ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಕಟಿಸಲಾಗಿದೆ. ಆರ್ಎಸ್ಎಸ್ ಸಿದ್ಧಾಂತಿ, ಸಮಾಜ ಸೇವಕ ನಾನಾಜಿ ದೇಶಮುಖ್ ಮತ್ತು ಸಂಗೀತ ಸಾಮ್ರಾಟ ಎಂದೇ ಹೆಸರಾದ ಡಾ. ಭೂಪೆನ್ ಹಜಾರಿಕಾ ಅವರಿಗೂ ಮರಣೋತ್ತರವಾಗಿ ‘ಭಾರತ ರತ್ನ’ ಘೋಷಿಸಲಾಗಿದೆ.

ಭಾರತ ಸರ್ಕಾರವು ಈವರೆಗೆ 45 ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಕ ಮದನ್ ಮೋಹನ್ ಮಾಳವೀಯ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ ರತ್ನ ನೀಡಲಾಗಿತ್ತು.

ರಾಷ್ಟ್ರಪತಿ ಹುದ್ದೆಗೆ ಏರುವವರೆಗೆ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿಯೇ ಇದ್ದ ಪ್ರಣವ್ ಅವರನ್ನು ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಿರುವುದು ಆಸಕ್ತಿಕರ ಬೆಳವಣಿಗೆ ಎಂದೇ ಪರಿಗಣಿಸಲಾಗಿದೆ. ಪ್ರಣವ್ ಅವರು ಆರು ತಿಂಗಳ ಹಿಂದೆ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು.

ಪ್ರಣವ್ ಅವರು ಪಶ್ಚಿಮ ಬಂಗಾಳದವರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯನ್ನು ಬಿಜೆಪಿ ಇರಿಸಿಕೊಂಡಿದೆ.

ನಾನಾಜಿ ದೇಶಮುಖ್ ಅವರು ಸಂಘ ಪರಿವಾರದ ಮಹತ್ವದ ನಾಯಕರಲ್ಲಿ ಒಬ್ಬರು. ಹಿಂದೆ, ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು. ಆರ್ಎಸ್ಎಸ್ ಪ್ರಚಾರಕರಾಗಿ ಕೆಲಸ ಮಾಡಿದ್ದ ಇವರು ಜನಸಂಘದಲ್ಲಿಯೂ ಇದ್ದರು. ಜನಸಂಘವು ಬಳಿಕ ಬಿಜೆಪಿಯಾಗಿ ಪರಿವರ್ತನೆಯಾಯಿತು.

ಭಾರತದ ಮಹತ್ವದ ಗಾಯಕರಲ್ಲಿ ಒಬ್ಬರಾಗಿರುವ ಡಾ. ಭೂಪೆನ್ ಹಜಾರಿಕಾ ಅವರು ಅಸ್ಸಾಂನವರು. 2004ರ ಲೋಕಸಭಾ ಚುನಾವಣೆಯಲ್ಲಿ ಇವರು ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ಸೋತಿದ್ದರು. ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ಕಾಯ್ದೆಯ ವಿಚಾರದಲ್ಲಿ ಈಶಾನ್ಯ ಭಾರತ ಮತ್ತು ವಿಶೇಷವಾಗಿ ಅಸ್ಸಾಂ, ಬಿಜೆಪಿಯ ವಿರುದ್ಧ ತಿರುಗಿ ಬಿದ್ದ ಸಂದರ್ಭದಲ್ಲಿ ಹಜಾರಿಕಾ ಅವರಿಗೆ ಗೌರವ ಅರ್ಪಿಸಲು ನಿರ್ಧರಿಸಲಾಗಿದೆ.

ಪದ್ಮಭೂಷಣ ಪಡೆದ ಪ್ರಮುಖರು: ರಾಜಕಾರಣಿಗಳಾದ ಜಾರ್ಖಂಡ್ನ ಕರಿಯ ಮುಂಡ, ಬಿಹಾರದ ಹುಕುಂ ದೇವ್ ನಾರಾಯಣ್ ಯಾದವ್, ಮಲಯಾಳ ಚಿತ್ರ ನಟ ಮೋಹನ್ಲಾಲ್, ಇಸ್ರೊದ ನಿವೃತ್ತ ವಿಜ್ಞಾನಿ ನಂಬಿ ನಾರಾಯಣನ್, ನಿವೃತ್ತ ಸಿಎಜಿ ವಿ.ಕೆ.ಶುಂಗ್ಲು

ಪದ್ಮಶ್ರೀ ಪಡೆದ ಪ್ರಮುಖರು: ಹಿಂದಿ ಚಿತ್ರ ನಟ ಮನೋಜ್ ಬಾಜಪೇಯಿ, ಖಾದರ್ ಖಾನ್ (ಮರಣೋತ್ತರ), ಗಾಯಕ ಶಂಕರ್ ಮಹದೇವನ್, ಡ್ರಮ್ಸ್ ವಾದಕ ಆನಂದನ್ ಶಿವಮಣಿ

ನಯ್ಯರ್ಗೆ ಪದ್ಮಭೂಷಣ:ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಕಟಿಸಲಾಗಿದೆ. 2018ರ ಆಗಸ್ಟ್ನಲ್ಲಿ ಅವರು ನಿಧನರಾದರು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಪ್ರಕಾಶನ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ. ನ ನಿರ್ದೇಶಕ ಮಂಡಳಿಯಲ್ಲಿ ಅವರು ಸದಸ್ಯರಾಗಿದ್ದರು.

‘ರತ್ನ’ಗಳ ಬಗ್ಗೆ ಮೋದಿ ಹೇಳಿದ್ದೇನು?

ನಾನಾಜಿ ದೇಶಮುಖ್: ಗ್ರಾಮೀಣ ಅಭಿವೃದ್ಧಿಗೆ ನಾನಾಜಿ ಅವರು ನೀಡಿದ ಕೊಡುಗೆಯು ಗ್ರಾಮಗಳಲ್ಲಿ ಜೀವಿಸುವ ಜನರನ್ನು ಸಶಕ್ತಗೊಳಿಸುವುದಕ್ಕೆ ಹೊಸ ಪಥವನ್ನೇ ತೋರಿಸಿಕೊಟ್ಟಿತು. ವಿನಯ, ಮಮತೆ ಮತ್ತು ತಳಮಟ್ಟದ ಜನರ ಸೇವೆಗೆ ನಾನಾಜಿ ಅವರು ಅನ್ವರ್ಥರೂಪ. ನಿಜವಾದ ಅರ್ಥದಲ್ಲಿ ಅವರು ಭಾರತ ರತ್ನ.

ಭೂಪೆನ್ ಹಜಾರಿಕಾ: ಹಲವು ತಲೆಮಾರುಗಳ ಜನರು ಭೂಪೆನ್ ಹಜಾರಿಕಾ ಅವರ ಹಾಡುಗಳು ಮತ್ತು ಸಂಗೀತದ ಆರಾಧಕರಾಗಿದ್ದಾರೆ. ಅವರ ಸಂಗೀತದಿಂದ ನ್ಯಾಯ, ಸಾಮರಸ್ಯ ಮತ್ತು ಭ್ರಾತೃತ್ವ ಹೊರಹೊಮ್ಮುತ್ತದೆ. ಭಾರತೀಯ ಸಂಗೀತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದಾರೆ. ಭೂಪೆನ್ ಅವರಿಗೆ ಭಾರತ ರತ್ನ ಅರ್ಪಿತವಾಯಿತು ಎಂಬುದೇ ಸಂತಸದ ಸಂಗತಿ.

ಪ್ರಣವ್ ಮುಖರ್ಜಿ: ನಮ್ಮ ಕಾಲದ ಅಸಾಮಾನ್ಯ ಮುತ್ಸದ್ದಿಯಾಗಿರುವ ಇವರು ದಶಕಗಳ ಕಾಲ ಅವಿಶ್ರಾಂತ ಮತ್ತು ನಿಸ್ವಾರ್ಥವಾಗಿ ದೇಶ ಸೇವೆ ಮಾಡಿದ್ದಾರೆ. ದೇಶದ ಪ್ರಗತಿಯ ಪಥದಲ್ಲಿ ಅವರದ್ದು ಅಳಿಸಲಾಗದ ಹೆಜ್ಜೆ ಗುರುತುಗಳು. ಅವರ ವಿವೇಕ ಮತ್ತು ಬುದ್ಧಿಮತ್ತೆಯನ್ನು ಸರಿಗಟ್ಟುವವರು ವಿರಳ. ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿರುವುದು ಸಂಭ್ರಮದ ವಿಚಾರ.

ಭಾರತ ರತ್ನ ಮಾಜಿ ರಾಷ್ಟ್ರಪತಿಗಳು

*ಎಸ್.ರಾಧಾಕೃಷ್ಣನ್ (1954)– ರಾಷ್ಟ್ರಪತಿಯಾಗುವ ಮೊದಲೇ ಭಾರತ ರತ್ನ ನೀಡಲಾಗಿತ್ತು

*ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಗೆ 1962ರಲ್ಲಿ ಗೌರವ

* ಝಾಕಿರ್ ಹುಸೇನ್ ಅವರಿಗೆ 1963ರಲ್ಲಿ ಗೌರವ ಸಮರ್ಪಣೆ, ಬಳಿಕ ಅವರು
ರಾಷ್ಟ್ರಪತಿಯಾದರು

*ವಿ.ವಿ. ಗಿರಿ ಅವರಿಗೆ ರಾಷ್ಟ್ರಪತಿಯಾಗಿ ನಿವೃತ್ತರಾದ ಬಳಿಕ 1975ರಲ್ಲಿ
ಅತ್ಯುನ್ನತ ಗೌರವ

*ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 1997ರಲ್ಲಿ ಭಾರತ ರತ್ನ.ಗೌರವ ಸಮರ್ಪಣೆಯಾದ ಐದು
ವರ್ಷದ ಬಳಿಕ ಅವರುರಾಷ್ಟ್ರಪತಿಯಾದರು

ಅಪ್ಪಟ ಕಾಂಗ್ರೆಸ್ಸಿಗಪ್ರಣವ್ ಮುಖರ್ಜಿ

ಪಶ್ಚಿಮ ಬಂಗಾಳದ ಪ್ರಣವ್ ಮುಖರ್ಜಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪುರಸ್ಕಾರ ಸ್ವೀಕರಿಸುತ್ತಿರುವ ಆರನೇ ಮಾಜಿ ರಾಷ್ಟ್ರಪತಿ.

ಇದಕ್ಕೂ ಮೊದಲು ಮಾಜಿ ರಾಷ್ಟ್ರಪತಿಗಳಾದ ಡಾ.ಬಾಬು ರಾಜೇಂದ್ರ ಪ್ರಸಾದ್, ಝಾಕಿರ್ ಹುಸೇನ್, ಎಸ್. ರಾಧಾಕೃಷ್ಣನ್, ವಿ.ವಿ. ಗಿರಿ ಮತ್ತುಎಪಿಜೆ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ಪ್ರದಾನ ಮಾಡಲಾಗಿದೆ.

ಅಪ್ಪಟ ಕಾಂಗ್ರೆಸ್ ನಾಯಕರಾಗಿರುವ ಪ್ರಣವ್ ಅವರನ್ನು ಎನ್ಡಿಎ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ.

ನಾಗಪುರದ ಆರ್ಎಸ್ಎಸ್ ಪ್ರಧಾನ ಕಚೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರು ತಿಂಗಳ ನಂತರ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 1935ರಲ್ಲಿ ಜನಸಿದ ಪ್ರಣವ್ ಮುಖರ್ಜಿ 1969ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟವರು.

ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಪ್ರಣವ್ ಮುಖರ್ಜಿ ಅವರು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು. ಕಾಂಗ್ರೆಸ್ ವಲಯದಲ್ಲಿ ಅವರನ್ನು ಎಲ್ಲರೂ ‘ಬಂಗಾಳಿ ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಅವರನ್ನು 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು. 2017ರವರೆಗೆ ಅವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಸಂಘದ ಕಟ್ಟಾಳು ನಾನಾಜಿ

ಸಂಘ ಪರಿವಾರ ಮತ್ತು ಆಪ್ತ ವಲಯಗಳಲ್ಲಿ ನಾನಾಜಿ ಎಂದು ಚಿರಪರಿಚಿತರಾಗಿದ್ದ ನಾನಾಜಿ ದೇಶಮುಖ್ಮೂಲ ಹೆಸರು ಚಂಡಿಕಾರಾವ್ ಅಮೃತ್ರಾವ್ ದೇಶಮುಖ್.

ಮಹಾರಾಷ್ಟ್ರದ ಪರ್ಬನಿ ಜಿಲ್ಲೆಯ ಕಡೋಲಿಯಲ್ಲಿ 1916ರಲ್ಲಿ ಜನಿಸಿದ ದೇಶಮುಖ್ ತಮ್ಮ ಜೀವನವನ್ನು ಕಳೆದದ್ದು ಉತ್ತರ ಪ್ರದೇಶದಲ್ಲಿ.

ಲೋಕಮಾನ್ಯ ತಿಲಕ್ ಅವರ ರಾಷ್ಟ್ರವಾದಿ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಡಾ. ಹೆಡ್ಗೆವಾರ್ ಸಂಪರ್ಕದಿಂದ ಆರ್ಎಸ್ಎಸ್ ಸೇರಿದರು. ಅವಿವಾಹಿತರಾಗಿ ಉಳಿದ ಅವರನ್ನು ಸಂಘವು ಉತ್ತರ ಪ್ರದೇಶಕ್ಕೆ ಪ್ರಚಾರಕರಾಗಿ ಕಳಿಸಿತು.

1947ರಲ್ಲಿ ‘ರಾಷ್ಟ್ರಧರ್ಮ’, ‘ಪಾಂಚಜನ್ಯ’ ಮತ್ತು ‘ಸ್ವದೇಶಿ’ ಪತ್ರಿಕೆಗಳನ್ನುಆರ್ಎಸ್ಎಸ್ ಆರಂಭಿಸಿದಾಗ ವಾಜ
ಪೇಯಿ ಸಂಪಾದಕರಾದರು ಮತ್ತು ನಾನಾಜಿ ದೇಶಮುಖ್ ವ್ಯವಸ್ಥಾಪಕ ನಿರ್ದೇಶಕರಾದರು. ಜನಸಂಘದ ಆರಂಭದಿಂದಲೂ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿದ್ದರು.

ಉತ್ತರ ಪ್ರದೇಶದಲ್ಲಿ ಸಂಘದ ಪ್ರಚಾರದಲ್ಲಿ ತೊಡಗಿದ್ದ ಅವರು ಚೌಧರಿ ಚರಣ ಸಿಂಗ್ ಮತ್ತು ಡಾ. ರಾಮಮನೋಹರ ಲೋಹಿಯಾ ಜತೆ ನಿಕಟ ಸಂಬಂಧ ಹೊಂದಿದ್ದರು. ವಿನೋಬಾ ಭಾವೆ ಅವರ ಭೂದಾನ ಚಳವಳಿ ಮತ್ತು ಜಯಪ್ರಕಾಶ್ ನಾರಾಯಣ್ ಕರೆಕೊಟ್ಟ ಸಂಪೂರ್ಣ ಕ್ರಾಂತಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ಉತ್ತರಪ್ರದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣರಾದರು. 1977ರ ಲೋಕಸಭಾ ಚುನಾವಣೆ
ಯಲ್ಲಿ ಉತ್ತರಪ್ರದೇಶದ ಬಲರಾಂಪುರಂದಿಂದ ಆಯ್ಕೆಯಾದ ಅವರು ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟ ಸೇರಲು ನಿರಾಕರಿಸಿದ್ದರು.1969ರಲ್ಲಿ ದೆಹಲಿಯಲ್ಲಿ ದೀನದಯಾಳ್ ಸಂಶೋಧನಾ ಸಂಸ್ಥೆ ಕಟ್ಟಿ ಬೆಳೆಸಿದ ದೇಶಮುಖ್ ಅವರು ಉತ್ತರಪ್ರದೇಶದ ಚಿತ್ರಕೂಟದಲ್ಲಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಸ್ಥಾಪಿಸಿ, ಮೊದಲ ಕುಲಪತಿಯಾದರು.

ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸಬಲೀಕರಣದ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗೆ ಭಾರತ ಸರ್ಕಾರ ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ 1999ರಲ್ಲಿ ದೇಶಮುಖ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿತ್ತು.

ಬ್ರಹ್ಮಪುತ್ರನ ರಾಗಸುತನಿಗೆ ಭಾರತ ರತ್ನ

ಕಂಚಿನ ಕಂಠ, ನಭ ಸ್ಪರ್ಶಿಸುವಷ್ಟು ಜೋರು, ಆತ್ಮ ಸೀಳುವಷ್ಟು ತೀಕ್ಷ್ಣ, ಮನಮುಟ್ಟುವ ಮಾಧುರ್ಯ. ಈಗಲೂ ಈ ಧ್ವನಿ ಕಿವಿಯಲ್ಲಿ ಅನುರಣಿಸುತ್ತದೆ. ‘ದಿಲ್ ಘೂಂ ಘೂಂ’ ಕರೆ ಹಾಡು ನೆನಪಿಸಿಕೊಳ್ಳಿ. 2012ರಲ್ಲಿ ತಮ್ಮ ಗಾನಯಾನ ಮುಗಿಸಿ, ಅನಂತದಲ್ಲಿ ಧ್ವನಿ ಬಿಟ್ಟು, ಚಿರನಿದ್ರೆಗೆ ಹೋದರು. ಭುಪೆನ್ ದಾ ಎಂದೇ ಹೆಸರಾಗಿರುವ ಭೂಪೆನ್ ಹಜಾರಿಕಾ ಈಗ ಭಾರತ ರತ್ನ.

2012ರಲ್ಲಿ ಕೊನೆಯುಸಿರೆಳೆದಾಗ 10 ಲಕ್ಷ ಜನ ಅಂತಿಮ ದರ್ಶನ ಪಡೆದದ್ದು ದಾಖಲೆಯಾಗಿತ್ತು. ಹಜಾರಿಕಾ ಅವರ ಪಾದದ ಪ್ರತಿಕೃತಿಯನ್ನು ಮಾಡಿಕೊಂಡಿದ್ದರು. ಇಷ್ಟೆಲ್ಲ ಅಪಾರ ಪ್ರೀತಿ ಗಳಿಸಿದ್ದ ಭೂಪೆನ್ ಹಜಾರಿಕಾ ಹುಟ್ಟಿದ್ದು 1926ರಲ್ಲಿ ಅಸ್ಸಾಮಿನ ತಿನ್ಸುಖಿಯಾ ಜಿಲ್ಲೆಯ ಶೊಡಿಯಾ ಗ್ರಾಮದಲ್ಲಿ. ಓದು, ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಇವರು ಸಮೂಹ ಮಾಧ್ಯಮದ ವಿಷಯದಲ್ಲಿ ಪಿಎಚ್ಡಿ ಪಡೆದದ್ದು ವಿಶೇಷ. 1939ರಲ್ಲಿ ಬಾಲನಟನಾಗಿ ಸಿನಿಮಾ ನಂಟು ಆರಂಭವಾಯಿತು. ಕಲ್ಪನಾ ಲಾಜ್ಮಿ ಅವರ ‘ರುಡಾಲಿ’ ಚಿತ್ರದ ಮೂಲಕ ಇಡೀ ದೇಶಕ್ಕೇ ಅವರ ಹೆಸರು ಪರಿಚಿತವಾಯಿತು.

ಅಸ್ಸಾಮಿ ಜನಪದ ಲೋಕದಲ್ಲಿ, ಸುಗಮ ಸಂಗೀತ ಲೋಕದಲ್ಲಾಗಲೇ ಭೂಪೆನ್ ಹಜಾರಿಕಾ ಭುಪೆನ್ ದಾ ಆಗಿ ಹೋಗಿದ್ದರು. ಜನಪ್ರಿಯ ಗಾಯಕ, ಸಂಗೀತ ಸಂಯೋಜಕ, ನಿರ್ದೇಶಕ, ನಟ, ಲೇಖಕ ಹೀಗೆ ಹಲವಾರು ಆಯಾಮಗಳಲ್ಲಿ ತಮ್ಮ ಸೂಕ್ಷ್ಮಗ್ರಾಹಿ ಮನಸಿನ ವಿವಿಧ ಆಯಾಮಗಳನ್ನು ಪರಿಚಯಿಸುತ್ತಲೇ ಬಂದರು.

ಹಣ ಪಡೆದು ಶವದ ಮುಂದೆ ಚರಮಗೀತೆ ಹಾಡುವ, ಎದೆಹೊಡೆದುಕೊಂಡು ಅಳುವವರಿಗೆ ರುಡಾಲಿ ಎಂದು ಕರೆಯಲಾಗುತ್ತದೆ. ಅಂಥವರ ಜೀವನಾಧರಿತ ಚಿತ್ರವನ್ನು ಕಲ್ಪನಾ ಲಾಜ್ಮಿ ನಿರ್ದೇಶಿಸುವಾಗ ಭುಪೆನ್ ದಾ ಅವರನ್ನು ಬಾಲಿವುಡ್ ಓಣಿಗೆ ಕರೆತಂದರು. ಮಹಾಶ್ವೇತಾದೇವಿ ಅವರ ಕಾದಂಬರಿ ಆಧರಿಸಿ ‘ರುಡಾಲಿ’ ಸಿನಿಮಾ ನಿರ್ಮಿಸಲಾಗಿದೆ. ನೀರವ ರಾತ್ರಿಯಲ್ಲಿ ನಭಸೀಳುತ್ತಲೇ ಆತ್ಮವನ್ನು ಸ್ಪರ್ಶಿಸುವ ಧ್ವನಿಯೊಂದು ಆ ಕಾಲದ ಸಿನಿರಂಗವನ್ನೇ ಹಿಡಿದಿಟ್ಟಿತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ನಂತರ ಭುಪೆನ್ ಹಿಂದಿ ಚಿತ್ರಗಳ ಮೂಲಕವೇ ಲಕ್ಷಾಂತರ ಜನ ಅಭಿಮಾನಿಗಳನ್ನು ಗಳಿಸಿಕೊಂಡರು. ಇದಾದ ನಂತರ ಸಾಜ್, ದರ್ಮಿಯಾ, ದಾಮನ್, ಗಜಗಾಮಿನಿ ಮುಂತಾದ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಪೂರ್ವ ರಾಜ್ಯದ ಛಾಪನ್ನೊತ್ತಿದ್ದು ಅವರ ಸಂಗೀತದ ಹೆಗ್ಗಳಿಕೆ.

ಭುಪೆನ್ ದಾ ಅಮರ್ ರಹೆ, ಭುಪೆನ್ ದಾ ನ ಜಾಯೆ (ಭುಪೆನ್ ದಾ ಅಮರರಾಗಲಿ, ಹೋಗದಿರಿ) ಎಂಬ ಜಯಘೋಷಗಳ ನಡುವೆ ವಿದಾಯ ಹೇಳಿದ್ದವರು, ಇದೀಗ ಭಾರತರತ್ನವಾಗಿ ಅಮರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.