5ನೇ ಪೀಳಿಗೆಯ ನೆಟ್‌ವರ್ಕ್ ತಂತ್ರಜ್ಞಾನ '5ಜಿ'ಗೆ ಭಾರತವು ಅಕ್ಟೋಬರ್ ತಿಂಗಳಾರಂಭದಲ್ಲಿ ತೆರೆದುಕೊಳ್ಳುತ್ತಿದೆ. 5ಜಿ ಬಂದರೆ ನಮ್ಮ ಹಳೆಯ ಫೋನನ್ನು ಏನು ಮಾಡುವುದು ಎಂಬ ಆತಂಕ ಒಂದೆಡೆಯಾದರೆ, 5ಜಿ ನೆಟ್‌ವರ್ಕ್ ಹೇಗೆ ಕೆಲಸ ಮಾಡಬಹುದು ಎಂಬ ಕುತೂಹಲ ಮತ್ತೊಂದು ಕಡೆ. ಭಾರತದಲ್ಲಿ 5ಜಿ ಲಭ್ಯತೆಗೆ ಅ.1ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆಯುವ 'ಇಂಡಿಯಾ ಮೊಬೈಲ್ ಕಾಂಗ್ರೆಸ್' ಕಾರ್ಯಕ್ರಮದಲ್ಲಿ ಚಾಲನೆ ನೀಡುತ್ತಿದ್ದಾರೆ ಮತ್ತು ನಾಲ್ಕು ದಿನಗಳ ಈ ಸಮಾವೇಶದ ಅಂತ್ಯದ ಬಳಿಕ ದೇಶದಲ್ಲಿ 5ಜಿ ಜಾಲವು ಸಾರ್ವಜನಿಕರಿಗೆ ಹಂತಹಂತವಾಗಿ ಲಭ್ಯವಾಗಲಿದೆ. ಈ ಹಂತದಲ್ಲಿ ಜನಸಾಮಾನ್ಯರಲ್ಲಿ ಇರಬಹುದಾದ ಸಂದೇಹಗಳಿಗೆ ಇಲ್ಲಿದೆ ಉತ್ತರ.

Mbps ಮತ್ತು MB ನಡುವಿನ ವ್ಯತ್ಯಾಸ
4ಜಿಯಿಂದ 5ಜಿಗೆ ಪ್ರಧಾನವಾಗಿ ಕಂಡುಬರುವ ವ್ಯತ್ಯಾಸವೆಂದರೆ ಇಂಟರ್ನೆಟ್ ವೇಗ. 4ಜಿ ಗರಿಷ್ಠ ವೇಗವು 100 ಎಂಬಿಪಿಎಸ್ (ಸೆಕೆಂಡಿಗೆ 10 ಮೆಗಾಬಿಟ್ಸ್) ಇದ್ದರೆ, 5ಜಿಯಲ್ಲಿ ಗರಿಷ್ಠ ವೇಗವು 20ಜಿಬಿಪಿಎಸ್ (ಸೆಕೆಂಡಿಗೆ 20 ಗಿಗಾಬಿಟ್ಸ್)ವರೆಗೂ ಇರಬಹುದು. ಇಲ್ಲಿ ಮೆಗಾಬಿಟ್ಸ್ ಮತ್ತು ಮೆಗಾಬೈಟ್ಸ್ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಎರಡನ್ನೂ ಎಂಬಿಪಿಎಸ್ ಎಂದೇ ಕರೆಯುತ್ತಾರಾದರೂ, ಇಂಗ್ಲಿಷಿನಲ್ಲಿ ಬರೆಯುವಾಗ ಇದರ ವ್ಯತ್ಯಾಸ ತಿಳಿಯುತ್ತದೆ. Mbps ಎಂದರೆ ಮೆಗಾಬಿಟ್ಸ್ ಪರ್ ಸೆಕೆಂಡ್, MB ಎಂಬುದು ಮೆಗಾಬೈಟ್ಸ್‌ನ ಪೂರ್ಣರೂಪ (b ಹಾಗೂ B ವ್ಯತ್ಯಾಸ ಗಮನಿಸಿ). ಎಂಟು ಮೆಗಾಬಿಟ್‌ಗಳು (Mb) ಒಂದು MB ಗೆ ಸಮ. ಸಾಮಾನ್ಯವಾಗಿ ಇಂಟರ್ನೆಟ್ ವೇಗದ ಬಗ್ಗೆ ಮಾತನಾಡುವಾಗ ಎಂಬಿಪಿಎಸ್ ಅಂತಲೂ, ಯಾವುದೇ ಫೈಲ್‌ನ (ಡೇಟಾ, ಸ್ಟೋರೇಜ್) ಗಾತ್ರದ ಬಗ್ಗೆ ಮಾತನಾಡುವಾಗ ಮೆಗಾಬೈಟ್ (MB) ಎಂಬುದನ್ನು ಬಳಸಲಾಗುತ್ತದೆ. ಸೆಕೆಂಡಿಗೆ 1 ಎಂಬಿ (1 Mbps) ಎಂದರೆ ಅದು ವಾಸ್ತವವಾಗಿ ಸೆಕೆಂಡಿಗೆ 0.125 MB ಆಗಿರುತ್ತದೆ.

5ಜಿಯಲ್ಲೂ ಎರಡು ವೇಗ
ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್-ಐಡಿಯಾ (ವಿಐ) ಕಂಪನಿಗಳು ಈಗಾಗಲೇ 5ಜಿ ಸ್ಪೆಕ್ಟ್ರಂಗಳಿಗೆ ಬಿಡ್ ಸಲ್ಲಿಸಿ ಖರೀದಿಸಿವೆ. 6 ಗಿಗಾಹರ್ಟ್ಸ್ (6GHz) ಗಿಂತ ಕಡಿಮೆ ಸಾಮರ್ಥ್ಯದ ತರಂಗಾಂತರದ ನೆಟ್‌ವರ್ಕ್, ಈಗಿರುವುದಕ್ಕಿಂತ ಎರಡು-ಮೂರು ಪಟ್ಟು ವೇಗದಲ್ಲಿ ಸಾಮಾನ್ಯ ಡೇಟಾ ವಿನಿಮಯ ಸೇವೆಗಾಗಿ ಲಭ್ಯವಿದ್ದರೆ, 26GHz ವರೆಗಿನ ತರಂಗಾಂತರದ ಎಂಎಂ ವೇವ್ ಹೆಸರಿನ ಸ್ಪೆಕ್ಟ್ರಂಗಳು ಈಗಿನ 4ಜಿಗಿಂತ 10ರಿಂದ 15 ಪಟ್ಟು ವೇಗದಲ್ಲಿ ಕೆಲಸ ಮಾಡಲಿದ್ದು, ಔದ್ಯಮಿಕ ವಲಯದ ಅನುಕೂಲತೆಗಳಿಗಾಗಿರುತ್ತವೆ. ಸದ್ಯಕ್ಕೆ ನಮಗೆ ಲಭ್ಯವಾಗುವುದು ಮೊದಲನೆಯದು.

ನಮ್ಮಲ್ಲಿರುವ ಫೋನ್ ಬದಲಾಯಿಸಬೇಕೇ?
5ಜಿ ತಂತ್ರಜ್ಞಾನ ಬರಲಿದೆ ಎಂಬುದು ಮೂರು ವರ್ಷಗಳಿಂದಲೇ ಕೇಳಿಬರುತ್ತಿದ್ದ ಮಾತು. ಈ ಸಂದರ್ಭದಲ್ಲಿ ಎಲ್ಲ ಸ್ಮಾರ್ಟ್‌ಫೋನ್ ತಯಾರಕರೂ 5ಜಿ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನೇ ಮಾರುಕಟ್ಟೆಗೆ ಇಳಿಸಿದ್ದಾರೆ. ಹೀಗಾಗಿ ಇತ್ತೀಚೆಗೆ ಸಾಧನಗಳನ್ನು ಖರೀದಿಸಿದವರು ಈ ಬಗ್ಗೆ ಚಿಂತೆ ಮಾಡಬೇಕಿಲ್ಲ. ಆದರೆ, 4ಜಿ ಬೆಂಬಲಿಸುವ ಫೋನ್ ಉಳ್ಳವರು ಹೊಸ ಫೋನ್ ಖರೀದಿಸಬೇಕಾಗಬಹುದು, ಅದನ್ನೇ ಅಪ್‌ಗ್ರೇಡ್ ಮಾಡುವುದು ಸಾಧ್ಯವಿಲ್ಲ. ಅಥವಾ ಈ ಹಿಂದೆ 4ಜಿಯ ಸುಧಾರಿತ ಆವೃತ್ತಿ VoLTE ಬಂದಾಗ ಅದಕ್ಕೆ ಲಭ್ಯವಾಗಿದ್ದ ಆ್ಯಪ್‌ನಂತೆಯೇ ಮತ್ತೊಂದು ಆ್ಯಪ್ ಮೂಲಕವೂ ಸಂಪರ್ಕಿಸುವ ಸಾಧ್ಯತೆಗಳು ಕಡಿಮೆ. ಅದೇ ರೀತಿ, ಆಪರೇಟರ್‌ಗಳು 2ಜಿ, 3ಜಿ, 4ಜಿ ತಂತ್ರಜ್ಞಾನವನ್ನೂ ಮುಂದುವರಿಸಿದರೆ, ಅವರ ಫೋನ್‌ಗಳಲ್ಲಿ ಆ ತಂತ್ರಜ್ಞಾನದ ಮೂಲಕ ಕರೆ, ಡೇಟಾ ಬಳಸಬಹುದು. 4ಜಿ ಸೌಕರ್ಯ ಮಾತ್ರವೇ ಇರುವ ಫೋನ್‌ಗಳಲ್ಲಿ 5ಜಿಯ ಲಾಭ, ವಿಶೇಷವಾಗಿ ಇಂಟರ್ನೆಟ್ ವೇಗ ದೊರೆಯುವುದಿಲ್ಲ ಅಷ್ಟೆ.

ದೊಡ್ಡ ಪ್ರಮಾಣದಲ್ಲಿ ಅಂತರಜಾಲ ಸಂಪರ್ಕ ಬಳಸುತ್ತೀರಿ ಅಥವಾ ಹೆಚ್ಚು ವೇಗವಾಗಿ ಡೇಟಾ ವಿನಿಮಯ (ಅಪ್‌ಲೋಡ್/ಡೌನ್‌ಲೋಡ್) ಆಗಬೇಕಿದೆ ಎಂದಾದರೆ 5ಜಿ ಫೋನ್ ಖರೀದಿಸಬಹುದು. 5ಜಿ ಫೋನ್‌ಗಳು ಕೂಡ ಈಗ ಬಜೆಟ್ ದರದಲ್ಲಿ ಲಭ್ಯ ಇವೆ. ಸದ್ಯಕ್ಕೆ ಹಣಕಾಸಿನ ಸಮಸ್ಯೆಯಿದೆ ಎಂದಾದರೆ 5ಜಿ ಹೊಸ ಫೋನ್ ಖರೀದಿಸುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಬಹುದು. ಇದರಿಂದ ಕರೆ, ಸಾಮಾನ್ಯ ಅಂತರಜಾಲ ಬಳಕೆಗೆ (ಪ್ರಸ್ತುತ ಲಭ್ಯವಿರುವ 2ಜಿ, 3ಜಿ ಹಾಗೂ 4ಜಿ ಬಳಸಿ) ಯಾವುದೇ ಸಮಸ್ಯೆಯಾಗುವುದಿಲ್ಲ.

ಈಗಲೇ ಎಲ್ಲರಿಗೂ ಸಿಗುತ್ತದೆಯೇ?
ಒಂದು ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ, ಲೋಕಾರ್ಪಣೆಯಾದ ತಕ್ಷಣ ಎಲ್ಲ ಊರುಗಳಲ್ಲಿ 5ಜಿ ಸೌಕರ್ಯ ಸಿಗುತ್ತದೆ ಎಂಬುದು ಖಚಿತವಿಲ್ಲ. ಪ್ರಮುಖ ನಗರಗಳಲ್ಲಿ ಮೊದಲು, ನಂತರ ನಿಧಾನವಾಗಿ ಗ್ರಾಮೀಣ ಭಾಗಗಳಿಗೆ ಹಂತ ಹಂತವಾಗಿ 5ಜಿ ತಂತ್ರಜ್ಞಾನ ವಿಸ್ತರಿಸಲಾಗುತ್ತದೆ. 2023ರಲ್ಲಿ ಇಡೀ ದೇಶದಾದ್ಯಂತ ಈ ಸೌಕರ್ಯ ದೊರೆಯುವ ಸಾಧ್ಯತೆಗಳಿವೆ.

ಉಳಿತಾಯಕ್ಕೆ ಏನು ಮಾಡಬಹುದು?
5ಜಿ ಶುಲ್ಕವು 4ಜಿಗಿಂತ ಹೆಚ್ಚಿರುತ್ತದೋ, ಕಡಿಮೆ ಇರುತ್ತದೋ ಎಂಬ ಉದ್ಯಮದ ಗುಟ್ಟು ಇನ್ನೂ ಬಿಟ್ಟುಕೊಟ್ಟಿಲ್ಲ. ಉನ್ನತ ತಂತ್ರಜ್ಞಾನ, ಹೆಚ್ಚು ಅನುಕೂಲ ಇರುವುದರಿಂದಾಗಿ ತುಸು ಹೆಚ್ಚಿರಬಹುದು ಎಂಬುದು ಔದ್ಯಮಿಕ ವಲಯದ ಅಂದಾಜು. ಈ ಹಂತದಲ್ಲಿ, ಸಾಧ್ಯವಿದ್ದಷ್ಟೂ ಉಳಿತಾಯ ಮಾಡಲು ನಾವೇನು ಮಾಡಬಹುದು?

ಒಂದನೆಯದು, ವೇಗದ ಅಂತರಜಾಲ ವ್ಯವಸ್ಥೆಯು ತೀರಾ ಅನಿವಾರ್ಯ ಎಂದಾದರೆ ಮಾತ್ರವೇ 5ಜಿ ಹೊಸ ಫೋನ್‌ಗೆ ಅಥವಾ ಹೊಸ ಸಿಮ್‌ಕಾರ್ಡ್‌ಗೆ ಬದಲಾಗಬಹುದು. ಎರಡನೇ ವಿಚಾರವೆಂದರೆ, ಮನೆಯಲ್ಲಿ ನಾಲ್ಕೈದು ಫೋನ್ ಸಂಪರ್ಕಗಳಿವೆ ಎಂದಾದರೆ, ಒಂದನ್ನು ಮಾತ್ರ 5ಜಿಗೆ ಬದಲಾಯಿಸಿಕೊಳ್ಳಬಹುದು. ಬ್ರಾಡ್‌ಬ್ಯಾಂಡ್ ಅಥವಾ ಆಪ್ಟಿಕಲ್ ಫೈಬರ್ ಸಂಪರ್ಕ ಅಥವಾ ಪೋರ್ಟೆಬಲ್ ಹಾಟ್‌ಸ್ಪಾಟನ್ನು ಬಳಸಿದರೆ, ಮನೆಯಲ್ಲಿರುವ ಎಲ್ಲರಿಗೂ ವೈಫೈ ಮೂಲಕ 5ಜಿ ಸಂಪರ್ಕ ದೊರೆಯಬಹುದು. 5ಜಿ ಬೆಂಬಲಿಸುವ ಪುಟ್ಟದಾದ, ಬೇಕಾದಲ್ಲಿಗೆ ಒಯ್ಯಬಹುದಾದ ಪೋರ್ಟೆಬಲ್ ವೈಫೈ ಹಾಟ್‌ಸ್ಪಾಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಅದರೊಳಗೆ 5ಜಿ ಸಿಮ್ ಕಾರ್ಡ್ ಅಳವಡಿಸಿದರಾಯಿತು. ರಿಲಯನ್ಸ್ ಜಿಯೋ ಏರ್ ಫೈಬರ್ ಹೆಸರಿನಲ್ಲಿ ಪೋರ್ಟೆಬಲ್ ಸಾಧನವನ್ನು ಹೊರತರುವುದಾಗಿ ಈಗಾಗಲೇ ಘೋಷಿಸಿದೆ.

2ಜಿ, 3ಜಿ, 4ಜಿ, 5ಜಿ
5ಜಿ ಅಂತರಜಾಲ ವೇಗವು ಔದ್ಯಮಿಕವಾಗಿ, ಕೃಷಿ, ಆರೋಗ್ಯ, ಶಿಕ್ಷಣ, ರಕ್ಷಣಾ ಕ್ಷೇತ್ರಗಳಲ್ಲಿ ಅತ್ಯುಪಯುಕ್ತವಾಗಿದ್ದು, ಸಾಕಷ್ಟು ಬದಲಾವಣೆಗಳನ್ನು ದೇಶವು ನಿರೀಕ್ಷಿಸುತ್ತಿದೆ. ಈಗ ಕೊಂಚ ಹಿಂದಕ್ಕೆ ಹೋದರೆ, ನಮಗೆ ತಿಳಿದಿರುವುದು 2ಜಿ. ಇದರಲ್ಲಿ ತೀರಾ ಕಡಿಮೆ ವೇಗದ ಇಂಟರ್ನೆಟ್ ಸಂಪರ್ಕವಿತ್ತು (ಗರಿಷ್ಠ 50 ಕಿಲೋಬಿಟ್ಸ್ ಪರ್ ಸೆಕೆಂಡ್) ಮತ್ತು ಫೀಚರ್ ಫೋನ್‌ಗಳಲ್ಲಿ ಬಳಕೆಯಾಗುತ್ತಿತ್ತು. ನಂತರ 3ಜಿ ಬಂದಾಗ ಸ್ಮಾರ್ಟ್‌ಫೋನ್‌ಗಳು ಬಂದವು. ಇಂಟರ್ನೆಟ್ ವೇಗವು 2 ಎಂಬಿಪಿಎಸ್‌ವರೆಗಿತ್ತು. ಆ ಬಳಿಕದ 4ಜಿ ನೆಟ್‌ವರ್ಕ್ ಬಂದಾಗಿನ ಪ್ರಧಾನ ಬೆಳವಣಿಗೆ ಬಗ್ಗೆ ಹೇಳುವುದಾದರೆ ವಿಡಿಯೊ ವೀಕ್ಷಣೆಗೆ ಬಫರಿಂಗ್ (ಜನಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಚಕ್ರ ಸುತ್ತುವುದು) ಸಮಸ್ಯೆಗೆ ಪರಿಹಾರ ಸಿಕ್ಕಿತು, ಫೈಲುಗಳ ವರ್ಗಾವಣೆ, ಅಂತರಜಾಲದಲ್ಲಿ ವಿಡಿಯೊ ವೀಕ್ಷಣೆ ವೇಗ ಪಡೆದುಕೊಂಡಿತು ಮತ್ತು ಇಂಟರ್ನೆಟ್ ಬಳಕೆಯಲ್ಲಿ ಕ್ರಾಂತಿಯೇ ಆಯಿತು. ಸಾಮಾಜಿಕ ಜಾಲತಾಣ ಬಳಕೆ ಹಿಂದೆಂದಿಗಿಂತಲೂ ವೇಗವಾಯಿತು, ಜನರು ಮೊಬೈಲ್ ಗೀಳಿಗೂ ಸಿಲುಕತೊಡಗಿದರು. ಹಾಗಿದ್ದರೆ, 5ಜಿಯಲ್ಲಿ ಈಗಿರುವುದಕ್ಕಿಂತ ಕನಿಷ್ಠ 3 ಪಟ್ಟು ಹೆಚ್ಚು ಗರಿಷ್ಠ 10-15 ಪಟ್ಟು ಹೆಚ್ಚು ವೇಗ ಇರುತ್ತದೆ ಎಂದಾದರೆ, ಪರಿಸ್ಥಿತಿ ಹೇಗಿರಬಹುದು? ಜನರು ಮತ್ತಷ್ಟು 'ಮೊಬೈಲ್-ವ್ಯಸ್ತ'ರಾಗುತ್ತಾರೋ ಎಂಬುದಕ್ಕೆ ಕಾಲವೇ ಉತ್ತರ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.