ಎಂ.ಎಸ್. ರಾಮಯ್ಯ ಅವರ ಜನ್ಮ ಶತಮಾನೋತ್ಸವ ವರ್ಷ ಇದು. ಕಂಟ್ರ್ಯಾಕ್ಟರ್ ಆಗಿದ್ದ ಅವರು ಬಹುಮುಖಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಅತ್ಯಪರೂಪ.

ವೃತ್ತಿ ಅನುಭವದಿಂದ ದೇಶಕ್ಕೆ ಗುಣಮಟ್ಟದ ಎಂಜಿನಿಯರ್‌ಗಳ ಅಗತ್ಯ ಇರುವುದನ್ನು ಅರಿತು ‘ಎಂಜಿನಿಯರಿಂಗ್ ಕಾಲೇಜು’ ಆರಂಭಿಸಿದರು. ಅವರ ಕುಟುಂಬದ ಸಾವಿನ ನೋವು ಬೃಹತ್ ಆಸ್ಪತ್ರೆ ತೆರೆಯಲು ಪ್ರೇರೇಪಿಸಿತು. ಕಂಟ್ರಾಕ್ಟರ್ ಆಗಿ ಅಣೆಕಟ್ಟುಗಳನ್ನು ಕಟ್ಟುತ್ತಾ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಸಮಾಜ ಕಟ್ಟುವ ಕೆಲಸದಲ್ಲೂ ತೊಡಗಿಕೊಂಡರು. ಪ್ರತಿ ಹಂತದಲ್ಲೂ ಕನಸು ಕಾಣುತ್ತಾ, ಆ ಪ್ರತಿ ಕನಸನ್ನೂ ನನಸಾಗಿಸುತ್ತಾ ಸಾಗಿದವರು ಎಂ.ಎಸ್. ರಾಮಯ್ಯ.

ರಾಮಯ್ಯ ಅವರು ಹುಟ್ಟಿದ್ದು 1922ರ ಏಪ್ರಿಲ್ 20ರಂದು, ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ. ಶೈಕ್ಷಣಿಕ ಜೀವನ ಆರಂಭವಾಗಿದ್ದು ಬೆಂಗಳೂರಿನ ಮತ್ತಿಕೆರೆಯಲ್ಲಿ. ಹಾಗಾಗಿ, ಅವರ ಹೆಸರಿನೊಂದಿಗೆ ಮತ್ತಿಕೆರೆ ಸೇರಿದೆ. ತಂದೆ ಸಂಪಂಗಪ್ಪ, ತಾಯಿ ನರಸಮ್ಮ. ಅವರ ಎಲ್ಲ ವಿದ್ಯಾಭ್ಯಾಸವೂ ಬೆಂಗಳೂರಿನಲ್ಲೇ. ಎಂ.ಎಸ್. ರಾಮಯ್ಯ ಅವರಿಗೆ ಇಬ್ಬರು ಪತ್ನಿಯರು, ಹತ್ತು ಮಕ್ಕಳು.

ತಾತ ಗಾರೆ ರಾಮಯ್ಯ ಮತ್ತು ತಂದೆ ಸಂಪಂಗಪ್ಪ ಕಟ್ಟಡ ಕಾರ್ಮಿಕರು. ಬಾಲ್ಯದಲ್ಲಿ ಬಡತನವಿದ್ದ ಕಾರಣ ಹೆಚ್ಚು ಓದಲಿಲ್ಲ. ಔಪಚಾರಿಕ ಶಿಕ್ಷಣದೊಂದಿಗೆ 14ನೇ ವಯಸ್ಸಿಗೆ ತಂದೆ–ತಾತನ ‘ಗಾರೆ’ ಕೆಲಸ ಮುಂದುವರಿಸಿದರು! ಮಧ್ಯೆ, ಕೃಷಿ ಮಾಡಿದರು, ಇಟ್ಟಿಗೆ ತಯಾರಿಸಿ, ಮಿಲಿಟರಿ ಕ್ಯಾಂಪ್‌ಗೆ ಮಾರಾಟ ಮಾಡಿದರು. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿದರು. ನಂತರ ಸಿವಿಲ್ ಕಂಟ್ರ್ಯಾಕ್ಟರ್ ಆದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಬಿಹಾರದ ಅಣೆಕಟ್ಟುಗಳ ನಿರ್ಮಾಣದಲ್ಲಿ ತೊಡಗಿದರು. ಪ್ರಧಾನಿ ಜವಾಹರಲಾಲ್ ನೆಹರೂ ಅವರ ‘ಆಧುನಿಕ ಭಾರತದ ನಿರ್ಮಾರ್ತೃಗಳ’ ತಂಡ ಸೇರಿ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡರು. ಗೈಡೂ ಇಲ್ಲದೆ, ಗಾಡ್‌ಫಾದರೂ ಇಲ್ಲದೇ ಬೆಳೆದ ರಾಮಯ್ಯ, ಬದುಕಿನಲ್ಲಿ ಎದುರಾದ ಸವಾಲುಗಳನ್ನು ದಿಟ್ಟತನದಿಂದ ಎದುರಿಸುತ್ತಾ ಕೆಲವೇ ವರ್ಷಗಳಲ್ಲಿ ಒಬ್ಬ ಯಶಸ್ವಿ ಸಿವಿಲ್ ಗುತ್ತಿಗೆದಾರರಾಗಿ ಖ್ಯಾತಿ ಗಳಿಸಿದರು.

ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾದದ್ದು...

ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡುತ್ತಾ, ಪ್ರಾಯೋಗಿಕ ಅನುಭವ ಹೊಂದಿದ್ದ ರಾಮಯ್ಯ, ದೇಶಕ್ಕೆ ಉತ್ತಮ ಎಂಜಿನಿಯರ್‌ಗಳ ಅಗತ್ಯ ಹಾಗೂ ಅಂಥ ಎಂಜಿನಿಯರ್‌ಗಳನ್ನು ತಯಾರಿಸುವ ಕಾಲೇಜಿನ ಅಗತ್ಯವನ್ನು ಅರಿತಿದ್ದರು. ಇದೇ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ವಿಧಾನಸೌಧದಲ್ಲಿ ನಡೆದ ಸಭೆಯೊಂದರಲ್ಲಿ ರಾಜ್ಯದಲ್ಲಿ ಎಂಜಿನಿಯರ್‌ಗಳ ಕೊರತೆಯನ್ನು ಪ್ರಸ್ತಾಪಿಸಿದರು. ಸಭೆಯಲ್ಲಿದ್ದ ರಾಮಯ್ಯ ಅವರಿಗೆ ‘ನೀವೇ ಏಕೆ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬಾರದು’ ಎಂದು ಕೇಳಿದರು. ಈ ಬೆಳವಣಿಗೆಯ ಬೆನ್ನಲ್ಲೇ ರಾಮಯ್ಯ ಅವರು ₹25 ಸಾವಿರ ಕಾರ್ಪಸ್ ನಿಧಿಯೊಂದಿಗೆ 1962ರಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನ ಟ್ರಸ್ಟ್ ಆರಂಭಿಸಿ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜನ್ನೂ ಪ್ರಾರಂಭಿಸಿದರು. ಅಷ್ಟೇ ಅಲ್ಲ, ಎಂಜಿನಿಯರಿಂಗ್ ಪದವಿ ಮುಗಿಸಿದವರಿಗೆ ಸಮೀಪದಲ್ಲೇ ಉದ್ಯೋಗವೂ ಸಿಗಬೇಕೆಂಬ ಉದ್ದೇಶದೊಂದಿಗೆ ಕಾಲೇಜು ಆಸುಪಾಸಿನಲ್ಲೇ ‘ರಾಮಯ್ಯ ಇಂಡಸ್ಟ್ರಿಯಲ್ ಲೇಔಟ್’ ಮಾಡಿ, ವಿವಿಧ ಕೈಗಾರಿಕೆಗಳಿಗೆ ಅವಕಾಶ ನೀಡಿದರು. ಇದು ರಾಮಯ್ಯ ಅವರಲ್ಲಿದ್ದ ದೂರದೃಷ್ಟಿಗೊಂದು ಉದಾಹರಣೆ.

ಅವರ ಕುಟುಂಬದಲ್ಲಿ ಕೆಲವು ದುರದೃಷ್ಟಕರ ಸಾವುಗಳಾದವು. ಇದರಿಂದ ಆಸ್ಪತ್ರೆ ಆರಂಭಿಸಬೇಕು ಎನಿಸಿತು. ಪರಿಣಾಮವಾಗಿ 1979ರಲ್ಲಿ, ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡಿತು. ಇದಾದ ನಂತರ, ವೈದ್ಯಕೀಯ, ದಂತ ವೈದ್ಯ, ನರ್ಸಿಂಗ್, ಫಾರ್ಮಸಿ, ಫಿಸಿಯೋಥೆರಪಿ, ಆಯುರ್ವೇದ, ಆರೋಗ್ಯ ರಕ್ಷಣೆ, ಕ್ಲಿನಿಕಲ್ ಸಂಶೋಧನೆ, ಸಾರ್ವಜನಿಕ ನೀತಿ, ಕಾನೂನು ಮತ್ತು ನಿರ್ವಹಣೆಯ ಕ್ಷೇತ್ರಗಳಲ್ಲಿ ಶಿಕ್ಷಣ ಸಂಸ್ಥೆಗಳ ಬೃಹತ್ ವಿದ್ಯಾ ಸಂಸ್ಥೆಗಳ ಸಂಕೀರ್ಣವನ್ನೇ ಆರಂಭಿಸಿದರು. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಪ್ರಸ್ತುತ ಮೂರು ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ದೊರೆಯುತ್ತಿದೆ ಮತ್ತು ವರ್ಷಕ್ಕೆ 11,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ.

ಪತ್ರಿಕೆ, ಸಾಹಿತ್ಯ ಪ್ರೀತಿ

ರಾಮಯ್ಯ ಅವರಿಗೆ ಸಾಹಿತ್ಯ, ಕಲೆ, ಸಂಸ್ಕೃತಿ, ಪತ್ರಿಕೋದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಇತ್ತು. ಎಂಜಿನಿಯರಿಂಗ್ ಕಾಲೇಜು ಆರಂಭದ ನಡುವೆಯೇ, 1950ರ ದಶಕದಲ್ಲಿ ‘ಗೋಕುಲ’ ಎಂಬ ಕನ್ನಡ ವಾರಪತ್ರಿಕೆ ಮತ್ತು ‘ಕೈಲಾಸ‘ ಎಂಬ ಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಅಂದಿನ ಪತ್ರಿಕಾರಂಗದ ದಿಗ್ಗಜರಾಗಿದ್ದ ಖಾದ್ರಿ ಶಾಮಣ್ಣ ಮತ್ತು ಸೀತಾರಾಮ ಶಾಸ್ತ್ರಿ ಅವರನ್ನು ಕ್ರಮವಾಗಿ ‘ಗೋಕುಲ‘ ಮತ್ತು ‘ಕೈಲಾಸ’ ಪತ್ರಿಕೆಗಳ ಸಂಪಾದಕರನ್ನಾಗಿಸಿದರು. ಸಾಹಿತಿಗಳಾಗಿದ್ದ ದ.ರಾ. ಬೇಂದ್ರೆ, ಜಿ.ಪಿ.ರಾಜರತ್ನಂ, ಚೆನ್ನವೀರ ಕಣವಿ, ದಾಶರಥಿ ದೀಕ್ಷಿತ್, ನವರತ್ನರಾಮ್ ಮತ್ತಿತರರು ರಾಮಯ್ಯನವರ ಪತ್ರಿಕೆಗಳಿಗೆ ಲೇಖನ ಬರೆಯಲು ಆರಂಭಿಸಿದರು. ಪ್ರಕಟಣೆಗಳು ಹೆಚ್ಚಿನ ವಿಶ್ವಾಸಾರ್ಹತೆ ಗಳಿಸಿದವು.

ವಿದ್ವಾಂಸರು, ಸಾಹಿತಿಗಳು, ಮಾಧ್ಯಮದವರ ಬಗ್ಗೆ ಅಪಾರ ಗೌರವಿಟ್ಟುಕೊಂಡಿದ್ದರು ರಾಮಯ್ಯ.
ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು ಅವರಂತಹ ರಾಜಕೀಯ ದಿಗ್ಗಜರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಒಮ್ಮೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ರಾಮಯ್ಯ ಅವರನ್ನು ಖ್ಯಾತ ಪತ್ರಕರ್ತ, ’ತಾಯಿನಾಡು’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಪಿ.ಆರ್.ರಾಮಯ್ಯ ಅವರ ಬಳಿ ಕರೆದೊಯ್ದರು. ಹೀಗೇ ಚರ್ಚೆಯ ನಡುವೆ, ಪತ್ರಿಕೆ ಆರ್ಥಿಕ ಸಂಕಷ್ಟದಲ್ಲಿರುವ ವಿಷಯ ಪ್ರಸ್ತಾಪವಾಯಿತು. ‘ನೀವೇ ಏಕೆ ಪತ್ರಿಕೆ ವಹಿಸಿಕೊಂಡು ನಡೆಸಬಾರದು’ ಎಂದು ಕೆಂಗಲ್ ಹನುಮಂತಯ್ಯ ಅವರು ರಾಮಯ್ಯ ಅವರನ್ನು ಕೇಳಿದರು. ಆ ಕ್ಷಣಕ್ಕೆ ದಿಗ್ಭ್ರಮೆಗೊಂಡರೂ, ಕೆಂಗಲ್ ಅವರ ಮಾತನ್ನು ತಿರಸ್ಕರಿಸದೇ, ಪತ್ರಿಕೆ ಜವಾಬ್ದಾರಿ ವಹಿಸಿಕೊಂಡರು. ಪ್ರಕಟಣೆ ಮೇಲಿದ್ದ ಎಲ್ಲ ಸಾಲಗಳನ್ನೂ ತೀರಿಸಿದರು. ಜ.1,1957ರಂದು ‘ತಾಯಿನಾಡು’ ಪತ್ರಿಕೆಯ ಮಾಲೀಕರಾಗಿ, ಪತ್ರಿಕೋದ್ಯಮಿಯಾದರು.

ರಾಮಯ್ಯ ಅವರ ಸಾಹಿತ್ಯ ಪ್ರೀತಿ, ಪತ್ರಿಕೆಗಳ ಜೊತೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವವರೆಗೂ ವಿಸ್ತರಿಸಿತ್ತು. ತಮ್ಮ ಧಾರ್ಮಿಕ ಸೇವಾ ತಾಣ ಚಿಂತಾಮಣಿ ತಾಲ್ಲೂಕು ಕೈವಾರದಲ್ಲಿ 1990ರಲ್ಲಿ ಕೈವಾರದಲ್ಲಿ ನಡೆದ 54ನೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದರು. ಅವರೇ ಸತ್ಕಾರಕೂಟ ಸಮಿತಿಯ ಅಧ್ಯಕ್ಷರಾಗಿದ್ದರು. ಸಮ್ಮೇಳನಕ್ಕೆ 88ರ ಹರೆಯದ ಎ.ಎನ್. ಮೂರ್ತಿರಾಯರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಈ ಸಮ್ಮೇಳನ ದೊಡ್ಡ ಯಶಸ್ಸು ಕಂಡಿತು. ಕೈವಾರ ತಾತಯ್ಯ ಅವರ ವಿಚಾರಗಳನ್ನು ವಿಶ್ವದಾದ್ಯಂತ ಪಸರಿಸಲು ಈ ಸಮ್ಮೇಳನ ನೆರವಾಯಿತು.

ಕೈವಾರ ಕ್ಷೇತ್ರದ ರೂವಾರಿ

ಧಾರ್ಮಿಕ, ಅಧ್ಯಾತ್ಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ರಾಮಯ್ಯ ಅವರು, ಕೈವಾರ ಕ್ಷೇತ್ರವನ್ನು ಪ್ರಸಿದ್ಧ ಅಧ್ಯಾತ್ಮ ಪ್ರವಾಸಿ ತಾಣವನ್ನಾಗಿಸಿದ್ದಾರೆ. ಕಾಲಜ್ಞಾನಿ ತಾತಯ್ಯನವರ ವಿಚಾರಗಳನ್ನು ಎಲ್ಲೆಡೆಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಇವತ್ತಿಗೂ ಕೈವಾರದಲ್ಲಿ ಅವರ ಧಾರ್ಮಿಕ ಸಂಸ್ಥೆಗಳ ಪೋಷಣಾ ಕಾರ್ಯಗಳೂ ಹೆಸರಾಗಿವೆ. ರಾಮಯ್ಯ ಅವರ ಪುತ್ರರು, ತಂದೆಯವರ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸೇವಾ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.

ರಾಮಯ್ಯ ಅವರು ಓದಿದ್ದು ಕಡಿಮೆಯಾದರೂ, ಸಾಮಾಜಿಕ ಸೇವೆಯೊಂದಿಗೆ ಸಮಾಜದ ವಿವಿಧ ಸ್ತರಗಳಿಗೆ ಕೊಡುಗೆ ನೀಡಿದ್ದಾರೆ. ವಿವಿಧ ಕ್ಷೇತ್ರಗಳ ಸೇವೆಯನ್ನು ಗುರುತಿಸಿ, ಹಲವು ವಿಶ್ವವಿದ್ಯಾಲಯಗಳು ಎಂ. ಎಸ್. ರಾಮಯ್ಯನವರಿಗೆ ಡಾಕ್ಟರೇಟ್ ನೀಡಿದ್ದವು. ಅನೇಕ ಪ್ರಶಸ್ತಿಗಳೂ ಸಂದಿದ್ದವು. ದಣಿವರಿಯದೇ ಸೇವೆಗೈದ ರಾಮಯ್ಯನವರು, 1997ರ ಡಿಸೆಂಬರ್ 25ರಂದು ನಿಧನರಾದರು.

ಇದು ಎಂ.ಎಸ್. ರಾಮಯ್ಯನವರ ಜನ್ಮಶತಮಾನೋತ್ಸವ ವರ್ಷ. ಅವರಿಲ್ಲದ ಈ ಹೊತ್ತಿನಲ್ಲಿ, ಸಮಾಜಕ್ಕೆ ಕೊಟ್ಟು ಹೋಗಿರುವ ಕೊಡುಗೆಗಳು, ಅವರನ್ನು ಜೀವಂತವಾಗಿಟ್ಟಿವೆ.

(ಪೂರಕ ಮಾಹಿತಿ: ರಾಮಕೃಷ್ಣ ಉಪಾಧ್ಯ ಅವರ ಎಂ.ಎಸ್. ರಾಮಯ್ಯ ಆತ್ಮಕಥೆ ‘ರಾಮಯ್ಯಾನಮ್’)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.