ಜಿ.ಟಿ. ನಾರಾಯಣ ರಾವ್ -ನನ್ನ ಅಪ್ಪ. ಲೋಕರೂಢಿಗಳಲ್ಲಿ ಪಪ್ಪ, ಡ್ಯಾಡಿ, ಅಣ್ಣ, ಬಾಬ, ಮಾವಾದಿಗಳಿದ್ದಂತೆ ನಿಜದಲ್ಲಿ ನಾನು ನೇರ ಏನೂ ಸಂಬೋಧಿಸದ ತಂದೆ. ಅವರ ದೇಹಾಂತ್ಯದ ಸ್ಮೃತಿ ದಿನಕ್ಕೆ (27.06.2008) ಆರು ದಿನ ಮೊದಲೆ ಬಂದ ‘ಅಪ್ಪಂದಿರ ದಿನ’ಕ್ಕೆ ನನ್ನ ನೆನಪಿನ ಸಣ್ಣ ಕಲಕು.

ಹುಟ್ಟಿನ ಆಕಸ್ಮಿಕದೊಡನೇ ಹೆಚ್ಚಿನೆಲ್ಲರ ತಂದೆ, ತಾಯಿಯಾದಿ ಅನೇಕ ಭೌತಿಕ ಮತ್ತು ಭಾವನಾತ್ಮಕ ಸ್ಥಾನಗಳು ತಗುಲಿದಂತೆ, ಜವಾಬ್ದಾರಿಗಳೂ ನಿಶ್ಚಯವಾಗಿರುತ್ತವೆ. ಅವನ್ನು ಮೀರಿ, ನನ್ನ ವ್ಯಕ್ತಿತ್ವವನ್ನು ರೂಪಿಸಿದ ಪ್ರಭಾವಗಳ ಕುರಿತು ಈಚೆಗೆ ಫೇಸ್ ಬುಕ್ಕಿನಲ್ಲಿ ಚಿಂತನೆ ನಡೆಸಿದ್ದೆ. ನಲವತ್ತೆಂಟು ಕಂತುಗಳ ಕೊನೆಯಲ್ಲಿ, ನಾನು ‘ಮೀರಿದವು’ ಅಥವಾ ಸ್ವತಂತ್ರವೆಂದು ನಂಬಿದ ಪ್ರಭಾವಗಳೂ ಬಹುತೇಕ ‘ಮೂಲ ಆಕಸ್ಮಿಕ’ದ ಭಾಗವೇ ಆಗಿರುತ್ತದೆ ಎಂದರಿವಾಯ್ತು. ಅಂಥಾ ತಂದೆತನವನ್ನು ಬಿಟ್ಟೂ ತಂದೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ತಂದೆ ತನ್ನ ಸ್ವಭಾವವನ್ನು ‘ಧುಮುಕಿ ಆಳ ನೋಡುವ ಪ್ರವೃತ್ತಿ’ ಎಂದೇ ಹೇಳಿಕೊಳ್ಳುವುದಿತ್ತು. ಅದು ಮಾತಿನ ಚಂದಕ್ಕೆ ಮಾತ್ರ ಹೇಳಿದ್ದೆನ್ನುವಂತೆ ಅವರ ಓದು, ಲೋಕಾನುಭವ, ಶಿಸ್ತು, ಶ್ರಮಗಳಿಂದ ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಿದ್ದರು. ಅಂಥಲ್ಲಿ ಆಕಸ್ಮಿಕವಾಗಿಯೇ ಆದರೂ ಎದುರು ಬಿದ್ದವನಿಂದಲೂ ಹೆಚ್ಚಿನ ಸಲ ಮೆಚ್ಚುಗೆಯನ್ನೂ ಗಳಿಸುತ್ತಿದ್ದರು. ಇದರಲ್ಲಿ ನನ್ನ ಮಟ್ಟಿಗೆ ಮಹತ್ವದ್ದಾಗಿ ಕಾಣುವುದು - ತಂದೆಯೇ ಕಟ್ಟಿ, ಉಚ್ಛ್ರಾಯಕ್ಕೆ ಮುಟ್ಟಿಸಿದ್ದ ಮಡಿಕೇರಿ ಕಾಲೇಜ್ ಸಹಕಾರಿ ಸಂಘ (ಸುಮಾರು 1952ರಿಂದ 1962, ನೋಡಿ ಅವರದೇ ಪುಸ್ತಕ - ಸವಾಲನ್ನು ಎದುರಿಸುವ ಛಲ). ಅದು ನನ್ನ ಬಾಲ ಮನಸ್ಸನ್ನು ತುಂಬ ಪ್ರಭಾವಿಸಿದ್ದಕ್ಕೇ ಇರಬೇಕು, ಮುಂದೊಂದು ದಿನ ನಾನು ಪುಸ್ತಕೋದ್ಯಮಿಯಾಗಿ ಗಟ್ಟಿಯಾದೆ.

ಕೆಲವು ಜೀವನವೃತ್ತಾಂತಗಳಲ್ಲಿ, ಹಿರಿಯ ಕಿರಿಯನನ್ನು (ತಂದೆ ಮಗ) ಕೂರಿಸಿಕೊಂಡು ‘ಮಾಡು, ಮಾಣ್ (ಮಾಡದಿರು)’ಗಳನ್ನು ಉಪದೇಶಿಸುವುದು ಕಾಣುತ್ತೇವೆ. ಆದರೆ ಎಳವೆ ಬಿಟ್ಟು, ವಿದ್ಯಾರ್ಥಿ ದಿನಗಳಲ್ಲೂ ನಾನು ತಂದೆಯೊಡನೆ ನೇರ ಮುಖಕೊಟ್ಟು ಮಾತಾಡಿದ್ದೇ ಇಲ್ಲ. (ತಮ್ಮಂದಿರಿಗಾಗುವಾಗ ತಂದೆ ಪಳಗಿದ್ದರು!) ‘ಆಟೋಟಗಳು ಸಮಯದಂಡಕ್ಕೆ, ಕಲೆಗಳು ಹವ್ಯಾಸಕ್ಕೆ, ಓದೊಂದೇ ವಿದ್ಯೆ’ ಎಂದು ಅವರು ಖಚಿತವಾಗಿ ಹೇಳುತ್ತಿದ್ದ ದಿನಗಳವು. ಅಂದ ಮಾತ್ರಕ್ಕೆ ಓದು ಮತ್ತು ವೃತ್ತಿ ಆಯ್ಕೆಯಲ್ಲಿ ‘ಮುಂದೆ ನೀನು ಇಂಥಾದ್ದಾಗು’ ಎಂದು ತನ್ನ ಮಕ್ಕಳಿಗೆ ಹೇರುವುದಿರಲಿ, ಹೇಳಿದ್ದೂ ಇಲ್ಲ.

ಕಲಿಕೆ ಮತ್ತು ವೃತ್ತಿ ಲಕ್ಷ್ಯಗಳಲ್ಲಿ ನಮ್ಮ ಆಯ್ಕೆಯನ್ನು ಪೂರ್ಣ ಬೆಂಬಲಿಸಿದ್ದರು, ಎಡವಿದಾಗ ಆಸರೆಯನ್ನೂ ಕೊಟ್ಟಿದ್ದರು. ನಮ್ಮ ಆಯ್ಕೆಯ ಮೌಲ್ಯಮಾಪನವನ್ನು ಎಂದೂ ಅಯಾಚಿತವಾಗಿ (ಸ್ವಂತ ಅಭಿಪ್ರಾಯ) ವಿಮರ್ಶೆ ಮಾಡಿದ್ದೇ ಇಲ್ಲ. ನಾನು ಸೈನ್ಯಾಧಿಕಾರಿ, ಪತ್ರಿಕೋದ್ಯಮಿ, ಪೊಲೀಸ್ ಅಧಿಕಾರಿ, ಕೊನೆಗೆ ಪುಸ್ತಕೋದ್ಯಮಿ ಎಂದು ಕಾಲಕ್ಕೊಂದು ಕೋಲ ಕಟ್ಟಿದಾಗಲೂ ಪ್ರಶ್ನಿಸಲಿಲ್ಲ. ಪದವಿಪೂರ್ವ ತರಗತಿಯಲ್ಲಿ ಅನುತ್ತೀರ್ಣನಾದಾಗ, ಕಲಿಕೆಯ ಉದ್ದಕ್ಕೂ ಪರೋಕ್ಷವಾಗಿ ಉಡಾಫೆಯನ್ನೇ ಸಾಧಿಸಿದರೂ ಒರೆಗೆ ಹಚ್ಚಲಿಲ್ಲ, ಭಂಗಿಸಲಿಲ್ಲ. ನಿಜಕ್ಕೂ ಪುಸ್ತಕದಂಗಡಿ ತೆರೆದಾಗ, ತಿಂಗಳ ಕಾಲ ರಜೆ ಮಾಡಿ ಮಂಗಳೂರಿಗೆ ಬಂದು, ಎಲ್ಲಾ ಪ್ರಾಥಮಿಕ ಕೆಲಸಗಳನ್ನೂ ಪರಿಷ್ಕಾರವಾಗಿ ಮಾಡಿ ಕೊಟ್ಟಿದ್ದರು. ನಾನು ಊರು ತಿರುಗುವ ಉತ್ಸಾಹದಲ್ಲಿ ಮೂರು ಬಾರಿ ದೀರ್ಘ ಬಿಡುವು ಬಯಸಿದಾಗಲೂ ತಂದೆ ತಮ್ಮ ಕೆಲಸಗಳನ್ನು ಪೂರ್ಣ ಬದಿಗಿಟ್ಟು ಬಂದು, ಅಂಗಡಿಯನ್ನು ನನಗಿಂತಲೂ ಹೆಚ್ಚಿನ ಸಾಮರ್ಥ್ಯದಲ್ಲೇ ನಡೆಸಿಕೊಟ್ಟಿದ್ದರು.

ಎನ್.ಸಿ.ಸಿ ಆಫೀಸರ್ ಆಗಿ ತಂದೆ ಹದಿನೇಳು ವರ್ಷಗಳ ಸೇವೆ ಸಲ್ಲಿಸಿದರು. ಅನುಕ್ತ ರಕ್ಷಣೆಯ ಬಿಸುಪಿನೊಡನೆ ತರಬೇತಿಯ ಆಳ, ಶಿಸ್ತಿನ ಬಿಗಿ, ಕೊಡುವಲ್ಲಿ ಇವರೆಂದೂ ಹಿಂದುಳಿಯಲಿಲ್ಲ. ಪ್ರತಿಯಾಗಿ ಅವರಿಂದ ಶಿಕ್ಷೆಗೊಳಗಾದವರೂ ಹಿಂದೆ ಬಿಟ್ಟು ಮೆಚ್ಚಿದ್ದು ಧಾರಾಳ ಕೇಳಿದ್ದೇನೆ. ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ ಕಡ್ಡಾಯವಿದ್ದ ಕಾಲದಲ್ಲಿ ತಂದೆ ಅಧಿಕಾರಿಯಾಗಿ ದುಡಿದವರು. ಎಷ್ಟೋ ವಿದೇಶಗಳಲ್ಲಿ ಪ್ರಬುದ್ಧರಿಗೆ ಸೀಮಿತ ಅವಧಿಯ ಸೈನ್ಯ-ಸೇವೆ ಕಡ್ಡಾಯವಿದ್ದಂತೇ ಆ ಕಾಲದಲ್ಲಿ ಭಾರತದಲ್ಲಿ ಎನ್.ಸಿ.ಸಿಯೂ ರೂಪುಗೊಂಡಿತ್ತು. ತಂದೆ ಮೂಲ ಆಶಯಕ್ಕೆ (ಛಾಯಾ ಸೈನ್ಯ) ಸ್ವಲ್ಪವೂ ಭಂಗ ಬಾರದಂತೆ ನೋಡಿಕೊಂಡರು, ಜತೆಗೇ ತರುಣ ಮನಸ್ಸುಗಳು ‘ದೊಡ್ಡ ಬಂದೂಕ’ಷ್ಟೇ ಆಗದಂತೆ ವಿಶೇಷ ಕಾಳಜಿಯನ್ನೂ ವಹಿಸಿದರು. ಅವಕ್ಕೆಲ್ಲ ಮಡಿಕೇರಿಯಲ್ಲಿದ್ದಾಗ ಭಾಗಮಂಡಲ-ತಲಕಾವೇರಿಗೆ ಕಡಿದ ರಸ್ತೆ, ಬಳ್ಳಾರಿಯ ಕೇಂದ್ರ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದಂದು ಎನ್.ಸಿ.ಸಿ ವಿದ್ಯಾರ್ಥಿಗಳ ಮೂಲಕ ಕೊಟ್ಟ ‘ಮರಸು ಯುದ್ಧ ಪ್ರದರ್ಶನ’ (ambush), ಬೆಂಗಳೂರಿನ ವಿಶೇಷ ದಳ ಮತ್ತು ಕಳಶಪ್ರಾಯವಾಗಿ ಕುದುರೆಮುಖ ಚಾರಣ ಕೆಲವು ನಿದರ್ಶನಗಳು.

ವೃತ್ತಿ ಗಣಿತಾಧ್ಯಾಪಕರಾದರೂ ಪರೋಕ್ಷವಾಗಿ ತಗುಲಿಸಿಕೊಂಡ ದೊಡ್ಡ ವಿಷಯ ಆಕಾಶ ವೀಕ್ಷಣೆ. ಆ ಕುರಿತು ಇವರಷ್ಟು ಲೇಖನ, ಪುಸ್ತಕಗಳನ್ನು ಕನ್ನಡದಲ್ಲಿ ಕೊಟ್ಟವರಿಲ್ಲ. ಅವೆಲ್ಲವನ್ನೂ ಮೀರಿಸುವಂತೆ (ದೂರದರ್ಶನ ಇಲ್ಲದ ಕಾಲದಲ್ಲಿ) ಆಕಾಶವಾಣಿಯ ಮೈಸೂರು, ಮಂಗಳೂರು ನಿಲಯಗಳಿಂದ ರಾತ್ರಿಗಳಲ್ಲಿ ಇವರು ನೇರ ಕೊಟ್ಟ ನಕ್ಷತ್ರ ವೀಕ್ಷಕ ವಿವರಣೆಗಳಂತೂ ರಾಜ್ಯಾದ್ಯಂತ ಪ್ರಸಾರವಾಗುತ್ತಿದ್ದವು, ಮನೆ ಮಾತಾಗಿದ್ದವು. ವಿವಿಧ ಕಾಲೇಜು, ಸಂಘಗಳು ಇವರ ಸಂಗದಲ್ಲಿ ಅಹೋರಾತ್ರಿ ನಡೆಸಿದ ಆಕಾಶ ವೀಕ್ಷಣೆಗಳು ಅದೆಷ್ಟು ‘ಮಾನವದೀಪ’ಗಳಿಗೆ ಬೆಳಕಿನ ಕುಡಿ ಮುಟ್ಟಿಸಿತೆಂದು ಹೇಳಿ ಮುಗಿಯುವಂತದ್ದಲ್ಲ.

ತಂದೆ (ಆತ್ಮಕಥೆ - ಮುಗಿಯದ ಪಯಣದಲ್ಲಿ ಹೇಳಿಕೊಂಡಂತೆ) ಬಾಲ್ಯವನ್ನು ಗಾನಲೋಲನಾಗಿಯೇ ಕಂಡವರು. ಮದ್ರಾಸಿನಲ್ಲಿ ಕಳೆದ ಕಾಲೇಜು ದಿನಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಘನ ರಸಿಕನಾಗಿಯೇ ರೂಪುಗೊಂಡರು. ಮನೆಗಷ್ಟೇ ಸೀಮಿತಗೊಂಡ ಇವರ ಸಿಳ್ಳೆಗಾನಗಳು ಪರಿವಾರವನ್ನೆಲ್ಲಾ ಗಾಢವಾಗಿಯೇ ಪ್ರಭಾವಿಸಿತ್ತು. ಅಧ್ಯಾಪಕನ ಶಿಸ್ತಿನ ಟೈ ಕೋಟಿನಲ್ಲೇ ಇವರು ಮಡಿಕೇರಿ ಸರಕಾರೀ ಕಾಲೇಜಿನ ವೇದಿಕೆಯಲ್ಲಿ ಚಕ್ಕಳಬಕ್ಕಳ ಹಾಕಿ ಕುಳಿತು ಪಿಟೀಲು ನುಡಿಸುವ ಪಟ, ಇಂದು ನನ್ನ ಮನಃಪಟಲದಲ್ಲಿ ಶಾಶ್ವತವಾಗಿಯೇ ಉಳಿದಿದೆ. ಮಡಿಕೇರಿಯಲ್ಲಿದ್ದಾಗ ತಂದೆ ಒಂದು ಮೃದಂಗವನ್ನು ಖರೀದಿಸಿದ್ದರು. ಅವರು ಬಿಡುವು ಮಾಡಿಕೊಂಡು "ಸೊಗಸುಗಾ ಮೃದಂಗ ಗಾನಮೂ..." ಎಂದು ಮೃದಂಗಕ್ಕೆ ಹಿಂಸೆ ಕೊಡಲು ಕುಳಿತರೆ, ಎದುರು ತಂಗಿ ಸರಸ್ವತಿ, ತಮ್ಮ ದಿವಾಕರರು ಗಟ್ಟಿಯಾಗಿ ತಾಳ ತಟ್ಟಲು ಕೂರಲೇಬೇಕಾಗುತ್ತಿತ್ತು. (ನಾನು ಆಟಕ್ಕಿರುತ್ತಿದ್ದೆ, ಲೆಕ್ಕಕ್ಕಲ್ಲ!) ತಂದೆಯ ಸಂಗೀತ ಪ್ರೇಮ ವ್ಯವಸ್ಥಿತವಾಗುವಲ್ಲಿ ಪ್ರಾಯೋಗಿಕ ಹೆಜ್ಜೆ ಮೈಸೂರಿನ ‘ಸಹೃದಯ ಬಳಗ’ವಾದರೆ, ದೃಢವಾದ ಹೆಜ್ಜೆ ‘ಗಾನಭಾರತೀ, ಮೈಸೂರು.’

ಅಕ್ಷರ ಲೋಕದಲ್ಲಿ ಕವಿ, ಕತೆಗಾರ ಎಂದು ತಂದೆ ಮೊದಲ ಕಸರತ್ತುಗಳನ್ನು ಮಾಡಿದರೂ ಗಟ್ಟಿ ನಿಂತದ್ದು ಕನ್ನಡದ ವಿಜ್ಞಾನ ಸಾಹಿತ್ಯ ನಿರ್ಮಾಪಕನಾಗಿ. ಪಾವೆಂ ಆಚಾರ್ಯರ ಪ್ರಭಾವವನ್ನು ತಂದೆ ಸ್ಮರಿಸದ ಅವಕಾಶಗಳಿಲ್ಲ. ಬೆಳವಣಿಗೆಯ ಬಹು ಮಹಡಿಗೇರುತ್ತ ಶಿವರಾಮ ಕಾರಂತರ ಅಂತಸ್ತಿನಲ್ಲಿ ಇವರು ಕೆಲವು ಕಾಲ ತಂಗಿದ್ದಿತ್ತು. ಆದರೆ ಬೇಗನೆ ವಸ್ತುನಿಷ್ಠತೆಯಲ್ಲಿ ಅವರಷ್ಟೇ ಖಡಕ್ಕಾಗಿ ಕಾರಂತರನ್ನೇ ತಿರಸ್ಕರಿಸಿ ತಂದೆ ಮೇಲೇರಿದರು. ಕಾರಂತ ವ್ಯಕ್ತಿತ್ವ, ಅವರ ಬರವಣಿಗೆಯ ಹರಹುಗಳನ್ನೆಲ್ಲ ಅಪಾರ ಗೌರವಿಸಿದರೂ ಅವರ ವಿಜ್ಞಾನ ಸಾಹಿತ್ಯವನ್ನು ಸಕಾರಣವಾಗಿ ಒಪ್ಪಿಕೊಳ್ಳಲಿಲ್ಲ.

"ನಾನು ನುಡಿದಂತೆ ನಡೆ, ಮಾಡಿದಂತಲ್ಲ" ಎನ್ನುವವರು ಧಾರಾಳ ಸಿಗುತ್ತಾರೆ. ಆದರೆ ತಂದೆ, ನನಗೆ ನೇರ ನುಡಿದದ್ದು ಕಡಿಮೆ, ಲೋಕಕ್ಕೇ ಕಾಣುವಂತೆ ಮಾಡಿದ್ದು ಅಪಾರ. ಅದರಲ್ಲೂ ನನಗೆ ಧಾರಾಳ ದಕ್ಕಿದ್ದಾರೆ ಎಂದು ಸಂತೋಷದಿಂದ ಹೇಳಬಲ್ಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.