ನಾನು ಮೊದಲ ಸಲ ಪ್ರೀಮಿಯರ್ ಪುಸ್ತಕದಂಗಡಿಗೆ ಹೋದದ್ದು 1979ರಲ್ಲಿ. ನನಗಾಗ ಇಪ್ಪತ್ತು ಮೀರಿದ ಹರೆಯ. ಮುಂದಿನ ಮೂರು ದಶಕಗಳ ಕಾಲ ಆ ಅಂಗಡಿ ಮತ್ತು ಅದರ ಒಡೆಯ ನನ್ನ ಬದುಕಿನ ಅನಿವಾರ್ಯ ಭಾಗವೇ ಆಗಿಬಿಟ್ಟರು. ಮಂಗಳವಾರ ಮುಂಜಾನೆ ಅವರು ನಿಧನರಾದದ್ದು ತಿಳಿದು ಕಣ್ಣೀರಿಟ್ಟೆ.

ಇಪ್ಪತ್ತನಾಲ್ಕು ತಾಸುಗಳ ನಂತರ ಮನಸ್ಸು ತಿಳಿ ಮಾಡಿಕೊಂಡು ಈ ಲೇಖನ ಬರೆದೆ. ಬೆಂಗಳೂರಿಗೆ ಅವರ ರಚನಾತ್ಮಕ ಕೊಡುಗೆಯನ್ನು ಮೆಲುಕು ಹಾಕಿದೆ. ಇಂಗ್ಲಿಷ್ ಪುಸ್ತಕಗಳ ಖರೀದಿಸಿ ಓದುವ ಬೆಂಗಳೂರು ನಿವಾಸಿಗಳ ಆಸಕ್ತಿಗಳು ಮತ್ತು ಗೀಳುಗಳನ್ನು ಪೊರೆದು ಪೋಷಿಸಿದ್ದು ಟಿ.ಎಸ್. ಶಾನಭಾಗರು ಮತ್ತು ಅವರ ಪ್ರೀಮಿಯರ್ ಪುಸ್ತಕದಂಗಡಿ. ಅವರ ಸಂಗ್ರಹದ ಸಿರಿವಂತಿಕೆ ದಂಗುಬಡಿಸುವಂತಹುದಾಗಿತ್ತು. ಅವರ ಬೆಚ್ಚನೆಯ ಸ್ನೇಹ ಮತ್ತು ಧಾರಾಳ ಸ್ವಭಾವಗಳು ಓದುಗರನ್ನು ಗೆದ್ದಿದ್ದವು.

ಪ್ರೀಮಿಯರ್ ಮತ್ತು ಅದರ ಒಡೆಯನ ಜೊತೆಗಿನ ನನ್ನ ಸಂಬಂಧ ಕುರಿತು ಬೇರೆಡೆ ವಿಸ್ತೃತವಾಗಿ ಬರೆದಿದ್ದೇನೆ. ಇಲ್ಲಿ ಬೇರೆಯವರ ನೆನಪುಗಳನ್ನು ಹೆಕ್ಕಿ ನೀಡುತ್ತಿದ್ದೇನೆ. ಕೊಂಕಣ ತೀರದಿಂದ ಹೊಸದಾಗಿ ಬೆಂಗಳೂರಿಗೆ ಕಾಲಿಟ್ಟ ದಿನಗಳಲ್ಲಿ ಹದಿನೆಂಟರ ಹರೆಯದ ನಾಚಿಕೆಯ ಸ್ವಭಾವದ ತಾವು ಪ್ರೀಮಿಯರ್ಗೆ ನೀಡಿದ ಮೊದಲ ಭೇಟಿಯನ್ನು ಅಚ್ಚುಮೆಚ್ಚಿನಿಂದ ನೆನೆಯುತ್ತಾರೆ ಕನ್ನಡ ಕಾದಂಬರಿಕಾರ ವಿವೇಕ ಶಾನಭಾಗ. ಆಗ ಬಹಳ ಇಷ್ಟಪಟ್ಟು ಪುಸ್ತಕವೊಂದನ್ನು ಕೈಗೆತ್ತಿಕೊಂಡು ಪುಟ ತಿರುವಿ ನಿಟ್ಟುಸಿರಿಟ್ಟು ಅದನ್ನು ಕೆಳಗಿರಿಸುತ್ತಿದ್ದ ವಿವೇಕರನ್ನು ಗಮನಿಸಿದ ಹಿರಿಯ ಶಾನಭಾಗರು ಸಹಾನುಭೂತಿಯ ದನಿಯಲ್ಲಿ ಹೇಳುತ್ತಿದ್ದರಂತೆ- ‘ಪುಸ್ತಕ ತೆಗೆದುಕೊಂಡು ಹೋಗಿ ಓದಿ, ನಾಳೆ ವಾಪಸು ತಾ’.

ಆನಂತರ ತಾವು ಬಯಸಿದ ಪುಸ್ತಕಗಳನ್ನು ಖರೀದಿಸುವ ಶಕ್ತಿ ಬಂದಿತ್ತು ವಿವೇಕರಿಗೆ. ದೇಶದ ಇತರೆಡೆಗಳಲ್ಲಿ ಸಿಗದೆ ಇರುವಂತಹ ಪುಸ್ತಕಗಳನ್ನು ತರಿಸಿಕೊಡುವ ಶಾನಭಾಗರ ಸಾಮರ್ಥ್ಯವನ್ನು ಗೌರವಿಸಿದ್ದರು. ವಿಶೇಷವಾಗಿ ಐಸಾಕ್ ಬಾಶೆವಿಕ್ ಸಿಂಗರ್ ಅವರ ಕತೆ ಕಾದಂಬರಿಗಳ ಗೀಳು ಬೆಳೆಸಿಕೊಂಡಿದ್ದರು ವಿವೇಕ. ಸಿಂಗರ್ ಬರೆದ ಮೂವತ್ತು ಪುಸ್ತಕಗಳ ಪೈಕಿ ಬಹುಪಾಲನ್ನು ವಿವೇಕ ಒಂದರ ನಂತರ ಮತ್ತೊಂದರಂತೆ ಖರೀದಿಸಿದ್ದು ಪ್ರೀಮಿಯರ್ನಲ್ಲೇ. ಅಮೆಜಾನ್ನಂತಹ ಖರೀದಿ ವ್ಯವಸ್ಥೆ ಇಲ್ಲದ ದಿನಗಳಲ್ಲಿ ಪ್ರತಿಯೊಬ್ಬ ಗ್ರಾಹಕನ ಅಗತ್ಯಗಳನ್ನು ಪೂರೈಸುತ್ತಿದ್ದರು ಶಾನಭಾಗರು.

ಪ್ರೀಮಿಯರ್ಗೆ ಕಾಲಿಡುವ ಪ್ರತಿಯೊಬ್ಬ ಓದುಗನ ಆಸಕ್ತಿ ಅಭಿರುಚಿಯನ್ನು ಎರಡನೆಯ ಭೇಟಿಗೇ ಅರಿತುಬಿಡುತ್ತಿದ್ದರು ಶಾನಭಾಗರು. ಕಂಪ್ಯೂಟರಿಗಿಂತ ಮಿಗಿಲಾಗಿ ನೆನಪಿಟ್ಟು ಅಂತಹ ಪುಸ್ತಕಗಳನ್ನು ಅವರಿಗೆ ನೀಡುತ್ತಿದ್ದರು.

‘ಶಾನಭಾಗರದು ಬೆರಗುಗೊಳಿಸುವ ಪುಸ್ತಕ ಸಂಗ್ರಹ. ಕಾಲಿಟ್ಟಲ್ಲೆಲ್ಲ ಕಿಕ್ಕಿರಿದ ಪುಸ್ತಕಗಳ ನಡುವೆ ನಡೆಯುವುದೇ ದುಸ್ತರ ಎಂಬಷ್ಟು ದಟ್ಟ. ನಾಚಿಕೆ ಸ್ವಭಾವದ ಈ ವ್ಯಕ್ತಿ ನನ್ನ ಆಸಕ್ತಿಗಳನ್ನು ಬಲು ಬೇಗ ಗ್ರಹಿಸಿದ್ದರು. ನಾನು ಹೋದಾಗಲೆಲ್ಲ ರಾಶಿ ಪುಸ್ತಕಗಳ ನಡುವಿನಿಂದ ಹೊರಗೆಳೆದ ಹೊತ್ತಿಗೆಯೊಂದನ್ನು ಕೈಗಿಡುತ್ತಿದ್ದರು. ನಿಮಗೆ ಇಷ್ಟವಾದೀತು ಎನ್ನುತ್ತಿದ್ದರು. ಹೀಗೆ ಅವರು ಕೈಗಿಡುತ್ತಿದ್ದ ಪುಸ್ತಕಗಳು ನನಗೆ ನಿಜವಾಗಿಯೂ ಇಷ್ಟವಾಗುತ್ತಿದ್ದವು. ಇಂತಹುದೇ ಅನುಭವವನ್ನು ಹಲವಾರು ಮಂದಿ ನನ್ನ ಬಳಿ ಹೇಳಿಕೊಂಡಿದ್ದಾರೆ’ ಎಂದು ಜೀವಶಾಸ್ತ್ರಜ್ಞ ವಿದ್ಯಾನಂದ ನಂಜುಂಡಯ್ಯ ನನಗೆ ಬರೆದು ತಿಳಿಸಿದ್ದಾರೆ.

ಶಾನಭಾಗರ ಸಾವನ್ನು ಕುರಿತು ನಾನು ಟ್ವೀಟ್ ಮಾಡಿದಾಗ ಹಲವಾರು ಮಂದಿ ತಮ್ಮ ನೆನಪುಗಳನ್ನು ಹಂಚಿಕೊಂಡರು. ಅಂಕಲ್, ಜೇಬಲ್ಲಿ ಸಾಕಷ್ಟು ಹಣವಿಲ್ಲ, ಪುಸ್ತಕವನ್ನು ನಂತರ ಯಾವಾಗಲಾದರೂ ಖರೀದಿಸುತ್ತೇನೆ ಎಂದರೆ, ಭಾರೀ ರಿಯಾಯಿತಿ ನೀಡುತ್ತಿದ್ದರು. ಪುಸ್ತಕ ಒಯ್ಯಿ, ಸಂಬಳ ಬಂದಾಗ ಹಣ ಕೊಡುವೆಯಂತೆ ಎನ್ನುತ್ತಿದ್ದರು. ದೊಡ್ಡ ಮನುಷ್ಯ ಎಂದು ಒಬ್ಬಾತ ನೆನೆದಿದ್ದರು.

ತಮ್ಮ ‘ಸನ್ನಿ ಡೇಸ್’ ಪುಸ್ತಕಕ್ಕೆ ಹಸ್ತಾಕ್ಷರ ಹಾಕಿಕೊಡಲು ಸುನಿಲ್ ಗವಾಸ್ಕರ್ ಬರಲಿದ್ದಾರೆಂದು ಫೋನ್ ಮಾಡಿ ನಮಗೆ ತಿಳಿಸಿದ್ದರು ಶಾನಭಾಗರು. ಲಿಟ್ಲ್ ಮಾಸ್ಟರ್ ಹಸ್ತಾಕ್ಷರದ ಆ ಪುಸ್ತಕ ಈಗಲೂ ನನ್ನ ಬಳಿಯಿದೆ. ಥ್ಯಾಂಕ್ಯೂ ಶಾನಭಾಗರೇ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದರು. ನಿಜಕ್ಕೂ ಅಚ್ಚುಮೆಚ್ಚಿನ ನೆನಪುಗಳು. ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದ ನಾನು, ಶಾನಭಾಗರು ಶಿಫಾರಸು ಮಾಡಿದ ಪುಸ್ತಕಗಳನ್ನೇ ಓದಿ ಬೆಳೆದವನು. ಸಾಧು ಸ್ವಭಾವದ ಆಕರ್ಷಕವೂ ಸ್ನೇಹಪರವೂ ಆಗಿದ್ದ ವ್ಯಕ್ತಿತ್ವ ಅವರದು. ಬೆಂಗಳೂರಿಗರ ಓದುವ ಹವ್ಯಾಸಕ್ಕೆ ಸ್ಫೂರ್ತಿ ತುಂಬಿದವರು. ನಾನು ನನ್ನ ತಂದೆ ಹಲವು ತಾಸುಗಳ ಕಾಲ ಪುಸ್ತಕಗಳ ತಡವಿ ಹುಡುಕಿ ತೆರೆದು, ಪುಟ ತಿರುವಿ ನೋಡಿದ ನಂತರ ಒಂದೇ ಪುಸ್ತಕ ಖರೀದಿಸಿ ಮನೆಗೆ ಮರಳಿ ಓದಿನ ಸುಖ ಹಂಚಿಕೊಳ್ಳುತ್ತಿದ್ದೆವು. ತಂದೆಯ ಕೈಲಿ ಓಡಾಟ ಸಾಧ್ಯವಾಗದೆ ಹೋದಾಗ ನಾನೊಬ್ಬನೇ ಹೋಗಿ ಬರುತ್ತಿದ್ದೆ ಎಂಬುದು ಟ್ವಿಟರ್ನಲ್ಲಿ ನಮೂದಾದ ಮತ್ತೊಂದು ನೆನಪು.

ಪ್ರೀಮಿಯರ್ ಪುಸ್ತಕ ಭಂಡಾರದ್ದು ಸಾಹಿತ್ಯ, ವಿಜ್ಞಾನ, ಪ್ರವಾಸ, ಕ್ರೀಡೆ, ಮ್ಯಾನೇಜ್ಮೆಂಟ್ ಮುಂತಾದ ಹತ್ತು ಹಲವು ವಿಷಯ ವಸ್ತು ವ್ಯಾಪ್ತಿ. ಪ್ರಾಯಶಃ ದೇಶದ ಇಂತಹ ಯಾವುದೇ ಪುಸ್ತಕದ ಅಂಗಡಿಗೆ ಮಿಗಿಲಾದದ್ದು. ಜೊತೆ ಜೊತೆಗೆ ಪುಸ್ತಕಗಳು ಅವುಗಳ ಲೇಖಕರ ಕುರಿತು ಅರಿತಿದ್ದಷ್ಟೇ ಅಲ್ಲದೆ, ಯಾವ ಓದುಗರಿಗೆ ಯಾವ ಲೇಖಕ- ಪುಸ್ತಕ ಇಷ್ಟವೆಂದು ಅನಾಯಾಸವಾಗಿ ಗ್ರಹಿಸಿದ್ದ ಅಪರೂಪದ ಮಾಲೀಕರು. ಅವರು ಪ್ರೀತ್ಯಾದರಗಳನ್ನು ಸಂಪಾದಿಸಿದ್ದೇ ಹೀಗೆ.

ಮಳಿಗೆಯ ಬಾಡಿಗೆ ತೀರಾ ಹೆಚ್ಚಾಗಿ ಅಂಗಡಿಯನ್ನು ಮುಚ್ಚುವುದಾಗಿ ಅವರು ಸಾರಿದಾಗ ಹೆಚ್ಚು ಕಡಿಮೆ ಬೆಂಗಳೂರಿಗೆ ಬೆಂಗಳೂರೇ ವಂತಿಗೆ ನೀಡಲು ಮುಂದೆ ಬಂದದ್ದನ್ನು ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ನೆನೆದಿದ್ದರು. ಈ ಪ್ರೀತಿಗೆ ಮನಸೋತೋ ಏನೋ ಶಾನಭಾಗರು ಅಂದಿನಿಂದ ಇನ್ನೂ ಕೆಲ ವರ್ಷ ಅಂಗಡಿಯನ್ನು ಮುಚ್ಚಲಿಲ್ಲ.

ಕರುಣೆ ಅನುಕಂಪದ ಗುಣಗಳು ಅವರ ವ್ಯಕ್ತಿತ್ವದೊಂದಿಗೆ ಬೆರೆತು ಹೋಗಿದ್ದವು. ಅವರು ಗಳಿಸಿದ್ದ ಜನಪ್ರೀತಿಯ ಹಿಂದಿನ ಹಲವು ಕಾರಣಗಳಲ್ಲಿ ಈ ಗುಣಗಳೂ ಮಿಳಿತಗೊಂಡಿದ್ದವು. ನ್ಯಾಯವಾದಿ ಆರತಿ ಮುಂಡ್ಕೂರು ಈ ಅಂಗಡಿಯ ಜೊತೆ ಜೊತೆಯಲ್ಲೇ ಬೆಳೆದು ದೊಡ್ಡವರಾದವರು. ಚಿಕ್ಕಂದಿನಲ್ಲಿ ತಮ್ಮ ಕೈ ಖರ್ಚಿಗೆಂದು ಕೊಡುತ್ತಿದ್ದ ಹಣವನ್ನು ಕೂಡಿಟ್ಟು ಪುಸ್ತಕ ಕೊಳ್ಳುತ್ತಿದ್ದವರು. ತಾಯಿಯನ್ನೂ ಕಾಡಿ ಈ ಅಂಗಡಿಯ ಪುಸ್ತಕ ಕೊಡಿಸಿಕೊಂಡವರು. ಮುಂಬಯಿಯ ವಿಶ್ವವಿದ್ಯಾಲಯದಲ್ಲಿ ಓದಿ ಹಲವು ವರ್ಷಗಳ ನಂತರ ಬೆಂಗಳೂರಿಗೆ ಮರಳಿದ ಅವರಿಗೆ ಪ್ರೀಮಿಯರ್ನಲ್ಲಿ ಎದುರಾದದ್ದು ಕೊಂಕಣಿ ನುಡಿಯ ಅಕ್ಕರೆಯ ಸ್ವಾಗತ. ‘ನೀನು ಕೂಡಿಟ್ಟ ನಿನ್ನದೇ ಹಣದಿಂದ ನೀನು ಖರೀದಿಸಿದ ಮೊದಲ ಪುಸ್ತಕ Daddy Longlegs’ ಎಂದು ಶಾನಭಾಗರು ನೆನಪಿಸಿದ್ದರು ಇಂಗ್ಲಿಷಿನಲ್ಲಿ.

ಅಕೆಯ ವಿದ್ಯಾಭ್ಯಾಸ ಅಧ್ಯಯನಗಳು ಶಾನಭಾಗರ ಕೊಡುಗೆಗಳಿಂದ ರೂಪು ತಳೆದು ಹಲವಾರು ವರ್ಷಗಳು ಉರುಳಿದ್ದವು. ಅದೊಂದು ದಿನ, ತಾಸಿನಲ್ಲಿ ಅಂಗಡಿ ಬಾಗಿಲು ಹಾಕುವ ಹೊತ್ತಿನಲ್ಲಿ ಬಂದ ಆರತಿ ಚೀಲದ ತುಂಬ ಪುಸ್ತಕ ಖರೀದಿಸಿ ಹೊರಬೀಳುವಷ್ಟರಲ್ಲಿ ಮಳೆ ಸುರಿಯಲಾರಂಭಿಸಿತು. ಬದಿಯಲ್ಲೇ ಮುಂಗಟ್ಟೊಂದರ ಕೆಳಗೆ ನಿಂತ ಆರತಿ ಅವರಿಗೆ ತಾಸುಗಟ್ಟಲೆ ಕಾಯಬೇಕಲ್ಲ ಎಂಬ ಆತಂಕ. ತಮ್ಮ ಆತಂಕಕ್ಕಿಂತ ಮನೆಯಲ್ಲಿ ಕಾಯುತ್ತಿದ್ದವರ ಚಿಂತೆ ಕಾಡಿತ್ತು. ಅಂಗಡಿ ಬೀಗ ಹಾಕಿ ಕಾರಿನತ್ತ ನಡೆದಿದ್ದರು ಶಾನಭಾಗರು. ಮಳೆಯಲ್ಲಿ ಸಿಕ್ಕಿಕೊಂಡ ಆರತಿ ಕಣ್ಣಿಗೆ ಬಿದ್ದಿದ್ದರು. ಬಳಿ ಬಂದು ಮನೆ ಎಲ್ಲೆಂದು ಕೇಳಿದವರು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಆಕೆಯನ್ನು ಸುರಕ್ಷಿತವಾಗಿ ಮನೆ ಬಾಗಿಲಿಗೆ ಇಳಿಸಿದ್ದರು.

ಶಾನಭಾಗರ ಸಾವಿನ ಸುದ್ದಿ ತಿಳಿದ ನಂತರ ಅವರ ಕುರಿತ ವಿವರಗಳಿಗೆ ಗೂಗಲ್ನಲ್ಲಿ ಹುಡುಕಾಡಿದೆ. The Bangalore Reviewನಲ್ಲಿ ಪ್ರಕಟವಾಗಿದ್ದ ಅವರ ದೀರ್ಘ ಸಂದರ್ಶನವೊಂದು ಕಣ್ಣಿಗೆ ಬಿತ್ತು. ಈ ಸಂದರ್ಶನ ನಡೆದದ್ದು 2014ರಲ್ಲಿ. ಆ ವೇಳೆಗಾಗಲೇ ಅವರು ನಿವೃತ್ತರಾಗಿದ್ದರು. ಪುಸ್ತಕ ಮಾರಾಟಗಾರರಾಗಿ ಅವರ ಸುದೀರ್ಘ ಕಸುಬು ಸವಿವರವಾಗಿ ಹರವಿರುವ ಮಾತುಕತೆಯದು. ಶಾನಭಾಗರಿಗೆ ನಾನು ತೀರಿಸಬೇಕಾದ ಹಲವು ಋಣಗಳಿವೆ. ಆದರೆ ನನ್ನದೂ ಸಣ್ಣ ಋಣವೊಂದು ಅವರ ಮೇಲಿತ್ತು. ಅಲ್ಲಿಯವರೆಗೆ ಅದು ಮರೆತೇ ಹೋಗಿತ್ತು.

ಕ್ರೆಡಿಟ್ ಕಾರ್ಡ್ ಯಂತ್ರವನ್ನು ಇಡುವಂತೆ ಅವರ ಮನ ಒಲಿಸಿದ ಮೊದಲಿಗ ನಾನು. ನಗರದ ಇತರೆ ಪುಸ್ತಕದ ಅಂಗಡಿಗಳು ಈ ಯಂತ್ರಗಳನ್ನು ಹೊಂದಿದ್ದವು. ಶಾನಭಾಗರು ಅವುಗಳೊಂದಿಗೆ ಪೈಪೋಟಿಯಲ್ಲಿ ಇರಲೇಬೇಕಿತ್ತು. ನನ್ನಂತಹ ಬಹಳ ಹಳೆಯ ಗ್ರಾಹಕರು ನಗದನ್ನೇ ಕೊಡುತ್ತಿದ್ದೆವು. ಎಷ್ಟೋ ಸಲ ಪುಸ್ತಕ ಕೊಂಡು ಒಯ್ದು ಓದಿ ಮುಗಿಸಿ ವಾರಗಳೇ ಉರುಳಿದ ನಂತರ ಹಣ ಕೊಟ್ಟಿದ್ದುಂಟು.

ಶಾನಭಾಗರ ಅಂಗಡಿಯಲ್ಲಿ ಇಂಗ್ಲಿಷ್ ಪುಸ್ತಕಗಳನ್ನು ಮಾತ್ರವೇ ಇಡಲಾಗುತ್ತಿತ್ತು. ಆದರೆ ಪ್ರೀಮಿಯರ್ ಅನೇಕ ಕನ್ನಡ ಬರೆಹಗಾರರ ದಿಗಂತಗಳನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನುತ್ತಾರೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯುವ ಸುಗತ ಶ್ರೀನಿವಾಸರಾಜು. ಸುಗತ ಅವರ ತಂದೆ ನಾಟಕಕಾರ ಚಿ.ಶ್ರೀನಿವಾಸರಾಜು ಪ್ರೀಮಿಯರ್ನಿಂದ ಡ್ರಾಮಾ ಥಿಯರಿ ಕುರಿತ ಭಾರೀ ಸಂಗ್ರಹವನ್ನೇ ಒಟ್ಟು ಮಾಡಿಕೊಂಡಿದ್ದರಂತೆ. ಇದೀಗ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಈ ಹೊತ್ತಿಗೆಗಳ ನೆಲೆ.

ಅದ್ವಿತೀಯ ನಿರ್ದೇಶಕ ಬಿ.ವಿ. ಕಾರಂತರು ಬೆಂಗಳೂರಿಗೆ ಬಂದಾಗ ಶ್ರೀನಿವಾಸರಾಜು ಅವರನ್ನು ಕಾಣುತ್ತಿದ್ದುದು ಪ್ರೀಮಿಯರ್ನಲ್ಲೇ. ಪುಸ್ತಕಗಳನ್ನು ತಡವಿ ಹುಡುಕಿ ಹಿಡಿಸಿದ್ದು ಸಿಕ್ಕ ಖುಷಿಯಲ್ಲಿ ತಾಸು ಹೊತ್ತು ಕಳೆದ ನಂತರ ಸನಿಯದಲ್ಲೇ ಇದ್ದ ಕೋಶೀಸ್ ರೆಸ್ಟುರಾದತ್ತ ಹೆಜ್ಜೆ ಹಾಕುತ್ತಿದ್ದರು. ಅಲ್ಲಿ ಮತ್ತೊಂದು ತಾಸಿನ ಗಾಢ ಮತ್ತು ಫಲಪ್ರದ ಸಂಭಾಷಣೆ. ಕನ್ನಡದ ಕವಯತ್ರಿ ಪ್ರತಿಭಾ ನಂದಕುಮಾರ್, ಕನ್ನಡದ ವಿಮರ್ಶಕ ಜಿ.ಕೆ.ಗೋವಿಂದರಾವ್, ಬರಹಗಾರ ಮತ್ತು ಸಂಪಾದಕ ಶೂದ್ರ ಶ್ರೀನಿವಾಸ್ ಹಾಗೂ ತಮಿಳು ಲೇಖಕ ಜಿ.ಶಿವರಾಮಕೃಷ್ಣನ್ ಅವರನ್ನು ಈ ಪುಸ್ತಕ ಮಳಿಗೆಯಲ್ಲಿ ಹಲವು ಸಲ ಕಂಡಿದ್ದೇನೆ. ಉರ್ದು, ಮರಾಠಿ ಹಾಗೂ ಕೊಂಕಣಿ ಬರೆಹಗಾರರ ಸಾಹಿತ್ಯಕ ಸಂವೇದನೆಗಳನ್ನೂ ಶಾನಭಾಗರ ಈ ಅಂಗಡಿ ಉದ್ದೀಪಿಸಿದ್ದುಂಟು.

ಶಾನಭಾಗರ ನಾಚಿಕೆಯ ಚರ್ಯೆಯ ಹಿಂದೆ ತುಂಟತನದ ವಿನೋದವಿತ್ತು, ಅದಮ್ಯ ಆತ್ಮಬಲವಿತ್ತು. ಅವರು ಬಹುಕಾಲದಿಂದ ಬಲ್ಲವರಿಗೆ ಮಾತ್ರವೇ ಅದು ಮೀಸಲಾಗಿರುತ್ತಿತ್ತು. ತಮ್ಮ ಸುತ್ತಣ ನಗರ ಮತ್ತು ವಿಶ್ವ ಬದಲಾಗತೊಡಗಿದ್ದಾಗಲೂ ಅವರ ಅಂಗಡಿಗೆ ಭಂಗವಿರಲಿಲ್ಲ. ಆವರಿಗಿದ್ದ ಆಳದ ಆತ್ಮಶಾಂತಿ, ಆತ್ಮತೃಪ್ತಿಯೇ ಅದರ ಹಿಂದಿನ ಗುಟ್ಟು. ಆದರೆ ರಿಯಲ್ ಎಸ್ಟೇಟ್ ದರಗಳು ಗಗನಕ್ಕೆ ಜಿಗಿದಾಗ ಮಳಿಗೆಯನ್ನು ಮುಚ್ಚದೆ ವಿಧಿಯಿರಲಿಲ್ಲ.

ನಿವೃತ್ತಿಯನ್ನು ಅಂತಹ ಅಸಾಧಾರಣ ಸಮಚಿತ್ತದಿಂದ ಸ್ವೀಕರಿಸಿದ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಕಿಂಚಿತ್ತು ಕಹಿ-ಖೇದದ ಸುಳಿವಿರಲಿಲ್ಲ. ಅಚಲ್ ಪ್ರಬಲರೊಂದಿಗೆ 2016ರಲ್ಲಿ ಅವರನ್ನು ಕಾಣಲು ಹೋಗಿದ್ದೆ. ಪ್ರೀಮಿಯರ್ಅನ್ನು ನಡೆಸುತ್ತಿದ್ದಾಗಿನ ದಿನಗಳ ಅದೇ ಕಕ್ಕುಲತೆ, ಅದೇ ಬೆಚ್ಚನೆಯ ಸ್ನೇಹವ (ತುಂಟತನ) ಆಗಲೂ ಸೂಸಿದ್ದರು. ಅವರ ನೆರೆಹೊರೆ ಕೂಡ ಶಾನಭಾಗರನ್ನು ಅವರ ಗ್ರಾಹಕರಂತೆಯೇ ಗೌರವಿಸಿತ್ತು.

ಸೇಡಿಗಾಗಿ ಕುದಿವ ಒಣಜಂಭದ ವ್ಯಕ್ತಿಗಳಿರುತ್ತಾರೆ. ಚರಿತ್ರೆಯ ರಭಸವೇ ತಮ್ಮ ಬೆನ್ನಿಗಿದೆಯೆಂದು ಕೊಚ್ಚಿಕೊಳ್ಳುತ್ತಾರೆ. ಇಂತಹವರಿಗೆ ಹೋಲಿಸಿದರೆ ಟಿ.ಎಸ್.ಶಾನಭಾಗರು ಮಾಡಿದ್ದು ತೀರದ ಒಳಿತೇ ಸರಿ.

ಕನ್ನಡಕ್ಕೆ: ಡಿ. ಉಮಾಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.