ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಲಂ ಮಾನ್ ಸಿಂಗ್ ಚೌಧುರಿ ಸಂದರ್ಶನ: ಹಯವದನದ ಪದ್ಮಿನಿ ಸತಿ ಹೋಗಬೇಕಿರಲಿಲ್ಲ

Published : 25 ಮೇ 2024, 23:47 IST
Last Updated : 25 ಮೇ 2024, 23:47 IST
ಫಾಲೋ ಮಾಡಿ
Comments
ಪ್ರ

‘ಹಯವದನ’ ದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ನಿಮಗೆ ಅನ್ನಿಸಿತು ಎಂದರೆ ನಾಟಕದ ಬಗ್ಗೆ ನಿಮಗೆ ಏನಾದರೂ ತಕರಾರಿತ್ತೇ?

ನನಗೆ ಗಿರೀಶ ಕಾರ್ನಾಡ ಅವರು ಚೆನ್ನಾಗಿ ಗೊತ್ತಿದ್ದರು. ಅವರು ಸಂಪೂರ್ಣ ಆಧುನಿಕೋತ್ತರ ಜೀವಿ ಮತ್ತು ಬುದ್ಧಿಜೀವಿ. ಆದರೆ ಅವರು ಪದ್ಮಿನಿ ಸತಿ ಹೋಗುವಂತಹ ಸಾಂಪ್ರದಾಯಿಕ ಅಂತ್ಯವನ್ನು ಏಕೆ ಆರಿಸಿಕೊಂಡರು ಎನ್ನುವುದು ನನಗೆ ನಿಗೂಢ ಪ್ರಶ್ನೆಯಾಯಿತು. ಗಿರೀಶ ಕಾರ್ನಾಡರು ‘ಹಯವದನ’ದಲ್ಲಿ ಮಾನವನ ದ್ವಂದ್ವಗಳನ್ನು, ದೇಹ ಮತ್ತು ಮನಸ್ಸಿನ ತಾಕಲಾಟವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಜೀವ ಮತ್ತು ನಿರ್ಜೀವ ವಸ್ತುಗಳು ಒಂದುಗೂಡಿ ಕಾಲ್ಪನಿಕ, ನೈಜ ಮತ್ತು ಭ್ರಮೆಯ ಆಕರ್ಷಕ ಮಿಶ್ರಣವಾಗಿ ಪ್ರಸ್ತುತವಾಗಿದೆ. ಈ ನಾಟಕ ನನ್ನ ಜೊತೆ ಮಾತನಾಡಿತು. ನಾನು ಅದಕ್ಕೆ ಸ್ಪಂದಿಸಿದೆ. ಇದೊಂದು ಆಧುನಿಕ ಕ್ಲಾಸಿಕ್ ಆದರೂ ಅದರಲ್ಲಿ ಪೌರಾಣಿಕ - ಮಿಥ್ - ಕಾಲ್ಪನಿಕ ಸಂಗತಿಗಳು ಅಂತರ್ಗವಾಗಿ ವಿಲೀನಗೊಂಡಿವೆ. ಮೊದಲು ಅದೊಂದು ಅಸಾಂಪ್ರದಾಯಿಕ ಅನುಸಂಧಾನ ಎಂದುಕೊಂಡಿದ್ದೆ. ಆದರೆ ವಾಸ್ತವವಾಗಿ ಅದೊಂದು ರಿಯಾಕ್ಷನರಿ - ಪ್ರತಿಗಾಮಿ ಧೋರಣೆ ಅನ್ನಿಸಿತು. ಹಾಗಾಗಿ ಅದು ನಾನು ನಾಟಕವನ್ನು ನೋಡುವ ವಿಧಾನಕ್ಕಿಂತ ಭಿನ್ನ ಅನ್ನಿಸಿತು. ಅದರಿಂದಾಗಿ ಸ್ವಲ್ಪ ಮಾರ್ಪಾಡಿಸಿಕೊಳ್ಳಬೇಕಾಯಿತು.

ಪ್ರ

‘ಹಯವದನ’ದ ರಮ್ಯ ಕಾಲ್ಪನಿಕ ಚೌಕಟ್ಟನ್ನು ನೀವು ಒಪ್ಪಿಕೊಳ್ಳುವಿರಾದರೆ ಅದನ್ನು ಪ್ರಸ್ತುತದ ಕನ್ನಡಿಯಲ್ಲಿ ನೋಡಲು ಯತ್ನಿಸುವುದು ಸರಿಯೇ?

ಇದೊಂದು ಸಂಕೀರ್ಣ ನಾಟಕ. ಯಾವುದೇ ಒಂದು ನಾಟಕ ಪಠ್ಯವಾಗಿ ಇದ್ದಾಗ ಒಂದನ್ನು ಹೇಳುತ್ತಿದ್ದು ಅದನ್ನು ರಂಗದ ಮೇಲೆ ಪ್ರಯೋಗಿಸಿದಾಗ ಅದು ತನ್ನನ್ನು ಪ್ರಸ್ತುತಕ್ಕೆ ಒಡ್ಡಿಕೊಳ್ಳುತ್ತದೆ. ಹಾಗಾಗಿಯೇ ನಾಟಕ ಒಂದು ಸ್ಥಿರ ಅಸ್ತಿತ್ವ ಹೊಂದಿರುವುದಿಲ್ಲ. ಅದೊಂದು ಪ್ರಯೋಗಪಠ್ಯವಾದಾಗ ಸಮಕಾಲೀನತೆಗೆ ಸ್ಪಂದಿಸುವುದು ಅನಿವಾರ್ಯವಾಗುತ್ತದೆ. ಪದ್ಮಿನಿಯ ಪಾತ್ರ ಅಂದಿನ ಕಾಲದೇಶ  ವರ್ತಮಾನಗಳಲ್ಲಿ ಕಾಲೂರಿದ್ದರೂ ಅವಳ ಮಾತುಕತೆ, ನಡವಳಿಕೆ ಇವತ್ತಿನ ಸಮಕಾಲೀನ ಜಗತ್ತಿನ ಹೆಣ್ಣಿನ ನೋಟವಾಗಿದೆ. ನಾನು ದ್ವಂದ್ವವನ್ನು ಅರ್ಥ ಮಾಡಿಕೊಳ್ಳಬಲ್ಲೆ, ಹೆಣ್ಣೊಬ್ಬಳು ಇಬ್ಬರನ್ನು ಪ್ರೀತಿಸಬಹುದು ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ನನಗೆ ಅರ್ಥವಾಗದ ವಿಷಯವೆಂದರೆ ಹೆಣ್ಣು ತನ್ನ ಆಸೆಯನ್ನು ಪರಿಪೂರ್ಣವಾಗಿ ಪಡೆಯಲು ಸಾಧ್ಯವಾಗದಿದ್ದಾಗ ಅವಳು ಏಕೆ ಸಾಯಬೇಕು? ಪರಿಪೂರ್ಣತೆ ದೇವರ ಗುಣ, ಅಪೂರ್ಣತೆ ಮನುಷ್ಯರಿಗೆ ಸಹಜ ಗುಣ. ನಾವು ವಾಸ್ತವದಲ್ಲಿ ಬದುಕಲು ಕಲಿಯಬೇಕು. ಸಾವು ಇದಕ್ಕೆ ಉತ್ತರವಲ್ಲ.

ಪ್ರ

ಕಾರಂತರು ಅತಿಮಿತ - ಮಿನಿಮಲಿಸ್ಟ್ - ರಂಗಸಜ್ಜಿಕೆಯನ್ನು ಪರಿಚಯಿಸಿದರು. ಕಾರಂತರು ನಟರೇ ರಂಗವನ್ನು ಸಿಂಗರಿಸಬೇಕು ಎಂದು ನಂಬಿದವರು. ನೀವು ರಂಗದ ಮೇಲೆ ಪಂಜಾಬಿನ ಅಲೆಮಾರಿ ಗಾಯಕರು ನಕ್ಕಾಲ್ ಗಳ ವ್ಯಾನನ್ನೇ ತಂದಿದ್ದೀರಿ...

ಹೌದು. ನಾನು ಕಾರಂತರಿಂದ ಬಹಳ ಪ್ರಭಾವಿತಳಾಗಿದ್ದೇನೆ. ಅವರ ಜೊತೆ ಎರಡು ದಶಕಗಳ ಒಡನಾಟ ಇತ್ತು. ಆದರೆ ನಾನು ಅವರ ಶೈಲಿಯನ್ನು ನಕಲು ಮಾಡಿಲ್ಲ. ಪಠ್ಯವನ್ನು ನಾನು ಅರ್ಥೈಸುವ ರೀತಿಯೇ ಬೇರೆ. ಒಂದು ಮಾತು ನೀವು ಮರೆಯಬಾರದು. ಕಾರಂತರೂ ಕೂಡಾ ನಾಟಕಗಳಲ್ಲಿ ಭವ್ಯವಾದ ಸೆಟ್ಟನ್ನು ಹಾಕಿದ್ದಾರೆ. ‘ಮಾಟಿಯಾಪುರ’ ದಲ್ಲಿ ರಂಗದ ಮೇಲೆ ಒಂದು ದಟ್ಟ ಕಾಡನ್ನೇ ಸೃಷ್ಟಿ ಮಾಡಿದ್ದರು. ‘ಮೃಚ್ಛಕಟಿಕ’ದಲ್ಲಿ ರಂಗದ ಮೇಲೆ ಎಷ್ಟೊಂದು ಗಾಡಿಗಳನ್ನು ತಂದರು. ‘ಹಯವದನ’ದಲ್ಲೂ ಅವರು ಕಮಾನುಗಳು, ಜಗಲಿಗಳು ಇತ್ಯಾದಿಗಳನ್ನು ಬಳಸಿದರು. ಯಾಕೆ, ಮನೆಯಲ್ಲೇ ನಾವು ಮೇಜು ಕುರ್ಚಿ ಇತ್ಯಾದಿಗಳನ್ನು ಬಳಸುವುದಿಲ್ಲವೇ? ಒಟ್ಟಿನಲ್ಲಿ ರಂಗದ ಅನುಭೂತಿ ಮುಖ್ಯ. ಭೂಮಿಜಾ ಟ್ರಸ್ಟ್ ಮತ್ತು ಆದ್ಯಂ- ಆದಿತ್ಯ ಬಿರ್ಲಾ ಗ್ರೂಪ್ ಸೇರಿ ಈ ನಾಟಕದ ನಿರ್ಮಾಣದ ಹೊಣೆ ಹೊತ್ತಿವೆ. ಇದಕ್ಕಾಗಿ ಭಾರತದ ಉದ್ದಗಲದಿಂದ ಅದ್ಭುತ ನಟರನ್ನು ಮತ್ತು ರಂಗಕರ್ಮಿಗಳನ್ನು ಒಂದುಗೂಡಿಸಲಾಗಿದೆ. ಮೊದಲಬಾರಿಗೆ ಹಣದ ಬಗ್ಗೆ ಚಿಂತೆ ಮಾಡದೇ ರಂಗ ಪ್ರಸ್ತುತಿಯನ್ನು ಸಾಧಿಸಿದ ತೃಪ್ತಿ ನನಗಿದೆ.

ಪ್ರ

ಅದೇ ರೀತಿ ಬಿ.ವಿ.ಕಾರಂತರ ಸಂಗೀತದಲ್ಲೂ ನೀವು ಬದಲಾವಣೆ ಮಾಡಿಕೊಂಡಿದ್ದೀರಿ...

ನಾನು ಕಾರಂತರ ಸಂಗೀತದ ಸತ್ವವನ್ನು ಕದಡಲು ಹೋಗಿಲ್ಲ. ಕಾರಂತರ ಜೊತೆಗಿನ ಇಪ್ಪತ್ತೆರಡು ವರ್ಷಗಳ ಒಡನಾಟದಲ್ಲಿ ನನಗೆ ಅವರ ಸೃಜನಶೀಲ ಶಕ್ತಿಯ ಪರಿಚಯ ಚೆನ್ನಾಗಿದೆ. ಅವರೇ ನನಗೆ ಸ್ಫೂರ್ತಿ. ನಾನು ಮಾಡಿರುವುದಿಷ್ಟೇ - ಮೂಲ ಸಂಗೀತವನ್ನು ಕೆಡಿಸದೇ ಸ್ಯಾಕ್ಸೋಫೋನ್ ಜನಪದ ವಾದ್ಯಗಳು ಇತ್ಯಾದಿ ಹೊಸ ಶಬ್ದಗಳನ್ನು ಬಳಸಿದ್ದೇನೆ. ಅದು ಕಾರಂತರ ಸಂಗೀತಕ್ಕೆ ಇನ್ನಷ್ಟು ಮೆರುಗು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT