ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾ ಸಚಿವಾಲಯದಿಂದ ವೈಯಕ್ತಿಕ ಹಣಕಾಸಿನ ನೆರವು ಪಡೆದಿಲ್ಲ: ಅಶ್ವಿನಿ

Published 14 ಆಗಸ್ಟ್ 2024, 2:31 IST
Last Updated 14 ಆಗಸ್ಟ್ 2024, 2:31 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡಾ ಸಚಿವಾಲಯದಿಂದ ವೈಯಕ್ತಿಕ ಹಣಕಾಸಿನ ನೆರವು ಪಡೆದಿಲ್ಲ: ಅಶ್ವಿನ: ‘ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಕ್ರೀಡಾ ಸಚಿವಾಲಯದಿಂದ ಯಾವುದೇ ವೈಯಕ್ತಿಕ ಹಣಕಾಸಿನ ನೆರವು ಪಡೆದಿಲ್ಲ. ಜೊತೆಗೆ ವೈಯಕ್ತಿಕ ತರಬೇತುದಾರನನ್ನು ನಿಯೋಜಿಸುವಂತೆ ಸಲ್ಲಿಸಿದ ಕೋರಿಕೆಯನ್ನು ತಿರಸ್ಕರಿಸಲಾಗಿತ್ತು’ ಎಂದು ಬ್ಯಾಡ್ಮಿಂಟನ್ ಡಬಲ್ಸ್‌ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್‌ಗೆ ತೆರಳಿದ ಭಾರತದ ಅಥ್ಲೀಟ್‌ಗಳಿಗೆ ಆರ್ಥಿಕ ನೆರವು ನೀಡಿದ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ವಿವರವಾದ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ ಅಶ್ವಿನಿ ಅವರಿಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ (ಟಿಒಪಿಎಸ್‌) ₹4.50 ಲಕ್ಷವನ್ನು ನೀಡಲಾಗಿತ್ತು. ವಾರ್ಷಿಕ ಕ್ಯಾಲೆಂಡರ್‌ ಅಡಿಯಲ್ಲಿ ₹1.48 ಕೋಟಿ ಒದಗಿಸಲಾಗಿದೆ. ಅದರಲ್ಲಿ ಆಟಕ್ಕೆ ಅಗತ್ಯವಿರುವ ಸಲಕರಣೆ, ಅಂತರರಾಷ್ಟ್ರೀಯ ಸ್ಪರ್ಧೆ ಹಾಗೂ ಸಹ ಆಟಗಾರರ ಖರ್ಚು ಸೇರಿದೆ ಎಂದು ಹೇಳಲಾಗಿತ್ತು.

‘ಈ ಮಾಹಿತಿ ನಿಜಕ್ಕೂ ಆಘಾತಕಾರಿ. ನಮಗೆ ಇಷ್ಟೊಂದು ಹಣ ಕೊಟ್ಟಿರುವುದಾಗಿ ದೇಶಕ್ಕೆ ಸಾರಿರುವುದು ಹಾಸ್ಯಾಸ್ಪದ. ನನಗೆ ಯಾವುದೇ ಹಣ ನೀಡಿಲ್ಲ. ರಾಷ್ಟ್ರೀಯ ಶಿಬಿರದ ಕುರಿತು ಮಾತನಾಡಲಾಗಿದೆ. ಆಗ ನೀಡಿದ ₹1.5 ಕೋಟಿ ಎಲ್ಲಾ ಆಟಗಾರರ ಮೇಲೂ ಖರ್ಚು ಮಾಡಲಾಗಿತ್ತು’ ಎಂದು ಕರ್ನಾಟಕದ ಅಶ್ವಿನಿ ಅವರು ಪಿಟಿಐಗೆ ‍ಪ‍್ರತಿಕ್ರಿಯಿಸಿದ್ದಾರೆ.

‘ನಮಗೆ ನಿರ್ದಿಷ್ಟ ಕೋಚ್ ಇರಲಿಲ್ಲ. ನನ್ನ ವೈಯಕ್ತಿಕ ಕೋಚ್‌ಗೆ ನಾನೇ ಸಂಭಾವನೆಯನ್ನು ನೀಡಿದ್ದೇನೆ. ನಾನು ಯಾರಿಂದಲೂ ಹಣ ಪಡೆದಿಲ್ಲ. 2023ರ ನವೆಂಬರ್‌ವರೆಗೂ ನನ್ನದೇ ಖರ್ಚಿನಲ್ಲಿ ತರಬೇತಿ ಪಡೆದು ಆಡಿದ್ದೇನೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಂತರವಷ್ಟೇ ನನ್ನನ್ನು ಟಿಒಪಿಎಸ್ (ಟಾಪ್ಸ್‌) ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು’ ಎಂದು 34 ವರ್ಷದ ಅಶ್ಚಿನಿ ಹೇಳಿದ್ದಾರೆ.

2010, 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಡಬಲ್ಸ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುವ ಅಶ್ವಿನಿ ಅವರು ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಪ್ಯಾರಿಸ್‌ನಲ್ಲಿ ತನಿಶಾ ಕ್ರಾಸ್ಟೊ ಜೊತೆ ಕಣಕ್ಕೆ ಇಳಿದು, ಗುಂಪು ಹಂತದಲ್ಲೇ ನಿರ್ಗಮಿಸಿದ್ದರು.

‘ಪ್ಯಾರಿಸ್‌ನಲ್ಲಿ ನಾನು ಚೆನ್ನಾಗಿ ಆಡಿಲ್ಲ. ಅಲ್ಲಿ ಕೋಚ್ ಇಲ್ಲದಿದ್ದರೂ ಸಹ. ಸೋಲಿನ  ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT