ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paralympics 2024: ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್

ಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಒಂದೇ ದಿನ ಐದು ಪದಕ
Published : 2 ಸೆಪ್ಟೆಂಬರ್ 2024, 13:11 IST
Last Updated : 2 ಸೆಪ್ಟೆಂಬರ್ 2024, 13:11 IST
ಫಾಲೋ ಮಾಡಿ
Comments

ಪ್ಯಾರಿಸ್‌: ಭಾರತದ ನಿತೇಶ್ ಕುಮಾರ್ ಅವರು ಮೂರು ಗೇಮ್‌ಗಳ ಸೆಣಸಾಟದಲ್ಲಿ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ ಪ್ಯಾರಾಲಿಂಪಿಕ್ಸ್‌ ಪುರುಷರ ಸಿಂಗಲ್ಸ್ ಎಸ್‌ಎಲ್‌3 ಬ್ಯಾಡ್ಮಿಂಟನ್‌ನಲ್ಲಿ ಸೋಮವಾರ ಚಿನ್ನ ಗೆದ್ದುಕೊಂಡರು. ಇದರ ಜೊತೆಗೆ ಭಾರತದ ಸ್ಪರ್ಧಿಗಳು ಆರನೇ ದಿನ ಐದು ಪದಕಗಳನ್ನು ಬಾಚಿಕೊಂಡು ಬೆಳಕಿನ ನಗರಿಯಲ್ಲಿ ಮಿಂಚಿದರು.

ಭಾನುವಾರ ತಡರಾತ್ರಿ (ಭಾರತದ ಕಾಲಮಾನ) ನಿಷಾದ್ ಕುಮಾರ್ ಹೈಜಂಪ್‌ ಟಿ27 ವಿಭಾಗದಲ್ಲಿ ಸತತ ಎರಡನೇ ಪ್ಯಾರಾಲಿಂಪಿಕ್ಸ್‌ ಬೆಳ್ಳಿ ಗೆದ್ದಿದ್ದರು. ಸೋಮವಾರ ಒಂದು ಚಿನ್ನ, ಮೂರು ಬೆಳ್ಳಿ, ಒಂದು ಕಂಚಿನ ಪದಕ ಭಾರತದ ಕ್ರೀಡಾಪಟುಗಳ ಪಾಲಾಯಿತು. ಇವುಗಳಲ್ಲಿ ಮೂರು ಬ್ಯಾಡ್ಮಿಂಟನ್‌ನಲ್ಲೇ ಬಂದವು.

ಹರಿಯಾಣದ 29 ವರ್ಷ ವಯಸ್ಸಿನ ನಿತೇಶ್‌ ಅಮೋಘವಾಗಿ ಹೋರಾಡಿ 21–14, 18–21, 23–21 ರಿಂದ ಬೆಥೆಲ್ ಅವರನ್ನು 1 ಗಂಟೆ 20 ನಿಮಿಷಗಳ ಸೆಣಸಾಟದಲ್ಲಿ ಹಿಮ್ಮೆಟ್ಟಿಸಿದರು. ಬ್ರಿಟನ್‌ನ ಸ್ಪರ್ಧಿ, ಟೋಕಿಯೊ ಪ್ಯಾರಾ ಕ್ರೀಡೆಗಳಲ್ಲೂ ಬೆಳ್ಳಿ ವಿಜೇತರಾಗಿದ್ದರು.

ತೀವ್ರಪ್ರಮಾಣದ ಕಾಲಿನ ಊನಕ್ಕೆ ಒಳಗಾದ ಆಟಗಾರರು ಎಸ್‌ಎಲ್‌3 ವಿಭಾಗದಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಅಂಕಣದ ಅಗಲ ಅರ್ಧದಷ್ಟು ಕಡಿಮೆಯಾಗಿರುತ್ತದೆ.

2019ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ರೈಲು ಅಪಘಾತದಲ್ಲಿ ನಿತೇಶ್‌ ಅವರ ಕಾಲು ಜಜ್ಜಿಹೋಗಿತ್ತು. ಆದರೆ ಇದರಿಂದ ಅವರ ಮನೋಬಲ ಕುಗ್ಗಲಿಲ್ಲ. ಅವರಿಗೆ ಆಗ 15 ವರ್ಷ. ಈ ನಿಟ್ಟಿನಲ್ಲಿ ಮಂಡಿಯ ಐಐಟಿ ಪದವೀಧರನ ಚಿನ್ನದ ಪಯಣದ ಹಿಂದಿನ ಪರಿಶ್ರಮ ಸಾಮಾನ್ಯದ್ದಾಗಿರಲಿಲ್ಲ.

ಈ ಹಿಂದಿನ ಪ್ಯಾರಾಲಿಂಪಿಕ್ಸ್‌ನಲ್ಲೂ ಈ ವಿಭಾಗದ ಚಿನ್ನ ಭಾರತದ ಪಾಲಾಗಿತ್ತು. ಪ್ರಮೋದ್ ಭಗತ್‌ ಟೋಕಿಯೊದಲ್ಲಿ ಸ್ವರ್ಣ ಗೆದ್ದುಕೊಂಡಿದ್ದರು.

ಸೋಮವಾರ ನಿತೇಶ್‌ ತೋರಿದ ಸಂಯಮ, ದಿಟ್ಟತನ, ಸ್ಥೈರ್ಯ ಮೆಚ್ಚುವಂತಿತ್ತು. ರಿವರ್ಸ್‌ ಹಿಟ್‌, ನಾಜೂಕಾದ ಡ್ರಾಪ್‌ ಶಾಟ್‌ಗಳು, ನೆಟ್‌ಬಳಿಯ ಕೌಶಲ, ಬೆಥೆಲ್‌ ಅವರ ಲಯ ತಪ್ಪಿಸಿದವು.

ಸ್ಫೂರ್ತಿಯ ಸೆಲೆ: ನೌಕಾಪಡೆ ಅಧಿಕಾರಿಯ ಪುತ್ರನಾಗಿರುವ ನಿತೇಶ್ ಕೂಡ ತಂದೆಯ ಹಾದಿಯಲ್ಲೇ ಸಾಗುವ ಕನಸು ಕಂಡಿದ್ದರು. ಆದರೆ ಅಪಘಾತ ಅವರ ಕನಸನ್ನು ಭಗ್ನಗೊಳಿಸಿತು. ಪುಣೆಯ ಕೃತಕ ಅಂಗಜೋಡಣಾ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ, ಗಾಯಗೊಂಡ ಸೈನಿಕರ ಅಂಗಜೋಡಣೆಯ ನಂತರ ಸವಾಲುಗಳಿಗೆ ಸಜ್ಜಾಗುತ್ತಿದ್ದ ಪರಿ ನೋಡಿದ್ದು ಅವರಲ್ಲೂ ಸ್ಪೂರ್ತಿ ಮೂಡಿಸಿತು.

ತಪ್ಪಿದ ಕಂಚು: ಇದಕ್ಕೆ ಮೊದಲು ಎಸ್‌ಎಚ್‌6 ಮಿಶ್ರಡಬಲ್ಸ್‌ನ ಕಂಚಿನ ಪದಕ ಸ್ಪರ್ಧೆಯಲ್ಲಿ, ಎರಡನೇ ಶ್ರೇಯಾಂಕದ ಶಿವರಂಜನ್ ಸೊಲೈಮಲೈ ಮತ್ತು ನಿತ್ಯಾಶ್ರೀ ಸುಮತಿ ಶಿವನ್ 17–21, 12–21ರಲ್ಲಿ ಇಂಡೊನೇಷ್ಯದ ಸುಭಾನ್– ರಿನಾ ಮರ್ಲಿನಾ ಎದುರು ಸೋತಿದ್ದರು.

ತುಳಸಿಮತಿಗೆ ಬೆಳ್ಳಿ: ತುಳಸಿಮತಿ ಮರುಗೇಶನ್‌ ಮಹಿಳೆಯರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಎಸ್‌ಯು5 ವಿಭಾಗದಲ್ಲಿ ಬೆಳ್ಳಿ ಗೆದ್ದರು. 22 ವರ್ಷ ವಯಸ್ಸಿನ ಅಗ್ರ ಶ್ರೇಯಾಂಕದ ಆಟಗಾರ್ತಿ ಫೈನಲ್‌ನಲ್ಲಿ 17–21, 10–21ರಲ್ಲಿ ಹಾಲಿ ಚಾಂಪಿಯನ್‌ ಯಾಂಗ್‌ ಕ್ವಿಷಿಯಾ ಎದುರು ಸೋಲನುಭವಿಸಿದರು. ಇದು ತುಳಸಿಮತಿಗೆ ಮೊದಲ ಪದಕ.

ಎರಡನೇ ಶ್ರೇಯಾಂಕದ ಮನಿಷಾ ರಾಮದಾಸ್‌ ಕಂಚಿನ ಪದಕದ ಪ್ಲೇ ಆಫ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಕ್ಯಾಥ್ರಿನ್ ರೊಸೆನ್‌ಗ್ರೆನ್‌ (ಡೆನ್ಮಾರ್ಕ್) ಅವರನ್ನು ಮಣಿಸಿದರು.

ಎಡ ಅಥವಾ ಬಲ ತೋಳಿನ ಊನ ಹೊಂದಿರುವ ಸ್ಪರ್ಧಿಗಳಿಗೆ ಎಸ್‌ಯು5 ವಿಭಾಗ ಮೀಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT