ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಣಂತಿಗೆ ಮನೆಮದ್ದು

ಪುಷ್ಪಾ ಎನ್‌.ಕೆ.ರಾವ್
Published 26 ಜುಲೈ 2024, 23:39 IST
Last Updated 26 ಜುಲೈ 2024, 23:39 IST
ಅಕ್ಷರ ಗಾತ್ರ

ಪ್ರಸವದ ನಂತರವೂ ಬಾಣಂತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲೇಬೇಕು. ಏಕೆಂದರೆ ಅಮ್ಮನ ಆರೋಗ್ಯದಲ್ಲಿ ಏರುಪೇರಾದರೆ ಅದು ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬಾಣಂತಿಯರಿಗೆಂದೇ ವಿಶೇಷ ಮದ್ದಿನ ರೆಸಿಪಿ ನೀಡಿದ್ದಾರೆ

ಪುಷ್ಪಾ ಎನ್‌.ಕೆ.ರಾವ್

ಕೊಡಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಹುಣಸೆ, ನೆಲ್ಲಿಕಾಯಿ, ಪೇರಳೆ, ದಾಳಿಂಬೆ, ನೇರಳೆ, ನೆಲನಲ್ಲಿ ಮುಂತಾದ ಗಿಡಗಳ ಚಿಗುರುಗಳು. (ಒಗರು ಇರುವ ಯಾವುದೇ ಚಿಗುರು ಆಗುತ್ತದೆ. ಸರಿಯಾದ ಪರಿಚಯ ಇರಬೇಕು ಅಷ್ಟೇ) ಎರಡು, ಮೂರು ಬಟ್ಟಲು. ಧನಿಯಾ 2 ಚಮಚ, ಜೀರಿಗೆ 1 ಚಮಚ, ಓಮ 1 ಚಮಚ, ಕರಿಮೆಣಸು ಒಂದು ಚಮಚ ವಾಟೆ ಹುಳಿಯ ಸಿಪ್ಪೆ : ನಾಲ್ಕು. ಎಲ್ಲ ಗ್ರಂಧಿಗೆ ಅಂಗಡಿಗಳಲ್ಲಿ ದೊರೆಯುತ್ತದೆ.
ಅರಿಶಿನ: ಚಿಟಿಕೆ,  ಉಪ್ಪು: ರುಚಿಗೆ, ತುಪ್ಪ: ಒಂದು ಬಟ್ಟಲು, ಒಗ್ಗರಣೆಗೆ: ಸಾಸಿವೆ, ತುಪ್ಪ, ಉದ್ದಿನಬೇಳೆ.
 
ಮಾಡುವ ವಿಧಾನ: ಮೊದಲು ಎಲ್ಲಾ ಚಿಗುರುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಕುಕ್ಕರಿಗೆ ವಾಟೆಹುಳಿ, ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಬೇಯಿಸಿ. ಒಂದು ಬಾಣಲೆಗೆ ಧನಿಯಾ, ಜೀರಿಗೆ, ಓಮ, ಕರಿಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿ. ಒಂದು ಬಾಣಲೆಗೆ ತುಪ್ಪ ಹಾಕಿ, ಎಲ್ಲಾ ಮಿಶ್ರಣವನ್ನು ಸೇರಿಸಿ ಹದ ಬೆಂಕಿಯಲ್ಲಿ ಬಾಡಿಸಿ. ನೀರಿನ ಅಂಶ ಹೋಗುವವರೆಗೂ ಮಗಚುತ್ತಿರಿ. ಆರಿದ ನಂತರ ತೆಗೆದಿಟ್ಟು, ಉಪಯೋಗಿಸುವ ಮುನ್ನ ಸ್ವಲ್ಪ ಬಿಸಿಮಾಡಿ, ತುಪ್ಪದೊಂದಿಗೆ ಊಟ ಮಾಡಬೇಕು. ಹದಿನೈದು ದಿನ ಈ ಚಟ್ನಿಯನ್ನು, ಹದಿನೈದು ದಿನ ಬಾಳೆಹೂವಿನ ಚಟ್ನಿಯನ್ನು ಉಪಯೋಗಿಸಬೇಕು. ಒಂದೇ ದಿನ ಎರಡನ್ನೂ ಬಳಸಬಾರದು.

ಕಾಳು ಮೆಣಸಿನ ಸಾರು

ಬೇಕಾಗುವ ಸಾಮಗ್ರಿಗಳು: ಜೀರಿಗೆ ಒಂದು ಚಮಚ, ಕರಿಮೆಣಸು ಒಂದು ಚಮಚ
ಅರಿಶಿನದ ಪುಡಿ ಕಾಲು ಚಮಚ, ತುಪ್ಪ ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ: ಸಣ್ಣ ತುಂಡು, ಲಿಂಬೆ ಹಣ್ಣು ಒಂದು, ಇಂಗು ಸ್ವಲ್ಪ, ಒಗ್ಗರಣೆಗೆ ತುಪ್ಪ, ಸಾಸಿವೆ, ಕರಿಬೇವು, ಒಂದು ಬ್ಯಾಡಗಿ ಮೆಣಸು, ಇಂಗು.

ಮಾಡುವ ವಿಧಾನ: ಒಂದು ಬಾಣಲೆಗೆ ಕಾಳು ಮೆಣಸು, ಜೀರಿಗೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಅದನ್ನು ಪುಡಿ ಮಾಡಿಡಿ. ಈಗ ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಅದಕ್ಕೆ ಅರಿಶಿನ, ಉಪ್ಪು, ಬೆಲ್ಲವನ್ನು ಸೇರಿಸಿ. ನಂತರ ಕಾಳು ಮೆಣಸಿನ ಪುಡಿಯನ್ನು ಹಾಕಬೇಕು. ಬೇಕಿದ್ದರೆ ಸ್ವಲ್ಪವೇ ಸ್ವಲ್ಪ ತೊಗರಿಬೇಳೆಯನ್ನು ಬೇಯಿಸಿ ಸೇರಿಸಿಕೊಳ್ಳಬಹುದು. ನಂತರ ಇಂಗು, ಕರಿಬೇವಿನ ಒಗ್ಗರಣೆಯನ್ನು ತುಪ್ಪದ ಜೊತೆ ಹಾಕಬೇಕು. ಕೆಳಗಿಟ್ಟ ನಂತರ ಲಿಂಬೆಹಣ್ಣಿನ ರಸವನ್ನು ಹಿಂಡಬೇಕು. ಈಗ ಬಾಣಂತಿಯ ಮೆಣಸಿನ ಸಾರು ಊಟಕ್ಕೆ ಸಿದ್ಧ.

ಬಾಳೆಹೂವಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ಬಾಳೆಹೂವು ಅಥವಾ ಮೋತೆ: ದೊಡ್ಡದು, ಧನಿಯಾ 3 ಚಮಚ, ಓಮ ಕಾಳು 2 ಚಮಚ ಜೀರಿಗೆ 2 ಚಮಚ, ಕರಿಮೆಣಸು 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನಪುಡಿ: ಕಾಲು ಚಮಚ, ವಾಟೆಹುಳಿ: ಐದಾರು ಒಣಗಿಸಿದ ಹಣ್ಣಿನ ಸಿಪ್ಪೆ, ತುಪ್ಪ: ಒಂದು ಬಟ್ಟಲು, ಹೆಚ್ಚಾದರೂ ಅಡ್ಡಿಯಿಲ್ಲ.

ಮಾಡುವ ವಿಧಾನ: ಬಾಳೆಹೂವಿನ ಮೇಲಿನ ಸಿಪ್ಪೆಯನ್ನು ತೆಗೆದು ಒಳಗಿನ ಎಳೆಯ ಭಾಗವನ್ನು ಸಣ್ಣದಾಗಿ ಕತ್ತರಿಸಿ, ಒಂದು ಪಾತ್ರೆಗೆ ಹಾಕಿ, ನೀರುಹಾಕಿ. ಅದಕ್ಕೆ ಸ್ವಲ್ಪ ಎಣ್ಣೆ ಮತ್ತು ಹುಳಿಮಜ್ಜಿಗೆ ಹಾಕಿ ಕೆಲವು ಕಾಲ ಬಿಡಿ. ಅದರಲ್ಲಿದ್ದ ಒಗರಿನ ಅಂಶವೆಲ್ಲ ಹೋಗುತ್ತದೆ. ನಂತರ ಅದನ್ನು ಕುಕ್ಕರಿಗೆ ಹಿಂಡಿಹಾಕಿ. ಅದಕ್ಕೆ ಅರಸಿನ, ಉಪ್ಪು, ಮತ್ತೆ ಮೇಲೆ ಹೇಳಿದ ಮಸಾಲೆ ಸಾಮಾನುಗಳನ್ನೆಲ್ಲ ಹಾಕಿ ಎರಡು ಸೀಟಿ ಕೂಗಿಸಿ. ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ, ನುಣ್ಣಗೆ ರುಬ್ಬಿ. ಒಂದು ಬಾಣಲೆಗೆ ತುಪ್ಪ, ಸಾಸಿವೆ ಹಾಕಿ ಬಿಸಿಮಾಡಿ. ನಂತರ ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ, ಸಣ್ಣ ಉರಿಯಲ್ಲಿ ಮಗಚುತ್ತಿರಿ. ನೀರಿನ ಅಂಶ ಹೋಗುವ ತನಕ ಕೈಯಾಡಿಸುತ್ತಲೇ ಇರಿ. ಪುಡಿ ಚಟ್ನಿಯ ಹಾಗೆ ಆಗುತ್ತದೆ. ಆರಿದ ನಂತರ ಅದನ್ನು ಜಾಡಿಗೆ ಹಾಕಿ. ಬಾಣಂತಿಯು ಮೊದಲಿನ ಊಟವನ್ನು ತುಪ್ಪ ಹಾಕಿಕೊಂಡು ಅದರಲ್ಲಿಯೇ ಮಾಡಬೇಕು. ನಂತರ ಮೊಸರನ್ನವನ್ನು ಹಳೆಯದಾದ ಮಾವಿನಮಿಡಿ ಉಪ್ಪಿನಕಾಯಿ, ಲಿಂಬೆಹಣ್ಣು, ಅಥವಾ ಹೇರಳೆ ಉಪ್ಪಿನಕಾಯಿಯೊಂದಿಗೆ ಊಟ ಮಾಡಬೇಕು. ಆ ಚಟ್ನಿಯನ್ನು ಬಿಸಿಮಾಡಿ ಉಪಯೋಗಿಸುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT