ಅಲ್ಲಿನ ಚಲನಚಿತ್ರಗಳಲ್ಲಿ ಹೆಣ್ಣಿನ ಚಿತ್ರಣ ಭಾರತದ ಮಟ್ಟಿಗೆ ಹೊಸತಾದ ಅನುಭವವೇ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಣ್ಣೆದುರು ತೆರೆದಿಟ್ಟ ದೃಶ್ಯಸರಣಿ ಅದೆಷ್ಟು ವೈವಿಧ್ಯಮಯ! ಹೆಣ್ಣು ಮಕ್ಕಳು ಸ್ವಾತಂತ್ರ್ಯ ಇಲ್ಲದೆ ಅನುಭವಿಸುವ ಹಿಂಸೆಗಳು ನಮಗೇನು ಹೊಸದಲ್ಲ. ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಹೆಣ್ಣುಮಕ್ಕಳು ಪಡುವ ಬವಣೆಗಳೂ ಅಲ್ಲಿದ್ದವು. ಹೆಣ್ಣಿನ ಸ್ವಾತಂತ್ರ್ಯ ಎಂದರೇನು? ಹೆಣ್ಣು ಎನ್ನುವುದು ದೇಹವೆ? ಭಾವವೆ? ಮನಸೇ ಅಥವಾ ಕೇವಲ ಹೆರುವ ಸಾಮರ್ಥ್ಯವೆ? ಇದೊಂದು ನಿಲ್ಲದ ಅನ್ವೇಷಣೆ. ಸ್ತ್ರೀ ಮುಕ್ತಿಯ ದೃಷ್ಟಿಕೋನಗಳ ಚಿತ್ರಣ ಅನನ್ಯ.
ನಾವು ಬೆಳೆದ ಪರಿಸರದ ಹಿನ್ನೆಲೆಯಲ್ಲಿ ಮತ್ತು ಇಂದಿನ ಸಾಮಾಜಿಕ ಬದಲಾವಣೆಯ ಕಾಲದಲ್ಲಿಯೂ ಕಣ್ಣೆದುರು ತೆರೆದುಕೊಂಡ ಕಥಾಹಂದರಗಳನ್ನು ಕಂಡು ಬೆಚ್ಚಿಬೀಳುವ ಸರದಿ ನಮ್ಮದು. ಬಹುಶಃ ಬರೀ ಇದು ತಪ್ಪು ಇದು ಸರಿ ಎಂಬ ಎರಡೇ ಭಾಗಗಳಲ್ಲಿ ಹಂಚಿಹೋದ ನಮ್ಮ ಜೀವನ ಮೌಲ್ಯಗಳ ಅರಿವಿನಲ್ಲಿ ಇದನ್ನು ಕಂಡು ಅರಿಯಲು ಹೋದಾಗ ಕೆಲವು ಪಾತ್ರಗಳು ಅರೆ ಹೀಗೂ ಇರಲು ಸಾಧ್ಯವೆ ಎಂಬ ಯೋಚನೆಗೆ ಹಚ್ಚಿದ್ದವು. ಸಿನಿಮಾ ಎಂದರೆ ಅದು ವಾಸ್ತವ ಜಗತ್ತಿನ ಪ್ರತಿಫಲನವೇ ಹೊರತು ಹೊಸದೇನಿಲ್ಲ ಎಂದೇನಾದರೂ ಒಪ್ಪಿಕೊಂಡರೆ, ಆ ವಾಸ್ತವವೂ ಅದೆಷ್ಟು ನೈಜ, ಸಹಜ ಎನಿಸಿಬಿಡುವಂತಿದ್ದ ಪಾತ್ರಗಳವು.

ಮೆಕ್ಸಿಕೊದ ಸಿನಿಮಾ ‘ಏಪ್ರಿಲ್ಸ್ ಡಾಟರ್’(ನಿರ್ದೇಶಕ ಮಿಷೆಲ್ ಫ್ರಾಂಕೊ)ನ ಕಥಾನಾಯಕಿ ಏಪ್ರಿಲ್ ಎಂಬ ಮಹಿಳೆಯ 17ರ ಹರಯದ ಮಗಳು ವಲೇರಿಯಾ ಏಳು ತಿಂಗಳ ಗರ್ಭಿಣಿ. ತನ್ನ ಬಾಯ್‌ಫ್ರೆಂಡ್ ಮತೆಯೊ ಜೊತೆ ಸಂಸಾರ ಹೂಡುವ ಕನಸು ಕಂಡವಳು. ಹೆರಿಗೆಯ ನಂತರ ತಾಯಿಯ ವರ್ತನೆ, ಅವಳು ನಿಧಾನವಾಗಿ ಎಲ್ಲವನ್ನೂ ತನ್ನ ಹತೋಟಿಗೆ ತೆಗೆದುಕೊಳ್ಳುವ ಬಗೆ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನೂ ಬಿಚ್ಚಿಟ್ಟ ಪರಿ ಅಬ್ಬಾ!
ಮಗುವಿನ ಆರೈಕೆ, ಪೋಷಣೆಗೆ ಆರ್ಥಿಕವಾಗಿ ಕೂಡ ಬೆಂಬಲವಾಗಿ ನಿಲ್ಲುವ ಏಪ್ರಿಲ್, ಕಾನೂನುಪ್ರಕಾರ ಇನ್ನೂ ತಾಯ್ತನ ನಿಭಾಯಿಸಲು ಅಸಮರ್ಥಳಾದ ವಲೇರಿಯಾಳಿಂದ ಮಗುವನ್ನು ದತ್ತು ನೀಡುವಂತೆ ಅನಿವಾರ್ಯತೆ ಸೃಷ್ಟಿಸುತ್ತಾಳೆ. ಮಗುವನ್ನು ತಾಯಿಯಿಂದ ಬೇರ್ಪಡಿಸಿ ಅವಳಿಂದ ಮುಚ್ಚಿಟ್ಟು ಬೇರೆಲ್ಲೊ ಪೋಷಿಸಲು ಅನುವುಮಾಡಿಕೊಟ್ಟಿರುತ್ತಾಳೆ. ಇದನ್ನು ಸಹಿಸದೆ ಅಸಹಾಯಕಳಾಗಿ ಕೂಗಾಡಿದ ಮಗಳನ್ನು ತೊರೆದು ಇದ್ದಕ್ಕಿದ್ದಂತೆ ನಗರಕ್ಕೆ ಹೊರಟುಬಿಡುತ್ತಾಳೆ. ಅಲ್ಲೊಂದು ವಿಚಿತ್ರ ತಿರುವು. ಸಹಜವಾದ ತಂದೆಯ ಮಮಕಾರವನ್ನು ಅಸ್ತ್ರವಾಗಿ ಬಳಸಿ ಮಗು ತನ್ನ ಬಳಿಯೇ ಇದ್ದು, ತಂದೆಯೂ ಜೊತೆಗೇ ಇರಬಹುದು ಎಂಬ ಆಯ್ಕೆ ಅವನ ಎದುರಿಗಿಡುತ್ತಾಳೆ. ಒಪ್ಪಿದ ಮತೆಯೊ ಖುಷಿಯಾಗಿ ಮಗುವಿನ ಸಾಮೀಪ್ಯ ಅನುಭವಿಸುತ್ತಿರುವಾಗಲೇ ಅವನ ಬೇಕು ಬೇಡಗಳನ್ನೂ ಪರಿಗಣಿಸುತ್ತ ಅವನ ವಿಶ್ವಾಸ ಗಳಿಸುತ್ತಾಳೆ. ಪ್ರಬುದ್ಧ, ಚಟುವಟಿಕೆಯ ಸುಂದರ ಮಹಿಳೆ ಈಗ ಲೈಂಗಿಕವಾಗಿಯೂ ಅವನ ಸಂಗದಲ್ಲಿ!

ಇತ್ತ ಮಗುವಿಲ್ಲದೆ ಖಿನ್ನಳಾದ ವಲೇರಿಯಾಗೆ ಇನ್ನೊಂದು ಆಘಾತ ತರುವ ವಿಷಯ ಆಕೆ ವಾಸವಿರುವ ಸಮುದ್ರ ತೀರದ ಮನೆ ಮಾರಾಟಕ್ಕೆ ಇರುವುದು. ಪತ್ತೆಯೇ ಇಲ್ಲದೆ ಹೋದ ತಾಯಿಯನ್ನು ಕಡೆಗೂ ನಗರಕ್ಕೆ ಹೋಗಿ ಹುಡುಕಿದಾಗ ತನ್ನ ಬಾಯ್‌ಫ್ರೆಂಡ್ ತಾಯಿಯ ಜೊತೆ ಇದರಲ್ಲಿ ಭಾಗಿಯಾಗಿರುವುದು ಇನ್ನೊಂದು ಆಘಾತ ನೀಡುತ್ತದೆ. ಗಾಬರಿಯಲ್ಲಿ ಓಡಿಹೋಗುವ ಭರದಲ್ಲಿ ತಾಯಿ ಎಲ್ಲೊ ಬಿಟ್ಟು ಹೋದ ಮಗುವನ್ನು ಕಾನೂನು ಪ್ರಕಾರ ತನ್ನ ಬಾಯ್‌ಫ್ರೆಂಡ್ ಜೊತೆ ಇದ್ದರೆ ತನ್ನ ಸುಪರ್ದಿಗೆ ಪಡೆಯಬಹುದೆಂದು ಹಾಗೇ ಮಾಡುತ್ತಾಳೆ. ತನ್ನ ಬಾಯ್‌ಫ್ರೆಂಡ್ ಜೊತೆ ರೈಲು ಟಿಕೆಟ್ ಕೌಂಟರಿನ ಸರದಿಯಲ್ಲಿ ನಿಂತಾಗ ಈಗ ಬರುವೆ ಎಂದು ಆಕೆಯೂ ಮಗುವಿನೊಂದಿಗೆ ಓಡಿಹೋಗುವುದರೊಂದಿಗೆ ಕಥೆಯ ಮುಕ್ತಾಯ. ತಮ್ಮ ಮಕ್ಕಳೆಡೆಗಿನ ಈ ಇಬ್ಬರು ತಾಯಂದಿರ ಸ್ಪಂದನೆಯಲ್ಲಿ ಯಾವುದು ತಪ್ಪು ಯಾವುದು ಸರಿ ಎಂದು ನೋಡಹೋದರೆ ಗೊಂದಲ ಮೂಡಿಬಿಡುತ್ತದೆ. ಕೌಟುಂಬಿಕ ಚೌಕಟ್ಟಿನೊಳಗಡೆ ಇರುವ ವಾತ್ಸಲ್ಯ, ಮಮಕಾರಗಳು ನೀಡುವ ಸುಖ ಸಂತೋಷದ ಜೊತೆಗೇ ವೈಯಕ್ತಿಕ ಇಷ್ಟಾನಿಷ್ಟಗಳು ಮೇಲುಗೈ ಆದಾಗ ಕುಟುಂಬ ಎನ್ನುವ ಪರಿಕಲ್ಪನೆಯೇ ಛಿದ್ರವಾಗುವ ಚಿತ್ರಣ.

ಬ್ರೆಜಿಲ್ ಸಿನಿಮಾ 'ಜಸ್ಟ್ ಲೈಕ್ ಅವರ್ ಪೇರೆಂಟ್ಸ್'ನಲ್ಲಿ ನಾಯಕಿಗೆ ತನ್ನ 37 ನೇ ವಯಸ್ಸಿನಲ್ಲಿ ತಾಯಿ ಬಿಚ್ಚಿಟ್ಟ ಸತ್ಯ ನಾಯಕಿಯ ತಂದೆ ಬೇರೆ ವ್ಯಕ್ತಿ! ಸಿಡಿಲಿನಂತೆ ಎರಗುವ ಕಹಿ ಸತ್ಯ ಅರಗಿಸಿಕೊಳ್ಳಲಾಗದೇ ಅದಕ್ಕೇ ಇರಬೇಕು ಅಪ್ಪ ನಿನ್ನ ಬಿಟ್ಟದ್ದು ಎಂದು ಹಂಗಿಸುತ್ತಾಳೆ. ಅದೊಂದು ಪರಾವಲಂಬಿ ಜಿಗಣೆ, ನಾನೇ ಅವನನ್ನು ಬಿಟ್ಟೆ ಎಂದು ಅಷ್ಟೇ ವೇಗವಾಗಿ ಆಕೆ ಉತ್ತರಿಸುತ್ತಾಳೆ. 'ಛಿ, ಇನ್ನೆಂದೂ ಆಕೆಯ ಮುಖ ನೋಡುವುದಿಲ್ಲ, ಫೋನಿನಲ್ಲೂ ಮಾತನಾಡುವುದಿಲ್ಲ' ಎಂದು ಉಗ್ರವಾಗಿ ತಾಯಿಯ ನಡೆಯನ್ನು ಪ್ರತಿಭಟಿಸಿದವಳಿಗೆ ತನ್ನ ಕುಟುಂಬದ ಬಗ್ಗೆ, ವೃತ್ತಿ, ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳ ಬಗ್ಗೆ ಅತೀವ ಅಕ್ಕರೆ ಬೆರೆತ ಹೆಮ್ಮೆ. ಕೊನೆಗೆ ಆದದ್ದಾದರೂ ಏನು ಏಕೆ ಹೀಗೆ ಮಾಡಿದೆ ಎಂದು ತಾಯಿಯನ್ನ ಕೇಳಲು ಹೋಗುತ್ತಾಳೆ. ಕಾನ್ಫರೆನ್ಸ್ ಒಂದರಲ್ಲಿ ಭೇಟಿಯಾದವನಿಗೆ ಹುಟ್ಟಿದ್ದು ನೀನು ಎಂಬ ಮಾತಿಗೆ ಅರೆ ಅದ್ಹೇಗೆ ಅಷ್ಟು ಸುಲಭವಾಗಿ ಹೇಳಿಬಿಟ್ಟೆ ಅವನನ್ನೇ ಪ್ರೀತಿಸಿದ್ದರೆ ಇಲ್ಲೇಕೆ ನೀನು? ಅವನೆಲ್ಲಿ? ಎನ್ನುತ್ತಾಳೆ. ಅವನೀಗ ಪ್ರಮುಖ ರಾಜಕೀಯ ಪಕ್ಷದ ಮುಖಂಡ, ಅವನ ಫೋನ್ ನಂಬರ್ ಕೂಡ ಬಳಿ ಇಲ್ಲ, ಇತ್ತೀಚೆಗೆ ಸಿಕ್ಕಾಗ ಅವನ ಇಮೇಜಿಗೆ ಧಕ್ಕೆಯಾಗುತ್ತದೆ ಎಂದು ದೂರವೇ ಉಳಿಯುವ ಮಾತು ಕೊಟ್ಟಿದ್ದೇನೆ ಎಂದುಬಿಡುತ್ತಾಳೆ ತಾಯಿ. ಇದನ್ನು ಒಪ್ಪಿಕೊಳ್ಳದ ಆಕೆ ತಾನು ತಂದೆ ಎಂದುಕೊಂಡು ಪ್ರೀತಿಯಿಂದ ಒಡನಾಡಿದವನನ್ನೇ ಹುಡುಕಿ ಹೊರಡುತ್ತಾಳೆ. ಗೊಂಬೆಯಾಡಿಸುವ ಅವನ ಜೊತೆ ಈಗ ಕಲಾವಿದೆ ಮತ್ತು ಆಕೆಯ ಹರಯದ ಮಗಳು. ಅವರಿಗೆ ಹೊರೆಯಾದ ತಂದೆಯನ್ನೂ ಅವನ ಹರಯದ ಮಗಳನ್ನೂ ತನ್ನೂರಿಗೇ ಬಂದು ಇರುವಂತೆ ಹೇಳಿ, ಕೈಲಾದ ಆರ್ಥಿಕ ಸಹಾಯ ಮಾಡಿ ಪ್ರತ್ಯೇಕ ಇರಿಸಲು ಯೋಜಿಸುತ್ತಾಳೆ.

ತನ್ನ ಜೈವಿಕ ತಂದೆಯನ್ನೂ ಒಮ್ಮೆ ಕಂಡುಬಿಡಲು ಹೊರಡುತ್ತಾಳೆ. ಅವನ ಜೊತೆಗಿನ ಭೇಟಿ,ಮಾತು ಯಾವುದೂ ಅವಳಿಗೆ ಆಪ್ತವೆನಿಸುವುದಿಲ್ಲ. ಅವನ ಉಡುಗೊರೆಯನ್ನೂ ಧಿಕ್ಕರಿಸಿ ಬಂದುಬಿಡುತ್ತಾಳೆ.
ಇತ್ತ ಪತಿಯೂ ಅವನ ವೃತ್ತಿಯ ಒಡನಾಡಿಯ ಜೊತೆ ಗುಟ್ಟಾಗಿ ಸಂಬಂಧ ಬೆಳೆಸಿರುವುದು ತಿಳಿಯುತ್ತದೆ. ಕೇಳಿದರೆ ಅವನು ಒಪ್ಪದೇ ನೀ ನನ್ನ ಜೊತೆ ಆತ್ಮೀಯವಾಗಿದ್ದು ಎಷ್ಟು ಸಮಯವಾಯಿತು, ದೈಹಿಕ ಸಂಪರ್ಕ ಇಲ್ಲದೇ ಮದುವೆ ಉಳಿಯುತ್ತದೆಯೆ ಎಂದೆಲ್ಲ ವಾದ ಮಾಡುತ್ತಾನೆ. ಸರಿ, ಮದುವೆಯ ಬಂಧ ಉಳಿಯಬೇಕು ಎಂದು ಈಕೆಯ ಪ್ರಯತ್ನ. ರಾಜಿಯಾಗಿ ಇಬ್ಬರೂ ಅನ್ಯೋನ್ಯವಾಗಿ ಇರುವ ಸಮಯ ನಾಯಕಿ ನಿರಾಳ. ಈ ಮಧ್ಯೆ ಕ್ಯಾನ್ಸರ್ ಕೊನೆಯ ಹಂತದಲ್ಲಿರುವ ತಾಯಿಗೂ ಅವಳ ಕೊನೆಯಾಸೆಗಳನ್ನೆಲ್ಲ ಪೂರೈಸುವಷ್ಟು ಸಹನೆ.
ಹೀಗೇ ಒಂದು ದಿನ ತಂದೆಯೊಡನೆ ಇರಲು ಬಂದ ಹರಯದ ಮಗಳು ನಾಯಕಿಯ ಮನೆಗೇ ಬಂದು ಇರುವಂತಾಗುತ್ತದೆ. ಆಕೆಯ ಸ್ನೇಹಿತೆಯೊಂದಿಗೆ ಮನೆಯಲ್ಲೇ ಅತ್ಯಂತ ಆತ್ಮೀಯ ಭಂಗಿಯಲ್ಲಿರುವುದನ್ನು ಕಂಡು ಇವಳು ಸಿಡಿಮಿಡಿ.

ಮಾತಿಗೆ ಮಾತು ಬೆಳೆದಾಗ ಹೀಗೆ ಕುಟುಂಬಸ್ಥರ ಮನೆಯಲ್ಲಿ ಇದೆಲ್ಲ ಸರಿಬರುವುದಿಲ್ಲ ಎಂದು ನಾಯಕಿ.ಅರೆ ಏನು ಕುಟುಂಬ ಕುಟುಂಬ ಅಂತ ನೀನೊಬ್ಬಳೇ ಬಡಿದಾಡುತ್ತೀ, ಅದೆಲ್ಲ ಏನೂ ಇಲ್ಲ. ಅದೊಂದು ಚೌಕಟ್ಟೇ ಅಲ್ಲ. ಸುಮ್ಮನೆ ಒಬ್ಬರಿಗೊಬ್ಬರು ಕುಟುಂಬ ಉಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಒಬ್ಬರಿಗೊಬ್ಬರು ಹುಸಿ ಸೋಗಿನಲ್ಲಿ ಇದ್ದೀರಿ. ಮನುಷ್ಯ ಮೂಲತಃ ಬಹುಸಾಂಗತ್ಯ ಬಯಸುವ ಜೀವಿ ಅಂತೆಲ್ಲ ಮ್ಯಾಗಜಿನ್ ಒಂದರಲ್ಲಿ ಮಾನವ ಶಾಸ್ತ್ರಜ್ಞ ಬರೆದ ಲೇಖನ ಓದಲು ಹೇಳುತ್ತಾಳೆ. ಓದಿದ ಇವಳಿಗೂ ಇರಬಹುದೇನೊ ಎಂಬ ಭಾವ.
ಈ ನಡುವೆ ಪತಿಯೂ ಬೇರೆಡೆ ಆಕರ್ಷಿತನಾಗಿರುವುದು ದೃಢವಾಗುತ್ತದೆ.

ಈಕೆಯೂ ಅಕಸ್ಮಾತ್ ಆಗಿ ಕೆಲಸದ ನಿಮಿತ್ತ ಪರವೂರಿಗೆ ಹೋದಾಗ ಮಕ್ಕಳ ಸಹಪಾಠಿಯ ತಂದೆಯೊಡನೆ ದೈಹಿಕ ಸಂಪರ್ಕ ಸಾಧ್ಯವಾಗುತ್ತದೆ.
ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ತನ್ನ ತಾಯಿ ಅಂದೆಂದೋ ಮಾಡಿದ್ದು ಸಹಜ ಎನಿಸತೊಡಗುತ್ತದೆ.
ಜರ್ಮನಿಯ ಸಿನಿಮಾ 'ದಿ ಫೈನಲ್ ಜರ್ನಿ'ಯ ನಾಯಕ 92 ವರ್ಷದ ಎಡ್ವರ್ಡ್. ಪತ್ನಿ ತೀರಿದ ಬಳಿಕ ಅಂತ್ಯಕ್ರಿಯೆ ಮುಗಿದ ನಂತರ ಉಕ್ರೇನ್ ಗೆ ಹೊರಟುಬಿಡುತ್ತಾನೆ. ಹೋಗದಂತೆ ಮನವೊಲಿಸಲು ತೆರಳಿದ ಮೊಮ್ಮಗಳು ಅನಿವಾರ್ಯ ವಾಗಿ ಅವನೊಡನೆ ಪಯಣಿಸುವಂತಾಗುತ್ತದೆ.
ಎರಡನೇ ಮಹಾಯುದ್ಧದಲ್ಲಿ ಹೋರಾಟ ಮಾಡುವಾಗ ಪ್ರೀತಿಸಿದ್ದ ಸ್ವೆಟ್ಲಾನ ಸಿಗಬಹುದೇನೊ ಎಂಬ ದೂರದ ಆಸೆ. ರೈಲಿನಲ್ಲಿ ಪರಿಚಿತನಾದ ಯುವಕನೊಡನೆ ಮೊಮ್ಮಗಳ ಅನುಕೂಲದ ಸಂಬಂಧ. ಕ್ಷಣಗಳಲ್ಲೇ ದೇಹ ಬೆಸೆದು ಅಷ್ಟೇ ವೇಗವಾಗಿ ಏನೂ ನಡೆದೇ ಇಲ್ಲ ಎನ್ನುವಂತೆ ಸಹಜವಾಗಿರುವ ಯುವಜೋಡಿ ಎಡ್ವರ್ಡ್ ನ ಆಸೆಗಂತೂ ಒತ್ತಾಸೆಯಾಗಿ ನಿಲ್ಲುತ್ತಾರೆ.ಯುದ್ಧ ಭೂಮಿಯ ಆತಂಕದ ಪಯಣ ಮುಗಿಸಿ ಕಡೆಗೂ ಗಡಿ ತಲುಪಿದವರಿಗೆ ಸ್ವೆಟ್ಲಾನ ಸಿಗದೇ ಹೋದರೂ ಆಕೆಯೂ ಎಡ್ವರ್ಡ್ ನ ಪ್ರೀತಿ ನೆನೆದೇ ಬದುಕಿರುವುದನ್ನು ಕಂಡು ಹೃದಯ ತುಂಬಿಬರುತ್ತದೆ. ಮರಳಿ ಬರುವಾಗ ಮೊಮ್ಮಗಳಿಗೆ ತಾಯಿಯೊಬ್ಬಳೇ ಜೊತೆ ಇರುವ ಸ್ಥಿತಿ. ಆದರೆ ಕ್ಷಣಿಕವೆಂದುಕೊಂಡ ಆ ಯುವಕನ ಜತೆಗಿನ ಬಂಧ ಈಗ ಅಷ್ಟೇ ಗಾಢ. ಕಡೆಗೂ ಎಷ್ಟೇ ದಿನವಾದರೂ ಕಾಯುವೆ, ಬರಲೇಬೇಕು ಎಂಬ ಭಾಷೆ ತೆಗೆದುಕೊಂಡು ಅವನಿಂದ ಬೀಳ್ಕೊಂಡು ಮರಳುತ್ತಾಳೆ.

ರಷ್ಯಾದ ಸಿನಿಮಾ 'ಲವ್ ಲೆಸ್' ಪ್ರೀತಿ ಎಂದುಕೊಂಡು ಮೊದಲೇ ಗರ್ಭಿಣಿಯಾಗಿ ನಂತರ ಅನಿವಾರ್ಯವಾಗಿ ಮದುವೆಯಾದವಳು ಎಂದೂ ಇಷ್ಟವಿಲ್ಲದ ಆ ಮಗು ತನಗೆ ಸ್ವಾತಂತ್ರ್ಯವಿಲ್ಲದಂತೆ ಮಾಡಿ ಬೇಡದ ಸಂಬಂಧ ನಿಭಾಯಿಸುವಂತೆ ಮಾಡಿದೆ ಎಂಬ ಸಿಟ್ಟು.
ಮಗುವಿನ ತಂದೆಯೂ ಬೇಸತ್ತು ಬೇರೊಬ್ಬಳ ಪ್ರೀತಿಯಲ್ಲಿ. ಆಕೆಯೂ ಈಗ ಇವನಿಂದಲೇ ಗರ್ಭಿಣಿ ಯಾಗಿ ಬೇಗ ಜೊತೆ ಇರಲು ಹಾತೊರೆಯುತ್ತಿದ್ದಾಳೆ. ಈಕೆಯೂ ಅಷ್ಟೆ ಮಗುವಿಗಾಗಿ ಅಲ್ಲ, ಕೇವಲ ತನ್ನನ್ನೇ ಪ್ರೀತಿಸುವ, ಬೆಳೆದ ಮಗಳನ್ನು ದೂರದೂರಿಗೆ ಕಳಿಸಿ ಒಂಟಿಯಾಗಿರುವ ಸಿರಿವಂತ ಮಧ್ಯವಯಸ್ಕನನ್ನು ಆರಿಸಿಕೊಂಡಿದ್ದಾಳೆ. ಮಗ ಅಲ್ಯೋಷಾ ಬಗ್ಗೆ ಇಬ್ಬರಿಗೂ ಯೋಚನೆಯಿಲ್ಲ. ಇಬ್ಬರೂ ತಮ್ಮತಮ್ಮಹೊಸ ಸಂಗಾತಿಯೊಂದಿಗೆ ಇಡೀ ರಾತ್ರಿಯನ್ನೇ ರಸಮಯವಾಗಿ ಕಳೆಯುತ್ತ ಮನೆ ಕಡೆ ಸಂಪೂರ್ಣ ಅಲಕ್ಷ್ಯ ತೋರಿದ್ದಾರೆ. ಪರಸ್ಪರ ವಿಚ್ಛೇದನ ನೀಡಿ ತಮ್ಮತಮ್ಮ ಸಂಗಾತಿಗಳೊಡನೆ ನೆಲೆಗೊಳ್ಳುವ ಕನಸು ಕಾಣುತ್ತಿರುವವರು, ಮುಂದಿನ ಸುಂದರ ಬದುಕಿಗೆ ಕಾಯುತ್ತಿರುವವರು. ಇದ್ದ ಅಪಾರ್ಟ್ಮೆಂಟ್ ಮಾರಿ ಬೇರೆಯಾಗುವ ಯೋಜನೆ. ಆದರೆ ಮಗನ ಹೊಣೆ ಇಬ್ಬರಿಗೂ ಹೊರೆ. ತಾನು ಯಾರಿಗೂ ಬೇಡದ ಮಗು ಎಂಬ ಅರಿವಾಗಿ ಇದ್ದಕ್ಕಿದ್ದಂತೆ ಮಗ ಕಾಣೆಯಾಗುತ್ತಾನೆ. ಹುಡುಕಲುಮಾಡಿದ ಪ್ರಯತ್ನಗಳೆಲ್ಲ ವಿಫಲ. ಇಬ್ಬರೂ ಕುಸಿಯುತ್ತಾರೆ. ಭಾವನಾತ್ಮಕವಾಗಿ ಸೋತು ಕಡೆಗೂ ಸಮಾಧಾನದ ಆಸರೆ ಬಯಸಿ ತಮ್ಮತಮ್ಮ ಸಂಗಾತಿಯ ತೆಕ್ಕೆಗೇ ಮರಳುತ್ತಾರೆ.

ಬದುಕು ನಿಲ್ಲುವುದಿಲ್ಲ. ತಾವು ಬಯಸಿದಂತೆಯೇ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಾರೆ. ಆದರೆ ಅತ್ಯಂತ ಸ್ವಾವಲಂಬಿ ಸ್ವತಂತ್ರ ಮನದ ಆಕೆ ಅಲ್ಲಿಯೂ ಅದೇ ಪ್ರತ್ಯೇಕ ಸ್ವತಂತ್ರ ಸ್ವಯಂಕೇಂದ್ರಿತ ಬದುಕನ್ನೇ ಅಪ್ಪಿರುತ್ತಾಳೆ.
ಅವನೂ ಅಷ್ಟೇ, ತನ್ನ ಇಷ್ಟಾನಿಷ್ಟಗಳ ಆದ್ಯತೆ ಬದಲಿಸಿಕೊಳ್ಳದೇ ಆ ಸಂಗಾತಿಯ ಕಡೆಯಿಂದಲೂ ಮೊದಲ ಪತ್ನಿಯ ತರಹದ್ದೇ ಸ್ಪಂದನೆ ಪಡೆಯತೊಡಗಿರುತ್ತಾನೆ.
ಸೆರ್ಬಿಯದ ಸಿನಿಮಾ 'ರೆಕ್ವಿಯಮ್ ಫಾರ್ ಮಿಸೆಸ್ ಜೆ' ಪತಿಯನ್ನು ಕಳೆದುಕೊಂಡು ಕೆಲಸವನ್ನೂ ಕಳೆದುಕೊಂಡು ಖಿನ್ನಳಾದ ಮಧ್ಯವಯಸ್ಕಳ ಕತೆ. ವಯಸ್ಸಾದ ತಾಯಿ, ಬೆಳೆದ ಮಗಳು ಶಾಲೆಗೆ ಹೋಗುವ ಇನ್ನೊಬ್ಬ ಮಗಳೂ ಆಕೆಯಲ್ಲಿ ಬದುಕುವ ಆಸೆ ಮೂಡಿಸುವುದಿಲ್ಲ.
ಇತ್ತ ಈಕೆ ಪತಿಯ ಪುಣ್ಯತಿಥಿಯಂದು ಸಾಯುವ ಯೋಜನೆ ಮಾಡುತ್ತಿದ್ದರೆ ಅತ್ತ ಹರಯದ ಮಗಳು ತನ್ನ ಬಾಯ್ ಫ್ರೆಂಡ್ ಜೊತೆ ಇರಲೂ ಆಗದೇ ಮನೆಯ ಜವಾಬ್ದಾರಿಗೆ ಸೋತು ಸಿಡಿಮಿಡಿಗುಟ್ಟುತ್ತಾಳೆ.
ಒಮ್ಮೆ ಬಾಯ್ ಫ್ರೆಂಡಿನೊಂದಿಗೆ ಖಾಸಗಿ ಕ್ಷಣ ಕಳೆಯುವಾಗಲೇ ಬಂದ ಈ ಅಮ್ಮನ ಕಂಡು ಮುಜುಗರ. 'ಛೆ ಈ ಮನೆಯಲ್ಲಿ ನೆಮ್ಮದಿಯಾಗಿ ಏನೂ ಮಾಡುವಂತಿಲ್ಲ, ನನ್ನ ವಾರಿಗೆಯವರೆಲ್ಲ ಆರಾಮಾಗಿ ಮಜವಾಗಿ ಇದ್ದರೆ ನನಗೆ ಏಕೆ ಇಷ್ಟೆಲ್ಲ ಮನೆ ಜವಾಬ್ದಾರಿ' ಅಂತೆಲ್ಲ ಕೂಗಾಡುತ್ತಾಳೆ. ಮುಂದೊಂದು ದಿನ ಆಕೆ ಗರ್ಭಿಣಿ ಎಂದು ಸಣ್ಣ ಮಗಳೂ ಹೇಳುತ್ತಾಳೆ. ತಾನು ಆಗಲೇ ಆಂಟಿ ಆಗುವ ಖುಷಿ ಹುಡುಗಿಗೆ. ಅಕ್ಕನಿಗೆ ಹುಟ್ಟಲಿರುವ ಮಗುವಿಗೆ ಹೆಸರೊಂದನ್ನು ಸಹ ಯೋಚಿಸಿಟ್ಟುಕೊಂಡಿದ್ದಾಳೆ.

ಆದರೆ ಇದಾವುದೂ ಸಿನಿಮಾ ನಾಯಕಿಯನ್ನು ಆಳವಾದ ಖಿನ್ನತೆಯಿಂದ ಮೇಲಕ್ಕೆತ್ತುತ್ತಿಲ್ಲ. ಅಂತೂ ಸಾಯುವ ಆಕೆಯ ಯತ್ನ ಫಲಿಸದೇ ಆಕೆ ಮತ್ತೆ ಜೀವನ್ಮುಖಿಯಾಗುತ್ತಾಳೆ.
ನಾರ್ವೆಯ ಸಿನಿಮಾ 'ಥೆಲ್ಮಾ' ಸಂಪ್ರದಾಯಸ್ಥ ಧಾರ್ಮಿಕ ಕುಟುಂಬದ ಹುಡುಗಿಯೊಬ್ಬಳು ಬೇರೆ ಊರಿಗೆ ಓದಿಗೆಂದು ಹೋಗಿ ನೆಲೆಸುವ ಕತೆ. ವಯೋಸಹಜ ಕಾಮನೆಗಳು, ಕಟ್ಟಳೆಗಳ ನಡುವೆ ತಾಕಲಾಟ, ಈ ಮಧ್ಯೆ ಆರೋಗ್ಯ ಸಮಸ್ಯೆ. ಆಕೆಗೆ ಆಪ್ತವಾಗುವ ಸ್ನೇಹಿತೆ ಅಂಜಾಳಿಂದಾಗಿ ಈಕೆಗೆ ಹೊಸ ಜಗತ್ತಿನ ಮೋಜು ಮಜಗಳ ಪರಿಚಯ. ಆತ್ಮೀಯತೆ ಬೆಸದ ಬಂಧದಲ್ಲಿ ಇಬ್ಬರೂ ಲೈಂಗಿಕವಾಗಿ ಕೂಡ ಒಡನಾಡುತ್ತಾರೆ.
ಈಕೆಗೆ ಇರುವ ಅತಿಮಾನುಷ ಶಕ್ತಿಯ ಅರಿವಾದಾಗ ಕಡೆಗೂ ತನ್ನ ಆಯ್ಕೆ, ಸ್ವಾತಂತ್ರ್ಯ ವನ್ನೇ ಆದ್ಯತೆ ಮಾಡಿಕೊಳ್ಳುತ್ತಾಳೆ.
ಹಂಗೇರಿಯ ಸಿನಿಮಾ 'ಆನ್ ಬಾಡಿ ಅಂಡ್ ಸೋಲ್' ನಾಯಕಿ ಮರಿಯಾಗೆ ಇತರರಂತೆ ಸಹಜವಾದ ಬಯಕೆಗಳೇ ಇಲ್ಲ. ಆಕೆ ಅದಕ್ಕಾಗಿ ಥೆರಪಿಸ್ಟ್ ಬಳಿ ಚಿಕಿತ್ಸೆಗೂ ಹೋಗುತ್ತಿದ್ದಾಳೆ. ಕಸಾಯಿಖಾನೆಯೊಂದರಲ್ಲಿ ಕೆಲಸ ಮಾಡುವ ಈಕೆಗೆ ಹಿರಿಯ ಸಹೋದ್ಯೋಗಿಯೊಬ್ಬನ ಕಡೆ ಮಾತ್ರ ಆಸಕ್ತಿ ಬೆಳೆಯಲು ಕಾರಣ: ಅಕಸ್ಮಾತ್ ಆಗಿ ಒಮ್ಮೆ ಇಬ್ಬರ ಕನಸೂ ಒಂದೇ ತೆರನಾಗಿರುವುದು ಅರಿವಿಗೆ ಬಂದಾಗ.
ಅಲ್ಲಿಂದ ದಿನವೂ ಆಕೆಯ ದಿನದಲ್ಲಿ ಆಸಕ್ತಿಯ ಕ್ಷಣಗಳೆಂದರೆ ಅದು ಹಿಂದಿನ ರಾತ್ರಿ ತಮಗೇನು ಕನಸು ಬಿದ್ದಿತ್ತು ಎಂದು ಹೇಳಿಕೊಳ್ಳುವುದು.
ಕನಸಿನಲ್ಲಿ ಮೊದ ಮೊದಲು ಪುಟ್ಟ ಸರೋವರದ ಆಚೀಚೆ ಹಿಮಾವೃತ ತೀರದಲ್ಲಿ ನಿಂತ ಎರಡು ಜಿಂಕೆಗಳು ಸುಮ್ಮನೆ ನೋಡುವುದು. ಕ್ರಮೇಣ ಒಂದು ರಾತ್ರಿ ಕನಸಿನಲ್ಲಿ ಒಂದು ಜಿಂಕೆ ಇನ್ನೊಂದನ್ನು ಬೆನ್ನಟ್ಟಿ ಓಡುವುದು. ಹೆಚ್ಚೇನೂ ಮುಂದುವರಿಯದ ಕನಸಿನ ಬಗ್ಗೆ ಚರ್ಚಿಸಲೆಂದೇ ಈಕೆ ಫೋನ್ ಖರೀದಿಸಿ ಇಬ್ಬರೂ ಒಂದೇ ಸಮಯಕ್ಕೆ ಮಲಗುವುದು, ಒಮ್ಮೆಯಂತೂ ಇಬ್ಬರೂ ಒಂದೇ ಕಡೆ ಮಲಗಿದರೆ ಹೇಗೆ ಎಂದು ಯೋಚಿಸುವುದು. ಹಾಗೇ ಮಾಡಲು ಹೊರಟರೆ ಇಬ್ಬರಿಗೂ ನಿದ್ದೆ ಬಾರದೇ ಇಬ್ಬರೂ ಇನ್ನೊಬ್ಬರಿಗೆ ತಿಳಿಯದಿರಲಿ ಎಂದು ನಿದ್ದೆಯ ನಟನೆ ಮಾಡಿ ಕಡೆಗೆ ಸಾಕಾಗಿ
ಸರಿ ಸಮಯ ಕಳೆಯಲು ಏನು ಮಾಡುವುದು ಎಂದಾಗ ಆಕೆಗೆ ಹೊಳೆದದ್ದು ಕಾರ್ಡ್ ಆಡೋಣ.

ಇತ್ತ ಥೆರಪಿಸ್ಟ್ ಸಲಹೆಯಂತೆ ಈಕೆ ತನ್ನಲ್ಲಿ ಸಂವೇದನೆಯೇ ಇಲ್ಲವೆ, ಹೇಗೆ ಕಂಡುಕೊಳ್ಳುವುದು ಅಂತೆಲ್ಲ ಅವರ ಸಲಹೆ ಅನುಸರಿಸತೊಡಗಿ ಅವನನ್ನು ಬಹುವಾಗಿ ಹಚ್ಚಿಕೊಂಡದ್ದು ಅರಿವಾಗುತ್ತದೆ. ಪ್ರೀತಿ ವ್ಯಕ್ತಪಡಿಸಲಾಗದೇ ಉತ್ಕಟ ಭಾವನೆ ಪರಸ್ಪರ ಹೇಳಿಕೊಳ್ಳುವ ಸಂದರ್ಭ ಬಂದಾಗ ಒಂದಾಗುತ್ತಾರೆ.
ಉರುಗ್ವೆಯ ಸಿನಿಮಾ 'ನಲು ಆನ್ ದಿ ಬಾರ್ಡರ್' ಬ್ರೆಜಿಲ್ ಗಡಿಯಲ್ಲಿರುವ ಉರುಗ್ವೆಯ ಸಣ್ಣ ಪಟ್ಟಣವೊಂದರಲ್ಲಿ ವಾಸಿಸುತ್ತಿರುವ ಹದಿನಾರು ವರ್ಷದ ಹುಡುಗಿಯ ಕತೆ. ತಾಯಿಯಿಲ್ಲ. ದೃಷ್ಟಿ ಕಳೆದುಕೊಂಡ 39 ವರ್ಷದ ಅಪ್ಪನ ಜೊತೆ ಆಕೆಯ ಬಂಧ ಗಾಢ. ಲೈಂಗಿಕ ಪ್ರಜ್ಞೆ ಅರಿವಿಗೆ ಬರುವ ಆರಂಭದಲ್ಲಿ ಅಪ್ಪನ ಸ್ಪರ್ಶ ನೀಡುವ ವಿಚಿತ್ರ ಅನುಭವ, ಅವನೆಡೆಗೆ ಕುತೂಹಲ ಬೆಳೆಸುತ್ತದೆ. ಕ್ರಮೇಣ ಸಹಜವಾದ ವರ್ತನೆ ಯನ್ನು ತನ್ನ ಓರಗೆಯವರ ಒಡನಾಟದಲ್ಲಿ ಮೈಗೂಡಿಸಿಕೊಳ್ಳುತ್ತಾಳೆ.

ಬಾಹ್ಯ ಸೌಂದರ್ಯ ಮುಖ್ಯವಲ್ಲ ಎನ್ನುವ ನಟಿ ಯಂಗಿ ವಿವಾಹಿತನ ಜೊತೆ ಸಂಬಂಧವಿರಿಸಿಕೊಂಡ ರಿಪಬ್ಲಿಕ್ ಅಫ್ ಕೊರಿಯದ ಸಿನಿಮಾ 'ಆನ್ ದಿ ಬೀಚ್ ಅಟ್ ನೈಟ್ ಅಲೋನ್'. ತನ್ನ ಹಳೆಯ ಸಂಬಂಧಿ, ಸ್ನೇಹಿತರನ್ನು ಭೇಟಿ ಮಾಡಲು ಹೋದವಳಿಗೆ ರಾತ್ರಿಯ ಊಟದ ಮೇಜಿನ ಬಳಿ ಕುತೂಹಲ ತಣಿಸಿಕೊಳ್ಳುವ ಚರ್ಚೆ ಎದುರಾಗುತ್ತದೆ. ಸಹಜವಾಗೇ ಮಾತನಾಡುತ್ತ ನಡೆಯುವ ಸಂಭಾಷಣೆ:
'ನೀನು ವಿದೇಶದಲ್ಲಿ ಕೆಲವು ಸಮಯ ಇದ್ದು ಬಂದೆಯಂತಲ್ಲ, ಅಲ್ಲಿ ಹೇಗಿತ್ತು ಜೀವನ? ಹೇಗೆ ಸಮಯ ಕಳೆಯುತ್ತಿದ್ದೆ?'
'ಈಗಲೂ ಪ್ರೀತಿಗಾಗಿ ಕಾದುಕೊಂಡಿರುವೆಯಾ ಯಾರೊಡನೆಯೂ ಸಂಬಂಧ ಇರಿಸಿಕೊಳ್ಳಲಿಲ್ಲವೆ?'
'ಹಾಗೇನಿಲ್ಲ ಕೆಲವರು ನನ್ನ ಸಂಪರ್ಕಕ್ಕೆ ಬಂದರು'
'ಹೌದಾ ಅವರು ಹೇಗಿರುತ್ತಾರೆ?'
'ಅವರೆಲ್ಲ ತಮ್ಮ ದೇಹದ ಬಗ್ಗೆ ಬಹಳ ಕಾಳಜಿ ವಹಿಸುವವರು'
'ಅದು' ಹೇಗಿತ್ತು ತುಂಬ ದೊಡ್ಡದಾ?' ಎಂದು ಬಿಂದಾಸ್ ಆಗಿ ನಗುತ್ತ ಕೇಳಿದವರಿಗೆ ನಗುತ್ತಲೇ ಆಕೆ 'ಹಾಗೇನಿಲ್ಲ ಅವರಲ್ಲಿಯೂ ಅವರ ಒಟ್ಟಾರೆ ದೇಹದ ಗಾತ್ರಕ್ಕೂ ಅದಕ್ಕೂ ಸಂಬಂಧ ಇರುತ್ತದೆ ಅಂತಿಲ್ಲ' ಎಂಬ ಅರ್ಥದಲ್ಲಿ ಉತ್ತರಿಸುವುದು ಎಲ್ಲರೂ ಓ...ಊ ಎನ್ನುತ್ತ ನಗುವುದು...
ಈ ಸಿನಿಮೋತ್ಸವಗಳ ಸಿನಿಮಾಗಳಲ್ಲಿ ಎಲ್ಲವೂ ಸಹಜ. ಸ್ನೇಹ, ವಾತ್ಸಲ್ಯ, ಪ್ರೀತಿಗಳಂತೆಯೇ ಸಹಜ ಲೈಂಗಿಕ ವರ್ತನೆ ಕೂಡ... ಮರೆಮಾಚುವ ಯಾವ ಪರದೆಯೂ ಇಲ್ಲ.
ಅದೇ ಆಗ ಹರಯಕ್ಕೆ ಕಾಲಿಟ್ಟ ಎಳೆ ಮನಸಿನಲ್ಲೇಳುವ ಲೈಂಗಿಕ ಬಯಕೆ ತುಂಬ ನವಿರಾಗಿ ಸೂಕ್ಷ್ಮವಾಗಿ ಬಿಂಬಿತವಾದ 'ನಲು ಆನ್ ದಿ ಬಾರ್ಡರ್' ಹಾಗೂ ಹರಯದಲ್ಲೇ ಸಲಿಂಗಕಾಮದತ್ತ ಆಕರ್ಷಿತವಾಗುವ 'ಥೆಲ್ಮಾ'ದ ನಾಯಕಿ ಕಟು ಧಾರ್ಮಿಕ ಕಟ್ಟಳೆಗಳನ್ನು ಮೀರಿದ ಪಾಪಪ್ರಜ್ಞೆಯಲ್ಲಿ ಅಂತಹ ಯೋಚನೆ ಕೂಡ ತಪ್ಪು ಎಂದು ನರಳಿದರೂ ಕಡೆಗೆ ವೈಯಕ್ತಿಕ ಸ್ವಾತಂತ್ರ್ಯದ ಎದುರು ಉಳಿದೆಲ್ಲ ಸಂಬಂಧಗಳೂ ಗೌಣ ಎಂದು ಬಿಟ್ಟು ನಡೆದುಬಿಡುವ ಸನ್ನಿವೇಶ... ಸ್ಪ್ಯಾನಿಶ್ ಸಿನಿಮಾ 'ಎ ಫೆಂಟಾಸ್ಟಿಕ್ ವುಮನ್' ನಲ್ಲೂ ಲೈಂಗಿಕ ಅಲ್ಪಸಂಖ್ಯಾತೆ ನಾಯಕಿಯ ಪಾತ್ರವನ್ನು ಲೈಂಗಿಕ ಅಲ್ಪ ಸಂಖ್ಯಾತ ನಟಿಯೇ ಮಾಡಿದ್ದು; ಅದರಲ್ಲೂ ತನಗಿಂತ 20 ವರ್ಷ ದೊಡ್ಡವನಾದ ವಿವಾಹಿತನನ್ನು ಪ್ರೀತಿಸುವುದು. ಪತ್ನಿ , ಮಕ್ಕಳಿಂದ ದೂರವಾಗಿ ಒಂಟಿಯಾಗಿರುವ ಅವನ ಜೊತೆ ಇದ್ದಾಗಲೇ ಅವನು ಇದ್ದಕ್ಕಿದ್ದಂತೆ ರಾತ್ರಿ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ. ಅವನ ಕುಟುಂಬ, ಸಮಾಜ ಎಲ್ಲರಿಂದ ಅವಮಾನ ಅನುಭವಿಸುವ ಆಕೆಗೆ ತನಿಖೆಯ ಮಧ್ಯೆ ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ಬೆತ್ತಲಾಗುವ ಹಿಂಸೆ.

ಫ್ರಾನ್ಸ್ ನ ಸಿನಿಮಾ 'ಎ ಜಂಟಲ್ ಕ್ರೀಚರ್' ನಲ್ಲಿ ಕೂಡ ರಷ್ಯಾ ದೇಶದ ಸೆರನೆಯಲ್ಲಿರುವ ಪತಿಯ ವಿಚಾರ ಅರಿಯಲು ಒಬ್ಬಂಟಿಯಾಗೇ ಹೊರಟಾಕೆ ಅಲ್ಲಿ ಉಳಿದುಕೊಂಡ ಅಪರಿಚಿತರ ಮನೆಯೊಂದರಲ್ಲಿ ಗುಂಪಿನಲ್ಲಿ ಮೋಜು ಮಾಡುವವರು ಬೆತ್ತಲಾಗಲು ಒತ್ತಾಯಿಸುವ ದೃಶ್ಯಗಳು...ಎಲ್ಲವೂ ಅದೆಷ್ಟು ಸಹಜವಾಗಿ ಹೆಣ್ಣು ಮಕ್ಕಳ ಸ್ಥಿತಿ, ಸ್ಥಾನಮಾನ, ತಳಮಳ, ತಲ್ಲಣಗಳನ್ನು ತೆರೆದಿಡುತ್ತವೆ! ಭಾವುಕರಾದರೂ ಎಂಥ ಸಂದರ್ಭದಲ್ಲೂ ಎದೆಗುಂದದೆ ನಿರ್ವಹಿಸುವ, ಸುಂದರ ನೆಮ್ಮದಿಯ ಬದುಕಿಗೆ ಹಾತೊರೆಯುವ ಹೆಣ್ಣುಮಕ್ಕಳ ಚಿತ್ರಣ ಅದ್ಭುತ.
ಆದರೆ ನಿರ್ಣಾಯಕರ ಸ್ಥಾನದಲ್ಲಿ ನಿಲ್ಲಹೋದರೆ ಇದು ಎಷ್ಟು ಸರಿ, ಹೀಗಾಗಬಾರದಿತ್ತು ಎನಿಸುವುದು ಸಾಂಪ್ರದಾಯಿಕ ಮನಸ್ಥಿತಿಗಳಲ್ಲಿ ಇರುವವರಿಗೆ ಮಾತ್ರ. ಉಳಿದಂತೆ ಅವರವರ ಜಾಗದಲ್ಲಿ ನಿಂತು ಅವರು ಹೀಗೆ ವರ್ತಿಸಿದರು ಎಂಬುದಷ್ಟೇ ಕತೆಯ ಸತ್ಯ. ಅಷ್ಟಕ್ಕೂ ಸರಿಯೊ ತಪ್ಪೊ ನಿರ್ಣಯಿಸಲು ಇನ್ನೊಬ್ಬರು ಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.