ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC Final | ಗೆಲ್ಲಲೇಬೇಕೆಂಬ 'ಹಸಿವು' ನಮಗೆ ಪ್ರೇರಣೆ: ದಕ್ಷಿಣ ಆಫ್ರಿಕಾ ನಾಯಕ

Published 29 ಜೂನ್ 2024, 14:14 IST
Last Updated 29 ಜೂನ್ 2024, 14:14 IST
ಅಕ್ಷರ ಗಾತ್ರ

ಬ್ರಿಜ್‌ಟೌನ್ (ಬಾರ್ಬಾಡೋಸ್‌): ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಜ್ಜಾಗಿರುವ ನಮ್ಮ ತಂಡ 'ತೀವ್ರ ಹಸಿವಿನಿಂದ' ಪ್ರೇರಣೆ ಪಡೆದಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕ್ರಂ ಶನಿವಾರ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಆಫ್ರಿಕಾ ತಂಡ, ಇದಕ್ಕೂ ಮುನ್ನ ಏಕದಿನ ಹಾಗೂ ಟಿ20 ಮಾದರಿಯ ವಿಶ್ವಕಪ್‌ ಟೂರ್ನಿಗಳಲ್ಲಿ ಏಳು ಬಾರಿ ಸೆಮಿಫೈನಲ್‌ ಹಂತದಲ್ಲೇ ಮುಗ್ಗರಿಸಿತ್ತು. ಹಾಗಾಗಿ, ಪ್ರಶಸ್ತಿ ಸುತ್ತಿನ ಸೆಣಸಾಟ ಈ ತಂಡಕ್ಕೆ ಹೊಸತು.

ಭಾರತ ವಿರುದ್ಧ ಇಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೂ ಮುನ್ನ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮರ್ಕ್ರಂ, ಹಿಂದಿನ ಆವೃತ್ತಿಗಳಲ್ಲಿ ಅನುಭವಿಸಿದ್ದ ವೈಫಲ್ಯಗಳನ್ನು ಮೀರಿ ನಿಂತಿರುವುದರಿಂದ, ತಮ್ಮ ಬಳಗವು ಉಳಿದೆಲ್ಲ ತಂಡಗಳಿಂದ ಬಲಿಷ್ಠವಾಗಿದೆ ಎಂದಿದ್ದಾರೆ.

'ಗೆಲ್ಲಲೇಬೇಕೆಂಬ ದೃಢ ಸಂಕಲ್ಪವಿದೆ. ಅದು ನಿರಾಶೆಗಳಿಂದ ರೂಪುಗೊಂಡಿಲ್ಲ, ಬದಲಾಗಿ ಜಯಕ್ಕಾಗಿನ ತೀವ್ರ ಹಸಿವಿನಿಂದ ಕೂಡಿದೆ ಎಂದು ಭಾವಿಸಿದ್ದೇವೆ' ಎಂದು ಹೇಳಿದ್ದಾರೆ.

ಹಿಂದಿನ ಟೂರ್ನಿಗಳಲ್ಲಿ ಎದುರಾದ ಸೋಲುಗಳು ತಮ್ಮ ತಂಡಕ್ಕೆ ಹಿನ್ನಡೆ ಉಂಟುಮಾಡುವುದಿಲ್ಲ. ಪ್ರೇರೇಪಿಸುತ್ತವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

'ಐಸಿಸಿ ಟೂರ್ನಿಗಳಲ್ಲಿ ನಮ್ಮ ತಂಡ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಅದೇ ನಮ್ಮ ಆಟಗಾರರಿಗೆ ಸಾಧನೆ ಮಾಡಲು ಅಥವಾ ಕನಿಷ್ಠ ಅದಕ್ಕಾಗಿ ಪ್ರಯತ್ನ ಮಾಡಲು ಸ್ಫೂರ್ತಿಯಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

ಹರಿಣಗಳ ತಂಡ ಈ ಟೂರ್ನಿಯಲ್ಲಿ ಸೆಮಿಫೈನಲ್‌ ಸೇರಿ ಒಟ್ಟು 8 ಪಂದ್ಯಗಳಲ್ಲಿ ಆಡಿದೆ. ಎಲ್ಲ ಪಂದ್ಯಗಳನ್ನೂ ಗೆದ್ದು ಅಜೇಯ ಓಟ ಮುಂದುವರಿಸಿದೆಯಾದರೂ, ಬಾಂಗ್ಲಾದೇಶ, ನೇಪಾಳ ಎದುರು ಗುಂಪು ಹಂತದಲ್ಲಿ ಮತ್ತು ಇಂಗ್ಲೆಂಡ್‌ ವಿರುದ್ಧ ಸೂಪರ್‌ 8 ಹಂತದಲ್ಲಿ ಸ್ವಲ್ಪದರಲ್ಲೇ ಸೋಲು ತಪ್ಪಿಸಿಕೊಂಡು ಇಲ್ಲಿಯವರೆಗೆ ಬಂದಿದೆ. ಆದರೆ, ಈ ಪ್ರದರ್ಶನಗಳೇ ತಮ್ಮ ತಂಡದ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿವೆ ಎಂದು ಮರ್ಕ್ರಂ ಹೇಳಿಕೊಂಡಿದ್ದಾರೆ.

'ನಿಕಟ ಪೈಪೋಟಿಯಿಂದ ಕೂಡಿದ ಕೆಲವು ಪಂದ್ಯಗಳನ್ನು ನೋಡಿದ್ದೀರಿ. ಬಹುಶಃ ನಾವು ನಮ್ಮ ಶ್ರೇಷ್ಠ ಪ್ರದರ್ಶನ ತೋರಿಲ್ಲ. ಅಂತಿಮವಾಗಿ ಅಂತಹ ಪಂದ್ಯಗಳಲ್ಲಿಯೂ ನಾವು ಗೆಲುವು ಸಾಧಿಸಿದ್ದೇವೆ. ಕೆಲಸ ಪೂರ್ಣಗೊಳಿಸಿದ್ದೇವೆ. ಇಂತಹ ಪಂದ್ಯಗಳು, ಮುನ್ನುಗ್ಗಲು ನಮಗೆ ಭರವಸೆ ತುಂಬುತ್ತವೆ. ಯಾವುದೇ ಸ್ಥಿತಿಯಲ್ಲಿದ್ದರೂ, ಗೆಲ್ಲಬಲ್ಲೆವು ಎಂಬ ಮನೋಭಾವ ಮೂಡಿಸುತ್ತವೆ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT