ವಿಠಲ ಗೌಡರು ದಿವಸಕ್ಕೆ ಎಪ್ಪತ್ತರಿಂದ ಎಂಬತ್ತು ತೆಂಗಿನ ಮರ ಏರುತ್ತಾರೆ. ಒಂದು ಮರ ಏರಿದರೆ ಮೂವತ್ತು ರೂಪಾಯಿ ಸಂಭಾವನೆ. ಸಂಜೆ ನಾಲ್ಕೂವರೆಗೆ ಕೆಲಸ ಮುಗಿಯುತ್ತದೆ. ಬೈಕ್ ಏರಿ ಮನೆಗೆ. ಅಂದಿನ ಸಂಪಾದನೆ ಎರಡು ಸಾವಿರ ರೂಪಾಯಿಯ ಆಜೂಬಾಜು.

‘ಹೇಳಿ ಸರ್, ಮನಸ್ಸಿದ್ದರೆ ವರುಷಪೂರ್ತಿ ಊರಲ್ಲೇ ದುಡಿಯುವಷ್ಟು ಕೆಲಸವಿದೆ. ದೂರದ ಪೇಟೆಗೆ ಯಾಕೆ ಹೋಗಬೇಕು’. ತನ್ನ ಮರ ಏರುವ ಸಾಧನವನ್ನು ಪ್ಯಾಕ್ಅಪ್ ಮಾಡುತ್ತಾ ವಿಠಲ ಗೌಡರು ಹೇಳಿದ ಮಾತು. ಇವರು ಸುಳ್ಯ ತಾಲ್ಲೂಕಿನ ಮುರುಳ್ಯದ ಕಡೀರದವರು.

ಕಾಲಿಗೆ ‘ತಳೆ’ ಹಾಕಿ ಮರ ಏರುವುದು ಸಾಂಪ್ರದಾಯಿಕ ವಿಧಾನ. ಅಬ್ಬಬ್ಬಾ ಅಂದರೂ ಮೂವತ್ತರಿಂದ ನಲವತ್ತು ಮರ ಏರಬಹುದಷ್ಟೇ. ಅದರಲ್ಲೂ ಮಳೆಗಾಲದಲ್ಲಿ ಪಾಚಿಯಿಂದಾಗಿ ಮರ ಜಾರುವುದರಿಂದ ಈ ಕೆಲಸಕ್ಕೆ ವಿರಾಮ. ಒತ್ತಾಯಿಸಿದರೂ ಯಾರೂ ಏರರು. ಆದರೆ ವಿಠಲ ಗೌಡರು ಮಳೆಗಾಲದಲ್ಲೂ ಬ್ಯುಸಿ. ಮರ ಏರುವ ಸಾಧನಕ್ಕೆ ಪಾಚಿಯೂ ಅಂಜುತ್ತದೆ!

ಗೌಡರದು ಏಕವ್ಯಕ್ತಿ ಕಾಯಕ. ನಿರ್ದಿಷ್ಟ ಜಾಗಕ್ಕೆ ಬೆಳಿಗ್ಗೆ ಎಂಟು ಗಂಟೆಗೆ ಹಾಜರ್. ಮರ ಏರಿ ತೆಂಗಿನಕಾಯಿಗಳನ್ನು ಕೊಯ್ದು ಹಾಕಿ, ಮರದ ಮೇಲಿರುವ ಒಣ ತ್ಯಾಜ್ಯಗಳನ್ನು ಶುಚಿಗೊಳಿಸುತ್ತಾರೆ. ಒಂದು ಮರ ಆದ ಕೂಡಲೇ ಇನ್ನೊಂದು. ಸಮಯ ಕೊಲ್ಲುವುದು ಅವರಿಗೆ ಗೊತ್ತಿಲ್ಲ. ಅನವಶ್ಯಕ ಹರಟೆಯಿಲ್ಲ. ಮೊಬೈಲ್ ಆಫ್. ಈ ಬದ್ಧತೆಯ ಕಾರಣಗಳಿಗಾಗಿ ಅವರನ್ನು ಕಾಯುವ ಗ್ರಾಹಕರಿದ್ದಾರೆ.

‘ಒಂದು ಮರವನ್ನು ಏರಿ ಇಳಿಯುವಾಗ ಏನಿಲ್ಲವೆಂದರೂ ಆರು ನಿಮಿಷ ಸಾಕು. ಒಂದು ದಿನದಲ್ಲಿ ಸುಮಾರು ಎಂಭತ್ತರಿಂದ ತೊಂಭತ್ತು ಮರವನ್ನು ಏರಿದ್ದೂ ಇದೆ. ಮರಕ್ಕೆ ಮೂವತ್ತು ರೂಪಾಯಿ ಶುಲ್ಕ. ನೂರಕ್ಕೂ ಹೆಚ್ಚು ತೋಟದ ಯಜಮಾನರು ಗ್ರಾಹಕರು. ಯಾರಲ್ಲಿ ಯಾವ ಸೀಸನ್ನಲ್ಲಿ ಕೆಲಸ ಎನ್ನುವ ಮಾಹಿತಿ ಬರೆದಿಟ್ಟುಕೊಳ್ಳುತ್ತೇನೆ, ದುಡಿಯುವುದಿದ್ದರೆ ರವಿವಾರವೂ ಕೆಲಸವಿದೆ’ ಎಂದರು.

ತನ್ನ ಮನೆಯಿಂದ 60 ಕಿಲೋಮೀಟರ್ ವ್ಯಾಪ್ತಿಯ ತೋಟಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಇಲ್ಲದಿದ್ದರೆ ಸಮಯಕ್ಕೆ ಸರಿಯಾಗಿ ತಲುಪಲು ಕಷ್ಟ. ಮೊದಲಾದರೆ ಬಸ್, ಸರ್ವೀಸ್ ವಾಹನವನ್ನು ಅವಲಂಬಿಸಬೇಕಾಗಿತ್ತು. ಸಾಧನವನ್ನು ಒಯ್ಯುವಾಗ ಸಹಪ್ರಯಾಣಿಕರ ಗೊಣಗಾಟ. ಇದನ್ನೆಲ್ಲಾ ಕೇಳಿ, ಅನುಭವಿಸಿದ ಬಳಿಕ ಈಗ ಸ್ವಂತ ದ್ವಿಚಕ್ರ ವಾಹನ ಇಟ್ಟುಕೊಂಡಿದ್ದಾರೆ.

ವಿಠಲ ಗೌಡರು ಈ ಕಾಯಕಕ್ಕೆ ಬಂದು ಆರು ವರುಷವಾಯಿತು. ಅದಕ್ಕಿಂತ ಮೊದಲು ಊರಿನಲ್ಲಿ ಕೂಲಿ ಕೆಲಸ, ಸಾಂಪ್ರದಾಯಿಕ ವಿಧಾನದಲ್ಲಿ ಅಡಿಕೆ ಮರ ಏರಿ ಸಿಂಪಡಣೆ, ಕೊಯ್ಲು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಆಯೋಜಿಸಿದ ತೆಂಗು ಮರ ಏರುವ ತರಬೇತಿಯಿಂದ ಅವರ ಬದುಕಿಗೆ ಹೊಸ ತಿರುವು ಸಿಕ್ಕಿತು. ಆ ದಿನಮಾನವನ್ನು ಜ್ಞಾಪಿಸಿಕೊಳ್ಳುವುದು ಗೌಡರಿಗೆ ಖುಷಿ.

2013ನೇ ಇಸವಿ. ಪತ್ರಿಕೆಯೊಂದರಲ್ಲಿ ಪ್ರಕಟವಾದ ತರಬೇತಿಯ ಮಾಹಿತಿಯಂತೆ ನಿಗದಿತ ದಿನದಂದು ಕೆವಿಕೆಗೆ ಹಾಜರ್. ‘ಇಲ್ಲಿ ಮೂವತ್ತೈದು ವರುಷದೊಳಗಿನವರಿಗೆ ಮಾತ್ರ ತರಬೇತಿ. ನಿಮಗೆ ನಲವತ್ತೈದು ವರುಷವಾಯಿತಲ್ವಾ. ಸಾಧ್ಯವಿಲ್ಲ’ ಎಂದು ಇವರ ಅರ್ಜಿಯನ್ನು ಕೆವಿಕೆ ವರಿಷ್ಠರು ಬದಿಗಿಟ್ಟರು. ‘ನಾನು ಕೃಷಿಕ. ನನಗೆ ದುಡಿಯಲು ಉತ್ಸಾಹವಿದೆ. ಇಲ್ಲಿ ತರಬೇತಿ ಪಡೆದರೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ’ ಎಂದು ವಿನಂತಿ ಮಾಡಿದರು. ಇವರ ಉತ್ಸಾಹ ನೋಡಿ ಮೆಚ್ಚಿದ ಕೆವಿಕೆ ಅಧಿಕಾರಿಗಳು ‘ವಿಶೇಷ ಅಭ್ಯರ್ಥಿ’ ಎಂದು ಪರಿಗಣಿಸಿ ಆಯ್ಕೆ ಮಾಡಿದರು.

ಮೂವತ್ತು ಮಂದಿ ಶಿಬಿರಾರ್ಥಿಗಳು. ಆರು ದಿವಸಗಳ ತರಬೇತಿ. ಸಾಧನವನ್ನು ಜೋಡಿಸುವಲ್ಲಿಂದ ತೊಡಗಿ ಮರ ಏರುವ ಸೂಕ್ಷ್ಮ ವಿಚಾರಗಳ ಆರ್ಜನೆ. ಮೊದಲೇ ತಳೆ ಮೂಲಕ ಮರ ಏರಿ ಅಭ್ಯಾಸವಿದ್ದುದರಿಂದ ಸಾಧನ ಮೂಲಕ ಏರಲು ಕಷ್ಟವಾಗಲಿಲ್ಲ. ಶಿಬಿರದ ಕೊನೆಗೆ ಲಿಖಿತ ಮತ್ತು ಪ್ರಾಕ್ಟಿಕಲ್ ಪರೀಕ್ಷೆ. ಎರಡರಲ್ಲೂ ವಿಠಲ ಗೌಡರು ಮುಂದು. ‘ಸಾಧನವನ್ನು ಜೋಡಿಸಿ ಮರ ಏರಿ, ಅಲ್ಲಿರುವ ತೆಂಗಿನಕಾಯಿಯನ್ನು ಸ್ಪರ್ಶಿಸಿ, ಕೆಳಗಿಳಿದು ಸಾಧನವನ್ನು ಯಾರು ಎಷ್ಟು ಅವಧಿಯಲ್ಲಿ ಕಳಚುತ್ತಾರೆ’ ಎನ್ನುವ ಪ್ರಾಕ್ಟಿಕಲ್ ಪರೀಕ್ಷೆ.

ಗೌಡರು ಒಂದು ನಿಮಿಷ ಇಪ್ಪತ್ತಾರು ಸೆಕೆಂಡಿನಲ್ಲಿ ಏರಿ ಇಳಿದಿದ್ದಾರೆ! ಇಡೀ ತಂಡದಲ್ಲಿ ಇವರೇ ಪ್ರಥಮ. ಇವರ ಕ್ಷಿಪ್ರ ಕಲಿಕೆ ಮತ್ತು ಜಾಣ್ಮೆಯ ಮನಸ್ಥಿತಿಯನ್ನು ಅರಿತ ಕೆವಿಕೆ ಅಧಿಕಾರಿಗಳು ‘ಮುಂದಿನ ಶಿಬಿರಗಳಿಗೆ ಮಾಸ್ಟ್ರು ಆಗಿ ಬರಬಹುದೇ’ ಎನ್ನುವಾಗ ಗೌಡರ ಮುಖದಲ್ಲಿ ನಾಚಿಕೆ! ಮುಂದೆ ನಾಲ್ಕೈದು ಶಿಬಿರಗಳಿಗೆ ಹೋಗಿದ್ದಾರೆ.

ಸಾಧನವನ್ನು ಬಳಸಿ ಮತ್ತು ಸಾಂಪ್ರದಾಯಿಕವಾಗಿ ಮರ ಏರುವುದರಲ್ಲಿ ಏನು ವ್ಯತ್ಯಾಸ? ‘ಸಾಂಪ್ರದಾಯಿಕವಾಗಿ ಮರ ಏರುವಾಗ ಕೈ, ಕಾಲು, ಎದೆ, ರಟ್ಟೆಗೆ ತ್ರಾಸ ಹೆಚ್ಚು. ಜಾಣ್ಮೆ ಕೈವಶ ಆಗುವಲ್ಲಿಯ ತನಕ ತರಚು ಗಾಯಗಳು ಸಾಮಾನ್ಯ. ಸಾಧನ ಬಳಸಿದಾಗ ಅಂತಹ ಸಮಸ್ಯೆಯಿಲ್ಲ. ಹೆಚ್ಚು ಆಯಾಸವಾಗುವುದಿಲ್ಲ. ತುಂಬಾ ಸಲೀಸು. ತರಬೇತಿ ಪಡೆದ ಬಳಿಕ ನಲವತ್ತು ಮರ ಏರುತ್ತಿದ್ದೆ. ಅಭ್ಯಾಸವಾದಂತೆಲ್ಲ ಈಗ ಎಂಭತ್ತರವರೆಗೂ ಏರುವುದಕ್ಕಾಗುತ್ತದೆ’.

ಸಾಧನಕ್ಕೆ ಮೂರುವರೆ ಸಾವಿರ ರೂಪಾಯಿ ಬೆಲೆ. ಸುಮಾರು ಐದು ಸಾವಿರ ಮರ ಏರಿಳಿದಾಗ ಅದರ ರೋಪ್ನ ಬಲ ಕಡಿಮೆಯಾಗುತ್ತದೆ. ರೋಪ್ ಬದಲಿಸಿಕೊಂಡರಾಯಿತು. ನಾಲ್ಕೈದು ವರುಷಕ್ಕೊಮ್ಮೆ ಸಾಧನವನ್ನೇ ಬದಲಿಸುವುದು ಒಳ್ಳೆಯದು ಎನ್ನುವುದು ಅವರ ಅನುಭವ.

ತರಬೇತಿ ಮುಗಿಸಿ ಬಂದು ಸಾಧನದಲ್ಲಿ ಮರವೇರುವಾಗ ಊರಿನಲ್ಲಿ ಹಲವರುಗೇಲಿ ಮಾಡಿದರಂತೆ. ಗೌಡರಿಗೆ ಪ್ರತಿ ಸೆಕೆಂಡ್ ಅಮೂಲ್ಯ. ಹಾಗಾಗಿ ಗೇಲಿ, ಚುಚ್ಚುಮಾತುಗಳು ಕೇಳಿಸುವುದಿಲ್ಲ. ಈ ಕಾಯಕ ಗೌಡರ ಬದುಕಿಗೆ ವರವಾಗಿದೆ. ಗಳಿಕೆಯಲ್ಲಿ ಜಾಗ ಖರೀದಿಸಿದ್ದಾರೆ. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆವಿಕೆ ತರಬೇತಿ ಪಡೆದವರು ಇನ್ನೂರಕ್ಕೂ ಮಿಕ್ಕಿ ಇದ್ದಾರೆ. ಸಕ್ರಿಯವಾಗಿರುವವರು ಐವತ್ತು ಮಂದಿ ಇರಬಹುದಷ್ಟೇ. ಯುವಕರಿಗೆ ಸ್ವತಃ ದುಡಿಯಲು ನಿರಾಸಕ್ತಿ. ಶ್ರಮದ ಕೆಲಸ ಬೇಡ. ನಗರ ಆಕರ್ಷಿಸುತ್ತದೆ. ನಾನು ಕಲಿಸಲು ಸಿದ್ಧನಿದ್ದೇನೆ. ಕಲಿಯುವವರಿಲ್ಲ’ ಎಂದು ವಿಷಾದಿಸುತ್ತಾರೆ.

‘ದಿನಕ್ಕೆ ಕನಿಷ್ಠ ಅಂದರೆ ಎಪ್ಪತ್ತು ಮರ ಎಂದಿಟ್ಟುಕೊಳ್ಳಿ. ಎರಡು ಸಾವಿರದ ನೂರು ರೂಪಾಯಿ ಆಯಿತು. ತಿಂಗಳಿಗೆ ಮೂವತ್ತರಿಂದ ಗುಣಿಸಿ. ಸರ್ಕಾರಿ ಸಂಬಳಕ್ಕೆ ಸರಿಸಮ ಇಲ್ವಾ. ಮತ್ಯಾಕೆ ಪೇಟೆಗೆ ಹೋಗಿ ಒದ್ದಾಡಬೇಕು. ನಾನು ಮೊದಲಿನಂತೆ ಕೂಲಿ ಕೆಲಸ ಮಾಡುತ್ತಿರುತ್ತಿದ್ದರೆ ಅಭಿವೃದ್ಧಿಯಾಗುತ್ತಿರಲಿಲ್ಲ’ ಎನ್ನುತ್ತಾ ವಿಠಲ ಗೌಡರು ಬೈಕ್ ಏರಿದರು. (9482251041)

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.