ಕೇದಾರನಾಥ ಎಂದರೆ ನೆನಪಾಗುವುದು 2013ರ ಮಹಾ ಜಲಪ್ರಳಯ. ಉತ್ತರಾಖಂಡ ರಾಜ್ಯವನ್ನು ಅಸ್ತವ್ಯಸ್ತಗೊಳಿಸಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ಮಹಾದುರಂತ ಇನ್ನೂ ಜನಮನದಿಂದ ಮಾಸಿಲ್ಲ. ಕೇದಾರನಾಥದಲ್ಲಂತೂ ದೇಗುಲದ ಹಿಂದಿನ ಬೆಟ್ಟಗಳಿಂದ ಇಳಿದ ಪ್ರವಾಹ ಸಂಪೂರ್ಣವಾಗಿ ಗ್ರಾಮವನ್ನೇ ನಾಶ ಮಾಡಿತ್ತು. ದೊಡ್ಡ ಬಂಡೆಯೊಂದು ದೇಗುಲದ ಹಿಂದೆಯೇ ನಿಂತಿದ್ದರಿಂದ ಕೇದಾರನಾಥನ ದೇಗುಲ ಪವಾಡಸದೃಶವಾಗಿ ಉಳಿದಿತ್ತು.

ಈ ದುರ್ಘಟನೆಯಿಂದ ಚೇತರಿಸಿಕೊಳ್ಳಲು ಕೇದಾರನಾಥವೆಂಬ ಪುಟ್ಟ ಹಳ್ಳಿಗೆ ತುಂಬ ಸಮಯ ಬೇಕಾಯಿತು. ಆದರೆ ಚೇತರಿಸಿಕೊಂಡು, ಹೊಸತನ್ನು ಅಳವಡಿಸಿಕೊಂಡು ಮುಂದುವರಿಯುತ್ತಿರುವ ರೀತಿ ಅನುಕರಣೀಯ. ದುರಂತದಲ್ಲಿ ಹಳ್ಳಿಗಳ ಸಮೇತ ಕೊಚ್ಚಿಹೋಗಿರುವ ಕೇದಾರದ ದಾರಿಯ ಪುನರ್ ನಿರ್ಮಾಣದ ಗುರುತರ ಜವಾಬ್ದಾರಿಯು ಭಾರತೀಯ ಸೇನೆ ಹಾಗೂ ನೆಹರೂ ಪರ್ವತಾರೋಹಣ ಸಂಸ್ಥೆಯ ಹೆಗಲಿಗೇರಿತ್ತು. ಅವರ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಕೇದಾರನಾಥ ಯಾತ್ರೆ ಈಗ ಮೊದಲಿಗಿಂತ ಸ್ವಚ್ಛ, ಸುಂದರ ಹಾಗೂ ಸುರಕ್ಷಿತವಾಗಿ ಮಾರ್ಪಟ್ಟಿದೆ.

ಕೇದಾರ ಯಾತ್ರೆಯ ಪ್ರಾರಂಭದಲ್ಲೇ ಯಾತ್ರಿಕರನ್ನು ಗುರುತಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಇದು ‘ಚಾರ್ ಧಾಮ್’ ಯಾತ್ರೆಗೂ ಅನ್ವಯಿಸುತ್ತದೆ. ಋಷಿಕೇಶ, ಗುಪ್ತಕಾಶಿ, ಫಟಾ, ಸೋನಪ್ರಯಾಗ ಮತ್ತು ಕೇದಾರನಾಥದಲ್ಲಿ ಸ್ಥಾಪಿಸಿರುವ ಬಯೊಮೆಟ್ರಿಕ್ ನೋಂದಣಿ ಕೇಂದ್ರಗಳಲ್ಲಿ ಯಾವುದಾದರೊಂದು ಕೇಂದ್ರಕ್ಕೆ ನೀವು ಭೇಟಿ ನೀಡಿ ಅಧಿಕೃತ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ ನೀಡಿ, ಫೋಟೊ ತೆಗೆಸಿಕೊಳ್ಳಬೇಕು. ಇಲ್ಲಿ ನಿಮ್ಮ ಯಾತ್ರೆಗೆ ಅನುಗುಣವಾಗಿ ಯಾತ್ರಾ ಕಾರ್ಡ್ ನೀಡಲಾಗುತ್ತದೆ. ಆಗ ನೀವು ಅಧಿಕೃತವಾಗಿ ಕೇದಾರನಾಥದ ಯಾತ್ರಿ.

ಇನ್ನು ಯಾತ್ರೆಯಲ್ಲಿದ್ದಷ್ಟು ದಿನವೂ ಮುಂಜಾನೆ ನಿಮ್ಮ ಮೊಬೈಲ್‌ಗೆ ಉತ್ತರಾಖಂಡ ಪೊಲೀಸರಿಂದ ಶುಭಹಾರೈಕೆಯ ಜೊತೆ ಆ ಭಾಗದ ರಸ್ತೆಯ ಸ್ಥಿತಿಗತಿ ಬಗ್ಗೆ ವಿವರಗಳು, ಯಾವ ಭಾಗದಲ್ಲಿ ರಸ್ತೆ ಕುಸಿದಿದೆ ಮತ್ತು ರಸ್ತೆ ದುರಸ್ತಿಯಾದೊಡನೆ ಆ ಕುರಿತ ಸಂದೇಶಗಳು ಬರುತ್ತಲೇ ಇರುತ್ತವೆ. ಜೊತೆಗೆ ಯಾತ್ರಾ ಸಂಬಂಧಿ ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಮ್ಮ ಫೋನಿಗೆ ಇಳಿಸಿಕೊಂಡರೆ ಆಪತ್ಕಾಲಕ್ಕೆ ಸಹಾಯಕ್ಕೂ ಬರುತ್ತದೆ.

ಕೇದಾರನಾಥ ಯಾತ್ರೆ ಪ್ರಾರಂಭಿಸುವ ಹಳ್ಳಿಯಾದ ಗೌರೀಕುಂಡ ಜಲಪ್ರಳಯದಿಂದ ಸಂಪೂರ್ಣ ನಾಶವಾಗಿತ್ತು. ಆದ್ದರಿಂದ ಯಾತ್ರೆಯನ್ನು ಮೊದಮೊದಲು ಸೀತಾಪುರವೆಂಬ ಹಳ್ಳಿಯಿಂದ; ಸ್ವಲ್ಪ ಸಮಯದ ನಂತರ ಅದಕ್ಕೂ ಕೊಂಚ ಮುಂದಿರುವ ಸೋನಪ್ರಯಾಗದಿಂದ ಪ್ರಾರಂಭಿಸಬೇಕಿತ್ತು. ಈಗ ಗೌರೀಕುಂಡ ಹಳ್ಳಿ ಪುನರ್ ನಿರ್ಮಾಣಗೊಂಡಿದೆ.

ಮೊದಲು ಇದ್ದ ಬಿಸಿನೀರಿನ ಕೊಳದ ಬದಲು ಈಗ ಕೊಳಾಯಿಯಿಂದ ಬಿಸಿನೀರು ಬರುತ್ತದೆ. ಯಾತ್ರೆಯ ಪ್ರಾರಂಭದ ಊರುಗಳಲ್ಲಿ ಸಾಮಾನ್ಯವಾಗಿ ದೊರಕುವ ಆಹಾರ, ವಸತಿ ಹಾಗೂ ಯಾತ್ರೆಗೆ ಅಗತ್ಯವಿರುವ ಎಲ್ಲ ವಸ್ತುಗಳು ಇಲ್ಲಿ ದೊರೆಯುತ್ತವೆ. ಯಾತ್ರೆಗಾಗಿ ಕುದುರೆಗಳನ್ನೂ ಇಲ್ಲಿಂದಲೇ ನಿಗದಿಪಡಿಸಬಹುದು. ಆದರೆ, ಭಾರೀ ವಾಹನಗಳು ಮತ್ತು ಖಾಸಗಿ ವಾಹನಗಳು ಇಲ್ಲಿಯವರೆಗೆ ಬರುವುದಿಲ್ಲ.

ಲಾಡ್ಜ್‌ಗಳು, ಯಾತ್ರಿನಿವಾಸಗಳು, ಹೋಟೆಲ್‌ಗಳು ಹೇರಳವಾಗಿರುವ ಸೀತಾಪುರ ಅಥವಾ ಸೋನಪ್ರಯಾಗದಲ್ಲೇ ನಿಲ್ಲಿಸಬೇಕಾಗುತ್ತದೆ. ಸೋನಪ್ರಯಾಗ ದಿಂದ ಗೌರೀಕುಂಡಕ್ಕೆ ತಲಾ ಇಪ್ಪತ್ತು ರೂಪಾಯಿ ತೆತ್ತು ಸರ್ವೀಸ್ ಜೀಪುಗಳಲ್ಲಿ ಪ್ರಯಾಣಿಸಬೇಕಾಗುತ್ತದೆ.

ಗೌರೀಕುಂಡದಿಂದ ಕೇದಾರನಾಥಕ್ಕೆ 16 ಕಿ.ಮೀ. ದೂರದ ದಾರಿ. ಬೆಳಿಗ್ಗೆ 6 ಗಂಟೆಗೆ ನಡೆಯಲು ಆರಂಭಿಸಿದರೆ ಸಂಜೆಯೊಳಗೆ ಆರಾಮವಾಗಿ ಕೇದಾರನಾಥ ತಲುಪಬಹುದು. ನಡೆಯಲಾಗದವರು ಕುದುರೆ ಹತ್ತಬಹುದು. ಕೇದಾರನಾಥದ ದಾರಿಯುದ್ದಕ್ಕೂ ಬದಲಾವಣೆಗಳು ಎದ್ದುಕಾಣುತ್ತವೆ. ಹತ್ತಿಪ್ಪತ್ತು ವರ್ಷದ ಮೊದಲು ಹೋದವರಿಗಂತೂ, ಅಚ್ಚರಿಯೇ ಆಗಬಹುದು. ಹಾದಿಯ ಬಹುಭಾಗ ಕಾಂಕ್ರಿಟ್‌ಕರಣಗೊಂಡಿದೆ. ಕೆಲವೆಡೆ ಮಾತ್ರ ಕಲ್ಲುಗಳನ್ನು ಹಾಸಿ ನಡುವೆ ಕಾಂಕ್ರಿಟ್ ತುಂಬಲಾಗಿದೆ. ದಾರಿ ಅಗಲವೂ ಆಗಿದ್ದು ‘ಕುದುರೆಗಳು ಬಂದರೆ ಏನು ಮಾಡುವುದು?’ ಎನ್ನುವ ಭೀತಿ ಬಹುತೇಕ ಕಡಿಮೆಯಾಗಿದೆ. ಆದರೆ, ನಾಲ್ಕೈದು ಕುದುರೆಗಳನ್ನು ಒಬ್ಬರೇ ಆಳು ನಿಭಾಯಿಸುವುದರಿಂದ ಚಾರಣಿಗರು ತಮ್ಮನ್ನು ತಾವು ಸಂಭಾಳಿಸಿಕೊಳ್ಳುವುದು ಅತಿಮುಖ್ಯ.

ಕುದುರೆಯ ಹಿಂದೆಯೇ ಬರುವುದು ಅದರ ಲದ್ದಿ! ಕಾಲ್ನಡಿಗೆಯವರಿಗೆ ಇದೊಂದು ಅನಿವಾರ್ಯ ಸಂಕಟ. ಇದೇ ಲದ್ದಿಯ ಮೇಲೆ ಇನ್ನಷ್ಟು ಕುದುರೆಗಳು, ಕಾಲ ಹೆಜ್ಜೆಗಳು ನಡೆದು ಹೋಗುವುದರಿಂದ, ಜೊತೆಗೆ ಹಾದಿಬದಿಯ ಸಣ್ಣಪುಟ್ಟ ತೊರೆಗಳ ನೀರು ಇದಕ್ಕೆ ಸೇರುವುದರಿಂದ ಅಸಹನೀಯ ಪರಿಸ್ಥಿತಿ ಉಂಟಾಗುತ್ತದೆ. ಮಳೆಗಾಲದಲ್ಲಂತೂ ಲದ್ದಿ, ಕಸ, ಕೆಸರು ಒಟ್ಟಿಗೆ ಸೇರಿ ದಾರಿಯಿಡೀ ಗ್ರೀಸ್ ಹಾಕಿದಂತಾಗಿ ಕಾಲಿಟ್ಟಲ್ಲೆಲ್ಲ ಜಾರುವ ಭೀತಿ. ಅದಕ್ಕೆ ಜೊತೆ ನೀಡಲು ನೆಲಕ್ಕೆ ಹಾಸಿದ ನಯವಾದ ಕಲ್ಲುಗಳು. ಕಾಲುಜಾರಿ ಕೊರಕಲಿಗೆ ಬಿದ್ದವರು ಎಲ್ಲಿಂದ ಏಳುತ್ತಾರೋ ಶಿವನೇ ಬಲ್ಲ. ಈಗ ಇದಕ್ಕೂ ಪರಿಹಾರ ದೊರಕಿದೆ.

ಒಂದು ಕಿಲೋಮೀಟರ್‌ಗೊಬ್ಬರಂತೆ ಸಮವಸ್ತ್ರಧಾರಿ ಸ್ವಚ್ಛತಾಕರ್ಮಿಯೊಬ್ಬರು ಕುದುರೆ ಲದ್ದಿಯನ್ನು, ಇತರೆ ಕಸವನ್ನು ಗುಡಿಸಿ ಕಾಂಕ್ರಿಟ್ ಹಾದಿಯಿಂದ ಬದಿಗೆ ಸರಿಸುತ್ತಾರೆ. ಇದರಿಂದ ದಾರಿ ಸ್ವಚ್ಛವಾಗಿರುವುದಲ್ಲದೆ ತರಗೆಲೆ, ನೀರು, ಕೆಸರು, ಲದ್ದಿಗಳು ಸೇರಿ ನೊಣಗಳು, ಕ್ರಿಮಿಗಳು ಉತ್ಪಾದನೆಯಾಗುವುದು, ದುರ್ವಾಸನೆ ಬೀರುವುದು ತಪ್ಪುತ್ತಿದೆ. ಹಾದಿಬದಿಯಲ್ಲಿ ಅಂತಹ ಸಾಧ್ಯತೆ ಇದ್ದಲ್ಲೆಲ್ಲ ಕ್ರಿಮಿನಾಶಕದ ಹುಡಿಯನ್ನು ದಾರಿಯ ಇಕ್ಕೆಲಗಳಲ್ಲೂ ಹಾಕಲಾಗುತ್ತದೆ. ಒಟ್ಟಿನಲ್ಲಿ ದಾರಿಯ ಸ್ವಚ್ಛತೆ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಸುರಕ್ಷತೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಇನ್ನಷ್ಟು ಕ್ರಮಗಳು ದಾರಿಯಲ್ಲಿ ಸಾಗುವಾಗ ಕಣ್ಣಿಗೆ ಗೋಚರಿಸುತ್ತವೆ. ಬೆಟ್ಟದ ದಾರಿ ಕಡಿದಾಗಿ, ಬದಿಯಲ್ಲಿನ ಕಣಿವೆ ಆಳವಾಗಿದ್ದು ಅಪಾಯಕಾರಿ ಪರಿಸ್ಥಿತಿಯಿರುವಲ್ಲಿ ದಾರಿಯ ಬದಿಯಲ್ಲಿ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಜಲಪಾತಗಳು, ತೊರೆಗಳ ನೀರು ದಾರಿಯನ್ನು ಅಡ್ಡ ಹಾಯುವ ಕಡೆಯಲ್ಲಿ ವ್ಯವಸ್ಥಿತವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ಇದರಿಂದ ರಸ್ತೆಯುದ್ದಕ್ಕೂ ನೀರು ಹರಿದು ಕೆಸರಾಗುವುದು ತಪ್ಪಿ, ರಸ್ತೆ ಸ್ವಚ್ಛವಾಗಿರುತ್ತದೆ. ತುಂಬ ಅಪಾಯಕಾರಿ ಎನಿಸಿದಲ್ಲೆಲ್ಲ ಎರಡೆರಡು ರಸ್ತೆಗಳನ್ನು ನಿರ್ಮಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ ಯಾತ್ರಿಕರು ಜಾಸ್ತಿಯಿರುವ ಸಮಯದಲ್ಲಿ ಮೇಲಕ್ಕೇರುವ ಹಾಗೂ ಕೆಳಕ್ಕಿಳಿಯುವ ಚಾರಣಿಗರು, ಕುದುರೆಯವರು ಇಕ್ಕಟ್ಟಾದ ಜಾಗಗಳಲ್ಲಿ ಮುಖಾಮುಖಿಯಾಗಿ ಅವಘಡಗಳು ಸಂಭವಿಸುವುದು ತಪ್ಪುತ್ತದೆ.

ಹಿಮಾಲಯದಲ್ಲಿ ಯಾವಾಗ ಬೇಕಾದರೂ ಮಳೆ ಸುರಿಯಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ದಾರಿಯುದ್ದಕ್ಕೂ ಅಲ್ಲಲ್ಲಿ ತಗಡಿನ ಚಾವಣಿಯ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಕೆಳಗೆ ಬೆಂಚ್‌ಗಳನ್ನು ಇರಿಸಿ ಆಶ್ರಯ ತಾಣಗಳನ್ನು ಕಲ್ಪಿಸಲಾಗಿದೆ.

-ಕೇದಾರನಾಥದಲ್ಲಿನ ಜಲಪಾತ

ಮಳೆ ಜಾಸ್ತಿ ಎನಿಸಿದರೆ ಇಂತಹ ತಾಣಗಳಲ್ಲಿ ಎಲ್ಲಾದರೂ ನಿಲ್ಲಬಹುದು. ಮಳೆಯ ರಭಸ ಕಡಿಮೆಯಾದ ಬಳಿಕ ಹೊರಡಬಹುದು. ಮಳೆ ಅಥವಾ ಆಯಾಸದಿಂದಾಗಿ ನಡಿಗೆ ತಡವಾಯಿತೆಂದು ಆತಂಕಪಡಬೇಕಾಗಿಲ್ಲ. ದಾರಿಯುದ್ದಕ್ಕೂ ಬೀದಿದೀಪ ಅಳವಡಿಸಲಾಗಿದೆ. ರಾತ್ರಿಯಾದರೂ ನಿರಾತಂಕವಾಗಿ ನಡೆಯಬಹುದು.

ಕೇದಾರದ ದಾರಿಯಲ್ಲಿ ಜಂಗಲ್ ಚಟ್ಟಿ, ಭೀಮ್‌ಬಲೀ, ಛೋಟಾ ಲಿನಛೋಲಿ, ಬಡಾ ಲಿನ್‌ಛೋಲಿ, ಕಾಂಚೀ ಭೈರವ ಗ್ಲೇಸಿಯರ್, ಕೇದಾರನಾಥ ಬೇಸ್‌ಕ್ಯಾಂಪ್ ಮುಂತಾದ ಪ್ರಮುಖ ಹಳ್ಳಿಗಳಲ್ಲಿ ಲಾಡ್ಜ್‌ಗಳು, ಚಹದಂಗಡಿಗಳು ಸಾಕಷ್ಟಿವೆ. ಜೊತೆಗೆ ಸರ್ಕಾರಿ ವೈದ್ಯಕೀಯ ಸೇವಾ ಕೇಂದ್ರಗಳಿವೆ. ಆರೋಗ್ಯದಲ್ಲಿ ಏರುಪೇರು, ನಡಿಗೆಯಲ್ಲಿ ತೊಂದರೆಯಾದರೆ ಯಾತ್ರಿಗಳು ಇಲ್ಲಿಗೆ ಭೇಟಿ ನೀಡಿ ಉಚಿತವಾಗಿ ಸಲಹೆ, ಔಷಧಿ ಪಡೆದುಕೊಳ್ಳಬಹುದು. ಕೆಲವು ಕೇಂದ್ರಗಳಲ್ಲಿ ತುರ್ತು ಅಗತ್ಯಕ್ಕಾಗಿ ಆಮ್ಲಜನಕದ ಪೂರೈಕೆ ಹಾಗೂ ಬೆಡ್ ವ್ಯವಸ್ಥೆಯೂ ಉಂಟು. ಕೆಲವು ಹಳ್ಳಿಗಳಲ್ಲಿ ಉಚಿತ ವೈ-ಫೈ ವ್ಯವಸ್ಥೆ ಇದೆ. ಪರ್ವತಗಳಿಂದ ಇಳಿದು ಬರುವ ಝರಿಗಳ ನೀರನ್ನು ಪೈಪ್‌ಗಳ ಮೂಲಕ ಹಾಯಿಸಿ, ದಾರಿಬದಿಯಲ್ಲಿ ಅವಕ್ಕೆ ನಲ್ಲಿ ಅಳವಡಿಸಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗಿಡಮರಗಳ ಸಂದುಗಳಿಂದ ಇಳಿದು ಹರಿದು ಬರುವ ಈ ನೀರು ಬಾಟಲ್ ನೀರನ್ನು ನಾಚಿಸುವಷ್ಟು ಶುದ್ಧ ಹಾಗೂ ರುಚಿಕರವಾಗಿದೆ.

ಸ್ವಚ್ಛತೆ ದೃಷ್ಟಿಯಿಂದ ಕೇದಾರನಾಥದ ದಾರಿಯಲ್ಲಿ ಕೈಗೊಂಡಿರುವ ಇನ್ನೊಂದು ಬಹುಮುಖ್ಯ ವ್ಯವಸ್ಥೆಯೆಂದರೆ ಶೌಚಾಲಯಗಳು. ದಾರಿಯುದ್ದಕ್ಕೂ ಅಲ್ಲಲ್ಲಿ ವ್ಯವಸ್ಥಿತವಾದ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಬಯೊಟಾಯ್ಲೆಟ್‌ಗಳು, ಫೈಬರ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನು ಕೆಲವೆಡೆ ಶೌಚಾಲಯದ ಪ್ಲಾಟ್‌ಫಾರ್ಮ್ ಮೇಲೆ ಆಧುನಿಕ ಟೆಂಟ್ ಮೆಟೀರಿಯಲ್‌ನ ಗೂಡು; ಬಾಗಿಲ ಬದಲಿಗೊಂದು ಆಳೆತ್ತರದ ಜಿಪ್! ಎಲ್ಲ ಶೌಚಾಲಯಗಳ ಬಳಿಯಲ್ಲೂ ಝರಿಯ ನೀರನ್ನು ಟಾಂಕ್‌ಗಳಿಗೋ, ನಲ್ಲಿಗಳಿಗೋ ಹಾಯಿಸುವ ವ್ಯವಸ್ಥೆ. ನೀವು ನಂಬುತ್ತೀರೋ ಇಲ್ಲವೋ. ನೀವು ಶೌಚಾಲಯ ಬಳಸಿ ಹೋದ ಬಳಿಕ ಸಮವಸ್ತ್ರದ ಸಿಬ್ಬಂದಿಯೊಬ್ಬರು ಮತ್ತೊಮ್ಮೆ ಸ್ವಚ್ಛಗೊಳಿಸಿ ಬರುತ್ತಾರೆ!

ಕೇದಾರನಾಥ ಹತ್ತಿರವಾಗುತ್ತಿದ್ದಂತೆ ಧ್ವನಿವರ್ಧಕದಲ್ಲಿ ದೇವಸ್ಥಾನದ ಮಂತ್ರೋಚ್ಛಾರ, ಕೀರ್ತನೆಗಳು ಕೇಳಲಾರಂಭಿಸಿ ಇನ್ನೇನು ತಲುಪಿಯೇ ಬಿಟ್ಟೆವು ಎನಿಸುತ್ತದೆ. ನಂತರ ಸಿಗುವುದೇ ಕೇದಾರನಾಥದ ಬೇಸ್‌ಕ್ಯಾಂಪ್. ಜಲಪ್ರಳಯದ ಬಳಿಕ ಮೊದಲು ಪುನರ್‌ನಿರ್ಮಾಣಗೊಂಡಿರುವ ಸ್ಥಳ ಇದಾಗಿದೆ. ಮೊದಲು ಇಲ್ಲಿನ ಟೆಂಟ್‌ಗಳಲ್ಲಿ ಯಾತ್ರಿಗಳು ವಾಸ್ತವ್ಯ ಹೂಡಬೇಕಾಗಿತ್ತು. ಈಗ ದೇವಾಲಯದ ಸುತ್ತಮುತ್ತಲಿನಲ್ಲಿ ಸಾಕಷ್ಟು ವಸತಿ ವ್ಯವಸ್ಥೆಯಿದೆ.

ಕೇದಾರನಾಥ ತಲುಪುತ್ತಿದ್ದಂತೆ ಗಢವಾಲ್ ಮಂಡಲ ವಿಕಾಸ್ ನಿಗಮದ ಸುಸಜ್ಜಿತ ಟೆಂಟ್ ಹಾಗೂ ವಸತಿ ಗೃಹಗಳು, ಪಕ್ಕದಲ್ಲೇ ವಿಶಾಲವಾದ ಕಾಂಕ್ರಿಟ್ ಹೆಲಿಪ್ಯಾಡ್ ಗಮನ ಸೆಳೆಯುತ್ತವೆ. ಹೌದು. ಇಲ್ಲಿ ಹೆಲಿಕಾಪ್ಟರ್‌ಗಳು ಊರಿನ ಟ್ಯಾಕ್ಸಿಗಳಿಗೆ ಕಡಿಮೆಯಿಲ್ಲದಂತೆ, ಬೆಳಿಗ್ಗೆಯಿಂದ ಸಂಜೆವರೆಗೆ ನೂರಾರು ಬಾರಿ ಸಂಚರಿಸುತ್ತವೆ. ನಡೆಯಲು ಅಶಕ್ತರು, ಸಮಯವಿಲ್ಲದವರು, ಆಕಾಶಮಾರ್ಗದ ಅನುಭವ ಪಡೆಯಲು ಹಾತೊರೆಯುವವರು ಇದರ ಪ್ರಯೋಜನ ಪಡೆಯುತ್ತಾರೆ. ಸೀತಾಪುರದ ಆಸುಪಾಸಿನ ಹೆಲಿಪ್ಯಾಡ್‌ಗಳಿಂದ ಯಾತ್ರಿಕರನ್ನು ಕರೆದೊಯ್ಯಲಾಗುತ್ತದೆ.

ಎರಡೂ ದಿಕ್ಕಿನ (ಹೋಗುವ-ಬರುವ) ಪ್ರಯಾಣಕ್ಕೆ ಸುಮಾರು ₹ 6 ಸಾವಿರದಿಂದ ₹ 7 ಸಾವಿರ ದರವಿದೆ. ಸೀಸನ್‌ಗೆ ಅನುಗುಣವಾಗಿ ದರಪಟ್ಟಿಯಲ್ಲಿ ಹೆಚ್ಚು ಕಡಿಮೆಯಾಗಲೂಬಹುದು. ಕೆಲವರು ಬೆಳಿಗ್ಗೆ ಕೇದಾರಕ್ಕೆ ಹೋಗುವ ಪ್ರಯಾಣಕ್ಕೆ ಮಾತ್ರ ಹೆಲಿಕಾಪ್ಟರ್ ಅವಲಂಬಿಸಿ ಹಿಂದಿರುಗುವಾಗ ಇಳಿಜಾರಿನಲ್ಲಿ ನಡೆಯುತ್ತಾ ದಾರಿಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಕೇದಾರನಾಥನ ಮಂದಿರದವರೆಗೂ ಸುಸಜ್ಜಿತವಾದ ಕೆಂಪು ಇಂಟರ್‌ಲಾಕ್ ಹಾಸಿದ ದಾರಿ ರತ್ನಗಂಬಳಿಯಂತೆ ಯಾತ್ರಿಕರನ್ನು ಸ್ವಾಗತಿಸುತ್ತದೆ.

ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಈ ಹಳ್ಳಿಯಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳು ಈಗಲೂ ಥಟ್ಟನೆ ಹಳೆಯ ನೆನಪನ್ನು ಕೆದಕಿ ಬೆಚ್ಚಿಬೀಳಿಸುತ್ತವೆ. ದೇವಸ್ಥಾನದ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ವಿಷಾದವೆಂದರೆ ಜಿ.ಎಂ.ವಿ.ಎನ್.ನ ನಿರ್ಮಾಣ ಬಿಟ್ಟರೆ ಬಹುತೇಕ ಕಟ್ಟಡಗಳು ಅವ್ಯವಸ್ಥಿತವಾಗಿಯೇ ನಿರ್ಮಾಣಗೊಳ್ಳುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ, ಸಂದಿಗಳಲ್ಲಿ ನಡೆಯುತ್ತಾ, ಕೊಚ್ಚೆಯ ಮೇಲೆ ಹಾರುತ್ತಾ ವಸತಿಗೃಹಗಳನ್ನು ಹುಡುಕಬೇಕಾದ ಹಳೆಯ ಕೇದಾರನಾಥವನ್ನೇ ಕಾಣಬೇಕೇನೋ ಎಂಬ ಆತಂಕ ಕಾಡಿದರೂ ಅಚ್ಚರಿಪಡಬೇಕಿಲ್ಲ.

ಕೇದಾರನಾಥನ ದರ್ಶನ ಪಡೆದು ದೇಗುಲದ ಸುತ್ತ ತಿರುಗಾಡಿದರೆ ಮೊದಲು ಗಮನಸೆಳೆಯುವುದು ಭೀಮಶಿಲೆ. ದೇಗುಲದ ಹಿಂದಿನ ಬೆಟ್ಟದ ಸಾಲುಗಳಿಂದ ಪ್ರವಾಹ ಬಂದ ಸಮಯದಲ್ಲಿ ಸರಿಯಾಗಿ ಗರ್ಭಗುಡಿಯ ಹಿಂದೆ ಅಡ್ಡನಿಂತು ಪ್ರವಾಹ ಎಡಬಲಗಳಿಂದ ಹರಿಯುವಂತೆ ಮಾಡಿ ಗುಡಿಯನ್ನು ರಕ್ಷಿಸಿದ ಬಂಡೆಯಿದು. ಭಕ್ತಾದಿಗಳು ಇದನ್ನು ದೈವಸ್ವರೂಪಿಯೆಂದೇ ತಿಳಿದು ಸಿಂಧೂರ, ಅರಿಸಿನ, ಕುಂಕುಮ ಹಚ್ಚಿ ಪೂಜಿಸುತ್ತಾರೆ. ಸ್ಪರ್ಶಿಸಿ, ಕೈಮುಗಿದು ಪುನೀತರಾಗುತ್ತಾರೆ. ಅಂದ ಹಾಗೆ ಮಂದಾಕಿನಿ ನದಿ ಈಗಲೂ ದೇಗುಲದ ಹಿಂಭಾಗದಲ್ಲಿ ಎರಡು ಕವಲಾಗಿ, ದೇಗುಲದ ಎರಡೂ ಕಡೆಗಳಿಂದ ಪ್ರವಹಿಸಿ ಅನತಿದೂರದಲ್ಲೇ ಮತ್ತೆ ಒಂದಾಗುತ್ತದೆ. ಇಲ್ಲಿ ಸುಸಜ್ಜಿತವಾದ ಸ್ನಾನಘಟ್ಟ ನಿರ್ಮಿಸಲಾಗಿದೆ.

ದೇಗುಲದ ಸುತ್ತಮುತ್ತ ಕಾಮಗಾರಿಗಳು ಇನ್ನೂ ಸಮರೋಪಾದಿಯಲ್ಲಿ ನಡೆಯುತ್ತಿವೆ. ದೇಗುಲದ ಹಿಂದೆ ನದಿ ಕಣಿವೆಗೆ ಅಡ್ಡಲಾಗಿ ವಿಶಾಲವಾದ, ಬಲಿಷ್ಠವಾದ ಅರ್ಧಚಂದ್ರಾಕಾರದ ತಡೆಗೋಡೆ ನಿರ್ಮಾಣವಾಗುತ್ತಿದೆ. ಒಂದೊಮ್ಮೆ ಭವಿಷ್ಯದಲ್ಲಿ ಇಂಥದೇ ಜಲಪ್ರಳಯ ಬಂದರೂ, ಈ ತಡೆಗೋಡೆಯಿಂದಾಗಿ ನೀರು ಗ್ರಾಮದ ಇಕ್ಕೆಲಗಳಲ್ಲೂ ಸರಾಗವಾಗಿ ಹರಿದುಹೋಗಿ ಗ್ರಾಮವನ್ನು ಅಪಾಯದಿಂದ ಪಾರುಮಾಡುವ ಯೋಜನೆ ಇದು. ಬಂಡೆ ಒಡೆಯುವ, ಮಣ್ಣು ತೆಗೆಯುವ ಬೃಹತ್ ಯಂತ್ರಗಳು, ಟಿಪ್ಪರ್‌ಗಳು ಇಲ್ಲಿ ಕಾರ್ಯಾಚರಿಸುತ್ತವೆ.

ಅಂತೂ ಕೇದಾರನಾಥ ಈಗ ಮೊದಲಿಗಿಂತ ಸ್ವಚ್ಛ, ಸುಂದರ, ಸುರಕ್ಷಿತವಾಗಿರುವುದರಲ್ಲಿ ಅನುಮಾನ ಇಲ್ಲ. ಯಾತ್ರಿಕರು ನಿಶ್ಚಿಂತೆಯಿಂದ ಹೋಗಿ ಯಾತ್ರೆಯ ಅನುಭವವನ್ನು ಆಸ್ವಾದಿಸಬಹುದು.

ಭೈರವನಾಥನ ದರ್ಶನ
ಕೇದಾರನಾಥ ಮಂದಿರದಿಂದ ಗ್ರಾಮದ ಕಡೆ ನೋಡುತ್ತಿದ್ದಂತೆ ಎಡಕ್ಕೆ ದೃಷ್ಟಿ ಹಾಯಿಸಿದರೆ ಹತ್ತಿರದ ಗುಡ್ಡಕ್ಕೊಂದು ಗೀಟು ಎಳೆದಂತೆ ಏರುದಾರಿಯೊಂದು ಕಾಣುತ್ತದೆ. ಇದು ಭೈರವನಾಥದ ದಾರಿ. ಇದು ಕೇದಾರನಾಥ ಮಂದಿರದಿಂದ ಒಂದು ಕಿ.ಮೀ. ದೂರದಲ್ಲಿದೆ.

ಭೈರವನಾಥ ಕೇದಾರನಾಥದ ಗ್ರಾಮ ದೇವತೆ. ವಿಶೇಷವಾಗಿ, ಚಳಿಗಾಲದಲ್ಲಿ ಕೇದಾರನಾಥನ ಪೂಜೆ ಉಖೀಮಠದಲ್ಲಿ ನಡೆಯುವಾಗ, ಭೈರವನಾಥ ಈ ಗ್ರಾಮವನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆಯಿದೆ. ವಾಸ್ತವವಾಗಿ ಇದು ಮಂದಿರವಲ್ಲ. ಗುಡ್ಡದ ಅಂಚಿನಲ್ಲಿರುವ ಒಂದು ಸ್ಥಾನ. ಒಂದು ಶಿಲೆ ಹಾಗೂ ಅದರ ಸುತ್ತ ಭೈರವನಾಥನನ್ನು ಸೂಚಿಸುವ , ಶಿಲೆಯ ಹಾಗೂ ಲೋಹದ ಫಲಕಗಳು. ಇಲ್ಲಿ ದೇವರಿಗೆ ಗುಡಿಯಿಲ್ಲದಿದ್ದರೂ ಭಕ್ತಾದಿಗಳಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ಮಾಡಿದೆ.

ಕೇದಾರನಾಥಕ್ಕೆ ಬರುವ ಭಕ್ತಾದಿಗಳು ಭೈರವನಾಥನನ್ನು ಸಂದರ್ಶಿಸಬೇಕು ಎಂಬುದು ಇಲ್ಲಿನ ನಂಬಿಕೆ. ಆದರೆ, ಬಹುತೇಕ ಯಾತ್ರಿಕರಿಗೆ ಇದು ಗೊತ್ತಿಲ್ಲ. ಆದ್ದರಿಂದ ಇಲ್ಲಿಗೆ ಬರುವ ಜನರು ತುಂಬ ಕಡಿಮೆ. ಈ ಸ್ಥಳದಿಂದ ಕೇದಾರನಾಥದ ಚಂದದ ಪಕ್ಷಿನೋಟ ಲಭ್ಯ.

-ಕೇದಾರನಾಥದಲ್ಲಿ ಜಲಪ್ರವಾಹ ತಡೆಯಲು ರಕ್ಷಣಾ ಗೋಡೆ ನಿರ್ಮಿಸಿರುವುದು

ರಕ್ಷಣಾ ಪಡೆ
ಮಹಾದುರಂತದ ನಂತರ ಉತ್ತರಾಖಂಡ ಸರ್ಕಾರ ಹುಟ್ಟುಹಾಕಿರುವ ಹೊಸ ವ್ಯವಸ್ಥೆಯಿದು. ಕೇದಾರಯಾತ್ರೆಯ ಸಂದರ್ಭದಲ್ಲಿ ದಾರಿಯಲ್ಲಿ ಸಿಕ್ಕ ಇದರ ಸದಸ್ಯರ ಜೊತೆ ಹರಟುವಾಗ ಈ ಬಗ್ಗೆ ಅನೇಕ ಮಾಹಿತಿಗಳು ಸಿಕ್ಕವು. ವಾಸ್ತವವಾಗಿ ಇದು ರಾಜ್ಯ ಪೊಲೀಸ್ ಇಲಾಖೆಯ ಒಂದು ವಿಭಾಗ.

ಇಲಾಖೆಯಲ್ಲಿ ಸ್ವಯಂಪ್ರೇರಿತರಾಗಿ ಮುಂದೆಬಂದ ಅಥವಾ ನಿಯುಕ್ತಿಗೊಂಡ ಪೊಲೀಸರನ್ನು ಕನಿಷ್ಠ ಐದು ವರ್ಷಕ್ಕಾಗಿ ಈ ವಿಭಾಗಕ್ಕೆ ನಿಯೋಜಿಸಲಾಗುತ್ತದೆ. ಭೂಕುಸಿತ, ಪ್ರವಾಹದಂತಹ ಪ್ರಾಕೃತಿಕ ವಿಕೋಪದ ವೇಳೆ ಕೈಗಳ್ಳಬೇಕಾದ ಕಾರ್ಯಾಚರಣೆ ಬಗ್ಗೆ ಇವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ. ನಂತರ ಇವರನ್ನು ಉತ್ತರಾಖಂಡ ಹಿಮಾಲಯದ ವಿವಿಧ ಪ್ರದೇಶಗಳಲ್ಲಿ, ಮುಖ್ಯವಾಗಿ ಚಾರ್‌ಧಾಮ್ ಹಾಗೂ ಇತರೇ ಆಯಕಟ್ಟಿನ, ಜನಸಂದಣಿಯ ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ. ಇವರು ಮಾಮೂಲಿ ಸಮವಸ್ತ್ರ ಧರಿಸಿರುವುದಿಲ್ಲ. ನೀಲಿ ಟ್ರಾಕ್‌ಸೂಟ್‌ನಲ್ಲಿ ವಿಭಿನ್ನವಾಗಿ ಕಾಣುವ ಇವರು ಕೇದಾರನಾಥದ ದಾರಿಯುದ್ದಕ್ಕೂ ಅತ್ತಿತ್ತ ಸಂಚರಿಸುತ್ತಾ ಗಮನ ಸೆಳೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.