ಇತ್ತೀಚೆಗೆ ಬಿಡುಗಡೆಯಾಗಿ ಇಡೀ ದೇಶದ ಸಾಂಸ್ಕೃತಿಕ ವಲಯವನ್ನು ವಿಭಜಿಸಿರುವ ‘ಅನಿಮಲ್’ ಚಲನಚಿತ್ರ ಸಮಕಾಲೀನ ಸಮಾಜದ ಹಲವು ವೈರುಧ್ಯಗಳಿಗೆ ಕನ್ನಡಿ ಹಿಡಿದಿದೆ. ಈ ಚಿತ್ರವು ಒಂದೆಡೆ ಗಂಡಸಿನ ವಿಕ್ಷಿಪ್ತತೆ, ವಿಕೃತಿಯನ್ನು ಅನಾವರಣಗೊಳಿಸಿದರೆ, ಮತ್ತೊಂದೆಡೆ ತಂದೆಯ ವೈಫಲ್ಯ, ಹೆಂಡತಿಯ ಆತ್ಮಗೌರವ, ಸಹೋದರ, ಸಹೋದರಿಯರ ನಡುವಿನ ಆತ್ಮೀಯ ಸಂಬಂಧ, ಎಲ್ಲವನ್ನೂ ರಕ್ತದಲ್ಲಿ ಅದ್ದಿ ತೆಗೆದಿದೆ. ಪಶ್ಚಾತ್ತಾಪವಿಲ್ಲದ ತಣ್ಣನೆಯ ಕ್ರೌರ್ಯ, ರಕ್ತದ ಘಾಟು, ಹತ್ಯೆಗಳ ಸರಮಾಲೆ, ಎಲ್ಲವೂ ವಿಚಿತ್ರವಾದ ಸಮತೋಲನ ಸಾಧಿಸಿದ್ದು, ಸಮಗ್ರವಾದ ಸಿನೆಮ್ಯಾಟಿಕ್ ಅನುಭವವನ್ನು ಕಟ್ಟಿಕೊಡುತ್ತದೆ. ಹೀಗಾಗಿ, ಇದನ್ನು ಕೇವಲ ಸ್ತ್ರೀ ವಿರೋಧಿ ಮತ್ತು ಪುರುಷ ಪ್ರಧಾನ ಯಥಾಸ್ಥಿತಿವಾದದ ಚಿತ್ರವೆಂದು ಕಪ್ಪು ಬಿಳುಪಿನ ವಿಶ್ಲೇಷಣೆಗೆ ಸೀಮಿತಗೊಳಿಸಲಾಗುವುದಿಲ್ಲ. ನೈತಿಕ ಮೌಲ್ಯಗಳ ಹೊರೆಯನ್ನು ಪಕ್ಕಕ್ಕಿರಿಸಿ ನಿರ್ದೇಶಕನೊಬ್ಬನ ಕಲಾಕೃತಿಯನ್ನಾಗಿ ನೋಡಿದರೆ ‘ಗಾಢ್ ಫಾದರ್’, ‘ಸ್ಕಾರ್ಫೇಸ್’ನಂತಹ ಚಿತ್ರಗಳ ಛಾಯೆ ಎದ್ದು ಕಾಣುತ್ತದೆ. ಮಾರ್ಟಿನ್ ಸ್ಕಾರ್ಸೆಸಿ, ಫ್ರಾನ್ಸಿಸ್ ಫೋರ್ಡ್ ಕೊಪ್ಪೋಲಾ, ಸ್ಟ್ಯಾನ್ಲಿ ಕ್ಯೂಬ್ರಿಕ್ರಂತಹ ನಿರ್ದೇಶಕರ ಪ್ರಭಾವ ಕಣ್ಣಿಗೆ ರಾಚುತ್ತದೆ.

ಚಿತ್ರದ ಗುಣಾವಗುಣಗಳು ಏನೇ ಇರಲಿ. ಸಾಮಾಜಿಕ ಜಾಲತಾಣಗಳಲ್ಲಿ, ಸಾವಿರಾರು ಮೀಮ್ಗಳಿಗೆ ಸ್ಫೂರ್ತಿಯಾಗಿರುವುದು ‘ಅನಿಮಲ್’ ಚಿತ್ರದ ನಿಜವಾದ ಜನಪ್ರಿಯತೆಗೆ ಸಾಕ್ಷಿ. ಡಿಜಿಟಲ್ ಜಾನಪದ ಲೋಕದ ನೂರಾರು ಸಾಮಾಜಿಕ ಮಾಧ್ಯಮ ಪ್ರಭಾವಿಗಳು (Social Media Infuencers), ಕಂಟೆಂಟ್ ಕ್ರಿಯೇಟರ್ಗಳು ‘ಅನಿಮಲ್’ ಚಿತ್ರದ ಸಾವಿರಾರು ಮೀಮ್ಗಳನ್ನು ಸೃಷ್ಟಿಸಿ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ. ಚಿತ್ರದಲ್ಲಿ ಬಾಬ್ಬಿ ಡಿಯೋಲ್ನನ್ನು ಪರಿಚಯಿಸಲು ಬಳಸಿರುವ ಇರಾನಿ ಜಾನಪದ ಗೀತೆ ‘ಜಮಾಲ್ ಕುಡು’, ರಣಬೀರ್ನನ್ನು ಪರಿಚಯಿಸುವ ‘ರೋಜಾ’ ಚಿತ್ರದ ಹಾಡುಗಳ ವಯೋಲಿನ್ ವರ್ಷನ್ ಸಾವಿರಾರು ಮೀಮ್ಗಳಿಗೆ ಆಹಾರವಾಗಿರುವುದಂತೂ ಸತ್ಯ. ಚಿತ್ರದಲ್ಲಿ ಬಳಕೆಯಾಗಿರುವ ‘ರೋಜಾ’ದ ವಯೋಲಿನ್ ಅಳವಡಿಕೆ ಕೂಡ ‘ಥ್ರಿಯರಿ’ ಎಂಬ ರಾಕ್ ಫ್ಯೂಷನ್ ಬ್ಯಾಂಡ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೆ ಕಾಣಿಕೆಯಾಗಿ ಅರ್ಪಿಸಿದ ಸಂಗೀತದ ಮಿಶ್ರಣ (ಮೆಡ್ಲೆ) ಎಂಬುದನ್ನು ಗಮನಿಸಬೇಕು. ಈ ಮರುಸೃಷ್ಟಿಯ ಬಳಕೆಯನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೃಷ್ಟಿಸಿರುವ ‘ಸಿನೆಮ್ಯಾಟಿಕ್ ಮೀಮ್’ ಎಂದರೆ ತಪ್ಪಾಗಲಾರದು.

ಚಿತ್ರದ ‘ಅರ್ಜುನ್ ವೈಲ್ಲಿ’ ಹಾಡಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿ 2018ರಲ್ಲಿ ಗಳಿಸಿದ 25ನೇ ಶತಕದ ಸೊಗಸಿನಾಟದ ದೃಶ್ಯ ಜೋಡಿಸಿರುವ ಮೀಮ್, ಮುಂಬೈ ಇಂಡಿಯನ್ಸ್ ತಂಡದ ಎಐ ಜನರೇಟೆಡ್ ವಿಡಿಯೊವೊಂದರಲ್ಲಿ ಚಿತ್ರದ ವಿವಿಧ ದೃಶ್ಯಗಳಲ್ಲಿ ರಣಬೀರ್ ಕಪೂರ್ ಬದಲಿಗೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಚಹರೆಗಳನ್ನು ಜೋಡಿಸಿ ಆಟಗಾರರನ್ನು ಪರಿಚಯಿಸುವ ಮೀಮ್, ಒಂದಾ ಎರಡಾ? ಹೀಗೆ, ಕಳೆದ ದಶಕದಿಂದೀಚೆಗೆ ‘ಉಗ್ರಂ’, ‘ಕಿರಿಕ್ ಪಾರ್ಟಿ’ ‘ಕೆಜಿಎಫ್’, ‘ಬಾಹುಬಲಿ’, ‘ಕಾಂತಾರ’ ಮತ್ತೀಗ ‘ಅನಿಮಲ್’ ಮತ್ತು ‘ಸಲಾರ್’ನಂತಹ ಬ್ಲಾಕ್ಬಸ್ಟರ್ ಚಲನಚಿತ್ರಗಳನ್ನಾಧರಿಸಿದ ಮೀಮ್ಗಳು ಆಯಾ ಸಂದರ್ಭದಲ್ಲಿ ಮಿಂಚಿ ಮರೆಯಾಗುತ್ತಲಿವೆ.

ಈ ಮೀಮ್ಗಳ ವಸ್ತುವಿಷಯ ಜನಪ್ರಿಯ ಚಲನಚಿತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್, ರಾಜಕಾರಣ, ಟಿವಿ ಧಾರಾವಾಹಿಗಳು, ರಿಯಾಲಿಟಿ ಷೋಗಳು, ವೆಬ್ ಸಿರೀಸ್ಗಳ ದೃಶ್ಯಗಳು, ಸಂಗೀತದ ತುಣುಕುಗಳು, ಹೀಗೆ ಡಿಜಿಟಲ್ ಕಂಟೆಂಟ್ ಸೃಷ್ಟಿಕರ್ತರಿಗೆ ಎಲ್ಲವೂ ಸಂಭಾವ್ಯ ವಿಷಯಗಳೇ. ಕೆಲವೊಮ್ಮೆ ಮೀಮ್ಗಳು ವೈಯಕ್ತಿಕ ವಲಯವನ್ನೂ ಪ್ರವೇಶಿಸುವುದುಂಟು. ಉದಾಹರಣೆಗೆ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ವೇಳೆ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವಿನ ಕಲ್ಪಿತ ಸಂಬಂಧವನ್ನು ಕುರಿತು ಸೃಷ್ಟಿಸಲಾದ ನೂರಾರು ಮೀಮ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿದ್ದವು. ವಿರಾಟ್ ಕೊಹ್ಲಿ 50ನೇ ಶತಕ ಬಾರಿಸಿದಾಗ, ‘ವಿರಾಟ್ ದಾಖಲೆ ಮುರಿದ, ಗಿಲ್ ಮಗಳನ್ನು ಗೆದ್ದ’ ಎಂದು ಸಚಿನ್ ಅಲವತ್ತುಕೊಳ್ಳುವ ಹಾಸ್ಯಭರಿತ ಮೀಮ್ ವೈರಲ್ ಆಗಿತ್ತು. ಮತ್ತೊಂದು ಮೀಮ್ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ‘ಸುನೊ ಜಿ ದುಲ್ಹನ್...’ ಹಾಡನ್ನು ಬಳಸಿ ಸಾರಾಗೆ ವಿರಾಟ್-ಅನುಷ್ಕಾ, ರೋಹಿತ್-ರಿತಿಕಾ, ಇಶಾನ್ ಕಿಶನ್ ಮತ್ತು ಕೊನೆಯದಾಗಿ ಗಿಲ್ರನ್ನು ಪರಿಚಯಿಸುವ ವಿಡಿಯೊ ಜನಪ್ರಿಯವಾಗಿತ್ತು.

ಮೀಮ್ ಮತ್ತು ಮರುಸೃಷ್ಟಿ

1976ರಲ್ಲಿ ಪ್ರಕಟಿಸಿದ ‘ಸೆಲ್ಫಿಶ್ ಜೀನ್’ ಎಂಬ ಕೃತಿಯಲ್ಲಿ ಮೊಟ್ಟ ಮೊದಲಿಗೆ ‘ಮೀಮ್’ ಪದವನ್ನು ಬಳಸಿದ ಬ್ರಿಟನ್ ಮೂಲದ ವಿಕಾಸವಾದಿ ಜೀವಶಾಸ್ತ್ರಜ್ಞ ರಿಚರ್ಡ್ ಡಾಕಿನ್ಸ್, ಮಾನವ ಸಂಸ್ಕೃತಿಯ ನಿಚ್ಚಳವಾದ ತುಣುಕುಗಳು ಜನರಿಂದ ಜನರ ಮಿದುಳಿಗೆ ರವಾನೆಯಾಗುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಿದ್ದಾನೆ. ‘ಅನುಕರಣೆಯ ಮೂಲಕ ಮಿದುಳಿನಿಂದ ಮಿದುಳಿಗೆ ಜಿಗಿಯುವ ಮಧುರವಾದ ಗೀತೆ, ಮರೆಯಲಾಗದ ವಿಚಾರ, ನಾಲಿಗೆಯ ಮೇಲೆ ನಲಿದಾಡುವ ನುಡಿಗಟ್ಟು ಅಥವಾ ಮಾಹಿತಿಯ ತುಣುಕುಗಳೇ ಮೀಮ್ಗಳು.’ ಶತಮಾನಗಳಿಂದಲೂ ಅನುಕರಣೆಯ ಮೂಲಕ ಮಾನವ ಸಂಸ್ಕೃತಿಯ ಪ್ರತಿರೂಪಗಳು ಸೃಷ್ಟಿಯಾಗುತ್ತಲೇ ಇವೆ. ಹಾಗಾಗಿ ಮೀಮ್ಗಳು ಮಾನವ ನಾಗರಿಕತೆಯಷ್ಟೆ ಹಳೆಯದು ಎಂದು ಡಾಕಿನ್ಸ್ ವಿವರಿಸುತ್ತಾನೆ.

ಆದರೆ, ಸಮಕಾಲೀನ ‘ಅಂತರ್ಜಾಲದ ಮೀಮ್’ಗಳು ಹಿಂದೆಂದಿಗಿಂತಲೂ ಭಿನ್ನ, ಜನಪ್ರಿಯ ಮತ್ತು ಪ್ರಭಾವಶಾಲಿ. ಚಲನಚಿತ್ರ, ರಿಯಾಲಿಟಿ ಷೋ, ವೆಬ್ ಸಿರೀಸ್ನಂತಹ ಕಲಾಪ್ರಕಾರವೊಂದರ ವಿಶಿಷ್ಟ ತುಣುಕು, ಸಾರ್ವಜನಿಕ ವಲಯದಲ್ಲಿ ಜನಪ್ರಿಯವಾಗಿರುವ ವಿಚಾರ ಅಥವಾ ವಿದ್ಯಮಾನವನ್ನು ಪೋಸ್ಟರ್ ಅಥವಾ ವಿಡಿಯೊ ಮೂಲಕ ಮರುಸೃಷ್ಟಿಸಿ, ಅದಕ್ಕೆ ತಮ್ಮ ವೈಯಕ್ತಿಕ ದೃಷ್ಟಿಕೋನವನ್ನು ಬೆರೆಸಿ, ಹಾಸ್ಯ ಮತ್ತು ವಿಡಂಬನೆಯನ್ನು ಲೇಪಿಸಿ, ಕಲಾತ್ಮಕವಾಗಿ ಮತ್ತು ಸಾಂಕೇತಿಕವಾಗಿ ಅಂತರ್ಜಾಲದ ವೇದಿಕೆಗಳಲ್ಲಿ ಅಭಿವ್ಯಕ್ತಿಸುವ ಕಿರು ಮನರಂಜನಾ ಮಾಧ್ಯಮವನ್ನು ಮೀಮ್ ಎನ್ನಬಹುದು.

ಸಾಂಸ್ಕೃತಿಕ ಆಯಾಮ

ಒಂದರ್ಥದಲ್ಲಿ ಅನುಕರಣೆಯಿಲ್ಲದೆ ಸೃಜನಶೀಲತೆ ಹುಟ್ಟುವುದಿಲ್ಲ. ಜಗತ್ತಿನ ಶ್ರೇಷ್ಠ ಸಾಹಿತ್ಯಕ ಕೃತಿಗಳು, ಚಿತ್ರಕಲೆ, ಶಿಲ್ಪಕಲೆಗಳು, ಚಲನಚಿತ್ರಗಳು, ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಹಿಂದಿನ ಶ್ರೇಷ್ಠ ಕಲಾಕೃತಿಗಳಿಂದ ಸ್ಫೂರ್ತಿ ಪಡೆದಿರುವುದಂತೂ ನಿಜ. ಅರಿಸ್ಟಾಟಲ್ನ ಅನುಕರಣೆಯ ಸಿದ್ಧಾಂತ (ಮೀಮೆಸಿಸ್), ಟಿ. ಎಸ್. ಇಲಿಯಟ್ನ ‘ಪರಂಪರೆ ಮತ್ತು ವೈಯಕ್ತಿಕ ಪ್ರತಿಭೆ’ ಪ್ರಬಂಧ, ಅನುಕರಣೆ ಮತ್ತು ಕಲೆಯ ಸಂಬಂಧವನ್ನು ನಿಕಷಕ್ಕೆ ಒಡ್ಡುತ್ತದೆ. ‘ಯಾವುದೇ ಕವಿ, ಕಲಾವಿದ ತನ್ನಷ್ಟಕ್ಕೇ ತಾನು ಪರಂಪರೆಯಿಂದ ಹೊರಗುಳಿದು, ಸ್ವತಂತ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಕಲಾವಿದನಿಗೆ ಪರಂಪರೆ ಬಳುವಳಿಯಾಗಿಯೂ ಬರುವುದಿಲ್ಲ. ಇದನ್ನು ಅಂತರ್ಗತಗೊಳಿಸಿಕೊಳ್ಳಲು ಸಮಕಾಲೀನತೆ ಮತ್ತು ಕಾಲಾತೀತ ಅಂಶಗಳನ್ನೊಳಗೊಂಡ ಐತಿಹಾಸಿಕ ಪ್ರಜ್ಞೆ ಆತನಿಗೆ ಅವಶ್ಯಕ’ ಎನ್ನುತ್ತಾನೆ ಇಲಿಯಟ್.

ಇನ್ನು ಅರಿಸ್ಟಾಟಲ್ ಪ್ರಕಾರ ಕಲಾವಿದನು ಶ್ರೇಷ್ಠ ಪರಂಪರೆಯನ್ನು ಅನುಕರಿಸುವ ಪ್ರಕ್ರಿಯೆಯಲ್ಲಿ ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ತನ್ನ ಪ್ರತಿಭೆಯ ಮುದ್ರೆ ಒತ್ತುತ್ತಾನೆ. ಇದು ಕಲೆಯ ಸೃಷ್ಟಿಗೆ ಮೂಲಧಾತುವಾಗುತ್ತದೆ. ಹೀಗೆ ಸೃಷ್ಟಿಯಾದ ಹೊಸ ಆಯಾಮವೇ ‘ಕಲೆ’ ಎಂಬುದು ಅರಿಸ್ಟಾಟಲ್ನ ವಾದ. ಇಲಿಯಟ್ ಇದನ್ನೇ ವೈಯಕ್ತಿಕ ಪ್ರತಿಭೆ ಎಂದು ಕರೆದಿದ್ದಾನೆ. ಇವರಿಬ್ಬರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ, ಎಲ್ಲ ಶ್ರೇಷ್ಠ ಕಲಾಕೃತಿಗಳು ಕೂಡ ಪರಂಪರೆಯ ಯಾವುದಾದರೂ ಒಂದು ಅಂಶದ ಅನುಕರಣೆಯೇ ಆಗಿರುತ್ತದೆ.

ಇದೇ ವಿವರಣೆಯನ್ನು ಅಂತರ್ಜಾಲದ ಮೀಮ್ಗಳಿಗೆ ಅನ್ವಯಿಸುವುದಾರೆ, ಇವುಗಳನ್ನು ಕೂಡ ಡಿಜಿಟಲ್ ಜಾನಪದ ಲೋಕದ ಸೃಜನಶೀಲ ಕಲಾಕೃತಿಗಳು ಎನ್ನಬಹುದು. ಈ ಕಲಾಕೃತಿಗಳ ಸ್ವರೂಪ, ವಿಚಾರ (Form and Content) ಮತ್ತು ಸಂದೇಶದ ಉದ್ದಿಶ್ಯ ಹಾಗೂ ಅಭಿರುಚಿಯ ಮಟ್ಟ ಏನೇ ಇರಬಹುದು. ಮೀಮ್ಗಳು ಸಮಕಾಲೀನ ಸಾಂಸ್ಕೃತಿಕ ಜಗತ್ತಿನ ಸೃಜನಶೀಲ ಅಭಿವ್ಯಕ್ತಿಯ ರೂಪಕಗಳಾಗಿ ಬೆಳೆದು ನಿಂತಿರುವುದನ್ನು ಒಪ್ಪಲೇಬೇಕು. ಜನಪ್ರಿಯ ಮಾಧ್ಯಮದಲ್ಲಿ ಬಂದ ವೈವಿಧ್ಯಮಯ ವಿಚಾರಗಳನ್ನು ಆಧರಿಸಿದ ಮೀಮ್ಗಳು ತಿಳಿಹಾಸ್ಯ, ವಿಡಂಬನೆಯ ಮೂಲಕ ಒಮ್ಮೆ ನಗಿಸಬಹುದು, ಇನ್ನೊಮ್ಮೆ ಆತ್ಮಸಾಕ್ಷಿಯನ್ನು ಕಲಕಬಹುದು, ಅವಡು ಕಚ್ಚುವಷ್ಟು ಸಿಟ್ಟು ತರಿಸಬಹದು ಅಥವಾ ಮತ್ತೊಮ್ಮೆ ಈ ಮೀಮ್ಗಳ ಸಮಾಜ ವಿರೋಧಿ ಮತ್ತು ಮನುಷ್ಯ ವಿರೋಧಿ ಧೋರಣೆ ರೇಜಿಗೆ ಹುಟ್ಟಿಸಲೂಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ದಿಢೀರನೆ ಸೃಷ್ಟಿಯಾಗುವ ‘ಸೋ ಬ್ಯೂಟಿಫುಲ್’ ಎನಿಸುವ ಈ ಮೀಮ್ಗಳನ್ನು ನೋಡಿ ನಕ್ಕು ಸುಮ್ಮನಾಗುವ ನಾವು, ಇಂಥ ನೂರಾರು ಮೀಮ್ಗಳು ನಮ್ಮನ್ನು ‘ನಿಷ್ಕ್ರಿಯ ಗ್ರಾಹಕ’ರನ್ನಾಗಿಸಿ ನಮಗರಿವಿಲ್ಲದಂತೆಯೇ ನಮ್ಮ ಮನೋಧರ್ಮ ಮತ್ತು ಧೋರಣೆಯನ್ನು ಮಂದಗತಿಯಲ್ಲಿ ಬದಲಿಸುವುದು ನಿರ್ಲಕ್ಷಿಸಬಹುದಾದ ವಿಚಾರವಂತೂ ಅಲ್ಲ.

ಕಲಾತ್ಮಕತೆ ಕಳೆದುಕೊಂಡ ಅಭಿವ್ಯಕ್ತಿ

ಜರ್ಮನಿಯ ಸಂಸ್ಕೃತಿ ಚಿಂತಕ ಥಿಯೋಡರ್ ಅಡೋರ್ನೋ ಪಾಪ್ ಸಂಸ್ಕೃತಿಯ ಕೆಡುಕುಗಳ ಬಗ್ಗೆ ವಿಶ್ಲೇಷಿಸುತ್ತಾ, ‘ಸಾಂಸ್ಕೃತಿಕ ಉದ್ಯಮಗಳಲ್ಲಿ ಸಾಮೂಹಿಕವಾಗಿ ತಯಾರಾಗುವ ಉತ್ಪನ್ನಗಳು ಕಲಾತ್ಮಕ ಅಥವಾ ಬೌದ್ಧಿಕ ಉದ್ದೇಶಗಳಿಗಿಂತ ಹೆಚ್ಚಾಗಿ ಸಾಮೂಹಿಕ ಮಾರಾಟ ಮತ್ತು ಲಾಭಗಳಿಕೆಯ ಉದ್ದೇಶ ಹೊಂದಿರುತ್ತವೆ. ಹೀಗಾಗಿ ಸಾಮೂಹಿಕ ಮಾರಾಟಕ್ಕೆಂದು ಮರುಸೃಷ್ಟಿಸಲಾಗುವ ಶ್ರೇಷ್ಠ ಪ್ರದರ್ಶನ ಕಲೆಗಳು, ತಮ್ಮ ಮೂಲ ಸತ್ವ ಮತ್ತು ಕಲಾತ್ಮಕತೆಯನ್ನು ಕಳೆದುಕೊಂಡಿರುತ್ತವೆ. ಇವು ಶ್ರೇಷ್ಠ ಕಲಾಭಿವ್ಯಕ್ತಿಯ ದುರ್ಬಲ ಅನುಕರಣೆಗಳಾಗಿ ಮಾತ್ರ ಉಳಿದುಬಿಡುತ್ತವೆ’ ಎನ್ನುತ್ತಾನೆ.

ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಸೃಷ್ಟಿಯಾಗುವ ಬಹುತೇಕ ಮೀಮ್ಗಳು ಅಡೋರ್ನೋನ ವಿಶ್ಲೇಷಣೆಗೆ ಪುಷ್ಟಿ ನೀಡುತ್ತವೆ. ಈ ಜನಪ್ರಿಯ ತಾಣಗಳಲ್ಲಿ ರೀಲ್ಸ್, ಶಾರ್ಟ್ಸ್ ಮಾದರಿಯಲ್ಲಿ ಮೀಮ್ಗಳನ್ನು ಸೃಷ್ಟಿಸಲು ರೆಡಿಮೇಡ್ ಮಾದರಿಗಳು, ಚಿತ್ರಗಳ ತುಣುಕುಗಳು, ಸಂಗೀತದ ಬಿಟ್ಗಳು ಲಭ್ಯವಿರುತ್ತವೆ. ಕೆಲವೊಮ್ಮೆ ಹೊಸದಾಗಿ ಸೃಷ್ಟಿಸುವ ಅವಶ್ಯಕತೆಯೂ ಇರುವುದಿಲ್ಲ. ಆದರೆ ಇಂಥ ಮರುಸೃಷ್ಟಿಯನ್ನಾಧರಿಸಿದ ನೂರಾರು ಕೆಟ್ಟ ಪುನರ್ಸೃಷ್ಟಿಗಳಿಂದಾಗಿ ಕೆಲವೊಮ್ಮೆ ಮೀಮ್ಗಳನ್ನು ಕ್ಷುಲ್ಲಕ ಅಭಿವ್ಯಕ್ತಿಯೆಂದು ಜರಿಯಬೇಕಾಗಿಬರುತ್ತದೆ. ಇವೆಲ್ಲವನ್ನು ತಮ್ಮ ಮಾರುಕಟ್ಟೆ, ವಾಣಿಜ್ಯ ವ್ಯವಹಾರಗಳ ವಿಸ್ತರಣೆಗೆ ಬಳಸಿಕೊಳ್ಳುವ ಜಾಲತಾಣ ವೇದಿಕೆಗಳ ಬಂಡವಾಳವಾದ ಗೆದ್ದರೆ, ಕಲೆ ಸೋತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.