ಲಾಕ್‌ಡೌನ್, ವರ್ಕ್ ಫ್ರಂ ಹೋಂ ನಡುವೆ ಸಹಭಾಗಿತ್ವದ ಸೂತ್ರ ಕಂಡುಕೊಂಡಿರುವ ಹೊಸ ಕಾಲದ ಅಪ್ಪಂದಿರು ಬದಲಾವಣೆಗೆ ತೆರೆದುಕೊಂಡಿದ್ದಾರೆ. ಕೋವಿಡ್ ಕಲಿಸಿದ ಪಾಠಗಳು ಮಕ್ಕಳ ಜೊತೆಗೆ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಿವೆ.

ಕೋವಿಡ್–19... ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪರಿಣಾಮ ಬೀರಿದ್ದು ಹಲವು ರೀತಿ. ಕಷ್ಟ–ಸಂಕಷ್ಟಗಳ ನಡುವೆಯೇ ಬದುಕಿನ ಚಿತ್ರಣ ಬದಲಾಗಿರುವ ಈ ದಿನಮಾನಗಳಲ್ಲಿ ಸದ್ದಿಲ್ಲದೇ ಅಪ್ಪನ ಪಾತ್ರವೂ ಬದಲಾಗುತ್ತಿದೆ.

ಲಾಕ್‌ಡೌನ್, ವರ್ಕ್ ಫ್ರಂ ಹೋಂ ನಡುವೆ ಸಹಭಾಗಿತ್ವದ ಸೂತ್ರ ಕಂಡುಕೊಂಡಿರುವ ಹೊಸ ಕಾಲದ ಅಪ್ಪಂದಿರು ಹಲವು ನಿಟ್ಟಿನಲ್ಲಿ ತಮ್ಮನ್ನು ಬದಲಾವಣೆಗೆ ತೆರೆದುಕೊಂಡಿದ್ದಾರೆ. ಕೋವಿಡ್ ಕಲಿಸಿದ ಪಾಠಗಳು ಹೆಂಡತಿ ಮತ್ತು ಮಕ್ಕಳ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಸದೃಢಗೊಳಿಸಿವೆ.

ಹೆಣ್ಣಷ್ಟೇ ಮಾಡಬಹುದಾದ ಕೆಲಸಗಳಿವು ಎಂದು ಭಾವಿಸಲಾದ ಕೆಲಸಗಳನ್ನು ನಿಧಾನಕ್ಕೆ ಆತನೂ ಹಂಚಿಕೊಂಡು ಮಾಡುತ್ತಿದ್ದಾನೆ. ಪುಟ್ಟ ಮಗಳ ಡೈಪರ್ ಬದಲಾಯಿಸುವುದರಿಂದ ಹಿಡಿದು ಈಚೆಗಷ್ಟೇ ಮೊದಲ ಋತುಸ್ರಾವ ಶುರುವಾದ ಮಗಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ನ ಮಹತ್ವ ತಿಳಿಸುವಷ್ಟರ ಮಟ್ಟಿಗೆ ಅಪ್ಪ ಬದಲಾಗಿದ್ದಾನೆ.

ಹೊರಗೆ ದುಡಿದು ದಣಿದು ಬರುತ್ತಿದ್ದ ಅಪ್ಪನೀಗ ಮನೆಯಲ್ಲೇ ಕಚೇರಿಯ ಕೆಲಸ ಮಾಡುತ್ತಲೇ ಮಗಳನ್ನು ಅನ್‌ಲೈನ್ ಕ್ಲಾಸ್‌ಗೆ ಅಣಿಗೊಳಿಸುತ್ತಾನೆ. ಇಷ್ಟು ವರ್ಷಗಳ ಕಾಲ ನಿತ್ಯವೂ ಬೇಗ ಎದ್ದು ಅಡುಗೆ, ಮನೆಕೆಲಸ ಮಾಡುತ್ತಿದ್ದ ಹೆಂಡತಿಯ ದೈನಂದಿನ ಕೆಲಸಕ್ಕೆ ಸಹಾಯಕ್ಕೆ ನಿಲ್ಲುತ್ತಿದ್ದಾನೆ. ದುಡಿಮೆ ಇರಲಿ ಬಿಡಲಿ ಅಪ್ಪನಾಗಿ ತನ್ನ ಜವಾಬ್ದಾರಿಯನ್ನು ಸದ್ದಿಲ್ಲದೇ ನಿಭಾಯಿಸುತ್ತಿದ್ದಾನೆ.

ಅಪ್ಪನ ಜವಾಬ್ದಾರಿಯೂ ಕರ್ತವ್ಯದ ಕರೆಯೂ
ಮೈಮೇಲೆ ಬಿಸಿನೀರು ಬಿದ್ದು ತಮ್ಮ ಎರಡು ವರ್ಷದ ಮಗುವನ್ನು ಚಾಲಕ ಮುಬಾರಕ್ ಅವರು ಆಸ್ಪತ್ರೆಗೆ ದಾಖಲಿಸಿದ್ದರು. ಇತ್ತ ಮಗುವಿನ ಸ್ಥಿತಿ ಗಂಭೀರವಾಗಿದ್ದ ನಡುವೆಯೇ ಅತ್ತ ಕೋವಿಡ್ ರೋಗಿಯೊಬ್ಬರಿಂದ ಕರೆ. ಕರ್ತವ್ಯದ ಕರೆಗೆ ಓಗೊಟ್ಟಿದ್ದ ಮುಬಾರಕ್ ಆ್ಯಂಬುಲೆನ್ಸ್‌ನಲ್ಲಿ ಆ ರೋಗಿಯನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಬಂದ ಮರುದಿನವೇ ಅವರ ಮಗುವಿನ ಪ್ರಾಣ ಹೋಗಿತ್ತು... ಅತ್ತ ಅಪ್ಪನಾಗಿಯೂ ಜವಾಬ್ದಾರಿ ನಿರ್ವಹಿಸಿ ಇತ್ತ ಆ್ಯಂಬುಲೆನ್ಸ್ ಚಾಲಕನಾಗಿಯೂ ಕರ್ತವ್ಯ ಪ್ರಜ್ಞೆ ಮೆರೆದ ಮುಬಾರಕ್ ಕೋವಿಡ್ ಕಾಲದಲ್ಲಿ ಎರಡು ತಿಂಗಳಿನಿಂದ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸುವ ಮೂಲಕ ನಿಜ ಜೀವನದ ಹೀರೋ ಆಗಿದ್ದಾರೆ.

ಬಾಣಂತನದ ಕಷ್ಟ–ಸುಖ
‘ಕೋವಿಡ್ ಕಾಲದಲ್ಲೇ ನನ್ನ ಹೆಂಡತಿಗೆ ಎರಡನೇ ಹೆರಿಗೆಯಾಯಿತು. ಈ ಸಂದರ್ಭದಲ್ಲಿ ಆಕೆ ತವರುಮನೆಗೆ ಹೋಗಲಾಗಲಿಲ್ಲ. ಆಸ್ಪತ್ರೆಗೆ ದಾಖಲಿಸುವುದರಿಂದ ಹಿಡಿದು ಹೆಂಡತಿ–ಮಗುವನ್ನು ಅಲ್ಲಿಂದ ಡಿಸ್‌ಚಾರ್ಚ್ ಮಾಡುವ ತನಕ ನಾನೇ ನೋಡಿಕೊಂಡೆ. ಪುಟ್ಟ ಮಗಳ ಜೊತೆಗೆ ದೊಡ್ಡ ಮಗಳನ್ನೂ ಸಂಭಾಳಿಸಬೇಕಾಗುತ್ತಿತ್ತು. ಆದರೆ, ನಾನು ಮತ್ತು ನನ್ನ ಹೆಂಡತಿ ಮೊದಲೇ ಇದಕ್ಕೆ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದೆವು. ಬಾಣಂತನಕ್ಕಾಗಿ ಮತ್ತೊಬ್ಬರು ಸಹಾಯಕ್ಕೆ ಬರುವ ಸ್ಥಿತಿಯೂ ಇರಲಿಲ್ಲ. ಹಾಗಾಗಿ, ಅಮ್ಮನ ಜೊತೆಗೂಡಿ ಬಾಣಂತನದ ಕೆಲಸಗಳನ್ನು ಹಂಚಿಕೊಂಡು ಮಾಡಿದೆ’ ಎನ್ನುತ್ತಾರೆ ಶಿವಮೊಗ್ಗದ ಆದರ್ಶ ಹುಂಚದಕಟ್ಟೆ.

‘ಮಗಳಿಗೆ 8 ತಿಂಗಳಾಗುತ್ತಲೇ ಹೆಂಡತಿ ಆನ್‌ಲೈನ್‌ನಲ್ಲಿ ಉದ್ಯೋಗ ಶುರುಮಾಡಿದಳು. ಅರ್ಧ ದಿನದ ಮಟ್ಟಿಗೆ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡೆ. ದೊಡ್ಡಮಗಳಿಗೆ ತನ್ನ ಜವಾಬ್ದಾರಿಯ ಅರಿವು ಮೂಡಿಸುತ್ತಲೇ ಪುಟ್ಟ ಮಗಳಿಗೆ ಸ್ನಾನ ಮಾಡಿಸುವುದು, ಎಳೆಯ ಬಿಸಿಲಿಗೆ ಅವಳ ಮೈಯೊಡ್ಡುವುದು, ಮಲಗಿಸುವುದು ಅಪ್ಪನಾಗಿ ಸಂತಸ ನೀಡಿದ ಕ್ಷಣಗಳು’ ಎನ್ನುತ್ತಾರೆ ಅವರು.

ಕೈತೋಟದ ಪಾಠ, ಸೈಕಲ್ ಸವಾರಿ
‘ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಮಕ್ಕಳೊಂದಿಗೆ ಸೇರಿಕೊಂಡು ಕುಂಡಗಳಲ್ಲಿ ಮೆಂತ್ಯೆ, ಕೊತ್ತಂಬರಿ ಮತ್ತು ಪುದಿನ ಸೊಪ್ಪು ಬೆಳೆದೆವು. ಮಕ್ಕಳಿಗೆ ದಿನನಿತ್ಯ ಗಿಡಗಳಿಗೆ ನೀರುಣಿಸುವ ಕಾಯಕ. ನಾವೇ ಬೆಳೆದ ಮೆಂತ್ಯೆಯಿಂದ ಪಲಾವ್, ಪುದಿನದಿಂದ ಚಿಕನ್–ಮೊಟ್ಟೆ ಬಿರಿಯಾನಿ ಸವಿಯುವ ಭಾಗ್ಯ ದೊರೆಯಿತು. ರಾತ್ರಿಯ ಸಮಯದಲ್ಲಿ ಬಡಾವಣೆಯಲ್ಲೇ ಸಣ್ಣ ಮಗಳಿಗೆ ಸೈಕಲ್ ಕಲಿಸಿದೆ. ದೊಡ್ಡ ಮಗಳೊಂದಿಗೆ ಸೇರಿ, ವಾರದಲ್ಲೊಂದು ದಿನ ನಮಗೆ ತೋಚಿದ ಉಪಾಹಾರ ತಯಾರಿಸಿ ಸವಿದೆವು. ಆ ದಿನದ ಮಟ್ಟಿಗೆ ಮಡದಿಗೆ ಅಡುಗೆಮನೆ ಕೆಲಸದಿಂದ ಬಿಡುವು ದೊರೆಯಿತು’ ಎಂದು ತಮ್ಮ ಅನುಭವ ಹಂಚಿಕೊಂಡರು ಡಾ. ರಮೇಶ್ ಬಿ.ಕೆ.

ಮಕ್ಕಳ ಖುಷಿ ಇಮ್ಮಡಿಗೊಳಿಸಿದ ಕ್ಷಣ
ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಎರಡು ಮಕ್ಕಳ ತಂದೆಯಾಗಿರುವ ಮನು ಮತ್ತು ಗುಣಶೀಲ್ ಅವರು ವೃತ್ತಿಯ ನಡುವೆಯೇ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಸವಾಲಿನದ್ದು ಎನ್ನುತ್ತಾರೆ.

‘ಹೊರಗಿನ ಡ್ಯೂಟಿ ಇದ್ದರೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಂಡತಿಯ ಮೇಲೇ ಇರುತ್ತಿತ್ತು. ಆದರೆ, ಆಕೆಯೂ ಉದ್ಯೋಗಸ್ಥೆಯಾಗಿದ್ದರಿಂದ ಹೆಚ್ಚು ಹೊರೆ ಬೀಳುತ್ತಿತ್ತು. ಇದೀಗ ನಾನು ಹೆಚ್ಚಾಗಿ ಮನೆಯಲ್ಲೇ ಇರುವುದರಿಂದ ನಾನೇ ಮಕ್ಕಳನ್ನು ನೋಡಿಕೊಳ್ಳುತ್ತೇನೆ. ಮಕ್ಕಳ ಸ್ನಾನ, ಬಟ್ಟೆ ಬದಲಿಸುವುದು, ಊಟ ಮಾಡಿಸುವುದು ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅಪ್ಪನೆಂಬ ನೆಮ್ಮದಿಯ ಭಾವ ಮೂಡಿದೆ. ನನ್ನ ಖುಷಿಯೂ ಇಮ್ಮಡಿಯಾಗಿದೆ’ ಎನ್ನುತ್ತಾರೆ ಪತ್ರಕರ್ತ ಮನು.

‘ಹೆಂಡತಿಗೆ ಕೋವಿಡ್ ಆಗಿದ್ದರಿಂದ ಕೆಲ ದಿನಗಳ ಮಟ್ಟಿಗೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಗಲೇರಿತು. ಇಬ್ಬರು ಹೆಣ್ಣುಮಕ್ಕಳು, ಮನೆಕೆಲಸ, ಅಡುಗೆ ಮತ್ತು ತನ್ನ ಉದ್ಯೋಗವನ್ನು ಹೆಂಡತಿ ಹೇಗೆ ಸಂಭಾಳಿಸುತ್ತಿದ್ದಳು ಎಂಬುದು ಈಗ ಮನದಟ್ಟಾಯಿತು. ಅತ್ತ ಕಚೇರಿ ಕೆಲಸ ಮಾಡುತ್ತಲೇ ಇತ್ತ ಮಧ್ಯಾಹ್ನದ ಅಡುಗೆ, ರಾತ್ರಿಯ ಅಡುಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ದೆ. ಹೆಂಡತಿಗೆ ಬಿಸಿನೀರು, ಗಂಜಿ, ಕಷಾಯ ಒದಗಿಸುತ್ತಲೇ ಶಾಲೆ ಇಲ್ಲದ ಮಕ್ಕಳನ್ನು ಎಂಗೇಜ್ ಮಾಡಲು ಹಲವು ಚಟುವಟಿಕೆಗಳನ್ನು ಆಯೋಜಿಸುತ್ತಿದ್ದೆ. ಇಷ್ಟು ದಿನಗಳ ಕಾಲ ಅಪ್ಪನೆಂದರೆ ಬೆಳಿಗ್ಗೆ ಡ್ಯೂಟಿಗೆ ಹೋಗಿ ರಾತ್ರಿ ಬರುವವನಾಗಿದ್ದೆ. ಆದರೀಗ ಮಕ್ಕಳ ಜತೆಯಲ್ಲೇ ಇದ್ದು ಅವರಿಗೆ ಸಾಧ್ಯವಾದಷ್ಟೂ ಸಮಯ ಮೀಸಲಿಟ್ಟಿದ್ದು ಮನಸಿಗೆ ಸಮಾಧಾನವೆನಿಸಿತು’ ಎನ್ನುತ್ತಾರೆ ಪತ್ರಕರ್ತ ಗುಣಶೀಲ್.

ಮನೆ, ಮಕ್ಕಳನ್ನು ನೋಡಿಕೊಳ್ಳುವ ಕೆಲಸದಲ್ಲಿ ಪರಿಣಿತರಾಗಿರುವ ಅಪ್ಪಂದಿರು ಇದನ್ನು ಕೋವಿಡ್ ಕಾಲಕ್ಕೆ ಮಾತ್ರ ಸೀಮಿತಗೊಳಿಸದೆ ಮುಂದುವರಿಸಿದರೆ ಹೆಂಡತಿಗೂ ನಿಜವಾದ ಸಂಗಾತಿ ಎನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.