ಇನ್ನೂ ಹನ್ನೆರಡು ವರ್ಷ ಹೋದರೆ ನಾವೆಲ್ಲಾ ಬದುಕಿರುತ್ತೇವೆಯೋ, ಇಲ್ಲ ನೆಗೆದುಬಿದ್ದಿರುತ್ತೇವೆಯೋ? ಯಾರಿಗೆ ಗೊತ್ತು. ಸಿಕ್ಕ ಛಾನ್ಸು ಬಿಡಬಾರದೆಂದು ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ಗಿರಿಗೆ ಈ ಸಲ ಜನ ಮುಗಿಬಿದ್ದು ಬರುತ್ತಲೇ ಇದ್ದಾರೆ. ನೀಲಕುರಿಂಜಿ ಎಂಬ ಹೂವು ಎಷ್ಟೆಲ್ಲಾ ಮಂದಿಯನ್ನು ಹೀಗೆ ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ. ಪರಿಸರವನ್ನು ಕಣ್ತುಂಬಿಕೊಳ್ಳುವ ನಿಸರ್ಗವನ್ನು ನೋಡಿ ನಲಿಯುವ ಜನರೇ ಇಲ್ಲಿ ಹೆಚ್ಚಾಗಿ ಕಾಣುತ್ತಿದ್ದಾರೆ. ಈ ಹೂವನ್ನು ಒಂಟಿಯಾಗಿ ನೋಡಿದರೆ ಅಷ್ಟೇನು ವಿಶೇಷ ಅನ್ನಿಸದೇ ಇರಬಹುದು. ಅದೇ ಗುಂಪು ಗುಂಪಾಗಿ ಬೆಳೆದು ಹಸಿರು ಬೆಟ್ಟವನ್ನು ಅಪ್ಪಿ ಹಿಡಿದು ಹರಡಿದ ಅದರ ಹಠಮಾರಿತನವನ್ನು ಕಣ್ಣಾರೆ ಕಂಡಾಗ ಆಗುವ ಉಲ್ಲಾಸ ಹೇಳತೀರದ್ದು.

ಸದಾ ಬೋಳು ಬೆಟ್ಟಗಳಾಗಿ ಕಾಣುವ ಇಲ್ಲಿನ ಬೆಟ್ಟಗಳು ಈಗ ಈ ನೀಲ ಕುರಿಂಜಿ ಹೂವನ್ನು ಹಾಸಿಹೊದ್ದು ನವ ವಧುವಿನಂತೆ ಕಾಣುತ್ತಿವೆ. ನಿಸರ್ಗದ ಈ ಅಚ್ಚರಿ ನೋಡುಗರ ಪಾಲಿಗೊಂದು ತಾಜಾತನ. ಈ ಗಿಡ ಬೇರೆ ಸಮಯದಲ್ಲಿ ಅದೇ ಬೆಟ್ಟದಲ್ಲಿ ಇದ್ದರೂ ಕಣ್ಣಿಗೆ ಕಾಣದಂತೆ ನೆಲಕ್ಕೆ ಅಂಟಿಕೊಂಡು ಚಕ್ಕಳೆಯಾಗಿ ಬಿದ್ದಿರುತ್ತದೆ. ಒಂದು ಗಿಡ ಹೂ ಅರಳಿಸಿಕೊಂಡು ನಗಲು ಇಷ್ಟು ವರ್ಷಗಳ ಕಾಲ ತಪಸ್ಸು ಮಾಡುವುದು ನಿಜಕ್ಕೂ ಸೋಜಿಗ. ಹಸಿರು ಬೆಟ್ಟವನ್ನು ತನ್ನ ನವಿರಾದ ಬಣ್ಣದಿಂದ ಅಲಂಕರಿಸಿರುವ ಕುರಿಂಜಿ ಪ್ರವಾಸಿಗರ ಎದೆಯಲ್ಲಿ ಮತ್ತೆ ಮತ್ತೆ ಅರಳುತ್ತಿದೆ. ಶೋಲಾ ಅರಣ್ಯದ ತುದಿಯಲ್ಲಿ ನಿಂತು ಕಣ್ಣಿಗೆ ಕಾಣುವಷ್ಟು ದೂರದ ತನಕ ರಾಚಿರುವ ಈ ಹೂವಿನ ಲಾಲಿತ್ಯವನ್ನು ಸವಿಯುವ ರೀತಿಯೇ ಬೇರೆ ಬಗೆಯದು.

ಗಿರಿಯಲ್ಲಿ ಆಗಾಗ ಬೀಳುವ ತುಂತುರು ಮಳೆ, ಚಂಚಲ ಮೋಡಗಳ ಹೊಯ್ದಾಟ, ಐಸಿನಷ್ಟು ತಣ್ಣನೆಯ ಗಾಳಿ ಹೂವಿಗೂ ಒಂದು ಮಾಂತ್ರಿಕ ಸ್ಪರ್ಶವನ್ನು ಕೊಟ್ಟಿದೆ. ನಗರದ ಯಾಂತ್ರೀಕೃತ ಜೀವನಗಳಿಂದ ಕಂಗೆಟ್ಟವರು ಇಲ್ಲಿಗೆ ಓಡೋಡಿ ಬರುತ್ತಿದ್ದಾರೆ. ಸೃಷ್ಟಿಯ ಈ ವಿಸ್ಮಯ ಇವರೆಲ್ಲರ ಮನಸ್ಸುಗಳನ್ನು ಹದಗೊಳಿಸುತ್ತಿದೆ. ದೂರದಿಂದ ನೋಡಿದರೆ ಅಷ್ಟೇನು ಸ್ಪಷ್ಟವಾಗಿ ಕಾಣದ ಈ ಹೂವುಗಳನ್ನು ಹತ್ತಿರದಿಂದಲೇ ಹೋಗಿ ನೋಡಿ ನಲಿಯಬೇಕು. ದಿನಕಳೆದಂತೆ ಅರಳಿರುವ ಹೂಗಳು ಉದುರುತ್ತಿವೆ. ಹಲವೆಡೆ ಮೊಗ್ಗುಗಳು ಅರಳಲು ಸನ್ನದ್ಧವಾಗಿ ನಿಂತಿವೆ.

ಜೇನುನೊಣಗಳ ಪರಾಗ ಸ್ಪರ್ಶವನ್ನೂ ಇಲ್ಲಿ ಕಾಣಬಹುದು. ಕುರಿಂಜಿ ಹೂವಿನ ಮಕರಂದ ತುಂಬಾ ಅಮೂಲ್ಯ ಎಂದು ಅನೇಕರು ಹೇಳುತ್ತಾರೆ. ಇದರಲ್ಲಿ ನೈಸರ್ಗಿಕವಾದ ಅನೇಕ ಗುಣಗಳು ಹುದುಗಿರುವ ಬಗ್ಗೆಯೂ ಮಾತಾಡುತ್ತಾರೆ. ಆದರೆ ಇದರ ಜೇನು ಸಿಗುವುದು ಕಷ್ಟ. ಮೂರ್ನಾಲ್ಕು ವರ್ಷಗಳ ಹಿಂದೆ ಮೂಡಿಗೆರೆ ಬಳಿಯ ದೇವರಮನೆ ಕಾಡಿನ ಸಮೀಪ ಅರಳಿದ್ದ ಕುರಿಂಜಿ ಹೂವಿನ ಜೇನನ್ನು ಕಷ್ಟಬಿದ್ದು ಸಂಪಾದಿಸಿದ್ದೆವು. ಪರಿಮಳ ಭರಿತವಾದ ಅದರ ಘಮ ಈಗಲೂ ಮನಸ್ಸಲ್ಲಿ ಉಳಿದುಹೋಗಿದೆ. ಬಣ್ಣದ ಚಿಟ್ಟೆಗಳು ಕೂಡ ಈ ಹೂವಿನ ಸಂಗಕ್ಕಾಗಿ ಹಾತೊರೆದು ಬರುತ್ತಿವೆ.

ಸ್ಟ್ರೋಬಿಲಾಂಥೆಸ್ ಕುಂಥಿಯಾನಸ್ ಎಂಬ ವೈಜ್ಞಾನಿಕ ಹೆಸರಿನ ಈ ಹೂವುಗಳು ಜುಲೈನಿಂದ ಅಕ್ಟೋಬರ್ ನಡುವೆ ಅರಳುತ್ತವೆ. ಈ ಹೂವುಗಳು ಅರಳುವ ಸಮಯದಲ್ಲಿ ಮಳೆ ಹೆಚ್ಚು ಎಂದು ಸ್ಥಳೀಯ ಜನ ಮಾತಾಡುತ್ತಿದ್ದರು. ಕುರಿಂಜಿ ಪ್ರಭೇದದಲ್ಲಿ ಇನ್ನೂರೈವತ್ತು ಬಗೆಯ ಪ್ರಜಾತಿ ಹೂವುಗಳಿದ್ದಾವಂತೆ. ಇದರಲ್ಲಿ ಭಾರತದಲ್ಲಿ ಅರಳುವ ಕುರಿಂಜಿಗಳು ಸುಮಾರು ನಲವತ್ತೈದರ ಆಸುಪಾಸು. ಮುಖ್ಯವಾಗಿ ಪಶ್ಚಿಮ ಘಟ್ಟಗಳು ಹಾದು ಹೋದ ತಮಿಳುನಾಡಿನ ಊಟಿ, ಪಳನಿ, ಕೊಡೈಕೆನಾಲ್, ಏರ್ಕಾಡು ಹಾಗೂ ಕೇರಳದ ಮುನ್ನಾರ್ಗಳಲ್ಲಿ ಈ ಹೂವುಗಳು ಕಾಲಕಾಲಕ್ಕೆ ಅರಳುತ್ತವೆ. ತಮಿಳುನಾಡಿನ ಪಾಲಿಯನ್ ಬುಡಕಟ್ಟು ಜನಾಂಗದವರು ತಮ್ಮ ವಯಸ್ಸನ್ನು ಲೆಕ್ಕಹಾಕಲು ಈ ಪೊದೆಗಿಡಗಳು ಹೂಬಿಡುವ ಕಾಲ ಚಕ್ರವನ್ನೇ ಉಲ್ಲೇಖಿಸುತ್ತಾರೆ.

ನೀಲಕುರಿಂಜಿ ಅರಳಲು ಸತತ ಹನ್ನೆರಡು ವರ್ಷಗಳ ಸುದೀರ್ಘ ಸಮಯ ಏಕೆ ತೆಗೆದುಕೊಳ್ಳುತ್ತದೆ ಎಂಬ ಕುತೂಹಲದ ಪ್ರಶ್ನೆಗೆ ಕೇರಳ ಪ್ರವಾಸೋದ್ಯಮ ವೆಬ್ಸೈಟ್ನಲ್ಲಿ ಉತ್ತರವಿದೆ. ‘ನೀಲಕುರಿಂಜಿ ಹೂವುಗಳ ಪರಾಗಸ್ಪರ್ಶಕ್ಕೆ ಹೆಚ್ಚು ಸಮಯ ಬೇಕಾಗುವುದರಿಂದ ಹೂವು ಅರಳಲು ಹನ್ನೆರಡು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಸ್ಯಶಾಸ್ತ್ರದಲ್ಲಿ, ಇದನ್ನು ಸಸ್ಯಗಳ ‘ಬದುಕುಳಿಯುವ ಕಾರ್ಯವಿಧಾನ’ ಎಂದು ಕರೆಯಲಾಗುತ್ತದೆ. ದೀರ್ಘ ಪರಾಗಸ್ಪರ್ಶವು ಪರಭಕ್ಷಕಗಳಿಂದ ಹಾಗೂ ಹವಾಮಾನ ಬದಲಾವಣೆಗಳಿಂದ ಆಗುವ ಸಂಪೂರ್ಣ ನಾಶದಿಂದ ತಪ್ಪಿಸುತ್ತದೆ. ಹೀಗಾಗಿ ಈ ಸಸ್ಯ ತನ್ನಲ್ಲಿ ಈ ಬದಲಾವಣೆ ಮಾಡಿಕೊಂಡು ತನ್ನ ಪ್ರಜಾತಿ ಉಳಿಸಿಕೊಳ್ಳುವ ಉಪಾಯ ಕಂಡುಕೊಂಡಿದೆ’ ಎಂದು ಆ ವಿವರಣೆಯಲ್ಲಿ ವ್ಯಾಖ್ಯಾನಿಸಿದೆ.

ಒಮ್ಮೊಮ್ಮೆ ರಭಸವಾಗಿ ಬೀಸುವ ಥಂಡಿ ಗಾಳಿಗೆ, ಆಗಾಗ ಮುಸುಕುವ ಮಂಜಿಗೆ ತನ್ನ ಸೌಂದರ್ಯದ ಅಮಲನ್ನು ತೆರೆದಿಟ್ಟ ನೀಲಕುರಿಂಜಿ ಹೂವುಗಳ ಕುರಿತು ಅನೇಕರು ಬರೆಯುತ್ತಲೇ ಇದ್ದಾರೆ. ಕನ್ನಡ ಕವಿಯತ್ರಿ ಎಲ್.ಕೆ.ಸುಮಿತ್ರಾ ‘ಗಿರಿಶಿಖರಗಳಿಗೆಲ್ಲ ನೀಲಿಯ ಹೊದಿಕೆ, ಹಸಿರು ಸೆರಗಿಗೆ ನೀಲ ಕಸೂತಿ, ಗಾಳಿಗೊಲೆಯುವ ಭೂರಮೆಯ ನೀಲಾಂಜನ, ಬೆಟ್ಟ ಕೋಡುಗಳಿಗೆಲ್ಲ ನೀಲಿಯ ಪೇಟ’ ಎಂಬ ಮಾತು ಈ ಹೂವಿನ ಚೆಲುವಿಗೆ, ವೈಯ್ಯಾರಕ್ಕೆ ಬರೆದ ಭಾಷ್ಯದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.