ಕಪ್ಪುಬಣ್ಣದ ಬುರ್ಖ ಧರಿಸಿ, ಮುಖಮಾತ್ರ ಕಾಣುವಂತೆ ತಲೆಗೂ ಕಪ್ಪು ಬಟ್ಟೆ ಸುತ್ತಿದ್ದ ಅಜ್ಜಿ ತನ್ನ ಮೊಮ್ಮಗನಿಗೆ ಸೀಟಿನ ಬೆಲ್ಟು ಭದ್ರಪಡಿಸುವಂತೆ ಹೇಳುತಿತ್ತು. ಅವರಿಬ್ಬರ ಮಾತನ್ನು ಗಮನಿಸಿದಾಗ ಅದು ಅಭಾರತೀಯವೆಂದು ಅನ್ನಿಸಿ, ಒಂದು ಅಂದಾಜಿನಮೇಲೆ ಅರೆಬಿಕ್ ಇರಬೇಕೆಂದು ತೀರ್ಮಾನಿಸಿದೆ.

ಗಗನಸಖಿ ಬಂದು ಆ ಅಜ್ಜಿಯನ್ನು ತಿಂಡಿಗೆ ಏನು ಬೇಕೆಂದು ಇಂಗ್ಲಿಷ್, ಹಿಂದಿ ಎರಡು ಭಾಷೆಯಲ್ಲಿ ಕೇಳಿದಾಗಲೂ ಅಜ್ಜಿಗೆ ಅರ್ಥವಾಗಲಿಲ್ಲ. ನಾನು ಗಗನಸಖಿಯ ಹತ್ತಿರ, ‘ಅವರಿಗೆ ಇಂಗ್ಲಿಷ್ -ಹಿಂದಿ ಎರಡೂ ಬಾರದು. ಮಾತನಾಡುವುದನ್ನು ನೋಡಿದರೆ ಅರೆಬಿಕ್ ಇರಬೇಕು’ ಅನಿಸುತ್ತದೆ ಎಂದೆ.

ನನ್ನ ಮಾತನ್ನು ಕೇಳಿಸಿಕೊಂಡ ಅಜ್ಜಿ, ‘ಯೆಮೆನ್’ ಎಂದಳು. ಆಗಲೇ ತಿಳಿದದ್ದು ಅಜ್ಜಿ ಯಮೆನ್ ದೇಶದವಳೆಂದು. ಅವರಿಗೆ ಸಸ್ಯಾಹಾರಿ ತಿಂಡಿಯೋ ಅಥವಾ ಆಮ್ಲೇಟ್ ಕೊಡುವುದೋ ಎಂದು ಗಗನಸಖಿಗೆ ಅನುಮಾನವಾಗಿತ್ತು. ಕೊನೆಗೆ ‘ತೊಂದರೆಯೇ ಬೇಡ ಸರ್, ಸಸ್ಯಾಹಾರವನ್ನೇ ಕೊಡುತ್ತೇನೆ’ ಎಂದಳು. ನಾನು ‘ಸರಿ’ ಎಂದೆ. ಅಷ್ಟುಹೊತ್ತಿಗಾಗಲೇ ನಾವಿಬ್ಬರೂ ಅಜ್ಜಿಯ ಬಗ್ಗೆಯೇ ಮಾತನಾಡುತ್ತಿದ್ದೇವೆ ಎಂದು ಆಕೆಗೆ ತಿಳಿಯಿತು.

ಅಜ್ಜಿ, ನನ್ನನ್ನು ನೋಡಿ, ಅವರ ಭಾಷೆಯಲ್ಲಿ ಏನೋ ಹೇಳಿ ಧನ್ಯವಾದ ಹೇಳುವಂತೆ ಮುಖ ಮಾಡಿದಳು. ಗಗನಸಖಿ ಕೊಟ್ಟ ತಿಂಡಿಯ ಪೊಟ್ಟಣದಲ್ಲಿದ್ದ ಸಾಂಬಾರಿನಲ್ಲಿ ಮುಳುಗಿದ್ದ ಇಡ್ಲಿ ಮೊಮ್ಮಗನಿಗೆ ವಿಚಿತ್ರವಾಗಿ ತೋರುತ್ತಿತ್ತು. ಅವನು, ಇದು ನನಗೆ ಬೇಡವೆಂದ. ಅಜ್ಜಿ ನನ್ನನ್ನು ತಿವಿದು, ‘ನೀನು ಇದನ್ನು ತಿನ್ನು’ ಎನ್ನುವಂತೆ ಅವಳ ಭಾಷೆಯಲ್ಲಿ ಹೇಳಿದಳು. ನಾನು ನಗುತ್ತಲೇ ಬೇಡವೆಂದೆ. ಆದರೆ ವಿಮಾನದಲ್ಲಿ ಸಹಪ್ರಯಾಣಿಕರು ಎಂದೂ ನಡೆದುಕೋಳ್ಳದ ರೀತಿಯಲ್ಲಿ, ಅಜ್ಜಿ ಅವಳ ಮೊಮ್ಮಗನ ತಂಡಿಯ ಪೋಟ್ಟಣವನ್ನು ನನಗೆ ಕೊಟ್ಟಿದ್ದಳು. ಆಗಲೇ ನನಗೆ ಅನ್ನಿಸಿದ್ದು, ನನಗಾಗಲಿ ಅಥವಾ ಅವಳ ಮೊಮ್ಮಗನಿಗಾಗಲಿ ಅವಳು ಅಜ್ಜಿಯೇ ಎಂದು.

ನಮ್ಮಜ್ಜಿಯನ್ನು, ‘ನೀನು ಅಡುಗೆ ಮಾಡೋದನ್ನ ಹೇಗೆ ಕಲಿತೆ ಅಜ್ಜಿ’ – ಎಂದು ನಾನು ಹಲವು ಬಾರಿ ಕೇಳಿದಾಗಲೂ, ಅವಳು ಅದನ್ನೇ ಹೇಳಿದ್ದಳು. ‘ಅಡುಗೆ ಮಾಡೋದು ಏನು ಬ್ರಹ್ಮವಿದ್ಯೆನೆ? ನನಗೆ ಮದುವೆ ಆದಾಗ ಹನ್ನೆರಡು ವರ್ಷ, ನಿಮ್ಮ ತಾತನಿಗೆ ಹದಿನಾರು. ನಾನು ಅವರ ಮನೆಗೆ ಹೋಗಿ ಎರಡು ದಿನವಾಗಿತ್ತು, ನಮ್ಮತ್ತೆ ಅಡುಗೆ ಮಾಡುಕ್ಕೆ ಎಷ್ಟು ಹಾಕಬೇಕು ಅಂತ ತೋರಿಸಿದ್ರು. ಅಡುಗೆ ಮಾಡಿದೆ.

ಮಾರನೆಯ ದಿನ ಎಷ್ಟು ಹಾಕಲಿ ಅಂತ ಕೇಳಿದ್ದಕ್ಕೆ, ನಿನ್ನೆ ತೋರಿಸಿದಷ್ಟೇ ಹಾಕು ಅಂತ ನಮ್ಮತ್ತೆ ಹೇಳಿದ್ರು. ಹಾಗೆ ಮಾಡಿದೆ; ಅಡುಗೆ ರುಚಿಯಾಗಿಯೇ ಆಯಿತು.’ ಈಗ ನನಗೆ ಕುತೂಹಲ ಹೆಚ್ಚಾಯಿತು. ‘ಆದ್ರೂ, ಅರವತ್ತು ಅರವತ್ತೈದು ವರ್ಷದಿಂದ ಮಾಡುತ್ತಿದ್ದರೂ ಹೇಗೆ ಒಂದೇ ಒಂದು ಚೂರಷ್ಟು ಕೂಡ ರುಚಿಯಲ್ಲಿ ಬದಲಾವಣೆ ಆಗಿಲ್ಲ, ಹಾಗೇ ಇದೆಯಲ್ಲ’ ಅಂದೆ. ಅಜ್ಜಿಗೆ ಇದು ಅಷ್ಟೇನೂ ವಿಶೇಷ ಅಂತ ಅನ್ನಿಸಲಿಲ್ಲ. ‘ಊಟ ಮಾಡೋರಿಗೆ ತೃಪ್ತಿ ಆದರೆ ಅಡುಗೆ ಮಾಡಿದ್ದಕ್ಕೂ ಸಾರ್ಥಕ ಅಲ್ವೇ? ಅದು ಮನಸ್ಸಲ್ಲಿದ್ರೆ ಅಡುಗೆ ಯಾವಾಗಲೂ ಒಂದೇ ಥರ ಆಗುತ್ತೆ’ ಅಂದಳು.

‘ಆದರೂ ಅಜ್ಜಿ, ಆಗೆಲ್ಲಾ ಅಷ್ಟು ದೊಡ್ಡ ಮನೆ, ಸಂಸಾರ, ನಿನಗೆ ಕೆಲಸ ಕಷ್ಟ ಅಂತ ಯಾವತ್ತೂ ಅನ್ನಿಸಲೇ ಇಲ್ವಾ?’ ನನ್ನ ಕುತೂಹಲ ಬೇರೆಡೆಗೆ ತಿರುಗಿತ್ತು. ‘ಕಷ್ಟ ಅಂತ ಯಾವತ್ತೂ ಅನ್ನಿಸ್ಲೇ ಇಲ್ಲ. ಬೆಳಗ್ಗೆ ಎದ್ದು ಮಡಿ ಉಟ್ಕೋಂಡು ದೇವರ ಮನೇಲಿ ನಮ್ಮತ್ತೆ ಪೂಜೆ ಮಾಡುಕ್ಕೆ ಅಣಿ ಮಾಡಿ ಅಡುಗೇಗೆ ಇಡ್ತಿದ್ದೆ. ಅಡುಗೆ ಆಗೋ ಹೊತ್ತಿಗೆ ಗಂಡಸರು ಮಕ್ಕಳೆಲ್ಲ ಊಟಕ್ಕೆ ಬರೋರು.

ಅವರು ಊಟ ಮಾಡಿದಮೇಲೆ ನಾನು ಊಟ ಮಾಡಿ, ಬಟ್ಟೆ ಒಗೆಯುಕ್ಕೆ ಹೊಳೆಗೆ ಹೋಗ್ತಿದ್ದೆ. ಬಟ್ಟೆ ಒಗೆದು ಅದನ್ನ ಬುಟ್ಟಿಲಿ ಹಾಕ್ಕೊಂಡು ಒಂದು ಕೊಡ ನೀರು ತಗೊಂಡು ಬರೋ ಹೊತ್ತಿಗೆ ಮಕ್ಕಳು ಸ್ಕೂಲಿಂದ ಬರೋವು. ಅವಕ್ಕೆ ಕಾಫಿ ತಿಂಡಿ ಮಾಡಿಕೊಟ್ಟು, ನಾನು ಹೂಬತ್ತಿ ಮಾಡೋದು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿಯ ಕೆಲಸ ಮಾಡ್ತಿದ್ದೆ. ಅಷ್ತುಹೊತ್ತಿಗೆ ಸಂಜೆ ಆಗ್ತಿತ್ತು.

ಮಕ್ಕಳು ಆಟ ಮುಗಿಸಿ ಮನೆಗೆ ಬರ್ತಿದ್ವು, ನಾನು ರಾತ್ರಿ ಅಡುಗೆಗೆ ತಯಾರಿ ಮಾಡ್ತಾ ಹಾಗೆ ಅಡುಗೆಮನೆಯಿಂದಲೇ ಮಕ್ಕಳಿಗೆ ಮಗ್ಗಿ, ಕಾಗುಣಿತ, ಪಾಠ ಹೇಳ್ಕೊಡ್ತಿದ್ದೆ. ಅಡುಗೆ ಆಗೋ ಹೊತ್ತಿಗೆ ಪಾಠ ಎಲ್ಲಾ ಮುಗಿತಿತ್ತು. ಎಲ್ಲರೂ ಬರೋರು. ಅವರೆಲ್ಲಾ ಊಟ ಮಾಡಿ ಆದಮೇಲೆ ಗೋಮೆ ಹಾಕಿ, ಪಾತ್ರೆ ತೊಳೆದು, ಮಕ್ಕಳಿಗೆ ಹಾಸಿಗೆ ಹಾಸಿ ಕೊಟ್ಟು ನಾನು ಊಟ ಮಾಡಿ ಮಲಗ್ತಿದ್ದೆ. ಮತ್ತೆ ಯಥಾ ಪ್ರಕಾರ ಮಾರನೆಯ ದಿನ.’

‘ಹಾಗಾದರೆ ಹಬ್ಬ-ಮದುವೆ-ಮುಂಜಿ ಇವೆಲ್ಲ ಇದ್ದೇ ಇರುತ್ತಲ್ಲ ಮನೆ ಅಂದ್ರೆ. ಆ ಕೆಲಸ ಯಾವಾಗ ಮಾಡ್ತಿದ್ದೆ ? ನನಗೆ ಈಗ ಆಸಕ್ತಿ ಹೆಚ್ಚಾಗಿತ್ತು. ಮನೆ ಅಂದ್ರೆ ಹಬ್ಬ– ಹರಿದಿನ, ವ್ರತ-ಕಥೆ ಇಲ್ದೆ ಇರುತ್ಯೆ. ನಂದು ಬೇರೆ ದೊಡ್ಡ ಸಂಸಾರ, ವರ್ಷಕ್ಕೊಂದೋ ಎರಡೋ, ಮುಂಜಿ, ಚೌಲ, ನಾಮಕರಣ ಏನಾದರೂ ಇದ್ದೇ ಇರೋದು. ಇನ್ನು ಹಬ್ಬವಂತೂ ಬಂದೇ ಬರುತ್ತೆ. ಆ ಕಾಲದಲ್ಲಿ ಸ್ವಲ್ಪ ಬೇಗ ಎದ್ದು ತಯಾರಿ ಮಾಡ್ತಿದ್ದೆ. ಅಕ್ಕ ಪಕ್ಕದ ಮನೆಯೋರು ಸಹಾಯಕ್ಕೆ ಬರೋರು. ಊಟ ಆದ್ಮೇಲೆ ಸ್ವಲ್ಪ ಸಮಯ ಇರೋದಲ್ಲ, ಅವಾಗೆಲ್ಲಾ ಚಿಕ್ಕ ಪುಟ್ಟ ಕೆಲಸ ಮಾಡ್ಕೊಂಡು ಎಲ್ಲಾ ಹೊಂದಿಸ್ಕೊತಿದ್ದೆ. ’

‘ಅದು ಸರಿ ಅಜ್ಜಿ, ಯಾರಾದರು ಹುಷಾರು ತಪ್ಪಿದವರು, ಮಕ್ಕಳು ಇವರಿಗೆಲ್ಲಾ ವಿಶೇಷವಾಗಿ ಅಡುಗೆ ಮಾಡಬೇಕಲ್ಲ ಅದನ್ನೆಲ್ಲಾ ಹೇಗೆ ಮಾಡ್ತಿದ್ದೆ ? ದೊಡ್ಡ ಸಂಸಾರ ಅಂದಮೇಲೆ, ಕಾಯಿಲೆಯವರು, ಮಕ್ಕಳು, ಬಸುರಿ ಬಾಣಂತಿಯರು ಇಲ್ದೆ ಇರ್ತಾರೆಯೇ? ಮಾಡೋ ಅಡುಗೇಲಿ ಅವರಿಗೆ ಅಂತ ಸ್ವಲ್ಪ ತೆಗೆದು ಇಡ್ತಿದ್ದೆ.

ಸಾರು ಮಾಡೋವಾಗ ಒಂದು ಸ್ವಲ್ಪ ಕಟ್ಟು ತೆಗೆದು ಇಟ್ರೆ ಅದು ಯಾರಾದ್ರೂ ಹುಷಾರಿಲ್ಲದವರಿಗೆ ಆಗ್ತಿತ್ತು, ಜೊತೇಲಿ ಅವರಿಗೆ ಒಂದೆರಡು ಸಾರಿ ಗಂಜಿ, ಕಷಾಯ ಮಾಡ್ತಿದ್ದೆ. ಇನ್ನು ಮನೆಯಲ್ಲಿ ಬೆಣ್ಣೆ ತುಪ್ಪಕ್ಕೇನು ಬರವಿರಲಿಲ್ಲ. ಮಕ್ಕಳು ಬಾಣಂತೀರಿಗೆ ಅದು ಆಗ್ತಿತ್ತು.’

‘ನಿನಗೇ ಹುಷಾರು ತಪ್ಪಿದ್ರೆ ಏನು ಮಾಡ್ತಿದ್ದೆ?’ ಅಜ್ಜಿಯಿಂದ ಈಗ ಅಸಮಾಧಾನದ ಉತ್ತರ ಬರಲೇಬೇಕೆಂಬ ನಿರೀಕ್ಷೆ ನನ್ನದಾಗಿತ್ತು. ‘ಕಾಯಿಲೆ ಯಾವತ್ತೂ ಪೋಷಣೆ ಮಾಡಿದವರ ಮೈಲಿ ಇರುತ್ತೆ ಕಣೋ. ಎದ್ದು ಓಡಾಡ್ಕೊಂಡು ಇದ್ರೆ ಅದು ಓಡಿ ಹೋಗುತ್ತೆ. ನಾಯಿ ರೋಗಕ್ಕೆ ಬೂದಿ ಮದ್ದು – ಅಂತ ಗಾದೆ ಕೇಳಿಲ್ವೆ. ಅದನ್ನ ಬಿಡು, ಈಗಿನ ಕಾಲದಲ್ಲಿ ನೋಡು, ಅಡುಗೆಮನೆಗೆ ಅಂತಾನೆ ಮಿಕ್ಸಿ, ಗ್ರೈಂಡರ್ , ಗ್ಯಾಸ್ ಒಲೆ ಎಲ್ಲವೂ ಬಂದಿವೆ. ನೀನು ಏನೇ ಹೇಳು ಈಗ ಕೆಲಸ ಮಾಡೋದು ಸುಲಭ.’

ನನ್ನ ಅಭಿಪ್ರಾಯವನ್ನ ಅಜ್ಜಿ ತಿರಸ್ಕರಿಸಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ನನಗಿತ್ತು. ‘ಸುಲಭ ಹೇಗಾಗುತ್ತಪ್ಪ. ಇಡ್ಲಿ ದೋಸೆಹಿಟ್ಟು ಮಾಡುಕ್ಕೆ ಗ್ರೈಂಡರ್‌ಗೆ ಹಾಕಿ, ಅದರಿಂದ ಹಿಟ್ಟು ಬಳಿದು, ತೊಳೆದು ಎಲ್ಲ ಮಾಡೂವಷ್ಟರಲ್ಲಿ, ನಾನು ಅಕ್ಕಿ ಬೇಳೆನ ತಿರುವಿ ಹಿಟ್ಟು ಮಾಡ್ತಿದ್ದೆ. ಅದು ಕರೆಂಟಲ್ಲಿ ತಿರುವಿದ್ರೆ, ನಾನು ಕೈಯಲ್ಲಿ ಮಾಡ್ತಿದ್ದೆ. ಹೆಚ್ಚು ವ್ಯತ್ಯಾಸವೇನು ಇಲ್ಲ. ಇನ್ನು ಒಲೆ ಗ್ಯಾಸಿಂದೋ ಸೌದೆದೊ ಉರಿ ಎಲ್ಲ ಒಂದೇ ತಾನೇ! ಇದ್ರಲ್ಲಿ ಎಡಕ್ಕೂ ಬಲಕ್ಕೂ ತಿರುಗಿಸಿದ್ರೆ ಉರಿ ಹೆಚ್ಚು ಕಡಿಮೆ ಆಗುತ್ತೆ, ಒಲೇಲಿ ಒಂದು ಸೌದೆ ತೆಗಿದ್ರೆ ಉರಿ ಕಡಿಮೆ, ಇನ್ನೊಂದು ಇಟ್ರೆ ಉರಿ ಜಾಸ್ತಿ ಆಗ್ತಿತ್ತು. ಅದ್ರಲ್ಲಿ ಗ್ಯಾಸ್ ಸ್ಟೋವಿನ ಹೆಚ್ಚುಗಾರಿಕೆ ಏನು?

ನಾನು ಪ್ರಶ್ನೆಗಳನ್ನು ಮುಂದುವರೆಸಿದೆ. ‘ಇಷ್ಟು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ವಾರ್ತೆ ಕೇಳೋದು, ಪುಸ್ತಕ, ಸಂಗೀತ, ರಾಜಕೀಯ ಇದರ ಬಗ್ಗೆಯೆಲ್ಲಾ ತಿಳ್ಕೊಳಕ್ಕೆ ಟೈಮೆಲ್ಲಿರ್ತಿತ್ತು?’

‘ವಾರ್ತೆ ಕೇಳೋಕೆ ಏನು ಸಮಯ ಬೇರೆ ಮಾಡ್ಕೋಬೇಕೆ? ಕೆಲಸ ಮಾಡೋವಾಗ ಮನೇಲಿ ಓಡಾಡೋವಾಗ ವಾರ್ತೆಗಳು, ಸಂಗೀತ ಕಿವಿಮೇಲೆ ಬೀಳ್ತಿರುತ್ತಲ್ಲ – ಅವಾಗ ಅದಕ್ಕೆ ಸ್ವಲ್ಪ ಗಮನ ಕೊಟ್ರೆ ಸಾಕು. ಮುಖ್ಯವಾಗಿ ಆಸಕ್ತಿ ಇರಬೇಕು.’

‘ಆಮೇಲೆ ನೀನು ಹಳ್ಳಿ, ಅಷ್ಟು ದೊಡ್ಡ ಮನೆ ಎಲ್ಲಾ ಬಿಟ್ಟು ಬೆಂಗಳೂರಿಗೆ ಬಂದ್ಯಲ್ಲ. ಇಲ್ಲಿ ಚಿಕ್ಕ ಮನೆ, ಹಿಡಿತದ ಖರ್ಚು. ಅದಕ್ಕೆ ಹೊಂದ್ಕೊಳೋದು ಎಷ್ಟು ಕಷ್ಟ. ನಿನಗೆ ಇದಕ್ಕೆಲ್ಲಾ ಹೊಂದಿಕೊಳ್ಳೋವಾಗ ಯಾವತ್ತೂ ಹಿಂಸೆ ಅಂತ ಅನ್ನಿಸಲಿಲ್ವ?’

’ಹಳ್ಳಿಮನೆ ಅಂದ್ರೆ ಹಾಗೆ, ಮನೆ ತುಂಬಾ ಜನ, ದವಸ ಧಾನ್ಯನೂ ಬೇಕಾದಹಾಗೆ ಇರುತ್ತೆ. ದಂಡಿಯಾಗಿ ಅಡುಗೆ ಮಾಡಬಹುದು. ಆದರೆ ಬೆಂಗಳೂರಲ್ಲಿ ಮನೇಲಿ ಇದ್ದಿದ್ದೇ ಮೂರೂ ಮತ್ತೊಂದು ಜನ. ಅವರಿಗೆ ಎಷ್ಟು ಬೇಕೋ ಅಷ್ಟು ಅಡುಗೆ ಮಾಡ್ತಿದ್ದೆ. ಅಷ್ಟಕ್ಕೇ ಸಾಮಾನು ತರೋದು. ಒಂದೊಂದು ಸರ್ತಿ ದುಡ್ಡು ಇರ್ತಿರ್ಲಿಲ್ಲ; ಆದರೇನು, ಅಕ್ಕ ಪಕ್ಕದವರು ಇರಲಿಲ್ವೆ ? ಬೆಂಗಳೂರು ಆಗ ಹೀಗಿರಲಿಲ್ಲ. ಪಕ್ಕದ ಮನೆಯವರ ಹತ್ತಿರ ನಾವು ಇಸ್ಕೊಳೋದು, ನಮ್ಮ ಹತ್ತಿರ ಅವರು ಇಸ್ಕೊಳೋದು ಮಾಡ್ತಿದ್ವಿ. ಅದಕ್ಕೆ ಹೇಳೋದು ಅರಮನೆಯಾದ್ರೂ ನೆರೆಮನೆ ಇರಬೇಕು – ಅಂತ.’

‘ಸರಿ, ನೀನು ಇಷ್ಟು ವರ್ಷಗಳಿಂದ ಹೀಗೆ ದಿನಾ ಒಂದೇ ಸಮನೇ ಏನಾದ್ರೂ ಹುಡುಕಿಕೊಂಡಾದರೂ ಕೆಲಸ ಮಾಡ್ತಾಯಿರ್ತೀಯಲ್ಲ, ನಿನಗೆ ಯಾವತ್ತೂ ಸ್ವಲ್ಪ ವಿಶ್ರಾಂತಿ ತಗೋಬೇಕು, ಸಾಕು ಈ ಕೆಲಸ ಅಂತ ಅನ್ನಿಸಲಿಲ್ವಾ?!

‘ನಂಗೇನೂ ಅಂತಾ ಯೋಚನೆಯೇ ಮನಸ್ಸಿಗೆ ಬರುಲ್ಲ. ನಾನು ತೆವಳುಕೊಂಡಾದರೂ ಸರಿ, ಮನೆಗೆ ಬಂದೋರಿಗೆ ಒಂದು ಅನ್ನ ಸಾರಾದರೂ ಮಾಡಿ ಬಡಿಸಿ ಅವರು ಹೊಟ್ಟೆ ತುಂಬಾ ಊಟ ಮಾಡೋದನ್ನ ನೋಡಬೇಕು. ನನಗೆ ಅಷ್ಟರಲ್ಲೇ ನೆಮ್ಮದಿ.’

‘ಈಗ ವಿಮಾನ ಬೆಂಗಳೂರಿನ ಕಡೆಗೆ ಇಳಿಯಲು ಪ್ರಾರಂಭಿಸುತ್ತದೆ’ ಎಂದು ಕಾಪ್ಟನ್ ಘೋಷಿಸಿದ. ಗಗನಸಖಿ ಬಂದು, ನನ್ನ ಪಕ್ಕದಲ್ಲಿದ್ದ ಅಜ್ಜಿಗೆ ಎರಡು ಚಾಕೊಲೇಟು ಕೊಟ್ಟು, ತೂಕಡಿಸುತ್ತಿದ್ದ ’ಮೊಮ್ಮಗನಿಗೆ ಕೊಡಿ’ ಎಂದಳು. ನನ್ನ ತೋಳನ್ನು ತಿವಿದು, ‘ಒಂದು ಚಾಕೊಲೇಟು ನೀನು ತಿನ್ನು’ ಎಂದು ಅಜ್ಜಿ ನನಗೆ ಕೊಟ್ಟಳು. ಅಜ್ಜಿಯರೆಲ್ಲಾ ಹೀಗೆಯೇನೂ ...!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.