ಇಪ್ಪತ್ತೊಂದನೇ ಶತಮಾನದ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ನಿರ್ದೇಶಕ ಯಾರು? ಗಲ್ಲಾಪೆಟ್ಟಿಗೆ ಲೆಕ್ಕಾಚಾರಗಳ ಬದಲು ಪ್ರಶಸ್ತಿಗಳ ಆಧಾರದಲ್ಲಿ ಸಿನಿಮಾಗಳ ಯಶಸ್ಸನ್ನು ಗುರ್ತಿಸುವುದಾದರೆ, ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವೀ ನಿರ್ದೇಶಕ ಪಿ. ಶೇಷಾದ್ರಿ. ಅವರ ನಿರ್ದೇಶನದ ಚೊಚ್ಚಿಲ ಸಿನಿಮಾ ‘ಮುನ್ನುಡಿ’ ತೆರೆಕಂಡು ನವೆಂಬರ್ 10ಕ್ಕೆ 24 ವರ್ಷಗಳು ತುಂಬಿದವು. ‘ಮುನ್ನುಡಿ’ಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ನಿಂತುನೋಡಿದರೆ, ಆ ಸಿನಿಮಾ ಶೇಷಾದ್ರಿ ಅವರ ವೃತ್ತಿಬದುಕಿಗೆ ಬರೆದ ಮುನ್ನುಡಿಯಂತಿದೆ.

ಅಂಕಿಅಂಶಗಳ ಸ್ವಾರಸ್ಯ ನೋಡಿ. ಕನ್ನಡ ಚಿತ್ರರಂಗಕ್ಕೆ ತೊಂಬತ್ತು ತುಂಬಿದೆ. ಶೇಷಾದ್ರಿ ಅವರಿಗೆ ಅರವತ್ತು ತುಂಬಿ ಒಂದು ದಿನವಷ್ಟೇ ಆಗಿದೆ (ಜನನ: ನ. 23, 1963). ಅವರ ಸಿನಿಮಾ ನಂಟಿಗೆ ಮೂವತ್ತೈದು; ‘ಮುನ್ನುಡಿ’ ಚಿತ್ರಕ್ಕೆ ಇಪ್ಪತ್ತೈದು. ಈ ತ್ರಿವಳಿ ಸಂಭ್ರಮದಲ್ಲಿ ಶೇಷಾದ್ರಿ ಅವರ ಕಾಲು ಶತಮಾನದ ವೃತ್ತಿಜೀವನ ಅವಲೋಕಿಸಿದರೆ, ಅಲ್ಲಿ ಪ್ರಶಸ್ತಿಗಳ ಸಾಲುದೀಪಗಳು!

ಶೇಷಾದ್ರಿ ತುಮಕೂರು ಜಿಲ್ಲೆಯ ದಂಡಿನಶಿವರದವರು. ನಿರ್ದೇಶಕರ ರೂಪದಲ್ಲಿ ಸಿದ್ದಲಿಂಗಯ್ಯ, ಕೆ.ಎಂ. ಶಂಕರಪ್ಪ, ಬರಗೂರು ರಾಮಚಂದ್ರಪ್ಪನವರನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಮಣ್ಣಿಗೆ ಸೇರಿದ ಶೇಷಾದ್ರಿ, ಕಲಾತ್ಮಕ ನೆಲೆಗಟ್ಟಿನ ಪ್ರಯೋಗಶೀಲ ಸಿನಿಮಾ ಪರಂಪರೆಗೆ ಸಲ್ಲುವವರು.

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಶೇಷಾದ್ರಿ ಕನ್ನಡ ಮೇಷ್ಟ್ರಾಗುವ ಬದಲು ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದರು. ಚಿತ್ರಕಲಾವಿದ ಎನ್ನುವ ವಿಶೇಷಣವೂ ಅವರ ಹೆಸರಿನೊಂದಿಗಿತ್ತು. ಬರವಣಿಗೆ ಹಾಗೂ ಚಿತ್ರೋತ್ಸವಗಳ ಮೂಲಕ ಶುರುವಾದ ಸಿನಿಮಾ ಸೆಳೆತ, ಕಥೆ–ಚಿತ್ರಕಥೆ–ಸಂಭಾಷಣೆಕಾರರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ದಾರಿಯಾಯಿತು. ಸ್ವತಂತ್ರ ನಿರ್ದೇಶನದ ಹಂಬಲದಲ್ಲಿ ರೂಪುಗೊಂಡಿದ್ದು ಬೊಳುವಾರರ ಕಥನ ಆಧರಿಸಿದ ‘ಮುನ್ನುಡಿ.’

‘ಮುನ್ನುಡಿ’ ತೆರೆಕಂಡಾಗ ಶೇಷಾದ್ರಿ ಅವರು ತಮ್ಮ ಸಿನಿಮಾ ನೋಡುವಂತೆ ಕನ್ನಡದ ನೂರಾರು ಲೇಖಕರಿಗೆ ‘ಕಾರ್ಡ್’ ಬರೆದಿದ್ದರು. ಆ ಸಾಹಿತ್ಯದ ನಂಟು ಸಾಹಿತ್ಯ ಕೃತಿಗಳನ್ನು ಸಿನಿಮಾಕ್ಕೆ ಅಳವಡಿಸುವ ರೂಪದಲ್ಲೂ ಮುಂದುವರೆಯಿತು. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಹಾಗೂ ‘ಬೆಟ್ಟದ ಜೀವ’ ಕಾದಂಬರಿಗಳನ್ನು ಸಿನಿಮಾ ಮಾಡಿದ ಕೀರ್ತಿ ಅವರದು. ಅವರ ಇತ್ತೀಚಿನ ಸಿನಿಮಾ ‘ಮೋಹನದಾಸ’ದ ಕಥೆ ಬೊಳುವಾರರದು.

ಕನ್ನಡದ ಪ್ರಯೋಗಶೀಲ ಸಿನಿಮಾಗಳ ಬಹುತೇಕ ಯುವ ನಿರ್ದೇಶಕರಿಗೆ ಗಿರೀಶ ಕಾಸರವಳ್ಳಿ ಚುಂಬಕವಿದ್ದಂತೆ. ಆ ಚುಂಬಕ ವರ್ತುಲದೊಳಗಿದ್ದೂ ತಮ್ಮದೇ ಆದ ನಿರೂಪಣಾ ಕ್ರಮವೊಂದನ್ನು ಶೇಷಾದ್ರಿ ಕಂಡುಕೊಂಡಿದ್ದಾರೆ. ಸಾಹಿತ್ಯ ಕೃತಿಗಳಿಗೆ ನಿಷ್ಠವಾದ ಶೈಲಿ ಅವರದು. ‘ಡಿಸೆಂಬರ್ 31’ ಸಿನಿಮಾದಲ್ಲಿನ ರಾಜಕೀಯಪ್ರಜ್ಞೆ ಹಾಗೂ ದೃಶ್ಯವ್ಯಾಕರಣ ಗಮನಸೆಳೆಯುವಂತಹದ್ದು. ‘ಮೋಹನದಾಸ’ ಚಿತ್ರದ ನೇರ–ಸರಳ ನಿರೂಪಣೆಯೂ ವಿಶೇಷವಾದುದು.

ಶೇಷಾದ್ರಿ ಅವರ ಚೊಚ್ಚಿಲ ಸಿನಿಮಾ ತೆರೆಕಂಡ ಸಂದರ್ಭ ಪ್ರಯೋಗಶೀಲ ಸಿನಿಮಾಗಳ ಹೊಸ ಅಲೆಯೊಂದು ಹರಳುಗಟ್ಟುತ್ತಿದ್ದ ಸಮಯ. ಈ ಶತಮಾನದ ಮೊದಲ ಹತ್ತು ವರ್ಷಗಳಲ್ಲಿ ಎದ್ದುಕಾಣಿಸುವುದು ನಿರ್ದೇಶಕರೇ. ಆ ‘ನಿರ್ದೇಶಕರ ದಶಕ’ದಲ್ಲಿ ಮುಖ್ಯವಾಹಿನಿ ಸಿನಿಮಾಗಳಲ್ಲಿ ಯೋಗರಾಜ ಭಟ್, ಸೂರಿ ಅಂಥವರು ನೆಲೆ–ಬೆಲೆ ಕಂಡುಕೊಂಡರೆ, ಪ್ರಯೋಗಶೀಲ ಸಿನಿಮಾಗಳಲ್ಲಿ ಯಶಸ್ಸು ಕಂಡಿದ್ದು ಶೇಷಾದ್ರಿ. ಈ ಯಶಸ್ಸು ಪ್ರಶಸ್ತಿಗಳಿಗಷ್ಟೇ ಸೀಮಿತವಾದುದಲ್ಲ; ಸಂಖ್ಯಾ ದೃಷ್ಟಿಯಿಂದಲೂ ಮುಖ್ಯವಾದುದು. ‘ಮುನ್ನುಡಿ’ಯಿಂದ ‘ಮೋಹನದಾಸ’ ಚಿತ್ರದವರೆಗೆ ಹನ್ನೆರಡು ಸಿನಿಮಾಗಳು ಅವರ ನಿರ್ದೇಶನದ ಪಟ್ಟಿಯಲ್ಲಿವೆ. ಸತತವಾಗಿ ಎಂಟು ಸಿನಿಮಾಗಳಿಗೆ (‘ಮುನ್ನುಡಿ’, ‘ಅತಿಥಿ’, ‘ಬೇರು’, ‘ತುತ್ತೂರಿ’, ‘ವಿಮುಕ್ತಿ’, ‘ಬೆಟ್ಟದ ಜೀವ’, ‘ಭಾರತ್ ಸ್ಟೋರ್ಸ್’, ‘ಡಿಸೆಂಬರ್ 31’) ರಾಷ್ಟ್ರಪ್ರಶಸ್ತಿ ಪಡೆದ ದೇಶದ ಏಕೈಕ ನಿರ್ದೇಶಕ ಎನ್ನುವ ಹಿರಿಮೆ ಅವರದ್ದು.

ನಿರ್ದೇಶಕರಾಗಿ ಜೀವಮಾನ ಸಾಧನೆಗೆ ಸಲ್ಲುವ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ (2018) ಪಡೆದ ಹೆಮ್ಮೆಯ ಶೇಷಾದ್ರಿ, ‘ಬೆಳ್ಳಿತೆರೆಯಲ್ಲಿ ಪ್ರಯೋಗ, ಕಿರುತೆರೆಯಲ್ಲಿ ಅನ್ನದಯೋಗ’ ಎನ್ನುವುದನ್ನು ಕಾಯಕಮಂತ್ರವಾಗಿ ನಂಬಿರುವಂತಿದೆ. ಕಿರುತೆರೆ ಧಾರಾವಾಹಿಗಳ ನಿರ್ದೇಶಕರಾಗಿಯೂ ಅವರು ಜನಪ್ರಿಯರು. ಕನ್ನಡದ ಪ್ರಸಿದ್ಧ ಕಥೆಗಳನ್ನು ಆಧರಿಸಿದ ‘ಕಥೆಗಾರ’ ಧಾರಾವಾಹಿಯ ನಿರ್ದೇಶಕರಲ್ಲಿ ಅವರೂ ಒಬ್ಬರು. ಮಾಸ್ತಿಯವರ ‘ಸುಬ್ಬಣ್ಣ’ ಕಾದಂಬರಿಯನ್ನು ಕಿರುತೆರೆಗೆ ಒಗ್ಗಿಸಿದ್ದು ಅವರ ಇನ್ನೊಂದು ಸಾಧನೆ. ಟಿ.ಎನ್. ಸೀತಾರಾಮ್ ಅವರೊಂದಿಗೆ ನಿರ್ದೇಶಿಸಿದ ‘ಮಾಯಾಮೃಗ’ ಅವರ ಮತ್ತೊಂದು ಜನಪ್ರಿಯ ಮನೆ ಮನೆ ಕಥನ.

ಸಾಕ್ಷ್ಯಚಿತ್ರಗಳ ನಿರ್ದೇಶಕರಾಗಿಯೂ ಶೇಷಾದ್ರಿ ಗುರ್ತಿಸಿಕೊಂಡವರು. ಟಿ.ಪಿ. ಕೈಲಾಸಂ, ದೇವುಡು, ಕೆ.ಎಸ್. ನರಸಿಂಹಸ್ವಾಮಿ, ಎ.ಎನ್. ಮೂರ್ತಿರಾವ್, ಎಸ್.ಎಲ್. ಭೈರಪ್ಪನವರು ಸೇರಿದಂತೆ ಸಾರಸ್ವತ ಲೋಕದ ಹಲವರ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಸೃಜನಶೀಲ ನಿರ್ದೇಶಕನೊಬ್ಬನ ಸಮಕಾಲೀನ ಸ್ಪಂದನಗಳ ರೂಪದಲ್ಲಿಯೂ ಶೇಷಾದ್ರಿ ಅವರ ಸಿನಿಮಾಗಳನ್ನು ನೋಡಬಹುದು. ಅಮಾಯಕ ಹೆಣ್ಣುಮಕ್ಕಳ ಶೋಷಣೆ, ಭಯೋತ್ಪಾದನೆ, ದಯಾಮರಣ, ಜಾಗತೀಕರಣ, ಹುಟ್ಟು–ಸಾವಿನ ಜಿಜ್ಞಾಸೆ, ‘ಗ್ರಾಮವಾಸ್ತವ್ಯ’ ಹೆಸರಿನ ರಾಜಕಾರಣ, ಹಿರಿಯ ನಾಗರಿಕರ ತಲ್ಲಣ – ಹೀಗೆ ವರ್ತಮಾನಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಶೇಷಾದ್ರಿ ನಿರಂತರವಾಗಿ ಮಾಡುತ್ತಿದ್ದಾರೆ. ಅವರ ಇತ್ತೀಚಿನ ಸಿನಿಮಾ ‘ಮೋಹನದಾಸ’ ಗಾಂಧಿಯ ಬಾಲ್ಯಜೀವನವನ್ನು ಧ್ಯಾನಿಸಿರುವ ದೇಶದ ಏಕೈಕ ಸಿನಿಮಾ.

ನಿರ್ದೇಶನ ಮಾತ್ರವಲ್ಲ, ನಿರ್ಮಾಣಕ್ಕೆ ಸಂಬಂಧಿಸಿದಂತೆಯೂ ಅವರ ಪ್ರಯೋಗಶೀಲತೆಯನ್ನು ಗುರ್ತಿಸಬೇಕು. ಸಮಾನಮನಸ್ಕ ಗೆಳೆಯರೊಂದಿಗೆ ತಾವೂ ಸೇರಿಕೊಂಡು ಬಂಡವಾಳ ಹೂಡುವ ಮೂಲಕ ಸಿನಿಮಾಗಳನ್ನು ರೂಪಿಸಿರುವ ಅವರ ಮಾದರಿ, ಯುವ ಸಿನಿಮಾ ನಿರ್ಮಾತೃಗಳಿಗೆ ಪಾಠದಂತಿದೆ.

ಸಿನಿಮಾಗಳ ಮೂಲಕ ಮಾತ್ರವಲ್ಲದೆ, ಮಾತು–ಬರಹ ಹಾಗೂ ಸಂಘಟನೆಯ ಮೂಲಕವೂ ಸಿನಿಮಾ ಸಂಸ್ಕೃತಿ ರೂಪಿಸುವಲ್ಲಿ ಶೇಷಾದ್ರಿ ಸಕ್ರಿಯರು. ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಚಿತ್ರೋತ್ಸವಗಳಲ್ಲಿ ಪರಿಚಿತ ಕನ್ನಡ ಮುಖವಾದ ಶೇಷಾದ್ರಿ, ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ದ ಕಳೆದೆರಡು ಋತುಗಳಲ್ಲಿ ಸಂಘಟನೆಯ ಮುಂಚೂಣಿಯಲ್ಲಿದ್ದಾರೆ.

ಕನ್ನಡ ಚಿತ್ರೋದ್ಯಮ ಉಳಿವಿನ ಬೆಳಕಿನ ಕಂಡಿಯ ಹುಡುಕಾಟದಲ್ಲಿದ್ದಾರೆ. ಪ್ರಯೋಗಶೀಲ ಸಿನಿಮಾ ನಿರ್ಮಾತೃಗಳು ಯಾಕಾಗಿ ಸಿನಿಮಾ ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಈ ಸಂದಿಗ್ಧಗಳ ಜೊತೆಗೇ, ಶೇಷಾದ್ರಿ ಅರವತ್ತು ದಾಟಿದ್ದಾರೆ. ಅರವತ್ತರ ಸಂಕ್ರಮಣ ಸಂದರ್ಭ ಅವರ ಸಿನಿಮಾಗಳ ಪ್ರದರ್ಶನ, ಚರ್ಚೆ ಹಾಗೂ ಪುಸ್ತಕಗಳ ಬಿಡುಗಡೆಯ ರೂಪ ಪಡೆದಿದೆ. ಈ ಕ್ರಿಯಾಶೀಲ ಸಂಭ್ರಮ ಶೇಷಾದ್ರಿ ಅವರಲ್ಲಿ ಹೊಸ ಸಿನಿಮಾದ ಕನಸನ್ನು ಮೊಳೆಯಿಸಬಹುದೇನೊ?

ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿ ಆವರಣದಲ್ಲಿ ನ. 24ರ ಸಂಜೆ ಪಿ. ಶೇಷಾದ್ರಿ ಸಿನಿಮಾವಲೋಕನ ಕುರಿತ ನಾಲ್ಕು ಪುಸ್ತಕಗಳ (‘ಚಿತ್ರ ಮಂಥನ’ ‘ಕಣ್ಣು ಕಂಡ ಕ್ಷಣಗಳು’ ‘ಸಿನಿಮಾಯಾನದಲ್ಲಿ ದಕ್ಕಿದ್ದು–ಮಿಕ್ಕಿದ್ದು’ ‘Frames of Conscience’) ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.