ಕಳೆದ ಶತಮಾನದ 50ರ ದಶಕದಲ್ಲಿ ಕನ್ನಡದಲ್ಲಿ ನವ್ಯ ಸಾಹಿತ್ಯ ಒಂದು ಅನಧಿಕೃತ ಚಳವಳಿಯಾಗಿ ರೂಪುಗೊಂಡಿತಷ್ಟೆ. ಈ ಚಳವಳಿಯ ಕೆಲವರು ಆಧುನಿಕ ಕಾಲದಲ್ಲಿ ಮನುಷ್ಯನದು ಅನಾಥ ಸ್ಥಿತಿಯೆಂದೂ ಅವನ ಬದುಕಿನ ಸ್ಥಿತಿಗೆ ಅವನೇ ಹೊಣೆಗಾರನೆಂದೂ ಪ್ರತಿಪಾದಿಸಿದ್ದಲ್ಲದೆ ವ್ಯಕ್ತಿಯ ಮೂಲಕವೇ ಸುತ್ತಲ ಸಮಾಜವನ್ನು ಶೋಧಿಸಿ ನೋಡಬಯಸಿದರು. ಆಗ ವ್ಯಕ್ತಿನಿಷ್ಠ ಅನುಭವವೇ ಸಾಚ, ಉಳಿದದ್ದೆಲ್ಲ ಕೇವಲ ತೋರಿಕೆಯದು ಎಂಬ ನಂಬಿಕೆ ದೃಢವಾಯಿತು. ಅಂತರಂಗದ ಅನ್ವೇಷಣೆಗಾಗಿಯೇ ಸಾಹಿತ್ಯ ಕೃತಿಯ ಭಾಷೆ ಮತ್ತಷ್ಟು ಸೂಕ್ಷ್ಮವಾಯಿತು. ಅದುವರೆಗೆ ನಿಷಿದ್ಧವಾಗಿದ್ದ ಕಾಮದಂಥ ವಸ್ತು ನವ್ಯರ ಕೈಯಲ್ಲಿ ನಿಜವಾದ ಮಾನವ ಸಂಬಂಧಗಳ ಅನ್ವೇಷಣೆಗೊಂದು ಸಾಧನವಾಯಿತು. ಅಡಿಗರಂಥವರು ತಮ್ಮ ಕಾವ್ಯದಲ್ಲಿ ಭೂತ, ವರ್ತಮಾನ, ಭವಿಷ್ಯಗಳನ್ನು ಒಂದೇ ಬಿಂದುವಿನಲ್ಲಿ ಹಿಡಿಯಬಯಸಿದರೆ ಇತರರು ಪ್ರತಿಮೆ, ಸಂಕೇತಗಳ ಮೂಲಕ ಹೊಸ ಅರ್ಥಪರಂಪರೆಯನ್ನು ನಿರ್ಮಿಸಬಯಸಿದರು.

ಆ ಕಾಲದಲ್ಲಿ ಗೋಪಾಲಕೃಷ್ಣ ಅಡಿಗರ ಜೊತೆ ಜೊತೆಯಲ್ಲಿ ಬರೆಯುತ್ತಿದ್ದವರು ಯಶವಂತ ಚಿತ್ತಾಲ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಶಾಂತಿನಾಥ ದೇಸಾಯಿ, ಟಿ.ಜಿ. ರಾಘವ, ಸುಮತೀಂದ್ರ ನಾಡಿಗ, ಕೆ.ಎಸ್. ನಿಸಾರ್ ಅಹಮದ್, ಹೀಗೆ ಅನೇಕ ಲೇಖಕರು. ಇವರಲ್ಲಿ ಪ್ರತಿಯೊಬ್ಬರದೂ ವಿಭಿನ್ನ ಸಂವೇದನೆ, ಮನೋಧರ್ಮ, ನಿಜ. ಆದರೂ ಇವರು ಒಟ್ಟಾಗಿ ಒಂದು ವಿಶಿಷ್ಟ ಕಾಲಧರ್ಮವನ್ನು ಪ್ರತಿನಿಧಿಸಿದರೆನ್ನಬೇಕು.

ಮುಂದಿನ ದಶಕದಲ್ಲಿ ಬರೆಯತೊಡಗಿದ, ಮೇಲೆ ಕಾಣಿಸಿದ ಯಾವ ಲೇಖಕರ ಜೊತೆಗೂ ಹೋಲಿಸಲಾಗದ, ಸಂಪೂರ್ಣವಾಗಿ ಸ್ವೋಪಜ್ಞರಾದ ಇಬ್ಬರು ಲೇಖಕರೆಂದರೆ ಎ.ಕೆ. ರಾಮಾನುಜನ್ ಮತ್ತು ಕಾಮರೂಪಿ. ರಾಮಾನುಜನ್ ತಮ್ಮ ಅನನ್ಯ ಪ್ರತಿಭೆಯಿಂದ ಕನ್ನಡ ಕಾವ್ಯದ ದಿಕ್ಕನ್ನು ಬದಲಾಯಿಸಿದರೆ ಕಾಮರೂಪಿಯವರು `ಏಲಿಯನೇಷನ್' ಎಂಬ ಮಾರ್ಕ್ಸ್‌ವಾದೀ ಪರಿಕಲ್ಪನೆಯಿಂದ ಪ್ರಭಾವಿತರಾಗಿ ವ್ಯಕ್ತಿವಿಶಿಷ್ಟತೆಗೆ ಒತ್ತುಕೊಡದ, ಮನೋವಿಶ್ಲೇಷಣೆಯನ್ನು ತ್ಯಜಿಸುವ ಹೊಸ ಬಗೆಯ ಕತೆ, ಕಾದಂಬರಿಗಳನ್ನು ಬರೆದರು.
ಕಾಮರೂಪಿ ಎಂ.ಎಸ್. ಪ್ರಭಾಕರರ ಕಾವ್ಯನಾಮವಷ್ಟೆ. ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಇಂದು ಕೂಡ ಆ ರಾಜ್ಯದಲ್ಲಿ ಕಾಮರೂಪ ಎಂಬ ಜಿಲ್ಲೆಯೊಂದಿದೆ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು.

ಪ್ರಭಾಕರರು ಬರೆದದ್ದು ಅತ್ಯಲ್ಪ. `ಒಂದು ತೊಲ ಪುನುಗು ಮತ್ತು ಇತರ ಕತೆಗಳು', ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ' ಮತ್ತು `ಅಂಜಿಕಿನ್ಯಾತಕಯ್ಯೊ', ಇಷ್ಟೇ ಅವರ ಸಮಗ್ರ ಸಾಹಿತ್ಯ. ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ಸ್ಕೂಲು ಕಾಲೇಜಿನಲ್ಲಿ ಓದುತ್ತಿದ್ದ ಕೋಲಾರದ ಒರಟು ದಿನಗಳಿಂದಲೇ ಓದುವ ಹವ್ಯಾಸ, ಅಭ್ಯಾಸ ಹಚ್ಚಿಕೊಂಡಿದ್ದರೂ, ಬರೆಯುವ ಅಭ್ಯಾಸ ಹಚ್ಚಿಕೊಳ್ಳಲಿಲ್ಲ. ನಾನು ಪುಸ್ತಕಗಳನ್ನು ಬರೆಯುತ್ತೇನೆ, ಆ ಪುಸ್ತಕಗಳು ಪ್ರಕಟಗೊಳ್ಳುತ್ತವೆ ಎಂತಲೂ ಎಂದೂ ಅಂದುಕೊಂಡಿರಲಿಲ್ಲ. ಬೆಂಗಳೂರಿನ ಸೆಂಟ್ರಲ್ ಕಾಲೆಜಿನಲ್ಲಿ ಇಂಗ್ಲಿಷ್ ಆನರ್ಸ್ ಓದುತ್ತಿದ್ದಾಗ ಸಣ್ಣಪುಟ್ಟ ರೀತಿಯಲ್ಲಿ ಬರೆಯಲು ಯತ್ನ ಮಾಡಿದ್ದರೂ ಆ ದಿನಗಳಲ್ಲಿ ಬರೆದ ಚೂರುಪಾರುಗಳೆಲ್ಲಾ ಅಣಕ, ಹುಡುಗಾಟ, ಬರಹಗಾರರಾಗಬೇಕೆಂದು ಹಂಬಲ ಹೊಂದಿದ್ದ ಗೆಳೆಯರಿಗೆ ಕಾಟ ಕೊಡುವ ವ್ಯಂಗ್ಯ ತುಂಟತನದ ಬರವಣಿಗೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲ ಅವರ ಮೂರು ಕೃತಿಗಳಲ್ಲಿ ತಕ್ಕಮಟ್ಟಿಗಿದ್ದರೂ ಅವು ಕನ್ನಡ ಕಥನ ಸಾಹಿತ್ಯಕ್ಕೆ ತಂದುಕೊಟ್ಟ ಹೊಸ ಸಂವೇದನೆ, ನಿರೂಪಣಾ ತಂತ್ರ, ಕಾಣ್ಕೆ ಮೊದಲಾದುವುಗಳಿಂದಾಗಿ ಮುಖ್ಯವಾಗುತ್ತವೆ.

`ಕುದುರೆ ಮೊಟ್ಟೆ' ಬಹುನಿರೂಪಕರ ದೃಷ್ಟಿಕೋನದಿಂದ ಅನಾವರಣಗೊಳ್ಳುವ ಕಾದಂಬರಿ. ಇದರಲ್ಲಿ ಒಟ್ಟು ನಾಲ್ವರು ನಿರೂಪಕರಿದ್ದು ಮೂವರು ಶ್ರೀಮಂತ ಜಮೀನ್ದಾರನೊಬ್ಬನ ಹಾಗೂ ಅವನ ಅವನತಿಯ ಕತೆ ಹೇಳುತ್ತಾರೆ. ಅವನತಿಗೆ ಸಂಬಂಧಿಸಿದಂತೆ ಅವರಲ್ಲಿ ಪ್ರತಿಯೊಬ್ಬರೂ ಕೊಡುವ ಕಾರಣಗಳು ಮಾತ್ರ ಬೇರೆ ಬೇರೆ. ವಿಲಿಯಂ ಫಾಕ್ನರನ `ಸೌಂಡ್ ಅಂಡ್ ದಿ ಫ್ಯೂರಿ'ಯಂಥ ಕಾದಂಬರಿಯಲ್ಲಿ ಇಂಥದೇ ನಿರೂಪಣಾ ತಂತ್ರವಿದೆ, ನಿಜ. ಆದರೆ ಕನ್ನಡದ ಮಟ್ಟಿಗೆ `ಕುದುರೆ ಮೊಟ್ಟೆ' ತಂತ್ರದ ದೃಷ್ಟಿಯಿಂದಷ್ಟೇ ಅಲ್ಲ, ಆಶಯದ ದೃಷ್ಟಿಯಿಂದಲೂ ತೀರ ಹೊಸದಾಗಿತ್ತೆಂದು ಹೇಳಲೇಬೇಕು. ಸಮಕಾಲೀನತೆಯ ಬೆಳಕಿನಲ್ಲಿ ಭೂತಕಾಲವನ್ನು ಪರಿಶೀಲಿಸುವ ಜೊತೆಜೊತೆಗೇ ಸಾಪೇಕ್ಷವಾಗಿರುವ ಸತ್ಯವನ್ನು ಸಂಪೂರ್ಣವಾಗಿ ಗ್ರಹಿಸಲಾಗದ ಸಮಸ್ಯೆಯನ್ನು ಕೂಡ ಈ ಕಾದಂಬರಿ ಪರಿಶೋಧಿಸುತ್ತದೆ. ಕಾದಂಬರಿಯ ಶೀರ್ಷಿಕೆ ಏನನ್ನು ಧ್ವನಿಸುತ್ತದೆ?

ಕಳೆದ ಶತಮಾನದ ಮೊದಲ ದಶಕದಲ್ಲಿ ರಾ. ನರಸಿಂಹಾಚಾರ್ಯರು ರಚಿಸಿದ `ನಗೆಗಡಲು' ಗಾಂಪರೊಡೆಯರನ್ನೂ ಮರುಳ, ಮಂಕ, ಮಡೆಯ, ಮುಠ್ಠಾಳ ಮತ್ತು ಮಡ್ಡಿ ಎಂಬ ಅವರ ಶಿಷ್ಯರನ್ನೂ ಮೊಟ್ಟಮೊದಲು ಸೃಷ್ಟಿಸಿದ ಕೃತಿ. ಅದರಲ್ಲಿ ಮಂಕನೋ ಮಡ್ಡಿಯೋ (ಯಾರಾದರೇನಂತೆ) ಇತರರ ಮಾತನ್ನು ನಂಬಿ ಕುದುರೆಮೊಟ್ಟೆಯನ್ನು ಹುಡುಕಿಕೊಂಡು ಹೋಗುವ ಒಂದು ಪ್ರಸಂಗವಿದೆ. ಕಾಮರೂಪಿಯವರ ಈ ಕಾದಂಬರಿಯ ನಿರೂಪಕರಲೊಬ್ಬನಾದ ಚಂದ್ರಶೇಖರನ ಸ್ಥಿತಿ ಅಂಥದೇ.

`ಅಂಜಿಕಿನ್ಯಾತಕಯ್ಯೊ'- `ಬಿಲ್ಡಂಗ್ಸ್‌ರೊಮಾನ್' ಎಂದು ಕರೆಯಬಹುದಾದ ಕಾದಂಬರಿ. `ಬಿಲ್ಡಂಗ್ಸ್‌ರೊಮಾನ್' ಎಂದರೆ ಕಥಾನಾಯಕ ಬಾಲ್ಯ, ಯೌವನ ಎಂದು ಹಂತ ಹಂತವಾಗಿ ವಿಕಾಸಗೊಳ್ಳುವ ಕಥಾನಕ. ಈ ಕಾದಂಬರಿಯಲ್ಲಿ ಒಂಬತ್ತು ಅಧ್ಯಾಯಗಳಿವೆ. ಇವುಗಳ ಶೀರ್ಷಿಕೆಗಳು `ಡಾನ್ ಕ್ವಿಕ್ಸಾಟ್'ನನ್ನೂ ಒಳಗೊಂಡು ಹಲವು ಯೂರೋಪಿಯನ್ ಕಾದಂಬರಿಗಳಲ್ಲಿರುವ ಅಧ್ಯಾಯಗಳ ಶೀರ್ಷಿಕೆಗಳನ್ನು ಹೋಲುವಂತಿವೆ. ಉದಾಹರಣೆಗೆ ಈ ಶೀರ್ಷಿಕೆಗಳನ್ನು ನೋಡಿ: ಪ್ರಥಮಾಧ್ಯಾಯದಲ್ಲಿ ಕಥಾನಾಯಕ ಬುದ್ಧಿಜೀವ ತನ್ನ ಮಹಾಕೃತಿ ನಿರ್ಮಾಣದ ಸಲುವಾಗಿ ಉಪಯುಕ್ತ ವಾತಾವರಣವನ್ನು ಅರಸುತ್ತಾನೆ; ಷಷ್ಠ್ಯಾಧ್ಯಾಯದಲ್ಲಿ ಕಥಾನಾಯಕ ಬುದ್ಧಿಜೀವಿ ಅತೃಪ್ತ ಪ್ರೇಮದಿಂದ ಶೋಕಭರಿತನಾದ ಮಿತ್ರನ ಬಗ್ಗೆ ಕರುಣೆಯಿಟ್ಟು ಅವನ ವಿರಹವೇದನೆಯನ್ನು ಶಮನಗೊಳಿಸುವ ಆಶ್ವಾಸನೆಯನ್ನು ನೀಡುತ್ತಾನೆ; ನವಮಾಧ್ಯಾಯದಲ್ಲಿ ಕಥಾನಾಯಕ ಬುದ್ಧಿಜೀವಿಯ ಮಹಾಕೃತಿ ಮತ್ತು ಅದರ ರಚನೆಯನ್ನು ಕುರಿತ ಈ ನಿರೂಪಣೆ ಎರಡೂ ಮುಕ್ತಾಯಗೊಳ್ಳುತ್ತವೆ.

`ಒಂದು ತೊಲ ಪುನುಗು ಮತ್ತು ಇತರ ಕತೆಗಳು' ಸಂಕಲನದಲ್ಲಿ ವಿವಿಧ ನಿರೂಪಣಾ ವಿಧಾನಗಳಲ್ಲಿರುವ, ಪ್ರಾಯೋಗಿಕ ಎನ್ನಬಹುದಾದ ಎಂಟು ಕತೆಗಳಿವೆ. ಅವುಗಳಲ್ಲಿ ನನಗೆ ತುಂಬ ಇಷ್ಟವಾದದ್ದು `ಏರಿಸಿ ಹಾರಿಸಿ ಕನ್ನಡದ ಬಾವುಟ'. ಇದರಲ್ಲಿ ಹೆಸರಿಲ್ಲದ ಒಬ್ಬ ವ್ಯಕ್ತಿ ತನ್ನ ಮುಂದೆ ಇರಬಹುದಾದ ಇನ್ನೊಬ್ಬನ ಜೊತೆ ಉದ್ದಕ್ಕೂ ಮಾತನಾಡುತ್ತಿದ್ದಾನೆ. ಕತೆಯಲ್ಲಿ ಆ ಇನ್ನೊಬ್ಬನ ಉಸಿರೇ ಇಲ್ಲ. ಆದರೆ ಕಾಮರೂಪಿಯವರ ನಿರೂಪಣೆಯಲ್ಲಿರುವ ಒಳನೆಯ್ಗೆ ಹಾಗೂ ಮಾತಿನ ಧಾಟಿ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ ಮಾತಾಡುತ್ತಿರುವವನ ಸ್ವಭಾವ, ಧೋರಣೆಗಳೂ ಅವನ ಮಾತು ಕೇಳಿಸಿಕೊಳ್ಳುತ್ತಿರುವವನ ಅಸಹಾಯಕ ಸ್ಥಿತಿಯೂ ಏಕಕಾಲದಲ್ಲಿ ಸ್ಫುಟವಾಗುತ್ತವೆ. ನನಗೆ ತಿಳಿದಂತೆ ಕನ್ನಡದಲ್ಲಿ ಈ ಬಗೆಯ ಕತೆ ಇದೊಂದೇ.

ಎಂ.ಎಸ್. ಪ್ರಭಾಕರ (ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ) ಹುಟ್ಟಿದ್ದು 1936ರಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವೀಧರರಾದ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದರು. ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ ಕೆಲಸಮಾಡಿದರು (1962-65); ಪ್ರತಿಷ್ಠಿತ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ'ಯ ಸಹಾಯಕ ಸಂಪಾದಕರಾಗಿದ್ದರು (1975-83); ನಂತರ ಹಿಂದೂ ಪತ್ರಿಕೆಯ ಈಶಾನ್ಯ ಭಾರತದ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತರಾದರು. ಸದ್ಯ ಕೋಲಾರದಲ್ಲಿ ವಾಸ.

ಕಾಮರೂಪಿ ಅವರ ಕಥನ, ಕಾದಂಬರಿ, ಕವಿತೆ ಹಾಗೂ ಬ್ಲಾಗ್ ಬರಹಗಳನ್ನು ಒಳಗೊಂಡ `ಸಮಗ್ರ ಕಾಮರೂಪಿ' (ಪ್ರ: ಸಂಚಯ, ಬೆಂಗಳೂರು) ಕೃತಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.