ಒಂದು ಆಲಸಿ ರವಿವಾರವು ಮರುದಿವಸದಿಂದ ಆರಂಭವಾಗುವ ವಾರದ ಓಟಕ್ಕೆ ಒಲ್ಲದ ಮನಸ್ಸಿನಿಂದ ತಯಾರಾಗುತ್ತಿತ್ತು. ಸುತ್ತಲಿನ ಹಿಮವೆಲ್ಲ ಒಂಚೂರು ಕರಗದೆಯೇ ಅಲ್ಲಿಂದಲ್ಲಿಯೇ ಆವಿಯಾಗುತ್ತ, ಸಿನಿಮೀಯ ಫಾಗ್ ನಿರ್ಮಿತವಾಗುತ್ತ ಆಲಸ್ಯಕ್ಕೆ ಮತ್ತಷ್ಟು ಹಿತ ನೀಡುತ್ತಿತ್ತು. ಇನ್ನೇನು ರವಿವಾರ ಎಲ್ಲ ಅಂಗಡಿಗಳೂ ಬೇಗ ಮುಚ್ಚುತ್ತವೆಂಬ ಭಯದಿಂದ ನಾವು ಒಲ್ಲದ ಮನಸ್ಸಿನಿಂದಲೇ ಹೊರಬಿದ್ದು, ಒಂದಿಷ್ಟು ಅನಿವಾರ್ಯ ಚಿಕ್ಕಪುಟ್ಟ ಖರೀದಿ ಮುಗಿಸಿ, ಸಂಜೆ ಇಲ್ಲೇ ಎಲ್ಲೋ ಸ್ವಲ್ಪ ತಿಂದು ಮನೆಗೆ ಹೋದರಾಯಿತೆಂದು ‘ಈಟ್ ಇನ್ / ಕ್ಯಾರಿ ಔಟ್’ ಎಂಬಂತಹ ದರ್ಶಿನಿ ಮಾದರಿಯ ಚಿಕ್ಕ ಭಾರತೀಯ ರೆಸ್ಟೋರೆಂಟ್ ಒಳ ಹೊಕ್ಕೆವು.

ಅಲ್ಲಿ ಜಾಮೂನು, ಗಜ್ಜರಿ ಹಲ್ವಾದ ಬಫೆ ಟೇಬಲಿನ ಪಕ್ಕ, ಬಡಿಸುವವನಂತೆ ನಿಂತಿದ್ದ ಹುಡುಗನೊಬ್ಬ ಒಳಬನ್ನಿ ಎಂಬಂತೆ ನಕ್ಕ. ನಾವು ಪಟ್ಟಾಗಿ ಕೂತು ಕಚಪಚ ಕನ್ನಡದಲ್ಲಿ ಹಲುಬುತ್ತ ಊಟ ಕತ್ತರಿಸುತ್ತಿರುವಾಗ, ನನ್ನ ಹಿಂದಿನಿಂದ ಪ್ರಶ್ನೆಯೊಂದು ಬಂತು. ‘ಆರ್ ಯು ಗಯ್ಸ್ ಫ್ರಂ ಶ್ರೀಲಂಕ?’. ಡೆಸರ್ಟ್ ಟೇಬಲಿನ ಚಾಟ್ ಸೆಕ್ಷನ್ನಿಗೆ ಬಂದು ಕ್ಯಾಶ್ ಕೌಂಟರಿಗೆ ಆತುಕೊಂಡು ನಮ್ಮ ಊಟದ ಟೇಬಲಿಗೆ ಸಮಾನಾಂತರವಾಗಿ ಬಂದು ನಿಂತಿದ್ದ ಆ ಹುಡುಗ. ನನ್ನವ ಸಮಜಾಯಿಷಿ ಕೊಡುತ್ತ ಕೇಳಿದ, ‘ಇಲ್ಲಪ್ಪ, ನಾವು ಭಾರತದವರು. ಯಾಕೆ?’

‘ಯಾಕೆಂದರೆ ನಾನು ಶ್ರೀಲಂಕಾದವನು. ನಿಮ್ಮ ಮಾತು ತಮಿಳಿನಂತೆ ಕೇಳಿತು’.
‘ಓಹೋ, ನೀನು ಶ್ರೀಲಂಕಾದವನೆ? ಇಲ್ಲ, ನಾವು ಆಡುತ್ತಿರುವ ಭಾಷೆ ಕನ್ನಡ. ಕರ್ನಾಟಕದ್ದು. ಹೆಸರು ಕೇಳಿದ್ದೀಯ?’

‘ಸರಿ, ಬೆಂಗಳೂರಿನ ಹೆಸರು ಕೇಳಿದ್ದೀಯ, ಬೆಂಗಳೂರು ಕರ್ನಾಟಕದಲ್ಲಿದೆ. ಆ ಪ್ರದೇಶದ ಭಾಷೆ ಕನ್ನಡ, ತಮಿಳಿಗೆ ತುಂಬಾ ಹತ್ತಿರ’.

‘ಹೌದಾ? ನಿಮಗೆ ತಮಿಳು ಬಂದರೆ ನಿಮ್ಮೊಡನೆ ತಮಿಳು ಮಾತನಾಡುವ ಎಂದುಕೊಂಡೆ’.
ಇಷ್ಟೊತ್ತು ಇವರ ಸಂಭಾಷಣೆ ಆಲಿಸುತ್ತಿದವಳು ಈಗ ಕತ್ತು ತಿರುಗಿಸಿ ಸ್ವಲ್ಪ ನನ್ನ ಬೆನ್ನ ಬದಿಗಿದ್ದ ಆ ಹುಡುಗನ ಮುಖ ನೋಡಿದೆ. ಸುಮಾರು ಇಪ್ಪತ್ತೆರಡು -ಇಪ್ಪತ್ಮೂರರ ಮುಖ. ಎಣ್ಣೆಗೆಂಪು ಬಣ್ಣ. ಕಾಂಬೋಡಿಯದವರಂತೆ ಕಾಣುವ ಮುಖ ಲಕ್ಷಣ. ಇವನೆಂಥ ಶ್ರೀಲಂಕಾದ ತಮಿಳ?

ಅಷ್ಟರಲ್ಲಿ ಅವನೇ ಮುಂದುವರಿಸಿದ ತನ್ನ ಧಾಟಿಯಲ್ಲಿ, ತೀರ ಕಳಪೆಯೇನೂ ಆಗಿಲ್ಲದ ಅರ್ಥಮಾಡಿಕೊಳ್ಳಲು ಸುಲಭವೇ ಆಗಿದ್ದ ಇಂಗ್ಲಿಷಿನಲ್ಲಿ. ಉಭಯ ಕುಶಲೋಪರಿ, ಲೋಕಾಭಿರಾಮದ ವಿಚಾರಣೆಯ ನಂತರ ಆ ಹುಡುಗ ವಿವರಿಸಿದ ಜೀವನವೃತ್ತಾಂತದ ಕತೆಯನ್ನು ನಿಜ ಎಂದರೆ ನಂಬಲು ಸ್ವಲ್ಪ ಕಷ್ಟವೇ. ಆದರೆ ಇದು ಯಾವ ಕಾಲ್ಪನಿಕ ಕತೆಯ ಪುಟವೂ ಅಲ್ಲ. ಜಗತ್ತಿನ ಬಹುಭಾಗಕ್ಕೆ ಗೊತ್ತಿಲ್ಲದ ಸತ್ಯಕತೆಗಳ, ಇತಿಹಾಸದ ಪುಟಗಳ ಭಾಗ. ಅವ ಮುಂದುವರಿಸುತ್ತಾ ಹೋದಂತೆ ನಾವು ಬರೀ ಕಿವಿಗಳಾಗಿದ್ದೆವಲ್ಲಿ.

ಅವ ಹೇಳತೊಡಗಿದ– “ನಾನು ಹಾಗೆ ನೋಡಿದರೆ ತಮಿಳನಲ್ಲ, ಮೂಲತಃ ಬರ್ಮಾದವನು. ಆದರೆ ಹಲವು ದೇಶಗಳಲ್ಲಿದ್ದೆ. ಬರ್ಮಾದಲ್ಲಿದ್ದಿದ್ದು ಬರೀ ಹತ್ತು ಹನ್ನೊಂದು ವರ್ಷ. ಬರ್ಮಾದಲ್ಲಿ ಕ್ರಿಶ್ಚಿಯನ್ನರು, ಬೌದ್ಧರು, ಮೂಲನಿವಾಸಿಗಳು, ವಲಸಿಗರು ಎಲ್ಲ ಇದ್ದಾರೆ. ಆದರೆ ನಾನು ಒಂದು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವನು. ನಮ್ಮನ್ನು ಬರ್ಮೀ ಪೊಲೀಸರು ಕಾರಣವಿಲ್ಲದೆ ಕೊಲ್ಲುತ್ತಾರೆ”.

ಬರ್ಮಾ ಹೋರಾಟ, ಆಂತರಿಕ ಸಂಘರ್ಷ, ಧಾರ್ಮಿಕ, ಸಾಂಸ್ಕೃತಿಕ ತುಮುಲ, ಆಂಗ್ ಸಾನ್ ಸೂಕಿ– ಎಂಬಷ್ಟೇ ಹೆಸರುಗಳಿಂದ ಮಾಧ್ಯಮಗಳ ಅಕ್ಷರಗಳಲ್ಲಿ ಪರಿಚಿತವಿದ್ದ ಬರ್ಮಾ ಅವನ ಮಾತುಗಳಲ್ಲಿ, ಯಾವ ಉದ್ವೇಗ, ಭಾವವಿಕಾರವಿಲ್ಲದೆ ಬಿಚ್ಚಿಕೊಳ್ಳುತ್ತಿತ್ತು.

ನಾನು ಕೇಳಿದೆ. ‘ಹಾಗಿದ್ದರೆ ನೀನು ಯಾವ ಪಂಗಡದವನು?’
‘ನಾನು ಒಬ್ಬ ರೊಹಿಂಗ್ಯಾ. ರೊಹಿಂಗ್ಯಾಗಳು ಅಲ್ಪಸಂಖ್ಯಾತರು. ಬರ್ಮಾದ ಮೂಲ ನಿವಾಸಿಗಳು. ಧಾರ್ಮಿಕವಾಗಿ ಮುಸ್ಲಿಮರು. ಆದರೆ ಬರ್ಮನ್ ಪೊಲೀಸರು, ನಮ್ಮ ಬಳಿ ದಾಖಲೆ ಪತ್ರಗಳಿಲ್ಲದಿದ್ದರೆ ಎಲ್ಲರನ್ನೂ ಗಾಡಿಗಳಲ್ಲಿ ತುಂಬಿಸಿಕೊಂಡು ಹೋಗಿ ಸಾಮೂಹಿಕ ಹತ್ಯೆಗೈಯುತ್ತಾರೆ!’.

‘ಬರೀ ಜ್ಯೂಗಳ ಮೇಲೆ ಜರ್ಮನ್ ನಾಜೀಗಳ ಬರ್ಬರತೆ ಕೇಳಿ ಗೊತ್ತಿದ್ದ ನನಗೆ ಇದೊಂದು ಶಾಕಿಂಗ್ ನ್ಯೂಸ್. ಇದೆಂಥ ಅಸಂಬದ್ಧ, ನಂಬಲಾಗುತ್ತಿರಲಿಲ್ಲ. ನಿನ್ನ ದೇಶದಲ್ಲಿರಲು ನಿನ್ನ ಬಳಿ ದಾಖಲೆ ಪತ್ರ ಏಕಿರಬೇಕು? ಬೇರೆ ದೇಶಕ್ಕೆ ಹೋದರೆ ಸರಿ, ಆದರೆ ಅಲ್ಲಿ ಇದ್ದರೆ ಯಾಕೆ ದಾಖಲೆ ಪತ್ರ ಕೇಳುತ್ತಾರೆ?’– ನನ್ನ ಪ್ರಶ್ನೆಗಳಿಗೆ ಅವನ ಬಳಿ ಸಮರ್ಪಕ ಉತ್ತರವಿರಲಿಲ್ಲ (ಆದರೆ ಅವೆಲ್ಲ ಸತ್ಯ. ಆ ಬಗ್ಗೆ ಬಹಳಷ್ಟು ಮಾಹಿತಿಗಳು ಲಭ್ಯವಿವೆ ಎಂಬುದು ಆ ವಿಷಯದ ಬಗ್ಗೆ ಬೆದಕಿದಾಗ ತಿಳಿಯಿತು).

‘ಅದು ಹಾಗೆಯೇ ಅಲ್ಲಿ, ನಮ್ಮನ್ನು ಕೊಲ್ಲಲು ಅವರಿಗೆ ಚಿಕ್ಕ ಕಾರಣ ಸಾಕು. ನಾವು ಪೋಲೀಸರ ಅಥವಾ ಮಿಲಿಟರಿಯವರ ಕೈಗೆ ಸಿಕ್ಕಿದರೆ ತಲೆ ಹೋಯಿತೆಂದೇ ಅರ್ಥ. ನಾವಿರುವ ಪ್ರದೇಶ ಬಾಂಗ್ಲಾದೇಶದ ಗಡಿಯಲ್ಲಿದೆ. ಬಹಳಷ್ಟು ರೊಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಓಡಿ ಹೋಗಿದ್ದಾರೆ. ನಾನೂ ಸುಮಾರು 13 ವರ್ಷದವನಿದ್ದಾಗ ಬಾಂಗ್ಲಾದೇಶಕ್ಕೆ ಓಡಿ ಹೋದೆ, ಹೀಗೆ ಒಂದು ಗಲಭೆಯಲ್ಲಿ ತಪ್ಪಿಸಿಕೊಂಡು. ಅಲ್ಲಿ ಸುಮಾರು 3 ತಿಂಗಳು ಏನೇನೋ ಕೆಲಸ ಮಾಡಿಕೊಂಡು ಇದ್ದೆ. ಕೊನೆಗೊಮ್ಮೆ ಮನೆಯ ನೆನಪಾಯಿತು.

ಮನೆಗೆ ಹೋಗಿ ಕುಟುಂಬದವರನ್ನೆಲ್ಲ ಕಾಣಬೇಕೆನಿಸಿತು. ಆದರೆ ಹಿಂತಿರುಗಿ ಹೋಗುವುದು ಹೇಗೆ? ನನ್ನ ಬಳಿ ಪಾಸ್ಪೋರ್ಟ್ ಇರಲಿಲ್ಲ. ಬರ್ಮಾ ಸರ್ಕಾರದ ಕೈಗೆ ಸಿಕ್ಕಿಬಿದ್ದರೆ ಸಾವೇ ಖಚಿತ. ಪಾಸ್ಪೋರ್ಟ್ ಇಲ್ಲದೆ ‘ಇಲ್ಲೀಗಲ್’ ಎಂದು ಬರ್ಮಾ ಸರ್ಕಾರದ ಕೈಗೆ ಸಿಕ್ಕಿಬಿದ್ದರೆ, ಅದರಲ್ಲೂ ಒಬ್ಬ ರೋಹಿಂಗ್ಯಾ! ಈ ಅಪರಾಧದಲ್ಲಿ ನನಗೆ ಸಿಗುವುದು ಮರಣದಂಡನೆ ಎಂದು ಗೊತ್ತಿತ್ತು. ಆದರೂ ಧೈರ್ಯ ಮಾಡಿ ಮನೆಗೆ ಹೋಗುವುದೆಂದು ನಿರ್ಧರಿಸಿದೆ. ನಮ್ಮೂರಿಗೂ ಬಾಂಗ್ಲಾದೇಶಕ್ಕೂ ನಡುವೆ ಒಂದು ಸಣ್ಣ ಹೊಳೆಯಿದೆ.

ಹೊಳೆ ದಾಟಿದರೆ ಬರ್ಮಾ. ಆದರೆ ಅಲ್ಲಿ ಸದಾ ಪೋಲೀಸು ಕಾವಲಿರುತ್ತೆ. ಪೊದೆಗಳ ಹಿಂದೆ ಬಚ್ಚಿಟ್ಟುಕೊಳ್ಳುತ್ತ, ಹೊಳೆದಾಟಲು ಆರಂಭಿಸಿದೆ. ಅಷ್ಟರಲ್ಲಿ ಪೊಲೀಸರು ಕಾಣಿಸಿಕೊಂಡರು. ಮತ್ತೆ ಅಲ್ಲಿ ಕೆಲಹೊತ್ತು ಮಿಸುಕಾಡದೆ ಅಡಗಿ ಕುಳಿತೆ. ಆದರೂ ಒಬ್ಬ ಪೊಲೀಸ್ ಗಬಕ್ಕನೆ ಹಿಡಿದುಬಿಟ್ಟ. ಯಾವೂರು, ಎತ್ತ ಎಂದೆಲ್ಲ ವಿಚಾರಿಸಿದ. ನಾನು ಅಪ್ಪಿತಪ್ಪಿಯೇನಾದರೂ ಬರ್ಮಾದವನು ಎಂದಿದ್ದರೆ ನಾನು ರೋಹಿಂಗ್ಯಾ ಎಂದು ಪತ್ತೆ ಹಚ್ಚಿ ಕೊಲ್ಲುತ್ತಿದ್ದರು. ಹಾಗಾಗಿ ನಾನು ಬಾಂಗ್ಲಾದೇಶದವನು ಎಂದು ಸುಳ್ಳುಹೇಳಿದೆ’.

ಅಷ್ಟರಲ್ಲಿ ಇಷ್ಟುಹೊತ್ತು ಸುಮ್ಮನೆ ಕುಳಿತು ಆಲಿಸುತ್ತಿದ್ದ ಸತ್ಯ ಹರಿಶ್ಚಂದ್ರನ ಪುನರಾವತಾರದ ನನ್ನ ಮಗಳು, ಬಾಣ ಬಿಟ್ಟಂತೆ ಕೇಳಿದಳು. ‘ಯು ಲೈಡ್? ಯು ಲೈಡ್ ಟು ದಿ ಪೋಲೀಸ್?’. ಮತ್ತೆ ಆತ ತಣ್ಣಗೆ ಹೇಳಿದ. ‘ಇಫ್ ಐ ಡಿಡ್ ನಾಟ್ ಲೈ, ಐ ವುಡ್ ಬಿ ಡೆಡ್’. ಅದು ತಾನು ಕಂಡ ನಿತ್ಯದ ಜೀವನವೆಂಬಂತೆ ಸರಳವಾಗಿತ್ತು ಅವನ ಉತ್ತರ. ಮಗಳಿಗೆ ‘ಸುಮ್ಮನಿರು, ಅವನ ಕತೆ ಕೇಳುವ’ ಎಂದುದಕ್ಕೆ ಆಕೆ ಮತ್ತೆ ಬಾಯಿಗೆ ಸೌತೆ ಚೂರುಗಳನ್ನು ತುರುಕಿಕೊಳ್ಳುತ್ತ ಕುಳಿತಳು.

ಅವ ಮುಂದುವರಿಸಿದ. ‘ಪೊಲೀಸರು ಮತ್ತೆ ಮತ್ತೆ ಕೇಳಿದರು. ಬಾಂಗ್ಲಾದೇಶದವನಾದರೆ ಇಲ್ಲಿ ಯಾಕೆ ಬಂದಿ ಎಂದು. ನಾನು ನನ್ನೊಬ್ಬ ಸ್ನೇಹಿತ ಇಲ್ಲಿಯವನು. ಕಂಡು ಹೋಗುವ ಎಂದು ಬಂದಿದ್ದೆ ಅಷ್ಟೇ ಎಂದುತ್ತರಿಸಿದೆ. ನನ್ನನ್ನು ಬೈದು, ದಾಖಲೆ ಪತ್ರ, ಪಾಸ್ಪೋರ್ಟ್, ವೀಸಾಗಳಿಲ್ಲದೆ ಹಾಗೆಲ್ಲ ಬೇರೆ ದೇಶಕ್ಕೆ ನುಗ್ಗಬಾರದು, ಹಿಂತಿರುಗಿ ಹೋಗು ತಕ್ಷಣ ಇಲ್ಲಿಂದಲೇ ಎಂದು ಬೈದು ಬಿಟ್ಟುಬಿಟ್ಟ. ಹೊಳೆದಾಟಿ ಪುನಃ ಬಾಂಗ್ಲಾದೇಶದ ಗಡಿಗೆ ಬಂದು ಅಲ್ಲಿ ಬಹುಹೊತ್ತಿನ ತನಕ ಅಡಗಿ ಕೂತೆ. ರಾತ್ರಿಯಾದ ಮೇಲೆ ಬಹಳ ಕಷ್ಟಪಟ್ಟು ಮತ್ತೆ ಹೊಳೆದಾಟಿ ಮನೆಗೆ ಹೋದೆ.

ಮನೆಯಲ್ಲಿ ಮೂರು ದಿನ ಇದ್ದೆ. ಎಲ್ಲರನ್ನೂ ಮಾತನಾಡಿಸಿದೆ. ಇನ್ನು ನನ್ನ ದೇಶಕ್ಕೆ ಹಿಂತಿರುಗಿ ಬರಲು ಅಸಾಧ್ಯ ಎಂದು ಗೊತ್ತಿತ್ತು. ಕುಟುಂಬದವರನ್ನು ಮತ್ತೆ ಕಾಣುವೆನೋ ಇಲ್ಲವೋ ತಿಳಿದಿರಲಿಲ್ಲ. ಮತ್ತೆ ಬಾಂಗ್ಲಾಕ್ಕೆ ತಪ್ಪಿಸಿಕೊಂಡು ಬಂದೆ. ಬರುತ್ತಿದ್ದಂತೆಯೇ, ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಇನ್ನಷ್ಟು ಕೂಲಿ ಹುಡುಗರ ಗುಂಪೊಂದು ಗುಸುಗುಸು ಮಾಡುತ್ತಾ ಏನೋ ತಯಾರಿ ನಡೆಸಿತ್ತು. ಅವರೆಲ್ಲ ಯಾವುದೋ ಹಡಗನ್ನು ಏರಿ ಮಲೇಷಿಯಾಕ್ಕೆ ಹೋಗುವುದೆಂದು ಉಪಾಯ ಹೂಡಿದ್ದರು. ನನಗೋ ಸ್ವರ್ಗಕ್ಕೆ ಮೂರೇ ಗೇಣು. ನನ್ನ ತಾಯಿ ಮೂಲತಃ ಮಲೇಷಿಯಾದವಳು. ನಾನು ಹುಟ್ಟಿದ್ದು ಮಲೇಷಿಯಾದಲ್ಲೇ. ಅಪ್ಪ ಅಲ್ಲಿಗೆ ವ್ಯಾಪಾರಕ್ಕೆಂದು ಬಂದು ಹೋಗುವಾಗ ಅಮ್ಮನ ಪರಿಚಯವಾಗಿ ಮದುವೆ ಮಾಡಿಕೊಂಡು ಬಂದವ.

ಮಲೇಷಿಯಾ ಸರ್ಕಾರದ ಪ್ರಕಾರ ನಾನಲ್ಲೇ ಹುಟ್ಟಿದ್ದರಿಂದ ಅಲ್ಲಿನ ಪ್ರಜೆಯಷ್ಟೇ ಹಕ್ಕು ನನಗಿವೆ. ಈಗ ಈ ಹಡಗು ಹತ್ತಿ ಹೋಗಿಬಿಟ್ಟರೆ, ಮುಂದೆಲ್ಲ ಸುಸೂತ್ರ ಎನಿಸಿ ತಕ್ಷಣವೇ ಅವರೊಡನೆ ಸೇರಿಕೊಂಡೆ. ನಡುರಾತ್ರಿಯಲ್ಲಿ ಮೂರು ನಾಲ್ಕು ದಿನ ಬಿಟ್ಟು ಅದ್ಯಾವುದೋ ಕಳ್ಳ ಹಡಗು ಸೇರಿಕೊಂಡಾಗ ತಿಳಿಯಿತು, ಅಲ್ಲಿ ನನ್ನಂತಹ ಸುಮಾರು 30–40 ಜನರಿದ್ದರು ಎನ್ನುವುದು, ಮಕ್ಕಳಿಂದ ಹಿಡಿದು ಮುದುಕರವರೆಗೆ ಹಲವು ವಯಸ್ಸಿನವರು. ಹಡಗು ಸಾಗುತ್ತಾ ಸಾಗುತ್ತಾ ಒಂದೊಂದೇ ಆಹಾರ ಪದಾರ್ಥ ತೀರುತ್ತ ೧೮-–೨೦ ದಿನಗಳೇ ಆದವೇನೋ... ಮಲೇಷಿಯಾಕ್ಕೆ ತಲುಪಿಸುತ್ತೆನೆಂದು ಹಣ ಇಸಿದುಕೊಂಡವನಿಗೆ ಮಲೇಶಿಯಾ ಎಲ್ಲಿತ್ತೆಂದೇ ತಿಳಿದಿರಲಿಲ್ಲ. ಹಡಗಿಗೆ ಅದನ್ನು ನಡೆಸುವವನೇ ಸರಿಯಾದವನ್ಯಾರೂ ಇರಲಿಲ್ಲ. ದಾರಿ ತಪ್ಪಿ ಎಲ್ಲೋ ಒಂದು ದಿನ ಕೊನೆಗೊಮ್ಮೆ ತೀರ ಕಂಡಾಗ ನನಗೆ ಪ್ರಜ್ಞೆ ತಪ್ಪಿತ್ತು.

ಯಾರೋ ಎಬ್ಬಿಸಿದರು– ನೆಲ ಬಂತು ಇಳಿ ಇಳಿ. ಇಳಿಯುತ್ತ ಬೀಳುತ್ತಿದ್ದಂತೆಯೇ ಯಾರೋ ಬಾಚಿ ಹಿಡಿದರು. ದುಡು ದುಡು ಎಂದು ಒಂದಷ್ಟು ಜನ ಹಡಗಿನೊಳಗೆ ನುಗ್ಗಿದರು. ಎಚ್ಚರವಾದಾಗ ತಿಳಿಯಿತು, ನಾನು ಶ್ರೀಲಂಕಾದ ಕಾರಾಗೃಹದಲ್ಲಿದ್ದೆ. ನಮ್ಮೊಡನೆ ಹಡಗಿನಲ್ಲಿದ್ದ ಸುಮಾರು ೧೬ ಮಂದಿ ಹಡಗಿನಲ್ಲಿಯೇ ಹಸಿದು ಹೆಣವಾಗಿದ್ದರು’.

ಅವನ ಕತೆಯನ್ನು ಕೇಳುತ್ತ ನನಗಂತೂ ಮತ್ತೆ ಉಣ್ಣುವ ಮನಸ್ಸೇ ಆಗಲಿಲ್ಲ. ಕೈ ಒಣಗಿಸಿಕೊಂಡು ಹೊರಗಿನ ಚಳಿಯೆಲ್ಲ ಒಳಗೂ ಆವರಿಸುತ್ತಿದೆಯೇನೋ ಎಂಬಂತೆ ಕೇಳುತ್ತಿದ್ದೆ. ಮತ್ತೆ ಮುಂದುವರಿಸಿದ ಅವನು.

‘ದಯವಿಟ್ಟು ಬರ್ಮಾಕ್ಕೆ ಹಿಂತಿರುಗಿ ಕಳಿಸಬೇಡಿ. ಅಲ್ಲಿ ನಮ್ಮನ್ನು ಕೊಂದೇ ಬಿಡುತ್ತಾರೆ, ಇಲ್ಲೇ ಜೈಲಾದರೂ ಸರಿ, ಹೇಗಾದರೂ ಕಾಪಾಡಿ ಎಂದು ಅಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡೆ. ನಾನಿನ್ನೂ ಅಪ್ರಾಪ್ತ ವಯಸ್ಸಿನವನಾದ್ದರಿಂದ ರಿಮಾಂಡ್ ಹೋಮಿನಂತಹ ಒಂದು ಮನೆಯಲ್ಲಿ ಉಳಿಸಿದರು. ಅಲ್ಲಿಯೇ ಶಾಲೆ, ಪುಸ್ತಕ ಎಲ್ಲ ಇತ್ತು. ಓದುವುದು ಹೊಸ ಅನುಭವ ನನಗೆ. ಖುಷಿಯಾಯ್ತು. ಮನಸಿಟ್ಟು ಓದಿದೆ.

ಅಲ್ಪಸ್ವಲ್ಪ ಕಂಪ್ಯೂಟರ್ ಕೂಡ ಕಲಿತೆ. ನನಗೆ ಮೈಕ್ರೋಸಾಫ್ಟ್ ಆಫೀಸ್ ಎಲ್ಲ ಗೊತ್ತು. ಆ ಸಮಯದಲ್ಲಿಯೇ ನಮಗೆ ರೆಫ್ಯೂಜಿ ಎಂದು ವಿಶ್ವಸಂಸ್ಥೆಗೆ ಅರ್ಜಿ ಹಾಕಲು ಜೈಲಿನ ಅಧಿಕಾರಿಗಳು ಸಹಾಯ ಮಾಡಿದರು. ನನಗೆ ಹದಿನೆಂಟು ತುಂಬಿದ ಬಳಿಕ ತುಂಬಾ ತಾಕೀತುಗಳೋಡನೆ ರಿಮಾಂಡ್ ಹೊಮಿನಿಂದ ಬಿಡುಗಡೆಗೊಳಿಸಿದರು. ವಿಶ್ವಸಂಸ್ಥೆಯ ರೆಫ್ಯುಜಿ ಸ್ಥಾನಮಾನದ ಪತ್ರ ಬರುವವರೆಗೆ ನಾನು ಅಲ್ಲಿ ಎಲ್ಲಿ ಬೇಕಾದರೂ ಸುತ್ತಬಹುದಾಗಿತ್ತು. ಓದಬಹುದಾಗಿತ್ತು, ಆದರೆ ದುಡಿಯುವಂತಿರಲಿಲ್ಲ. ಸರ್ಕಾರ ಜೀವನಕ್ಕೆಂದು ಅಲ್ಪಸ್ವಲ್ಪ ಹಣ ಕೊಡುತ್ತಿತ್ತು. ನಾನು ಅಲ್ಲೇ ಒಂದು ಕಡೆ ಕಂಪ್ಯೂಟರ್ ಸೆಂಟರಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಸರ್ಕಾರಕ್ಕೆ ಅಲ್ಲಿ ಹೆಚ್ಚಿಗೆ ಕಲಿಯುತ್ತಿದ್ದೇನೆಂದು ಮತ್ತೆ ಸುಳ್ಳು ಹೇಳಿದೆ.

ಸಂಬಳವನ್ನು ನಗದು ಪಡೆಯುತ್ತಿದ್ದೆ. ಅಲ್ಲಿ ಸಿಕ್ಕವ ಒಬ್ಬ ಒಳ್ಳೆಯ, ತಮಿಳರವನು. ಅವನೇ ನಂಗೆ ಅಲ್ಪಸ್ವಲ್ಪ ತಮಿಳು ಕಲಿಸಿದ್ದು, ಬಹಳ ಮಧುರ ಭಾಷೆ, ನಂಗೆ ಇಷ್ಟವಾಗಿ ಹೋಯ್ತು. ಬೇಗ ಕಲಿತೆ ಕೂಡ. ಅವ ಅಷ್ಟಷ್ಟು ದಿವಸಕ್ಕೆ ಎಲ್ಲೋ ಕಾಣೆಯಾಗಿಬಿಡುತ್ತಿದ್ದ. ಕೇಳಿದರೆ– ಊರಿಗೆ ಹೋಗಿದ್ದೆ, ಬಹಳ ಸುಂದರ ನಮ್ಮೂರು ಎನ್ನುತ್ತಿದ್ದ. ಮುಂದಿನ ಬಾರಿ ನನ್ನನ್ನೂ ಕರಕೊಂಡು ಹೋಗೆಂದು ಬೆನ್ನುಬಿದ್ದು ಅವನೊಡನೆ ಹೊರಟೆ. ಅದು ಮತ್ತೊಂದು ಅದ್ಭುತ ಅನುಭವ. ನಾವಿಬ್ಬರೂ ಹೋದದ್ದು ಜಾಫ್ನ ಹತ್ತಿರದ ಒಂದು ಹಳ್ಳಿ.

ಗದ್ದೆಗಳೋ ಗದ್ದೆ, ಕಾಡೋ ಕಾಡು. ಅಲ್ಲೆಲ್ಲ ಸುಮಾರು ತುಂಡಲೆದೆವು. ಒಮ್ಮೆ ಗದ್ದೆಯೊಂದರ ಬದುವಿನ ಮೇಲೆ ನಡೆಯುತ್ತಿದ್ದಾಗ ಅದೆಲ್ಲಿಂದ ಬಂದರೋ ಧುತ್ತೆಂದು ಪ್ರತ್ಯಕ್ಷರಾದ ಲಂಕಾ ಪೊಲೀಸರು ನಮ್ಮನ್ನು ಹೆಡೆಮುರಿಗೆ ಕಟ್ಟಿ ಎತ್ತೊಯ್ದರು. ಸಾಕಷ್ಟು ಥಳಿಸಿದರು, ಏನೇನೋ ಪ್ರಶ್ನೆ ಕೇಳಿದರು, ನನಗೊಂದೂ ತಲೆಬುಡ ತಿಳಿಯುತ್ತಿರಲಿಲ್ಲ. ನಿಧಾನಕ್ಕೆ ಅರ್ಥವಾಗಿದ್ದು, ನನ್ನ ಗೆಳೆಯನಿಗೆ ತಮಿಳು ಟೈಗರ್ಗಳ ಒಡನಾಟವಿತ್ತೆನ್ನುವುದು.

ಸುಮಾರು ಮೂರು ತಿಂಗಳು ಜಾಫ್ನ ಜೈಲಿನಲ್ಲಿ ತದಕಿಸಿಕೊಂಡ ಮೇಲೆ, ನನಗೇನೂ ತಿಳಿದಿಲ್ಲ ಎಂದು ಅವರಿಗೆ ಮನವರಿಕೆಯಾದ ಮೇಲೆ ಬಿಟ್ಟುಬಿಟ್ಟರು. ಹಿಂತಿರುಗಿ ನೋಡದೆ ಕಿತ್ತಾಬಿದ್ದು ಓಡಿಬಂದೆ. ಅವನೇನಾದನೋ ಏನೋ. ಈಗಲೂ ನೆನಪಾಗುತ್ತೆ. ಆ ಕಂಪ್ಯೂಟರ್ ಸೆಂಟರಿನಲ್ಲಿ ಕೆಲಸ ಬಿಟ್ಟು ಮತ್ತೊಂದು ಕಡೆ ಸೇರಿಕೊಂಡೆ. ಒಂದು ದಿನ ರೆಫ್ಯುಜಿ ಪ್ರಮಾಣ ಪತ್ರ ಕೈಗೆ ಬಂತು. ಶ್ರೀಲಂಕಾ ಸರ್ಕಾರ ಕೂಡ ಪ್ರಜೆ ಎಂದು ಪ್ರಮಾಣ ಪತ್ರ ಸ್ವೀಕರಿಸಲು ಕರೆ ನೀಡಿತು. ಬರ್ಮಾದಿಂದ ತಪ್ಪಿಸ್ಕೊಂಡು ಜೈಲುಪಾಲಾಗಿದ್ದ ನಮ್ಮಲ್ಲಿ ೭ ಜನರನ್ನು ಅಮೆರಿಕಾಗೆ ಕಳಿಸುವುದೆಂದು ತೀರ್ಮಾನಿಸಲಾಗಿತ್ತು.

ಮೂವರು ಇಂಗ್ಲೆಂಡಿಗೆ ಹೋದರು. ನಾನು ಇಲ್ಲಿ ಬಾಸ್ಟನ್ ತಲುಪಿದ್ದು ೬ ತಿಂಗಳ ಹಿಂದೆ. ಒಬ್ಬ ನ್ಯೂಯರ್ಕಿನಲ್ಲಿದ್ದಾನೆ. ಇಬ್ಬರು ಕ್ಯಾಲಿಫೋರ್ನಿಯಾ, ಇಬ್ಬರು ಶಿಕಾಗೋ, ಮತ್ತೊಬ್ಬ ಲೂಯಿಸಿಯಾನದಲ್ಲಿ. ಎಲ್ಲ ಒಟ್ಟಿಗೆ ಅಲ್ಲಿಂದ ದೇಶ ಬಿಟ್ಟವರು. ಇಲ್ಲಿ ಈಗ ಗ್ರೀನ್ ಕಾರ್ಡ್ ಆಗಿದೆ. ಸ್ವಲ್ಪ ದಿನ ಹಣ ಮಾಡಿಕೊಂಡು ಶ್ರೀಲಂಕಾಕ್ಕೆ ವಾಪಸ್ ಹೋಗ್ತೇನೆ. ಇಲ್ಲಿ ಬೇಡ. ನಂಗೆ ಶ್ರೀಲಂಕಾನೇ ಇಷ್ಟ. ಅದೇ ನನ್ನ ದೇಶ’.

ಅವನು ಎಲ್ಲ ಸಹಜವೆಂಬಂತೆ ಕತೆ ಮುಗಿಸಿ, ‘ಇನ್ನೇನಾದರೂ ತಿನ್ತೀರಾ ನೀವೆಲ್ಲ’ ಅಂತ ಕೇಳಿದಾಗಲೇ ಮತ್ತೆ ಈ ಜಗತ್ತಿಗೆ ಬಂದಿದ್ದು. ನಾವು ಕುಳಿತಿದ್ದು ರೆಸ್ಟೋರೆಂಟಿನಲ್ಲಿ, ಅಲ್ಲಿ ಹೋಗಿದ್ದು ಊಟಕ್ಕೆ ಎಂದೇ ಮರೆತು ಹೋಗಿತ್ತು.

ಕತೆಯ ಅಯೋಮಯದಲ್ಲೇ ಹೊರಟವಳಿಗೆ ನೆನಪಾಗಿದ್ದು, ಅಯ್ಯೋ ಇವನ ಹೆಸರೇ ಕೇಳಲಿಲ್ಲ.
’ಹೇಯ್ ಹುಡುಗಾ.. ನಿನ್ನ ಹೆಸರೇನಪ್ಪ?’
‘ನನ್ನೆಸ್ರು ಕಮಲ್ ಪೆರೇರ’.

‘ಎಲಾ ಇವನ.. ರೋಹಿಂಗ್ಯಾ ಮುಸ್ಲಿಂ ಅಂತೀಯಾ, ಹೆಸರೇಕೋ ಹೀಗೆ?’
‘ಅದು ಮೇಡಂ, ನನ್ನ ಮೂಲ ಹೆಸರು ಮುಸ್ತಫಾ ಕಮಾಲ್. ಶ್ರೀಲಂಕಾದಲ್ಲಿ ಪ್ರಜೆ ಎಂದು ಪ್ರಮಾಣ ವಚನ ಸ್ವೀಕರಿಸುವಾಗ ಕಮಲ್ ಪೆರೆರಾ ಎಂದು ಬದಲಾಯಿಸಿಕೊಂಡಿರುವೆ. ಶ್ರೀಲಂಕಾ ನನಗೆ ವಿದ್ಯೆ ಕೊಟ್ಟ ದೇಶ. ನಾನು ಹುಟ್ಟಿದ ದೇಶ ಯಾವುದಾದರೇನು, ಧರ್ಮ ಯಾವುದಾದರೇನು, ನನ್ನ ಮನುಷ್ಯನ್ನನಾಗಿಸಿದ ದೇಶ ನನ್ನದಾಗುತ್ತದೆ ಅಲ್ಲವೇ?’.

ಅಲ್ಪಸಂಖ್ಯಾತ ರೋಹಿಂಗ್ಯಾಗಳು ಬೌದ್ಧ ಅಹಿಂಸಾ ಧರ್ಮದ ಸರ್ಕಾರದಲ್ಲಿ ಸಾಮೂಹಿಕ ತಳಿ ನಾಶದ ಹತ್ಯೆಗೆ ಒಳಗಾಗುತ್ತಿರುವುದು ವಿಪರ್ಯಾಸವಾದರೂ ಸತ್ಯ. ಬರ್ಮಾದ ಅರಕಾನ ಪರ್ವತ ಪ್ರದೇಶದ ಮೂಲನಿವಾಸಿಗಳಾದ ಇವರು, ೧೯೮೨ರ ಬರ್ಮಾ ಸರ್ಕಾರದ ಕಾಯ್ದೆಯಡಿಯಲ್ಲಿ ಅಲ್ಲಿನ ಪ್ರಜೆಗಳಲ್ಲ. ಕಾಗದಪತ್ರಗಳಿಲ್ಲದೆ ಎಲ್ಲಿಯೂ ಅಡ್ಡಾಡುವಂತೆಯೇ ಇಲ್ಲ. ಇವೆಲ್ಲ ವಿಶ್ವಸಂಸ್ಥೆಯಲ್ಲಿಯೂ ಲಿಖಿತದಲ್ಲಿ ಅರಿವಿರುವ ಸಂಗತಿಗಳು. ಅವರ ಮೇಲೆ ಅನಿರ್ದಿಷ್ಟ ಅಸಂಬದ್ಧ ತೆರಿಗೆಗಳಿವೆ, ಕಾನೂನುಗಳಿವೆ.

ಸತತವಾಗಿ ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ, ಪಶ್ಚಿಮ ಬಂಗಾಳಕ್ಕೆ ತಲೆತಪ್ಪಿಸಿಕೊಂಡು ಹೋಗುತ್ತಲೇ ಇದ್ದಾರೆ. ಇಂಡೋನೇಷಿಯ ನಾವಿಕರು, ಥೈಲೆಂಡಿನ ಸಮುದ್ರ ಪಡೆ, ರೋಹಿಂಗ್ಯಾಗಳು ತಪ್ಪಿಸಿಕೊಂಡು ಬರುತ್ತಿದ್ದ ಹಡಗನ್ನು ದಡಕಾಣಿಸಿದ ಬಗ್ಗೆ ದಾಖಲೆಗಳಿವೆ. ಬಹಳಷ್ಟು ಬಾರಿ ಹಡಗೊಂದರಲ್ಲಿ ಒಂದಿಷ್ಟು ಆಹಾರ ತುಂಬಿ ಬರ್ಮಾ ಸರ್ಕಾರವೇ ಅವರನ್ನು ಸಮುದ್ರದಲ್ಲಿ ಸಾಯಲು ಬಿಡುತ್ತದೆ. ಅಕ್ಟೋಬರ್ ೧೬, ೨೦೧೧ರಲ್ಲಿ ಬರ್ಮಾ ಸರ್ಕಾರ ರೋಹಿಂಗ್ಯಾಗಳನ್ನು ಮತ್ತೆ ಪ್ರಜೆಗಳೆಂದು ಪರಿಗಣಿಸುತ್ತೇವೆಂದು ಹೇಳಿದ್ದರೂ, ಒಳಗೊಳಗೆ ನಿರಂತರ ಸಾಮೂಹಿಕ ಹತ್ಯೆ ನಡೆಯುತ್ತಲೇ ಇದೆ.

ಮಾನವ ಹಕ್ಕು ಬರ್ಮಾದಲ್ಲಿ ಅತ್ಯಂತ ಕೆಳಮಟ್ಟದ್ದು ಎನ್ನುವುದು ದಾಖಲಾಗಿರುವ ಸಂಗತಿ. ಮುಂದುವರಿದ ರಾಷ್ಟ್ರಗಳಿಗಂತೂ ಇವರ ಉಸಾಬರಿಯೇ ಬೇಕಿಲ್ಲ. ಇವರ ಉದ್ಧಾರ ಮುಂದುವರಿದ ಮುಸ್ಲಿಂ ರಾಷ್ಟ್ರಗಳಿಗೂ ಬೇಕಿಲ್ಲ. ಪರಿಸ್ಥಿತಿಯ ಲಾಭ ಪಡೆಯಲು ಅರಕಾನ ಪ್ರದೇಶದ ಸಂದುಗೊಂದುಗಳಲ್ಲಿ ಜಿಹಾದಿ ಪ್ರವಾದಿಗಳ ಪ್ರವೇಶವಾಗುತ್ತಿದೆ. ಅಳಿದುಳಿದ ರೋಹಿಂಗ್ಯಾ ಮಕ್ಕಳು ಸಾಯುವ ಬದಲು ಸಾಯಿಸುವ ಕಾಯಕಕ್ಕೆ ಮೊದಲಾಗುತ್ತಾರೆ. ಹೊಸದೊಬ್ಬ ಒಸಾಮನನ್ನು ಹುಟ್ಟಿಸುತ್ತೇವೆ ನಾವು. ವಿದ್ಯೆ ಮನುಷ್ಯರನ್ನು ಮನುಷ್ಯರನ್ನಾಗಿಸುತ್ತದೆ ಎಂದರೆ ನಾವೆಲ್ಲಾ ಮನುಷ್ಯರಾಗುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.