ಈ ಸಲದ ರೈಟ್ ವೈವ್ಲಿಹುಡ್ ಪ್ರಶಸ್ತಿ ಪಡೆಯುವವರಲ್ಲಿ ಪರಿಸರ ಕಾರ್ಯಕರ್ತರದ್ದೇ ಸಿಂಹಪಾಲು. ಹವಾಮಾನ ಬದಲಾವಣೆ ವಿರುದ್ಧದ ಚಳವಳಿಗೆ ಇದರಿಂದ ಆನೆಬಲ.

ಸ್ವೀಡನ್ನಿನ ರಾಜಧಾನಿ ಸ್ಟಾಕ್ ಹೋಂಗೆ ನಮ್ಮ ಎರಡನೆಯ ಪ್ರವಾಸ ಇದು. ಸೆಪ್ಟೆಂಬರಿನಲ್ಲಿ ನಾವು ಇಲ್ಲಿಗೆ ಬಂದಿಳಿದ ಕೆಲವೇ ದಿನಗಳಲ್ಲಿ ‘ಬದಲೀ ನೊಬೆಲ್’ ಎಂದೇ ಹೆಸರು ಪಡೆದ ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಭಾಜನರಾದವರ ಹೆಸರು ಪ್ರಕಟವಾಗಿತ್ತು. ಈ ವರ್ಷ ಪ್ರಶಸ್ತಿಗೆಂದು ಬಂದವು 142 ಹೆಸರುಗಳು. ಆಯ್ಕೆಗೊಂಡ ನಾಲ್ವರ ಪಟ್ಟಿಯಲ್ಲಿ ಸ್ವೀಡನ್ನಿನ ಕ್ಲೈಮೇಟ್ ಆಕ್ಟಿವಿಸ್ಟ್ ಗ್ರೆತಾ ಥನ್‌ಬರ್ಗ್ (ಸ್ವೀಡಿಶ್ ಭಾಷೆಯಲ್ಲಿ ಆಕೆ ಗ್ರಿಯೆತ ಥುನ್‌ಬೆರಿ) ಅವಳ ಹೆಸರೂ ಇತ್ತು.

‘ಡಿಸೆಂಬರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಆದರೆ, ಮುಚ್ಚಿದ ಬಾಗಿಲ ಹಿಂದೆ, ಕೆಲವೇ ಆಹ್ವಾನಿತರ ಎದುರು ನಡೆಯುತ್ತದೆ. ಈ ಬಾರಿ ನಲವತ್ತನೆಯ ವರ್ಷಾಚರಣೆಯ ಅಂಗವಾಗಿ ನಡೆಯುವ ಡಿಸೆಂಬರ್ ನಾಲ್ಕರ ಆ ಸಮಾರಂಭಕ್ಕೆ ಸಾರ್ವಜನಿಕರನ್ನೂ ಆಹ್ವಾನಿಸುತ್ತಿದ್ದಾರೆ. ಗ್ರಿಯೆತ ಕೂಡ ಬರ್ತಿದಾಳಂತೆ. ನೋಡಿ, ಸಾಧ್ಯವಾದರೆ ಹೋಗಿಬನ್ನಿ…ಎಂದಿತ್ತು ನವೆಂಬರಿನ ಒಂದು ಮುಂಜಾನೆ ಅಣ್ಣನ ಸಂದೇಶ.

‘ನೊಬೆಲ್’ ಮತ್ತು ‘ಬದಲೀ ನೊಬೆಲ್’ ಈ ಎರಡೂ ಪ್ರತಿಷ್ಠಿತ ಬಹುಮಾನಗಳನ್ನು ನೀಡುವ ಸಂಸ್ಥೆಗಳು ಇದೇ ಸ್ಟಾಕ್ ಹೋಂನಲ್ಲಿವೆ. ಆಲ್‌ಫ್ರೆಡ್ ನೊಬೆಲ್ ತನ್ನ ಜೀವಮಾನದ ಗಳಿಕೆಯನ್ನೆಲ್ಲ ಮುದ್ದತ್ತಾಗಿ ಇಟ್ಟು ವಿಜ್ಞಾನ, ಸಾಹಿತ್ಯ ಮತ್ತು ಶಾಂತಿಗಾಗಿ ಅತ್ಯುನ್ನತ ಕೆಲಸ ಮಾಡಿದವರನ್ನು ವರ್ಷಕ್ಕೊಮ್ಮೆ ಗುರುತಿಸಿ ಪುರಸ್ಕರಿಸಬೇಕೆಂದು ವ್ಯವಸ್ಥೆ ಮಾಡಿದನಷ್ಟೆ? ಅದಾಗಿ ಅದೆಷ್ಟೋ ವರ್ಷಗಳ ನಂತರ ಜಾರಿಗೆ ಬಂದಿದ್ದು ಅಷ್ಟೇ ಪ್ರತಿಷ್ಠಿತವಾದ ಈ ‘ಬದಲೀ ನೊಬೆಲ್’ ಪ್ರಶಸ್ತಿ. ಶೋಷಿತರಿಗಾಗಿ ಹೋರಾಡುವ, ಆತ್ಮಸ್ಥೈರ್ಯ ತೋರುವ ಸಮಾಜದ ವಿವಿಧ ಸ್ತರಗಳ ವ್ಯಕ್ತಿ/ ಸಂಸ್ಥೆಗಳಿಗೆ ಇಲ್ಲಿ ಪುರಸ್ಕಾರ.

‘ಬದಲೀ ನೊಬೆಲ್’ಗೆ ಇನ್ನೊಂದು ವಿಶೇಷವಿದೆ. ಬಹುಮಾನಿತ ಹಣವನ್ನು ವಿಜೇತರು ಸ್ವಂತಕ್ಕೆಂದು ಬಳಸುವಂತಿಲ್ಲ, ತಮ್ಮ ಕಾರ್ಯಕ್ಷೇತ್ರಕ್ಕೇ ಬಳಸಿಕೊಳ್ಳಬೇಕು. ಬದಲೀ ನೊಬೆಲ್ ಸಂಸ್ಥೆ ಪ್ರಶಸ್ತಿ ಕೊಡಮಾಡಿದ ನಂತರ ಪುರಸ್ಕೃತರ ಆದರ್ಶವನ್ನು ಬೆಂಬಲಿಸುತ್ತದೆ. ಸಂಸ್ಥೆ ವಿಜೇತರ ಜೀವಕ್ಕೆ, ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದ ಹಾಗೆ ಕಾಳಜಿವಹಿಸುತ್ತದೆ.

ಚಿಪ್ಕೊ, ನರ್ಮದಾ ಬಚಾವೋ ಮತ್ತು ಕೇರಳದ ಜನವಿಜ್ಞಾನ ಆಂದೋಲನಗಳು, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಆಹಾರ ಸಾರ್ವಭೌಮತ್ವದ ಪ್ರತಿಪಾದಕಿ ವಂದನಾ ಶಿವ, ಮಹಿಳಾ ಸ್ವಉದ್ಯೋಗ ಸಂಸ್ಥೆಯನ್ನು ಹುಟ್ಟುಹಾಕಿದ ಇಳಾ ಭಟ್, ಗಿರಿಜನ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ. ಸುದರ್ಶನ, ಮನೆಕೆಲಸದ ಮಹಿಳೆಯರು ಮತ್ತು ಸ್ಲಂ ನಿವಾಸಿಗಳ ಪರ ಹೋರಾಟಗಾರ್ತಿ ರುಥ್ ಮನೋರಮಾ ಇವರೆಲ್ಲ ರೈಟ್ ಲೈವ್ಲಿಗುಡ್ ಪ್ರಶಸ್ತಿ ಪಡೆದ ಕೆಲವು ಭಾರತೀಯರು.

ಈ ಬಾರಿಯ ವಿಜೇತರು

ಪಶ್ಚಿಮ ಸಹಾರಾ –ಆಫ್ರಿಕಾದ ವಿವಾದಿತ ಪ್ರದೇಶ. ಅನೇಕ ವರ್ಷಗಳಿಂದ ದೂರದ ಸ್ಪೇನ್ ದೇಶದ ವಸಾಹತುಶಾಹಿ ಬಂಧನದಲ್ಲಿ ಇತ್ತು. 1775ರಲ್ಲಿ ಸ್ಪೇನ್ ಬಿಟ್ಟುಕೊಟ್ಟರೂ ಪಕ್ಕದ ಮೊರೊಕ್ಕೊ ಪಶ್ಚಿಮ ಸಹಾರಾವನ್ನು ಸ್ವಾಧೀನಪಡಿಸಿಕೊಂಡಿತು. ಈ ಪ್ರದೇಶಕ್ಕೆ ಇನ್ನೂ ತನ್ನದೇ ಆದ ಹೆಸರಿಲ್ಲ, ದೇಶ ಎಂಬ ಪಟ್ಟ ಇಲ್ಲ. ‘ನಮ್ಮನ್ನು ನಮ್ಮಷ್ಟಕ್ಕೆ ಬಿಡಿ, ಸ್ವಾತಂತ್ರ್ಯ ಕೊಡಿ’ ಎಂದು ಮೂವತ್ತು ವರ್ಷಗಳಿಂದ ಶಾಂತಿಯುತವಾಗಿ ಬೇಡಿಕೆ ಇಡುತ್ತಿರುವ 53 ವರ್ಷ ವಯಸ್ಸಿನ ಮಹಿಳೆ ಅಮಿನಟು ಹೈದರ್ ಈ ಬಾರಿಯ ರೈಟ್ ಲೈವ್ಲಿಹುಡ್ ಪ್ರಶಸ್ತಿ ವಿಜೇತೆ. ಆಕೆಗೊಂದು ಅನ್ವರ್ಥ ಹೆಸರು ‘ಸಹ್ರಾವಿ ಗಾಂಧಿ’. ಆಕೆ ಹದಿಹರೆಯದಿಂದಲೇ ತಾಯಿನಾಡಿಗಾಗಿ ಹೋರಾಟ ನಡೆಸಿದ್ದು ತನ್ನ ಮತ್ತು ಕುಟುಂಬದ ಮೇಲೆ ಎದುರಿಸುತ್ತಿರುವ ದೌರ್ಜನ್ಯದ ಹೊರತಾಗಿಯೂ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹದ ಮೂಲಕ ಪಶ್ಚಿಮ ಸಹಾರಾದತ್ತ ವಿಶ್ವಸಂಸ್ಥೆ ಹಾಗೂ ಬಲಾಢ್ಯ ದೇಶಗಳ ಗಮನ ಸೆಳೆಯುತ್ತಿದ್ದಾರೆ.

‘ಸಹ್ರಾವಿ ಜನರ ಅಹಿಂಸಾತ್ಮಕ ಮತ್ತು ನ್ಯಾಯಯುತ ಬೇಡಿಕೆಯನ್ನು ಜಗತ್ತೇ ಗುರುತಿಸಿದಂತಾಗಿದೆ. ಹೀಗೆಯೇ ಎಲ್ಲ ಕಡೆಯಿಂದ ಪ್ರೋತ್ಸಾಹ ದೊರೆತಲ್ಲಿ ಮುಂದೊಂದು ದಿನ ನಮಗೆ ಸ್ವಾತಂತ್ರ್ಯ ಸಿಕ್ಕೇ ಸಿಗಲಿದೆ’ ಎಂದು ಅಮಿನೆಟು ಪ್ರತಿಕ್ರಿಯಿಸಿದ್ದಾರೆ.

25 ವರ್ಷಗಳಿಂದ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಚೀನಾದ ಲಾಯರ್ ಗುವೊ ಜಿಯಾನ್ಮಯಿ ಪ್ರಶಸ್ತಿ ಪಡೆಯುತ್ತಿರುವ ಇನ್ನೊಬ್ಬ ವ್ಯಕ್ತಿ. ದೇಶದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಮಹಿಳೆಯರೇ ಇದ್ದರೂ ಚೀನಾದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವೇನೂ ಕಡಿಮೆಯಿಲ್ಲ. ಕೌಟುಂಬಿಕ ಶೋಷಣೆ, ಅಸಮಾನ ವೇತನ, ಲೈಂಗಿಕ ದೌರ್ಜನ್ಯ ಹಾಗೂ ಗರ್ಭಧರಿಸಬಾರದೆಂದು ಕರಾರು ಹಾಕುವ ಕಂಪನಿಗಳ ವಿರುದ್ಧ ಮಹಿಳೆಯರು ಸಿಡಿದೇಳುವಲ್ಲಿ ಜೊತೆಗೂಡಿ ಅವರಿಗೆ ಉಚಿತವಾಗಿ ಅವಶ್ಯಕ ಕಾನೂನು ಸಲಹೆ ನೀಡುವ ಗುವೊ ಮತ್ತವರ ಆರುನೂರು ವಕೀಲರನ್ನೊಳಗೊಂಡ ತಂಡ ದೇಶದ ಮೂಲೆಮೂಲೆಯ ಸುಮಾರು ಒಂದೂವರೆ ಲಕ್ಷ ಮಹಿಳೆಯರಿಗೆ ಉಚಿತ ಮಾರ್ಗದರ್ಶನ ನೀಡಿದೆ. ನಾಲ್ಕು ಸಾವಿರ ಮಹಿಳೆಯರ ಮೇಲಿನ ದೌರ್ಜನ್ಯ ಕೇಸುಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದೆ.

‘ಮಹಿಳೆಯರ ಹಕ್ಕುಗಳು, ಪ್ರಜಾಪ್ರಭುತ್ವದ ಮೌಲ್ಯ ಮತ್ತು ಚೀನಾದ ನೆಲದ ಕಾನೂನನ್ನು ಎತ್ತಿಹಿಡಿಯುವಲ್ಲಿ ನಮ್ಮ ಪ್ರಯತ್ನವನ್ನು ಗುರುತಿಸಿದಂತಾಗಿದೆ. ಗಟ್ಟಿಯಾಗಿ ನಿಲ್ಲಲು ನಮಗೆ ಧೈರ್ಯ ನೀಡುವವರು, ಸ್ಫೂರ್ತಿ ತುಂಬುವವರು ಬೇಕಾಗಿತ್ತು, ಈ ಪ್ರಶಸ್ತಿ ಅದನ್ನು ಕೊಡಮಾಡಿದೆ ಎಂದು ಗುವೊ ಜಿಯಾನ್ಮಯಿ ಉದ್ಗಾರ ಎತ್ತಿದ್ದಾರೆ.

ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆಯಲಿರುವ ಮೂರನೆಯ ವ್ಯಕ್ತಿ ಹದಿನಾರರ ಬಾಲಕಿ ಗಿಯೆತ ತುನ್‌ಬೆರಿ. ಒಂದು ವರ್ಷದ ಹಿಂದೆ ಸ್ಟಾಕ್ ಹೋಮಿನ ಪಾರ್ಲಿಮೆಂಟ್ ಭವನದ ಕಲ್ಲುಕಂಬಕ್ಕೆ ಒರಗಿ ಕ್ಲೈಮೇಟ್‌ಗಾಗಿ ಶಾಲಾ ಮುಷ್ಕರ ಫಲಕ ಹಿಡಿದು ಒಬ್ಬಂಟಿಯಾಗಿ ಕುಳಿತಿದ್ದ ಈ ಬಾಲೆಯ ಬೆಂಬಲಕ್ಕೆ ಇಂದು ಸಮಾಜದ ವಿವಿಧ ಕ್ಷೇತ್ರಗಳ ಲಕ್ಷ, ಕೋಟಿ ಸಂಖ್ಯೆಯಲ್ಲಿ ಜನರು ಮುಂದೆ ಬರುತ್ತಿದ್ದಾರೆ. ‘ನಿಮ್ಮ ಇಂಗಾಲದ ನೀತಿ ನಮ್ಮಂಥ ಮಕ್ಕಳ ಭವಿಷ್ಯವನ್ನೇ ಕಸಿಯುತ್ತಿದೆ, ಯಾಕೆ ವಿಜ್ಞಾನದ ಎಚ್ಚರಿಕೆಯನ್ನು ಕೇಳುತ್ತಿಲ್ಲ?’ ಎಂದ ಲಕ್ಷಾಂತರ ಬೆಂಬಲಿಗರ ಗ್ರಿಯೆತಳ ದಿಟ್ಟ ಪ್ರಶ್ನೆ ಇಂದು ನೂರಾರು ಸರ್ಕಾರಗಳನ್ನು ಇರುಸುಮುರುಸುಗೊಳಿಸಿವೆ.

‘ನಾನು ನಮ್ಮ ಈ ಭೂಮಿಯ ಪರ ಧ್ವನಿ ಎತ್ತಿರುವ ಶಾಲಾ ಮಕ್ಕಳ, ತರುಣ ತರುಣಿಯರ, ಹಿರಿಯರ ಜಾಗತಿಕ ಹೋರಾಟದ ಒಂದು ಭಾಗ ಮಾತ್ರ. ಅವರೊಡನೆ ಈ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ರೈಟ್ ಲೈವ್ಲಿಹುಡ್ ಪ್ರಶಸ್ತಿಯಿಂದಾಗಿ ‘ಭವಿಷ್ಯಕ್ಕಾಗಿ ಶುಕ್ರವಾರ’ ಹಾಗೂ ಕ್ಲೈಮೇಟ್ ಬಿಕ್ಕಟ್ಟಿನ ಆಂದೋಲನಕ್ಕೆ ಬಲವಾದ ಮಾನ್ಯತೆ ದೊರೆತಂತಾಗಿದೆ’ – ಇದು ಬದಲೀ ನೊಬೆಲ್ ಘೋಷಣೆಯಾದಾಗ ಗ್ರಿಯೆತ ನೀಡಿದ ಪ್ರತಿಕ್ರಿಯೆ. ಬ್ರೆಜಿಲ್ ದೇಶದ ಬುಡಕಟ್ಟು ಜನಾಂಗದ ಮುಖಂಡ ದವಿ ಕೊಪೆನೊವ ಹಾಗೂ ಆತನೇ ಹುಟ್ಟುಹಾಕಿದ ‘ಹುಟುಕಾರ ಯನೊಮಮಿ’ ಸಂಸ್ಥೆ ಕೂಡ ರೈಟ್ ಲೈವ್ಲಿಹುಡ್ ಪ್ರಶಸ್ತಿ ಜಂಟಿಯಾಗಿ ಪಡೆದಿವೆ.

ಅಮೆಜಾನ್ ಕಾಡಿನ ಬ್ರೆಜಿಲ್ ಮತ್ತು ವೆನಿಜುವೆಲಾದ ಭಾಗದಲ್ಲಿ ಮಾತ್ರ ಕಂಡುಬರುವ, ಮೂವತ್ತೈದು ಸಾವಿರ ಜನಸಂಖ್ಯೆಯ ಬುಡಕಟ್ಟು ಜನಾಂಗ ಯನೊಮೊಮಿ. ಇಡೀ ಜಗತ್ತಿನಲ್ಲಿ ಸ್ಥಳೀಯರ ನಿಯಂತ್ರಣದಲ್ಲಿರುವ ಅತಿ ಹೆಚ್ಚು (95 ಸಾವಿರ ಚದರ ಕಿಮೀ) ಪ್ರದೇಶ ಇವರದ್ದು. ಆದರೆ ಎಗ್ಗಿಲ್ಲದ ಅಮೆಜಾನ್ ಅರಣ್ಯನಾಶ, ಸಂಪನ್ಮೂಲಗಳ ಕೊಳ್ಳೆ ಇವರ ಸರಹದ್ದನ್ನೂ ತಲುಪಿದೆ. ಚಿನ್ನದ ಅದಿರಿನ ಗಣಿಗಾರಿಕೆ ಸಮೀಪದ ಹಳ್ಳಕೊಳ್ಳಗಳಿಗೆ ಪಾದರಸದಂತಹ ವಿಷಲೋಹಗಳು ಸೇರುವಂತೆ ಮಾಡಿದೆ. ಆಧುನಿಕ ರೋಗಗಳಿಗೆ ನಿರೋಧಕ ಶಕ್ತಿಯಿಲ್ಲದ ಯನೊಮಮಿ ಜನರು ಇಂದು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಗಡಿಗೆ ಬಿಗಿಕಾವಲು ಹಾಕಿ ತಮ್ಮ ಜನರ ಸುರಕ್ಷೆಯೊಂದಿಗೆ ಮಳೆಕಾಡುಗಳ ರಕ್ಷಣೆಯನ್ನೂ ಮಾಡುತ್ತಿರುವವರು ದವಿ ಮತ್ತವರೇ ಸ್ಥಾಪಿಸಿದ ‘ಹುಟುಕಾರ ಯನೊಮಮಿ’ ಸಂಸ್ಥೆ. ದವಿ ಅವರಿಗೆ ‘ಅಮೆಜಾನ್ ಮಳೆಕಾಡಿನ ದಲಾಯಿ ಲಾಮಾ’ ಎಂದೇ ಉಪನಾಮ. ‘ಈ ಪ್ರಶಸ್ತಿ ಈ ಭೂಗ್ರಹ ಮತ್ತು ಇಲ್ಲಿಯ ಜೀವನಾಡಿಯಾದ ಅರಣ್ಯದ ಉಳಿವಿಗಾಗಿ ಹೋರಾಡುತ್ತಿರುವ ನನ್ನ ಮತ್ತು ನಮ್ಮ ಹುಟುಕಾರ ಸಂಸ್ಥೆಯ ಕುರಿತಾದ ನಂಬಿಕೆಯನ್ನು ತೋರಿಸಿದೆ. ಅಮೆಜಾನ್ ಅರಣ್ಯವನ್ನು ಕಾಪಾಡಲು ನಮಗಿನ್ನೂ ಬಲ ಬಂದಂತಾಗಿದೆ’ ಎಂದಿದ್ದಾರೆ ಪ್ರಶಸ್ತಿ ವಿಜೇತ ದವಿ ಯನೊಮಮಿ.

2016ರಲ್ಲಿ ಸ್ವೀಡನ್ ದೇಶವೇ ಮೊದಲು ಹುಟ್ಟು ಹಾಕಿದ ಅಭಿಯಾನ ‘ಹ್ಯುಮಾನಿಟೇರಿಯನ್ ಮೆಟಲ್ ಇನಿಶಿಯೇಟಿವ್’. ಹಿಂಸೆ, ನೋವು, ಸಾವುಗಳ ಪ್ರತೀಕವಾದ ಶಸ್ತ್ರಾಸ್ತ್ರಗಳನ್ನು ಕರಗಿಸಿ ಮರುಬಳಕೆ ಮಾಡುವುದೇ ಇದರ ಉದ್ದೇಶ. ಈ ಬಾರಿ ರೈಟ್ ಲೈವ್ಲಿಹುಡ್ ಪ್ರಶಸ್ತಿಯ ಸ್ಮರಣಿಕೆಯನ್ನು ಅಕ್ರಮ ಶಸ್ತಾಸ್ತ್ರ ಕರಗಿಸಿದಾಗ ದೊರೆಯುವ ಹ್ಯುಮಾನಿಯಂ ಲೋಹದಿಂದ ಮಾಡಿದ್ದು.

‘ಸರ್ಕಸ್’ ಹೆಸರಿನ ಖಾಸಗಿ ಥಿಯೇಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಅಂದಿನ ವೇದಿಕೆಯನ್ನು ಈ ಬಾರಿಯ ವಿಜೇತರೊಂದಿಗೆ ಈ ಮೊದಲು ಪ್ರಶಸ್ತಿ ಪಡೆದ ಹಲವರು ಹಂಚಿಕೊಳ್ಳಲಿದ್ದಾರೆ, ಎಡ್ವರ್ಡ್ ಸ್ನೋಡೆನ್ (ಅಮೆರಿಕದ ಕೇಂದ್ರ ಗೂಢಚಾರ ಸಂಸ್ಥೆ ಸಿಐಎಯಲ್ಲಿ ಕೆಲಸ ಮಾಡುತ್ತಿದ್ದ ಈತ ಪ್ರಜಾಪ್ರಭುತ್ವದ ಹಾಗೂ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯನ್ನು ಹೊತ್ತ ಸರ್ಕಾರವೇ ಅದನ್ನು ಉಲ್ಲಂಘನೆ ಮಾಡುತ್ತಿರುವುದನ್ನು ಬಹಿರಂಗಗೊಳಿಸುವಲ್ಲಿ ತೋರಿದ ಧೈರ್ಯ ಮತ್ತು ಕೌಶಲಕ್ಕಾಗಿ 2014ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದವರು) ಮಾಸ್ಕೊದಿಂದ ಇಲ್ಲಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಲಾವಿದರಾದ ಆನ್ ಬ್ರುನ್ ಹಾಗೂ ಜೋಸ್ ಗೊನ್ಸಾಲೆಝ್ ಅವರಿಂದ ಗಿಟಾರ್ ಮತ್ತು ಗಾಯನ ನಡೆಯಲಿದೆ. ಇಡೀ ಸಮಾರಂಭದ ಸಂವಹನ ಭಾಷೆ ಇಂಗ್ಲಿಷ್. ಸಮಾರಂಭದ ಟಿಕೆಟ್ ಹಣ 460 ಸೆಕ್ ಅಥವಾ 3,220 ರೂಪಾಯಿ. ಈ ಎಲ್ಲ ವಿವರಗಳನ್ನೇನೋ ಪಡೆದೆವು. ಖೇದವೆಂದರೆ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ದಿನವೇ ನಾವು ಮರಳಿ ಭಾರತಕ್ಕೆ ಹೊರಡಬೇಕು. ‘ಮುಂದಿನ ವರ್ಷ ಮತ್ತೆ ಬರೋಣ, ಗ್ರಿಯೆತಳನ್ನು ಖಂಡಿತ ಭೆಟ್ಟಿಯಾಗಿ ಮಾತಾಡೋಣ...’ ಎಂಬ ಆಶಾವಾದದ ತೀರ್ಮಾನ ನಮ್ಮದಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.