ಬೆಂಗಳೂರಿನ ಕತ್ರಿಗುಪ್ಪೆಯ ಶ್ರೀಕೃಷ್ಣ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನ. 17 ಮತ್ತು 18 ರಂದು ಅಖಿಲ ಭಾರತ ದಾಸ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಅರಳುಮಲ್ಲಿಗೆ ಪಾರ್ಥಸಾರಥಿ ವಹಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ 17ನೆಯ ಕ್ರಾಸಿನಲ್ಲಿ ಒಂದು ಹೋಟೆಲ್ ಇತ್ತು. ಅಲ್ಲಿ ಸೂರ್ಯನಾರಾಯಣ ಚಡಗರು ಇರುತ್ತಿದ್ದರು. ಅವರು ಆ ಕಾಲದಲ್ಲಿ ಪ್ರಸಿದ್ಧ ಕಾದಂಬರಿಕಾರ, ಸಂಘಟಕ. ಅವರನ್ನು ಹುಡುಕಿಕೊಂಡು ಹಲವರು ಬರುತ್ತಿದ್ದರು. ಚಡಗರು ಸಾಕಷ್ಟು ಓದಿಕೊಂಡಿದ್ದರು. ಎಳೆಯರನ್ನು ಪ್ರೋತ್ಸಾಹಿಸುವ ಸಹೃದಯ. ನಾನು, ಮಾವಿನಕೆರೆ ರಂಗನಾಥ, ಕಲ್ಯಾಣಪುರ, ಎ.ಎಸ್. ಭಟ್ಟ, ಅರಳುಮಲ್ಲಿಗೆ ಪಾರ್ಥಸಾರಥಿ ಮೊದಲಾದವರೆಲ್ಲ ‘ಚಡಗರ ಚಾವಡಿ’ಯ ಕಾಯಂ ಸದಸ್ಯರಾಗಿದ್ದೆವು. ಅಲ್ಲಿ ನಡೆಯುತ್ತಿದ್ದದ್ದು ನಿಯಮಬದ್ಧ ಚರ್ಚೆಯಲ್ಲ, ಒಂದು ಬಗೆಯ ಹರಟೆ. ಹರಟೆಯಾದರೂ ಕಾಡುಹರಟೆಯಲ್ಲ, ಸಾಹಿತ್ಯ ಸಾಗಿರುವ, ಸಾಗುತ್ತಿರುವ ದಾರಿಯ ಸಿಂಹಾವಲೋಕನ.

ಅರಳುಮಲ್ಲಿಗೆ ಆಗಿನ್ನೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಅರಳು ಹುರಿದಂತೆ ಮಾತು, ತರ್ಕ-ವಿತರ್ಕ, ಸೂಕ್ಷ್ಮಾತಿ ಸೂಕ್ಷ್ಮಗ್ರಹಿಕೆ, ನಗುಮುಖ, ಎಲ್ಲರಿಗೂ ಅಂಟಿಕೊಳ್ಳುವ ಸ್ವಭಾವ. ಸಾಹಿತ್ಯ, ಸಂಗೀತ, ನಾಟಕ, ಕನ್ನಡದ ಕೆಲಸಗಳಲ್ಲಿ ಆಸಕ್ತಿ ನಮ್ಮಿಬ್ಬರನ್ನು ಹತ್ತಿರ ಸೇರಿಸಿದ್ದವು. ವಾಣಿಜ್ಯ ವಿದ್ಯಾರ್ಥಿಯಾದ ಅವರು ಸಣ್ಣಪುಟ್ಟ ಬರಹ, ಕತೆ, ಕವನ ಬರೆಯುತ್ತಿದ್ದರು. ಆ ಬರಹಗಳಲ್ಲಿ ಒಂದು ಶಿಸ್ತು ಇತ್ತು, ಅಚ್ಚುಕಟ್ಟುತನವಿರುತ್ತಿತ್ತು. ಒಂದು ಬಗೆಯ ತುಡಿತ, ಆಕರ್ಷಣೆಯಿರುತ್ತಿತ್ತು. ಪಾರ್ಥಸಾರಥಿ ಈಗ ಅರಳಿದ ಮಲ್ಲಿಗೆ.

ಜಗತ್ತಿನ ವಿವಿಧ ದೇಶಗಳಲ್ಲಿ ಜ್ಞಾನ ಹಂಚುವ, ಜ್ಞಾನ ಸಂಪಾದಿಸುವ, ದಾಸ ಸಾಹಿತ್ಯದ ಮಾಹಿತಿ ಸಾರುವ, ಕನ್ನಡ ಸಂಸ್ಕೃತಿಯ ಗರಿಮೆ ಬಿತ್ತುವ, ಜಾನಪದ ಸಾಹಿತ್ಯದ ಶ್ರೀಮಂತಿಕೆ ಎತ್ತರಿಸುವ ಕೈಂಕರ್ಯ ಅವರದು.

ಪದವಿ ಓದುತ್ತಿರುವಾಗಲೇ ಹಿಂದಿ ವಿರೋಧಿ ಚಳವಳಿ ಆರಂಭವಾಗಿತ್ತು. ಪಾರ್ಥಸಾರಥಿ ಈ ಚಳವಳಿಯ ಮುಂದಾಳುತ್ವ ವಹಿಸಿಕೊಂಡರು. 1964-65ರಲ್ಲಿ ಅ.ನ. ಕೃಷ್ಣರಾಯರ ನೇತೃತ್ವದಲ್ಲಿ ನಡೆದ ಕನ್ನಡ ಚಳವಳಿ ಸೇರಿಕೊಂಡರು. ಅ.ನ.ಕೃ ಅವರ ಅಸ್ಖಲಿತ ಭಾಷಣ ಶೈಲಿ ಮತ್ತು ಎಂ. ರಾಮಮೂರ್ತಿಯವರ ಸಿಂಹಗರ್ಜನೆಯ ಭಾಷಣಗಳನ್ನು ಕೇಳಿ ಕನ್ನಡ ಪ್ರೇಮ ಬೆಳೆಸಿಕೊಂಡಿದ್ದಲ್ಲದೆ ಕೃಷ್ಣರಾಯರ ಹಾಗೆ ತಾನೊಬ್ಬ ಭಾಷಣಕಾರನಾಗಬೇಕೆಂದು ಸಂಕಲ್ಪಿಸಿದರು. ಅದೇ ಕಾಲಕ್ಕೆ ಬೇಂದ್ರೆಯವರ ಭಾಷಣ ಕೇಳುವ ಅವಕಾಶವೂ ಲಭ್ಯವಾಯಿತು. ಇವೆಲ್ಲ ಪಾರ್ಥಸಾರಥಿಯವರಿಗೆ ತನ್ನ ಭಾಷೆ ಹದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು.

ಎಂ.ಕಾಂ. ಮುಗಿಸಿ ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನಲ್ಲಿ ಅಧ್ಯಾಪಕರಾದರು. ಅವರು ಕಾಲೇಜಿನಲ್ಲಿ ಕೇವಲ ಪಠ್ಯ ಬೋಧಿಸಲಿಲ್ಲ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಗೀತ, ನಾಟಕಗಳ ಬಗ್ಗೆ ಆಸಕ್ತಿ ಹುಟ್ಟಿಸಿದರು. ವಾಣಿಜ್ಯ ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನಿಸಿ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಇಂಗ್ಲಿಷಿನಲ್ಲಿ ಬರೆದರು. ಯುವಕರ ಮನೋವಿಕಾಸಕ್ಕೆ ‘ಪವರ್ಫುಲ್ ಪರ್ಸನಾಲಿಟಿ ಡೆವೆಲಪ್ಮೆಂಟ್’, ‘ಗ್ರೇಟ್ ವ್ಯಾಲ್ಯೂಸ್ ಫಾರ್ ಗ್ರೇಟ್ ಫ್ಯೂಚರ್’ ಮತ್ತು ‘ಸಿಕ್ರೆಟ್ ಆಫ್ ಸೂಪರ್ ಸಕ್ಸೆಸ್’ ಧ್ವನಿಸುರುಳಿಗಳ ಮೂಲಕ ಮಾರ್ಗದರ್ಶನ ಮಾಡಿದರು. ಈ ಮಧ್ಯೆ ಇವರು ನಾಟಕ ಕ್ಷೇತ್ರದಲ್ಲೂ, ಚಲನಚಿತ್ರ ರಂಗದಲ್ಲೂ ದುಡಿದರು. ಕೆಲವು ಚಿತ್ರಗಳ ಕಥೆ, ಸಂಭಾಷಣೆ ಬರೆದರು.

1971ರಿಂದ ನಿರಂತರವಾಗಿ ದಾಸ ಸಾಹಿತ್ಯದ ಆಳವಾದ ಅಧ್ಯಯನ ಮಾಡಿದರು. ಅದಕ್ಕೆ ಸಂವಾದಿಯಾದ ಭಾರತೀಯ ಸಂತ ಸಾಹಿತ್ಯವನ್ನು, ಸಂಲಗ್ನವಾದ ಇತರ ಭಾಷೆಯ ಸಾಹಿತ್ಯವನ್ನು ತುಲನಾತ್ಮಕವಾಗಿ ಓದಿ ದಾಸ ಸಾಹಿತ್ಯದ ಹಿರಿಮೆ-ಗರಿಮೆಗಳನ್ನು ನಿರ್ಧರಿಸಿದರು.

ಇವರ ಓದು ಮತ್ತು ಓಡಾಟದ ಫಲವನ್ನು ಪುರಂದರ, ಶ್ರೀ ಪಾದರಾಜ, ವ್ಯಾಸರಾಜ, ವಾದಿರಾಜ, ದಾಸ ಸಾಹಿತ್ಯ, ಸಂಪುಟಗಳಲ್ಲಿ ಮತ್ತು ರಾಘವೇಂದ್ರ ಸಂಪುಟ, ಹರಿದಾಸ ಝೇಂಕಾರ ತರಂಗಿಣಿ, ದಾಸ ಸಾಹಿತ್ಯ ವಾಹಿನಿ, ಸಂಸ್ಕೃತಿ ಪುರುಷರು, ಮಧ್ವಾಚಾರ್ಯರು, ನಮ್ಮ ಮೆಚ್ಚಿನ ಕರ್ನಾಟಕ, ಧೀಮಂತ ಕರ್ನಾಟಕ, ಹರಿದಾಸರ ಉಗಾಭೋಗ ಸಂಪುಟಗಳಲ್ಲಿ ಕಾಣಬಹುದು. ಅವರು ಸಂಗ್ರಹಿಸಿ ಸಂಪಾದಿಸಿದ ಹರಿದಾಸರ 4,500 ಹಾಡುಗಳು ಕನ್ನಡ ಸಾಹಿತ್ಯ ಅಭ್ಯಾಸಿಗಳಿಗೊಂದು ಕಲ್ಪವೃಕ್ಷ. ಇದಲ್ಲದೆ ಸಂಶೋಧನೆ, ವಿಮರ್ಶೆ, ವಿಚಕ್ಷಣೆಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಅವರು ಬರೆದಿದ್ದಾರೆ. ಇವರ ಹರಿದಾಸರ 10,000 ಹಾಡುಗಳ ಬೃಹತ್ ಗ್ರಂಥ ಶತಮಾನ ಗ್ರಂಥವೆಂದೇ ಪ್ರಸಿದ್ಧವಾಗಿದೆ. ‘ಭಜನ ಸಂಪುಟ’, ‘ಹರಿದಾಸ ಸಾಹಿತ್ಯ ಸೌರಭ’, ‘ವೈಕುಂಠ ವರ್ಣನ’, ‘ದಾಸ ಸಾಹಿತ್ಯ ಭರವಸೆಯ ಬೆಳಕು’, ‘ಉಗಾಭೋಗ ಸಂಪುಟ’ ಇವೆಲ್ಲಾ ದಾಸ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಗ್ರಂಥಗಳೆನಿಸಿದವು. ಇವರ ‘ಪುರಂದರ ಮಹಾಸಂಪುಟ’ ಒಂದು ಸಾವಿರ ಪುಟಗಳ ವಿಶಿಷ್ಟ ಗ್ರಂಥ.

ಅದೇ ಪರಿ ಅವರು ಹೊರಡಿಸಿದ ಭಾಗವತ, ರಾಮಾಯಣ, ಭಗವದ್ಗೀತಾ, ಗುರುರಾಘವೇಂದ್ರ ನಮನ, ವಾದಿರಾಜ ನಮನ, ಕನಕದಾಸ ನಮನ, ವಿಜಯದಾಸ ನಮನ, ಪುರಂದರ ನಮನ, ವಿಷ್ಣುಸಹಸ್ರನಾಮ ಧ್ವನಿಸುರುಳಿಗಳು ಅವರ ವಿದ್ವತ್ತಿಗೆ ಹಿಡಿದ ಕನ್ನಡಿಗಳು.

ಇದೆಲ್ಲ ಕೇವಲ ಓದಿನಿಂದ, ಅನುಭವದಿಂದಷ್ಟೇ ಪಾರ್ಥಸಾರಥಿಗೆ ಬಂದದ್ದಲ್ಲ ಎಂಬ ಭಾವನೆ ಮೂಡುತ್ತದೆ. ಜ್ಞಾನವಿದ್ದವರಿಗೆಲ್ಲ ಹೀಗೆ ಅಸ್ಖಲಿತವಾಗಿ ಮಾತಾಡಲು ಬರುತ್ತದೆಯೆಂದಿಲ್ಲ. ಮಾತಾಡುವವರೆಲ್ಲ ಜ್ಞಾನಿಗಳೆಂದು ಭ್ರಮಿಸಬೇಕಾಗಿಲ್ಲ. ಇವರು 600 ಪುಟಗಳಲ್ಲಿ ಬರೆದ ವಿಷ್ಣುಸಹಸ್ರನಾಮ ಎಂಬ ಇಂಗ್ಲಿಷ್ ಗ್ರಂಥ 14 ದೇಶಗಳಲ್ಲಿ ಬಿಡುಗಡೆಯಾಗಿ ಜನಪ್ರಿಯಗೊಂಡಿತು. ಇವರ ಪುರಂದರದಾಸರ ಜೀವನ ಚಿತ್ರಣವನ್ನು ವೈದ್ಯರಾಗಿರುವ ವಿಶ್ವಂಭರನಾಥ ಮತ್ತು ಸತ್ಯವರ್ತಿಯವರು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದಾರೆ. ಹಾಗೆಯೇ ಇವರ ‘ವಾದಿರಾಜ ಸಂಪುಟ’ವನ್ನು ಆಸ್ಟ್ರೇಲಿಯಾದ ಶ್ರೀಪ್ರಿಯಾ ಅವರು ಇಂಗ್ಲಿಷಿನಲ್ಲಿ ಅನುವಾದ ಮಾಡಿದ್ದಾರೆ. ‘ವಾದಿರಾಜ ಸಂಪುಟ’ ಗ್ರಂಥ ಇಂಗ್ಲಿಷಿಗೆ ಅನುವಾದವಾಗಿದೆ. ‘ಶ್ರೀಪಾದರಾಜ ಸಂಪುಟ’ ಗ್ರಂಥವನ್ನು ಸಿಂಗಪುರದ ಪರಿಮಳ ರಾಘವೇಂದ್ರ ಪ್ರಕಟಿಸಿದ್ದಾರೆ. ಇವರ ‘ಮಧ್ವಾಚಾರ್ಯರು’ ಪುಸ್ತಕವನ್ನು ಪದ್ಮಾ ಶ್ರೀನಿವಾಸನ್ ತಮಿಳಿಗೆ ಅನುವಾದಿಸಿದ್ದಾರೆ. ‘ಪುರಂದರ ಸಂಪುಟ’ ಗ್ರಂಥವನ್ನು ತಮಿಳಿಗೆ ಗೋಪಿನಾಥ್ ಅನುವಾದಿಸಿದ್ದಾರೆ. ಪಾರ್ಥಸಾರಥಿಯವರು ದಾಸ ಸಾಹಿತ್ಯದ ಪ್ರಕಟಣೆ, ದಾಸರ ಜನ್ಮೋತ್ಸವಗಳನ್ನು, ವಿವಿಧ ಮಠಾಧೀಶರ ಚಾತುರ್ಮಾಸ್ಯ ಉತ್ಸವಗಳು, ವ್ಯಾಸ-ದಾಸ ಮಹಾಸಮ್ಮೇಳನಗಳು, ಅನೇಕ ಸನ್ಮಾನ ಸಮಾರಂಭಗಳನ್ನು ಸಂಘಟಿಸಿ ತಾವೊಬ್ಬ ಸಮರ್ಥ ಸಂಘಟಕರೆಂದು ತೋರಿಸಿಕೊಂಡಿದ್ದಾರೆ.

ದಾಸ ಸಾಹಿತ್ಯದ ಪ್ರಚಾರಕ್ಕಾಗಿ, ಸಂಶೋಧನೆಗಾಗಿ, ಉಪನ್ಯಾಸಗಳಿಗಾಗಿ ದೇಶ–ವಿದೇಶದ ಅನೇಕ ನಗರ-ಹಳ್ಳಿಗಳನ್ನು ಸಂದರ್ಶಿಸಿದ್ದಾರೆ. ಈಗಾಗಲೇ 65 ಹೆಚ್ಚು ಗ್ರಂಥಗಳನ್ನು ಬರೆದಿರುವ, 40ಕ್ಕೂ ಹೆಚ್ಚು ಧ್ವನಿಮುದ್ರಿಕೆಗಳನ್ನು ಹೊರತಂದಿರುವ ಪಾರ್ಥಸಾರಥಿಯವರು ಸದಾ ಕ್ರಿಯಾಶೀಲರು.

ವಿಷ್ಣುಸಹಸ್ರನಾಮದ ರಂಗೋತ್ತುಂಗ ತರಂಗ ಮಂಗಳಕರವಾದ ನಾಮಸ್ಮರಣೆಯನ್ನು ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ನಿರಂತರವಾಗಿ ಮಾಡಿಸುತ್ತಿರುವ ಅರಳುಮಲ್ಲಿಗೆಯವರು ‘ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್’ ಎಂಬ ಜಾಗತಿಕ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.

ದಾಸ ಸಾಹಿತ್ಯ ಕ್ಷೇತ್ರಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿದ್ದಾರೆ. ಕನ್ನಡದ ದಾಸ ಸಾಹಿತ್ಯವೆಂಬುದು ಭಕ್ತಿ, ಜ್ಞಾನ, ವೈರಾಗ್ಯಗಳ ಸಂಗಮ ಎಂದು ಸಾರಿದ್ದಾರೆ. ದಾಸ ಸಾಹಿತ್ಯ ಪರಂಪರೆಯಲ್ಲಿ ಬಂದ ದಾಸ ಶ್ರೇಷ್ಠರ ಮನೋಗತ ಮತ್ತು ಸಂದೇಶ ಹಂಚಿ ತನ್ಮೂಲಕ ಕನ್ನಡ ಸಾಹಿತ್ಯದತ್ತ ಜನ ಆಕರ್ಷಿತರಾಗುವಂತೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.