ಇಂದು ಇಡೀ ಪ್ರಪಂಚವನ್ನು ಆವರಿಸಿರುವ ಸೋಶಿಯಲ್ ಮಿಡಿಯಾ ಅನ್ನುವ ಸಾಂಪ್ರದಾಯಿಕವಲ್ಲದ ಮಾಧ್ಯಮದ ಸಾಧ್ಯತೆ ಹಲವಾರು.

ಮುದ್ರಣ ಮಾಧ್ಯಮ ಬಂದಾಗ ಅದು ರಾಷ್ಟ್ರೀಯತೆಯ ಕಲ್ಪನೆಗೆ ಬಹಳ ದೊಡ್ಡ ಮಟ್ಟದ ತಿರುವು ಕೊಟ್ಟಿತು. ಯುರೋಪಿನ ಭಾಷೆಯ ಆಧಾರದ ದೇಶಗಳಲ್ಲಿ ಅಲ್ಲಿನ ಸಮಾಜ ತಮ್ಮನ್ನು ತಮ್ಮ ಭಾಷೆಯ ಸುತ್ತ ಕಲ್ಪಿಸಿಕೊಳ್ಳುವಂತೆ ಮಾಡುವಲ್ಲಿ ಮುದ್ರಣ ಮಾಧ್ಯಮ ಬಹಳ ದೊಡ್ಡ ಪ್ರಭಾವ ಬೀರಿತ್ತು. ಮುಂದೆ ರೇಡಿಯೋ ಮಾಧ್ಯಮ ಬಂದಾಗ ಅದು ಮುದ್ರಣ ಮಾಧ್ಯಮದೊಂದಿಗೆ ಕಾಂಪ್ಲಿಮೆಂಟರಿ ಅನ್ನುವಂತೆ ಕೆಲಸ ಮಾಡಿತು. ಇವೆರಡರ ಮೇಲೂ ಆಳುವವರು ಹಿಡಿತ ಹೊಂದುವುದು ಸಾಧ್ಯವಾಗಿದ್ದರಿಂದ ಮುಂದೆ ಎರಡು ವಿಶ್ವಯುದ್ಧಗಳು ಜರುಗಿ ಕೋಟ್ಯಂತರ ಜನರ ಸಾವು ನೋವಿನಲ್ಲೂ ಈ ಮಾಧ್ಯಮಗಳದ್ದೊಂದು ಪಾತ್ರವಿತ್ತು. ಅಂತೆಯೇ ಮುದ್ರಣ ಮಾಧ್ಯಮ ಕೊಟ್ಟ ಸಾಧ್ಯತೆಯ ಬಲದಿಂದ ಬಹಳ ಬೇಗ ಸಾಕ್ಷರತೆ ಹೊಂದಲು, ತಮ್ಮ ನುಡಿಯಲ್ಲೇ ಎಲ್ಲ ಹಂತದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಿಕೊಂಡು ಜ್ಞಾನದ ಬಲದ ಮೇಲೆ ಏಳಿಗೆ ಹೊಂದಲು ಈ ನಾಡುಗಳಿಗೆ ಸಾಧ್ಯವಾಯಿತು. ಮುಂದೆ ಉಪಗ್ರಹ ಸಂಪರ್ಕ ಹಾಗೂ ಟಿ.ವಿ ಮಾಧ್ಯಮದ ಬರುವಿಕೆ ಸಮಾಜದ ಮೇಲಿನ ಪ್ರಭುತ್ವದ ಹಿಡಿತವನ್ನು ಹೆಚ್ಚಿಸುವ ಹೊಸತಾದ ಮತ್ತು ಹೆಚ್ಚು ಪ್ರಭಾವಶಾಲಿಯಾದ ಏರ್ಪಾಡಾಯಿತು. ಇವೆಲ್ಲವೂ ಒಂದು ತೂಕವಾದರೆ ಈ ಹತ್ತು ವರ್ಷಗಳಲ್ಲಿ ಇಂಟರ್ ನೆಟ್ ಮೂಲಕ ಸಾಧ್ಯವಾದ ಸೋಶಿಯಲ್ ಮೀಡಿಯಾ ಅನ್ನುವ ಅಸಾಂಪ್ರದಾಯಿಕವಾದ ಮಾಧ್ಯಮ ಮತ್ತು ಅದಕ್ಕೆ ಇಂದು ಜಗದಗಲಕ್ಕೂ ದಕ್ಕಿರುವ ಪ್ರಭಾವದ್ದೇ ಇನ್ನೊಂದು ತೂಕ.

ಹಲವು ದೇಶಗಳಲ್ಲಿ ಮುದ್ರಣ ಮತ್ತು ಟಿ.ವಿ ಮಾಧ್ಯಮಗಳನ್ನು ನಿಯಂತ್ರಿಸಿಕೊಂಡು ಆಳ್ವಿಕೆ ಮಾಡುತ್ತಿದ್ದ ಪ್ರಭುತ್ವಗಳನ್ನು ಕಿತ್ತೆಸೆದು ಜನರ ಕ್ರಾಂತಿ ಸಾಧ್ಯವಾಗಿಸಿದ್ದು, ಹಲವು ದೇಶಗಳಲ್ಲಿ ಅಲ್ಲಿನ ಚುನಾವಣೆಯ ದಿಕ್ಕುದೆಸೆಯನ್ನೇ ಬದಲಾಯಿಸಿದ್ದು ಹೀಗೆ ಸೋಶಿಯಲ್ ಮೀಡಿಯಾ ಅನ್ನುವ ಡಿಸ್ರಪ್ಟಿವ್ ಮಾಧ್ಯಮ ಯಾರೂ ಕಡೆಗಣಿಸಲಾಗದ ಒಂದು ಶಕ್ತಿಯಾಗಿ ಎದ್ದು ನಿಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಮೇಲು ಕೀಳು ಅನ್ನದೇ ಒಂದು ಧ್ವನಿ ಕಲ್ಪಿಸುವ ಕಾರಣಕ್ಕೆ ಅದು ನಿಜ ಅರ್ಥದ ಮಂದಿಯಾಳ್ವಿಕೆಯ ಸ್ವರೂಪವನ್ನು ಪಡೆದುಕೊಂಡಿದೆ. ಇದೇ ಹೊತ್ತಲ್ಲಿ ಅದಕ್ಕಿರುವ ವ್ಯಾಪಕತೆ ಮತ್ತು ಅನಾನಿಮಿಟಿಯ ಕಾರಣಕ್ಕೆ ಅದು ಸುಳ್ಳು ಸುದ್ದಿ ಹರಡುವ, ದ್ವೇಷ ಬಿತ್ತುವ, ಬೆಳೆಯುವ ವೇದಿಕೆಯಾಗಿಯೂ ಬಳಕೆಯಾಗುತ್ತಿದೆ.

ಅಂತೆಯೇ ಸೋಶಿಯಲ್ ಮೀಡಿಯಾವನ್ನು ಜನಪರವಾದ ನೆಲೆಯಲ್ಲಿ, ಅಭಿಪ್ರಾಯ ರೂಪಿಸಲು, ಅಭಿಯಾನಗಳನ್ನು ನಡೆಸಲು ಮತ್ತು ಒಳ್ಳೆಯ ಬದಲಾವಣೆ ತರುವತ್ತಲೂ ಬಳಸಬಹುದು. ಕನ್ನಡದ ಸಂದರ್ಭದಲ್ಲಿ ಕನ್ನಡ, ಕನ್ನಡಿಗರ ಮುಂದೆ ಬರುವ ಭಾಷಿಕ ಸವಾಲುಗಳನ್ನು ಎದುರಿಸುವಲ್ಲಿ ಸಾಮಾಜಿಕ ಜಾಲತಾಣಗಳನ್ನು ಕೂಡ ಹೀಗೆ ಬಳಸಲು ಸಾಧ್ಯವಾಗಿದೆ. ಕೆಲವು ನಿದರ್ಶನಗಳು:

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಗೆ ಕೊನೆ
ಯಾವುದೇ ಊರಿನಲ್ಲಿ ಅಲ್ಲಿನ ಸ್ಥಳೀಯ ನುಡಿಯ ಸಾರ್ವಭೌಮತ್ವ ಎದ್ದು ಕಾಣಿಸಲು ಇರುವ ಮುಖ್ಯವಾದ ವೇದಿಕೆಗಳೆಂದರೆ ಅಲ್ಲಿನ ರೈಲು, ಬಸ್ ಮತ್ತು ವಿಮಾನ ನಿಲ್ದಾಣಗಳು, ಅಲ್ಲಿನ ಬೀದಿ ಬದಿಯ ಬಯಲರಿಕೆಗಳು, ರೇಡಿಯೋ ವಾಹಿನಿಗಳು. ಬೆಂಗಳೂರಿನಂತಹ ಬೆಲ್ಲಕ್ಕೆ ಇರುವೆ ಮುತ್ತಿರುವಂತೆ ಕಾಣುವ ವಲಸಿಗರಿಗೆ ಪ್ರಿಯವಾದ ಊರಿನಲ್ಲಿ ಕನ್ನಡದ ಸಾರ್ವಭೌಮತ್ವ ಉಳಿಯಲು ಇಲ್ಲಿನ ನಗರ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕನ್ನಡಕ್ಕೆ ಆದ್ಯತೆ ಕೊಡಬೇಕು. ಬಿ.ಎಂ.ಟಿ.ಸಿಯಂತಹ ನಗರ ಸಾರಿಗೆ ವ್ಯವಸ್ಥೆ ಎಂದಿನಿಂದಲೂ ಕನ್ನಡಕ್ಕೆ ಮೊದಲ ಮಣೆ ಹಾಕಿದೆ. ವಲಸಿಗರ, ಪ್ರವಾಸಿಗರ ಅನುಕೂಲಕ್ಕಾಗಿ ಅಲ್ಲಲ್ಲಿ ಇಂಗ್ಲಿಷ್ ಅನ್ನು ಬಳಸಿದೆ. ಇಂತಹದೊಂದು ಭಾಷಾ ನೀತಿಯ ಏರ್ಪಾಡು ಯಾವುದೇ ಸಮಸ್ಯೆ ಇಲ್ಲದೇ ಅರವತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ನಗರದ ಬಸ್ ವ್ಯವಸ್ಥೆಗೆ ಪೂರಕವಾಗಿ ಜಾರಿಯಾಗಲು ಹೊರಟ ಮೆಟ್ರೋ ರೈಲು ಕೂಡ ಇಂತಹುದೇ ಭಾಷಾ ನೀತಿಯ ಪಾಲನೆ ಮಾಡಬೇಕಿತ್ತು. ಆದರೆ ಅದರ ಚುಕ್ಕಾಣಿ ಹಿಡಿದ ಐ.ಎ.ಎಸ್ ಅಧಿಕಾರಿಗಳ ದೆಸೆಯಿಂದ, ದೆಹಲಿಯ ನಗರಾಭಿವೃದ್ಧಿ ಇಲಾಖೆಯಲ್ಲಿ ಕುಳಿತವರ ಒತ್ತಾಸೆಯಿಂದ ಇಲ್ಲಿ ಅನಗತ್ಯವಾಗಿ ಹಿಂದಿ ಭಾಷೆಯನ್ನು ಹೇರುವ ಕೆಲಸ ಮೆಟ್ರೋದ ಡೆಮೋ ಬೋಗಿಗಳು ಬಂದ ದಿನದಿಂದಲೇ ಶುರುವಾಯಿತು. ತ್ರಿಭಾಷಾ ಸೂತ್ರದ ಹೆಸರಲ್ಲಿ ಒಳಬಂದ ಹಿಂದಿ ಈಗ ಕರ್ನಾಟಕದ ಉದ್ದಗಲಕ್ಕೂ ರೈಲು, ಬ್ಯಾಂಕು, ಅಂಚೆ, ವಿಮೆ, ಪಿಂಚಣಿ, ತೆರಿಗೆ ಹೀಗೆ ಯಾವ ಇಲಾಖೆಯಲ್ಲೂ ಕನ್ನಡಕ್ಕಾಗಲಿ, ಕನ್ನಡಿಗರಿಗಾಗಲಿ ಜಾಗವಿಲ್ಲದಂತೆ ಆಕ್ರಮಿಸಿಕೊಂಡಿದೆ. ಇಂತಹ ಹೊತ್ತಲ್ಲೇ ನಗರದ ಒಳಗಿನ ಸಾರಿಗೆ ಏರ್ಪಾಡಲ್ಲೂ ಇದನ್ನು ಹೇರುವ ಪ್ರಯತ್ನಕ್ಕೆ ಸಹಜವಾಗಿಯೇ ಪ್ರತಿರೋಧ ಶುರುವಾಯಿತು ಮತ್ತು ಅದು ಸೋಶಿಯಲ್ ಮೀಡಿಯಾದ ತಾಣಗಳಿಂದಲೇ ಶುರುವಾಯಿತು. ಮೊದ ಮೊದಲಿಗೆ ಇದಕ್ಕೆ ಸೊಪ್ಪು ಹಾಕದ ಮೆಟ್ರೋ ಪ್ರತಿನಿಧಿಗಳು, ಉಡಾಫೆಯಿಂದ ಉತ್ತರಿಸಿದ್ದಷ್ಟೇ ಅಲ್ಲದೇ ಹಾಕಲಾದ ಯಾವುದೇ ಆರ್.ಟಿ.ಐಗಳಿಗೂ ಸರಿಯಾದ ಉತ್ತರ ನೀಡಲಿಲ್ಲ. ಯಾವ ಕಾನೂನಿನ ಆಧಾರದ ಮೇಲೆ, ಯಾರ ನಿರ್ದೇಶನದ ಮೇಲೆ ಚಾಲ್ತಿಯಲ್ಲಿದ್ದ ಭಾಷಾ ನೀತಿ ಕೈಬಿಟ್ಟು ಹಿಂದಿ ಬಳಸಲು ಮುಂದಾಗಿದ್ದೀರಿ ಅನ್ನುವ ಪ್ರಶ್ನೆಗೆ ಉತ್ತರ ಕೊಡಲು ಎರಡು ವರ್ಷ ತೆಗೆದುಕೊಂಡು ಕೊನೆಯಲ್ಲಿ ಆರ್.ಟಿ.ಐ ವ್ಯಾಪ್ತಿಗೆ ಬಾರದ ಬೋರ್ಡ್ ನಿರ್ಧಾರ ಎಂದು ಕೈ ತೊಳೆದುಕೊಳ್ಳಲು ನಿರ್ಧರಿಸಿತು. ಆ ಹೊತ್ತಿಗೆ ಸೋಶಿಯಲ್ ಮೀಡಿಯಾದ ತಲುಪುವಿಕೆ ಹೆಚ್ಚು ಆಳವಾಗಿ, ಅಗಲವಾಗಿ ಹರಡಿಕೊಂಡು ರಾಜ್ಯದ ಅನೇಕ ಹಿರಿಯ ರಾಜಕೀಯ ನಾಯಕರು ಫೇಸ್ಬುಕ್, ಟ್ವಿಟ್ಟರ್ನಲ್ಲಿ ತಮ್ಮ ಖಾತೆ ತೆರೆದು ಜನರ ಬೇಕು, ಬೇಡಗಳಿಗೆ ಸ್ಪಂದಿಸುವ ನಡೆ ಶುರುವಾಗಿತ್ತು. ಮೆಟ್ರೋದ ಎರಡನೆಯ ಹಂತದ ಶುರುವಿನಲ್ಲೂ ಈ ಹಿಂದಿ ಹೇರಿಕೆ ಮುಂದುವರೆದಾಗ ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಶುರುವಾಗಿ ಕೊನೆಗೆ ಸುದ್ದಿವಾಹಿನಿಗಳಲ್ಲೂ ಚರ್ಚೆಯ ಕಾವೇರಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಬೇಡಿಕೆಗೆ ಸ್ಪಂದಿಸಿ ನಮ್ಮ ಮೆಟ್ರೋದಿಂದ ಹಿಂದಿಯನ್ನು ಕೈಬಿಟ್ಟು ಬಿ.ಎಂ.ಟಿ.ಸಿಯಲ್ಲಿ ಇರುವಂತೆ ಕನ್ನಡ/ಇಂಗ್ಲಿಷ್ ಬಳಕೆಯ ಭಾಷಾ ನೀತಿಗೆ ಮರಳಿದರು. ಇದರೊಂದಿಗೆ ಹಂತ ಹಂತವಾಗಿ ಕರ್ನಾಟಕದ ಎಲ್ಲ ಸಾರಿಗೆ ವ್ಯವಸ್ಥೆಯಲ್ಲೂ ಹಿಂದಿಯನ್ನು ತೂರಿಸುವ ಪ್ರಯತ್ನಕ್ಕೆ ಆರಂಭದಲ್ಲೇ ತಡೆ ಬಿದ್ದಿತು.

ಕನ್ನಡದಲ್ಲಿ ಡಬ್ಬಿಂಗ್ ಮೇಲಿನ ನಿಷೇಧಕ್ಕೆ ತಡೆ
ಪ್ರಪಂಚದ ಎಲ್ಲೆಡೆ ಡಬ್ಬಿಂಗ್ ಅನ್ನು ಒಂದು ನುಡಿ ಸಮಾಜ ತನ್ನ ಪರಿಸರದಲ್ಲಿ ತನ್ನ ಭಾಷೆಯ ಸಾರ್ವಭೌಮತ್ವ ಉಳಿಸಿಕೊಳ್ಳಲು ಇರುವ ಒಂದು ಸಾಧನ ಎಂಬಂತೆ ನೋಡುತ್ತದೆ. ವಿಶ್ವಸಂಸ್ಥೆ ಭಾಷಾ ಹಕ್ಕುಗಳ ಕುರಿತ ಬಾರ್ಸಿಲೋನಾ ಘೋಷಣೆಯಲ್ಲೂ ಡಬ್ಬಿಂಗ್ ಅನ್ನು ಒಂದು ಭಾಷೆ ಉಳಿಸುವ ಸಾಧನೆ ಎಂದೇ ಕರೆದಿದೆ. ಭಾರತದ ಎಲ್ಲ ಭಾಷೆಗಳಲ್ಲೂ ಹೊರಗಿನ ನುಡಿಯಲ್ಲಿ ಇರುವ ಜ್ಞಾನ ಮತ್ತು ಮನರಂಜನೆಯ ವಿಷಯಗಳನ್ನು ತಮ್ಮ ಭಾಷೆಗೆ ಡಬ್ ಮಾಡಿಕೊಂಡು ನೋಡುವ ಆಯ್ಕೆ ಲಭ್ಯವಿದೆ. ಭಾರತದ ಕಾನೂನು, ಸಂವಿಧಾನವೂ ಇದಕ್ಕೆ ಮನ್ನಣೆ ನೀಡಿದೆ. ಹೀಗಿದ್ದಾಗಲೂ ಭಾಷೆ, ಸಂಸ್ಕೃತಿಯ ನೆಪವೊಡ್ಡಿ ಡಬ್ಬಿಂಗ್ ಅನ್ನು ತಡೆದು ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಕೆಲವೇ ಕೆಲವು ಖಾಸಗಿ ವ್ಯಕ್ತಿಗಳು ಕಿತ್ತುಕೊಂಡಿದ್ದರಲ್ಲದೇ ಹಂತ ಹಂತವಾಗಿ ಗಡಿ ಭಾಗಕ್ಕೆ ಸೀಮಿತವಾಗಿದ್ದ ಪರಭಾಷೆಯ ಪ್ರಭಾವವನ್ನು ಕರ್ನಾಟಕದ ಮೂಲೆ ಮೂಲೆಗೂ ಹರಡುವಂತೆ ಮಾಡಿ ಕನ್ನಡದ ಸಾರ್ವಭೌಮತ್ವಕ್ಕೆ ದೊಡ್ಡ ಪೆಟ್ಟನ್ನೇ ಕೊಟ್ಟಿದ್ದರು. ಈ ಸಾಂವಿಧಾನಿಕವಾದ ಸಾರಾಸಗಟು ನಿಷೇಧವನ್ನು ಮೊದಲು ಪ್ರಶ್ನಿಸಲು ಸಾಧ್ಯವಾಗಿದ್ದು ಸೋಶಿಯಲ್ ಮೀಡಿಯಾದಲ್ಲೇ. ಕನ್ನಡ ಸಾಹಿತ್ಯ ಪರಿಷತ್ತು, ಅನೇಕ ಟಿವಿ ವಾಹಿನಿಗಳು, ರಾಜ್ಯ ಸರ್ಕಾರ ಹೀಗೆ ಹಲವರನ್ನು ಉದ್ದೇಶಿಸಿ ನಡೆದ ಅನೇಕ ಸಹಿ ಸಂಗ್ರಹ ಅಭಿಯಾನಗಳಲ್ಲಿ ಸಾವಿರಾರು ಜನ ಪಾಲ್ಗೊಂಡು ಕನ್ನಡದಲ್ಲಿ ಜ್ಞಾನ ಮತ್ತು ಮನರಂಜನೆ ಪಡೆಯುವ ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದರು. ಇದಕ್ಕೊಂದು ವೇದಿಕೆ ಒದಗಿಸಿದ್ದು ಸೋಶಿಯಲ್ ಮೀಡಿಯಾ. ಸಿ.ಸಿ.ಐ ಅಂಗಳದಲ್ಲಿ ಕಾನೂನು ಹೋರಾಟ ನಡೆದು ಡಬ್ಬಿಂಗ್ ತಡೆಯುವಂತಿಲ್ಲ ಅನ್ನುವ ತೀರ್ಪು ಬಂತು. ಅದಾದ ಮೇಲೆ ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ಬ್ಯಾನ್ ಇದೆಯಂತೆ ಎಂದೇ ನಂಬಿದ್ದ ಮುಂಬೈ, ಚೆನ್ನೈನ ಅನೇಕ ವಾಹಿನಿಗಳ ತಂಡಕ್ಕೆ ಕರ್ನಾಟಕದಲ್ಲಿ ಅಂತಹ ಯಾವುದೇ ತಡೆಯಿಲ್ಲ, ಜನರ ಬೇಡಿಕೆಯೂ ಇದೆ ಅನ್ನುವುದನ್ನು ತಿಳಿಸಲು ಸಾಧ್ಯವಾಗಿದ್ದು ಮತ್ತದೇ ಸೋಶಿಯಲ್ ಮೀಡಿಯಾ ಮೂಲಕ. ಡಬ್ಬಿಂಗ್ ಬಗ್ಗೆ ಮಾತನಾಡುವುದು ಕನ್ನಡ ದ್ರೋಹದ ಪರಮಾವಧಿ ಅನ್ನುವ ಹಂತದಿಂದ ಡಬ್ಬಿಂಗ್ ತಡೆದು ಪರಭಾಷೆಯ ಹೇರಿಕೆಗೆ ಕಾರಣವಾಗುವುದೇ ಕನ್ನಡ ದ್ರೋಹ ಅನ್ನುವವರೆಗೆ ಅಭಿಪ್ರಾಯ ಬದಲಿಸಲು, ನೆರೇಟಿವ್ ಬದಲಾಗಲು ವೇದಿಕೆ ಒದಗಿಸಿದ್ದು ಸೋಶಿಯಲ್ ಮೀಡಿಯಾ. ಇಂದು ಡಬ್ಬಿಂಗ್ ಮೇಲಿನ ನಿಷೇಧ ಕರ್ನಾಟಕದಲ್ಲಿ ಇಲ್ಲ. ಕೆ.ಜಿ.ಎಫ್ ತರದ ಕನ್ನಡ ಸಿನಿಮಾ ಡಬ್ಬಿಂಗ್ ಮೂಲಕ ಭಾರತದ ಉದ್ದಗಲಕ್ಕೂ ಹೊಸ ಭಾಷಿಕರನ್ನು ತಲುಪಿದ್ದೂ ಅಲ್ಲದೇ ನಿರ್ಮಾಪಕರಿಗೆ ಹಣದ ಹೊಳೆಯನ್ನೂ ಹರಿಸಿತು. ದೊಡ್ಡ ಕ್ಯಾನ್ವಾಸಿನ ಚಿತ್ರಗಳನ್ನು ಕನ್ನಡದಲ್ಲಿ ಮಾಡಬೇಕೆಂದರೆ ಅದಕ್ಕೆ ತಗಲುವ ದೊಡ್ಡ ಬಂಡವಾಳವನ್ನು ಹಿಂಪಡೆಯಲು ಡಬ್ಬಿಂಗ್ ಒಂದು ಸಾಧನ ಎಂದು ಕನ್ನಡ ಚಿತ್ರೋದ್ಯಮಕ್ಕೂ ಅರ್ಥವಾಗುತ್ತಿದೆ. ಡೇವಿಡ್ ವರ್ಸಸ್ ಗೋಲಿಯತ್ ಕತೆಯಂತೆ ಒಂದು ಆಳವಾಗಿ ಬೇರೂರಿದ್ದ, ಸ್ಥಾಪಿತ ಹಿತಾಸಕ್ತಿಗಳನ್ನು ಸಾಮಾನ್ಯ ಕನ್ನಡಿಗರು ಎದುರಿಸಿ ಕನ್ನಡದಲ್ಲಿ ಜ್ಞಾನ ಮತ್ತು ಮನರಂಜನೆಯ ಹಕ್ಕು ಪಡೆದುಕೊಳ್ಳಲು ಸಾಧ್ಯವಾಗಿದ್ದರೆ ಅದಕ್ಕೆ ದೊಡ್ಡ ಶಕ್ತಿ ತುಂಬಿದ್ದು ಸೋಶಿಯಲ್ ಮೀಡಿಯಾ.

ಕನ್ನಡ ಕೇಂದ್ರಿತ ಗ್ರಾಹಕ ಚಳವಳಿಯ ಹುಟ್ಟು
ಇಪ್ಪತ್ತೊಂದನೆ ಶತಮಾನ ಕನ್ನಡದ ಪಾಲಿಗೆ ಕಳೆದ ಇಪ್ಪತ್ತು ಶತಮಾನಗಳಿಗಿಂತ ಬೇರೆಯಾದದ್ದು. ಯಾಕೆಂದರೆ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ ಮತ್ತು ಅನಿಯಂತ್ರಿತ ವಲಸೆ ಅನ್ನುವ ಮೂರು ಬೆಳವಣಿಗೆಗಳು ಒಟ್ಟಾಗಿ ಕನ್ನಡ ಸಮಾಜವನ್ನು ತಟ್ಟುತ್ತಿರುವುದು ಈಗಲೇ. ಈ ಹಿಂದಿನ ಇತಿಹಾಸದಲ್ಲಿ ಈ ಪ್ರಮಾಣದಲ್ಲಿ ಇಂತಹ ಯಾವ ಬೆಳವಣಿಗೆಗಳೂ ನಡೆದಿಲ್ಲ. ಹೀಗಾಗಿ ಕನ್ನಡ ಉಳಿಯಬೇಕು ಅನ್ನುವ ಹೋರಾಟಕ್ಕೆ ಇಪ್ಪತ್ತನೆಯ ಶತಮಾನದ ಕಲ್ಪನೆಗಳನ್ನೇ ಇಟ್ಟುಕೊಂಡು ಕೆಲಸ ಮಾಡಿದರೆ ಆಗುವುದಿಲ್ಲ. ಇವತ್ತಿನ ಖಾಸಗಿ ಬಂಡವಾಳ ಮತ್ತು ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಅನ್ನುವುದು ಬೆಲೆ ನೀಡುವುದು ಗ್ರಾಹಕ ಅನ್ನುವ ಶಕ್ತಿಯೊಂದಕ್ಕೆ. ಒಂದು ಹತ್ತು ರೂಪಾಯಿಯ ಪೆನ್ನು ಕೊಳ್ಳುವವನಿಂದ ಹಿಡಿದು ಬೆಂಜ್ ಕಾರು ಕೊಳ್ಳುವವನವರೆಗೆ, ಒಂದು ಓಲಾ/ಉಬರ್ ಕ್ಯಾಬಿನಲ್ಲಿ ಪಯಣಿಸುವವನಿಂದ ಹಿಡಿದು ಅಮೆರಿಕಕ್ಕೆ ವಿಮಾನದಲ್ಲಿ ಹಾರುವವನವರೆಗೆ ಎಲ್ಲರೂ ಇಂದು ಗ್ರಾಹಕರೇ. ಅವರಿಂದ ವ್ಯಾಪಾರ ಬಯಸುವ ಯಾರೂ ಅವರ ಬೇಕು ಬೇಡಗಳನ್ನು ಕಡೆಗಣಿಸರು. ದೇಶದ ಬೊಕ್ಕಸಕ್ಕೆ ದೊಡ್ಡ ತೆರಿಗೆ ಕಟ್ಟುವ ಮೊದಲ ಐದು ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಖಾಸಗಿ ಬಂಡವಾಳದ ಹರಿವು, ಮಾರುಕಟ್ಟೆಯಲ್ಲಿ ವ್ಯಾಪಾರದ ಸಾಧ್ಯತೆಗಳು ಅಪಾರವಾಗಿ ಕಾಣಿಸುತ್ತಿವೆ. ಇದೆಲ್ಲವನ್ನೂ ಸಾಧ್ಯವಾಗಿಸುತ್ತಿರುವ ಕನ್ನಡಿಗ ಒಬ್ಬ ಗ್ರಾಹಕನೂ ಹೌದು. ಹಾಗಿದ್ದರೆ ಅವನ ಗ್ರಾಹಕ ಹಕ್ಕುಗಳಿಗೂ ಅವನ ಭಾಷೆಗೂ ಒಂದು ನೆಂಟು ಬೆಸೆದು ಕನ್ನಡ ಕೇಂದ್ರಿತವಾದ ಒಂದು ಗ್ರಾಹಕ ಚಳವಳಿಯನ್ನು ಕಟ್ಟಿ ಅವನ ಹಣದ ಬಲವನ್ನೇ ಬಳಸಿ ಮಾರುಕಟ್ಟೆಯಲ್ಲಿ ಎಲ್ಲೆಡೆಯೂ ಕನ್ನಡ ನೆಲೆ ನಿಲ್ಲುವಂತೆ ಮಾಡುವ ಕಲ್ಪನೆಯೇ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿ. ವ್ಯಕ್ತಿಯ ನೆಲೆಯಲ್ಲಿ ಸರಳವಾಗಿ ಮಾಡಬಹುದಾದ, ಅತ್ಯಂತ ಶಾಂತಿಯುತವೂ ಪರಿಣಾಮಕಾರಿಯೂ ಆದ ಈ ಹಾದಿಯ ಮೂಲಕ ಕಟ್ಟಲಾಗುತ್ತಿರುವ ಹೊಸ ಮಾದರಿಯ ಕನ್ನಡ ಚಳವಳಿಗೆ ವೇದಿಕೆ ಕಲ್ಪಿಸಿದ್ದು ಸೋಶಿಯಲ್ ಮೀಡಿಯಾದ ತಾಣಗಳು. ಇಂದು ಅನೇಕ ಖಾಸಗಿ ಬ್ಯಾಂಕುಗಳ ಎ.ಟಿ.ಎಂ ಕನ್ನಡದಲ್ಲಿದೆ. ಐ.ವಿ.ಆರ್ ಸೇವೆಗಳು ಕನ್ನಡದಲ್ಲಿ ದೊರೆಯುತ್ತಿವೆ. ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲಿಂದ ಹೊರಡುವ ಅನೇಕ ವಿಮಾನಗಳಲ್ಲಿ ಕನ್ನಡದಲ್ಲಿ ಮೆನು, ಘೋಷಣೆ ದೊರೆಯುತ್ತಿದೆ. ಕನ್ನಡದಲ್ಲಿ ಹಲವು ಎಫ್.ಎಂ ವಾಹಿನಿಗಳನ್ನು ಕೇಳಲು ಸಾಧ್ಯವಾಗಿದೆ. ಸ್ಟಾರ್ಸ್ ಸ್ಪೋರ್ಟ್ಸ್ ತರದ ಆಟಕ್ಕೆ ಮೀಸಲಾದ ಕನ್ನಡ ವಾಹಿನಿಯೂ ಈಗ ದೊರೆಯುತ್ತಿದೆ ಮತ್ತು ಇದೆಲ್ಲವೂ ಸಾಧ್ಯವಾಗಿದ್ದು ಸಾಮಾನ್ಯ ಕನ್ನಡಿಗರು ತಮ್ಮ ಭಾಷೆಯನ್ನು ಗ್ರಾಹಕ ಹಕ್ಕುಗಳ ಭಾಗವಾಗಿ ಬಳಸಿ ಬೇಡಿಕೆ ಇಟ್ಟಿದ್ದರಿಂದ. ಡಬ್ಬಿಂಗ್ ಬೇಡ ಅನ್ನುತ್ತಿದ್ದ ದೊಡ್ಡ ಕಲಾವಿದರೊಬ್ಬರು ಈಗ ಪರಭಾಷೆಯಲ್ಲಿ ಆಟ ನೋಡಿ ಯಾಕೆ ಅಡ್ಜಸ್ಟ್ ಮಾಡ್ಕೊಬೇಕು ಅಂತ ಜಾಹೀರಾತು ಕೊಡುವ ಮಟ್ಟಕ್ಕೆ ಬದಲಾವಣೆ ಸಾಧ್ಯವಾಗಿದ್ದು ಕನ್ನಡದ ಗ್ರಾಹಕನ ಹಕ್ಕುಗಳ ಕುರಿತ ಜಾಗೃತಿ ಹೆಚ್ಚಿದ್ದರ ಪರಿಣಾಮವಾಗಿಯೇ. ಈ ನೆರೇಟಿವ್ ಇನ್ನಷ್ಟು ವ್ಯಾಪಕವಾಗಿ ಹರಡುವ ಕೆಲಸ ಆದಲ್ಲಿ ಕರ್ನಾಟಕದಲ್ಲಿ ವ್ಯವಹರಿಸಿ ಕನ್ನಡವನ್ನು ಕಡೆಗಣಿಸುವ ಧೈರ್ಯವನ್ನು ಯಾವ ವ್ಯಾಪಾರಿ ಸಂಸ್ಥೆಯೂ ತೋರುವುದಿಲ್ಲ. ಜೊತೆಗೆ ಕನ್ನಡದಲ್ಲೇ ಸೇವೆ ಪಡೆಯುವ ಬೇಡಿಕೆ ಹೆಚ್ಚಿದಷ್ಟೂ ಕನ್ನಡ ಬಲ್ಲವರಿಗೆ ಕೆಲಸವೂ ದೊರೆಯುತ್ತೆ, ಕನ್ನಡ ಬಾರದವರು ಕನ್ನಡ ಕಲಿಯುವ ಒತ್ತಡವೂ ಹುಟ್ಟುತ್ತೆ. ಅದಕ್ಕೆ ಸೋಶಿಯಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸುವ ಕೆಲಸ ಇನ್ನಷ್ಟು ಆಗಬೇಕು.

ಮೇಲೆ ನೀಡಿದ ಮೂರು ಉದಾಹರಣೆಗಳು ಈ ಹತ್ತು ವರ್ಷದಲ್ಲಿ ಸೋಶಿಯಲ್ ಮೀಡಿಯಾ ಅನ್ನು ಒಂದು ಸಾಧನದಂತೆ ಬಳಸಿ ಕನ್ನಡ ಪರವಾದ ಕೆಲಸಗಳನ್ನು ಹೇಗೆ ಕಟ್ಟಬಹುದು ಮತ್ತು ಕನ್ನಡದ ಪರವಾದ ಬದಲಾವಣೆಯನ್ನು ತಂದುಕೊಳ್ಳಬಹುದು ಅನ್ನುವುದಕ್ಕೆ ಕೆಲವು ಅನುಭವಗಳು. ಇದಲ್ಲದೇ ಒಟ್ಟಾರೆ ಕನ್ನಡ ನಾಡಿನ ರಾಜಕೀಯ ಹೆಚ್ಚು ಹೆಚ್ಚು ಕನ್ನಡ ಪರವಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕನ್ನಡಿಗರು ನಮ್ಮ ರಾಜಕಾರಣಿಗಳ ಒತ್ತಡ ತರುತ್ತಿದ್ದಾರೆ. ಸುಳ್ಳು ಸುದ್ದಿಗಳ ಹರಡುವಿಕೆ, ಅದರಿಂದ ಸೃಷ್ಟಿಯಾಗುತ್ತಿರುವ ತಲ್ಲಣ, ಹಿಂಸೆ ಇವುಗಳಿಂದ ಕರ್ನಾಟಕವೂ ಪೂರ್ತಿ ಹೊರತಾಗಿಲ್ಲ. ಹಲವೊಮ್ಮೆ ಅವೇ ಮೇಲುಗೈ ಸಾಧಿಸುವುದನ್ನೂ ನೋಡಬಹುದು. ಇನ್ನೊಂದೆಡೆ ಸೋಶಿಯಲ್ ಮೀಡಿಯಾವನ್ನು ನಡೆಸುವ ಸಂಸ್ಥೆಗಳು ಶೇರು ಮಾರುಕಟ್ಟೆಯಲ್ಲಿ ಮೂರು ತಿಂಗಳಿಗೊಮ್ಮೆ ಲಾಭ ತೋರಿಸುವ ಒತ್ತಡದಲ್ಲಿ ಇರುವಾಗ ನಿಷ್ಪಕ್ಷಪಾತವಾದ ರೀತಿಯಲ್ಲಿ ತಮ್ಮ ತಾಣಗಳನ್ನು ನಡೆಸದೇ ತಮಗೆ ಹೆಚ್ಚಿನ ಲಾಭ ತರುವ ಕಂಟೆಂಟ್ ಅನ್ನು ಜನರ ಮೇಲೆ ಹೇರುವಂತೆ ತಮ್ಮ ಅಲ್ಗೊರಿದಂಗಳನ್ನು ನಿರಂತರವಾಗಿ ಮರು ರೂಪಿಸುತ್ತಿದ್ದಾರೆ. ಇಷ್ಟಾಗಿಯೂ ಕನ್ನಡದ ಕುರಿತ ಚಳವಳಿ, ಚಿಂತನೆಯಲ್ಲಿ ಸೋಶಿಯಲ್ ಮೀಡಿಯಾಗೆ ಒಂದು ಪಾತ್ರ ಇದ್ದೇ ಇದೆ. ಬಳಸಿಕೊಳ್ಳುವುದು, ಬಿಡುವುದು ನಮ್ಮ ಕೈಯಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.