ಗಾಳಿಯಲ್ಲಿ ಚೆಂಡನ್ನು ತೇಲಿಬಿಟ್ಟು, ಮುಖದ ಮೇಲೆ ತುಂಟತನ ತುಳುಕಿಸುವ ಯಜುವೇಂದ್ರ ಚಾಹಲ್ ಒಂಥರಾ ಮಜಾ ಮನುಷ್ಯ. ಸಣಕಲು ದೇಹದ ಮೇಲೆ ಸಿಕ್ಕಿಸಿದಂತೆ ಕಾಣುವ ಅವರ ಮೆದುಳಿನಲ್ಲಿನ ಸ್ಪಿನ್ನರ್ ಏನೆಲ್ಲ ಬಲೆ ಹೆಣೆಯುತ್ತಿರುತ್ತಾನೆ. ಐಪಿಎಲ್‌ನಲ್ಲಿ ಈಗ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅವರು.

ಯಜುವೇಂದ್ರ ಚಾಹಲ್ ಅವರನ್ನು ಕನ್ನಡದ ಕ್ರಿಕೆಟ್ ವೀಕ್ಷಕ ವಿವರಣೆಗಾರರು ‘ಚದುರಂಗಿ’ ಎಂಬ ಗುಣವಿಶೇಷಣದೊಂದಿಗೆ ಬಣ್ಣಿಸುತ್ತಾರೆ. ಕ್ರಿಕೆಟ್ ಆಟದ ಜಾಣ್ಮೆಯ ದೃಷ್ಟಿಯಲ್ಲಿ ನೋಡಿದರೆ ಇದು ಉತ್ಪ್ರೇಕ್ಷಿತ ಬಣ್ಣನೆ. ಆದರೆ, ಈ ಆಟಗಾರನ ಬಾಲ್ಯದ ಪುಟಗಳನ್ನು ತಿರುವಿಹಾಕಿದರೆ, ಅದಕ್ಕೂ ಅರ್ಥ ದಕ್ಕುತ್ತದೆ. ಏಳನೇ ವಯಸ್ಸಿನಲ್ಲಿ ಯಜುವೇಂದ್ರ ಮನೆಯೊಳಗೆ ಇದ್ದರೆ ಚೆಸ್ ಬೋರ್ಡ್ ಎದುರಲ್ಲಿ ಕೂರುತ್ತಿದ್ದರು. ಹೊರಗೆ ಬಿದ್ದರೆ, ಕೈಯಲ್ಲಿ ಕ್ರಿಕೆಟ್ ಚೆಂಡು. 2011ರಲ್ಲಿ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್(ಐಪಿಎಲ್)ಗೆ ಆಯ್ಕೆಯಾದಾಗ, ಅವರು ಬರೀ ಒಂದು ಪಂದ್ಯ ಆಡಿದ್ದರು. ಈಗ ಈ ಮಾದರಿಯ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. 183 ವಿಕೆಟ್‌ಗಳನ್ನು ಪಡೆದಿದ್ದ ಡ್ವಾನ್ ಬ್ರಾವೊ ಹೆಸರಿನಲ್ಲಿ ಇದ್ದ ದಾಖಲೆಯನ್ನು ಮೇ 11ರಂದು ಚಾಹಲ್ ದಾಟಿದರು. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಲ್ಕು ಬ್ಯಾಟ್ಸ್‌ಮನ್‌ಗಳನ್ನು ಅವರು ಪೆವಿಲಿಯನ್‌ಗೆ ಕಳುಹಿಸಿದ್ದೇ ಈ ಸಾಧನೆ ಸಾಧ್ಯವಾಯಿತು.

ಯಜುವೇಂದ್ರ ಹರಿಯಾಣದ ಹುಡುಗನಾಗಿದ್ದಾಗ 19ನೇ ವಯಸ್ಸಿನಲ್ಲೇ ಇಂದೋರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡುವ ಅವಕಾಶ ಪಡೆದುಕೊಂಡರು. ಅದರಿಂದಲೇ ಐಪಿಎಲ್‌ಗೆ ಆಯ್ಕೆಯಾದದ್ದು. ಹರಭಜನ್ ಸಿಂಗ್ ಹಾಗೂ ಪ್ರಜ್ಞಾನ್ ಓಝಾ ಆಗ ಮುಂಬೈ ಇಂಡಿಯನ್ಸ್ ತಂಡದ ನೆಚ್ಚಿನ ಸ್ಪಿನ್ನರ್‌ಗಳಾಗಿದ್ದರಿಂದ ಒಂದು ಪಂದ್ಯದಲ್ಲಿ ಆಡುವ ಅವಕಾಶವಷ್ಟೆ ಸಿಕ್ಕಿದ್ದು. ಮತ್ತೆ 2014ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈ ಲೆಗ್ ಸ್ಪಿನ್ನರ್ ಅನ್ನು ಬುಟ್ಟಿಗೆ ಹಾಕಿಕೊಂಡಿತು. ವಿರಾಟ್ ಕೊಹ್ಲಿ ಬೌಲಿಂಗ್ ದಾಳಿಯಲ್ಲಿ ಯಜುವೇಂದ್ರನ ಮೊನಚನ್ನು ಯಾವ ಮಟ್ಟಕ್ಕೆ ನೆಚ್ಚಿಕೊಂಡರು ಎಂದರೆ, ಆ ಬಾರಿಯ ಎಲ್ಲ ಪಂದ್ಯಗಳಲ್ಲೂ ಆಡಿಸಿದರು. ಮರುವರ್ಷವೇ ಎಲ್ಲ ಐಪಿಎಲ್ ಪಂದ್ಯಗಳಿಂದ 44 ವಿಕೆಟ್‌ಗಳು ಚಾಹಲ್ ಖಾತೆಗೆ ಸೇರಿದವು. ಐಪಿಎಲ್‌ನ ಮೊನಚೇ ಅಂತರರಾಷ್ಟ್ರೀಯ ಟ್ವೆಂಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಸೃಷ್ಟಿಸಿದ್ದು. ಇದರಲ್ಲಿಯೂ ಕೊಹ್ಲಿ ಪಾತ್ರವಿದೆ. ಈಗ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡದ ಪರವಾಗಿ ಅವರು ಕರಾಮತ್ತು ತೋರುತ್ತಿದ್ದಾರೆ.

ಚಾಹಲ್ ಕಂಪ್ಯೂಟರ್‌ನಲ್ಲಿ ಚೆಸ್ ಆಡುತ್ತಾ ನಡೆಗಳಲ್ಲಿ ಕೈ ಪಳಗಿಸಿಕೊಂಡವರು. ನೋಡನೋಡುತ್ತಲೇ ರಾಷ್ಟ್ರಮಟ್ಟದ ಚೆಸ್ ಆಟಗಾರನಾಗಿ ಬೆಳೆದದ್ದು ಇತಿಹಾಸ. 2002ರಲ್ಲಿ ಕೋಲ್ಕತ್ತದಲ್ಲಿ ನಡೆದ 12 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಷ್‌ನಲ್ಲಿ ಗೆದ್ದು, ಆಮೇಲೆ ಏಷ್ಯನ್ ಯೂತ್ ಚೆಸ್ ಆಡಿದರು. ಅಲ್ಲಿ 13–18ನೇ ಸ್ಥಾನ ಸಂದಿತು. ಗ್ರೀಸ್‌ನ ಹಲ್ಕಿಡಿಕಿಯಲ್ಲಿ ವಿಶ್ವ ಚಾಂಪಿಯನ್‌ಷಿಪ್ ಆಡಲು ಹೋದರು. ಅಲ್ಲಿ 67ನೇ ಸ್ಥಾನ ಬಂತಷ್ಟೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚೆಸ್‌ನಲ್ಲಿ ಸೊಗಸಾಗಿ ಆಡಬೇಕಾದರೆ ವರ್ಷಕ್ಕೆ ತರಬೇತಿ ಪಡೆಯಲು ಆಗ ₹5 ಲಕ್ಷ ಬೇಕಿತ್ತು. ಪ್ರಾಯೋಜಕರಿಗಾಗಿ ಹುಡುಕಾಡಿ, ಹೈರಾಣಾದರು. ಒಳಾಂಗಣದ ಆಟ ಬಿಟ್ಟು, ಹೊರಾಂಗಣಕ್ಕೆ ಜಿಗಿದರು.

2016ರಲ್ಲಿ ಜಿಂಬಾಬ್ವೆ ಎದುರು ಏಕದಿನ ಪಂದ್ಯಗಳನ್ನಾಡಲು ಬುಲಾವು ಬಂದಾಗ ಎರಡನೇ ಪಂದ್ಯದಲ್ಲೇ 25 ರನ್ ಕೊಟ್ಟು 3 ವಿಕೆಟ್ ಕಿತ್ತ ಯಜುವೇಂದ್ರ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.

2017ರಲ್ಲಿ ಅಂತರರಾಷ್ಟ್ರೀಯ 20-ಟ್ವೆಂಟಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ (23) ಗಳಿಸಿದ ಬೌಲರ್ ಎನಿಸಿಕೊಂಡರು. ಅಷ್ಟೇ ಅಲ್ಲ, ಚುಟುಕು ಪಂದ್ಯದಲ್ಲಿ 6 ವಿಕೆಟ್ ಪಡೆದಿರುವ ಸಾಧನೆಯೂ ಅವರ ಹೆಸರಲ್ಲಿದೆ.

ಯಜುವೇಂದ್ರ ಚಾಣಾಕ್ಷ ಲೆಗ್ ಸ್ಪಿನ್ನರ್. ಅನಿಲ್ ಕುಂಬ್ಳೆ ತರಹದ ಸಾಂಪ್ರದಾಯಿಕ ಗೂಗ್ಲಿಗಳು ಅವರ ಬಳಿ ಹೆಚ್ಚಾಗಿ ಇಲ್ಲ. ಅದನ್ನು ದಿಢೀರನೆ ಅವರು ಪ್ರಯೋಗಿಸುವುದರಲ್ಲಿ ಯಶಸ್ಸು ಇದೆ. ಚೆಂಡನ್ನು ತೇಲಿಬಿಟ್ಟು, ಬ್ಯಾಟ್ಸ್‌ಮನ್ ಹೊರಗೆ ಬಂದು ಆಡುವಂತೆ ಕೆಣಕುವ ಶೈಲಿ ಅವರದ್ದು. ಪುಟಿದ ಮೇಲೆ ದಿಢೀರನೆ ನುಗ್ಗುವ ‘ಸ್ಕಿಡರ್’ಗಳನ್ನು ಹಾಕುವುದರಲ್ಲಿ ನಿಷ್ಣಾತರು. ಪಿಚ್ ಸುತ್ತಮುತ್ತಲಿನ ಮಣ್ಣನ್ನು ಕೈಗೆ ಮೆತ್ತಿಕೊಂಡು, ಮಂಜಿನ ನೀರು ಮೆತ್ತಿದ ಚೆಂಡಿನ ಗ್ರಿಪ್ ಹಿಡಿಯುವ ಯಜುವೇಂದ್ರ ಮುಖದಲ್ಲಿ ಸದಾ ಲೆಕ್ಕಾಚಾರವೊಂದು ಕುಣಿಯುತ್ತಾ ಇರುತ್ತದೆ. 72 ಏಕದಿನ ಪಂದ್ಯಗಳಲ್ಲಿ 121, 75 ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 91 ವಿಕೆಟ್‌ಗಳನ್ನು ಅವರು ಗಳಿಸಿದ್ದಾರೆ. ಐಪಿಎಲ್‌ನಲ್ಲಿ 143 ಪಂದ್ಯಗಳಲ್ಲಿ 187 ವಿಕೆಟ್‌ಗಳು ಸಂದಿರುವುದು ವಿಕ್ರಮ.

ಚುಟುಕು ಕ್ರಿಕೆಟ್ ಶುರುವಾದಾಗ ಬಿ.ಎಸ್. ಚಂದ್ರಶೇಖರ್ ತರಹದ ಗೂಗ್ಲಿ ಬೌಲರ್ ಅದನ್ನು ಟೀಕೆ ಮಾಡಿದ್ದರು. ಚಾಹಲ್ ತರಹದವರು ಅದನ್ನೇ ದೊಡ್ಡ ಅವಕಾಶ ಮಾಡಿಕೊಂಡು ಬೆಳೆದಿದ್ದಾರೆ. ಕಾಲಾಯ ತಸ್ಮೈ ನಮಃ.

ಪ್ರತಿಕ್ರಿಯಿಸಿ: feedback@sudha.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.