ಸೋಮವಾರ, 2 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡನೇ ಬಾರಿ ಒಲಿಂಪಿಕ್ಸ್‌ಗೆ ಸಜ್ಜು: ಹೊಸ ಉತ್ಸಾಹದಲ್ಲಿ ಶ್ರೀಹರಿ

ಎರಡನೇ ಬಾರಿ ಒಲಿಂಪಿಕ್ಸ್‌ಗೆ ಸಜ್ಜಾದ ಬೆಂಗಳೂರಿನ ಈಜುಪಟು
Published 18 ಜುಲೈ 2024, 16:01 IST
Last Updated 18 ಜುಲೈ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ಅವರು ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.

2023ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎಂಟು ಚಿನ್ನ ಸೇರಿದಂತೆ 10 ಪದಕಗಳನ್ನು ಗೆದ್ದು ‘ಶ್ರೇಷ್ಠ ಈಜುಪಟು’ ಗೌರವ ಗಳಿಸಿದ್ದರು. 16 ವರ್ಷ ವಯಸ್ಸಿನಿಂದಲೇ (2017ರಿಂದ) ಅವರು ಪ್ರಮುಖ ಈಜುಕೂಟಗಳಲ್ಲಿ ನಿರಂತರವಾಗಿ ಸ್ಪರ್ಧಿಸುತ್ತಿರುವ ಶ್ರೀಹರಿ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.  

‘ನನ್ನ 2023ರ ಋತುವು ಉತ್ಸಾಹಭರಿತವಾಗಿತ್ತು. ನಿರಂತರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರಿಂದ ದೇಹವು ಬಳಲಿತ್ತು. ಇನ್ನಷ್ಟು ಕೂಟಗಳಲ್ಲಿ ಸ್ಪರ್ಧಿಸಿದ್ದರೆ ದೇಹವು ಮತ್ತಷ್ಟು ಬಳಲುತ್ತಿತ್ತು. ಮಾತ್ರವಲ್ಲದೆ, ಗಾಯಗೊಂಡು ತರಬೇತಿಯಿಂದ ಹೊರಗುಳಿಯುವ ಆತಂಕವೂ ಇತ್ತು. ಹೀಗಾಗಿ, ಕೆಲವು ವಾರ ವಿಶ್ರಾಂತಿ ಪಡೆಯಬೇಕಾಯಿತು’ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿರಾಮದ ನಂತರ ಪುನರಾಗಮನ ಮಾಡಿರುವ 23 ವರ್ಷ ವಯಸ್ಸಿನ ಶ್ರೀಹರಿ ಅವರು, ತಮ್ಮ ಎರಡನೇ ಒಲಿಂಪಿಕ್ಸ್‌ಗೆ ಸಿದ್ಧರಾಗಿದ್ದಾರೆ. ಅವರು 100 ಮೀಟರ್‌ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಯುನಿವರ್ಸಲಿಟಿ ಪ್ಲೇಸಸ್‌ ಕ್ವಾಲಿಫಿಕೇಷನ್ ಸಿಸ್ಟಮ್‌ನಲ್ಲಿ ಶ್ರೀಹರಿ ಅವರು ಒಲಿಂಪಿಕ್ಸ್‌ ಕೋಟಾ ಪಡೆದಿದ್ದಾರೆ. ಅಗ್ರ ರ‍್ಯಾಂಕ್‌ ಗಳಿಸಿರುವ ದೇಶದ ಇಬ್ಬರು ಈಜುಪಟುಗಳನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡುವ ಅವಕಾಶ ರಾಷ್ಟ್ರೀಯ ಈಜು ಫೆಡರೇಷನ್‌ಗೆ ಇರುತ್ತದೆ. ಅದರಂತೆ, ಪುರುಷರ ವಿಭಾಗದಲ್ಲಿ 849 ಅಂಕ ಗಳಿಸಿದ್ದ ಅವರನ್ನು ಆಯ್ಕೆ ಮಾಡಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅವರು ಒಲಿಂಪಿಕ್ ಕ್ವಾಲಿಫಿಕೇಷನ್ ಟೈಮಿಂಗ್‌ (ಒಕ್ಯೂಟಿ)ಯಲ್ಲಿ ಅರ್ಹತೆ ಗಳಿಸಿದ್ದರು. ಆದರೆ, ಈ ಬಾರಿ ನೇರ ಪ್ರವೇಶ ಸಿಗದಿರುವುದಕ್ಕೆ ತಲೆಕೆಡಿಸಿಕೊಳ್ಳದೆ, ಮುಂದಿನ ಗುರಿಯತ್ತ ಗಮನ ಹರಿಸಿದ್ದಾರೆ.

‘ನಾನು ಉತ್ತಮ ತರಬೇತಿ ಪಡೆದಿದ್ದರೂ ಒಲಿಂಪಿಕ್ಸ್‌ ಅರ್ಹತಾ ಸಮಯದ ಗುರಿಯನ್ನು ತಲುಪಲು ಸಾಧ್ಯವಾಗದಿರುವುದಕ್ಕೆ ನಿರಾಸೆಯಾಗಿದ್ದು ನಿಜ. ಕೊಂಚ ಹಿನ್ನಡೆಯ ಹೊರತಾಗಿಯೂ ನನಗೆ ಕೋಟಾ ಸಿಕ್ಕಿದ್ದು ಖುಷಿಯಿದೆ. ಇನ್ನೇನಿದ್ದರೂ ಮುಂದಿನ ಗುರಿಯತ್ತ ಯೋಚನೆ’ ಎಂದಿದ್ದಾರೆ.

ವಿರಾಮದಿಂದ ಹಿಂದಿರುಗಿದ ನಂತರ ನಟರಾಜ್ ಅವರು ಕಠಿಣ ತರಬೇತಿ ಪಡೆದಿದ್ದಾರೆ. ಮೇನಲ್ಲಿ ಸ್ಪೇನ್ ಮತ್ತು ಫ್ರಾನ್ಸ್‌ನಲ್ಲಿ ನಡೆದ ಮೇರ್ ನಾಸ್ಟ್ರಮ್ ಕೂಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದರು. 

‘ಕಳೆದ ಋತುವಿಗೆ ಹೋಲಿಸಿದರೆ ಈ ಬಾರಿ ತರಬೇತಿ ತುಂಬಾ ಚೆನ್ನಾಗಿದೆ. ದೇಹಕ್ಕೆ ವಿಶ್ರಾಂತಿ ನೀಡಿದ ಕಾರಣದಿಂದ ಅದು ಸಾಧ್ಯವಾಯಿತು ಎಂದು ಭಾವಿಸುತ್ತೇನೆ. ತರಬೇತಿಯ ವೇಳೆ ಹಿಂದೆಂದಿಗಿಂತ ವೇಗವಾಗಿ ಗುರಿಯನ್ನು ತಲುಪಿದ್ದೇನೆ’ ಎಂದು ಅವರು ಹೇಳಿದ್ದಾರೆ.

2021ರಿಂದ ನಟರಾಜ್ ಅವರಿಗೆ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ತಮ್ಮ ಉತ್ತಮ ಸಮಯವನ್ನು (53.77 ಸೆಕೆಂಡ್‌) ಸುಧಾರಿಸಲು ಸಾಧ್ಯವಾಗಲಿಲ್ಲ. ಈ ಋತುವಿನಲ್ಲಿ 54.68 ಸೆಕೆಂಡ್‌ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT