ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಟೆನಿಸ್‌: ಜೊಕೊವಿಚ್‌ ಕೊರಳಿಗೆ ಚಿನ್ನ

ಫೈನಲ್‌ನಲ್ಲಿ ಕಾರ್ಲೋಸ್‌ ಅಲ್ಕರಾಜ್‌ ವಿರುದ್ಧ ಗೆಲುವು
Published 5 ಆಗಸ್ಟ್ 2024, 0:28 IST
Last Updated 5 ಆಗಸ್ಟ್ 2024, 0:28 IST
ಅಕ್ಷರ ಗಾತ್ರ

ಪ್ಯಾರಿಸ್‌: ಸ್ಪೇನ್‌ನ ಪ್ರತಿಭಾನ್ವಿತ ಕಾರ್ಲೋಸ್‌ ಅಲ್ಕರಾಜ್ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್‌ ಅವರು ಒಲಿಂಪಿಕ್ಸ್‌ ಟೆನಿಸ್‌ ಪುರುಷರ ಸಿಂಗಲ್ಸ್ ಚಿನ್ನದ ಪದಕ ಗೆದ್ದರು. ಆ ಹಾದಿಯಲ್ಲಿ ತಾವು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾರಿದರು.

ರೋಲಂಡ್‌ ಗ್ಯಾರೋಸ್‌ನ ಫಿಲಿಪ್‌ ಶಾಟಿಯೆ ಕೋರ್ಟ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 37 ವರ್ಷ ವಯಸ್ಸಿನ, ಅಗ್ರ ಶ್ರೇಯಾಂಕದ ಆಟಗಾರ ಜೊಕೊವಿಚ್‌ 7–6 (3), 7–6 (2) ರಿಂದ ತಮಗಿಂತ 16 ವರ್ಷದ ಕಿರಿಯ ಆಟಗಾರನನ್ನು ಸೋಲಿಸಿದರು.

ಗೆಲುವಿನ ಬಳಿಕ ಮಗಳನ್ನು ತಬ್ಬಿಕೊಂಡು ಆನಂದಬಾಷ್ಪ ಹರಿಸಿದ ಸರ್ಬಿಯಾದ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌

ಗೆಲುವಿನ ಬಳಿಕ ಮಗಳನ್ನು ತಬ್ಬಿಕೊಂಡು ಆನಂದಬಾಷ್ಪ ಹರಿಸಿದ ಸರ್ಬಿಯಾದ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌

–ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್

ಇದು ಅವರಿಗೆ ಮೊದಲ ಒಲಿಂಪಿಕ್ಸ್ ಚಿನ್ನ. ಬೀಜಿಂಗ್ ಕ್ರೀಡೆಗಳಲ್ಲಿ (2008) ಕಂಚಿನ ಪದಕ ಗೆದ್ದಿದ್ದು ಒಲಿಂಪಿಕ್ಸ್‌ನಲ್ಲಿ ಇದುವರೆಗಿನ ಉತ್ತಮ ಸಾಧನೆಯಾಗಿತ್ತು. ಅವರು 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದು, ವೃತ್ತಿಜೀವನದಲ್ಲಿ ‘ಗೋಲ್ಡನ್‌ ಸ್ಲಾಮ್‌’ ಪೂರೈಸಿದರು. ಈ ವರ್ಷ ಫ್ರೆಂಚ್‌ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿರುವ 21 ವರ್ಷ ವಯಸ್ಸಿನ ಅಲ್ಕರಾಜ್‌ ಇಲ್ಲೂ ಪ್ರಾಬಲ್ಯ ಸಾಧಿ ಸುವುದಕ್ಕೆ ಜೊಕೊವಿಚ್‌ ತಡೆಹಾಕಿದರು.

ಈ ಸಂಭ್ರಮದಲ್ಲಿ ಭಾವೋದ್ವೇಗಕ್ಕೆ ಒಳಗಾದ ಜೊಕೊವಿಚ್‌ ಅವರಿಗೆ ಕಣ್ಣೀರು ತಡೆಯಲಾಗಲಿಲ್ಲ. ಆ ಮೂಲಕ ಇಲ್ಲಿನ ಯಶಸ್ಸು ತಮಗೆ ಎಷ್ಟು ಮುಖ್ಯ ಎಂಬುದನ್ನೂ ಸೂಚಿಸಿದರು. ಹಲವು ದಾಖಲೆಗಳು ಜೊಕೊವಿಚ್‌ ಹೆಸರಿನಲ್ಲಿವೆ. ಅವರು 428 ವಾರಗಳ ಕಾಲ ವಿಶ್ವದ ಅಗ್ರಮಾನ್ಯ ಆಟಗಾರನ ಪಟ್ಟದಲ್ಲಿದ್ದರು. ಮಾಸ್ಟರ್ಸ್‌ ಮಟ್ಟದ 40 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಈ ವರ್ಷ ಜೊಕೊವಿಚ್‌ ಒಂದೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ಕೆಂಪುಮಣ್ಣಿನ ಕೋರ್ಟ್‌ನಲ್ಲಿ ಗೆಲ್ಲುವ ಮೂಲಕ ತಮ್ಮ ಮನೋಬಲ ಎಷ್ಟು ಗಟ್ಟಿ ಎಂಬುದನ್ನು ಸಾಬೀತು ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT