ರಾಜಕೀಯ ಬದುಕಿನುದ್ದಕ್ಕೂ ಒಂದಿಲ್ಲೊಂದು ವಿವಾದಕ್ಕೆ ಮುಖಾಮುಖಿಯಾದವರು ನಫೀಸ್ ಫಜಲ್. ಮುಸ್ಲಿಂ ಸಮುದಾಯದ ಕಟ್ಟುಪಾಡುಗಳ ಹೊರತಾಗಿಯೂ ಪುರುಷ ಪಾರಮ್ಯದ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡ ದಕ್ಷಿಣ ಭಾರತದಲ್ಲಿ ಸಚಿವ ಸ್ಥಾನಕ್ಕೇರಿದ ಮೊದಲ ಮುಸ್ಲಿಂ ಮಹಿಳೆ. ಇಂದಿರಾ ಗಾಂಧಿ ಅವರಿಂದ ಮೊದಲ್ಗೊಂಡು ರಾಹುಲ್ ಗಾಂಧಿ ಅವರಲ್ಲಿ ಕೊನೆಗೊಂಡ ತಮ್ಮ ರಾಜಕೀಯ ವೃತ್ತಾಂತ ಹಾಗೂ ಖಾಸಗಿ ಬದುಕನ್ನು ತೆರೆದಿಡುವ ಅವರ ಆತ್ಮಕತೆ ‘ಬ್ರೇಕಿಂಗ್ ಬ್ಯಾರಿಯರ್ಸ್’ ಇತ್ತೀಚೆಗೆ ಬಿಡುಗಡೆಯಾಗಿದೆ.

ಝಗಮಗಿಸುವ ರಾಜಕೀಯ ಪರದೆಯ ಒಳನೋಟ, ಅಧಿಕಾರದ ಹಾವುಏಣಿಯಾಟದಲ್ಲಿ ಜೊತೆಗೂಡಿದವರ ತಂತ್ರ– ಕುತಂತ್ರ, ತಮ್ಮ ಏಳಿಗೆಗೆ ತೊಡರುಗಾಲಾದ ತಮ್ಮದೇ ಸಮುದಾಯದ ರಾಜಕೀಯ ನಾಯಕರನ್ನು ಮುಲಾಜಿಲ್ಲದೇ ಬಯಲಿಗೆಳೆದಿರುವ ನಫೀಸ್, ತ್ರಿವಳಿ ತಲಾಖ್, ಭಯೋತ್ಪಾದನೆ, ಬಾಬ್ರಿ ಮಸೀದಿ, ಏಕರೂಪ ನಾಗರಿಕ ಸಂಹಿತೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಸ್ಪಷ್ಟವಾದ ನಿಲುವು ಮಂಡಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದಭಾಗ ಇಲ್ಲಿದೆ:

ಪುಸ್ತಕದಲ್ಲಿ ಬಹಳ ದಿಟ್ಟವಾಗಿ ವಿಷಯಗಳನ್ನು ಮಂಡಿಸಿದ್ದೀರಿ.ಅಂತಹದ್ದೊಂದು ತುಡಿತಕ್ಕೆ ಪ್ರೇರಣೆಯೇನು?

ಶ್ರೀಮಂತ ಕುಟುಂಬದಿಂದ ಬಂದಿದ್ದರೂ ಪುರುಷ ದೌರ್ಜನ್ಯದ ಕರಿನೆರಳು ನನ್ನನ್ನು ಕಾಡದೇ ಬಿಡಲಿಲ್ಲ. ಅಪ್ಪ ನೀಡುತ್ತಿದ್ದ ಹಿಂಸೆಯಿಂದ ನಲುಗಿಹೋದ ಅಮ್ಮ ಖಿನ್ನತೆಗೆ ಜಾರಿದಾಗ, ತಮ್ಮನೊಟ್ಟಿಗೆ ಚೆನ್ನೈನ ಅಜ್ಜನ ಮನೆ ಸೇರಬೇಕಾಯಿತು. ಪ್ರತಿಷ್ಠಿತ ಮನೆತನದ ಅಜ್ಜ ನಮ್ಮನ್ನು ಮುದ್ದುಗರೆಯುತ್ತಿದ್ದನಾದರೂ ಅಜ್ಜಿಯ ವಿಷಯದಲ್ಲಿ ಮಾತ್ರ ದೌರ್ಜನ್ಯವೇ ಮೂರ್ತಿವೆತ್ತಂತೆ ತನ್ನ ಇನ್ನೊಂದು ಮುಖದರ್ಶನ ಮಾಡಿಸುತ್ತಿದ್ದ. ಬಳಿಕ ಬೋರ್ಡಿಂಗ್ ಶಾಲೆ ಸೇರಿ ಅನುಭವಿಸಿದ ಒಂಟಿತನ, ಬೆಳೆಯುತ್ತಾ ಬಂದಂತೆ ಕುಟುಂಬದ ಪುರುಷರಿಂದ ಮನೆಯ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಕಿರುಕುಳವನ್ನು ನೋಡನೋಡುತ್ತಲೇ ಗಟ್ಟಿಯಾಗಿ ಬೆಳೆದುನಿಂತವಳು ನಾನು. ನಮ್ಮಂತಹ ಮನೆತನದ ಹೆಣ್ಣುಮಕ್ಕಳ ಸ್ಥಿತಿಯೇ ಹೀಗಾದರೆ ಇನ್ನು ಸಾಮಾನ್ಯರ ಸ್ಥಿತಿ ಹೇಗಿರಬೇಡ?

ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರುವುದಕ್ಕೆ ಬಹಳ ಕಷ್ಟಪಡಬೇಕಾಗುತ್ತದೆ. ಅಂತಹವರಿಗೆ ನನ್ನ ಬದುಕೇ ಮಾದರಿಯಾಗಬೇಕು. ಅವರು ಅಸ್ಮಿತೆ ಕಂಡುಕೊಳ್ಳಲು ನನ್ನ ಹಾದಿ ಪ್ರೇರಣೆಯಾಗಬೇಕು. ಅದಕ್ಕೆಂದೇ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ರಿಯಾಯಿತಿ ದರದಲ್ಲಿ ಕೊಡಲು ನಿರ್ಧರಿಸಿದ್ದೇನೆ.

ಇಂದಿರಾ ಗಾಂಧಿ ಅವರನ್ನು ಬಹಳ ಆಪ್ತವಾಗಿ ಸ್ಮರಿಸಿದ್ದೀರಿ...

ಹೌದು, ಅವರು ನನ್ನ ರೋಲ್ ಮಾಡೆಲ್. ಅವರೊಬ್ಬ ಅಭೂತಪೂರ್ವ ಮಹಿಳೆ. ‘ಷಿ ಈಸ್ ದಿ ಓನ್ಲಿ ಮ್ಯಾನ್ ಇನ್ ದಿ ಕ್ಯಾಬಿನೆಟ್’ ಎಂದು ಜನ ಅವರ ಬಗ್ಗೆ ಆಗ ಹೇಳುತ್ತಿದ್ದ ಮಾತು ಸರಿಯಾಗಿಯೇ ಇತ್ತು. ನಾನು 13 ವರ್ಷದವಳಿದ್ದಾಗ, ಇಂದಿರಾ ಅವರು ತಂದೆ ನೆಹರೂ ಅವರೊಟ್ಟಿಗಿದ್ದ ಫೋಟೊವನ್ನು ಪತ್ರಿಕೆಯೊಂದರಲ್ಲಿ ನೋಡಿದೆ. ಅದು ನನ್ನನ್ನು ಬಹುವಾಗಿ ಆಕರ್ಷಿಸಿತು. ರಾಜಕೀಯದ ಅಭಿಲಾಷೆಯ ಬೀಜ ನನ್ನೊಳಗೆ ಅಂಕುರಿಸಿದ್ದು ಆಗಲೇ. ಮುಂದೆ, ರಾಜಕೀಯ ಸೇರುವ ಹಂಬಲಕ್ಕೆ ತಣ್ಣೀರೆರಚಬಾರದೆಂಬ ನನ್ನ ಷರತ್ತು, 30ನೇ ವಯಸ್ಸು ದಾಟಿದ ಬಳಿಕ ಸೇರಬಹುದೆಂಬ ಪ್ರತಿ ಷರತ್ತಿನ ಮೇರೆಗೆ 17ನೇ ವಯಸ್ಸಿನಲ್ಲಿ ಹಸನ್ ಅವರೊಟ್ಟಿಗೆ ನನ್ನ ಮದುವೆಯಾಯಿತು.

ರಾಜಕಾರಣಿಯಾಗಿ ನಿಮ್ಮ ಸಮುದಾಯ ನಿಮ್ಮನ್ನು ಸ್ವೀಕರಿಸಿದ್ದು ಹೇಗೆ?

ನಾನು ‘ಡಬಲ್ ಮೈನಾರಿಟಿ’. ಮೊದಲಿಗೆ ಮಹಿಳೆ, ಎರಡನೆಯದಾಗಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದವಳು. ‘ಇವಳು ಭಾಳಾ ಸ್ಟೈಲಿಷ್, ಇವಳಿಗೆ ರಾಜಕೀಯ ಏನು ಗೊತ್ತು’ ಎಂದು ಜರಿದವರೇ ಹೆಚ್ಚು ಮಂದಿ. ಹಲವರಿಗೆ ನನ್ನ ಬೋಲ್ಡ್‌ನೆಸ್ ಇಷ್ಟವಾಗಲಿಲ್ಲ. ವಾಸ್ತವದಲ್ಲಿ ಒಬ್ಬ ಪುರುಷನಿಗಿಂತ ಮಹಿಳೆಯೇ ಚೆನ್ನಾಗಿ ಕೆಲಸ ಮಾಡುತ್ತಾಳೆ. ಆದರೂ ಹೆಜ್ಜೆಹೆಜ್ಜೆಗೂ ನನಗೆ ತೊಡರುಗಾಲಾದವರಲ್ಲಿ ಹೆಚ್ಚಿನವರು ನನ್ನದೇ ಸಮುದಾಯದ ರಾಜಕೀಯ ಮುಖಂಡರು. ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಎಂಎಲ್‌ಎ, ಎಂಎಲ್‌ಸಿ ಮಾಡಲು ಹವಣಿಸುತ್ತಿದ್ದ ಅವರಿಗೆ ನನ್ನ ರಾಜಕೀಯ ಪ್ರವೇಶದಿಂದ ಇರುಸುಮುರುಸಾಗಿತ್ತು.

ಅಧಿಕಾರದ ಏಣಿ ಏರುವ ಮಾರ್ಗ ಹೇಗಿತ್ತು?

ರಾಜಕೀಯದಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಆದರೆ ನನ್ನದು ಹೋರಾಟದ ಮನೋಭಾವ. ಮಹತ್ವಾಕಾಂಕ್ಷೆಯ ಗುರಿ ಸಾಧನೆಯ ಹಾದಿಯಲ್ಲಿ ಎಷ್ಟೋ ಬಾರಿ ನನ್ನ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ವೈದ್ಯಕೀಯ ಶಿಕ್ಷಣ ಸಚಿವೆಯಾಗಿದ್ದಾಗ ಆಸ್ಪತ್ರೆಗಳಿಗೆ ಕಳಪೆ ವಿದೇಶಿ ಉಪಕರಣಗಳನ್ನು ಖರೀದಿಸಲು ₹3 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಹೊರಿಸಿದರು. ತೆಲಗಿಯ ಛಾಪಾ ಕಾಗದ ಹಗರಣದಲ್ಲಿ ನನ್ನ ಪತಿಯನ್ನು ಸಿಲುಕಿಸಲು ನೋಡಿದರು. ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ವಿಜಯಪುರದಲ್ಲಿ (ಆಗಿನ ಬಿಜಾಪುರ) ನಾನು ಸ್ಪರ್ಧಿಸಬಯಸಿದಾಗ, ಬೆಂಗಳೂರಿಂದ ಬಂದು ಇಲ್ಲಿ ನಿಲ್ಲುವುದೇಕೆ ಎಂದು ಆಕ್ಷೇಪಿಸಿದವರು ಅದೇ ಬೆಂಗಳೂರಿನ ಸಲೀಂ ಅಹಮದ್ ಅವರಿಗೆ ಹುಬ್ಬಳ್ಳಿ– ಧಾರವಾಡದಲ್ಲಿ ನಿಲ್ಲಲು ಅನುವು ಮಾಡಿಕೊಟ್ಟರು. ಯುವಕನೊಬ್ಬ ಪೊಲೀಸ್ ವಶದಲ್ಲಿ ಮೃತಪಟ್ಟ ಪ್ರಕರಣವೊಂದರಲ್ಲಿ ನಾನು ಜೈಲಿಗೂ ಹೋಗಿಬಂದೆ. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ನನಗೆ ಸಿಕ್ಕ ಸಚಿವ ಸ್ಥಾನ ಸಹ ನನ್ನ ತೀವ್ರ ಹೋರಾಟದ ಫಲವೇ. ಸಿಕ್ಕ ಕುರ್ಚಿಯನ್ನು ಕಸಿಯಲು ಹೆಜ್ಜೆಹೆಜ್ಜೆಗೂ ಆಯುಧ ಹಿಡಿದು ನಿಲ್ಲುವವರಿರುತ್ತಾರೆ. ಅವರಿಂದ ಪಾರಾಗುವ ಕಸರತ್ತಿನಲ್ಲಿ ಅಧಿಕೃತ ಕೆಲಸಕ್ಕೆ ನಿಮಗೆ ಸಿಗುವ ಸಮಯವಾದರೂ ಎಷ್ಟು?

ಅಂತಹ ಕ್ಲಿಷ್ಟ ಸ್ಥಿತಿಯಲ್ಲೂ ಆಸ್ಪತ್ರೆಗಳಿಗೆ ದಿಢೀರ್ ಭೇಟಿ, ಗ್ರಾಮೀಣ ಪ್ರದೇಶಗಳಿಗೆ ಟೆಲಿ ಮೆಡಿಸಿನ್ ಸೌಲಭ್ಯದಂತಹ ಕೆಲಸಗಳನ್ನು ಮಾಡಿಕೊಂಡಿದ್ದವಳಿಗೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದೇ ಮುಳುವಾಯಿತು. ಅಲ್ಲಿ ಮದ್ಯಸೇವಿಸಿದ್ದಾಗಿ, ನೃತ್ಯ ಮಾಡಿದ್ದಾಗಿ ಅಪಪ್ರಚಾರ ಮಾಡಲಾಯಿತು. ಅದು ನನ್ನ ರಾಜೀನಾಮೆ ಕೇಳುವ ಮಟ್ಟಕ್ಕೂ ಹೋಯಿತು. ಕೊನೆಗೆ ನನ್ನ ಸಚಿವ ಸ್ಥಾನ ಉಳಿಯಿತಾದರೂ ಖಾತೆ ಬದಲಾಯಿತು. ಈ ಪ್ರಕರಣ ನನ್ನನ್ನು ಅಲುಗಾಡಿಸಿಬಿಟ್ಟಿತು. ‘ನಿನಗಿಂತ ಮೇಲ್ಮಟ್ಟದಲ್ಲಿ ಇರುವವರನ್ನು ಎದುರು ಹಾಕಿಕೊಂಡರೆ ನಿನ್ನ ಅಸ್ತಿತ್ವಕ್ಕೇ ಧಕ್ಕೆಯಾಗುತ್ತದೆ’ ಎಂದು ಸ್ನೇಹಿತಆರ್.ಕೆ.ಧವನ್ ಅವರು ಆಗಾಗ ಹೇಳುತ್ತಿದ್ದ ಕಿವಿಮಾತನ್ನು ಆಲಿಸಿ ಮೌನಕ್ಕೆ ಶರಣಾದೆ. ಹೀಗೆ ಅಪಪ್ರಚಾರಕ್ಕೆ ಕಿವಿಗೊಟ್ಟು ಖಾತೆ ಬದಲಿಸಿದ ಬಗ್ಗೆ, ಈಗಿನ ನನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಸ್.ಎಂ.ಕೃಷ್ಣ ವಿಷಾದ ವ್ಯಕ್ತಪಡಿಸಿದರು. ಇಷ್ಟು ವರ್ಷಗಳ ಮೇಲೆ ಹೀಗಾದರೂ ನನಗೆ ನ್ಯಾಯ ಸಿಕ್ಕಿತು.

ನಿಮ್ಮ ಸಾಧನೆಯ ಏಣಿಗೆ ಮೆಟ್ಟಿಲಾದ ಪ್ರಮುಖರು?

ಮಹಿಳೆಗೆ ಮಹಿಳೆಯೇ ಶತ್ರು ಎಂಬುದು ಪುರುಷರು ಹುಟ್ಟುಹಾಕಿರುವ ಮಾತಷ್ಟೇ. ವಾಸ್ತವದಲ್ಲಿ ಮಹಿಳೆಗೆ ಪುರುಷರೇ ಅಡ್ಡಗಾಲು. ರಾಜಕೀಯದಲ್ಲಿ ಹೆಚ್ಚು ಅಧಿಕಾರ ಇರುವುದು ಅವರಿಗೇ ತಾನೆ? ಹಾಗಾಗಿ ಅವರ ಮಾತೇ ನಡೆಯುವುದು. ಅಷ್ಟಾದರೂ ಬೆನ್ನಿಗಿದ್ದು ಮಾರ್ಗದರ್ಶನ ನೀಡಿದಎಸ್.ಎಂ.ಕೃಷ್ಣ, ಮಣಿಶಂಕರ್ ಅಯ್ಯರ್, ನನ್ನ ಪತಿ ಹಸನ್ ಅಂತಹವರನ್ನು ನಾನಿಲ್ಲಿ ಹೆಸರಿಸಲೇಬೇಕು. ಪ್ರೇಮಾ ಕೃಷ್ಣ, ಮಾರ್ಗರೇಟ್ ಆಳ್ವ, ಅಂಬಿಕಾ ಸೋನಿ ಅವರಂತಹ ಮಹಿಳೆಯರು ನನ್ನ ಕೈಹಿಡಿದು ನಡೆಸಿದರು.

ಹಿಂದಿನ ಮುಖ್ಯಮಂತ್ರಿಗಳೆಲ್ಲ ನೆಪಮಾತ್ರಕ್ಕೆ ಒಬ್ಬ ಮಹಿಳೆಗಷ್ಟೇ ಸಂಪುಟದಲ್ಲಿ ಸ್ಥಾನ ನೀಡುತ್ತಿದ್ದರು. ಆದರೆ ಎಸ್.ಎಂ. ಕೃಷ್ಣ ರಾಜ್ಯದಲ್ಲಿ
ಅದೇ ಮೊದಲ ಬಾರಿಗೆ ಮೋಟಮ್ಮ, ರಾಣಿ ಸತೀಶ್, ಸುಮಾ ವಸಂತ್‌ಮತ್ತು ನನ್ನನ್ನು ಒಳಗೊಂಡು ನಾಲ್ವರು ಮಹಿಳೆಯರಿಗೆ ಸಚಿವೆಯರಾಗುವ ಅವಕಾಶಕೊಟ್ಟರು.

ಯುವ ಮಹಿಳಾ ರಾಜಕಾರಣಿಗಳಿಗೆ ನಿಮ್ಮ ಕಿವಿಮಾತು?

ಒಬ್ಬ ಮಹಿಳೆಯನ್ನು ನಿಂದಿಸುವುದು, ಆಪಾದನೆಗೆ ಗುರಿಪಡಿಸುವುದು ಬಹಳ ಸುಲಭ. ಚಾರಿತ್ರ್ಯಹರಣ, ಲಂಚದ ಆಪಾದನೆಯ ಮೂಲಕ ಅವಳನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಮಹಿಳೆಯರಿಗೆ ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ ಇರಬೇಕು. ರಾಮನ ವನವಾಸದಂತೆ, ರಾಜಕೀಯ ಸೇರಿ 14 ವರ್ಷ ಕಾಯ್ದ ಬಳಿಕ ನನಗೆ ವಿಧಾನಪರಿಷತ್ ಸದಸ್ಯೆಯಾಗುವ ಭಾಗ್ಯ ಲಭಿಸಿತು. ರಾಜಕೀಯವಾಗಲೀ ಖಾಸಗಿ ಬದುಕಾಗಲೀ ನಮ್ಮ ಮನಸ್ಸು ಎಮ್ಮೆಯ ಚರ್ಮದಂತೆ ಗಟ್ಟಿಯಾಗಿ ಇರಬೇಕು. ಹಾಗಿಲ್ಲದಿದ್ದರೆ ಮಕ್ಕಳು, ಗಂಡನನ್ನು ನೋಡಿಕೊಂಡು ಮನೆಯಲ್ಲಿರುವುದು ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.