ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತಕ್ಕೆ ಆಡಲು ನಗಾಲ್ ₹ 42 ಲಕ್ಷ ಕೇಳಿದ್ದರು: ಎಐಟಿಎ

ಅಗ್ರ ಸಿಂಗಲ್ಸ್‌ ಆಟಗಾರನ ವರ್ತನೆಗೆ ಆಕ್ರೋಶ
Published : 19 ಸೆಪ್ಟೆಂಬರ್ 2024, 14:40 IST
Last Updated : 19 ಸೆಪ್ಟೆಂಬರ್ 2024, 14:40 IST
ಫಾಲೋ ಮಾಡಿ
Comments

ನವದೆಹಲಿ: ಭಾರತ ತಂಡಕ್ಕೆ ಡೇವಿಸ್ ಕಪ್ ಪಂದ್ಯ ಆಡಬೇಕಾದರೆ ವಾರ್ಷಿಕ 50,0000 ಡಾಲರ್‌ (ಸುಮಾರು ₹42 ಲಕ್ಷ) ನೀಡಬೇಕೆಂದು ಸುಮಿತ್ ನಗಾಲ್ ಬೇಡಿಕೆ ಸಲ್ಲಿಸಿದ್ದರು ಎಂದು ಎಐಟಿಎ ಗುರುವಾರ ಹೇಳಿಕೊಂಡಿದೆ. ಆದರೆ, ‘ಈ ಸೇವೆಗಾಗಿ ಅಥ್ಲೀಟುಗಳು ಸಂಭಾವನೆ ಕೇಳುವುದು ಹೊಸದೇನಲ್ಲ. ರೂಢಿಗತವಾಗಿದೆ’ ಎಂದು ದೇಶದ ಅಗ್ರ ಸಿಂಗಲ್ಸ್ ಆಟಗಾರ ನಗಾಲ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಬೆನ್ನು ನೋವು ಇದೆ ಎಂದು ಹೇಳಿ ನಗಾಲ್ ಅವರು ಇತ್ತೀಚೆಗೆ ಸ್ಟಾಕ್‌ಹೋಮ್‌ನಲ್ಲಿ ಸ್ವೀಡನ್ ವಿರುದ್ಧ ಡೇವಿಸ್‌ ಕಪ್ ಪಂದ್ಯದಿಂದ ಹಿಂದೆ ಸರಿದಿದ್ದರು. ಕಳೆದ ತಿಂಗಳು ಅಮೆರಿಕ ಓಪನ್ ಪುರುಷರ ಡಬಲ್ಸ್‌ನಲ್ಲಿ ಅವರು ಈ ಕಾರಣದಿಂದ ಹಿಂದೆಸರಿದಿದ್ದರು.

ಹೀಗಾಗಿ, ವಿಶ್ವಗುಂಪಿನ (ಒಂದು) ಪಂದ್ಯದಲ್ಲಿ ಸಿಂಗಲ್ಸ್‌ ಪರಿಣತರಿಲ್ಲದೇ ಭಾರತ, ಸ್ವೀಡನ್ ವಿರುದ್ಧ 0–4 ಮುಖಭಂಗ ಅನುಭವಿಸಿತ್ತು. ಡಬಲ್ಸ್ ಪರಿಣತರನ್ನು ಮತ್ತು ಹೊಸ ಆಟಗಾರರನ್ನು ನಾಯಕ ರೋಹಿತ್ ರಾಜ್‌ಪಾಲ್‌ ಆಡಿಸಬೇಕಾಯಿತು.

ನಗಾಲ್‌, ಯೂಕಿ ಭಾಂಬ್ರಿ ಮತ್ತು ಶಶಿಕುಮಾರ್ ಮುಕುಂದ್ ಸೇರಿದಂತೆ ದೇಶದ ಪ್ರಮುಖ ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕೆ ನಿರಾಕರಿಸುತ್ತಿದ್ದಾರೆ ಎಂದು ಮಂಗಳವಾರ ಎಐಟಿಎ ಅಸಮಾಧಾನ ವ್ಯಕ್ತಪಡಿಸಿತ್ತು.

ನಗಾಲ್ ಅವರು ಎಟಿಪಿ 250 ಹಾಂಗ್‌ಝೌ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಗುರುವಾರ ಅವರ ಮೊದಲ ಪಂದ್ಯ ನಿಗದಿಯಾಗಿದೆ.

‘ಅವರು ಮಾಡುತ್ತಿರುವುದು ಸರಿಯೇ ಅಥವಾ ಅಲ್ಲವೇ ಎಂಬುದನ್ನು ದೇಶ ನಿರ್ಧರಿಸಲಿ, ನಂತರ ಸರ್ಕಾರದ ನಿರ್ಧಾರ ಮಾಡಲಿ. ಆಟಗಾರರಿಗೆ ‘ಟಾಪ್ಸ್‌’ ಯೋಜನೆಯಡಿಯೂ ಆರ್ಥಿಕ ನೆರವು ನೀಡಲಾಗುತ್ತಿದೆ. ಡೇವಿಸ್‌ ಕಪ್ ಆಡಿದ್ದರೆ ಹಣ ನೀಡುವುದಿಲ್ಲವೆಂದಲ್ಲ. ಅಲ್ಲೂ ಹಣ ಸಿಗುತ್ತದೆ’ ಎಂದು ಎಐಟಿಎ ಕಾರ್ಯದರ್ಶಿ ಅನಿಲ್ ಧುಪರ್ ಹೇಳಿದರು.

ಡೇವಿಸ್‌ ಕಪ್‌ನಲ್ಲಿ ಪಾಲ್ಗೊಂಡಿದ್ದಕ್ಕೆ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ನಿಂದ ಸಿಗುವ ಬಹುಮಾನ  ಹಣವನ್ನು ತಂಡದ ಆಟಗಾರರಿಗೆ ಹಂಚಲಾಗುತ್ತಿದ್ದು, ಇದನ್ನೇ ಎಐಟಿಎ ಉಲ್ಲೇಖಿಸಿದೆ.

‘ಬೇರಾವುದೇ ಆಟಗಾರ ಐಟಿಎಫ್‌ ಬಹುಮಾನ ಹಣ ಬಿಟ್ಟು ಹೆಚ್ಚುವರಿ ಹಣ ಕೇಳಲಿಲ್ಲ’ ಎಂದು ಹೇಳಿದ್ದಾರೆ.

‘ಈ ಹಿಂದೆ ದೇಶದ ಪ್ರಮುಖ ಆಟಗಾರರು ಡೇವಿಸ್‌ ಕಪ್ ಆಡಿದ್ದಕ್ಕೆ ಹೆಚ್ಚುವರಿಯಾಗಿ ಹಣ ಕೇಳುತ್ತಿದ್ದರು ಮತ್ತು ಅವರ ಬೇಡಿಕೆಯನ್ನು ಸಮ್ಮತಿಸಲಾಗುತಿತ್ತು’ ಎಂದು ಮಾಜಿ ಡೇವಿಸ್‌ ಕಪ್ ಆಟಗಾರರೊಬ್ಬರು ಪಿಟಿಐಗೆ ಖಚಿತಪಡಿಸಿದ್ದಾರೆ.

ಎಐಟಿಕೆ ಹೇಳಿಕೆಯನ್ನು ನಗಾಲ್ ಅಲ್ಲಗಳೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಯನ್ನು ಸರ್ಮಥಿಸಿಕೊಂಡಿದ್ದಾರೆ.

‘ಪರಿಹಾರ ಕೇಳುವ ಬಗ್ಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಪರ್ಯಾಯವಾಗಿ ಪರಿಹಾರ ಕೇಳುವುದು ರೂಢಿಗತವಾಗಿ ಬಂದ ಸಂಪ್ರದಾಯ’ ಎಂದಿದ್ದಾರೆ ನಗಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT