ನಾನಾಗ ನಾಲ್ಕನೇ ಕ್ಲಾಸಿನ ವಿದ್ಯಾರ್ಥಿ. ‘ಬುಲ್‍ಬುಲ್ಸ್’ ಎಂಬ ಪಠ್ಯೇತರ ಚಟುವಟಿಕೆಗಳ ಗುಂಪಿನ ಸದಸ್ಯೆಯಾಗಿದ್ದೆ. ವಾರಾಂತ್ಯದಲ್ಲಿ ಶಾಲೆಯ ನಿತ್ಯದ ಅವಧಿ ಮುಗಿದ ನಂತರ ಈ ಗುಂಪಿನ ಸದಸ್ಯರುಗಳು ಒಂದೆರಡು ತಾಸು ಹೆಚ್ಚುವರಿಯಾಗಿ ಶಾಲೆಯಲ್ಲೇ ಉಳಿಯಬೇಕಿತ್ತು. ಶಾಲಾ ಆವರಣವನ್ನು ಚೊಕ್ಕ ಮಾಡುವುದು, ಮಾರ್ಚ್‍ಪಾಸ್ಟ್ ಅಭ್ಯಾಸ, ಧ್ವಜವನ್ನು ಕಟ್ಟುವ, ಏರಿಸುವ ಕೆಲಸ ಇತ್ಯಾದಿ ವಿಷಯಗಳನ್ನು ಅಲ್ಲಿ ಹೇಳಿಕೊಡುತ್ತಿದ್ದರು.

‘ಬುಲ್‍ಬುಲ್ಸ್’ನವರಿಗೇ ಪ್ರತ್ಯೇಕ ಸಮವಸ್ತ್ರ ಇರುತ್ತಿತ್ತು. ನೀಲಿಬಣ್ಣದ ಸ್ಕರ್ಟು, ಕುತ್ತಿಗೆಗೊಂದು ಸ್ಕಾರ್ಫ್ (ದಟ್ಟ ನೀಲಿ ಬಣ್ಣಕ್ಕೆ ಮರುಳಾಗಿ ‘ಬುಲ್‍ಬುಲ್ಸ್’ ಸೇರಿದ್ದ ನಾನು ಈ ಕ್ಷಣದವರೆಗೂ ಆ ನೀಲಿಯ ಸೆಳೆತವನ್ನು ತಪ್ಪಿಸಿಕೊಳ್ಳಲಾಗದೆ, ಅದೇ ಸಮವಸ್ತ್ರವನ್ನು ನನ್ನ ಬಳಿ ಜೋಪಾನವಾಗಿ ಇರಿಸಿಕೊಂಡಿದ್ದೇನೆ!). ವರ್ಷದಲ್ಲಿ ಒಮ್ಮೆ ಒಂದಿಡೀ ದಿನ ಊರಿನ ಆಸುಪಾಸಿನ ಯಾವುದಾದರೂ ಸ್ಥಳದಲ್ಲಿ ‘ಕ್ಯಾಂಪ್’ ನಡೆಸುತ್ತಿದ್ದರು. ಅಂತಹದ್ದೊಂದು ಕ್ಯಾಂಪನ್ನು ಆಲೂರು ರಸ್ತೆಯಲ್ಲಿರುವ ‘ಯಗಚಿ ವಿದ್ಯಾಪೀಠ’ದಲ್ಲಿ ಆಯೋಜಿಸಿದ್ದರು.

ಬೆಂಕಿಯ ಸಹಾಯವಿಲ್ಲದೆ ಮಕ್ಕಳು ಏನಾದರೂ ಅಡುಗೆ/ತಿನಿಸು ಮಾಡಬೇಕು ಎಂಬುದು ಆ ಕ್ಯಾಂಪಿನಲ್ಲಿ ನಮಗೆ ಕೊಟ್ಟಿದ್ದ ಸವಾಲಾಗಿತ್ತು. ನಾಲ್ಕನೆಯ ತರಗತಿಯಲ್ಲಿ ಮಕ್ಕಳಿಗೆ ಎಷ್ಟು ಅಡುಗೆಯ ಜ್ಞಾನ, ಆಸಕ್ತಿ ಇರುತ್ತದೆ ಎನ್ನುವುದನ್ನು ಯಾರಾದರೂ ಊಹಿಸಬಹುದು. ಅಂತಹದ್ದರಲ್ಲಿ ಆರೇಳು ಮಕ್ಕಳ ನಾಲ್ಕು ‘ಬುಲ್‍ಬುಲ್ಸ್’ ಗುಂಪಿನವರೂ ತಮ್ಮೆಲ್ಲ ಜ್ಞಾನ, ಸೃಜನಶೀಲತೆಯನ್ನು ಬಳಸಿ ಚುರುಮುರಿ (ಆಗೆಲ್ಲ ಇನ್ನೂ ‘ಭೇಲ್‍ಪುರಿ’ಯ ಭರಾಟೆ ಇರಲಿಲ್ಲ!), ಸೌತೇಕಾಯಿ ಕೋಸಂಬರಿ (ಹೊಸ ತಳಿಯ ಆವಿಷ್ಕಾರದಲ್ಲಿ ಹಾಸನದ ಆ ವಿಶೇಷ ನಾಟಿಸೌತೆ ಈಗ ಈ ಲೋಕದಿಂದಲೇ ಕಣ್ಮರೆಯಾಗಿದೆ!), ಕ್ಯಾರೆಟ್ ಕೋಸಂಬರಿ, ಟೊಮೆಟೊ ತಿನಿಸು (ಒಂದು ಲೋಟಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೊ, ಮೂರು ನಾಲ್ಕು ಚಮಚ ಬೆಲ್ಲ ಅಥವಾ ಸಕ್ಕರೆ ಹಾಕಿ ಒಂದು ಚಮಚದಿಂದ ಟೊಮೆಟೊವನ್ನು ಎಷ್ಟು ಸಾಧ್ಯವೋ ಅಷ್ಟು ಜಜ್ಜುವುದು. ಟೊಮೆಟೊದಿಂದ ಹೊರಬರುವ ರಸವು ಸಕ್ಕರೆಯ ಜೊತೆ ಸೇರಿಕೊಂಡು ಆ ಲೋಟದಲ್ಲಿ ಟೊಮೆಟೊ ಪಾನೀಯದ ಜೊತೆಗೆ ಟೊಮೆಟೊ ಚೂರುಗಳೊಂದಿಗೆ ಸವಿಯಲು ಸಿದ್ಧವಾಗುತ್ತದೆ.) ಇವನ್ನೆಲ್ಲ ನಾವು ಮಾಡಿದ ನೆನಪು ಈಗಲೂ ಮನಸ್ಸಿನಲ್ಲಿ ಉಳಿದಿದೆ. ಜೊತೆಗೆ, ಇದನ್ನು ಸಿದ್ಧ ಮಾಡಲು ಒಂದು ಗುಂಪಿನವರ ಬಳಿ ಯಾವುದಾದರೂ ಸಾಮಗ್ರಿ ಇಲ್ಲದೆ ಹೋದಾಗ ಅಥವಾ ಕಡಿಮೆ ಬಿದ್ದಾಗ ಮತ್ತೊಬ್ಬರ ಹತ್ತಿರ ಕೇಳಿ ಪಡೆದು ಮಾಡಿದ್ದೂ ನೆನಪಿದೆ. ಇದು ‘ಸ್ಪರ್ಧೆ’ ಅಂತಲೇ ಮಾಡಿದ್ದರಾದರೂ, ಪಾಲ್ಗೊಂಡ ಎಲ್ಲರಿಗೂ ಕೇಕು, ಚಾಕಲೇಟು ಸಿಕ್ಕಿದ್ದೂ ಮರೆಯಲಾಗಿಲ್ಲ.

ನಾವಾಗ ಆರು-ಏಳನೇ ತರಗತಿಯ ವಿದ್ಯಾರ್ಥಿಗಳು. ನಮ್ಮನಮ್ಮ ತರಗತಿಯ ಮುಂಭಾಗದ ಸುಮಾರು ನಾಲ್ಕಡಿ ಉದ್ದ, ಎರಡಡಿ ಅಗಲದಷ್ಟು ಜಾಗದಲ್ಲಿ ಹೂವಿನ ಗಿಡಗಳನ್ನು ಹಾಕಿದ್ದರು. ಅಲ್ಲಿಯತನಕ, ಶಾಲೆಯ ಆಯಾಗಳು, ಸಹಾಯಕರುಗಳು ತಮ್ಮ ಬಿಡುವಿನ ವೇಳೆಯಲ್ಲಿ ಕೈತೋಟವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಒಂದು ದಿನ, (ಸಿಸ್ಟರ್ ವಿಲ್ಮ ಎಂಬುವವರು ಹೊಸ ಮುಖ್ಯೋಪಾಧ್ಯಾಯರಾಗಿ ಬಂದಮೇಲೆ ಎಂದು ನೆನಪು) ಶಾಲಾ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ‘ಮಕ್ಕಳೇ... ಇನ್ನು ಮೇಲಿಂದ ನಿಮ್ಮನಿಮ್ಮ ತರಗತಿ ಮುಂದೆ ಇರುವ ಕೈದೋಟಗಳನ್ನು ನೀವೇ ಜಾಗ್ರತೆ ನೋಡಿಕೊಳ್ಳಬೇಕು. ಯಾರು ಚಂದ ಮಾಡಿ ನೋಡ್ತಾರೋ ಆ ಕ್ಲಾಸಿನವರಿಗೆ ಅಸೆಂಬ್ಲಿಯಲ್ಲಿ ಎಲ್ಲರೆದುರಿಗೆ ಚಪ್ಪಾಳೆ ಸಿಗ್ತದೆ’ ಎಂದರು.

ಓಹೋ! ಅದೆಂತಹ ಉತ್ಸಾಹ ಮಕ್ಕಳಲ್ಲಿ! ಅಸೆಂಬ್ಲಿಯಲ್ಲಿ ಚಪ್ಪಾಳೆ ಅಂದರೆ ಸುಮ್ಮನೆ ಆಯ್ತಾ! ಶುರುವಾಯಿತಪ್ಪಾ ಅಂದಿನಿಂದ... ಮೊದಲೆಲ್ಲ ಬಿಡುವಿನ ಸಮಯ ಸಿಕ್ಕಿತೆಂದರೆ ಆಟ ಆಡುವುದಕ್ಕೆ ಓಡುತ್ತಿದ್ದ ನಾವೆಲ್ಲ ಕಳೆಗುದ್ದಲಿ, ಕೈಗುದ್ದಲಿ, ನೀರಿನ ಕ್ಯಾನು ಅಂತ ಹಿಡಿದು ನಿಲ್ಲತೊಡಗಿದೆವು. ಕೈದೋಟದ ಅಂಚಿಗೆ ಜೋಡಿಸಿದ್ದ ಇಟ್ಟಿಗೆಗಳನ್ನು ತೆಗೆದು ಅಲಂಕಾರಿಕವಾಗಿ ಇಡೋದೇನು; ಶಾಲಾ ಕೊಠಡಿಗಳಿಂದ ದೂರವಿದ್ದ ತೊಟ್ಟಿಯಿಂದ ಬಗ್ಗಡದ ನೀರನ್ನು ಎತ್ತೆತ್ತಿ ತಂದು ಗಿಡಗಳಿಗೆ ನೀರುಣಿಸುವುದೇನು; ಕಳೆ ಕೀಳೋದೇನು; ಒಬ್ಬೊಬ್ಬರೂ ಅವರವರ ಮನೆಯ ಹೂಸಸಿಗಳನ್ನು ತರೋದೇನು; ಗಿಡ ನೆಡೋದೇನು; ದಿನವೂ ಚಿಗುರು, ಮೊಗ್ಗು, ಹೂವಿಗೆ ಕಾಯೋದೇನು... ಇಷ್ಟೆಲ್ಲ ಪೋಷಣೆ ಪಡೆದು, ತಿಂಗಳೊಂದೆರಡು ಕಳೆಯೋ ಹೊತ್ತಿಗೆ ಎಲ್ಲ ತರಗತಿಗಳ ಕೈದೋಟಗಳೂ ತರಾವರಿ ಹೂಗಳಿಂದ ತೊನೆಯತೊಡಗಿದ್ದವು. ಅಸೆಂಬ್ಲಿಯಲ್ಲಿ ಎಲ್ಲ ಮಕ್ಕಳಿಗೂ ಚಪ್ಪಾಳೆ ಸಿಕ್ಕೇಸಿಕ್ಕಿತು, ಎಲ್ಲ ಶಿಕ್ಷಕರು, ಮುಖ್ಯೋಪಾಧ್ಯಾಯರಿಂದ!

ಗಿಡದ ಎಲೆಗಳನ್ನು ಮಣ್ಣಿಗೇ ಸೇರಿಸಿ ಹೇಗೆ ಗೊಬ್ಬರ ಮಾಡಬೇಕು, ಅಕ್ಕಪಕ್ಕದ ಗಿಡಗಳಿಗೆ ತೊಂದರೆ ಮಾಡದ ಹಾಗೆ ಕಳೆ ಹುಲ್ಲನ್ನು ಹೇಗೆ ಮೀಟಿ ತೆಗೆಯಬೇಕು, ಯಾವ ಕಾಲದಲ್ಲಿ ಬೀಜಗಳನ್ನು ಮಣ್ಣಿಗೆ ಊರಬೇಕು, ಯಾಕೆ ಅನ್ನುವ ಸರಳ ಪಾಠಗಳೆಲ್ಲ ಅಲ್ಲಿಂದಲೇ ನಮ್ಮ ಬದುಕಿನೊಳಕ್ಕೆ ಊರಿಕೊಂಡಿದ್ದವು... ಈ ಕೈದೋಟಕ್ಕೆ ನಮ್ಮ ಮನೆಯ ಹೂದೋಟದಿಂದ ನಾನು ಮೂರು-ನಾಲ್ಕು ಎರೆಹುಳುಗಳನ್ನು ತೆಗೆದುಕೊಂಡು ಹೋಗಿ ಬಿಟ್ಟದ್ದನ್ನು ಮರೆಯುವುದು ಹೇಗೆ!

ಎಂಟು-ಒಂಭತ್ತು ತರಗತಿಯ ದಿನಗಳವು. ಮಧ್ಯಾಹ್ನ ಊಟಕ್ಕೆ ಶಾಲಾ ಮೈದಾನದಲ್ಲಿ ಕೂರಬೇಕಿತ್ತು. ತರಗತಿಯಲ್ಲಿ ಕುಳಿತಿರುವ ಕಡೆಯಲ್ಲೇ ಕುಳಿತು ಊಟ ಮಾಡಬೇಕಾದ ನನ್ನ ಮಕ್ಕಳ ಶಾಲಾ ಅನುಭವಗಳನ್ನು ನೋಡಿದರೆ, ಯಾರು ಯಾರೊಂದಿಗೆ ಬೇಕಾದರೂ ಕುಳಿತು ಊಟ ಮಾಡಬಹುದಾದ, ಊಟವನ್ನು ಹಂಚಿ ತಿನ್ನಬಹುದಾಗಿದ್ದ ನಮ್ಮ ಶಾಲೆಯ ದಿನಗಳು ಕಪೋಲಕಲ್ಪಿತ ಅನ್ನಿಸಬಹುದು.

ಹೀಗೇ ಒಂದು ದಿನ ನಮ್ಮ ಮಾಮೂಲಿ ಎಂಟ್ಹತ್ತು ಹುಡುಗಿಯರ ಗುಂಪಿಗೆ ಒಂದಿಬ್ಬರು ಹೊಸದಾಗಿ ಸೇರಿಕೊಂಡರು. ಎಂದಿನಂತೆ ನಾವೆಲ್ಲ ಒಂದೊಂದು ತುತ್ತು ನಮ್ಮ ಊಟವನ್ನು ಎಲ್ಲರ ಊಟದಡಬ್ಬಿ ಮುಚ್ಚಳಕ್ಕೆ ಹಾಕುತ್ತ ಬಂದೆವು. ಆ ದಿನ ನಮ್ಮ ಗುಂಪಿನ ಯಾರೋ ಮಾಂಸದ ಸಾರು ತಂದಿದ್ದರು. ನಾವೆಲ್ಲ ಹಂಚಿಕೊಂಡು ತಿಂದೆವು. ಹೊಸದಾಗಿ ಬಂದಿದ್ದ ಹುಡುಗಿಯರಿಬ್ಬರೂ ಅವರ ಊಟವನ್ನು ನಮಗೆ ಕೊಡಲೂ ಇಲ್ಲ, ನಮ್ಮದನ್ನು ತೆಗೆದುಕೊಳ್ಳಲೂ ಅಸಹ್ಯ ಮಾಡಿಕೊಂಡರು. ಅದೊಂಥರಾ ಅಸಹನೀಯ ಮುಜುಗರದ ದಿನವಾಗಿತ್ತು. ಆನಂತರ ಆ ಹುಡುಗಿಯರಿಬ್ಬರು ನಮ್ಮ ತರಗತಿಯ ಶಿಕ್ಷಕ ‘ಸಿಸ್ಟರ್’ ಹತ್ತಿರ ಹೋಗಿ, ನಾವು ಮಾಂಸ ತಂದಿದ್ದಾಗಿ ದೂರು ಹೇಳಿದ್ದರು.

‘ಸಿಸ್ಟರ್’ ನಮ್ಮನ್ನೆಲ್ಲ ಕರೆಸಿ, ಆ ಹುಡುಗಿಯರನ್ನೂ ಒಟ್ಟಿಗೆ ನಿಲ್ಲಿಸಿ, ‘ಮಾಂಸ ತಿನ್ನೋದು ಅವರವರ ಆಹಾರ ಪದ್ಧತಿ. ಅದನ್ನು ಮಾಡಬೇಡಿ ಅಂತ ಹೇಳ್ಲಿಕ್ಕೆ ನಮಗೆ ಅಧಿಕಾರ ಇಲ್ಲಮ್ಮ... ನಿಮಗೆ ಇಷ್ಟ ಇಲ್ಲದೆ ಹೋದ್ರೆ ಬೇರೆ ಕೂತು ಊಟ ಮಾಡಿ, ಈ ಚಿಕ್ಕಪುಟ್ಟ ವಿಷಯಕ್ಕೆಲ್ಲ ಪಿರಿಪಿರಿ ಮಾಡಬೇಡಿ. ಇದನ್ನ ಈಗ ಇಲ್ಲಿಗೆ ಬಿಡಿ’ ಎಂದು ಹೇಳಿದ್ದು ಈ ಕ್ಷಣಕ್ಕೂ ಕಿವಿಯಲ್ಲಿ ಅನುರಣಿಸುತ್ತದೆ. ಆ ಹುಡುಗಿಯರೂ ಅದನ್ನು ಅಲ್ಲಿಗೆ ಬಿಟ್ಟು ಒಳ್ಳೆಯ ಸ್ನೇಹಿತೆಯರಾಗಿ ಉಳಿದರು ಅನ್ನುವುದನ್ನೂ ಕೂಡ ನನ್ನ ಮನಸ್ಸು ಮರೆತಿಲ್ಲ.

ವಯಸ್ಸಿನ ಯಾವ ಅಂತರ, ಭೇದವಿಲ್ಲದೆ ಆಗೆಲ್ಲ ಆಡಿಸುತ್ತಿದ್ದ ಸಾಮಾನ್ಯ ಆಟವೊಂದಿತ್ತು. ‘ನಿಧಿ ಹುಡುಕಾಟ’ ಅಂತ ಅದರ ಹೆಸರು. ಗಂಟೆಗಟ್ಟಲೆ ಹಿಡಿಯುತ್ತಿದ್ದ ಈ ಆಟವು ಪಡೆಯುತ್ತಿದ್ದ ಚಿತ್ರವಿಚಿತ್ರ ತಿರುವುಗಳು; ದೇಹ, ಬುದ್ಧಿ, ಮನಸ್ಸುಗಳನ್ನು ಸಮವಾಗಿ ಬಳಸಿ ಆಡಬೇಕಾಗಿದ್ದ ಗುಂಪು ಆಟವು ಅಭಿಪ್ರಾಯಗಳನ್ನು ಹಂಚಿಕೊಂಡು ಒಟ್ಟಾಗಿ ಶ್ರಮಿಸುವ ಸಾಮುದಾಯಿಕತೆಯನ್ನು ಒತ್ತಾಯಿಸುತ್ತಿತ್ತು. ಯಾವುದೋ ಗೊತ್ತಾದ ಬಿಂದುವಿನಲ್ಲಿ ಇಟ್ಟಿರುತ್ತಿದ್ದ ಒಂದು ಚೀಟಿಯೊಳಗೆ ನಮ್ಮ ಮುಂದಿನ ಹುಡುಕಾಟಕ್ಕೆ ಅಗತ್ಯವಾಗಿದ್ದ ಸೂಚನೆ ಅಥವಾ ಕುರುಹುಗಳಿರುತ್ತಿದ್ದವು. ಅದನ್ನು ಸರಿಯಾಗಿ ಓದಿ, ಬಿಡಿಸಿಕೊಳ್ಳದೆ ಮುಂದಿನ ಗೊತ್ತು ತಿಳಿಯುವ ಪ್ರಮೇಯವೇ ಇರುತ್ತಿರಲಿಲ್ಲ ಅಥವಾ ಅದು ನಮ್ಮನ್ನು ತಪ್ಪು ಜಾಗಕ್ಕೆ ಕರೆದೊಯ್ಯುವ ಸಾಧ್ಯತೆಯಿರುತ್ತಿತ್ತು.

ಇಡೀ ಶಾಲೆಯ ಮೂಲೆಮೂಲೆಗಳನ್ನು ಬಳಸಿಕೊಂಡು, ಎಲ್ಲೆಲ್ಲೋ ಇಟ್ಟಿರುತ್ತಿದ್ದ ಸೂಚನಾ ಚೀಟಿಗಳನ್ನು ಬಳಸಿ, ಅಂತಿಮವಾಗಿ ಹುದುಗಿಸಿ ಇರುತ್ತಿದ್ದ ‘ನಿಧಿ’ಯ ಜಾಗವನ್ನು ತಲುಪಬೇಕಿತ್ತು. ಆ ‘ಅಂತಿಮ’ ತಾಣ ಎನ್ನುವುದು ಆಟ ಮುಗಿಯುತ್ತದೆ ಎನ್ನುವ ಸಣ್ಣ ಬೇಸರವನ್ನು ಉಂಟು ಮಾಡುತ್ತಿದ್ದುದರ ಜೊತೆಗೆ, ಆಟ ಎಂದೂ ಮುಗಿತಾಯ ಕಾಣದೆ ಇರಲಿ ಎನ್ನುವ ಭಾವವನ್ನೂ ಮೂಡಿಸುತ್ತಿತ್ತು. ‘ದಾರಿಯೇ ಗುರಿ’ ಎಂದು ಗಾಂಧೀಜಿ ಹೇಳಿದ್ದು ಬಹುಶಃ ಇದನ್ನೇ ಏನೋ... ನಮ್ಮ ಮೆದುಳಿನ ಒಂದು ಪುಟ್ಟ ನರತಂತುವು ಹೇಗೆ ಹೆಬ್ಬೆರಳಿನ ಮತ್ತಾವುದೋ ನರದೊಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಬಂಧ ಹೊಂದಿದೆಯೋ, ಹಾಗೆಯೇ ಈ ಆಟದಲ್ಲೂ ನಮ್ಮ ಪ್ರತಿಯೊಂದು ಹೆಜ್ಜೆ, ನಿರ್ಧಾರ, ಸುತ್ತಮುತ್ತ ಕಾಣುವ ಸಣ್ಣಪುಟ್ಟ ಸಂಗತಿಗಳೂ ದೊಡ್ಡ ರಹಸ್ಯದತ್ತ ಕರೆದೊಯ್ಯಬಲ್ಲವಾಗಿರುತ್ತಿದ್ದವು. ಒಂದನ್ನು ಅನುಸರಿಸಿ ಅಥವಾ ಆಧರಿಸಿಯೇ ಮತ್ತೊಂದಕ್ಕೆ, ಮಗದೊಂದಕ್ಕೆ ಹೋಗಬೇಕೆನ್ನುವ ಹೆಣಿಗೆ ಇದು.

ಎಷ್ಟೋ ವರ್ಷಗಳ ಬಳಿಕ ನಾನು ಈ ಕವಿತೆಯನ್ನು ಬರೆದಾಗ ಇವೆಲ್ಲ ಅನುಭವಗಳೂ ಸುಪ್ತಮನಸ್ಸಿನೊಳಗೆ ಆಡಿಕೊಂಡಿದ್ದವೆನಿಸುತ್ತದೆ:

ಈ ದೇಹ

ದೇವರು ಬರೆದ ಮಹಾಕಾವ್ಯ.

ಕೂಡಿಸಿ ಅಂಗಕ್ಕೆ

ಇನ್ನೊಂದು ಅಂಗ

ಸೇರಿಸುತ್ತ

ನರವನ್ನು ನರವು

ಹರಡಿಕೊಂಡ ಬೇರಂತೆ

ರಕ್ತದ ಟಿಸಿಲು

ಕಣ್ಣು ಕಂಡದ್ದು,

ಮೂಗು, ಚರ್ಮ, ಕಿವಿ, ನಾಲಗೆ

ಅನುಭವಿಸಿದ್ದೆಲ್ಲ ಮನಸ್ಸಾಗಿ

ನಿನ್ನ ಮನಸ್ಸು ಎಲ್ಲಿದೆಯೆಂದು ಹುಡುಕಿದರೆ

ಅಲ್ಲಿ ದೇಹವೇ ಕಂಡು,

ದೇಹವೆಂದು ನೋಡಿದ್ದರಲ್ಲಿ ಅಂತರಾಳ ಮಿನುಗಿ,

ಈ ದೇಹ

ದೇವರ ಮಹಾಕಾವ್ಯ.

ಪ್ರಸ್ತುತ ಗಳಿಗೆಯಲ್ಲಿ ತೀವ್ರವಾಗಿ, ಪ್ರಾಮಾಣಿಕವಾಗಿ ಬದುಕುವಂತಹ ಬದುಕಿನ ಪಾಠಗಳು ತಮ್ಮೊಟ್ಟಿಗೆ ಅಗತ್ಯವಾಗಿ ಸಾಮುದಾಯಿಕತೆಯನ್ನೂ ಇಟ್ಟುಕೊಂಡಿರುತ್ತವೆ. ಮೊಟ್ಟೆಯ ಮೇಲೆ ಕಾವುಕೂತ ತಾಯಿಕೋಳಿಯ ಪ್ರತೀಕವು ಇದನ್ನು ಸಮರ್ಥವಾಗಿ ವಿವರಿಸಬಲ್ಲದು: ಕಾವಿಗೆ ಕೂತ ಕುಕ್ಕೆಯಲ್ಲಿ ಮೇಲ್ನೋಟಕ್ಕೆ ನಮಗೆ ಕಾಣುವುದು ತಾಯಿಕೋಳಿ ಮಾತ್ರ, ಆದರೆ ಅದರ ಬೆಚ್ಚನೆ ತೆಕ್ಕೆಯೊಳಗೆ ಎಷ್ಟೊಂದು ನಾಳೆಯ, ಕನಸಿನ, ಭರವಸೆಯ ಮೊಟ್ಟೆಗಳಿರುತ್ತವೆ!

ಎಲ್ಲ ಕಾಲದೇಶದ ಎಲ್ಲ ಮಕ್ಕಳಿಗೂ ಅಗತ್ಯವಾಗಿ ಬೇಕಾದ್ದು ಬದುಕಿನ ಈ ಸರಳ ಕಲಿಕೆಗಳೇ ಹೊರತು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.