ಸುಗಮ ಸಂಗೀತದ ಮೇರು ಪ್ರತಿಭೆಗಳಲ್ಲಿ ಒಬ್ಬರಾಗಿರುವ ಎಚ್.ಆರ್. ಲೀಲಾವತಿ ಅವರು ಕನ್ನಡದ ಸಾಹಿತ್ಯ ದಿಗ್ಗಜರ ಜತೆ ಆತ್ಮೀಯವಾಗಿ ಒಡನಾಡಿದವರು. ಅವರು 90 ವಸಂತಗಳನ್ನು ಪೂರೈಸಿರುವ ನೆಪದಲ್ಲಿ ‘ಹಾಡಾಗಿ ಹರಿದಾಳೆ’ ಆತ್ಮಕಥೆ ಇಂದು ಬಿಡುಗಡೆಯಾಗುತ್ತಿದೆ. ಅವರ ನೆನಪುಗಳು ಸಹ ಸಂಗೀತ ಸುಧೆಯಂತೆ ಕೇಳುಗರಿಗೆ ತಂಪೆರೆಯುತ್ತವೆ...

‘ನೀನು ನನ್ನ ಕವನಗಳನ್ನು ಹಾಡದೇ ಇದ್ದಿದ್ದರೆ ನನ್ನ ಕವನದ ಪುಸ್ತಕಗಳೆಲ್ಲ ಬೀರುವಿನಲ್ಲೇ ಇರುತ್ತಿದ್ದವು’

–ಕುವೆಂಪು

‘ನಿಮ್ಮ ಹಾಡುಗಾರಿಕೆಯ ಮೂಲಕ ಏಕ್ ದಂ ನಾನು ಒಬ್ಬ ಕವಿ ಎಂದು ಕನ್ನಡ ನಾಡಿನ ಸಹೃದಯರಿಂದ ಸ್ವೀಕೃತವಾಗಿದ್ದು ಒಂದು ಯೋಗಾಯೋಗವೇ ಸರಿ’

–ಜಿ.ಎಸ್.ಶಿವರುದ್ರಪ್ಪ

‘ಎಷ್ಟು ಛಲೋ ಹಾಡ್ತೀಯವ್ವ ಆಶಾ ಭೋಂಸ್ಲೆ ಹಂಗೆ’

–ದ.ರಾ.ಬೇಂದ್ರೆ

‘ಬೆಂಗಳೂರಿನಲ್ಲಿ ಒಳ್ಳೆ ಚಹಾ ಬೇಕೆಂದರೆ ಕಾಮತ್ ಹೋಟೆಲ್ ಒಂದೆ. ಹಿಂದೂಸ್ತಾನಿ ಸಂಗೀತದ ಭಾವಗೀತವೆಂದರೆ ನಿಮ್ಮ ಕಂಠ ಒಂದೇ’

–ಎನ್ಕೆ

ಹೀಗೆ ಹಿರಿಯ ಕವಿಗಳಿಂದ ನಿರಂತರ ಪ್ರಶಂಸೆಯ ಮಾತುಗಳನ್ನು ಕೇಳಿದವರು ಕನ್ನಡದ ಸುಗಮ ಸಂಗೀತದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಎಚ್.ಆರ್.ಲೀಲಾವತಿ ಅವರು. ಸುಮಾರು 75 ವರ್ಷಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಧ್ರುವತಾರೆಯಾಗಿಯೇ ಇರುವ ಲೀಲಾವತಿ ಸಂಗೀತಕ್ಕಾಗಿ ಕೆಲಸಬಿಟ್ಟವರು. ಪ್ರಸಿದ್ಧಿಯನ್ನೂ ಬಿಟ್ಟವರು. ಹಣ ಬಿಟ್ಟವರು ಮತ್ತು ಬದುಕಿನ ತುಂಬಾ ಸಂಗೀತವನ್ನೇ ತುಂಬಿಕೊಂಡವರು. ಲೀಲಾವತಿ ಅವರ ಕತೆ ಕೇಳುವುದು ಎಂದರೆ ಕನ್ನಡ ನಾಡಿನ ಕವಿಗಳ ಕತೆ ಕೇಳಿದಂತೆ. ಕವಿ ಪತ್ನಿಯರ ಕತೆಯೂ ಅಲ್ಲಿದೆ. ಬಹುತೇಕ ಎಲ್ಲ ಹಿರಿಯ ಕವಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ಲೀಲಾವತಿ ಅವರು ಮಾತಿಗೆ ಕುಳಿತರೆ ಅವರ ವ್ಯಕ್ತಿತ್ವದ ಜೊತೆಗೆ ಕವಿಗಳ, ಸಾಹಿತಿಗಳ ಬದುಕಿನ ಒಳಹೊರಗೂ ತೆರೆದುಕೊಳ್ಳುತ್ತವೆ.

‘ಕುವೆಂಪು ಅವರಿಗೆ ನಾನೆಂದರೆ ತುಂಬಾ ಇಷ್ಟ. ಎಷ್ಟು ಇಷ್ಟ ಎಂದರೆ ಅವರು ಒಮ್ಮೆ ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ತಮ್ಮ ಹಾಡನ್ನು ಲೀಲಾವತಿ ಮತ್ತು ಕಾಳಿಂಗರಾವ್ ಮಾತ್ರ ಹಾಡಬೇಕು ಎಂದು ಕಟ್ಟಾಜ್ಞೆ ಮಾಡಿದ್ದರು. ಆಕಾಶವಾಣಿಯವರು ಈ ಆದೇಶವನ್ನು ಸುಮಾರು ನಾಲ್ಕು ವರ್ಷ ಪಾಲಿಸಿದ್ದರು’ ಎಂದು ಹೆಮ್ಮೆಯಿಂದ ಹೇಳುತ್ತಾರವರು.

‘ಅವರ ಸಾಕ್ಷ್ಯಚಿತ್ರಕ್ಕೂ ನಾನೇ ಹಾಡಿದೆ. ಮೈಸೂರು ಮಾನಸ ಗಂಗೋತ್ರಿ ಉದ್ಘಾಟನೆಗೂ ನಾನೇ ಹಾಡಿದೆ. ಅವರಿಗೆ ಪಂಪ ಪ್ರಶಸ್ತಿ ಬಂದಾಗಲೂ ನಾನೇ ಹಾಡಿದ್ದು. ನಾನು ಅವರ ಮನೆಗೆ ಹೋದಾಗಲೆಲ್ಲಾ ಇದು ಹಾಡಿ ಇದು ಹಾಡಿ ಎಂದು ಕವನ ಪುಸ್ತಕ ಕೊಡೋರು. ಸಾಧಾರಣವಾಗಿ ಯಾರೇ ಬಂದರೂ ಕುವೆಂಪು ಅವರು ತಮ್ಮ ಪತ್ನಿಯನ್ನು ಕರೆದಿದ್ದು ಕಡಿಮೆ. ಆದರೆ ನಾನು ಹೋದರೆ ಮಾತ್ರ ‘ಹೇಮಾ ಯಾರು ಬಂದಿದ್ದಾರೆ ನೋಡು’ ಎಂದು ಪತ್ನಿಯನ್ನು ಕರೆಯೋರು. ಆ ಮೇಲೆ ನಾನು ಹೇಮಾವತಿಯವರು ಮಾತನಾಡುತ್ತಿದ್ದೆವು. ಅವರು ನನಗೆ ಹಾಲು ಕೊಡೋರು. ಕುಡಿದ ನಂತರ ಕುವೆಂಪು ಅವರಿಗೆ ನನ್ನ ಹಾಡಿನ ಸೇವೆ. ಒಮ್ಮೆ ನಾನು ಅವರ ‘ತಾಯಿಯ ಮಡಿಲು’ ಎಂಬ ಕವನ ಹಾಡಿದೆ. ಅದು ಅವರಿಗೆ ಎಷ್ಟು ಇಷ್ಟ ಆಯಿತು ಎಂದರೆ ‘ಈ ಕವಿತೆಯನ್ನು ನೀನೇ ಇನ್ನೊಮ್ಮೆ ಹಾಡಿದರೂ ಅಷ್ಟು ಚೆನ್ನಾಗಿ ಹಾಡಲು ಸಾಧ್ಯವಿಲ್ಲ’ ಎಂದು ಕೊಂಡಾಡಿದರು’ ಎಂದು ಕುವೆಂಪು ಅವರೊಂದಿಗಿನ ಒಡನಾಟ ಬಿಚ್ಚಿಟ್ಟರು.

‘ಶಿವರಾಮ ಕಾರಂತರು ನಾನು ಅತ್ಯಂತ ಗೌರವಿಸುವ ವ್ಯಕ್ತಿಯಾಗಿದ್ದರು. ಅವರ ಸತ್ಯಸಂಧತೆ, ನಿಷ್ಠುರ ಭಾವಕ್ಕೆ ಸರಿಸಾಟಿಯೇ ಇಲ್ಲ. ಅವರು ಮೈಸೂರಿಗೆ ಬಂದಾಗಲೆಲ್ಲಾ ಮಾಡರ್ನ್ ಹೊಟೇಲ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಸಾಧಾರಣವಾಗಿ ರೂಂ ನಂಬರ್ 8ರಲ್ಲಿಯೇ ಇರ್ತಿದ್ದರು. ಅವರ ಬಂದಿದ್ದು ಗೊತ್ತಾದ ತಕ್ಷಣ ನಾನು ಹೋಗ್ತಿದ್ದೆ. ಅವರ ಕಾದಂಬರಿಗಳ ಬಗ್ಗೆ ಚರ್ಚೆ ಮಾಡ್ತಿದ್ದೆ. ಕೆಲವೊಮ್ಮೆ ಹಲವಾರು ಮಕ್ಕಳನ್ನೂ ಕರೆದುಕೊಂಡು ಹೋಗ್ತಿದ್ದೆ. ಮಕ್ಕಳು ಬಂದರೆ ಅವರು ನನ್ನನ್ನು ಬಿಟ್ಟು ಅವರ ಜೊತೆಗೇ ಕಾಲ ಕಳೆಯೋರು. ಮಕ್ಕಳಿಗೆ ಈ ಮರ ನೋಡು, ಈ ಮೋಡ ನೋಡು, ಈ ಹಕ್ಕಿ ನೋಡು ಎಂದು ಪಾಠ ಮಾಡೋರು’ ಎಂದು ಕಾರಂತರ ಲೋಕಕ್ಕೆ ಜಿಗಿದರು.

‘ಅವರು ಮೈಸೂರಿಗೆ ಬರುವಾಗಲೆಲ್ಲಾ ನನಗೆ ಪತ್ರ ಬರೆದು ತಿಳಿಸುತ್ತಿದ್ದರು. ಒಮ್ಮೆ ನಾನು ನನ್ನ ಚಿಕ್ಕಪ್ಪನ ಮಗಳು 6 ವರ್ಷದ ಹುಡುಗಿಯನ್ನು ಕರೆದುಕೊಂಡು ಹೋಗಿದ್ದೆ. ನಾವು ಹೋದಾಗ ಕಾರಂತರು ಸಿಗರೇಟ್ ಸೇದುತ್ತಾ ಇದ್ದರು. ಅದನ್ನು ನೋಡಿದ್ದೇ ನನ್ನ ಚಿಕ್ಕಪ್ಪನ ಮಗಳು ‘ಥೂ ಗಬ್ಬುವಾಸನೆ’ ಎಂದಳು. ‘ಏನು, ನಾನು ಸಿಗರೇಟು ಸೇದೋದು ಬೇಡ್ವೋ’ ಎಂದು ಕೇಳಿದರು. ‘ಥೂ ಬೇಡ’ ಎಂದಿತು ಮಗು. ‘ಇಗೊ ಬಿಟ್ಟೆ’ ಎಂದು ಸಿಗರೇಟನ್ನು ಆ್ಯಷ್ ಟ್ರೇಗೆ ಹಾಕಿದರು. ನಂತರ ಸುಮಾರು ನಾಲ್ಕು ವರ್ಷ ಅವರು ಸಿಗರೇಟು ಸೇದಲಿಲ್ಲ. ಆಮೇಲೆ ಮತ್ತೆ ಶುರು ಮಾಡಿದರು. ‘ನೀವು ಸಿಗರೇಟ್ ಸೇದೋದು ಬಿಟ್ಟಿದ್ದಿರಿ. ಮತ್ಯಾಕೆ ಶುರುಮಾಡಿದಿರಿ. ಅದರಿಂದ ನಿಮಗೆ ಏನು ಸಿಗುತ್ತದೆ’ ಎಂದು ಒಮ್ಮೆ ಕೇಳಿದೆ. ‘ಸೇದಿದರೂ ಏನೂ ಸಿಗಲ್ಲ. ಸೇದದಿದ್ದರೂ ಏನೂ ಸಿಗಲ್ಲ. ಮಗು ಬೇಡ ಅಂತು ಬಿಟ್ಟೆ. ಇನ್ಯಾರೋ ಕೊಟ್ಟರು ಸೇದಿದೆ ಅಷ್ಟೆ’ ಎಂದು ಉತ್ತರಿಸಿದರು. ಅವರು ಒಂತರಹ ಸ್ಥಿತಪ್ರಜ್ಞರಂತೆ ಇದ್ದರು’.

‘ನಾನು ಅವರ ಮನೆಗೆ ಹೋಗಿ ಉಳಿದುಕೊಳ್ಳುವುದೂ ಇತ್ತು. ಲೀಲಾ ಕಾರಂತರ ಕೈ ಊಟ ಮಾಡಿದ್ದೇನೆ. ಕಾರಂತರು ಬೆಳಿಗ್ಗೆ 11ಕ್ಕೆ ಊಟಕ್ಕೆ ಕುಳಿತುಕೊಳ್ಳೋರು. ಕಾರಂತರು ಊಟಕ್ಕೆ ಕುಳಿತ ತಕ್ಷಣವೇ ಅವರ ಹಿತ್ತಿಲಿಗೆ ಕಾಗೆಗಳು ಬರುತ್ತಿದ್ದವು. ಅವುಗಳಿಗೆ ಊಟ ಹಾಕಿ ಇವರು ಊಟ ಮಾಡೋರು. ಅವರಿಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ.

‘ನಾನು ದೇವರನ್ನು ನಂಬುವುದಿಲ್ಲ. ಮನುಷ್ಯನ ಶಕ್ತಿಯ ಮೇಲೆ ಮಾತ್ರ ನಂಬಿಕೆ. ನನ್ನ ಹೆಂಡತಿ ಲೀಲಾಳಿಗೆ ದೇವರ ಮೇಲೆ ಅಪಾರ ವಿಶ್ವಾಸ. ನಾನು ನನ್ನದೇ ಕಾರಿನಲ್ಲಿ ಅವಳನ್ನು ಅವಳು ಹೇಳಿದ ದೇವಾಲಯಗಳಿಗೆ ಕರೆದುಕೊಂಡು ಹೋಗ್ತೇನೆ. ಅವಳು ದೇವರ ದರ್ಶನ ಮಾಡಿ ಬರ್ತಾಳೆ. ನಾನು ಕಾರಲ್ಲಿ ಅವಳಿಗಾಗಿ ಕಾಯುತ್ತೇನೆ’ ಎಂದು ಅವರು ಹೇಳುತ್ತಿದ್ದರು. ಒಮ್ಮೆ ನಮ್ಮ ಮನೆಗೆ ಬಂದು ನಾಲ್ಕಾರು ಗಂಟೆ ಕುಳಿತಿದ್ದರು. ಕುಡಿಯಲು ನೀರು ಬೇಕು ಎಂದರು. ಕೊಟ್ಟೆ. ಕೊಡುವಾಗ ‘ಇದು ಬೋರ್ ನೀರು. ರುಚಿ ಇಲ್ಲ’ ಎಂದೆ. ತಕ್ಷಣವೇ ‘ಐ ಬೋರ್ಡ್ ಯು’ ಎಂದು ಚಟಾಕಿ ಹಾರಿಸಿದರು. ನನ್ನ ಬದುಕಿನಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಅವರು. ದುಃಖದಲ್ಲಿ ನನ್ನನ್ನು ಸಂತೈಸಿದ್ದರು’ ಹೀಗೆ ಕಾರಂತರ ನೆನೆದ ಸಂತಸ ಅವರಿಗೆ.

‘ಒಮ್ಮೆ ಶಿವರುದ್ರಪ್ಪನವರ ಯಾವುದೋ ಹಾಡನ್ನು ಹೇಳಿದ್ದೆ. ಅದನ್ನು ಆಕಾಶವಾಣಿಯಲ್ಲಿ ಕೇಳಿ ಅವರು ಇಷ್ಟಪಟ್ಟಿದ್ದರು. ಅವರ ‘ಉಡುಗಣ ವೇಷ್ಟಿತ’ ಹಾಡನ್ನು ತುಂಬಾ ಮೆಚ್ಚಿಕೊಂಡಿದ್ದರು. ಎಲ್ಲಿ ಹೋದರೂ ಅದನ್ನು ಹೇಳೋರು. ನನಗೆ ಪತ್ರ ಬರೆದು ಹೊಗಳೋರು. ಕೆಲವು ಕಾಲ ಅವರು ನನಗೆ ಮೇಷ್ಟ್ರಾಗಿದ್ದರು. ಅವರ ಕೊನೆಯ ಕಾಲದಲ್ಲಿ ಒಮ್ಮೆ ನನ್ನನ್ನು ನೋಡಬೇಕು ಎಂದು ಬಯಸಿದರು. ನೋಡಲು ಹೋಗಿದ್ದೆ. ಒಂದಿಷ್ಟು ಹಾಡುಗಳನ್ನು ಹೇಳಿದೆ. ‘ನಾನು ಕೃಷ್ಣನ ಬಗ್ಗೆ ಬರೆದ ಹಾಡುಗಳಿಗೆ ನೀನು ಸಂಗೀತ ಸಂಯೋಜಿಸಿ ಹಾಡಬೇಕು ಎಂದು ಕೇಳಿಕೊಂಡರು. ನಾನೇನೋ ಸಂಗೀತ ಸಂಯೋಜನೆ ಮಾಡಿದೆ. ಆದರೆ ಕಾರ್ಯಕ್ರಮ ನಡೆಸಲು ಆಗಲಿಲ್ಲ. ಅದೊಂದು ವ್ಯಥೆ ನನ್ನೊಳಗೇ ಉಳಿದುಕೊಂಡು ಬಿಟ್ಟಿತು. ಇತ್ತೀಚಿಗೆ ಕೆಲವು ವರ್ಷಗಳ ಹಿಂದೆ ಆ ಕಾರ್ಯಕ್ರಮ ಮಾಡಿದೆ. ಆದರೂ ಅವರು ಬದುಕಿದ್ದಾಗ ಮಾಡಲಾಗಲಿಲ್ಲವಲ್ಲ ಎಂಬ ನೋವು ಇನ್ನೂ ಇದೆ’ ಎಂದು ಕಣ್ಣೀರು ತಂದುಕೊಂಡರು.

‘ದ.ರಾ.ಬೇಂದ್ರೆ ಅವರು ಕವನ ವಾಚಿಸುವುದನ್ನು ನೋಡಿದ್ದೆ. ಅವರ ಕವಿತೆ ಓದಿದರೆ ಮತ್ತೆ ಅದನ್ನು ಯಾರೂ ಹಾಡುವುದು ಬೇಡ ಹಾಗೆ ಓದುತ್ತಿದ್ದರು. ಒಮ್ಮೆ ಧಾರವಾಡದಲ್ಲಿ ಅವರ ನಾಟಕವೊಂದಕ್ಕೆ ಹಾಡಿದೆ. ಅದನ್ನು ಕೇಳಿದ ಬೇಂದ್ರೆ ‘ಎಷ್ಟು ಛಲೋ ಹಾಡ್ತೀಯಮ್ಮ ಆಶಾ ಭೋಂಸ್ಲೆ ಹಾಗೆ’ ಎಂದು ಬೆನ್ನುತಟ್ಟಿದ್ದರು’ ಎಂದು ಖುಷಿಗೊಂಡರು.

‘ಆಕಾಶವಾಣಿಗೆ ಯಾವುದೇ ರೂಪಕ ಮಾಡಿದರೂ ಹೊಸ ಹೊಸ ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಒಮ್ಮೆ ಒಂದು ರೂಪಕಕ್ಕೆ ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಹೊಸ ಕವಿತೆಗಳು ಬೇಕು ಎಂದಿದ್ದೆ. ಆದರೆ ಅಷ್ಟರಲ್ಲೆ ನನಗೆ ಆರೋಗ್ಯ ಹದಗೆಟ್ಟಿತು. ಈಗ ನನಗೆ ಕಾಯಿಲೆ ಆಗಿದೆ. ಗುಣವಾದ ಮೇಲೆ ಕವಿತೆ ತೆಗೆದುಕೊಳ್ಳುತ್ತೇನೆ ಎಂದು ಅವರಿಗೆ ತಿಳಿಸಿದ್ದೆ. ಬೆಂಗಳೂರು ಗುಣಶೀಲ ಆಸ್ಪತ್ರೆಯಲ್ಲಿ ಇದ್ದೆ. ಒಂದು ದಿನ ನಾನು ಮಲಗಿದ್ದಾಗ ದೂರದಲ್ಲಿ ಯಾರೋ ಬಂದ ಹಾಗೆ ಕಾಣಿಸಿತು. ನೋಡಿದರೆ ಕೆ.ಎಸ್.ನ. ಬಂದವರೆ ನನ್ನ ತಲೆ ಸವರಿ ‘ನೋಡು ನಿನಗೋಸ್ಕರ ಕವನ ತಂದಿದ್ದೀನಿ’ ಎಂದರು. ‘ನೀನು ಆಸ್ಪತ್ರೆಯಲ್ಲಿ ಇರುವುದು ಗೊತ್ತಾಯ್ತು. ನಿನ್ನ ನೋಡಿದ ಹಾಗೂ ಆಯ್ತು, ಕವನ ಕೊಟ್ಟ ಹಾಗೂ ಆಯ್ತು ಎಂದು ಬಂದೆ’ ಎಂದರು. ಈ ಸರಳತನಕ್ಕೆ ಈ ದೊಡ್ಡತನಕ್ಕೆ ಏನು ಹೇಳೋಣ’ ಎಂದು ತಮ್ಮಷ್ಟಕ್ಕೆ ತಾವೇ ಪ್ರಶ್ನೆ ಮಾಡಿಕೊಂಡರು.

‘ಒಮ್ಮೆ ಬೆಂಗಳೂರಿನಲ್ಲಿ ಭ್ರಮರ ಟ್ರಸ್ಟ್ ಕಾರ್ಯಕ್ರಮದಲ್ಲಿ ಕೆ.ಎನ್.ನಿಸಾರ್ ಅಹ್ಮದ್ ಅವರ ಹೊಸ ಹೊಸ ಹಾಡುಗಳನ್ನು ಹೇಳಿದೆ. ಅದನ್ನು ಕೇಳಿ ಅವರಿಗೆ ತುಂಬಾ ಇಷ್ಟ ಆಯ್ತು. ಒಂದು ಹಾಡಂತೂ ಇದನ್ನು ಬರೆದಿದ್ದು ನಾನೇನಾ ಅಮ್ಮಾ ಎಂದು ಕೇಳಿದರು. ನನಗೆ ತುಂಬಾ ದುಃಖ ವ್ಯಥೆಯಾಗುತ್ತಿದೆ. ಯಾಕೆಂದರೆ ನಾನು ಬರೆದಿರುವುದು ಮೂರೇ ಕವನ ಅಮ್ಮ. ಕುರಿಗಳು ಸಾರ್ ಕುರಿಗಳು, ಜೋಗದ ಸಿರಿ, ಬೆಣ್ಣೆ ಕದ್ದನಮ್ಮ ಈ ಹಾಡುಗಳನ್ನು ಮಾತ್ರ ಹಾಡ್ತಾರೆ. ಹೊಸ ಹಾಡು ಹೇಳಲ್ಲ’ ಎಂದು ಖೇದ ವ್ಯಕ್ತಪಡಿಸಿದ್ದರು’ ಎಂದು ಹೇಳಿ ಹೊಸ ಹಾಡಿನ ಮಹತ್ವ ತಿಳಿಸಿದರು.

‘ಗೋಪಾಲಕೃಷ್ಣ ಅಡಿಗರು ನನಗೆ ಎರಡು ವರ್ಷ ಗುರುಗಳಾಗಿದ್ದರು. ನನ್ನ ಕಂಡರೆ ಖುಷಿ ಅವರಿಗೆ. ನಮ್ಮ ಮನೆಗೂ ಬರೋರು. ಅವರ ಕವನಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆ. 1959ರಲ್ಲಿ ನನಗೆ ಟೈಫಾಯ್ಡ್ ಆಗಿತ್ತು. 6 ತಿಂಗಳು ಮಲಗಿದ್ದೆ. ಆಗ ಅಡಿಗರು ಮೈಸೂರಿನ ಸೇಂಟ್ ಫೀಲೋಮಿನಾ ಕಾಲೇಜಿನಲ್ಲಿದ್ದರು. 6 ತಿಂಗಳೂ ನನಗೆ ಅನ್ನವನ್ನೇ ಕೊಟ್ಟಿರಲಿಲ್ಲ. ಕೆಲದಿನಗಳ ನಂತರ ಸ್ವಲ್ಪ ಅನ್ನ ಕೊಟ್ಟರು. ಒಂದು ದಿನ ನಾನು ಅನ್ನ ಕೊಟ್ಟಿಲ್ಲ ಎಂದು ಅಳುತ್ತಿದ್ದೆ. ಆ ದಿನ ಅಡಿಗರು ಬಂದಿದ್ದರು. ನನ್ನ ತಲೆ ಮೇಲೆ ಕೈಯಿಟ್ಟು ‘ನೋಡಮ್ಮ ನಿನ್ನ ತಂದೆ ತಾಯಿ ನಿನ್ನನ್ನು ಉಳಿಸಿಕೊಂಡಿದ್ದಾರೆ. ಹೋಗ್ತಾ ಹೋಗ್ತಾ ಜಾಸ್ತಿ ಕೊಡ್ತಾರೆ. ನೀನು ಗುಣವಾಗು ಆಮೇಲೆ ನಿನಗೆ ಏನು ಬೇಕೋ ಅದನ್ನು ತಿನ್ನೋವಂತೆ’ ಎಂದು ಸಮಾಧಾನ ಮಾಡಿದ್ದರು’ ಎಂದು ಹೇಳುತ್ತಾ ಇಂತಹ ಹಲವಾರು ಮಂದಿ ಸಾಹಿತಿಗಳ ಸಂಪರ್ಕದಿಂದಲೇ ನನ್ನ ಬದುಕು ಪೂರ್ಣವಾಗಿದೆ ಎಂದರು.

‘ಗೋಪಾಲಕೃಷ್ಣ ಅಡಿಗರಿಗೆ ಪಾರ್ಶ್ವವಾಯು ಆಗಿತ್ತು. ಆಗ ನಾನು ಮತ್ತು ರಘುರಾಂ ಅವರನ್ನು ನೋಡಲು ಹೋಗಿದ್ದೆವು. ಆಗ ಅಡಿಗರು ‘ನರಸಿಂಹರಾಜ ಮೊಹಲ್ಲಾದಲ್ಲಿ ನನ್ನ ಮನೆಯೊಂದಿದೆ. ಅದನ್ನು ಮಾರಾಟ ಮಾಡಿಸಿಕೊಟ್ಟರೆ ನನಗೆ ಸಹಾಯವಾಗುತ್ತದೆ’ ಎಂದರು. ತಕ್ಷಣವೇ ರಘುರಾಂ ತಾವು ಮಾರಾಟ ಮಾಡಿಸುವುದಾಗಿ ಹೇಳಿದರು. ‘ಹೀಗೆ ಹೇಳಿದ ಹತ್ತನೇ ವ್ಯಕ್ತಿ ನೀನು’ ಎಂದು ರಘುರಾಂ ಅವರಿಗೆ ಹೇಳಿದಾಗ ‘ಇಲ್ಲ, ಖಂಡಿತ ಮಾಡಿಸಿಕೊಡುತ್ತೇನೆ’ ಎಂದು ರಘುರಾಂ ಭರವಸೆ ನೀಡಿದರು. ಅದರಂತೆ ಜೀಶಂಪ ಅವರ ಅಳಿಯನಿಗೆ ಅದನ್ನು ಮಾರಾಟ ಮಾಡಲಾಯಿತು. ನೋಂದಣಿ ಮಾಡಿಸಲು ಅಡಿಗರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದರು. ಆಗ ಮಧ್ಯಾಹ್ನ 1.30 ಆಗಿತ್ತು. ಸಬ್ ರಿಜಿಸ್ಟ್ರಾರ್ ಇದ್ದಾರೋ ಇಲ್ಲವೋ ನೋಡಿಕೊಂಡು ಬರುತ್ತೇನೆ ಎಂದು ರಘುರಾಂ ಹೋದರು. ಅಲ್ಲಿಂದ ಬಂದವರೆ ‘ಸಾರ್ ಸಬ್ ರಿಜಿಸ್ಟ್ರಾರ್ ಊಟಕ್ಕೆ ಹೋಗಿದ್ದಾರಂತೆ’ ಎಂದರು. ತಕ್ಷಣವೇ ಅಡಿಗರು ‘ಇಲ್ಲೀವರೆಗೂ ಇಲ್ಲಿ ಕುಳಿತು ತಿಂದಿದ್ದು ಸಾಲದು ಅಂತಾ ಮನೆಗೆ ಹೋಗಿ ಊಟ ಬೇರೆ ಮಾಡಬೇಕಾ ಅವರು’ ಎಂದು ಪ್ರಶ್ನೆ ಮಾಡಿದ್ದರು’ ಹೀಗಿದ್ದರು ಅಡಿಗರು ಎಂದರು.

‘ಪು.ತಿ.ನ ಅವರು ನನ್ನ ಜೊತೆ 25 ವರ್ಷ ಮಾತನಾಡಲಿಲ್ಲ ಗೊತ್ತಾ? 1952 ರಲ್ಲಿ ಅವರ ಸಂಗೀತ ರೂಪಕಕ್ಕೆ ನಾನು ಹಾಡಬೇಕಿತ್ತು. ನನ್ನ ಹಾಡು ಹಾಡ್ತೀಯೋ ಎಂದು ಕೇಳಿ ಹಾಡಿಸಿದರು. ಆದರೆ ನನ್ನ ಗುರು ಪದ್ಮಚರಣ್ಗೆ ಇದು ಇಷ್ಟ ಇರಲಿಲ್ಲ. ನಾನು ಹಾಡುವುದನ್ನು ತಪ್ಪಿಸಿದರು. ಇದರಿಂದ ಸಿಟ್ಟಾದ ಪುತಿನ ಅಷ್ಟು ವರ್ಷಗಳ ಕಾಲ ನನ್ನ ಜೊತೆ ಮಾತನಾಡಲಿಲ್ಲ. ನನಗೆ ಸಂಗೀತ ಬೇಕಿತ್ತು. ಅದಕ್ಕೆ ಪದ್ಮಚರಣ್ ಮಾತು ಮೀರಲಿಲ್ಲ ನಾನು. ಪುತಿನ ಸಿಟ್ಟು ಮಾಡಿಕೊಂಡಿದ್ದು ಸರಿ ಇತ್ತು. ಆದರೆ ನಾನು ಇಕ್ಕಟ್ಟಿನಲ್ಲಿದ್ದೆ. ನಂತರ ಎಷ್ಟೋ ವರ್ಷಗಳ ಮೇಲೆ ಅವರ ಅಹಲ್ಯೆ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿದೆ. ಅದು 1979ರಲ್ಲಿ ಪ್ರಸಾರ ಆಯ್ತು. ಆಗ ಅವರು ಅದನ್ನು ಮೆಚ್ಚಿಕೊಂಡು ‘ಇದಕ್ಕಿಂತ ಚೆನ್ನಾಗಿ ಸಂಗೀತ ಮಾಡೋದು ಯಾರಿಗೂ ಸಾಧ್ಯವಿಲ್ಲ’ ಎಂದರು. 1988ರಲ್ಲಿ ನನಗೆ ಸಖತ್ ಕಾಯಿಲೆ. ಆಗ ನಾನು ಕೃಷ್ಣನ ಕುರಿತು ಕವನಗಳನ್ನು ಬರೆದೆ. ಅದನ್ನು ಪು.ತಿ.ನ ಅವರಿಗೆ ಕೊಟ್ಟೆ. ಅದನ್ನು ಓದಿ ‘ಶ್ರೀಹರಿ ಗೀತ’ ಎಂದು ಹೆಸರು ಇಟ್ಟರು. ಜೊತೆಗೆ ಅದಕ್ಕೊಂದು ಚೆಂದದ ಮುನ್ನುಡಿ ಬರೆದುಕೊಟ್ಟರು. ಅದರಲ್ಲಿ ನನ್ನನ್ನು ಸುಗಮ ಸಂಗೀತದ ವಾಗ್ಗೇಯಕಾರ ಎಂದು ಗುರುತಿಸಿದರು. ಹೀಗಿತ್ತು ನಮ್ಮ ಸಂಬಂಧ’ ಎಂದು ಹೇಳಿದರು.

ಪದ್ಮಚರಣ್ ನನ್ನ ಗುರುಗಳು. ಅವರಿಂದ ನನಗೆ ಸಂಗೀತ ಸಿಕ್ಕಿತು. ಆದರೆ ಜೀವನ ಕಳಕೊಂಡೆ. ಅವರ ಬಳಿ 22 ವರ್ಷ ಕಲಿತಿದ್ದೇನೆ. ಅವರಲ್ಲಿ ಕಲಿಯುವುದು ಕಷ್ಟ. ಆದರೂ ಸಂಗೀತಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡೆ. ವೃದ್ಧಾಪ್ಯದಲ್ಲಿ ಅವರಿಗೆ ಆರೋಗ್ಯ ಸರಿ ಇಲ್ಲದಾಗ ಹುಳಿಮಾವಿನಲ್ಲಿ ಇದ್ದರು. ನನ್ನ ನೋಡಲು ಬಯಸಿದರು. ಹೋದೆ. ಆಗ ಅವರು ಯಾರನ್ನೂ ಗುರುತಿಸುತ್ತಿರಲಿಲ್ಲ. ನಾನು ಅವರ ಎದುರಿಗೆ ನಿಂತಾಗ ‘ಇವರು ಯಾರು ಎಂದು ಗೊತ್ತಾಯಿತಾ’ ಎಂದು ಅವರ ಜೊತೆ ಇದ್ದವರು ಕೇಳಿದರು. ಸ್ವಲ್ಪ ಹೊತ್ತು ನನ್ನ ನೋಡಿ ‘She is my music' ಎಂದರು.

ಹೌದು, ಎಚ್.ಆರ್.ಲೀಲಾವತಿ ಕೇವಲ ಪದ್ಮಚರಣ್ ಸಂಗೀತ ಮಾತ್ರ ಆಗಿರಲಿಲ್ಲ. ಆಗಿನ ಕಾಲದ ಬಹುತೇಕ ಕವಿಗಳ ಸಂಗೀತವೂ ಆಗಿದ್ದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.