನಾಯಕ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. 1983ರಲ್ಲಿ ಕಪಿಲ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು, 2007ರ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿತ್ತು. 17 ವರ್ಷಗಳ ಬಳಿಕವೀಗ ರೋಹಿತ್ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಜಯಿಸಿದೆ. ಆ ಮೂಲಕ ದಿಗ್ಗಜರಾದ ಕಪಿಲ್, ಧೋನಿ ಸಾಲಿನಲ್ಲಿ ರೋಹಿತ್ ಗುರುತಿಸಿಕೊಂಡಿದ್ದಾರೆ.

ರೋಹಿತ್ ನಾಯಕತ್ವದಲ್ಲೇ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಹಾಗೂ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ರನ್ನರ್-ಅಪ್ ಆಗಿತ್ತು. 2022ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರಿದ ಸಾಧನೆ ಮಾಡಿತ್ತು.

ಭಾರತದ ಐಸಿಸಿ ವಿಶ್ವಕಪ್ ಗೆಲುವು:

1983: ಏಕದಿನ ವಿಶ್ವಕಪ್

2007: ಟ್ವೆಂಟಿ-20 ವಿಶ್ವಕಪ್

2011: ಏಕದಿನ ವಿಶ್ವಕಪ್

2024: ಟ್ವೆಂಟಿ-20 ವಿಶ್ವಕಪ್

ಫೈನಲ್‌ನಲ್ಲಿ ವಿರಾಟ್ ಪಂದ್ಯಶ್ರೇಷ್ಠ...

ಟೂರ್ನಿಯುದ್ಧಕ್ಕೂ ಕಳಪೆ ಲಯದಿಂದ ಬಳಲುತ್ತಿದ್ದ ವಿರಾಟ್ ಕೊಹ್ಲಿ, ಅತಿ ಒತ್ತಡದ ಫೈನಲ್‌ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿರಾಟ್ 59 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟಿ20 ವಿಶ್ವಕಪ್ ಗೆದ್ದ ಭಾರತೀಯ ಆಟಗಾರರ ಸಂಭ್ರಮ

ಟಿ20 ವಿಶ್ವಕಪ್ ಗೆದ್ದ ಭಾರತೀಯ ಆಟಗಾರರ ಸಂಭ್ರಮ

(ಪಿಟಿಐ ಚಿತ್ರ)

ದ.ಆಫ್ರಿಕಾಗೆ 30 ಎಸೆತಗಳಲ್ಲಿ ಬೇಕಿದ್ದು 30 ರನ್ ಮಾತ್ರ...ಆದರೆ...

177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಲಿದೆ ಎಂದೇ ಅಂದಾಜಿಸಲಾಗಿತ್ತು. ಒಂದು ಹಂತದಲ್ಲಿ 15 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಅಲ್ಲದೆ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 30 ರನ್ ಮಾತ್ರ ಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಅರ್ಷದೀಪ್ ಸಿಂಗ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು.

ಇದರೊಂದಿಗೆ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದ ಹೆನ್ರಿಚ್ ಕ್ಲಾಸೆನ್ ಹೋರಾಟವು ವ್ಯರ್ಥವೆನಿಸಿತು. ಪಾಂಡ್ಯ ಮೂರು ಮತ್ತು ಬೂಮ್ರಾ ಹಾಗೂ ಅರ್ಷದೀಪ್ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.

ಬೂಮ್ರಾ ಸರಣಿಶ್ರೇಷ್ಠ, ಅರ್ಷದೀಪ್‌ಗೆ 17 ವಿಕೆಟ್...

ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ಫಜಲ್‌ಹಕ್ ಫರೂಕಿ ಜೊತೆ ಅರ್ಷದೀಪ್ ಅಗ್ರಸ್ಥಾನ ಹಂಚಿಕೊಂಡರು. ಫರೂಕಿ ಹಾಗೂ ಅರ್ಷದೀಪ್ ತಲಾ 17 ವಿಕೆಟ್ ಗಳಿಸಿದರು.

ಮತ್ತೊಂದೆಡೆ ಅತ್ಯಂತ ಟೂರ್ನಿಯಲ್ಲಿ ನಿಖರ ಬೌಲಿಂಗ್ ಸಂಘಟಿಸುವ ಮೂಲಕ 15 ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಬೂಮ್ರಾ 4.17ರ ಏಕಾನಮಿ ಕಾಪಾಡಿಕೊಂಡರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆಯಾಗಿದೆ.

ರೋಹಿತ್, ಕೊಹ್ಲಿ ವಿದಾಯ...

ವಿಶ್ವಕಪ್ ಗೆಲುವಿನ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2007ರ ಟ್ವೆಂಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರೋಹಿತ್, ಎರಡನೇ ಸಲ ಟಿ20 ವಿಶ್ವಕಪ್ ಜಯಿಸಿದ ಭಾರತ ತಂಡದ ಏಕಮಾತ್ರ ಆಟಗಾರ ಎನಿಸಿದ್ದಾರೆ. ವಿರಾಟ್ 2011ರಲ್ಲಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.

ಕೋಚ್ ಆಗಿ ವಿಶ್ವಕಪ್ ಗೆದ್ದ ದ್ರಾವಿಡ್...

ಟೀಮ್ ಇಂಡಿಯಾ ಕೋಚ್ ಆಗಿ ವಿಶ್ವಕಪ್ ಗೆಲುವಿನೊಂದಿಗೆ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ. 2007ರಲ್ಲಿ ಇದೇ ಕೆರೀಬಿಯನ್ ನಾಡಿನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ದ್ರಾವಿಡ್ ನಾಯಕತ್ವದಲ್ಲೇ ಭಾರತ ತಂಡವು ಹೀನಾಯ ಸೋಲು ಅನುಭವಿಸಿತ್ತು. ಈಗ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡವು ಕೆರೀಬಿಯನ್ ನೆಲದಲ್ಲಿ ಟಿ20 ಪ್ರಶಸ್ತಿ ಜಯಿಸಿದೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

(ರಾಯಿಟರ್ಸ್ ಚಿತ್ರ)

ಹಾರ್ದಿಕ್ ಕೊನೆಯ ಓವರ್ ಮ್ಯಾಜಿಕ್...ಸೂರ್ಯ ಅದ್ಭುತ ಕ್ಯಾಚ್...

ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಆದರೆ ಮಿಲ್ಲರ್ ಹೊಡೆದ ಚೆಂಡನ್ನು ಬೌಂಡಿರ ಗೆರೆ ಅಂಚಿನಲ್ಲಿ ಅದ್ಭುತವಾಗಿ ಹಿಡಿದ ಸೂರ್ಯಕುಮಾರ್ ಯಾದವ್, ಭಾರತದ ಪಾಳಯದಲ್ಲಿ ಗೆಲುವಿನ ನಗೆ ಬೀರಲು ನೆರವಾದರು. ಮತ್ತೊಂದೆಡೆ ಐಪಿಎಲ್ ವೇಳೆ ಅತಿ ಹೆಚ್ಚು ಟೀಕೆಗೆ ಒಳಗಾಗಿದ್ದ ಹಾರ್ದಿಕ್ ತಮ್ಮ ಕೊನೆಯ ಓವರ್‌ನಲ್ಲಿ ಎಂಟು ರನ್ ಮಾತ್ರ ಬಿಟ್ಟುಕೊಡುವ ಮೂಲಕ ಹೀರೊ ಎನಿಸಿದರು.

ಭಾರತ ಅಜೇಯ...

ಸತತ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ವಿಶ್ವಕಪ್ ಕಿರೀಟ ಎತ್ತಿ ಹಿಡಿದಿದೆ. ಆ ಮೂಲಕ ಅಜೇಯವಾಗಿ ಉಳಿಯುವ ಮೂಲಕ ವಿಶ್ವಕಪ್ ಗೆದ್ದ ಮೊದಲ ತಂಡವೆನಿಸಿದೆ. ಈ ಜಯದೊಂದಿಗೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಗೆಲುವು ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆಗೆ ರೋಹಿತ್ ಭಾಜನರಾದರು. ಮತ್ತೊಂದೆಡೆ ಮೊಟ್ಟ ಮೊದಲ ಟ್ರೋಫಿ ಗೆಲ್ಲುವ ದಕ್ಷಿಣ ಆಫ್ರಿಕಾದ ಕನಸು ಕೈಗೂಡಲಿಲ್ಲ.

ಎರಡು ಟಿ20 ವಿಶ್ವಕಪ್ ಗೆದ್ದ ರಾಷ್ಟ್ರ:

ವೆಸ್ಟ್‌ಇಂಡೀಸ್ (2012, 2016)

ಇಂಗ್ಲೆಂಡ್ (2010, 2022)

ಭಾರತ (2007, 2024)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT