ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಒಲಿಂಪಿಕ್ಸ್‌ನಲ್ಲಿ ಭಾರತದ ವಿವಾದಗಳ ನೆರಳು

Published 25 ಜುಲೈ 2024, 0:12 IST
Last Updated 25 ಜುಲೈ 2024, 0:12 IST
ಅಕ್ಷರ ಗಾತ್ರ

ನವದೆಹಲಿ: ಕಾಕಾ ಪವಾರ್ ಮತ್ತು ಪಪ್ಪು ಯಾದವ್ ಅವರಿಬ್ಬರೂ 1996ರ ಒಲಿಂಪಿಕ್ ಕೂಟದವರೆಗೂ ಜನರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ಅವರಿಬ್ಬರೂ ಕುಸ್ತಿಪಟುಗಳು ಮತ್ತು ಭಾರತ ತಂಡದಲ್ಲಿ ಪುರುಷರ 48 ಕೆ.ಜಿ.ವಿಭಾಗದಲ್ಲಿ ಸ್ಥಾನ ಪಡೆಯಲು ‘ಕುಸ್ತಿ’ ನಡೆಸಿದ್ದರೆಂಬುದು ಈಗ ಬಹಳಷ್ಟು ಮಂದಿಗೆ ನೆನಪಿರಲಿಕ್ಕಿಲ್ಲ.

ಒಲಿಂಪಿಕ್ಸ್‌ಗೆ ತೆರಳುವ ಭಾರತ ಕುಸ್ತಿ ತಂಡದಲ್ಲಿ ಸ್ಥಾನ ಪಡೆಯಲು ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ ಅವರಿಬ್ಬರ ಟ್ರಯಲ್ಸ್ ವಿವಾದಕ್ಕೆ ತಿರುಗಿತ್ತು. ವಿವಾದಾತ್ಮಕ ತೀರ್ಪಿನಲ್ಲಿ ಯಾದವ್ ಜಯಿಸಿದ್ದರು. ಆದರೆ ಅಟ್ಲಾಂಟಾದಲ್ಲಿ ಅವರು ದೇಹತೂಕದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಹೊರಬಿದ್ದಿದ್ದರು. 

ಭಾರತದ ಕ್ರೀಡಾಕ್ಷೇತ್ರದಲ್ಲಿ, ಅದರಲ್ಲೂ ಕುಸ್ತಿಯಲ್ಲಿ ಇಂತಹ ವಿವಾದಗಳು ಸಾಕಷ್ಟಿವೆ. ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು ಮಾಡಿದ ಸಾಧನೆಯ ಪರಂಪರೆಯನ್ನು ಮುಂದುವರಿಸುವ ಗುರಿಯೊಂದಿಗೆ ಆರು ಪೈಲ್ವಾನರ ತಂಡವು ಪ್ಯಾರಿಸ್‌ಗೆ ತೆರಳಿದೆ. 

ಸುಶೀಲ್‌ ಕುಮಾರ್, ಯೋಗೇಶ್ವರ್ ದತ್ ಹಾಗೂ ಸಾಕ್ಷಿ ಮಲಿಕ್  ಸೇರಿದಂತೆ ಭಾರತಕ್ಕೆ ಪದಕ ಗೆದ್ದುಕೊಟ್ಟ ಹಲವರು ಹಲವು ವಿವಾದಗಳು ಮತ್ತು ಸಂಕಷ್ಟಗಳನ್ನು ದಾಟಿ ಬಂದಿದ್ದರು. ಪವಾರ್ ಮತ್ತು ಯಾದವ್ ಅವರಿಬ್ಬರೂ ಈಗ 50 ವರ್ಷ ವಯಸ್ಸು ದಾಟಿರಬಹುದು. ಆದರೆ ಅವರು ಕಣದಲ್ಲಿದ್ದಾಗ ಇದ್ದ ಸ್ಥಿತಿ ಇಂದಿಗೂ ಬದಲಾಗಿಲ್ಲ. ರಾಜಕೀಯ ಕ್ಷೇತ್ರದ ಪ್ರಭಾವಿಗಳ ಕೈವಾಡ ನಡೆಯುತ್ತಲೇ ಇದೆ. 

2016ರ ರಿಯೊ ಒಲಿಂಪಿಕ್ಸ್ ಸಂದರ್ಭಧಲ್ಲಿಯೂ ಇಂತಹದೇ ಪ್ರಕರಣ ನಡೆದಿತ್ತು.  ನರಸಿಂಗ್ ಯಾದವ್ 74 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಒಲಿಂಪಿಕ್ಸ್ ಕೋಟಾ ಗೆದ್ದರು. ಆದರೆ ಆಗ ಎರಡು ಒಲಿಂಪಿಕ್ಸ್ ಪದಕವಿಜೇತ ಸುಶೀಲ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದ 66 ಕೆ.ಜಿ ವಿಭಾಗವನ್ನು ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್ ರದ್ದುಗೊಳಿಸಿತ್ತು. ಆದ್ದರಿಂದ ಸುಶೀಲ್ ಅವರಿಗೂ 74 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ಹೇಳಲಾಯಿತು.  ಆದರೆ ರಿಯೊಗೆ ತೆರಳಲು ಒಬ್ಬರಿಗೆ ಮಾತ್ರ  ಅವಕಾಶವಿತ್ತು. 

ಒಲಿಂಪಿಕ್ಸ್ ಪದಕ ‘ಹ್ಯಾಟ್ರಿಕ್’ ಸಾಧನೆಯ ಗುರಿ ಇಟ್ಟುಕೊಂಡಿದ್ದ ಸುಶೀಲ್,  ತಮ್ಮ ಹಾಗೂ ನರಸಿಂಗ್ ಅವರ ಮಧ್ಯೆ ಟ್ರಯಲ್ಸ್‌ಗೆ ಮನವಿ ಮಾಡಿದರು. ಆದರೆ ದೆಹಲಿ ಹೈಕೋರ್ಟ್ ಸುಶೀಲ್ ಅವರ ಮನವಿಯನ್ನು ರದ್ದುಮಾಡಿತು. ನರಸಿಂಗ್ ಆಯ್ಕೆಯನ್ನು ಎತ್ತಿಹಿಡಿಯಿತು. 

ಆದರೆ ಇದಾಗಿ ಮೂರು ವಾರಗಳ ನಂತರ ನರಸಿಂಗ್ ಅವರು ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವ ಆರೋಪದಲ್ಲಿ ಸಿಕ್ಕಿಬಿದ್ದರು. ರಾಷ್ಟ್ರೀಯ ಮದ್ದು ತಡೆ ಘಟಕ (ನಾಡಾ) ಪರೀಕ್ಷೆ ನಡೆಸಿತ್ತು. ತಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ. ತಾವು ನಿರಪರಾಧಿ ಎಂದು ನರಸಿಂಗ್ ಸ್ಪಷ್ಟನೆ ನೀಡಿದರು. ನಾಡಾ ಕ್ಲೀನ್‌ ಚಿಟ್ ನೀಡಿತ್ತು. ಆದರೆ ವಿಶ್ವ ಕ್ರೀಡಾ ವ್ಯಾಜ್ಯಗಳ ನ್ಯಾಯಪೀಠವು ವಾಡಾದ ಮೇಲ್ಮನವಿಯನ್ನು ಎತ್ತಿಹಿಡಿದು ನಾಡಾ ನೀಡಿದ್ದ ಕ್ಲೀನ್‌ಚಿಟ್ ರದ್ದುಗೊಳಿಸಿತು. ನರಸಿಂಗ್ ಒಲಿಂಪಿಕ್ಸ್ ಕನಸು ಭಗ್ನವಾಯಿತು. 

ಭಾರತದ ಕುಸ್ತಿ ಕ್ಷೇತ್ರವು ಹೋದ ವರ್ಷ ಪೂರ್ತಿ ಸುದ್ದಿಯಲ್ಲಿತ್ತು. ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಧರಣಿ ಕುಳಿತಿದ್ದರು. ಬ್ರಿಜ್‌ ಭೂಷಣ್ ಅವರು ಕೇಂದ್ರ ಸರ್ಕಾರದ ಸಂಸದರೂ ಆಗಿದ್ದರಿಂದ ರಾಜಕೀಯ ತಿರುವು ಕೂಡ ಪಡೆಯಿತು. ಡಬ್ಲ್ಯುಎಫ್‌ಐ ಆಡಳಿತ ಸಮಿತಿಯನ್ನು ವಜಾ ಮಾಡಿ ಅಡ್‌ಹಾಕ್ ಸಮಿತಿ ನೇಮಿಸಲಾಯಿತು. ವಿಶ್ವ ಕುಸ್ತಿ ಫೆಡರೇಷನ್‌ ಕೆಂಗಣ್ಣಿಗೂ ಡಬ್ಲ್ಯುಎಫ್‌ಐ ತುತ್ತಾಯಿತು. 

ವೇಟ್‌ಲಿಫ್ಟಿಂಗ್‌ನಲ್ಲಿ ಮದ್ದು–ಸದ್ದು

ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತವು ಇದುವರೆಗೆ ಎರಡು ಪದಕಗಳ ಸಾಧನೆ ಮಾಡಿದೆ. ಕರ್ಣಂ ಮಲ್ಲೇಶ್ವರಿ (2000; ಸಿಡ್ನಿ) ಮತ್ತು ಮೀರಾಬಾಯಿ ಚಾನು (2020; ಟೋಕಿಯೊ) ಅವರು ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕ ಜಯಿಸಿದ್ದಾರೆ. 

ಆದರೂ ಈ ಕ್ಷೇತ್ರಕ್ಕೂ ವಿವಾದದ ನಂಟು ಬಿಟ್ಟಿಲ್ಲ. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಸನಾಮಾಚಾ ಚಾನು ಮತ್ತು ಪ್ರತಿಮಾ ಕುಮಾರಿ ಅವರು ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಕೊಂಡಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮೋನಿಕಾದೇವಿ ಅನಾಬೊಲಿಕ್ ಸ್ಟೆರಾಯ್ಡ್ ಸೇವನೆ ಮಾಡಿದ್ದ ಆರೋಪದಲ್ಲಿ ಅಮಾನತುಗೊಂಡರು. ಆದರೆ ಆ  ಕೂಟದಲ್ಲಿ ಅಭಿನವ್ ಬಿಂದ್ರಾ ಅವರು ಶೂಟಿಂಗ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿದ್ದರಿಂದ ಭಾರತದ ಗೌರವ ಉಳಿಯಿತು. 

2021ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ವಿವಾದ ತಲೆ ದೋರಿತ್ತು. ಕೋಚ್ ಜಸ್‌ಪಾಲ್ ರಾಣಾ ಅವರ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಪಿಸ್ತೂಲ್ ಶೂಟರ್ ಮನು ಭಾಕರ್ ಅವರು ಸ್ಪರ್ಧೆಯಲ್ಲಿ ಬಳಸಬೇಕಿದ್ದ ಪಿಸ್ತೂಲ್‌ ಕೆಟ್ಟಿತ್ತು. ಈ ಪ್ರಕರಣ ಹೆಚ್ಚು ಸುದ್ದಿ ಮಾಡಿತ್ತು. ಈ ಬಾರಿ 21 ಶೂಟರ್‌ಗಳಿರುವ ತಂಡವು ಕಣದಲ್ಲಿದೆ. ಪದಕಗಳನ್ನು ಗೆದ್ದು ತರುವ ನಿರೀಕ್ಷೆ ಇದೆ. 

ನರಸಿಂಗ್ ಯಾದವ್ 
ನರಸಿಂಗ್ ಯಾದವ್ 
ಪ್ರತಿಭಟನೆಯಲ್ಲಿದ್ದ ಬಜರಂಗ್ ಪೂನಿಯಾ ವಿನೇಶಾ ಫೋಗಾಟ್ ಮತ್ತು ಸಾಕ್ಷಿ ಮಲಿಕ್  
ಪ್ರತಿಭಟನೆಯಲ್ಲಿದ್ದ ಬಜರಂಗ್ ಪೂನಿಯಾ ವಿನೇಶಾ ಫೋಗಾಟ್ ಮತ್ತು ಸಾಕ್ಷಿ ಮಲಿಕ್  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT