ತಾನು ಚಿಂದಿ ಆಯುವವಳಾಗಿರಬಹುದು. ಆದರೆ, ಮಕ್ಕಳನ್ನು ತನ್ನಂತಾಗಲು ಬಿಡುವುದಿಲ್ಲ ಎಂಬ ಛಲಗಾತಿ ಲಕ್ಷ್ಮಿ. ಸದ್ಯ ಬೆಂಗಳೂರಿನ ಭುವನೇಶ್ವರಿ ನಗರದ ರಾಜಕಾಲುವೆ ಪಕ್ಕದಲ್ಲಿ ಅವರ ಕುಟುಂಬದ ವಾಸ. ಅವರಿಗೆ ಒಟ್ಟು ಐದು ಮಂದಿ ಹೆಣ್ಣುಮಕ್ಕಳು. ಪತಿ ಟೈಲ್ಸ್ ಕೆಲಸ ಮಾಡುತ್ತಾರೆ.

ತಗಡಿನ ಶೀಟುಗಳಿಂದ ನಿರ್ಮಿಸಿರುವ ಪುಟ್ಟ ಕೋಣೆಯೊಂದರಲ್ಲಿಯೇ ಊಟ-ನಿದ್ದೆ ಎಲ್ಲ. ಶೌಚಾಲಯ, ಸ್ನಾನದ ಕೊಠಡಿಯ ಮಾತು ದೂರ. ನೆರೆ ಮನೆಯವರಿಗೆ ಹಣ ಕೊಟ್ಟು ವಿದ್ಯುತ್ ಲೈನ್ ಪಡೆದುಕೊಂಡಿದ್ದಾರೆ. ಸಮೀಪದ ಬೋರ್‌ವೆಲ್‌ನಿಂದ ನೀರು ತಂದುಕೊಳ್ಳುತ್ತಾರೆ. ಇದರ ನಡುವೆ ಮತ್ತೆ ಯಾವಾಗ ಇಲ್ಲಿಂದ ಒಕ್ಕಲೇಳ ಬೇಕಾಗುತ್ತದೋ ಎಂಬ ಭೀತಿಯ ನಡುವೆಯೇ ದಿನ ದೂಡುವ ಸ್ಥಿತಿ.

ಹಲವು ಅಡ್ಡಿ–ಆತಂಕಗಳ ನಡುವೆಯೂ ಅವರ ಹಿರಿಯ ಮಗಳು ಭವಾನಿ ಡಿಪ್ಲೊಮಾ ಓದುತ್ತಿದ್ದಾರೆ. ಸತ್ಯ ಮತ್ತು ಪವಿತ್ರಾ 8ನೇ ತರಗತಿಯಲ್ಲಿ, ಆರ್ಯಮಾಲಾ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊನೆಯ ಮಗಳು ಆದಿಕಾ 1ನೇ ತರಗತಿ ವಿದ್ಯಾರ್ಥಿನಿ. ಭವಾನಿ ಮತ್ತು ಆದಿಕಾ ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ‘ಹಸಿರುದಳ’ ಸಂಸ್ಥೆ ಹೊತ್ತುಕೊಂಡಿದೆ.

‘ಅಪ್ಪ ತೀರಿಕೊಂಡ ನಂತರ ಅಮ್ಮ ಚಿಂದಿ ಆಯುತ್ತಾ ಮಕ್ಕಳನ್ನು ಬೆಳೆಸಿದಳು. ಮದುವೆಯ ನಂತರ ನಾನೂ ಅಮ್ಮನ ದಾರಿಯಲ್ಲೇ ಸಾಗಿದೆ. ಆಗ ಜನ ನಮ್ಮನ್ನು ಕಳ್ಳರಂತೆ ಕಾಣುತ್ತಿದ್ದರು. ಪೊಲೀಸರೂ ಬೆದರಿಸುತ್ತಿದ್ದರು. ತಪ್ಪು ಮಾಡದಿದ್ದರೂ ಸುಳ್ಳು ಕೇಸುಗಳನ್ನು ಎದುರಿಸಬೇಕಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಸಂಘಟನೆ ನೆರವಿನಿಂದ ಬಿಬಿಎಂಪಿ ಗುರುತಿನ ಚೀಟಿ ಸಿಕ್ಕಿದೆ. ಇದೀಗ ಧೈರ್ಯದಿಂದ ಕೆಲಸ ನಿರ್ವಹಿಸುತ್ತಿದ್ದೇವೆ’ ಎನ್ನುತ್ತಾರೆ ಲಕ್ಷ್ಮಿ.

‘ಮೊದಲು ಚಿಂದಿ ಆಯ್ದರಷ್ಟೇ ಹೊಟ್ಟೆಗೆ ಅನ್ನ ಎನ್ನುವಂತಿತ್ತು. ಈಗ ಹಾಗಿಲ್ಲ. ತೋಟಗಾರಿಕೆ, ಗೊಬ್ಬರ ತಯಾರಿಸುವಿಕೆ, ಅಣಬೆ ಬೆಳೆಯುವುದರ ಬಗ್ಗೆ ತರಬೇತಿ ಪಡೆದುಕೊಂಡಿ ದ್ದೇವೆ. ಒಣಕಸ ಸಂಗ್ರಹ ಕೇಂದ್ರಗಳನ್ನು ಹಲವರು ನಿರ್ವಹಿಸುತ್ತಿದ್ದಾರೆ. ನಾನು ಅಪಾರ್ಟ್‌ಮೆಂಟ್ ಮತ್ತು ಸ್ಕೂಲ್ ಮಿಲ್‌ನಲ್ಲಿ ಅಡುಗೆ ತ್ಯಾಜ್ಯ ಸಂಗ್ರಹಿಸಿ ಗೊಬ್ಬರ ತಯಾರಿಸುತ್ತೇನೆ. ಸಂಬಂಧಪಟ್ಟವರು ಖರೀದಿಸುತ್ತಾರೆ. ₹399 ದಿನಗೂಲಿ ಪಡೆಯುತ್ತೇನೆ. ಇದರಿಂದ ತುತ್ತು ಅನ್ನ ಕಾಣಲು, ಮಕ್ಕಳನ್ನು ಓದಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

‘ಭವಾನಿಗೆ ಚೆನ್ನಾಗಿ ಓದುವ ಆಸೆ. ಹತ್ತನೇ ತರಗತಿ ಮುಗಿಸುತ್ತಲೇ ಸಂಬಂಧಿಕರ ಹುಡುಗನೊಂದಿಗೆ ಮದುವೆ ಮಾಡಲು ತೀರ್ಮಾನಿಸಿದ್ದೆವು. ಇದು ಸಂಸ್ಥೆಯವರಿಗೆ ತಿಳಿದು ಬಂದು ಬುದ್ಧಿ ಹೇಳಿದರು. ಹುಡುಗ ಕುಡುಕ ಎಂಬ ವಿಷಯ ಮತ್ತೆ ತಿಳಿಯಿತು. ಕುಡುಕ ಗಂಡನಿಂದ ನಾನು ಅನುಭವಿಸುತ್ತಿರುವುದೇ ಸಾಕು. ಆ ಕಷ್ಟ ಮಗಳಿಗೆ ಬೇಡವೆಂದು ನಿರ್ಧರಿಸಿದೆ. ಮಗಳನ್ನು ಕಾಲೇಜಿಗೆ ದಾಖಲಿಸಲು ಸಮಯ ಮೀರಿದ್ದರಿಂದ ಆ ವರ್ಷ ವ್ಯರ್ಥವಾಗಬಾರದು ಎಂದು ಅಂಗನವಾಡಿ ಟೀಚರ್ ತರಬೇತಿ ಕೊಡಿಸಿದೆ. ನಂತರ ಸಂಸ್ಥೆಯವರೇ ಕಾಲೇಜಿಗೆ ಮಗಳನ್ನು ಸೇರಿಸಿದರು. ಸಣ್ಣ ಮಗಳು ಆದಿಕಾ ಹಾಸ್ಟೆಲ್‌ನಲ್ಲಿ ಇದ್ದಾಳೆ. ಮಧ್ಯದ ಮೂವರು ನನ್ನ ಜತೆಗಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲಕ್ಷ್ಮಿ.

‘ಮಕ್ಕಳ ಶಿಕ್ಷಣದ ಗುರಿ ತಲುಪಲು ನಮಗೆ ಸೂರಿನ ಅವಶ್ಯವಿದೆ. ಈ ಹಿಂದೆ ಖಾಲಿ ನಿವೇಶನ ವೊಂದರಲ್ಲಿ ತಿಂಗಳಿಗೆ ₹400 ಬಾಡಿಗೆ ಕೊಟ್ಟು 30ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದೆವು. ಅದೇ ವೇಳೆಯಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಿದ್ದೆವು. ಪರಿಶೀಲನೆಗೆಂದು ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ತಮ್ಮ ಜಾಗಕ್ಕೆ ತೊಂದರೆಯಾದೀತು ಎಂದು ಭಾವಿಸಿದ ನಿವೇಶನದ ಮಾಲೀಕ ನಮ್ಮನ್ನು ಅಲ್ಲಿಂದ ಖಾಲಿ ಮಾಡಿಸಿದರು. ನಂತರ ಹದಿಮೂರು ಕುಟುಂಬಗಳು ಇಲ್ಲಿ ಬಂದು ನೆಲೆಸಿದ್ದೇವೆ. ಜನರ ಸಹಕಾರದ ಜತೆಗೆ ಕಿರುಕುಳಗಳೂ ಇವೆ. ನಮ್ಮದೊಂದು ಸ್ವಂತ ಗೂಡಿದ್ದರೆ ನಾವೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಲಕ್ಷ್ಮಿ.

ಅಮ್ಮ ಚಿಂದಿ ಆಯುತ್ತಿದ್ದರು, ನಾನೂ ಅದನ್ನೇ ಮಾಡಿದೆ. ಆದರೆ ನನ್ನ ಮಕ್ಕಳಿಗೆ ಆ ಕಷ್ಟ ಬೇಡ. ಚೆನ್ನಾಗಿ ಓದಿಸಿ ಒಳ್ಳೆ ಉದ್ಯೋಗ ಪಡೆಯುವಂತೆ ಮಾಡುತ್ತೇನೆ
–ಲಕ್ಷ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.