ಗೋ ಡಿಜಿಟಲ್! ಹಾಗೆಂದು ಬಲು ಸುಲಭವಾಗಿ ಹೇಳಿಬಿಡುತ್ತೇವೆ. ಜಗತ್ತಿನ ಸಮಸ್ತ ಸಮಸ್ಯೆಗಳಿಗೂ ಡಿಜಿಟಲೀಕರಣವೇ ಏಕೈಕ ಪರಿಹಾರ ಎಂಬರ್ಥದಲ್ಲಿ ಮಾತಾಡುತ್ತೇವೆ. ಕಚೇರಿ ಕೆಲಸಗಳಿಂದ ತೊಡಗಿ ಹಣಕಾಸು ವ್ಯವಹಾರದವರೆಗೆ ದಿನದ ಪ್ರತಿಯೊಂದು ಕೆಲಸವೂ ಆನ್‍ಲೈನ್ ಆಗಿಬಿಟ್ಟಿದೆ. ದಿನಸಿಯಿಂದ ತೊಡಗಿ ಔಷಧಿಯವರೆಗೆ, ಬ್ಯಾಗಿನಿಂದ ತೊಡಗಿ ಪುಸ್ತಕಗಳವರೆಗೆ ಎಲ್ಲವೂ ಆ್ಯಪ್‍ಗಳೆಂಬ ಉಗ್ರಾಣಗಳಲ್ಲಿ ಭದ್ರವಾಗಿವೆ. ಎಲ್ಲಾ ಸರಿ, ನಮ್ಮ ಬದುಕು ಭದ್ರವಾಗಿದೆಯೇ?

ಆನ್‍ಲೈನ್ ವ್ಯವಹಾರಗಳಿಂದ ಮನುಷ್ಯನ ಬದುಕು ಸರಳವಾಯಿತೆಂದೂ ಸಾಮಾಜಿಕ ಮಾಧ್ಯಮಗಳಿಂದ ಪ್ರಜಾಪ್ರಭುತ್ವಕ್ಕೊಂದು ಪರ್ಯಾಯ ಸೃಷ್ಟಿಯಾಯಿತೆಂದೂ ಹೆಮ್ಮೆಪಟ್ಟವರು ಬಹಳ. ಆದರೆ ಈ ಹೆಮ್ಮೆ ಹೆಚ್ಚುಕಾಲ ಉಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ‘ಬದುಕು ಭದ್ರವಾಗಿದೆಯೇ’ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡವರು ನಿರಾತಂಕವಾಗಿ ಉಳಿಯವುದು ಕಷ್ಟ.

ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಿರುವ ವರ್ಚುವಲ್ ಜಗತ್ತಿನಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎಂಬಿತ್ಯಾದಿ ಪದಗಳಿಗೆ ವಾಸ್ತವವಾಗಿ ತಮ್ಮದೇ ಅಸ್ತಿತ್ವ ಇದೆಯೇ ಎಂದು ಯೋಚಿಸುವ ಕಾಲ ಬಂದಿದೆ. ರಾಜಕೀಯ ಪರಿಭಾಷೆಯಲ್ಲಿ ನಾವು ಸ್ವತಂತ್ರರೂ ಹೌದು, ಪ್ರಜಾಪ್ರಭುತ್ವದ ಫಲಾನುಭವಿಗಳೂ ಹೌದು. ಆದರೆ, ನಿಜಕ್ಕೂ ವಸ್ತುಸ್ಥಿತಿ ಹಾಗಿದೆಯೇ ಎಂದು ಕೇಳಿದರೆ ಈ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಗಳೆಲ್ಲ ನಮ್ಮ ದೇಶದೊಳಗೆಯೇ ಇವೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಹೌದು, ವಾಸ್ತವ ಬೇರೆಯೇ ಇದೆ. ನಮ್ಮ ಒಬ್ಬೊಬ್ಬರ ಸ್ವಾತಂತ್ರ್ಯವೂ ಅಮೆರಿಕಾದಲ್ಲಿಯೋ ಚೀನಾದಲ್ಲಿಯೋ ಮೋಡಗಳ ನಡುವೆ ಓಡಾಡುತ್ತಿದೆ. ನಾವೆಲ್ಲ ದೇಶದೇಶಗಳ ನಡುವಿನ ಗೋಡೆಗಳನ್ನೆಲ್ಲ ನೆಲಸಮ ಮಾಡಿ ಪ್ರಪಂಚವನ್ನು ಅಂಗೈಯಗಲಕ್ಕೆ ಇಳಿಸಿರುವ ಸೈಬರ್ ಸ್ಪೇಸ್‍ನ ಅಡಿಯಾಳುಗಳಾಗಿ ದಶಕಗಳೇ ಕಳೆದುಹೋಗಿವೆ. ಹಾಗೆಂದು ಅರ್ಥವಾಗಿರುವುದು ಕೊಂಚ ತಡವಾಗಿದೆ ಅಷ್ಟೆ.

ಇಂಟರ್ನೆಟ್‍ನ ಬಳಕೆ ಹೆಚ್ಚಾದಂತೆ ವಾಸ್ತವವಾಗಿ ನಮ್ಮ ಸ್ವಾತಂತ್ರ್ಯದ ಪ್ರಮಾಣ ಇಳಿಕೆಯಾಗುತ್ತಾ ಹೋಗಿದೆ. ದಿನವಿಡೀ ವಾಟ್ಸ್ ಆ್ಯಪ್, ಫೇಸ್‍ಬುಕ್ ಬಳಸುತ್ತೇವೆ. ಸಾಧ್ಯವಾದಷ್ಟೂ ನಮ್ಮ ಪ್ರೊಫೈಲ್ ಅಪ್‌ಡೇಟ್ ಆಗಿರಬೇಕೆಂದು ಬಯಸುತ್ತೇವೆ. ದಿನಕ್ಕೆ ಐದು ಬಾರಿ ಸ್ಟೇಟಸ್ ಸರಿಪಡಿಸಿಕೊಳ್ಳುತ್ತೇವೆ. ಮನೆಯಲ್ಲೇ ಇರುವ ಹೆಂಡತಿಗೆ, ಕಣ್ಣೆದುರೇ ಇರುವ ಮಕ್ಕಳಿಗೆ ಫೇಸ್‌ಬುಕ್‌ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತೇವೆ.

ಎದ್ದದ್ದು, ಬಿದ್ದದ್ದು, ನಡೆದದ್ದು, ನಿದ್ದೆ ಮಾಡಿದ್ದು, ತಿಂದದ್ದು, ಕುಡಿದದ್ದು, ಪ್ರವಾಸ ಹೋಗಿದ್ದು, ಪಾರ್ಕಿನಲ್ಲಿ ಕೂತದ್ದು, ಶಾಪಿಂಗ್ ಮಾಡಿದ್ದು, ಕಾಯಿಲೆ ಬಿದ್ದದ್ದು, ಹಬ್ಬ ಆಚರಿಸಿದ್ದು... ಒಂದೊಂದು ಸುದ್ದಿಯನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರೆಗೆ ನಮಗೆ ಸಮಾಧಾನವೇ ಇಲ್ಲ. ಎಳ್ಳಷ್ಟು ಮಾಹಿತಿ ಬೇಕಾದರೂ ಗೂಗಲ್‍ನ ಮೊರೆ ಹೋಗುತ್ತೇವೆ. ಹೊಸದೊಂದು ಆ್ಯಪ್ ಬಂದಾಗ ಲಾಟರಿ ಹೊಡೆಸಿಕೊಂಡವರಂತೆ ಹಿಗ್ಗುತ್ತೇವೆ. ಅದು ಕೇಳಿದ ಮಾಹಿತಿಯನ್ನೆಲ್ಲ ಹಿಂದೆಮುಂದೆ ನೋಡದೆ ತುಂಬುತ್ತಾ ಹೋಗುತ್ತೇವೆ. ಹಿಂದಿನ ಜನ್ಮದಲ್ಲಿ ಹೇಗಿದ್ದೆವು ಎಂದು ತಿಳಿಯುವ ಕುತೂಹಲಿಗಳಾಗುತ್ತೇವೆ. ನಮ್ಮ ವೃದ್ಧಾಪ್ಯ ಹೇಗಿರುತ್ತದೆ ಎಂದು ಈಗಲೇ ತಿಳಿದುಕೊಳ್ಳಲು ಹಾತೊರೆಯುತ್ತೇವೆ. ಇಷ್ಟಾಗುವ ಹೊತ್ತಿಗೆ ನಮ್ಮ ಅಷ್ಟೂ ಜಾತಕವನ್ನು ಇಡಿಯಿಡಿಯಾಗಿ ಅಮೆರಿಕಕ್ಕೋ ಜಪಾನಿಗೋ ಚೀನಾಕ್ಕೋ ಬೇಷರತ್ತಾಗಿ ಒಪ್ಪಿಸಿದ್ದೇವೆ ಎಂಬುದನ್ನು ಮರೆತು ಬಿಡುತ್ತೇವೆ.

ಮೈಕ್ರೋಸಾಫ್ಟ್, ಗೂಗಲ್, ಐಬಿಎಂ, ಫೇಸ್‍ಬುಕ್, ಟ್ವಿಟರ್, ಸ್ನಾಪ್‍ಚಾಟ್, ಅಲಿಬಾಬಾ ಮುಂತಾದ ಆನ್‍ಲೈನ್ ದಿಗ್ಗಜಗಳು ದಿನ, ಗಂಟೆ, ನಿಮಿಷ, ಕ್ಷಣಗಳ ಲೆಕ್ಕದಲ್ಲಿ ನಮ್ಮ ವೈಯುಕ್ತಿಕ ಮಾಹಿತಿಗಳನ್ನು ಕಲೆಹಾಕುತ್ತಿವೆ. ನಾವು ಬಳಕೆ ಮಾಡುವ ಒಂದೊಂದು ಆ್ಯಪ್ ಸಹ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಮಾಹಿತಿಯನ್ನು ಸಂಗ್ರಹಿಸುತ್ತಾ ಇರುತ್ತದೆ. ನಾವು ಏನನ್ನು ತಿನ್ನುತ್ತೇವೆ, ಏನನ್ನು ಕುಡಿಯುತ್ತೇವೆ, ಏನನ್ನು ಓದುತ್ತೇವೆ, ಏನನ್ನು ಮಾಡುತ್ತೇವೆ, ಏನನ್ನು ಕೊಳ್ಳುತ್ತೇವೆ- ಒಟ್ಟಿನಲ್ಲಿ ನಮ್ಮ ಇಷ್ಟಾನಿಷ್ಟಗಳೇನು, ವರ್ತನೆಗಳೇನು ಎಂಬುದನ್ನು ನಮ್ಮ ಮನೆಮಂದಿಗಿಂತಲೂ ಚೆನ್ನಾಗಿ ಗಮನಿಸುವವರು ಈ ಸೈಬರ್‌ಸ್ಪೇಸೆಂಬ ಮಾಯಾಲೋಕದಲ್ಲಿ ಕುಳಿತಿರುವ ಇಂಟರ್ನೆಟ್ಟಿನ ಇಂದ್ರಜಾಲಿಗರು. ಅಮೆಜಾನ್, ಗೂಗಲ್, ಉಬರ್, ಆ್ಯಪಲ್‍ನಂತಹ ಇ-ಕಾಮರ್ಸ್ ದೈತ್ಯರು ವ್ಯವಹಾರ ನಡೆಸುತ್ತಿರುವುದೇ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂಬ ಮ್ಯಾಜಿಕ್‍ನ ಆಧಾರದಲ್ಲಿ.

ರಾಜಕೀಯ ವಸಾಹತುಶಾಹಿಯ ಕಾಲ ತೀರಾ ಹಳೆಯದಾಯಿತು; ನಾವೀಗ ಡೇಟಾ ಕಾಲೊನಿಗಳೆಂಬ ನವ್ಯೋತ್ತರ ವಸಾಹತುಶಾಹಿಯ ಕಾಲದಲ್ಲಿ ಬಂದು ನಿಂತಿದ್ದೇವೆ. ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟಿಷರು- ಹೀಗೆ ಒಬ್ಬೊಬ್ಬರಾಗಿ ಭಾರತಕ್ಕೆ ಬಂದದ್ದು ಆರಂಭದಲ್ಲಿ ವ್ಯಾಪಾರಕ್ಕಾಗಿಯೇ. ನಿಧಾನವಾಗಿ ಅಧಿಕಾರ ಚಲಾಯಿಸಲು ಆರಂಭಿಸಿ ಆಮೇಲೆ ನಮ್ಮನ್ನೇ ಆಳಿದರು. ಈ ಸೈಬರ್ ಯುಗದ ಚಕ್ರವರ್ತಿಗಳು ದೇಶದಿಂದ ದೇಶಕ್ಕೆ ದಂಡಯಾತ್ರೆ ನಡೆಸುತ್ತಿರುವುದು ವ್ಯಾಪಾರದ ಸೋಗಿನಲ್ಲಿಯೇ. ಅದಕ್ಕಾಗಿಯೇ ಈ ಡೇಟಾ ವ್ಯಾಪಾರ ಮುಂದೆ ಯಾವ ಹಂತಕ್ಕೆ ಹೋಗಿ ನಿಂತೀತು ಎಂಬ ಊಹೆ ಆತಂಕಕ್ಕೆ ಕಾರಣವಾಗುವುದು. ನಾವು ನಮ್ಮ ಭೌತಿಕ ಅಸ್ಮಿತೆ, ನಮ್ಮ ರಾಜ್ಯ-ದೇಶಗಳ ಗಡಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆಯೇ ಹೊರತು ನಮ್ಮ ಪ್ರತಿಕ್ಷಣದ ಅಸ್ಮಿತೆ, ಮಾಹಿತಿ, ಖಾಸಗಿತನಗಳೆಲ್ಲ ಏನಾಗುತ್ತಿವೆ ಎಂದು ಯೋಚಿಸಿಯೇ ಇಲ್ಲ.

‘ಕಳೆದ ಶತಮಾನದಲ್ಲಿ ತೈಲ ಏನಾಗಿತ್ತೋ, ಈ ಶತಮಾನದಲ್ಲಿ ಅದು ದತ್ತಾಂಶ (ಡೇಟಾ) ಆಗಿದೆ- ಅಂದರೆ ಅಭಿವೃದ್ಧಿ ಮತ್ತು ಬದಲಾವಣೆಯ ಚಾಲಕಶಕ್ತಿ. ದತ್ತಾಂಶದ ಪ್ರವಹಿಸುವಿಕೆಯ ಹೊಸ ಮೂಲಸೌಕರ್ಯ, ಹೊಸ ವ್ಯವಹಾರ, ಹೊಸ ಏಕಸ್ವಾಮ್ಯತೆ, ಹೊಸ ರಾಜಕೀಯ ಮತ್ತು- ಅತ್ಯಂತ ಪ್ರಮುಖವಾಗಿ- ಹೊಸ ಅರ್ಥಶಾಸ್ತ್ರವನ್ನು ಸೃಷ್ಟಿಸಿದೆ’ ಹೀಗೆಂದು ಕಳೆದ ವರ್ಷ ಲಂಡನ್‍ನ ‘ದಿ ಎಕನಾಮಿಸ್ಟ್’ ಪತ್ರಿಕೆ ಬರೆದಾಗ ಭಾರತದಂತಹ ದೇಶಗಳು ಮೊದಲ ಬಾರಿಗೆ ಸಣ್ಣಗೆ ಬೆಚ್ಚಿ ಎದ್ದು ಕುಳಿತವು.

ಆಧಾರ್ ಯೋಜನೆಯ ಹಿಂದಿದ್ದ ನಂದನ್ ನೀಲೇಕಣಿಯವರೇ ವಿಸ್ತಾರಗೊಳ್ಳುತ್ತಿರುವ ಡೇಟಾ ಕಾಲೊನಿಗಳ ಬಗ್ಗೆ ಮಾತಾಡಿದವರಲ್ಲಿ ಮೊದಲಿಗರು. ನಾವು ವಿದೇಶಗಳಿಂದ ಕಪ್ಪುಹಣ ವಾಪಸ್ ತರಬೇಕಿರುವುದೇನೋ ಒಳ್ಳೆಯದೇ, ಆದರೆ ಅದಕ್ಕಿಂತಲೂ ಮೊದಲು ವಾಪಸ್ ತರಬೇಕಿರುವುದು ವಿದೇಶೀ ವಸಾಹತುಗಳಲ್ಲಿ ಸಂಗ್ರಹವಾಗಿರುವ ನಮ್ಮ ದತ್ತಾಂಶಗಳೆಂದು ಎಚ್ಚರಿಸಿದ್ದು ಅವರೇ. ಆಮೇಲೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕೂಡ ಈ ಬಗ್ಗೆ ಮಾತಾಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ‘ದತ್ತಾಂಶವೀಗ ಹೊಸ ತೈಲ. ಅದು ಭಾರತದ ಹೊಸ ಸಂಪತ್ತು. ಭಾರತದ ದತ್ತಾಂಶವು ಭಾರತೀಯರಿಂದಲೇ ನಿಯಂತ್ರಿಸಲ್ಪಡಬೇಕೇ ಹೊರತು ವಿದೇಶೀ ಕಾರ್ಪೋರೇಟ್ ಸಂಸ್ಥೆಗಳಿಂದಲ್ಲ. ಪ್ರಧಾನಿಯವರೇ ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಳ್ಳದೇ ಉಳಿಗಾಲವಿಲ್ಲ’ ಎಂದು ಅವರು ಈ ವರ್ಷದ ಆರಂಭದಲ್ಲಿ ನಡೆದ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಎಚ್ಚರಿಸಿದ್ದು ನಮ್ಮ ನೀತಿ ನಿರೂಪಕರಲ್ಲೂ ಹೊಸ ಸಂಚಲನೆ ಮೂಡಿಸಿತು.

‘ದತ್ತಾಂಶ ಸ್ವಾತಂತ್ರ್ಯವು 1947ರ ಸ್ವಾತಂತ್ರ್ಯದಷ್ಟೇ ಅತ್ಯಮೂಲ್ಯವಾದ್ದು. ಗಾಂಧೀಜಿಯವರು ರಾಜಕೀಯ ವಸಾಹತೀಕರಣದ ವಿರುದ್ಧದ ಚಳುವಳಿಯನ್ನು ರೂಪಿಸಿದರು.ನಾವಿಂದು ದತ್ತಾಂಶ ವಸಾಹತೀಕರಣದ ವಿರುದ್ಧ ಹೊಸದೊಂದು ಚಳುವಳಿಯನ್ನು ಹೂಡಬೇಕಾಗಿದೆ’ ಎಂಬ ಅವರ ಕರೆಗಂಟೆ ಅತ್ಯಂತ ಗಂಭೀರವಾದದ್ದು ಎಂಬುದನ್ನು ತಡವಾಗಿಯಾದರೂ ಒಪ್ಪಿಕೊಳ್ಳಲೇಬೇಕಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‍ಎಸ್‍ಎ) ತನ್ನ ದೇಶದ ಹಾಗೂ ಉಳಿದ ದೇಶಗಳ ಪ್ರಜೆಗಳ ಚಲನವಲನದ ಮೇಲೆ ಕಣ್ಗಾವಲು ಇಟ್ಟಿತ್ತೆಂಬ ಸ್ಫೋಟಕ ಸುದ್ದಿಯನ್ನು ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಹಾಗೂ ಇಂಗ್ಲೆಂಡಿನ ‘ದಿ ಗಾರ್ಡಿಯನ್’ ಪತ್ರಿಕೆಗಳು ಪ್ರಕಟಿಸಿದ ಬಳಿಕ ಇಡೀ ಜಗತ್ತೇ ಅಂತಾರಾಷ್ಟ್ರೀಯ ದತ್ತಾಂಶ ಕಳವು ಹಾಗೂ ಅದರ ವಾಣಿಜ್ಯಿಕ ಬಳಕೆಯ ಕುರಿತು ಆತಂಕದಿಂದ ಯೋಚಿಸುವಂತೆ ಆಗಿದೆ. ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಉದ್ಯಮದ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳ ಏಜೆಂಟ್‍ಗಳಾಗಿ ವಿವಿಧ ದೇಶಗಳಲ್ಲಿ ತೆರೆಮರೆಯ ಕೆಲಸ ಮಾಡುತ್ತಿವೆ ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ.

ಸ್ವತಃ ಭಾರತಕ್ಕೆ ಈ ವಿಷಯ ಅರ್ಥವಾಗಿದ್ದರೂ ತಕ್ಷಣಕ್ಕೆ ಏನನ್ನಾದರೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಈಗ ಅಮೆರಿಕದಂತಹ ದೇಶಗಳಲ್ಲಿ ಸಂಗ್ರಹಗೊಳ್ಳುತ್ತಿರುವ ನಮ್ಮ ದೇಶದ ದತ್ತಾಂಶಗಳನ್ನು ನಮ್ಮಲ್ಲೇ ಸಂಗ್ರಹಿಸಲು ಸಾಧ್ಯವಾಗುವ ಪರ್ಯಾಯ ಮೂಲಸೌಕರ್ಯ ಇನ್ನೂ ನಮ್ಮಲ್ಲಿ ಬೆಳೆದಿಲ್ಲ. ಭಾರತವು ದೊಡ್ಡ ಸಾಫ್ಟ್‍ವೇರ್ ಕಂಪನಿಗಳನ್ನು ಹೊಂದಿದ್ದರೂ ಅವು ಕೆಲಸ ಮಾಡುತ್ತಿರುವುದು ಪಾಶ್ಚಿಮಾತ್ಯ ದೇಶಗಳ ಉದ್ದಿಮೆಗಳಿಗಾಗಿ. ಹೀಗಾಗಿ ಮಿಲಿಟರಿಯೂ ಸೇರಿದಂತೆ ಭಾರತದ ಡಿಜಿಟಲ್ ಮೂಲಸೌಕರ್ಯ ಅಸ್ತಿತ್ವದಲ್ಲಿರುವುದು ವಿದೇಶಗಳಲ್ಲಿ ನೆಲೆಕಂಡಿರುವ ಬೃಹತ್ ಸರ್ವರ್‌ಗಳಲ್ಲಿ. ಇದು ನಮ್ಮದೇ ಚಿನ್ನಾಭರಣಗಳನ್ನು ನೆರೆಮನೆಯವರ ಲಾಕರ್‌ಗಳಲ್ಲಿ ಇರಿಸಿ ಅವು ಭದ್ರವಾಗಿವೆ ಎಂದು ಭ್ರಮೆಗೊಳಗಾಗುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಈ ವಿಷಯದಲ್ಲಿ ಭಾರತ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದರೂ ಅನುಷ್ಠಾನದ ವಿಷಯದಲ್ಲಿ ಮತ್ತೆ ನಿಧಾನವಾಗಿಯೇ ಹೆಜ್ಜೆಯಿಡುತ್ತಿದೆ. ಜಸ್ಟೀಸ್ ಬಿ.ಎನ್. ಶ್ರೀಕೃಷ್ಣ ಸಮಿತಿಯು ದತ್ತಾಂಶ ಸಂರಕ್ಷಣೆ ಮಸೂದೆಯನ್ನು 2018ರ ಜುಲೈ ತಿಂಗಳಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸಲ್ಲಿಸಿದ್ದರೂ ಅದಕ್ಕಿನ್ನೂ ಶಾಸನವಾಗುವ ಭಾಗ್ಯ ದೊರಕಿಲ್ಲ. ಶ್ರೀಕೃಷ್ಣ ಸಮಿತಿಯು ಜನತೆಯ ಸ್ಥಳೀಯ ಮಾಹಿತಿಯನ್ನು ದೇಶದೊಳಗೇ ಸಂಗ್ರಹಿಸುವುದನ್ನು ಕಡ್ಡಾಯ ಮಾಡಿ ಶಿಫಾರಸು ಮಾಡಿರುವುದು ಗಮನಾರ್ಹ. ಸರ್ವರ್‌ಗಳು ಭಾರತದ ಹೊರಗಿದ್ದರೂ ಮೂಲ ಮಾಹಿತಿಯನ್ನು ಭಾರತದ ಭೌಗೋಳಿಕ ಗಡಿಯ ಒಳಗಿನ ಸರ್ವರ್‌ಗಳಲ್ಲೇ ಸಂಗ್ರಹಿಸಿ ಅವುಗಳ ಪ್ರತಿಯನ್ನಷ್ಟೇ ವಿದೇಶಗಳಲ್ಲಿ ಉಳಿಸಬಹುದು ಎಂದು ಸಮಿತಿ ಹೇಳಿದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮದ ಸಚಿವಾಲಯದ ಕೈಗಾರಿಕಾ ನೀತಿ ಉತ್ತೇಜನ ಇಲಾಖೆಯು ಇ-ಕಾಮರ್ಸ್ ಜಾಲತಾಣಗಳು ಹಾಗೂ ಆನ್‍ಲೈನ್ ಮಾರುಕಟ್ಟೆಗಳು ಗ್ರಾಹಕರ ದತ್ತಾಂಶಗಳನ್ನು ಸಂಗ್ರಹಿಸುವ ಕುರಿತಾದ ಹೊಸ ನೀತಿಗಳನ್ನು ಕಳೆದ ವರ್ಷಾಂತ್ಯಕ್ಕೆ ಘೋಷಿಸಿದೆ.

ಈ ನಿಟ್ಟಿನಲ್ಲಿ ವಿಯೆಟ್ನಾಂ ನಮಗಿಂತಲೂ ಹೆಚ್ಚು ಎಚ್ಚೆತ್ತುಕೊಂಡಿದೆ ಎಂಬುದನ್ನು ಗಮನಿಸಬೇಕು. ಜಗತ್ತಿನಾದ್ಯಂತ ತಲಾ 200 ಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮತ್ತು ಗೂಗಲ್ – ಜಗತ್ತಿನ ಎರಡು ಅತಿದೊಡ್ಡ ವೈಯುಕ್ತಿಕ ಮಾಹಿತಿ ಸಂಗ್ರಾಹಕ ಕಂಪನಿಗಳು- ವಿಯೆಟ್ನಾಂ ನಾಗರಿಕರ ವೈಯುಕ್ತಿಕ ಮಾಹಿತಿಗಳೇನಿದ್ದರೂ ವಿಯೆಟ್ನಾಂ ಗಡಿಯೊಳಗೆಯೇ ದಾಸ್ತಾನು ಮಾಡತಕ್ಕದ್ದು ಎಂಬ ಕಟ್ಟುನಿಟ್ಟಿನ ಕಾನೂನನ್ನು ವಿಯೆಟ್ನಾಂ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ. ನಾವು ಈ ದಿಕ್ಕಿನಲ್ಲಿ ಕ್ಷಿಪ್ರ ಹೆಜ್ಜೆಯನ್ನಿರಿಸದೇ ಹೋದರೆ ನಮ್ಮ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳೆರಡೂ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂಬುದನ್ನು ದೇಶದ ಚುಕ್ಕಾಣಿ ಹಿಡಿದವರು ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಭೌತಿಕ ದಾಸ್ಯಕ್ಕಿಂತ ಮಾನಸಿಕ ದಾಸ್ಯ ಹೆಚ್ಚು ಘೋರವಾದದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.