ಈ ಡಿಸೆಂಬರ್ ತಿಂಗಳಿನಿಂದ ಬರುವ ವರ್ಷದ ಮೇ ತಿಂಗಳವರೆಗೂ ಕನ್ನಡ ಕರಾವಳಿಯ ಯಾವ ಮೂಲೆಗೆ ಹೋದರೂ ಚಂಡೆ ಮದ್ದಳೆಗಳ ಧೀಂ ತೊಂ ಗಳು ಕಿವಿಗೆ ಬೀಳುತ್ತಲೇ ಇರುತ್ತವೆ. ಆಗಷ್ಟೇ ಕಟ್ಟಿ ನಿಲ್ಲಿಸಿದ ರಂಗಸ್ಥಳ, ಬಣ್ಣಬಣ್ಣದ ಡೇರೆಯ ಚೌಕಿಮನೆಗಳೂ ಕಣ್ಣಿಗೆ ಕಾಣಿಸುತ್ತಿರುತ್ತವೆ.

ಮೂವತ್ತಕ್ಕೂ ಹೆಚ್ಚು ಸಂಖ್ಯೆಯ ಪೂರ್ಣಕಾಲಿಕ ಯಕ್ಷಗಾನ ಬಯಲಾಟದ ಮೇಳಗಳು, ಕೆಲವು ಡೇರೆ ಮೇಳಗಳು ನವೆಂಬರ್ ಕೊನೆಯಿಂದ ಮೇ ತಿಂಗಳ ಅಖೇರಿಯವರೆಗೆ ತಿರುಗಾಟ ಮಾಡುತ್ತಿರುತ್ತವೆ. ದಿನವೂ ಒಂದಿಲ್ಲೊಂದು ಊರಿನಲ್ಲಿ ಪ್ರದರ್ಶನ ನೀಡುತ್ತಿರುತ್ತವೆ. ಇವಲ್ಲದೆ ನೂರಾರು ಹವ್ಯಾಸಿ ಸಂಘ ಸಂಸ್ಥೆಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಕಾರ್ಯಕ್ರಮಗಳೂ ಇರುತ್ತವೆ. ಯಕ್ಷಗಾನದ ಮಟ್ಟಿಗೆ ಇದೀಗ ಅತಿಯಾದ ಪ್ರದರ್ಶನಗಳ ಕಾಲ.

ಕರಾವಳಿಯ ಯಾವುದೇ ಮನೆಯ ಹತ್ತು ಕಿಲೋಮೀಟರು ವ್ಯಾಪ್ತಿಯಲ್ಲಿ ಯಕ್ಷಗಾನವೊಂದು ದಿನವೂ ನಡೆಯುತ್ತಿರುತ್ತದೆ. ಎಲ್ಲೆಲ್ಲೂ ಆಟ ಆಟ ಆಟ! ಯಕ್ಷಗಾನದ ಸೀಸನ್ನಿನ ಪ್ರತಿವರ್ಷದ ಈ ಆರು ತಿಂಗಳುಗಳಲ್ಲಿ ಯಕ್ಷಗಾನವನ್ನು ತಪ್ಪಿಸಿಕೊಂಡು ಓಡಾಡುವುದು ಯಕ್ಷಗಾನದ ಹುಚ್ಚರಿಗೆ ತೀರಾ ಕಷ್ಟ. ಪ್ರತಿವರ್ಷದ ಡಿಸೆಂಬರ್ ತಿಂಗಳು ನನ್ನ ಮಟ್ಟಿಗೆ ಬ್ರಿಸ್ಟಲ್‌ನ ವಿಮಾನ ಕೆಲಸವನ್ನು ಬದಿಗಿಟ್ಟು, ಬ್ರಿಟನ್ನಿನ ಕಡು ಚಳಿಯಿಂದ ತಪ್ಪಿಸಿಕೊಂಡು ಕರಾವಳಿಯ ನನ್ನೂರು ಮರವಂತೆಯಲ್ಲಿ ಕಾಲ ಕಳೆಯುವ ಸಮಯ. ನನ್ನ ಆಂಗ್ಲ ಸಹೋದ್ಯೋಗಿಗಳು ವರ್ಷದ ನಡುವೆ ತಾವು ತೆಗೆದುಕೊಳ್ಳುವ ರಜೆಯನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಯಾವುದೋ ಬೆಚ್ಚಗಿನ ದೇಶದ ಸಮುದ್ರದ ಬದಿಯಲ್ಲಿ ವಾರವನ್ನು ಕಳೆದರೆ ‘ಬೀಚ್ ಹಾಲಿಡೇ’ ಎನ್ನುತ್ತಾರೆ; ಹಿಮಾಚ್ಛಾದಿತ ಬೆಟ್ಟದ ಇಳಿಜಾರಿನಲ್ಲಿ ಸ್ಕೀಯಿಂಗ್ ಮಾಡಲು ಹೋದರೆ ‘ಸ್ಕೀಯಿಂಗ್ ಹಾಲಿಡೇ’ ಎನ್ನುತ್ತಾರೆ. ಇವರಂತೆಯೇ ನನ್ನ ಡಿಸೆಂಬರ್ ತಿಂಗಳ ಹುಟ್ಟೂರ ರಜೆಯಲ್ಲಿ ಯಕ್ಷಗಾನ ವೀಕ್ಷಿಸುವುದು ಅಥವಾ ಬಣ್ಣ ಹಚ್ಚಿ ಕುಣಿಯುವುದೇ ತುಂಬಿರುವುದರಿಂದ ನನ್ನ ಈ ಸಮಯದ ರಜಾದಿನಗಳನ್ನು ‘ಯಕ್ಷಗಾನ ಹಾಲಿಡೇ’ ಎಂದೂ ನಾಮಕರಣ ಮಾಡಿಕೊಂಡಿದ್ದೇನೆ.

ಯಕ್ಷಗಾನಪ್ರಿಯರ ದಿನ ಶುರು ಆಗುವುದೇ ‘ಇವತ್ತು ಇಲ್ಲಿ, ನಾಳೆ ಎಲ್ಲಿ’ ಎನ್ನುವ ಚಿಂತನೆಯಲ್ಲಿ. ಕೆಲವರು ಬೆಳಿಗ್ಗೆ ದಿನಪತ್ರಿಕೆಗಳ ಪುಟಗಳನ್ನು ತೆರೆಯುತ್ತಲೇ ರಾಜಕೀಯ ವಿಷಯಗಳನ್ನೋ, ಷೇರು ಪೇಟೆಯ ಸಮಾಚಾರವನ್ನೋ ಅಡಿಕೆ ಬೆಲೆಯನ್ನೋ ಓದುವ ತರಾತುರಿಯಲ್ಲಿರುತ್ತಾರೆ ನೋಡಿ. ಹಾಗೆಯೇ ಯಕ್ಷಗಾನದ ಅಮರಪ್ರೇಮಿಗಳಿಗೆ ಬೆಳಿಗ್ಗೆ ಸುದ್ದಿಪತ್ರಿಕೆ ಕೈಸೇರಿದ ಕೂಡಲೇ ಯಕ್ಷಗಾನ ಪ್ರದರ್ಶನಗಳ ಉದ್ದ ಪಟ್ಟಿ ಇರುವ ಪುಟವನ್ನು ತೆರೆಯುವ ಕಾತರ. ಉತ್ತರ ಕನ್ನಡದ ಉತ್ತರದ ತುದಿಯಿಂದ ಉಡುಪಿ ಜಿಲ್ಲೆಯನ್ನು ಹಾದು ದಕ್ಷಿಣ ಕನ್ನಡದ ದಕ್ಷಿಣದ ತುದಿಯವರೆಗೆ ಮತ್ತೆ ಘಟ್ಟ ಹತ್ತಿ ಮಲೆನಾಡಿನವರೆಗೂ ಆವರಿಸುವ ಯಕ್ಷಗಾನದ ಸೀಮೆಯಲ್ಲಿ ಅಂದು ಯಾವ ಮೇಳದ ಆಟ ಎಲ್ಲಿ, ಯಾವ ತಾಳಮದ್ದಳೆಯ ಕೂಟ ಎತ್ತ ಎನ್ನುವ ಹುಡುಕಾಟ. ಪ್ರತಿದಿನವೂ ಯಕ್ಷಗಾನಕ್ಕೆ ಹೋಗುವ ಯಕ್ಷಗಾನದ ಹುಚ್ಚರು ಯಾರೂ ಇರಲಿಕ್ಕಿಲ್ಲವಾದರೂ ಅಂದಿನ ಆಟ ಎಲ್ಲೆಲ್ಲಿ, ಅಂದಿನ ಪ್ರಸಂಗ (ಕಥಾನಕ) ಏನು, ಕಲಾವಿದರು ಯಾರು ಎನ್ನುವುದರ ಒಂದು ಕಲ್ಪನೆ ಮಾಡಿಕೊಳ್ಳುವುದೇ ಯಕ್ಷಗಾನದ ಕಟ್ಟಾ ಪ್ರೇಕ್ಷಕರಿಗೆ ದೈನಂದಿನ ಸಣ್ಣ ಭಾಗವಹಿಸುವಿಕೆ ಆಗಿರುತ್ತದೆ. ಯಕ್ಷಗಾನದ ವ್ಯವಸಾಯಿ ಮೇಳಗಳಲ್ಲಿ ಹೊಸ ಅಥವಾ ಸಾಮಾಜಿಕ ಪ್ರಸಂಗಗಳ ಪ್ರವಾಹ ಹೆಚ್ಚಾದ ಮೇಲೆ, ಪೌರಾಣಿಕ ಕಥಾನಕಗಳು ಇವತ್ತು ಎಲ್ಲಿವೆ ಎಂದು ಹುಡುಕುವುದೂ ಒಂದು ವಿಶೇಷ ಪ್ರಯತ್ನವೇ.

ಇನ್ನು ಅಂದು ನೋಡಬೇಕೆಂದಿರುವ ಆಟ, ಕಂಡುಕೇಳರಿಯದ ಯಾವುದೋ ಹಳ್ಳಿಯಲ್ಲಿ ಇದೆಯಾದರೆ ಸಂಜೆ ಆ ಜಾಗ ಹುಡುಕಿಕೊಂಡು ಹೋಗುವಲ್ಲಿಂದಲೇ ಅಂದಿನ ಯಕ್ಷಗಾನ ಪ್ರದರ್ಶನದ ಪ್ರವೇಶಿಕೆ! ಯಕ್ಷಗಾನ ನಡೆಯುವ ಊರು, ಸ್ಥಳ ಎಲ್ಲಿ ಎಂದು ಹುಡುಕುವಲ್ಲಿಂದ ಹಿಡಿದು ಯಕ್ಷಗಾನವನ್ನು ಕುಳಿತು ಆಸ್ವಾದಿಸುವುದರವರೆಗೆ ಯಾರೋ ಒಬ್ಬರೋ ಇಬ್ಬರೋ ಜೊತೆಗೆ ಇದ್ದರೆ ಅಂದಿನ ಆಟದ ರುಚಿ ಹೆಚ್ಚುತ್ತದೆ. ಅಂದಿನ ಅಲ್ಲಿನ ಯಕ್ಷಗಾನವೊಂದನ್ನು ನೋಡುವವರು ಐವತ್ತೋ, ನೂರೋ ಇನ್ನೂರೋ ಜನರು ಇರಬಹುದಾದರೂ ಯಾವುದೋ ಊರಲ್ಲಿ ಪ್ರದರ್ಶನ ನೋಡಲು ಹೋದಾಗ ಅವರೆಲ್ಲ ಅಪರಿಚಿತರೇ ಆಗಿರುತ್ತಾರೆ. ಮತ್ತೆ ನಮ್ಮ ಪಕ್ಕದ ಆಸನದಲ್ಲಿ ನಮ್ಮ ಪರಿಚಿತರು, ಸಮಾನ ಮನಸ್ಕರೊಬ್ಬರಿದ್ದರೆ ಆಟದ ಪೂರ್ಣ ಆಸ್ವಾದನೆಗೆ ಸಹಕಾರಿ ಆಗುತ್ತದೆ. ರಂಗಸ್ಥಳದ ಮೇಲೂ ಒಂದು ವೇಷ ಇರುವುದಕ್ಕಿಂತ ಎರಡೋ ಮೂರೋ ಪಾತ್ರಗಳ ಸಂಭಾಷಣೆ ವಾದ ಅಭಿನಯ ಕುಣಿತಗಳು ಮುದ ಕೊಡುವುದಿಲ್ಲವೆ? ಹಾಗೆ ರಂಗಸ್ಥಳದ ಕೆಳಗೂ ಸ್ಪಂದನೆ ಪ್ರತಿಕ್ರಿಯೆಗಳ ಒಂದು ‘ಮಿನಿ’ ಆಟ ನಡೆಯುತ್ತಿರುತ್ತದೆ. ಯಕ್ಷಗಾನದ ಮಧ್ಯೆ ಮಧ್ಯೆ ‘ಇದು ಹೇಗಾಯ್ತು’, ‘ಕಳೆದ ಸಲ ಹೀಗಾಗಿತ್ತು’, ‘ಈ ಸನ್ನಿವೇಶ ಎಷ್ಟು ಚಂದ ಆಗಿದೆ’, ‘ಇದು ಸ್ವಲ್ಪ ಎಳೀತಾ ಇದ್ದಾರೆ ಒಂದು ಚಾ ಕುಡಿದು ಬರುವ’ ಎಂದೆಲ್ಲ ಒಬ್ಬರಿಗೊಬ್ಬರು ಪಿಸುಗುಡುತ್ತಾ ರಂಗಸ್ಥಳದ ನಾಲ್ಕು ಕಂಬಗಳ ಮಧ್ಯೆ ಸೃಷ್ಟಿಯಾಗುವ ಪುರಾಣ ಕಾಲದಲ್ಲಿ ನಾವೂ ಕರಗಿಹೋಗಲು ಅನುಕೂಲ ಆಗುತ್ತದೆ.

ದಿನಪತ್ರಿಕೆಯಲ್ಲಿ ಒಂದೋ ಎರಡೋ ಶಬ್ದಗಳಲ್ಲಿ ಮುದ್ರಿತವಾಗುವ ಅಂದಿನ ಆಟದ ಸ್ಥಳ ಅಥವಾ ಅಂದಿನ ಆಟವನ್ನು ಆಡಿಸುವವರ ಮನೆಯ ಹೆಸರನ್ನು ನೆನಪಿಟ್ಟುಕೊಂಡು ಆಟದ ದಿಕ್ಕನ್ನು ಸಾಧಾರಣವಾಗಿ ಅಂದಾಜು ಮಾಡಿ ನಾನು ಮತ್ತು ನನ್ನ ನೆರೆಮನೆಯ ಗೆಳೆಯ, ಉದಯ ಹೊರಡುತ್ತೇವೆ. ಯಕ್ಷಗಾನ ವೀಕ್ಷಣೆಯ ಮಟ್ಟಿಗೆ ನಮ್ಮಿಬ್ಬರದೊಂದು ಜೋಡಿವೇಷವೇ. ಬಹಳ ಅಪರೂಪಕ್ಕೊಮ್ಮೆ ಅವನಿಲ್ಲದೆ ನಾನೊಬ್ಬನೇ ಅಥವಾ ಇನ್ಯಾರದೋ ಜೊತೆಗೆ ಹೋದರೆ ‘ಅವರು ನಿಮ್ಮ್ ಜೊತೆ ಇನ್ನೊಬ್ರು ಬತ್ತಿದ್ರಲ,ಅವ್ರಿಲ್ಯಾ ಇವತ್ತು?’ ಎನ್ನುವ ಪ್ರಶ್ನೆಯನ್ನು ಚೌಕಿಮನೆಯೊಳಗಿನ ಪರಿಚಿತ ಕಲಾವಿದರಿಂದ ಕೇಳಬೇಕಾದೀತು.

ಮನೆಯಿಂದ ಹೊರಡುವಾಗ ಇವತ್ತು ನಡುರಾತ್ರಿಯ ಚಳಿ ಎಷ್ಟಿರಬಹುದು, ಬಯಲಲ್ಲಿ ಕುಳಿತು ಆಟ ನೋಡಬೇಕಾದ್ದರಿಂದ ತಲೆ ಮೇಲೆ ಹನಿ ಬಿದ್ದರೆ ಅಂತ ಶಾಲು ಅಥವಾ ಸ್ವೆಟರ್ ಹಿಡಿದು ಹೊರಡಲೂಬಹುದು. ಇಂಗ್ಲೆಂಡ್‌ನ ಕಡುಚಳಿಯನ್ನು ಕಳೆದ 14ವರ್ಷಗಳಿಂದ ‘ನಬೆದ’ ಅನುಭವದಿಂದ ‘ಇದೆಲ್ಲ ಒಂದ್ ಚಳಿಯನಾ?’ ಎಂದು ಗೆಳೆಯನ ಬಳಿ ಉಡಾಫೆ ಮಾಡಿ ಅರ್ಧ ತೋಳಿನ ಅಂಗಿಯಲ್ಲೇ ತಯಾರಾಗುತ್ತೇನೆ.

ಕೆಲವು ಸಲ ಆಟದ ಸ್ಥಳದಲ್ಲಿ ಸರಿಯಾದ ಚಹಾ ವ್ಯವಸ್ಥೆ ಇಲ್ಲದಿದ್ದರೆ ಎಂಬ ಗುಮಾನಿಯಲ್ಲಿ ನನ್ನ ಗೆಳೆಯ ಮನೆಯಿಂದಲೇ ಫ್ಲಾಸ್ಕ್ ತುಂಬ ಬಿಸಿ ಚಹಾ ಜೊತೆಗೆ ಎರಡು ಪ್ಲಾಸ್ಟಿಕ್ ಕಪ್‌ಗಳನ್ನೂ ತೆಗೆದುಕೊಂಡು ತಯಾರಾಗುತ್ತಾನೆ. ಆಟ ನಡೆಯುವ ಹೆಚ್ಚಿನ ಪ್ರದೇಶಗಳು, ಹಳ್ಳಿಗಳು ನಮಗೆ ಅಪರಿಚಿತ. ಮತ್ತೆ ದಾರಿಯುದ್ದಕ್ಕೂ ಅಲ್ಲಲ್ಲಿ ಕಾರು ನಿಲ್ಲಿಸಿ ಕೇಳುತ್ತ ಆಟದ ಸ್ಥಳವನ್ನು ತಲುಪಬೇಕಾದುದು ಅನಿವಾರ್ಯ. ಕೆಲವು ಪ್ರದರ್ಶನಗಳನ್ನು ತಲುಪಲು ಜನರೇ ಇಲ್ಲದ ಕಿಲೋಮೀಟರ್‌ಗಟ್ಟಲೆ ನಿಬಿಡ ಕಾಡನ್ನು ಹಾದು ಹೋಗುವ ನಿರ್ಜನ ಪ್ರದೇಶವನ್ನು ಸೀಳಿ ಸಾಗುವ ರಸ್ತೆಗಳಲ್ಲಿ ಹೋಗಬೇಕಾಗುತ್ತದೆ. ಯಾವ ತಿರುವಿನಲ್ಲಿ ಟಾರು ರಸ್ತೆಯಿಂದ ಕೆಳಗಿಳಿಯಬೇಕು ಯಾವ ಮುರುವಿನಲ್ಲಿ ಜಾಗ್ರತೆಯಲ್ಲಿ ಚಲಾಯಿಸಬೇಕು ಎನ್ನುವ ಪೂರ್ವಾಪರ ಮಾಹಿತಿ ಇಲ್ಲದೆ ಮುಂದೆ ಸಾಗಬೇಕಾಗುತ್ತದೆ.

ದಟ್ಟ ಕಾನನದಂತಹ ‘ಹಾಡಿ ಹಕ್ಲು’ಗಳನ್ನು ಗಮಿಸುವ ರಸ್ತೆಗಳಲ್ಲಿ ಕೆಲವೊಮ್ಮೆ ಮಂಜಿನ ಮುಸುಕು ಎದುರಾಗಿ ಮೆಲ್ಲಗೆ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ನಮ್ಮ ಸುತ್ತಲ ಜಗದ ನದಿ ಕಾಡು ಬೆಟ್ಟಗಳು ನಿದ್ದೆಯ ಜೊಂಪಿನಲ್ಲಿರುವಾಗ ಎಲ್ಲವನ್ನೂ ಎಲ್ಲರನ್ನೂ ಏಳಿಸುತ್ತ ಆಟದ ರೋಚಕ ರಾತ್ರಿಯ ಕನವರಿಕೆಯಲ್ಲಿ ನಾವು ಮುನ್ನುಗ್ಗುತ್ತೇವೆ. ಕೊಲ್ಲೂರು ಕಡೆ ಹೋಗುವ ನಿರ್ಜನ ರಸ್ತೆಯಲ್ಲಿ ಮೊನ್ನೆ ಯಾರನ್ನೋ ಅಡ್ಡ ಹಾಕಿದರಂತರೆ, ಕಾಲ್ತೋಡು ಒಳರಸ್ತೆಯಲ್ಲಿ ರಾತ್ರಿ ಹತ್ತರ ಮೇಲೆ ‘ಹೋಪುದಲ್ಲ’, ಇನ್ನು ಕೆಲವು ದುರ್ಗಮ ಮಾರ್ಗಗಳಲ್ಲಿ ಭೂತ ಪ್ರೇತಗಳೂ ಮನುಷ್ಯಾಕೃತಿಯಲ್ಲಿ ಎದುರು ಬಂದು ‘ಲಿಫ್ಟ್’ ಕೇಳಿದ್ದಿದೆ, ತಾನು ಹತ್ತಿಸಿಕೊಂಡಿದ್ದು ಭೂತ ಎಂದು ತಿಳಿದ ಚಾಲಕ ತನ್ನ ಕಾರ ಬಾಗಿಲು ತೆರೆದು ಹೊರಹಾರಿ ಬಚಾವ್ ಆದ ಕತೆಯೂ ಇದೆ ಅಂತೆಲ್ಲ ಊರಿನ ಹಸಿ ಬಿಸಿ ಸುದ್ದಿಗಳನ್ನು ನನಗೆ ಹಂಚುತ್ತಾ ಗೆಳೆಯ ಕಾರು ಚಲಾಯಿಸುತ್ತಾನೆ. ಅಕಸ್ಮಾತ್ತಾಗಿ ಎದುರಾಗುವ ಅಥವಾ ಹಿಂದಿನಿಂದ ಬರುವ ಇನ್ನೊಂದು ಬೈಕನ್ನು ಕೈಸನ್ನೆ ಮಾಡಿ ನಿಲ್ಲಿಸಿ ಸರಿದಾರಿಯಲ್ಲಿ ಸಾಗುತ್ತಿದ್ದೇವೆಯೇ ಎಂದು ಖಚಿತಪಡಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಮನೆಯಿಂದ ಹೊರಡುವಾಗ ಮನಸ್ಸಲ್ಲಿ ಮುದ್ರಣಗೊಂಡಿದೆಯೆಂದು ತಿಳಿದ ಆಟದ ಸ್ಥಳದ ಹೆಸರು ಅರ್ಧ ದಾರಿಯಲ್ಲಿ ಬರುವಾಗ ಮರೆತು ಹೋದದ್ದೂ ಇದೆ. ಎಂದೂ ಕೇಳದ ಕಾಣದ ಊರ ಹೆಸರುಗಳ ಆಟದ ಜಾಡು ಹಿಡಿದು ತುಸು ದೂರ ಸಾಗುವಾಗ ಇನ್ಯಾವುದೋ ಊರಿನ ಹೆಸರಾಗಿ ನಾಲಿಗೆಯಲ್ಲಿ ಬಂದು ಮಾರ್ಗ ಮಧ್ಯದಲ್ಲಿ ದಿಕ್ಕು ತೋರಿಸಲು ಸಹಾಯ ಮಾಡುವ ಅಪರಿಚಿತರನ್ನೂ ಗೊಂದಲಕ್ಕೆ ಸಿಕ್ಕಿಸುವುದಿದೆ. ನಾವು ಮತ್ತು ಆಟಕ್ಕೆ ಹೊರಟ ನಮಗೆ ಮಾರ್ಗ ನಿರ್ದೇಶನ ಮಾಡುವ ಗುರುತರ ಹೊಣೆ ಹೊತ್ತವರು ಸೇರಿ ಸಾಮೂಹಿಕ ಅಂದಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಜಂಟಿ ತೀರ್ಮಾನ ಕೈಗೊಳ್ಳುವುದಿದೆ. ಇನ್ನೇನು ಆಟದ ಸ್ಥಳ ಹತ್ತಿರವಾಗುವಾಗ ಭಾಗವತರ ಏರುಕಂಠದ ಗಾಯನ, ಚಂಡೆಯ ಬೀಡ್ತೀಗೆ ಮದ್ದಳೆಯ ನಾದಮಿಡಿತ, ರಂಗಸ್ಥಳದ ಸುತ್ತಮುತ್ತಲಿನ ಬೆಳಕು, ಜನರೇಟರ್ ಗುಡುಗುಡು ಎಲ್ಲವೂ ಅನುಭವಕ್ಕೆ ಬರುತ್ತಿದ್ದರೂ ಯಾವ ಮಾರ್ಗ ಯಾವ ಓಣಿ ಯಾವ ಗದ್ದೆಯಂಚಿನ ನಡಿಗೆ ಆಟದ ಮನೆಯನ್ನು ಮುಟ್ಟಿಸೀತು ಎಂಬುದು ತಿಳಿಯದೇ ತಬ್ಬಿಬ್ಬು ಮಾಡುವುದಿದೆ. ಆಟ ನೋಡಲು ಹೊರಟಮೇಲೆ ದಾರಿ ಸಿಗುವುದು ತುಸು ಕಷ್ಟ ಅನಿಸಿದರೂ, ಲಕ್ಷ್ಯವನ್ನು ಮುಟ್ಟುವುದು ವಿಳಂಬ ಆಗುವುದೆಂದರೂ ಅರ್ಧದಲ್ಲಿ ಗಾಡಿ ತಿರುಗಿಸಿ ಮರಳುವ ಪ್ರಶ್ನೆಯೇ ಇಲ್ಲದ ಬದ್ಧ ಪ್ರೇಕ್ಷಕರು ನಾವು.

ಈ ಮಧ್ಯೆ... ಇದೀಗ ಆಟವೊಂದರ ಗುರಿ ಹಿಡಿದು ಕೋಟದ ರಾಷ್ಟ್ರೀಯ ಹೆದ್ದಾರಿಯಿಂದ ಒಳಗೆ ಅಡ್ಡದಾರಿ ಕಿರುದಾರಿಗಳನ್ನು ಕ್ರಮಿಸುತ್ತ ಸಾಯ್ಬ್ರಕಟ್ಟೆ ಕ್ರಾಸ್ ದಾಟಿ, ಶಿರೂರು ಮೂರ್ ಕೈ ಹಾದು ಅರ್ಧ ಫರ್ಲಾಂಗ್ ಅಲ್ಲಿ ಸಿಕ್ಕಿದ ಸೇತುವೆಯ ನಂತರ ಬಲಕ್ಕೆ ತಿರುಗಿ, ಮುದ್ದುಮನೆಯ ದಾರಿಯಲ್ಲಿ ಸಾಗಿದ್ದೇವೆ. ಹತ್ತಿರ ಹತ್ತಿರ ಹೋದಂತೆ ರಂಗಸ್ಥಳವೇ ನಮ್ಮ ಕಡೆ ಚಲಿಸಿ ಬರುವ ಅನುಭವ. ಕಾರು ನಿಲ್ಲಿಸಿ ನಡೆಯುವ ಪ್ರತಿ ಹೆಜ್ಜೆಯೂ ನಮ್ಮನ್ನು ದಟ್ಟ ಇರುಳಿನ ನಡುವಿನ ಮಾಯಾಲೋಕಕ್ಕೆ ಮತ್ತಷ್ಟು ಸೆಳೆದುಕೊಳ್ಳುತ್ತಿದೆ. ಚೌಕಿಯನ್ನು ಆವರಿಸಿರುವ ಬಣ್ಣದ ಪರದೆಯ ಒಳಗಡೆ ಕಾಣಿಸುವ ವೇಷಧಾರಿಗಳ ಆಕೃತಿಗಳ ನೆರಳುಗಳ ಓಡಾಟದ ಜೊತೆಗೆ ಆ ಆಕೃತಿಗಳ ಪ್ರತಿ ಹೆಜ್ಜೆಯ ಜೊತೆಗೂ ಕೇಳಿಸುವ ಗೆಜ್ಜೆಯ ಝಲ್ ಝಲ್. ರಂಗಸ್ಥಳದ ಮೇಲಿನ ಕಪ್ಪು ಬಾನಿನಲ್ಲಿ ಹಳದಿ ಚಂದ್ರಮನ ಬೆಳಕಿನ ನಗೆಯಲ್ಲಿ ಮೀಯುತ್ತ ತೋಯುತ್ತ ನಾವೀಗ ರಂಗಸ್ಥಳದ ಮುಂಭಾಗದಲ್ಲಿ. ಇನ್ನೀಗ ಆಟ ಶುರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.