ಮಹಿಳಾ ದಿನ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ, ಕಳೆದ ವಾರ ಎರಡು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರು (ಸಿಜೆಐ) ವ್ಯಕ್ತಪಡಿಸಿದ ಅಭಿಪ್ರಾಯಗಳು ತೀವ್ರ ಪ್ರತಿರೋಧಕ್ಕೆ ಗುರಿಯಾದವು. ಮೊದಲನೇ ಪ್ರಕರಣದಲ್ಲಿ, ಸಂತ್ರಸ್ತೆಯು ಬಾಲಕಿಯಾಗಿದ್ದಾಗ ಅವಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರನೊಬ್ಬನಿಗೆ ‘ಸಂತ್ರಸ್ತೆಯನ್ನು ಮದುವೆಯಾಗಲು ಸಿದ್ಧರಿದ್ದೀರಾ’ ಎಂದು ಸಿಜೆಐ ಪ್ರಶ್ನಿಸಿದ್ದರು. ಎರಡನೇ ಪ್ರಕರಣದಲ್ಲಿ, ಪತ್ನಿಯ ಒಪ್ಪಿಗೆ ಇಲ್ಲದಿದ್ದರೂ ಸಂಭೋಗಕ್ಕಾಗಿ ಪತಿಯಿಂದ ನಡೆದ ಬಲಾತ್ಕಾರದ ವಾಸ್ತವವನ್ನು ಸಂಪೂರ್ಣವಾಗಿ ಕಡೆಗಣಿಸಿದ ಸಿಜೆಐ, ‘ಇಬ್ಬರೂ ಪತಿ–ಪತ್ನಿಯಾಗಿ ಜೀವಿಸುತ್ತಿರುವಾಗ, ಪತಿ ಎಷ್ಟೇ ಕ್ರೂರನಾಗಿದ್ದರೂ ಅವರಿಬ್ಬರ ನಡುವಿನ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವೇ’ ಎಂದು ಉದ್ಗಾರವೆತ್ತಿದ ಕುರಿತು ವರದಿಯಾಗಿತ್ತು.

ನಿಸ್ಸಂದೇಹವಾಗಿ, ಪುರುಷಪ್ರಧಾನ ಮನಃಸ್ಥಿತಿಯ ಹೇಳಿಕೆಗಳು ಇವು. ಇಂತಹ ಹೇಳಿಕೆಗಳನ್ನು ಸಿಜೆಐ ಅವರು ನೀಡುತ್ತಿರುವುದು ಇದೇ ಮೊದಲೇನಲ್ಲ. ರೈತರ ಪ್ರತಿಭಟನೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ‘ಮಹಿಳೆಯರನ್ನು ಪ್ರತಿಭಟನೆಯ ಭಾಗವಾಗಲು ಬಿಟ್ಟಿರುವುದೇಕೆ’ ಎಂದು ಅವರು ಪ್ರಶ್ನಿಸಿದ್ದರು. ಮಹಿಳೆಯರನ್ನು ಮನೆಗೆ ಕಳುಹಿಸುವಂತೆ ಅವರು ಸಲಹೆ ನೀಡಿದ್ದನ್ನು ಸಹ ನಾವ್ಯಾರೂ ಮರೆತಿಲ್ಲ. ಕೋರ್ಟ್ನಲ್ಲಿ ತಾವು ನೀಡುವ ತೀರ್ಪುಗಳು ಮಾತ್ರವಲ್ಲ, ಉಲ್ಲೇಖಿಸುವ ಮಾತುಗಳೂ ಜನಾಭಿಪ್ರಾಯವನ್ನು ಪ್ರಭಾವಿಸುತ್ತವೆ ಎನ್ನುವುದನ್ನು ಸಿಜೆಐ ಅವರು ನೆನಪಿಟ್ಟುಕೊಳ್ಳುವುದು ಒಳಿತು.

ಸಮಾಜದ ದೋಷಗಳಿಗೆ ಕನ್ನಡಿಯನ್ನು ಹಿಡಿಯುತ್ತಾ, ಅದರ ಪರಿವರ್ತನೆಗೆ ಕಾರಣವಾಗುವ ಹೊಣೆ ಸುಪ್ರೀಂ ಕೋರ್ಟ್ ಹಾಗೂ ಈ ನೆಲದ ಕಾನೂನಿನ ಮೇಲಿದೆ. ಸಂವಿಧಾನವನ್ನು ಜಾರಿಗೆ ತಂದಿದ್ದಾದರೂ ಇಂತಹ ಪರಿವರ್ತನೆಯನ್ನು ತರುವ ಉದ್ದೇಶದಿಂದಲೇ. ಹೌದು, ಸಮಾಜದಲ್ಲಿ ಬೇರೂರಿರುವ ಪುರುಷಪ್ರಧಾನ ಮನಃಸ್ಥಿತಿಯನ್ನು ಹೋಗಲಾಡಿಸಿ ಲಿಂಗತ್ವ ಸಮಾನತೆಯನ್ನು ಸಾಧಿಸುವುದು ಸಂವಿಧಾನದ ಮೂಲ ಉದ್ದೇಶಗಳಲ್ಲಿ ಒಂದು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ನಮ್ಮ ವ್ಯವಸ್ಥೆ ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಉತ್ತೇಜಿಸುವ ಪುರುಷಪ್ರಧಾನ ಮನಃಸ್ಥಿತಿಗೆ ಮರಳುತ್ತಿರುವುದು ದುರದೃಷ್ಟಕರ.

ಲಿಂಗತ್ವ ಸಮಾನತೆಯ ವಿಷಯವನ್ನು ಕೋರ್ಟ್ಗಳು ಹಾಗೂ ಕಾನೂನುಗಳು ಯಾವ ರೀತಿ ನಿಭಾಯಿಸುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮೂರು ಎಳೆಗಳನ್ನು ಹಿಡಿದು ನೋಡೋಣ. ಅವುಗಳೆಂದರೆ– ಹೆಣ್ಣಿನ ಕುರಿತ ಪೂರ್ವಗ್ರಹಪೀಡಿತ ಮನೋಭಾವ ಮತ್ತು ಘನತೆಯಿಂದ ಜೀವಿಸುವ ಹಕ್ಕು; ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಘನತೆಯ ಮೂಲಭೂತ ಹಕ್ಕು; ಘನತೆ ಮತ್ತು ಸುರಕ್ಷತೆಯಿಂದ ಕೆಲಸ ಮಾಡುವ ಹಕ್ಕು.

ಮೊದಲು ಹೆಣ್ಣಿನ ಕುರಿತ ಪೂರ್ವಗ್ರಹಪೀಡಿತ ಮನೋಭಾವ ಮತ್ತು ಘನತೆಯಿಂದ ಜೀವಿಸುವ ಹಕ್ಕಿನ ವಿಷಯವನ್ನೇ ತೆಗೆದುಕೊಳ್ಳೋಣ. ಮೇಲೆ ಉಲ್ಲೇಖಿಸಿದ ಮೂರೂ ಪ್ರಕರಣಗಳಲ್ಲಿ ಹೆಣ್ಣಿನ ಕುರಿತ ಪೂರ್ವಗ್ರಹಗಳು ಮತ್ತಷ್ಟು ಆಳವಾಗಿ ಬೇರೂರಿರುವುದು ಎದ್ದು ಕಾಣುತ್ತದೆ. ಮಹಿಳೆಯರೆಂದರೆ ದುರ್ಬಲರು, ಅವರನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ ಹಾಗೂ ಪುರುಷರಿಗೆ ಇರುವ ಸ್ವಾಯತ್ತತೆಯಾಗಲೀ ವ್ಯಕ್ತಿತ್ವವಾಗಲೀ ಅವರಿಗೆ ಇಲ್ಲ ಎನ್ನುವುದು ಅವುಗಳ ಆಳದಲ್ಲಿರುವ ಪ್ರತಿಪಾದನೆಯಾಗಿದೆ.

ಹೆಣ್ಣಿನ ಕುರಿತ ಪೂರ್ವಗ್ರಹಪೀಡಿತ ವಿಚಾರಗಳಿಗೆ ಮಣೆ ಹಾಕುವುದರಿಂದ ಆಗುವ ಅನಾಹುತಗಳ ಕುರಿತು ಕೋರ್ಟ್ಗಳಿಗೆ ಚೆನ್ನಾಗಿ ಅರಿವಿದೆ. ಇಂತಹ ಪೂರ್ವಗ್ರಹಗಳಿಗೆ ಉತ್ತೇಜನಕಾರಿಯಾಗಿದ್ದ ಹಲವು ಕಾನೂನುಗಳನ್ನು ಅನೂರ್ಜಿತಗೊಳಿಸಿದ ಉದಾಹರಣೆಗಳೂ ಇವೆ. ಹೀಗಿದ್ದೂ, ಲಿಂಗ ತಾರತಮ್ಯಕ್ಕೆ ಕಾರಣವಾಗುವ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವುದು ಆಶ್ಚರ್ಯಕರ.

2007ರಲ್ಲಿ ‘ಅನೂಜ್ ಗರ್ಗ್ ಮತ್ತು ಇತರರು ವಿರುದ್ಧ ಭಾರತೀಯ ಹೋಟೆಲ್ಗಳ ಒಕ್ಕೂಟ ಮತ್ತು ಇತರರು’ ಪ್ರಕರಣದಲ್ಲಿ, ಬಾರ್ಗಳಲ್ಲಿ ಮಹಿಳೆಯರಿಗೆ ಉದ್ಯೋಗವನ್ನು ನಿರ್ಬಂಧಿಸಿದ್ದ ಕಾನೂನನ್ನು ಪ್ರಶ್ನಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಬಾರ್ಗಳಲ್ಲಿ ಮಹಿಳೆಯರಿಗೆ ಉದ್ಯೋಗವನ್ನು ನಿರ್ಬಂಧಿಸುವ ಬದಲು, ಅಲ್ಲಿ ಅವರಿಗೆ ಸುರಕ್ಷತೆಯನ್ನು ಒದಗಿಸುವುದು ಸರ್ಕಾರದ ಕರ್ತವ್ಯ; ಜೊತೆಗೆ ಅವರು ಬಯಸುವ ವೃತ್ತಿಯಲ್ಲಿನ ಕರ್ತವ್ಯವನ್ನು ನಿಶ್ಚಿಂತೆಯಿಂದ ನಿಭಾಯಿಸಲು ಮಹಿಳೆಯರಲ್ಲಿ ದೃಢವಿಶ್ವಾಸವನ್ನು ತುಂಬುವುದು ಅವುಗಳ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟು, ಆ ಕಾನೂನನ್ನು ಅನೂರ್ಜಿತಗೊಳಿಸಿತ್ತು. ಇದೇ ರೀತಿ 2018ರಲ್ಲಿ, ಮಹಿಳೆಯು ವಿವಾಹೇತರ ಸಂಬಂಧ ಹೊಂದಿದರೆ ಅದು ವ್ಯಭಿಚಾರ ಎನಿಸಿಕೊಳ್ಳುವುದಲ್ಲದೆ ಅಪರಾಧವಾಗಿದೆ ಎನ್ನುತ್ತಿದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಮದುವೆಯಾದ ಮಹಿಳೆಯ ವೈಯಕ್ತಿಕ ಅಸ್ತಿತ್ವವನ್ನೇ ಈ ವಿಧಿ ಅಲ್ಲಗಳೆಯುತ್ತದೆ. ಜೊತೆಗೆ ಮಹಿಳೆಯು ತನ್ನ ಗಂಡನ ಆಸ್ತಿ ಎನ್ನುವ ಸಾಮಾಜಿಕ ಪೂರ್ವಗ್ರಹವನ್ನು ಬಲಪಡಿಸುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು.

ಶಬರಿಮಲೆ ಪ್ರಕರಣದಲ್ಲಿ, ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಮಹಿಳೆಯರೆಂದರೆ ದುರ್ಬಲರು, ಅಪವಿತ್ರರು ಮತ್ತು ಕೀಳು ಮನುಷ್ಯರು ಎನ್ನುವ ಪೂರ್ವಗ್ರಹದ ಆಧಾರದ ಮೇಲೆ ಈ ನಿರ್ಬಂಧವನ್ನು ವಿಧಿಸಲಾಗಿತ್ತು ಎನ್ನುವುದನ್ನು ಈ ತೀರ್ಪಿನಲ್ಲಿ ಗುರುತಿಸಲಾಗಿತ್ತು.

ಘನತೆ, ಗೌರವದೊಂದಿಗೆ ಬದುಕುವ ಹಕ್ಕು ಸಾಕಾರಗೊಳ್ಳಲು, ಹೆಣ್ಣಿನ ಕುರಿತ ಪೂರ್ವಗ್ರಹಗಳನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕು. ಜೊತೆಗೆ, ಇತ್ತೀಚಿನ ದಿನಗಳಲ್ಲಿ ನಮ್ಮ ವ್ಯವಸ್ಥೆಯು ಪುರುಷಪ್ರಧಾನ ಮನಃಸ್ಥಿತಿಗೆ ಮರಳುತ್ತಿರುವುದನ್ನು ಸಂವಿಧಾನ ನೀಡಿದ ಸಮಾನತೆಯ ಭರವಸೆಗೆ ವಿರುದ್ಧವಾಗಿಯೇ ಕಾಣಬೇಕು.

ಮಹಿಳೆ, ಅದು ಪತ್ನಿಯಾಗಿರಲಿ, ಅಕ್ಕ–ತಂಗಿಯಾಗಿರಲಿ ಅಥವಾ ಮಗಳಾಗಿರಲಿ ಇವರೆಲ್ಲರೂ ಅಧೀನದಲ್ಲಿದ್ದಾರೆ ಹಾಗೂ ಗುಲಾಮರು ಎನ್ನುವ ಆಧಾರದಲ್ಲೇ ‘ಮರ್ಯಾದೆಗೇಡು ಹತ್ಯೆ’ಗಳು ನಡೆಯುತ್ತಿವೆ ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಹೇಳಿತ್ತು. ‘ಸದಾ ಇಂತಹ ಚೌಕಟ್ಟಿನಲ್ಲಿ ಚಲಿಸುವ ವ್ಯಕ್ತಿಗಳು ಯಾವುದೇ ವೈಯಕ್ತಿಕ ಸ್ವಾತಂತ್ರ್ಯ, ಬಯಕೆ ಮತ್ತು ಗುರುತನ್ನು ಹೊಂದಿರುವುದಿಲ್ಲ’ ಎಂದೂ ಅಭಿಪ್ರಾಯಪಟ್ಟಿತ್ತು. ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸರಣಿ ನಿರ್ದೇಶನಗಳನ್ನೂ ನೀಡಿತ್ತು.

ಸಂವಿಧಾನದಡಿ ರಕ್ಷಿಸಲ್ಪಡುವ ಜೀವಿಸುವ ಹಕ್ಕಿನಡಿ ಬರುವ ಸ್ವಾಯತ್ತೆ ಎಂಬ ಮೂಲಭೂತ ಹಕ್ಕಿನ ಕುರಿತುಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಹಲವು ತೀರ್ಪುಗಳಲ್ಲಿ ದೀರ್ಘವಾದ ವಿವರಣೆಯನ್ನು ನೀಡಿತ್ತು. ಅದರಲ್ಲಿ ಹಾದಿಯಾ ಪ್ರಕರಣದ (ಶಫಿ ಜಹಾನ್ ವಿರುದ್ಧ ಕೆ.ಎಂ.ಅಶೋಕನ್) ತೀರ್ಪು ಗಮನಾರ್ಹವಾದುದು. ಈ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಮದುವೆಯನ್ನೇ ಅನೂರ್ಜಿತಗೊಳಿಸಿತ್ತು. ತಾನಾಗಿಯೇ ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಆಕೆ ಅಶಕ್ತೆ. ಪಾಲಕರೇ ಅವಳ ಭವಿಷ್ಯದ ತೀರ್ಮಾನವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ವೈಯಕ್ತಿಕ ಘನತೆಯ ಮೂಲದಲ್ಲಿ ವ್ಯಕ್ತಿಯ ಸ್ವಾಯತ್ತತೆ ಇದೆ ಎಂದು ಉಲ್ಲೇಖಿಸಿತ್ತು. ಪ್ರೀತಿಸಲು ಮಹಿಳೆಗೆ ಇರುವ ಹಕ್ಕನ್ನು ನಿರ್ಬಂಧಿಸುವ ಪ್ರಯತ್ನಗಳಿಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಈ ಹಕ್ಕನ್ನು ನಿರ್ಬಂಧಿಸುವುದು ಪುರುಷಪ್ರಧಾನ ರೂಢಿಯ ಮೂಲ ಹಾಗೂ ಮಹಿಳೆಯರು ಗುಲಾಮರು ಮತ್ತು ಅವರನ್ನು ನಿಯಂತ್ರಿಸಬೇಕು ಎನ್ನುವ ನಂಬಿಕೆಯೇ ಮೂಲ ಎಂದು ಹೇಳಿತ್ತು.

ಇಷ್ಟೆಲ್ಲ ತೀರ್ಪುಗಳ ಬಲ, ಶಿಕ್ಷೆಯ ನಡುವೆಯೂ ದಿನನಿತ್ಯ ಅತ್ಯಾಚಾರ, ಮರ್ಯಾದೆಗೇಡು ಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಗಂಭೀರ ವಿಷಯಗಳ ಕುರಿತು ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಮರ್ಯಾದೆಗೇಡು ಹತ್ಯೆಗಳನ್ನು ಎತ್ತಿಹಿಡಿಯುವಂತಹ ‘ಖಾಪ್ ಪಂಚಾಯಿತಿ’ಯಂತೆ ಪಾತ್ರವಹಿಸುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆ 2020 ಜಾರಿಗೆ ತಂದಿದ್ದು, ಪ್ರೀತಿಯನ್ನು ಅಪರಾಧ ಎನ್ನುವಂತೆ ಬಿಂಬಿಸಿದೆ. ಜೊತೆಗೆ ಇದು ವೈಯಕ್ತಿಕ ಸ್ವಾಯತ್ತತೆಯ ಮೇಲಿನ ದಾಳಿಯಾಗಿದೆ. ಇಂತಹ ಕಾನೂನನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಇಲ್ಲಿನ ಸರ್ಕಾರ ಉತ್ಸುಕವಾಗಿದೆ.

ಘನತೆಯಿಂದ ಕೆಲಸ ಮಾಡುವ ಹಕ್ಕು: ಘನತೆಯಿಂದ ಬದುಕುವ ಹಕ್ಕಿನ ಪರಿಧಿಯಲ್ಲೇ ಘನತೆಯಿಂದ ಕೆಲಸ ಮಾಡುವ ಹಕ್ಕು ಸಹ ಸೇರಿದ್ದು, ’ವಿಶಾಖಾ ವಿರುದ್ಧ ರಾಜಸ್ಥಾನ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಇದನ್ನು ಅತ್ಯಂತ ಸ್ಪಷ್ಟವಾಗಿ ಎತ್ತಿತೋರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಷ್ಟೊಂದು ತ್ವರಿತವಾಗಿ ಪರಿಗಣಿಸಲು ಕಾರಣ, ಆಗಷ್ಟೇ ನಡೆದಿದ್ದ ದಲಿತ ಮಹಿಳೆ ಭನ್ವರಿ ದೇವಿ ಅವರ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಪ್ರಕರಣ. ಪ್ರಬಲ ಕೋಮಿನ ಬಾಲ್ಯವಿವಾಹವನ್ನು ತಡೆದ ತಪ್ಪಿಗೆ, ಆ ಕೋಮಿನ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಅವರ ಗಂಡನ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಈ ಘಟನೆಯು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿಷಯವನ್ನು ಮುಂಚೂಣಿಗೆ ತಂದಿತ್ತು.

ವಿಶಾಖಾ ಪ್ರಕರಣದಲ್ಲಿ, ಈ ರೀತಿಯ ಪ್ರತಿಯೊಂದು ಘಟನೆಯೂ ಸಂವಿಧಾನದತ್ತ ಮೂಲಭೂತ ಹಕ್ಕುಗಳಾದ ‘ಲಿಂಗ ಸಮಾನತೆ’ ಹಾಗೂ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಗುರುತಿಸಿದೆ. ಘನತೆಯಿಂದ ಕೆಲಸ ಮಾಡುವ ಹಕ್ಕು ಮತ್ತು ಲೈಂಗಿಕ ಕಿರುಕುಳದಿಂದ ರಕ್ಷಣೆ – ಇವುಗಳಿಂದ ಮಾತ್ರ ಲಿಂಗ ಸಮಾನತೆಯನ್ನು ಸಾಧಿಸಬಹುದು ಎಂಬ ನಿಲುವು ತಾಳಿದ ಕೋರ್ಟ್, ಕೆಲಸದ ಸ್ಥಳದಲ್ಲಿ ಮಹಿಳೆಯರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರಣಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ವಿಪರ್ಯಾಸವೆಂದರೆ, ದಲಿತ ಮಹಿಳೆಯ ಹೋರಾಟದಿಂದಾಗಿಯೇ ‘ವಿಶಾಖಾ ಪ್ರಕರಣ’ದಲ್ಲಿ ಮಹತ್ವದ ತೀರ್ಪು ಬಂದರೂ ಅದರ ಪ್ರಯೋಜನ ದೇಶದ ಬಹುಪಾಲು ಮಹಿಳೆಯರಿಗೆ, ಅದರಲ್ಲೂ ದಲಿತ ಮಹಿಳೆಯರಿಗೆ ಸಿಗದಂತಾಗಿರುವುದು. ವೃತ್ತಿಗೆ ಸಂಬಂಧಿಸಿದ ತಾರತಮ್ಯದ ನೋಟವೇ ಇಂತಹ ತೀರ್ಪುಗಳಿಗೆ ಕಾರಣ. ದೇಶದಲ್ಲಿ ಶೇ 94ರಷ್ಟು ಹೆಚ್ಚು ಮಹಿಳಾ ಉದ್ಯೋಗಿಗಳು ಅಸಂಘಟಿತರಾಗಿದ್ದಾರೆ. ಪೌರಕರ್ಮಿಕರು, ಗಾರ್ಮೆಂಟ್ ಕಾರ್ಮಿಕರು ಮತ್ತು ಮನೆಗೆಲಸದವರು ಸೇರಿದಂತೆ ವಿವಿಧ ವಲಯಗಳಲ್ಲಿ ಅವರು ‘ಅದೃಶ್ಯ’ರಾಗಿ ಇದ್ದಾರೆ. ಈ ಕಾರ್ಮಿಕರು, ಮಹಿಳೆಯರು, ತುಳಿತಕ್ಕೊಳಗಾದ ವರ್ಗಗಳಿಗೆ ಸೇರಿದವರು ಮತ್ತು ಹೆಚ್ಚಾಗಿ ತುಳಿತಕ್ಕೊಳಗಾದ ಜಾತಿಗಳಿಗೆ ಸೇರಿದವರಾಗಿದ್ದು ಮೂರೂ ಆಯಾಮಗಳಿಂದಲೂ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ.

ಮಹಿಳಾ ಕಾರ್ಮಿಕರ ಕೆಲಸದ ವಾತಾವರಣ ನೋಡಿ. ಅವರಿಗೆ ಅಧಿಕೃತವಾಗಿ ಸಿಗಬೇಕಾದಷ್ಟು ಕನಿಷ್ಠ ವೇತನವೂ ಸಿಗುವುದಿಲ್ಲ. ಕೆಲಸದ ಸಮಯ ದೀರ್ಘವಾಗಿರುತ್ತದೆ. ಸುರಕ್ಷತೆ ಇರುವುದಿಲ್ಲ. ಲೈಂಗಿಕ ಕಿರುಕುಳ ಕೂಡ ಸಾಮಾನ್ಯವಾಗಿರುತ್ತದೆ. ಘನತೆಯಿಂದ ಕೆಲಸ ಮಾಡುವ ಅವರ ಹಕ್ಕನ್ನು ದಶಕಗಳಿಂದಲೂ ಕಸಿಯುತ್ತಾ ಬರಲಾಗಿದೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ನ್ಯಾಷನಲ್ ಯೂನಿಯನ್ ಆಫ್ ವಾಟರ್ಫ್ರಂಟ್ ವರ್ಕರ್ಸ್ (2001) ಹಾಗೂ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ವಿರುದ್ಧ ಉಮಾದೇವಿ (2006) ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಎರಡು ಆದೇಶಗಳು ಲಕ್ಷಾಂತರ ಗುತ್ತಿಗೆ ಹಾಗೂ ದೈನಂದಿನ ಕೂಲಿ ಕಾರ್ಮಿಕರ ಪಾಲಿಗೆ ‘ಶಿಕ್ಷೆ’ ಎನಿಸಿದವು. ಅವರ ಸಾಂಸ್ಥಿಕ ಶೋಷಣೆಗೂ ದಾರಿ ಮಾಡಿಕೊಟ್ಟವು. ಈ ಎರಡೂ ತೀರ್ಪುಗಳು, ಮಹಿಳೆಯರ ದೃಷ್ಟಿಕೋನದಿಂದ ಇವು ತೀರ್ಪುಗಳೇ ಅಲ್ಲ, ಭಾರತದ ಮಹಿಳಾ ಉದ್ಯೋಗ ಬಲದ ಮೇಲೆ ಗಂಭೀರವಾದ ಪರಿಣಾಮವನ್ನೂ ಬೀರಿದವು. ಘನತೆಯಿಂದ ಕೂಡಿರದ ಕೆಲಸದ ವಾತಾವರಣದ ಕುರಿತು ಅವರು ಧ್ವನಿ ಎತ್ತದಂತೆ ಮಾಡಿದವು. ಅದರ ಪರಿಣಾಮವೇ ಸಾಮಾಜಿಕ ಹಾಗೂ ಆರ್ಥಿಕವಾಗಿ ಅವರು ಪ್ರಗತಿ ಸಾಧಿಸಲಾಗದೆ, ಇದ್ದಲ್ಲೇ ಉಳಿಯುವಂತಾಯಿತು.

ಭಾರತೀಯ ಸಮಾಜವು ಹೆಣ್ಣನ್ನು ಲಿಂಗ ತಾರತಮ್ಯದಿಂದ ನೋಡುತ್ತದೆ. ಪೂರ್ವಗ್ರಹಗಳು, ದಬ್ಬಾಳಿಕೆ ಮನೋಭಾವಗಳು ತುಂಬಿಹೋಗಿವೆ. ಒಡೆದು ಹೋಗಿರುವ ಸಮಾಜವನ್ನು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಆಧಾರದ ಮೇಲೆ ಒಂದುಗೂಡಿಸುವ ಆಶಯವನ್ನು ಸಂವಿಧಾನ ಹೊಂದಿದೆ. ಸಂವಿಧಾನದ ಈ ಆಶಯಗಳನ್ನು ಅನುಷ್ಠಾನಕ್ಕೆ ತರುವುದೆಂದರೆ ಆಳವಾಗಿ ಬೇರೂರಿರುವ ಶ್ರೇಣಿಕೃತ ವ್ಯವಸ್ಥೆಗೆ ಸವಾಲು ಹಾಕುವುದು. ಈ ಶ್ರೇಣಿಕೃತ ವ್ಯವಸ್ಥೆ ಲಿಂಗ, ವರ್ಗ ಹಾಗೂ ಜಾತಿ ತಾರತಮ್ಯ ಎಲ್ಲದರಲ್ಲೂ ಹರಡಿದೆ. ಮಹಿಳೆಯು ಸಮಾನತೆ ಸಾಧಿಸುವಂತಾಗಲು ಆಕೆ ಇದುವರೆಗೆ ಎದುರಿಸುತ್ತಾ ಬಂದಿರುವ ಲಿಂಗ, ವರ್ಗ ಹಾಗೂ ಜಾತಿ ತಾರತಮ್ಯ –ಮೂರಕ್ಕೂ ಸುಪ್ರೀಂ ಕೋರ್ಟ್ ಮದ್ದು ಅರೆಯಬೇಕಿದೆ.ಶಬರಿಮಲೆ ದೇವಸ್ಥಾನದ ಪ್ರವೇಶಕ್ಕೆ ಕೋರ್ಟ್ ಏನೋ ಮಹಿಳೆಯರಿಗೆ ಅವಕಾಶ ಕಲ್ಪಿಸಿತು. ಆದರೆ, ಕೋರ್ಟ್ ಆದೇಶವನ್ನೇ ರಾಜಾರೋಷವಾಗಿ ಉಲ್ಲಂಘಿಸಲಾಯಿತು. ಅಲ್ಲದೆ, ಅದರ ವಿರುದ್ಧ ಕೋರ್ಟ್ಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೋರ್ಟ್ ಆದೇಶಗಳು ಸರಿಯಾಗಿ ಪಾಲನೆಯಾಗಲು ಸರ್ಕಾರ ಹಾಗೂ ಜನರ ಇಚ್ಛಾಶಕ್ತಿಯೂ ಮುಖ್ಯ. ಆದ್ದರಿಂದಲೇ ಚಳವಳಿಗಳು, ಹೋರಾಟಗಳು ಸಾಮಾಜಿಕ ಪರಿವರ್ತನೆಯನ್ನು ತಂದು, ನೈಜ ಪ್ರಜಾಪ್ರಭುತ್ವ ಸಮಾಜ ನಿರ್ಮಿಸುವ ಶಕ್ತಿ ಹೊಂದಿವೆ ಎಂಬುದನ್ನು ಒತ್ತಿ ಹೇಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.