`ಏನು ನಾನು ಮಾಡಿದ ಪಾಪಕ್ಕೆ ನನಗೆ ಪ್ರಾಯಶ್ಚಿತ್ತ ಆಗಿದೆ ಅಂತ ಹೇಳಿದ್ರೆ ನನ್ಗೆ ಕ್ಷಮೆ ಸಿಗೋ ಹಾಗೆ ಮಾಡ್ತೀಯಾ? ಪ್ರಾಯಶ್ಚಿತ್ತ ಆಗಿಲ್ಲ ಅಂದ್ರೆ ನನ್ನನ್ನ ನೇಣಿಗೆ ಹಾಕೋ ಹಾಗೆ ಮಾಡ್ಬಿಡ್ತೀಯಾ? ನಿನ್ ಕೈಲಿ ಎರಡೂ ಆಗಲ್ಲ ಬಿಡು, ಮತ್ಯಾಕೆ ಇಂಥ ತಲೆಹರಟೆ ಪ್ರಶ್ನೆಗಳ್ನೆಲ್ಲಾ ನಂಗೆ ಕೇಳ್ತೀಯಾ. ಸುಮ್ನೆ ಬಾಯ್ ಮುಚ್ಕೊಂಡು ಇರಕ್ಕಾಗಲ್ವಾ ನಿಂಗೆ?

ಇದು, `ಈಗಲಾದ್ರೂ ನೀನು ಮಾಡಿದ್ದು ಪಾಪದ ಕೆಲಸ ಅಂತ ಅನ್ನಿಸುತ್ತಾ ನಿಂಗೆ' ಎಂದು ಜೈಲು ಅಧಿಕಾರಿಯೊಬ್ಬರು ಕೇಳಿದ ಪ್ರಶ್ನೆಗೆ, ಹರ್ಯಾಣಾದ ಅಂಬಾಲಾ ಜೈಲಿನಲ್ಲಿ ಕಳೆದ 11 ವರ್ಷಗಳಿಂದಲೂ ಬಂದಿಯಾಗಿರುವ 31 ವರ್ಷದ ಸೋನಿಯಾ ಚೌಧರಿ ಎದೆಗೆ ಒದ್ದಂತೆ ಕೊಡುವ ಉತ್ತರ.

`ಓ ಅವಳಿಗೆ ಮಾತ್ರ ಹುಶಾರಿಲ್ಲ ಅಂದ ಕೂಡ್ಲೇ ಬಿಸಿನೀರು ಕೊಡ್ತೀರಿ, ನಮಗೆ ಮಾತ್ರ ಯಾಕೆ ಕೊಡಲ್ಲ ನೀವು' ಎಂದು ಕೊಳೆಗೇರಿಯಲ್ಲಿ ನಲ್ಲಿ ನೀರಿಗಾಗಿ ಕಾಲುಕೆರೆದು ಜಗಳಕ್ಕೆ ನಿಲ್ಲುವವರಂತೆ ಜೈಲರ್ನ್ನು ಗಟ್ಟಿಸಿ ಕೇಳುತ್ತಾರೆ ಪುಣೆಯ ಯರವಡಾ ಜೈಲಿನಲ್ಲಿರುವ ರೇಣುಕಾ ಶಿಂಧೆ ಮತ್ತು ಸೀಮಾ ಮೋಹನ್ ಗ್ಯಾವಿಟ್. 2003ರಲ್ಲಿ ಮುಂಬೈನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಮರಣದಂಡನೆಗೆ ಗುರಿಯಾಗಿ ತಮ್ಮ ಪಕ್ಕದ ಸೆಲ್ನಲ್ಲಿರುವ ಫೆಹ್ಮಿದಾ ಸೈಯ್ಯದ್ಗೆ ಬಿಸಿನೀರು ಕೊಟ್ಟರೆ ಕಣ್ಣು ಕೆಂಪಾಗಿಸಿಕೊಳ್ಳುವ ಈ ಸಹೋದರಿಯರಿಗೆ, ತಾವು ಹಿಂದೆ ಮಾಡಿದ ಘೋರ ಪಾತಕ ಹೆಚ್ಚುಕಡಿಮೆ ಮರೆತೇ ಹೋದಂತಾಗಿದೆ.

ಇವರಲ್ಲಿ ಸೋನಿಯಾ ಚೌಧರಿ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದ ಚೆಲುವೆ. ಕಾಲಲ್ಲಿ ತೋರಿದ್ದನ್ನು ತಲೆಯ ಮೇಲೆ ಹೊತ್ತು ಮಾಡುವ ರಾಜಕಾರಣಿ ಅಪ್ಪ, ತಾನು ಯಾವ ಕೆಲಸ ಮಾಡಿದರೂ ಸೈ ಎಂದು ಬೆನ್ನುತಟ್ಟುವ ಅಮ್ಮ, ಕೈಗೊಬ್ಬರು ಕಾಲಿಗೊಬ್ಬರು ಆಳು, ಕೈತುಂಬಾ ಹಣ... ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸೋನಿಯಾಗೆ ಬೇರೇನೂ ಬೇಕಿರಲಿಲ್ಲ. ಆದರೆ ಮಹಾರಾಷ್ಟ್ರದ ಶಿಂಧೆ ಸಹೋದರಿಯರದು ಇದಕ್ಕೆ ವ್ಯತಿರಿಕ್ತವಾದ ಬದುಕು.

ತಂದೆಯಿಂದ ದೂರವಾಗಿದ್ದ ತಾಯಿಯೊಟ್ಟಿಗೆ ಊರೂರು ಸುತ್ತುತ್ತಿದ್ದ ಈ ಹೆಂಗಸರು ಸಣ್ಣಪುಟ್ಟ ಕಳ್ಳತನ ಮಾಡುತ್ತಾ ಬದುಕುತ್ತಿದ್ದವರು. ವಿಷಯ ಇಷ್ಟೇ ಆಗಿದ್ದರೆ ಇವರು ಇಂದು ದೇಶದಾದ್ಯಂತ ಸುದ್ದಿಯಾಗುತ್ತಿರಲಿಲ್ಲ. ತಮಗೇ ಅರಿವಿಲ್ಲದಂತೆ ಕ್ರೂರ ಇತಿಹಾಸ ದಾಖಲಿಸುವ ಸ್ಪರ್ಧೆಯಲ್ಲೆಗ ಈ ಮೂವರೂ ಪೈಪೋಟಿಗೆ ಇಳಿದಿದ್ದಾರೆ. ಇವರಲ್ಲಿ, ಸ್ವಾತಂತ್ರ್ಯಾನಂತರ ದೇಶದ ಇತಿಹಾಸದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಲಿರುವ ಮೊದಲ ಮಹಿಳೆ ಯಾರಾಗಲಿದ್ದಾರೆ ಎಂಬುದೀಗ ಕುತೂಹಲದ ಸಂಗತಿಯಾಗಿದೆ.

ಅತ್ತ ಉಗ್ರ ಅಜ್ಮಲ್ ಕಸಾಬ್ಗೆ ದಿಢೀರ್ ಗಲ್ಲು ಶಿಕ್ಷೆ ಜಾರಿಗೆ ಬರುತ್ತಿದ್ದಂತೆಯೇ ಇತ್ತ ವಿವಿಧ ಕೋರ್ಟುಗಳಿಂದ ಮರಣದಂಡನೆಗೆ ಗುರಿಯಾಗಿ ದೇಶದ ವಿವಿಧ ಜೈಲುಗಳಲ್ಲಿ ದಿನ ಎಣಿಸುತ್ತಿರುವ 477 ಮಂದಿಯ ಜೀವ ಝಲ್ಲೆಂದಿದೆ. ಇವರಲ್ಲಿ 12 ಮಹಿಳೆಯರಿದ್ದು, ಈ ಪೈಕಿ ಮೇಲಿನ ಮೂವರ ಮರಣದಂಡನೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಮೂವರೂ ರಾಷ್ಟ್ರಪತಿ ಮುಂದೆ ಕ್ಷಮಾದಾನಕ್ಕಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಅವರಲ್ಲಿ, ಈಗ ರಾಷ್ಟ್ರಪತಿ ಪರಿಶೀಲನೆಗೆಂದು ಪರಿಗಣಿಸಿರುವ 14 ಅರ್ಜಿಗಳಲ್ಲಿ ಸೋನಿಯಾ ಅರ್ಜಿಯೂ ಸೇರಿದೆ. ಹೀಗಾಗಿ, ನ್ಯಾಯ ದೇವತೆ ಕಣ್ಣುಬಿಟ್ಟರೆ ಈ ಮೂವರಿಗೆ ಯಾರಿಗೆ ಯಾವ ಕ್ಷಣದಲ್ಲಿ ಬೇಕಾದರೂ ನೇಣಿನ ಕುಣಿಕೆ ಬೀಳಲಿದೆ.

ಮರಣದಂಡನೆಯನ್ನು ನಿಷೇಧಿಸಲು ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ವಿರುದ್ಧ ಭಾರತ ಮತ ಚಲಾಯಿಸಿ ಬಂದ ಮಾರನೇ ದಿನವೇ ಕಸಾಬ್ಗೆ ಬಿದ್ದ ನೇಣು ಕುಣಿಕೆಯು, ಪರಿವರ್ತನೆಗೆ ಅವಕಾಶವನ್ನೇ ಕೊಡದ ಇಂತಹದ್ದೊಂದು ಘೋರ ಶಿಕ್ಷೆ ಅಗತ್ಯವೇ ಎಂಬ ಚರ್ಚೆಗಷ್ಟೇ ಚಾಲನೆ ನೀಡಿಲ್ಲ; `ಅಬಲೆಯರು' ಎಂಬ ಕಾರಣಕ್ಕೆ ಇಂತಹ ಅಮಾನವೀಯ ಶಿಕ್ಷೆಯಿಂದ ಮಹಿಳೆಯರಿಗೆ ವಿನಾಯಿತಿ ನೀಡಬೇಕೇ ಬೇಡವೇ ಎಂಬ ಹಳೆಯ ಚರ್ಚೆಗಳೂ ಗರಿಗೆದರುವಂತೆ ಮಾಡಿದೆ.

ದೇಶದಲ್ಲಿ 1920ರಲ್ಲಿ ಒಬ್ಬ ಮಹಿಳೆಯನ್ನು ಗಲ್ಲಿಗೇರಿಸಲಾಗಿತ್ತು. ಅದು ಬಿಟ್ಟರೆ ಪರಮಪಾತಕಿಗಳಿಗಷ್ಟೇ ನೀಡುವ ಈ ಶಿಕ್ಷೆಗೆ ಸ್ವಾತಂತ್ರ್ಯಾನಂತರ ಯಾವ ಮಹಿಳೆಯೂ ಒಳಗಾಗಿಲ್ಲ. ಅಂತಹದ್ದೊಂದು ಇತಿಹಾಸ ಬರೆಯಲು ಹೊರಟಿದ್ದ ನಳಿನಿ ಶ್ರೀಹರನ್ ಕಡೇ ಗಳಿಗೆಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಳು.

ಸೋನಿಯಾ ಗಾಂಧಿ ಮಧ್ಯ ಪ್ರವೇಶಿಸದಿದ್ದರೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಳಿನಿಯ ಕುತ್ತಿಗೆಗೆ ನೇಣಿನ ಕುಣಿಕೆ ಬಿದ್ದು ಇಷ್ಟರಲ್ಲಿ ವರ್ಷಗಳೇ ಉರುಳಿ ಹೋಗಿರುತ್ತಿದ್ದವು. ಆದರೆ ಸ್ವತಃ ರಾಜೀವ್ ಪತ್ನಿಯ ದಯೆಯನ್ನೇ ಪಡೆದ `ಅದೃಷ್ಟವಂತೆ' ನಳಿನಿಯ ಗಲ್ಲು ಶಿಕ್ಷೆಯನ್ನು ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ್ದಾರೆ. ಅವರು ಗಲ್ಲು ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸಿದ 35 ಮಂದಿಯಲ್ಲಿ ನಳಿನಿ ಸಹ ಸೇರಿದ್ದಾಳೆ. ಈ ಮೂಲಕ, ಮೂರು ದಶಕಗಳ ರಾಷ್ಟ್ರಪತಿ ಭವನದ ಇತಿಹಾಸದಲ್ಲೇ ಗರಿಷ್ಠ ಕ್ಷಮಾದಾನ ನೀಡಿದ ರಾಷ್ಟ್ರಪತಿ ಎಂಬ ದಾಖಲೆಯನ್ನು ಪ್ರತಿಭಾ ಪಾಟೀಲ್ ಬರೆದಿದ್ದಾರೆ.

ಕರುಣಾಮಯಿ, ವಾತ್ಸಲ್ಯಧಾರೆ ಹರಿಸುವ ತಾಯಿ, ಕ್ಷಮಾಧರಿತ್ರಿ ಎಂದೆಲ್ಲಾ ಸಮಾಜದಿಂದ ಕರೆಸಿಕೊಳ್ಳುವ ಹೆಣ್ಣಿನ ಈ ವಿಶೇಷಣಗಳನ್ನೆಲ್ಲಾ ಹೊಸಕಿಹಾಕುವಂತೆ ಸೋನಿಯಾ ಚೌಧರಿ, ಸೀಮಾ ಮತ್ತು ರೇಣುಕಾ ಪಾತಕ ಜಗತ್ತಿನಲ್ಲಿ ತಮ್ಮ ಕರಾಳ ಛಾಪು ಮೂಡಿಸಿದ್ದಾರೆ. ಪಾತಕಕ್ಕೆ ಹೆಣ್ಣು, ಗಂಡಿನ ಭೇದವೇನು, ಅಪರಾಧ ಯಾರು ಮಾಡಿದರೂ ಅಪರಾಧವೇ ಎಂಬ ನ್ಯಾಯ ನಿಷ್ಠುರ ಮಾತುಗಳಿಗೆ ಅವರ ಪಾಶವೀ ಕೃತ್ಯಗಳು ಪುಷ್ಟಿ ನೀಡುವಂತಿವೆ. ಹಾಗಿದ್ದರೆ ಅವರು ಎಸಗಿದ ಅಂತಹ ಘೋರ ಕೃತ್ಯಗಳಾದರೂ ಏನು? ಬನ್ನಿ ನೋಡೋಣ.

ಲಾವಣ್ಯದ ಹಿಂದೆ...
`11 ವರ್ಷಗಳ ಹಿಂದೆ ನನ್ನ ಕುಟುಂಬದವರೆಲ್ಲರನ್ನೂ ನಾನು ಕೊಂದುಬಿಟ್ಟೆ' ಎಂದು ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತೆಯೊಬ್ಬರಿಗೆ ಕೊಟ್ಟ ಸಂದರ್ಶನದಲ್ಲಿ ಆ ಚೆಲುವೆ ಹೇಳಿದಾಗ, ಧಾರಾವಾಹಿಯ ಪಾತ್ರದ ಡೈಲಾಗ್ನ್ನು ಒಪ್ಪಿಸುತ್ತಿದ್ದಾಳೇನೋ ಎಂಬಂತೆ ಕಾಣುತ್ತಿದ್ದಳು. ಅಚ್ಚುಕಟ್ಟಾಗಿ ತಲೆ ಬಾಚಿಕೊಂಡು ಎಲ್ಲಿಗೋ ಹೊರಟವಳಂತೆ ತೋರುತ್ತಿದ್ದ ಅವಳ ಕಣ್ಣುಗಳು ಫಳಫಳನೆ ಹೊಳೆಯುತ್ತಿದ್ದವು.

ಟೇಕ್ವಾಂಡೊ ಚಾಂಪಿಯನ್, ಹಿಸಾರ್ನ ಪ್ರತಿಷ್ಠಿತ ಶಾಲೆಯಾದ ವಿದ್ಯಾ ದೇವಿ ಜಿಂದಾಲ್ನ ಹಳೆಯ ವಿದ್ಯಾರ್ಥಿನಿ... ಹೀಗೆ ಹೆಮ್ಮೆಪಡಲು ಅವಳಿಗೆ ಬಹಳಷ್ಟು ಕಾರಣಗಳಿದ್ದವು. 11 ವರ್ಷಗಳಿಂದ ಜೈಲಿನಲ್ಲಿದ್ದರೂ ಅವಳ ಸೌಂದರ್ಯ ಮಾತ್ರ ಮಾಸಿರಲಿಲ್ಲ. ಆದರೆ ಬಿಸಿಲಿಗೆ ಫಳಾರನೆ ಮಿಂಚುತ್ತಿದ್ದ ಅವಳ ಮೂಗಿನ ನತ್ತು ಮಾತ್ರ, ಸುಂದರ ಮುಖದ ಹಿಂದಿದ್ದ ಬೇರೆಯದೇ ಕಥೆಯನ್ನು ಹೇಳುವಂತಿತ್ತು.

ಅವಳು ಸೋನಿಯಾ ಚೌಧರಿ. ಗಂಡ ಸಂಜೀವ್ ಕುಮಾರನೊಟ್ಟಿಗೆ ಸೇರಿಕೊಂಡು ಹೆತ್ತವರನ್ನೂ ಬಿಡದಂತೆ ಕುಟುಂಬದ ಎಲ್ಲ 8 ಜನರನ್ನೂ ಕೊಚ್ಚಿ ಕೊಂದು ಹಾಕಿದವಳು. ಆ ಮುಹೂರ್ತಕ್ಕಾಗಿ ಆಕೆ ಆಯ್ದುಕೊಂಡದ್ದು ತನ್ನ ಹುಟ್ಟುಹಬ್ಬದ ದಿನವನ್ನು. 2001ರ ಆಗಸ್ಟ್ 23ಕ್ಕೆ ಸೋನಿಯಾಗೆ 19 ವರ್ಷ ತುಂಬುವುದರಲ್ಲಿತ್ತು.

ಪ್ರತಿ ವರ್ಷ ಹುಟ್ಟುಹಬ್ಬದ ನೆಪದಲ್ಲಿ ಅಪ್ಪನಿಂದ ದುಬಾರಿ ಗಿಫ್ಟ್ಗಳನ್ನೇ ಗಿಟ್ಟಿಸಿಕೊಳ್ಳುತ್ತಿದ್ದ ಸೋನಿಯಾ ಈ ಬಾರಿ ಮಾತ್ರ ಇಡೀ ಮನೆಯವರ ರಕ್ತತರ್ಪಣವನ್ನೇ ಜನ್ಮದಿನದ ಬಳುವಳಿಯಾಗಿ ಪಡೆಯಲು ನಿರ್ಧರಿಸಿಬಿಟ್ಟಿದ್ದಳು.

ಅಪ್ಪನಿಗೆ ಪ್ರೀತಿಪಾತ್ರ ಮಗಳಾಗಿದ್ದ ಅವಳ ರಕ್ತ ಕಳೆದ ಕೆಲ ದಿನಗಳಿಂದ ಅಪ್ಪನ ಹೆಸರೆತ್ತಿದರೂ ಸಾಕು ಕುದಿಯುತ್ತಿತ್ತು. ಮಾಜಿ ಶಾಸಕರಾಗಿದ್ದ ಅವಳ ತಂದೆ ರೇಲು ರಾಮ್ ಪುನಿಯಾ ಒಬ್ಬ ಉದ್ಯಮಿ ಸಹ. 200 ಎಕರೆ ತೋಟದ ಜೊತೆಗೆ ದೆಹಲಿ, ಫರೀದಾಬಾದ್ ಸೇರಿದಂತೆ ಹಲವೆಡೆ ಇದ್ದ ಆಸ್ತಿಪಾಸ್ತಿಯ ಒಡೆಯ.

ಆದರೆ ಆತನ ಕುಟುಂಬ ಮಾತ್ರ ಒಡೆದ ಮನೆ. ಎಲ್ಲರೂ ಒಂದೇ ಸೂರಿನಡಿ ಇದ್ದರಾದರೂ ಮನಸ್ಸುಗಳು ಮಾತ್ರ ಒಡೆದುಹೋಗಿದ್ದವು. ಇಬ್ಬರು ಹೆಂಡತಿಯರಿದ್ದ ರೇಲು ರಾಮ್, ಹಿಸಾರ್ನ ತೋಟದ ಮನೆಯಲ್ಲಿ ಎರಡನೇ ಹೆಂಡತಿ ಕೃಷ್ಣಾ (ಸೋನಿಯಾ ತಾಯಿ) ಆಕೆಯ ಮಕ್ಕಳು ಮತ್ತು ಮೊದಲ ಹೆಂಡತಿಯ ಮಕ್ಕಳೊಟ್ಟಿಗೆ ವಾಸಿಸುತ್ತಿದ್ದರು. ಅವರಿದ್ದ ಆ ವೈಭವೋಪೇತ ಮನೆ ಸದಾ ಅಶಾಂತಿಯ ಗೂಡಾಗಿತ್ತು. ಕೃಷ್ಣಾ ಆಸ್ತಿ ವಿಷಯದಲ್ಲಿ ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ಸೋನಿಯಾ ತಂಗಿ 14 ವರ್ಷದ ಪ್ರಿಯಾಂಕಾ ಮಾತ್ರ ಮನೆಯವರ ನಡುವೆ ಸಂಪರ್ಕ ಸೇತುವಿನಂತಿದ್ದಳು.

ಇಷ್ಟೆಲ್ಲ ಆದರೂ ರೇಲು ರಾಮ್ಗೆ ಸೋನಿಯಾ ಮೇಲಿನ ಪ್ರೀತಿಯಂತೂ ಕಡಿಮೆಯಾಗಿರಲಿಲ್ಲ. ಅದಕ್ಕೇ, ನಿರ್ಗತಿಕ ಸಂಜೀವ್ನನ್ನು ಮದುವೆಯಾಗಲು ಆಕೆ ಹಟ ಹಿಡಿದಾಗಲೂ ತಲೆಬಾಗಿದ್ದ ಅವರು, 60 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.

ಅಳಿಯನ ಊರು ಶಹರಾನ್ಪುರದಲ್ಲಿ ಆಕೆಯ ಹೆಸರಿನಲ್ಲಿ ಮನೆಯನ್ನೂ ತೆಗೆಸಿಕೊಟ್ಟಿದ್ದರು. ಆದರೆ ಹೆಂಡತಿ ಕೃಷ್ಣಾ ಜೊತೆ ಅವರ ಸಂಬಂಧ ಮಾತ್ರ ದಿನೇ ದಿನೇ ಹದಗೆಡುತ್ತಿತ್ತು. ಇದು ತಂದೆ- ಮಗಳ ಸಂಬಂಧದ ಮೇಲೂ ಪರಿಣಾಮ ಬೀರಿತು. ಆಸ್ತಿಪಾಸ್ತಿ ವಿಷಯಕ್ಕೆ ಮನಸ್ತಾಪಗಳು ಹೆಚ್ಚಾದವು. ಪ್ರತಿ ಬಾರಿ ತಾಯಿಯ ಮನೆಯಿಂದ ಹಿಂದಿರುಗುವಾಗಲೂ ಸೋನಿಯಾ ಮನೆಯವರೊಟ್ಟಿಗೆ ಜಗಳವಾಡದೇ ಬರುತ್ತಿರಲಿಲ್ಲ. ಆ ದಿನ ಸಹ ಆಕೆ ಜಗಳವಾಡಿಕೊಂಡೇ ಗಂಡನ ಮನೆಗೆ ಬಂದಳು.

ಆದರೆ ಈ ಬಾರಿ ಯಾಕೋ ಏನೋ ಅವಳ ರೋಷ ತಣ್ಣಗಾಗಲೇ ಇಲ್ಲ. `ಈ ಭೂಮಿಯ ಮೇಲೆ ಅವರಿರಬೇಕು ಇಲ್ಲಾ ನಾನಿರಬೇಕು' ಎಂದು ಹೇಳಿದ ಅವಳ ತಲೆಯಲ್ಲಾಗಲೇ ಕರಾಳ ಅಧ್ಯಾಯವೊಂದಕ್ಕೆ ಮುನ್ನಡಿ ಬರೆಯುವ ಯೋಜನೆ ಹುಟ್ಟು ಪಡೆದಿತ್ತು. ಇದಕ್ಕೆ ಗಂಡನ ಬೆಂಬಲವೂ ಸಿಕ್ಕಿತು. ಕಡೆಗೆ ಇಬ್ಬರೂ ಸೇರಿ ಸೋನಿಯಾ ಜನ್ಮದಿನದ ನೆಪದಲ್ಲಿ ತಾಯಿಯ ಮನೆಗೆ ಹೋದಾಗಲೇ ಅವರೆಲ್ಲರ ಸಾವಿಗೆ ಕ್ಷಣ ಗೊತ್ತು ಮಾಡಲು ನಿರ್ಧರಿಸಿದರು.

ಮೊದಲು ಹುಟ್ಟುಹಬ್ಬದ ಖುಷಿಯಲ್ಲಿ ಪಟಾಕಿ ಹೊಡೆಯುವ ಸಂಭ್ರಮದಲ್ಲಿದ್ದಾಗ ಬಂದೂಕಿನಿಂದ ಗುಂಡಿಟ್ಟು ಎಲ್ಲರನ್ನೂ ಹೊಡೆದುರುಳಿಸಬೇಕು ಎಂದುಕೊಂಡರು. ಆದರೆ ನೇರವಾಗಿ ನಡೆಸುವ ಈ ಪಾತಕಕ್ಕೆ ಸಂಜೀವ್ ಹಿಂಜರಿದ. ಎಲ್ಲರೂ ಮಲಗಿದ್ದಾಗ ಕಬ್ಬಿಣದ ಸಲಾಕೆಯಿಂದ ಕೊಚ್ಚಿ ಹಾಕುವ ಸಲಹೆ ಇಬ್ಬರಿಗೂ ಒಪ್ಪಿಗೆಯಾಯಿತು. ಅಂದುಕೊಂಡಂತೆಯೇ ನಾಲ್ಕು ಮಹಡಿಗಳ ತೋಟದ ಮನೆಯ ನಾಲ್ಕಾರು ಕೋಣೆಗಳಲ್ಲಿ ಆ ರಾತ್ರಿ ಸಾವಿನ ರುದ್ರನರ್ತನ ನಡೆದೇಹೋಯಿತು.

ಮೊದಲು ಬಲಿಯಾದದ್ದೇ ರೇಲು ರಾಮ್. ನಂತರ ತಾಯಿ ಕೃಷ್ಣಾ, ತಂಗಿ ಪ್ರಿಯಾಂಕಾ, ಮಲ ಸಹೋದರ ಸುನಿಲ್, ಅವನ ಪತ್ನಿ ಶಕುಂತಲಾ, ಅವರ ಮಕ್ಕಳಾದ ಲೋಕೇಶ್ (4), ಶಿವಾನಿ (2), ಕೇವಲ 45 ದಿನದ ಕೂಸು ಪ್ರೀತಿ ಎಲ್ಲರೂ ಒಬ್ಬರ ನಂತರ ಒಬ್ಬರು ಸೋನಿಯಾ ಆಕ್ರೋಶಕ್ಕೆ ಗುರಿಯಾಗಿಹೋದರು.

ಅಪ್ಪ- ಅಮ್ಮನ ಹಿಂಸೆ ತಾಳಲಾರದೇ ಈ ಕೃತ್ಯ ಎಸಗಿ ಸೋನಿಯಾ ಸಹ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕ ಮಾಡುವುದು, ಏನಿಲ್ಲವೆಂದರೂ ತಮ್ಮ ಹೆಸರಿಗೆ ಅಪ್ಪನ ಆಸ್ತಿಪಾಸ್ತಿ ಬರಲು ಕನಿಷ್ಠ ಎರಡು ತಿಂಗಳಾದರೂ ಬೇಕಾಗುತ್ತದೆ; ಅಷ್ಟರವರೆಗೆ ಜಾಮೀನು ಪಡೆಯಲು ಸೋನಿಯಾ ಒಡವೆಯನ್ನು ಅಡ ಇಡುವುದು ಎಂದು ದಂಪತಿ ತೀರ್ಮಾನಿಸಿದ್ದರು. ಆದರೆ ನ್ಯಾಯದೇವತೆಯ ಕಣ್ಣು ಕುರುಡಾಗಿರಲಿಲ್ಲ.

ಇದು ರೋಷಾವೇಷದಲ್ಲಿ ಆಗಿಹೋದ ಘಟನೆ ಎಂದು ತಳ್ಳಿಹಾಕಲು ಅಲ್ಲಿ ಅವಕಾಶವೇ ಇರಲಿಲ್ಲ. ಯಾಕೆಂದರೆ ಸೋನಿಯಾ ದಂಪತಿ ತಮ್ಮ ಕೃತ್ಯ ಎಸಗಲು ತೆಗೆದುಕೊಂಡದ್ದು ಬರೋಬ್ಬರಿ ನಾಲ್ಕು ಗಂಟೆ. ಈ ಮಧ್ಯೆ ಅವರು ನಡುನಡುವೆ ನೀರು ಕುಡಿಯುತ್ತಾ, ಸುಧಾರಿಸಿಕೊಂಡು ಮುಂದಿನ ಬೇಟೆಗೆ ಹೊಂಚು ಹಾಕಿದ್ದರು.

ಇದೆಲ್ಲವನ್ನೂ ಪರಿಗಣಿಸಿದ ವಿಚಾರಣಾ ನ್ಯಾಯಾಲಯ 2004ರಲ್ಲಿ ಸೋನಿಯಾ ಮತ್ತು ಸಂಜೀವ್ಗೆ ಮರಣದಂಡನೆ ವಿಧಿಸಿತು. ಆದರೆ ತನಗೆ ಪುಟ್ಟ ಮಗನಿರುವುದರಿಂದ ಕರುಣೆ ತೋರಬೇಕೆಂಬ ಸೋನಿಯಾ ಬೇಡಿಕೆಗೆ ಮಣಿದ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. ಇಷ್ಟೆಲ್ಲ ಆದರೂ ಕಿಂಚಿತ್ತೂ ಪಶ್ಚಾತ್ತಾಪ ಇಲ್ಲದಂತಹ ಸೋನಿಯಾ ನಡತೆ, ಸಹ ಕೈದಿಗಳೊಂದಿಗೆ ದುರ್ವರ್ತನೆ, ಸದಾ ಸಿಬ್ಬಂದಿಯೊಟ್ಟಿಗೆ ಜಗಳವಾಡುವುದು, ಯಾರಾದರೂ ಆಕ್ಷೇಪಿಸಿದರೆ `8 ಜನರನ್ನು ಕೊಂದಿರುವ ನನಗೆ ಇನ್ನೊಂದು ಜೀವ ತೆಗೆಯುವುದು ದೊಡ್ಡ ವಿಷಯವೇನಲ್ಲ' ಎಂದು ಧಮಕಿ ಹಾಕುವುದು ನಡೆದೇ ಇತ್ತು.

ಸೋನಿಯಾಗೆ ಶಿಕ್ಷೆ ಕೊಡಿಸಿಯೇ ತೀರಬೇಕೆಂದು ಪಣ ತೊಟ್ಟಿರುವ ಆಕೆಯ ಚಿಕ್ಕಪ್ಪ ರಾಮ್ ಸಿಂಗ್ ಅವರ ಪರ ವಕೀಲ ಲಾಲ್ ಬಹದ್ದೂರ್ ಖೋವಲ್ ಇದೆಲ್ಲವನ್ನೂ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಬಳಿಕ 2007ರಲ್ಲಿ ಸುಪ್ರೀಂಕೋರ್ಟ್ ಇಬ್ಬರ ಮರಣದಂಡನೆಯನ್ನೂ ಎತ್ತಿ ಹಿಡಿಯಿತು.

ಘಟನೆ ನಡೆದು ಈಗ 11 ವರ್ಷಗಳೇ ಕಳೆದುಹೋಗಿವೆ. ಬತ್ತದ ಗದ್ದೆಗಳ ನಡುವೆ ನಿಂತಿರುವ ಆ ಮಾಸಲು `ಅರಮನೆ' ಆಗ ಹೇಗಿತ್ತೋ ಈಗಲೂ ಹಾಗೇ ಇದೆ.

ಗೊಂಚಲು ದೀಪಗಳು, ಮಾರ್ಬಲ್ ವೆುಟ್ಟಿಲುಗಳು, ಹಳೆಯ ಮಾದರಿಯ ಸುಂದರ ಒಳಾಂಗಣ ವಿನ್ಯಾಸ ಎಲ್ಲವೂ ಇದ್ದಂತೆಯೇ ಇವೆ. ಆವರಣದಲ್ಲಿರುವ ಈಜುಕೊಳ ಒಣಗಿಹೋಗಿದೆ, ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಕಳೆ ಬೆಳೆದಿದೆ. `ಅವಳನ್ನು ಗಲ್ಲಿಗೇರಿಸುವವರೆಗೆ ಈ ಮನೆಯ ಒಂದು ಹುಲ್ಲುಕಡ್ಡಿಯನ್ನೂ ನಾನು ಅಲ್ಲಾಡಿಸುವುದಿಲ್ಲ. ಅವಳ ಪ್ರಾಣ ಹೋದ ನಂತರವಷ್ಟೇ ಈ ಮನೆಗೆ ಹೊಸ ರೂಪ ಕೊಡುತ್ತೇನೆ' ಎಂದು ಹೇಳುವಾಗ ರಾಮ್ ಸಿಂಗ್ ಕಣ್ಣಾಲಿಗಳು ತುಂಬಿಬರುತ್ತವೆ.

ಅವರು ತಮ್ಮ ಕುಟುಂಬದೊಟ್ಟಿಗೆ ಅಣ್ಣನ ಅದೇ ಮನೆಯಲ್ಲಿ ನೆಲೆಸಿದ್ದಾರೆ. ಆದರೆ ಆ ಭಯಾನಕ ಘಟನೆಯಿಂದ ಗೋಡೆಯ ಮೇಲೆ ಚಿಮ್ಮಿದ ರಕ್ತದ ಕಲೆಗಳನ್ನು ಅವರು ಒರೆಸಿಲ್ಲ. ರಕ್ತಸಿಕ್ತ ಹಾಸಿಗೆ, ದಿಂಬುಗಳು ಆ ಕರಾಳ ರಾತ್ರಿ ಎಲ್ಲೆಲ್ಲಿ ಹೇಗೆ ಬಿದ್ದಿದ್ದವೋ ಈಗಲೂ ಹಾಗೆಯೇ ಇವೆ. ಮತ್ತೊಂದು ಕೋಣೆಯಲ್ಲಿ ಕಟ್ಟಿದ್ದ `ಹ್ಯಾಪಿ ಬರ್ತ್ಡೇ ಲೋಕೇಶ್' ಎಂಬ ಬ್ಯಾನರ್ ಅನ್ನೂ ಅವರು ತೆಗೆದಿಲ್ಲ. ತಮ್ಮನ್ನು ಮಾತನಾಡಿಸಲು ಬರುವ ಮಾಧ್ಯಮದವರನ್ನು ರಾಮ್ ಸಿಂಗ್ ಕೇಳುವುದು ಒಂದೇ ಪ್ರಶ್ನೆ `ಅವಳನ್ನು ಯಾವಾಗ ನೇಣಿಗೆ ಹಾಕುತ್ತಾರೆ?'

ಕರುಣೆ ಇಲ್ಲದವರು
ಹಿಂಸೆಗೆ ಹಲವು ಮುಖ. ರೇಣುಕಾ ಶಿಂಧೆ ಮತ್ತು ಸೀಮಾ ಮೋಹನ್ ಇದಕ್ಕೆ ಉದಾಹರಣೆ. ಸುಮಾರು 13 ಮಕ್ಕಳನ್ನು ಅಪಹರಿಸಿ ಕೊಂದು ಹಾಕಿದ ಆರೋಪ ಇವರ ಮೇಲಿದೆ. ಆದರೆ ಈವರೆಗೆ ಸಂತೋಷ್, ಅಂಜಲಿ, ಶ್ರದ್ಧಾ, ಗೌರಿ ಮತ್ತು ಪಂಕಜ್ ಎಂಬ ಐವರು ಮಕ್ಕಳ ಸಾವುಗಳು ಮಾತ್ರ ಸಾಬೀತಾಗಿವೆ. ವಿಚಾರಣಾ ನ್ಯಾಯಾಲಯ 1996ರಲ್ಲಿ ನೀಡಿದ ಮರಣದಂಡನೆಯನ್ನು 2004ರಲ್ಲಿ ಹೈಕೋರ್ಟ್ ಮತ್ತು 2006ರಲ್ಲಿ ಸುಪ್ರೀಂಕೋರ್ಟ್ ಎತ್ತಿಹಿಡಿದಿವೆ.

ತಂದೆಯಿಂದ ದೂರಾಗಿದ್ದ ಈ ಸಹೋದರಿಯರ ಎಲ್ಲ ದುಷ್ಕೃತ್ಯಗಳಿಗೆ ತಾಯಿ ಅಂಜನ್ಬಾಯಿಯೇ ಗುರು. ಸಣ್ಣ ಪುಟ್ಟ ಪಿಕ್ಪಾಕೆಟ್ನಿಂದ ಆರಂಭವಾದ ಕಳ್ಳತನದ ಅಭ್ಯಾಸ, ಕಡೆಗೆ ಜನರಿಂದ ತಪ್ಪಿಸಿಕೊಳ್ಳಲು ಕದ್ದ ಮಕ್ಕಳನ್ನು ಬಳಸಿಕೊಳ್ಳುವ ಮಟ್ಟಕ್ಕೆ ಬಂತು. ಕಳ್ಳತನ ಮಾಡುವಾಗ ಸಿಕ್ಕಿಬಿದ್ದರೆ ಮಕ್ಕಳೊಂದಿಗರಾದ ತಾವು ಅಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಜನರನ್ನು ನಂಬಿಸಿ ಪಾರಾಗುವುದು ಅವರ ಯೋಜನೆ. ಕಡೆಕಡೆಗೆ ಕಳ್ಳತನ ಎಸಗಲು ಮಕ್ಕಳನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಅವರಿಗೆ ಒಂದು ಚಟವೇ ಆಗಿಹೋಯಿತು.

ಹೀಗೆ ಒಂದು ವರ್ಷದಿಂದ 9 ವರ್ಷದವರೆಗಿನ 15ಕ್ಕೂ ಹೆಚ್ಚು ಮಕ್ಕಳನ್ನು ಈ ಸೋದರಿಯರು ತಾಯಿಯ ನೆರವಿನೊಂದಿಗೆ ಅಪಹರಿಸಿದ್ದರು. ತಮಗೆ ಸಹಕರಿಸದ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಚ್ಚಿ ಹಾಕಿದ್ದರು. ಒಮ್ಮೆ ಭಿಕ್ಷುಕಿಯೊಬ್ಬಳ ಒಂದು ವರ್ಷದ ಮಗುವನ್ನು ಅವರು ಅಪಹರಿಸಿ ತಂದಿದ್ದರು.

ಕಳ್ಳತನ ಮಾಡಿ ಪರಾರಿಯಾಗುವ ಧಾವಂತದಲ್ಲಿ ಮಗುವಿಗೆ ತೀವ್ರ ಗಾಯವಾಗಿತ್ತು. ನೋವು ತಡೆಯಲಾರದೇ ಮಗು ರಚ್ಚೆ ಹಿಡಿದು ಅಳುತ್ತಲೇ ಇತ್ತು. ಇದರಿಂದ ರೋಸಿಹೋದ ಅಂಜನಾಬಾಯಿ ಆ ಮಗುವನ್ನು ಗೋಡೆಗೆ ಬಡಿದು ಬಡಿದು ಸಾಯಿಸಿದ್ದಳು. ಆಗ, ಪಕ್ಕದಲ್ಲೇ ಕುಳಿತಿದ್ದ ಈ ಅಕ್ಕತಂಗಿಯರಿಬ್ಬರೂ ವಡಾಪಾವ್ ಮೆಲ್ಲುತ್ತಿದ್ದರು ಎನ್ನಲಾಗಿದೆ.

`ಇಂತಹ ಹೇಯ ಕೃತ್ಯ ಎಸಗಿದ ಈ ಅಕ್ಕ- ತಂಗಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇವರಿಗೆ ಕಿಂಚಿತ್ತೂ ಕರುಣೆಯಿಲ್ಲ. ಮಹಿಳೆಯರು ಎಂಬ ಕಾರಣಕ್ಕೆ ಇವರಿಗೆ ಯಾವ ಬಗೆಯ ವಿನಾಯಿತಿಯನ್ನೂ ಕೊಡಬಾರದು' ಎನ್ನುತ್ತಾರೆ ಇವರಿಬ್ಬರ ವಿರುದ್ಧ ವಾದ ಮಂಡಿಸಿ ಯಶಸ್ವಿಯಾಗಿರುವ ಮಹಾರಾಷ್ಟ್ರದ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ.

ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ 14 ಮಾಜಿ ನ್ಯಾಯಾಧೀಶರು ಅವರಿಗೆ ಪತ್ರ ಬರೆದು, ಕ್ಷಮಾದಾನ ಕೋರಿರುವ 14 ಮಂದಿಯಲ್ಲಿ 13 ಮಂದಿಯ ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಾನವೀಯತೆಯ ಸೋಂಕೂ ಇಲ್ಲದಂತೆ ನಿಷ್ಕಾರುಣವಾಗಿ ಜೀವಗಳನ್ನು ಬಲಿ ತೆಗೆದುಕೊಂಡಿರುವವರಿಗೆ ಮರಣದಂಡನೆಯೇ ತಕ್ಕ ಶಿಕ್ಷೆ ಎನ್ನುವವರು, ನೂರಾರು ಜನರ ರಕ್ತಹೀರಿದ ಡಕಾಯಿತ ರಾಣಿ ಫೂಲನ್ ದೇವಿ ಅಂತಹವರನ್ನೇ ಕ್ಷಮಿಸಿ ಜನಪ್ರತಿನಿಧಿಯ ರೂಪದಲ್ಲಿ ಸಂಸತ್ತಿನ ಒಳಕ್ಕೇ ಬರಮಾಡಿಕೊಂಡಿರುವಾಗ ಉಳಿದವರನ್ನು ಕ್ಷಮಿಸುವುದರಲ್ಲಿ ತಪ್ಪೇನಿದೆ ಎಂದು ಕೇಳುವವರು... ಹೀಗೆ ವಿಭಿನ್ನ ಆಲೋಚನೆಗಳ, ಬಗೆಬಗೆ ಅಭಿಪ್ರಾಯ ಮಂಡಿಸುವ ನಾಗರಿಕ ಸಮಾಜ ನಮ್ಮದು. ಆದರೆ ನ್ಯಾಯ ದೇವತೆಯ ತಕ್ಕಡಿಯಲ್ಲಿ ನ್ಯಾಯ ಯಾರ ಪರ ವಾಲುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.