ಮಾರ್ಚ್ 15ರ ರಾತ್ರಿ 9.40ರ ಸಮಯ. ಬೆಂಗಳೂರಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಚೆನ್ನಮ್ಮ ಎಕ್ಸಪ್ರೆಸ್ ರೈಲು ಯಶವಂತಪುರವನ್ನು ದಾಟಿ ವೇಗವಾಗಿ ಓಡುತ್ತಿತ್ತು. ಸಮಸ್ಯೆಯೇ ಅಲ್ಲದ ಸಮಸ್ಯೆಯೊಂದು ಕಾಡಿದ ಕಾರಣ ನನ್ನನ್ನೇ ನಾನು ಒಂದಿಷ್ಟು ಬೈಯ್ದುಕೊಳ್ಳುತ್ತ ಅತ್ತಿತ್ತ ಓಡಾಡತೊಡಗಿದ್ದೆ. ಇಲ್ಲಿ ಆ ಸಮಸ್ಯೆ ಖಂಡಿತವಾಗಿಯೂ ಮುಖ್ಯವಲ್ಲ. ಆದರೆ ಆತ್ಮಸಾಕ್ಷಿಯನ್ನೇ ಜಾಗೃತಗೊಳಿಸಿದ ಆ ಘಟನೆ ಮತ್ತು ಅದರ ಪರಿಣಾಮ ಮನುಕುಲಕ್ಕೆ ಬಹುದೊಡ್ಡ ಪಾಠವಾಗುವ ಕಾರಣ ಅದನ್ನಿಲ್ಲಿ ದಾಖಲಿಸಲೇಬೇಕಾಗಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಹೋಗಬೇಕಿದ್ದ ನಾನು, ದರ್ಶಿನಿಯೊಂದರಲ್ಲಿ ಟಿಫಿನ್ ಕಟ್ಟಿಸಿಕೊಂಡು ಯಶವಂತಪುರ ರೈಲ್ವೆ ಸ್ಟೇಶನ್ ಕಡೆ ವೇಗವಾಗಿ ಸ್ಕೂಟರ್ ಓಡಿಸಿದ್ದೆ. ಖರ್ಚಿಗಾಗಿ ಹಣ ತೆಗೆಯಲು ದಾರಿಯಲ್ಲಿ ಸಿಕ್ಕ ಎಲ್ಲ ಎ.ಟಿ.ಎಂ.ಗಳನ್ನು ನೋಡಿದಾಗ ಕಂಡದ್ದು ‘ನೋ ಕ್ಯಾಶ್’ ಬೋರ್ಡ್! ಟ್ರೇನಿಗೆ ತಡವಾಗಲಿದ್ದ ಕಾರಣ ಹಣದ ಯೋಚನೆಯನ್ನೇ ಬಿಟ್ಟು ವೇಗವಾಗಿ ವಾಹನ ಓಡಿಸಿ, ಸ್ಟೇಶನ್ ತಲುಪಿ ಗಾಡಿ ಹತ್ತಿದಾಗ ಸರಿಯಾಗಿ 9.30.

9.50ಕ್ಕೆ ಇನ್ನೇನು ಊಟ ಮಾಡಬೇಕು. ಒಂದು ಬಾಟಲಿ ನೀರು ಕೊಳ್ಳಬೇಕೆಂದು ಹಣಕ್ಕಾಗಿ ಕಿಸೆಗೆ ಕೈ ಹಾಕಿದೆ. ಅಚ್ಚರಿಯೆಂದರೆ, ನನ್ನ ಕೈಗೆ ಸಿಕ್ಕದ್ದು ಬರೋಬ್ಬರಿ ಹದಿನೇಳು ರೂಪಾಯಿಗಳು ಮಾತ್ರ!! ಆಗ ಗೊತ್ತಾದದ್ದು, ನನ್ನ ಹತ್ತಿರ ಒಂದು ಬಾಟಲ್ ನೀರು ಕೊಂಡುಕೊಳ್ಳಲು ಬೇಕಾಗುವ ಇಪ್ಪತ್ತು ರೂಪಾಯಿ ಕೂಡ ಇಲ್ಲ ಎಂದು. ಸುರುವಾಯ್ತು ನೋಡಿ ಅಲ್ಲಿಂದ ಸಂಕಟ! ಪರಿಚಿತರು ಯಾರಾದರೂ ಸಿಕ್ಕರೆ ನನ್ನ ಸ್ಥಿತಿ ಹೇಳಿ ಒಂದಿಷ್ಟು ಹಣ ಪಡೆಯಬಹುದೆಂದು ಮೂರು ಬೋಗಿಗಳಲ್ಲಿ ಸುತ್ತಾಡಿದೆ. ಯಾರೂ ಕಾಣಲಿಲ್ಲ. ಅಕ್ಕಪಕ್ಕದವರನ್ನಾದರೂ ಕೇಳಲೆ? ಆದರೆ ಕೇಳುವುದು ಹೇಗೆ? ಠಾಕುಠೀಕಾದ ಬಟ್ಟೆ ಹಾಕಿಕೊಂಡು ಬಂದು, ಎಕ್ಸ್ಪ್ರೆಸ್ ಕಾರಣ ಹೇಳಿ ಹಣ ಕಿತ್ತಿದ್ದ ಪೋಜ್ಡ್ ಭಿಕ್ಷುಕರ ವೈಖರಿಯನ್ನು ಅರಿತಿದ್ದ ನನಗೆ, ಈಗ ನಾನು ಯಾರನ್ನಾದರೂ ಹಣ ಕೇಳಿದರೆ, ನನ್ನನ್ನೂ ಹಾಗೆಯೇ ಭಾವಿಸಲಾರರೆ ಎಂಬ ಸಂಕಟ. ಏನಿದೆ ಬೇರೆ ದಾರಿ? ಕೆಲಹೊತ್ತು ಯೋಚಿಸುತ್ತ, ಮೊದಲೇ ಊರಿಗೆ ಹೋಗಿದ್ದ ಹೆಂಡತಿಗೆ ಮತ್ತು ಬೆಂಗಳೂರಲ್ಲೇ ಇದ್ದ ಮಕ್ಕಳಿಗೆ ಫೋನ್ ಮಾಡಿ ನನ್ನ ಸಮಸ್ಯೆ ಹೇಳಿದೆ. ಅವರು ನಕ್ಕರು.

ಅರ್ಧ ತಾಸು ಕಳೆಯಿತು. ಆ ಕಡೆಯಿಂದ ನೀರಿನ ಬಾಟಲ್ಲುಗಳ ಬಾಕ್ಸ್ ಹೊತ್ತ ತರುಣನೊಬ್ಬ ವಾಟರ್ ವಾಟರ್... ಎಂದು ಕೂಗುತ್ತ ಬಂದು, ಹಾಗೇ ದಾಟಿ ಮುಂದೆ ಹೋದ. ನಿಜ ಹೇಳಿ ಒಂದು ಬಾಟಲ್ ನೀರು ಕೇಳಲೆ? ಮನಸ್ಸು ಹೊಯ್ದಾಡಿತು. ಒಳ ಮನಸ್ಸು ಬೇಡ ಎಂದಿತು. ಹದಿನೈದು ನಿಮಿಷಗಳಾದ ಮೇಲೆ ಆತ ಮತ್ತೆ ಹಿಂದಿರುಗಿ ಬಂದ. ಮತ್ತದೇ ಕೂಗು. ವಾಟರ್ ವಾಟರ್... ನನ್ನ ಸಂಕಟ ಇನ್ನೂ ಹೆಚ್ಚಾಯಿತು. ಧೈರ್ಯದಿಂದ ಅವನ ಹಿಂದೆಯೇ ಹೋಗಿ, ನಿಲ್ಲಿಸಿ, ‘...ಸರ್, ಒಂದು ಸಮಸ್ಯೆ ಎದುರಾಗಿದೆ’ ಎಂದೆ. ಆತ ಸಮಾಧಾನದಿಂದ ‘ಏನ್ಸಾರ್’ ಎಂದ. ‘ನನಗೊಂದು ಬಾಟಲಿ ನೀರು ಬೇಕು, ಆದರೆ ನನ್ನ ಹತ್ತಿರ ಬರೀ ಹದಿನೇಳು ರೂಪಾಯಿ ಮಾತ್ರ ಇದೆ. ಇನ್ನು ಮೂರು ರೂಪಾಯಿ ಇಲ್ಲ, ದಯವಿಟ್ಟು ಇಷ್ಟನ್ನೇ ತೆಗೆದುಕೊಂಡು ಒಂದು ಬಾಟಲಿ ನೀರು ಕೊಡುತ್ತೀರಾ?’ ಒಮ್ಮೆಲೇ ಸಮಸ್ಯೆ ಹೇಳಿಕೊಂಡುಬಿಟ್ಟೆ. ಆತ ‘ಅಯ್ಯೋ ಸರ್, ಇಷ್ಟು ಪ್ರಾಮಾಣಿಕವಾಗಿ ನೀವು ಸತ್ಯವನ್ನು ಹೇಳಿಕೊಳ್ಳುತ್ತಿದ್ದೀರಂದ್ರೆ, ಆ ಹದಿನೇಳು ರೂಪಾಯಿಗಳೂ ಬೇಡ, ನೀರು ತೊಗೊಳ್ಳಿ’ ಎಂದವನೇ ಒಂದು ಬಾಟಲಿ ನೀರು ಕೊಟ್ಟ. ಒತ್ತಾಯ ಮಾಡಿದಾಗ, ಒಲ್ಲದ ಮನಸ್ಸಿಂದ ಆ ಹದಿನೇಳು ರೂಪಾಯಿ ತೆಗೆದುಕೊಂಡ ಆತ ಮುಗುಳ್ನಗುತ್ತಲೇ ಮತ್ತೆ ವಾಟರ್ ವಾಟರ್... ಅನ್ನುತ್ತ ಕಾಣದಾಗಿಬಿಟ್ಟ.

ನನ್ನಲ್ಲಿ ಕೃತಜ್ಞತೆ ಹೇಳಲು ಶಬ್ದಗಳೇ ಇರಲಿಲ್ಲ. ಅದಕ್ಕೂ ಮಿಗಿಲಾಗಿ ಕೃತಜ್ಞತೆ ಹೇಳಿಸಿಕೊಳ್ಳಲು ಆತನೇ ಅಲ್ಲಿರಲಿಲ್ಲ. ಸೀಟಿಗೆ ಹಿಂದಿರುಗಿ ಇಡೀ ಘಟನೆ ನೆನೆಯುತ್ತ, ಮಗಳಿಗೆ ಫೋನ್ ಮಾಡಿದೆ, ‘ಅವ್ವಾ, ಈಗ ನನ್ನ ನೀರಿನ ಸಮಸ್ಯೆ ಬಗೆಹರಿದಿದೆ, ಒಬ್ಬ ದೇವಮಾನವ ಬಂದು ನೀರು ಕೊಟ್ಟುಹೋದ’ ಎಂದು ನಡೆದ ಎಲ್ಲ ಕಥೆ ಹೇಳಿದೆ. ‘ಹೌದಾ... ನಿಜಕ್ಕೂ... ಈ ಕಾಲದಲ್ಲೂ ಇಂಥವರಿದ್ದಾರಾ? ಬೆವರು ಹರಿಸುವ ಶ್ರಮಜೀವಿಗಳಲ್ಲಿ ಇಂಥ ಗುಣದವರಿದ್ದಾರಲ್ಲ, ದೇವರೆ..!’ ಎಂದು ಅಚ್ಚರಿಪಟ್ಟು ಫೋನಿಟ್ಟಳು ಮಗಳು. ಘಟನೆ ಇನ್ನೂ ಮುಗಿದಿರಲಿಲ್ಲ..!

ಇನ್ನೇನು ಉಣ್ಣಬೇಕೆಂದು ಯೋಚಿಸುತ್ತಿರುವಾಗಲೇ ಆ ಕಡೆಯಿಂದ ಮತ್ತೆ ನೀರು ಮಾರುವ ಹುಡುಗ ಬರುತ್ತಿದ್ದಾನೆ!! ಆದರೆ ಈ ಸಲ ಅವನ ಕೈಯಲ್ಲಿ ವಾಟರ್ ಬಾಟಲ್ಗಳು ಇರಲಿಲ್ಲ, ಬದಲಾಗಿ ಒಂದು ಪ್ಲಾಸ್ಟಿಕ್ ಬಾಕ್ಸ್ ಇದೆ!! ಆತ ಹತ್ತಿರ ಬಂದವನೇ ನೇರವಾಗಿ, ‘ಸರ್, ಒಂದು ಬಾಟಲ್ ನೀರು ಕೊಳ್ಳಲು ಇಪ್ಪತ್ತು ರೂಪಾಯಿ ಇಲ್ಲದ ನಿಮ್ಮಲ್ಲಿ, ಊಟ ಕೊಳ್ಳಲು ಹಣ ಇರಲು ಸಾಧ್ಯವೆ? ತೊಗೊಳ್ಳಿ ಈ ಪಲಾವ್ ಡಬ್ಬಿಯನ್ನು, ಊಟ ಮಾಡಿರಿ, ಉಪವಾಸ ಮಲಗಬೇಡಿ...’ ಎಂದು ಆ ಡಬ್ಬಿಯನ್ನು ಕೊಡಲು ಕೈಚಾಚಿದ. ನನ್ನ ಬಾಯಲ್ಲಿ ಮಾತೇ ಹೊರಡಲಿಲ್ಲ. ಕಣ್ಣಲ್ಲಿ ನೀರು ಚಿಮ್ಮತೊಡಗಿತು! ಮೈತುಂಬ ವಿದ್ಯುತ್ಸಂಚಾರ!!

‘ನಿಮ್ಮ ಹೇಸರೇನು? ಯಾವ ಊರು? ನಿಮ್ಮ ಫೋನ್ ನಂಬರ್ ಕೊಡಿ...’ ಹೀಗೆ ನನ್ನ ಕೃತಜ್ಞತಾ ಭಾವದ ಮಾತುಗಳು ನಡೆದೇ ಇದ್ದಾಗ ಆತ, ‘ಏಕೆ ಸರ್, ನಂತರ ನನಗೆ ಹಣ ಕಳಿಸಲು ನನ್ನ ವಿವರ ಕೇಳ್ತಾ ಇದ್ದೀರಾ? ಅದೇನೂ ಬೇಡ. ಮೊದಲು ಊಟ ಮಾಡಿ’ ಎಂದು ಮತ್ತೆ ಊಟದ ಡಬ್ಬಿಯನ್ನು ತೆಗೆದುಕೊಳ್ಳಲು ಒತ್ತಾಯಿಸಿದ. ನಾನು ತಂದಿದ್ದ ಟಿಫಿನ್ ಬಾಕ್ಸ್ ತೋರಿಸಿದಾಗಲೇ ಆತ ಒತ್ತಾಯಿಸುವುದನ್ನು ಬಿಟ್ಟು ಅಲ್ಲಿಂದ ಹೋದದ್ದು. ಈಗ ನನ್ನ ಹೊಟ್ಟೆ ನಿಜವಾಗಿಯೂ ತುಂಬಿತ್ತು, ಆ ಶ್ರಮಜೀವಿ ಉಣಿಸಿದ ಮಾನವೀಯತೆಯೆಂಬ ಅಮೃತದ ಊಟದಿಂದ.

ದೇವರು ಎಲ್ಲಿದ್ದಾನೆ? ಎಂದು ಯಾರಾದರೂ ನನಗೆ ಕೇಳಿದರೆ, ನಾನೀಗ ಥಟ್ಟನೆ ಉತ್ತರ ಕೊಡುವುದು ಮಂಡ್ಯ ಜಿಲ್ಲೆ, ಲಕ್ಷ್ಮೀ ಸಾಗರದ ಹರೀಶ್ ಶೆಟ್ಟಿ ಎಂಬ ಆ ಶ್ರಮಜೀವಿಯಲ್ಲಿದ್ದಾನೆ ಎಂದು. ಹಣದ ಮುಖ ನೋಡದೆ ನೀರು ಕೊಟ್ಟ, ನೀರು ಕೊಳ್ಳುವುದಕ್ಕೇ ಹಣವಿಲ್ಲದಾಗ ಊಟವನ್ನು ಕೊಳ್ಳಲು ಹೇಗೆ ಸಾಧ್ಯವೆಂದು ಅರಿತು, ತಾನಾಗೇ ಊಟ ಕೊಡಲು ಮುಂದೆ ಬಂದ ಹರೀಶ್ ದೇವರಲ್ಲದೆ ಇನ್ಯಾರು? ಅಲ್ಲಮನ ವಚನ ಥಟ್ಟನೇ ನೆನಪಾಯ್ತು- ನಾ ದೇವನಲ್ಲದೆ ನೀ ದೇವನೆ? ನೀ ದೇವರಾದರೆ ಎನ್ನನೇಕೆ ಸಲಹೆ? ಆರೈದು ಒಂದು ಕುಡಿತೆ ಉದಕವನೆರೆವೆ. ಹಸಿದಾಗ ಒಂದು ತುತ್ತು ಓಗರವನಿಕ್ಕುವೆ. ನಾ ದೇವ ಕಾಣಾ ಗುಹೇಶ್ವರಾ. ಮನುಷ್ಯನೇ ನಿಜವಾದ ದೇವರಲ್ಲವೆ? ಅದು ಸಾಧ್ಯವಾಗುವುದು ಒಳಗಿನ ದೇವತ್ವ ಜಾಗೃತವಾದಾಗ ಮಾತ್ರ.

ಕಲ್ಲು, ಚಿನ್ನ, ಬೆಳ್ಳಿಯ ಮೂರ್ತಿಗಳಲ್ಲಿ ದೇವರಿದ್ದಾನೆಂದು ಅಂಡಲೆಯುವ ಮತ್ತು ಅಂಥ ನಿರ್ಜೀವಿ ಸ್ಥಾವರ ಮೂರ್ತಿಗಳಿಗೆ ಚಿನ್ನ, ಬೆಳ್ಳಿ ಮತ್ತು ವಜ್ರದ ಕಿರೀಟ ತೊಡಿಸುವ ಭ್ರಮಿತರಿಗೆ, ಭಂಡರಿಗೆ, ಭ್ರಷ್ಟರಿಗೆ ಅಲ್ಲಮ ಹೇಳುವ ನಿಜವಾದ ದೇವರ ದರ್ಶನ ಆಗಬೇಕೆಂದರೆ, ಹರೀಶ್ ಶೆಟ್ಟಿ ಅಂಥವರನ್ನು ಕಾಣಬೇಕು. ಅವರ ಮೊಬೈಲ್ ಸಂಖ್ಯೆ, ಮನಸ್ಸೇ ಮಹಾಬಯಲಾದ ಶೂನ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.