ನನ್ನ ಬದುಕಿನಲ್ಲಿ, ಭಾಷಾಂತರವೆಂಬ ಈ ವಿದ್ಯಮಾನವು ಸಾಂಕೇತಿಕವಾಗಿ ಪ್ರವೇಶಿಸಿದ ಗಳಿಗೆಯನ್ನು ನೆನೆಯುತ್ತೇನೆ: ನಾನಾಗ ಸಂತ ಫಿಲೋಮಿನ ವಿದ್ಯಾಸಂಸ್ಥೆಯಲ್ಲಿ ಎಂಟನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ. ಅಪಾರ ತಾಳ್ಮೆ, ಕರುಣೆಯ ಮೂರ್ತಿಯಂತಿದ್ದ ಸಿಸ್ಟರ್ ಲಿಲಿಯನ್ ನಮ್ಮ ಮುಖ್ಯೋಪಾಧ್ಯಾಯಿನಿಯಾಗಿದ್ದರು, ಅವರೇ ನಮಗೆ ಇಂಗ್ಲಿಷ್ ಶಿಕ್ಷಕಿ ಕೂಡ. ಒಂದು ಮಧ್ಯಾಹ್ನ, ತರಗತಿಯ ಬಿಡುವಿನ ವೇಳೆಯಲ್ಲಿ ನನ್ನನ್ನು ಕರೆಯಲು ಅವರು ಯಾರನ್ನೋ ಕಳುಹಿಸಿದರು. ಲಿಲಿಯನ್‍ರಿಂದ ಕರೆ ಬಂದಿದೆ ಎಂದಾಕ್ಷಣವೆ ಅಷ್ಟೇನೂ ಇಂಗ್ಲಿಷ್ ಅರ್ಥವಾಗದ ಮತ್ತು ಆ ಭಾಷೆ ಮಾತನಾಡಲು ಬಾರದ ನನ್ನ ಎದೆ ಭಯದಿಂದ ಹೊಡೆದುಕೊಳ್ಳತೊಡಗಿತ್ತು. ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇಲ್ಲದೆ, ಅಳುಕಿನ ಮುಖಕ್ಕೆ ಧೈರ್ಯದ ಮುಖವಾಡ ತೊಡಿಸಿ ಅವರ ಕೋಣೆಗೆ ಹೋದೆ.

ಉಪಮುಖ್ಯೋಪಾಧ್ಯಾಯಿನಿಯಾಗಿದ್ದ ಸಿಸ್ಟರ್ ಜಾಸ್ಮಿನ್ ಕೂಡ ಅಲ್ಲಿದ್ದರು. ಸಿಸ್ಟರ್ ಲಿಲಿಯನ್ ಕೇಳಿದರು: ‘ಯು ಹ್ಯಾವ್ ಎ ಡಾಗ್ ಅಟ್ ಹೋಮ್, ನೋ?’ (ವಕೀಲರಾಗಿದ್ದ ನನ್ನ ತಂದೆ ಶಾಲೆಯ ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಲಹೆ ನೀಡುತ್ತಿದ್ದುದರಿಂದ ಸಿಸ್ಟರ್ ಲಿಲಿಯನ್ ಒಂದೆರಡು ಬಾರಿ ನಮ್ಮ ಮನೆಗೆ ಬಂದಿದ್ದರು.) ಪರಿಚಿತ ಪದಗಳಿದ್ದ ಈ ಪ್ರಶ್ನೆ ನನಗೆ ಅಷ್ಟೇನೂ ಕಷ್ಟ ಎನಿಸಲಿಲ್ಲ, ಸ್ವಲ್ಪ ಸಮಾಧಾನವೂ ಆಯಿತು, ನಾನು, ‘ಎಸ್ ಸಿಸ್ಟರ್.’ ಎಂದೆ. ಅವರ ಮುಂದಿನ ಪ್ರಶ್ನೆ: ‘ಈಸ್ ಇಟ್ ಮೇಲ್ ಆರ್ ಫೀಮೇಲ್’?. ‘ಮೇಲ್’, ‘ಫೀಮೇಲ್’ ಪದಗಳು ಅರ್ಥವಾಗದೆ ಪ್ರಶ್ನೆಯು ನನ್ನ ಗಂಟಲಿಗೆ ಇಕ್ಕಳದಂತೆ ಸಿಕ್ಕಿಕೊಂಡು, ಕಿವಿಯೆಲ್ಲ ಬಿಸಿಯಾಗಿ ಜ್ವರ ಬಂದಂತಾಯಿತು. ಆದರೂ ಅಳುಕನ್ನು ತೋರಿಸಿಕೊಳ್ಳದೆ ನಾನು ಅವರ ಹಾಗೆ ನಗುನಗುತ್ತಲೇ ‘ಎಸ್, ಸಿಸ್ಟರ್’ ಎಂದೆ. ಸಿಸ್ಟರ್ ಕಣ್ಣು ಗಂಭೀರಗೊಂಡು ನನ್ನನ್ನೆ ದೃಷ್ಟಿಸಿ ನೋಡತೊಡಗಿತು. ಅಲ್ಲಿಯೇ ಇದ್ದ ಸಿಸ್ಟರ್ ಜಾಸ್ಮಿನ್ ‘ಅಲ್ಲ ಕಣ, ಸಿಸ್ಟರ್ ಕೇಳ್ತಾರೆ, ನಿಮ್ಮ ಮನೇಲಿ ನಾಯಿ ಉಂಟಲ್ಲ ಅದು ಹುಡುಗನೋ ಹುಡುಗಿನೋ ಅಂತ’ ಅಂದರು. ನಾನು ಥಟ್ಟನೆ, ‘ಸಿಸ್ಟರ್, ನಾಯಿಗೆ ಹುಡುಗ/ಹುಡುಗಿ ಅನ್ನಲ್ಲ, ಗಂಡೋ? ಹೆಣ್ಣೋ? ಅನ್ತಾರೆ. ನಮ್ಮ ಮನೆಲಿರೋದು ಗಂಡು ನಾಯಿ’ ಎಂದೆ. ಲಿಲಿಯನ್‍ರು ಜಾಸ್ಮಿನ್ ಅವರಿಗೆ, ‘ವಾಟ್ ಈಸ್ ದಟ್?’ ಎಂದು ಕೇಳಿದರು. ಜಾಸ್ಮಿನ್, ‘ಮೇಲ್ ಇಟ್ ಸೀಮ್ಸ್.’ ಅಂದರು. ನಂತರ ಅವರು ನನ್ನನ್ನು ತರಗತಿಗೆ ಹೋಗಲು ಹೇಳಿದರು.

ಇದನ್ನೂ ಓದಿ:ಅನುವಾದದ ಸಂಕಷ್ಟ | ಕಷ್ಟಕ್ಕ ಕರಿಬ್ಯಾಡ್ರಿ; ಊಟಕ್ಕ ಮರಿಬ್ಯಾಡ್ರಿ!

ಈಗ ನೆನೆದರೆ ತಮಾಷೆಯಾಗಿ ಕಾಣುವ ಈ ಘಟನೆಯನ್ನು ಯೋಚಿಸುವಾಗ ಅನ್ನಿಸಿದ್ದು, ನಾಯಿಯನ್ನು ಹುಡುಗ/ಹುಡುಗಿ ಎಂದ ಸಿಸ್ಟರ್ ಆ ಪದಗಳನ್ನು ‘ಭಾವಿಸಿ’ದ್ದು ಬೇರೆ ಭಾಷೆಯಲ್ಲಿ ಮತ್ತು ಅದನ್ನು ಅನುವಾದಿಸಿದ್ದು ಕನ್ನಡದಲ್ಲಿ. ಆದರೆ ನಾನು ಭಾವಿಸಿದ್ದು ಕನ್ನಡದಲ್ಲಿ ಮತ್ತು ಅಭಿವ್ಯಕ್ತಗೊಳಿಸಿದ್ದೂ ಕನ್ನಡದಲ್ಲಿ. ಒಂದು ನೆಲೆಯಲ್ಲಿ, ನನ್ನ ಭಾಷಿಕ ಪರಿಮಿತಿಗಳಿಂದಾಗಿ ಉಂಟಾದ ಅಂತರ ಮತ್ತು ಇನ್ನೊಂದು ನೆಲೆಯಲ್ಲಿ, ಸಿಸ್ಟರ್‌ಗೆ ಕನ್ನಡ, ಇಂಗ್ಲಿಷ್ ಎರಡೂ ಸಾಕಷ್ಟು ಗೊತ್ತಿದ್ದಾಗ್ಯೂ ಆದ ಅಂತರ ಇವೆರಡೂ ಇಲ್ಲಿವೆ. ಹಾಗಾದರೆ, ಮೂಲ ಭಾಷೆ ಮತ್ತು ಅದರ ಅನುವಾದದ ನಡುವೆ ಏರ್ಪಡುವ ‘ಅಂತರ’ವನ್ನು ನಿರ್ಧರಿಸುವ/ನಿರ್ದೇಶಿಸುವ ಅಂಶಗಳು ಯಾವುವು ಎಂಬ ಬಗ್ಗೆ ಇದು ನನ್ನನ್ನು ಆಲೋಚಿಸುವಂತೆ ಮಾಡಿದ ಜೊತೆಗೆ, ಶ್ರೀವಿಜಯನು ಕವಿರಾಜಮಾರ್ಗದಲ್ಲಿ ‘ಕನ್ನಡದೊಳ್ ಭಾವಿಸುವ ಜನಪದಂ’ ಎನ್ನುವುದು ಇದನ್ನೇ ಕುರಿತಾಗಿ ಅಲ್ಲವೆ ಅಂತಲೂ ಅನ್ನಿಸಿತು. ಎರಡು ಭಾಷೆಗಳ ಪೂರ್ಣ ಪರಿಚಯ ಮತ್ತು ಅವುಗಳ ಮೇಲಿನ ಪ್ರಭುತ್ವ ಮಾತ್ರದಿಂದ ಭಾಷೆ ಮತ್ತು ಅದರ ಹಿಂದೆ ಕೆಲಸ ಮಾಡುವ ಒತ್ತಡಗಳ ಸೂಕ್ಷ್ಮಗಳನ್ನು ಸುಲಭವಾಗಿ, ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬುದು, ನಾನೇ ಅನುವಾದದ ಕೆಲಸದಲ್ಲಿ ತೊಡಗಿಕೊಂಡ ನಂತರ ಸ್ವಾನುಭವದ ನೆಲೆಯಲ್ಲಿ ಈ ಘಟನೆ ವಿಸ್ತರಿಸಿತು.

ನಾನು ನನ್ನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಭಾಷಿಕ ಸಂದರ್ಭದ ಫಲವಾದ ಸಂವೇದನೆಯ ಮೂಲಕವೇ ಮತ್ತೊಂದು ಬರಹ, ಕೃತಿಯನ್ನು ಓದುವುದು. ಆದರೆ ಅನುವಾದವು ನಾನು ಕನ್ನಡಿಗಳು ಅಥವಾ ಭಾರತೀಯಳು ಎನ್ನುವ ಪರಿಧಿಯ ಆಚೆ ನಿಂತು ಅನ್ಯಭಾಷಿಕ, ಅನ್ಯಸಾಂಸ್ಕೃತಿಕ ಸನ್ನಿವೇಶದ ಎದುರಿನಲ್ಲಿ ನಿರಪೇಕ್ಷ ಸ್ಥಿತಿಯಿಂದ ನನ್ನನ್ನು ನಾನು ನೋಡುವಂತೆ ಒತ್ತಾಯಿಸುವ ಕೆಲಸ. ಭಾಷೆಯ ಅಂತರದಿಂದ ಆರಂಭವಾಗುವ ಈ ಪ್ರಕ್ರಿಯೆಯು ಕ್ರಮೇಣ ಭಾವ, ವಿಚಾರ, ನಾಗರಿಕತೆ, ಸಂಸ್ಕೃತಿ ಮತ್ತು ಪ್ರಜ್ಞೆಯ ವಲಯಗಳಿಗೆ ವಿಸ್ತರಿಸಿಕೊಳ್ಳುವುದನ್ನು ಗಮನಿಸುವುದು ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಕುತೂಹಲಕರ. ಒಂದರ ಮುಖಾಂತರ ಮತ್ತೊಂದು ತೆರೆದುಕೊಳ್ಳುವ, ಒಂದಕ್ಕೆ ಮತ್ತೊಂದು ಅನುವಾಗುವ ಕ್ರಿಯೆ ಇದು. ಮೂಲದ ಸೃಷ್ಟಿಯನ್ನು ‘ಅನುಸರಿಸಿ’ ನಡೆಯುವ ಈ ಪ್ರಕ್ರಿಯೆಯು ‘ಅನುಸೃಷ್ಟಿ’ ಆಗಿದ್ದರೂ, ಮೂಲ ಪಠ್ಯವನ್ನು ‘ಅನುಸರಿಸಿ’ ಹೇಳುವುದರ ಜೊತೆಗೆ ಒಂದು ‘ಪಠ್ಯ’ದ ಒಳಗಿರುವ ಹಲವು ಪದರಗಳ ಅರ್ಥವಿನ್ಯಾಸಗಳನ್ನು ಹುಡುಕುವುದಕ್ಕೆ ಭಾಷಾಂತರಕಾರ ‘ಅನು’ವಾಗುವ ಕ್ರಿಯೆಯೂ ಹೌದು. ಎಂದರೆ ಭಾಷಾಂತರಕಾರನು ಮೂಲದ ನೆರವಿನಿಂದ ಹೊಸದೊಂದು ‘ಪಠ್ಯ’ವನ್ನು ನಿರ್ಮಿಸುತ್ತಿರುತ್ತಾನೆ; ಅದು ಮೂಲದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ, ಕೆಲವೊಮ್ಮೆ ಬದಲಿಸುತ್ತದೆ.

ಒಂದು ಮತ್ತೊಂದಕ್ಕೆ ತೆಕ್ಕೆ ಹಾಕಿಕೊಂಡಂತೆ ಇರುವ ಸಂಬಂಧಗಳ ಹುಡುಕಾಟವೇ ‘ನೋಟ’ವನ್ನು ‘ಕಾಣ್ಕೆ’ಯಾಗಿ ಬದಲಿಸುತ್ತದೆ. ವ್ಯಕ್ತಿಯ ಅಂತರಂಗ, ಅವನು ಕಟ್ಟಿಕೊಂಡಿರುವ ಸಂಬಂಧಗಳು, ಅವನನ್ನು ಆವರಿಸಿರುವ ಜೀವನ, ಇತಿಹಾಸ, ಸಮಾಜ ಇವೆಲ್ಲವೂ ಯಾವುದೋ ಸಂಕೀರ್ಣ ಬಗೆಯಲ್ಲಿ ಬೆರೆತು ಬಾಳುತ್ತಿರುತ್ತವೆ. ಸಾಹಿತ್ಯವು ಇಂಥ ಹದವನ್ನು ಕಂಡುಕೊಳ್ಳುವ ಹುಡುಕಾಟ. ಅದಕ್ಕೆ ಇರುವ ಒಂದೇ ಒಂದು ಉಪಕರಣವೆಂದರೆ ಭಾಷೆ. ಮೂಲಕೃತಿಯಲ್ಲಿ ಭಾಷೆಯು ಆ ಸಂಕೀರ್ಣವಾದ ಸಂಸ್ಕೃತಿಬಂಧದ ಭಾಗವೇ ಆಗಿರುತ್ತದೆ. ಮೂಲ ಲೇಖಕನು ತನ್ನ ಭಾಷೆ, ಕೃತಿಯಲ್ಲಿ ಮಾಡಿದ ಹುಡುಕಾಟವನ್ನು ಅರ್ಥಮಾಡಿಕೊಳ್ಳುವುದು ಅನುವಾದಕನ ಒಂದು ಹಂತದ ಹುಡುಕಾಟವಾದರೆ, ಮೂಲಪಠ್ಯದ ಅನುಭವಗಳನ್ನು ಪುನರ್ ಸೃಷ್ಟಿಸಲು ತನ್ನ ಭಾಷೆಯನ್ನು ಸಿದ್ಧಮಾಡಿಕೊಳ್ಳುವುದು ಇನ್ನೊಂದು ಹಂತದ ಹುಡುಕಾಟ. ಕನ್ನಡವು ‘ಹುಡುಕು’ವುದರಲ್ಲೇ ‘ಆಟ’ವನ್ನು ಇಟ್ಟುಕೊಂಡ ‘ಆಟ’ವನ್ನು ‘ಲೀಲೆ’ಯಾಗಿ ನೋಡುವ, ಬೇಂದ್ರೆ ಹೇಳುವಂತೆ ‘ಲೀಲೆಯಲ್ಲಿ ಯಾವುದೂ ವಿಫಲವಲ್ಲ’ ಎಂದು ನಂಬಿರುವ, ಹಿಗ್ಗುವ ಭಾಷೆ. ಸೃಷ್ಟಿಲೀಲೆಯಲ್ಲಿ ಸೃಷ್ಟಿಸುವ ಕೈಗಳು ಅದೃಶ್ಯವಾಗಿರುವಂತೆ ಭಾಷಾಂತರದಲ್ಲಿ ಭಾಷಾಂತರಕಾರನು ಪಠ್ಯದ ಹಿಂದೆ ಮರೆಯಾಗಿರಬೇಕಾದುದು ಅಗತ್ಯ.

ಕನ್ನಡವು ಮೊದಲಿನಿಂದಲೂ ನೇರವಾದ ಭಾಷಾಂತರಕ್ಕಿಂತ ಸೃಜನಶೀಲವಾದ ರೂಪಾಂತರಗಳನ್ನು ಬಳಸಿಕೊಂಡಿದೆ. ಪಂಪ, ಕುಮಾರವ್ಯಾಸ, ಕುವೆಂಪು ಇವರೆಲ್ಲ ರಾಮಾಯಣ, ಮಹಾಭಾರತಗಳನ್ನು ಕನ್ನಡಕ್ಕೆ ತಂದದ್ದು ಸೃಜನಶೀಲ ರೂಪಾಂತರಗಳ ಮೂಲಕವೇ. ಇಂತಹ ರೂಪಾಂತರಗಳು ತನ್ನ ಕಾಲದ ಒಳ-ಹೊರಗಿನ ಪ್ರತಿರೋಧಗಳ, ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಆದಂತಹವು ಎನ್ನುವುದು ಮುಖ್ಯ. ಗಯಟೆ ಬಾದಿಲೇರ್, ನೆರೂಡ, ರಿಲ್ಕ್, ಬ್ರೆಕ್ಟ್ ಅವರ ಆಲೋಚನಾ ಕ್ರಮ ಮತ್ತು ಅದನ್ನು ಅಭಿವ್ಯಕ್ತಿಗೊಳಿಸಲು ಅವರು ಬಳಸುವ ಭಾಷೆಯ ಸಾಧ್ಯತೆಗಳು ನಮ್ಮ ಕನ್ನಡದಲ್ಲಿ ಇರಲಿಲ್ಲ. ಎಂದರೆ ಭಾಷೆಗೆ ಆ ಸಾಧ್ಯತೆಗಳು ಇದ್ದರೂ ಅದುವರೆಗೆ ಯಾರೂ ಬಳಸಿಕೊಂಡಿರಲಿಲ್ಲ. ಕುವೆಂಪುರ ‘ಬೊಮ್ಮನಹಳ್ಳಿ ಕಿಂದರಿಜೋಗಿ’, ಪುತಿನರ ‘ಫೌಸ್ಟ್’, ಬೇಂದ್ರೆಯ ‘ಮೇಘದೂತ’, ಎ.ಆರ್.ಕೃಷ್ಣಶಾಸ್ತ್ರಿಗಳ ‘ವಚನ ಭಾರತ’, ಅಹೋಬಲ ಶಂಕರರ ಟ್ಯಾಗೋರ್ ಕಥೆಗಳು, ಲಂಕೇಶರ ‘ಈಡಿಪಸ್’ ಅನುವಾದಗಳಿಂದ ಭಾಷೆಯಲ್ಲಿ ಅಂತಹ ಆಯಾಮಗಳು ಒಡಮೂಡಿದವು. ತನ್ನ ಭಾಷೆಯನ್ನು ಹೊಸ ಆಲೋಚನಾಕ್ರಮಗಳಿಗೆ ಅಳವಡಿಸಿಕೊಳ್ಳುತ್ತಲೇ, ಆಕಾರ ಮತ್ತು ತಿರುಳುಗಳೆರಡೂ ತನ್ನದೇ ಭಾಷೆಯ ಸಹಜ ಸಾಧ್ಯತೆಗಳಿಂದ ಹೆಣೆದಿರುವ ಅನುವಾದಗಳು ಇವು. ಭಾಷೆಯ ಸಾಧ್ಯತೆಗಳನ್ನು ಹಿಗ್ಗಿಸುವ ಇಂತಹ ಅನುವಾದ ಕೃತಿಗಳು ಸಾಹಿತ್ಯಲೋಕದಲ್ಲಿ ಒಂದು ಸ್ವತಂತ್ರ ಕೃತಿಯು ಮಾಡುವ ಕೆಲಸವನ್ನೇ ಮಾಡುತ್ತಿರುತ್ತವೆ. ಭಾಷೆಗೆ ಹೊಸ ನುಡಿಗಟ್ಟು ಮತ್ತು ಹೊಸ ಆಲೋಚನಾ ಕ್ರಮವನ್ನು ತಂದುಕೊಡುವ, ಆಳವಾದ ಸಮುದಾಯ ಪ್ರಜ್ಞೆಯಿಂದ ಹುಟ್ಟುವ ಇಂತಹ ಅನುವಾದಗಳು ಮಾತ್ರ ಸಾಂಸ್ಕೃತಿಕ ಮತ್ತು ಸಾಹಿತ್ಯದ ವಿಶ್ವ (ವಿಶ್ವಸಂಸ್ಕೃತಿ/ವಿಶ್ವಸಾಹಿತ್ಯ ಅಲ್ಲ) ವನ್ನು ತನ್ನದಾಗಿಸಿಕೊಳ್ಳಬಲ್ಲದು.

ಪ್ರತಿಯೊಂದು ಭಾಷೆಗೂ ಅದರದ್ದೇ ವಿವೇಕವಿರುತ್ತದೆ. ಅದು ಆ ಭಾಷೆಯ ವೈಶಿಷ್ಟ್ಯವೂ ಹೌದು, ವೈಚಿತ್ರ್ಯವೂ ಹೌದು. ಭಾಷೆಯು ತನ್ನೊಳಗೆ ಅಡಕವಾಗಿರುವ ಲಯಗಳನ್ನು ಬಗ್ಗಿಸಿ ಹೊಸತಾಗುವ ನಿಟ್ಟಿನಲ್ಲಿ ನಾವು ಅನುವಾದವನ್ನು ನೋಡುವುದು ಭಾಷೆಯ ವಿವೇಕವನ್ನು ಸ್ಪರ್ಶಿಸಿದಂತೆ. ಆಗ ಭಾಷೆಯು ಮರುಪೂರಣಗೊಂಡು ಅನುವಾದ ಕ್ರಿಯೆಯು ‘ಸಾಂಸ್ಕೃತಿಕ ಸಂವಾದ’ವಾಗಿ ಮಾರ್ಪಡುತ್ತದೆ. ತನ್ನದೇ ಆದ ದೊಡ್ಡ ಪರಂಪರೆಯನ್ನು ಹೊಂದಿರುವ ಭಾರತ ಮತ್ತು ಅದರಂತಹ ದೇಶಗಳಿಗೆ (ಥರ್ಡ್ ವರ್ಲ್ಡ್ ಕಂಟ್ರೀಸ್) ತನ್ನ ಪರಂಪರೆಯ ಲಯಗಳನ್ನು ಮತ್ತೆ ಗಳಿಸಿಕೊಳ್ಳಲು, ಮರುಸೃಷ್ಟಿ ಮಾಡಿಕೊಳ್ಳಲು ಅವಕಾಶಕೊಡುವ ಅನುವಾದಗಳಿಂದ ಮಾತ್ರ ಲಾಭವೇ ಹೊರತು ಅಕ್ಷರನಿಷ್ಠ ಅನುವಾದಗಳಿಂದ ಅಲ್ಲ. ಇನ್ನೊಂದು ಭಾಷೆಯ ಪದ/ವಾಕ್ಯಗಳನ್ನು ಯಾಂತ್ರಿಕವಾಗಿ ಕನ್ನಡಕ್ಕೆ ತಂದಿಡುವ ಯಾಂತ್ರಿಕ ಅನುವಾದಗಳಲ್ಲಿ ಭಾಷೆಯ ಸ್ವಂತಿಕೆಯೂ ಇರುವುದಿಲ್ಲ, ಮೂಲದ ಶಕ್ತಿಯೂ ಇರುವುದಿಲ್ಲ.

ಜಗತ್ತಿನ ಸಾಹಿತ್ಯ ಕೃತಿಗಳು/ಸಿದ್ಧಾಂತ/ಶಾಸ್ತ್ರಗಳನ್ನೆಲ್ಲ ಅನುವಾದಿಸಿ ಕನ್ನಡಕ್ಕೆ ತಂದು ರಾಶಿ ಹಾಕಿಕೊಂಡರೆ ಅದು ಇನ್ನಷ್ಟು ಭಾಷೆಯ ಸವಕಳಿಗೆ ಕಾರಣವಾಗುತ್ತದೆಯೇ ಹೊರತು, ಕನ್ನಡಕ್ಕಿರುವ ಅದರದ್ದೇ ಲಯಗಳ ಹುಡುಕಾಟಕ್ಕೆ ನೆರವಾಗುವುದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಹಾಗಾಗಿಯೇ, ನೆರೂಡ ಅಥವಾ ಬೇರೆ ಕವಿಗಳನ್ನು, ಟಾಲ್‍ಸ್ಟಾಯ್‍ರ ಗದ್ಯವನ್ನು ಕನ್ನಡೀಕರಣಗೊಳಿಸುವ ಹೊತ್ತಿನಲ್ಲಿ ನೆರೂಡ, ಟಾಲ್‍ಸ್ಟಾಯ್ ಒಂದೊಮ್ಮೆ ಆ ಕವಿತೆ ಅಥವಾ ಕಾದಂಬರಿಯನ್ನು ಕನ್ನಡದಲ್ಲೇ ಬರೆದಿದ್ದರೆ ಹೇಗಿರುತ್ತಿತ್ತು ಎನ್ನುವುದರ ಕಡೆಗೆ ನನ್ನ ಆಸಕ್ತಿ ಮತ್ತು ಆದ್ಯತೆ. ಯಾಕೆಂದರೆ ಒಂದು ಶ್ರೇಷ್ಠ ಸೃಜನಶೀಲ ಬರವಣಿಗೆಯು ಬರೆಯುವ ಹೊತ್ತಿನಲ್ಲಿಯೇ ಆ ಭಾಷೆಯಲ್ಲಿ ‘ಆಗು’ತ್ತಿರುತ್ತದೆ, ಅಂತೆಯೇ ಅನುವಾದ ಕೂಡ ತನ್ನ ಭಾಷೆಯಲ್ಲಿ ‘ಆಗ’ಬೇಕಾದ ಕ್ರಿಯೆ. ಆಗಮಾತ್ರ ಆ ಲೇಖಕ ನಮ್ಮವನಾಗುತ್ತಾನೆ, ನಮ್ಮ ಭಾಷೆ ಅವನದೂ ಆಗುತ್ತದೆ. ಭಾಷೆಯ ಹೊಸ ಸಾಧ್ಯತೆಗಳ ಬೀಜವನ್ನು ಬಿತ್ತಬಲ್ಲ ಸಮೃದ್ಧನೆಲ ಅಂತಹ ಅನುವಾದದಿಂದಷ್ಟೇ ಸಾಧ್ಯ. ಅದರಿಂದ ನನ್ನ ಅಂತರಂಗಕ್ಕೆ ಲಾಭ ಮತ್ತು ಆ ಮೂಲಕ ಭಾಷೆಗೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.