ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics: ನೀರಜ್‌ ಚೋಪ್ರಾಗೆ ಮತ್ತೊಂದು ಚಿನ್ನದ ಮೇಲೆ ಕಣ್ಣು

Published 31 ಜುಲೈ 2024, 14:23 IST
Last Updated 31 ಜುಲೈ 2024, 14:23 IST
ಅಕ್ಷರ ಗಾತ್ರ

ಪ್ಯಾರಿಸ್: ಭಾರತದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ನಾಯಕತ್ವದ 29 ಅಥ್ಲೀಟ್‌ಗಳ ತಂಡವು ಗುರುವಾರ ಒಲಿಂಪಿಕ್ಸ್‌ನಲ್ಲಿ ಆರಂಭವಾಗಲಿರುವ ಅಥ್ಲೆಟಿಕ್ಸ್‌ನಲ್ಲಿ ಕಣಕ್ಕಿಳಿಯಲಿದೆ. 

ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ನಿರೀಕ್ಷೆಯಲ್ಲಿ ನೀರಜ್ ಇದ್ದಾರೆ.  ಅವರು  2020ರ ಟೋಕಿಯೊ  ಒಲಿಂಪಿಕ್ಸ್‌ನಲ್ಲಿ ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನ ಜಯಿಸಿದ್ದರು. ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಗೆದ್ದ ಮೊದಲ ಪದಕ ಅದಾಗಿತ್ತು.  ಚೋಪ್ರಾ ಅವರು ಭಾಗವಹಿಸುವ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತು ಆಗಸ್ಟ್ 6ರಂದು ನಡೆಯಲಿದೆ.  8ರಂದು ಪದಕ ಸುತ್ತಿನ ಸ್ಪರ್ಧೆ ನಡೆಯಲಿದೆ.  

ಟೋಕಿಯೊದ ಸಾಧನೆಯ ನಂತರವೂ ನೀರಜ್ ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಉತ್ತಮ ಲಯದಲ್ಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅವರು 15 ಪ್ರಮುಖ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿದ್ದಾರೆ. ಇದರಲ್ಲಿ ಕೇವಲ ಎರಡು ಬಾರಿ ಮಾತ್ರ 85 ಮೀಟರ್ಸ್‌ಗಿಂತ ಕಡಿಮೆ ಅಂತರದ ಥ್ರೋ ದಾಖಲಿಸಿದ್ದಾರೆ.  ಅವರು ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. ಇಲ್ಲಿ ಅವರು ಭಾರತದವರೇ ಆದ ಕಿಶೋರ್ ಜೇನಾ ಅವರಿಂದಲೂ ಸ್ಪರ್ಧೆ ಎದುರಿಸಲಿದ್ದಾರೆ. 

ಗುರುವಾರ ಅಥ್ಲೆಟಿಕ್ಸ್‌ನಲ್ಲಿ ನಡೆಯಲಿರುವ ಮೊದಲ ಸ್ಪರ್ಧೆ 20 ಕಿ.ಮೀ ರೇಸ್‌ ವಾಕಿಂಗ್.  ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಆಕಾಶದೀಪ್ ಸಿಂಗ್, ವಿಕಾಶ್ ಸಿಂಗ್‌ ಮತ್ತು ಪರಮಜೀತ್ ಸಿಂಗ್ ಬಿಷ್ಠ್ ಸ್ಪರ್ಧಿಸುವರು. ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರು ಇದ್ದಾರೆ. 

ಪುರುಷರ 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಾಬಳೆ ಹಾಗೂ 4X400 ಮೀ ರಿಲೆಯ ತಂಡದ ಮೇಲೆ ನಿರೀಕ್ಷೆ ಇದೆ. ಈಚೆಗೆ ನಡೆದಿದ್ದ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಸಾಬಳೆ 8 ನಿಮಿಷ, 9.91ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಅರನೇ ಸ್ಥಾನ ಪಡೆದಿದ್ದರು. ಈ ವಿಭಾಗದಲ್ಲಿ ಪದಕ ಜಯಿಸುವುದು ಕಠಿಣ ಸವಾಲಾಗಿದೆ. ಏಕೆಂದರೆ ವಿಶ್ವದಾಖಲೆ ಹೊಂದಿರುವ ಇಥಿಯೊಪಿಯಾದ ಲಮೆಚಾ ಗಿರ್ಮಾ,  ಹಾಲಿ ವಿಶ್ವ ಮತ್ತು ಒಲಿಂಪಿಕ್ಸ್‌ ಚಾಂಪಿಯನ್ ಆಗಿರುವ ಮೊರಾಕೊದ ಸೂಫಿಯಾನ್ ಅಲ್ ಬಕಾಲಿ ಕಣದಲ್ಲಿದ್ದಾರೆ. 

ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಯರಾಜಿ( 100 ಮೀ ಹರ್ಡಲ್ಸ್), ಪಾಲ್ ಚೌಧರಿ (3000 ಮೀ ಸ್ಟೀಪಲ್ ಚೇಸ್), ಅನುರಾಣಿ (ಜಾವೆಲಿನ್ ಥ್ರೋ) ಹಾಗೂ 4X400 ಮೀ ರಿಲೆ ತಂಡದವರು ಕಣದಲ್ಲಿದ್ದಾರೆ. 

ಪುರುಷರ ಶಾಟ್‌ಪಟ್‌ನಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್, ಟ್ರಿಪಲ್ ಜಂಪ್‌ ಅಥ್ಲೀಟ್ ಪ್ರವೀಣ್ ಚಿತ್ರವೇಲ್ ಮತ್ತು ಅಬುಲ್ಲಾ ಅಬೂಬಕ್ಕರ್ ಅವರು ಫೈನಲ್ ಸುತ್ತು ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.  ಈ ಮೊದಲು 30 ಅಥ್ಲೀಟ್‌ಗಳ ತಂಡವನ್ನು ಪ್ರಕಟಿಸಲಾಗಿತ್ತು. ಕೂಟಕ್ಕಿಂತ ಮೊದಲು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಶಾಟ್‌ಪಟ್ ಅಥ್ಲೀಟ್ ಅಭಾ ಕಟುವಾ ಅವರ ಹೆಸರನ್ನು ಕೈಬಿಡಲಾಗಿತ್ತು. ಆದರೆ ಅದಕ್ಕೆ ಕಾರಣವನ್ನು ಇದುವರೆಗೂ ಬಹಿರಂಗಪಡಿಸಿಲ್ಲ.

ಶಕ್ಯಾರಿ ಫ್ರೆಸರ್‌ ಮೇಲೆ ಕಣ್ಣು

ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಈ ಬಾರಿ ವೇಗದ ‘ರಾಜ‘ ಮತ್ತು  ‘ರಾಣಿ‘ಯ ಪಟ್ಟಕ್ಕಾಗಿ ತುರುಸಿನ ಪೈಪೋಟಿ ಇದೆ.  ಪುರುಷರ 100 ಮೀ ಓಟದಲ್ಲಿ ಜಮೈಕಾದ ಉಸೇನ್ ಬೋಲ್ಟ್ ಅವರು ಈ ಹಿಂದೆ ಮಾಡಿರುವ  ದಾಖಲೆಯನ್ನು ಅಳಿಸಿ ಹಾಕುವ ಅಥ್ಲೀಟ್ ಯಾರು ಎಂಬ ಕುತೂಹಲವೂ ಗರಿಗೆದರಿದೆ.

ಪುರುಷರ ವಿಭಾಗದಲ್ಲಿ ಅಮೆರಿಕದ ನೊಹಾ ಲೈಲ್ಸ್ ಮತ್ತು ಕೆನ್ಯಾದ ಫರ್ಡಿನೆಂಡ್ ಒಮ್ನಾಯಾಲಾ ಅವರಿಬ್ಬರಲ್ಲಿ ಹೆಚ್ಚು ಪೈಪೋಟಿ ಇದೆ.  ಈ ಸಲ ಮಹಿಳೆಯರ ವಿಭಾಗದ ಸ್ಪ್ರಿಂಟ್‌ ಸ್ಪರ್ಧೆಗಳು ಹೆಚ್ಚು ಕುತೂಹಲ ಕೆರಳಿಸಿವೆ. ಅದಕ್ಕೆ ಕಾರಣ ಜಮೈಕಾದ ಶೆಲ್ಲಿ ಆ್ಯನ್ ಫ್ರೆಸರ್ ಪ್ರೈಸ್ ಮತ್ತು  ಅಮೆರಿಕದ ಶಕ್ಯಾರಿ ರಿಚರ್ಡ್ಸನ್ ಅವರ ಜಿದ್ದಾಜಿದ್ದಿ. 

ಶಕ್ಯಾರಿ ಅವರು ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಶುಕ್ರವಾರ ಮಹಿಳೆಯರ 100 ಮೀ ಓಟದ ಮೊದಲ ಸುತ್ತಿನ ಸ್ಪರ್ಧೆ ನಡೆಯಲಿದೆ. ಹೋದ ಬಾರಿಯ ಚಾಂಪಿಯನ್ ಎಲೈನ್ ಥಾಂಪ್ಸನ್ ಹೆರಾ ಅವರು ಈ ಬಾರಿ ಕಣದಲ್ಲಿ ಇಲ್ಲ. ಆ್ಯನ್ ಫ್ರೆಸರ್ ಅವರು ತಮ್ಮ ಕ್ರೀಡಾಜೀವನದ ಐದನೇ ಮತ್ತು ಅಂತಿಮ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

2008 ಮತ್ತು 2012ರಲ್ಲಿ ಅವರು 100 ಮೀ ಓಟದ ಚಿನ್ನದ ಪದಕ ಜಯಿಸಿದ್ದರು.   ಜಮೈಕಾದ ಶೆರಿಕಾ ಜಾಕ್ಸನ್ ಅವರು 100 ಮೀಟರ್ ಓಟದಿಂದ ಹಿಂದೆ ಸರಿದಿದ್ದಾರೆ. 200  ಮೀ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT