ಪದರ–1
ನಾನು ಚಿಕ್ಕವನಿದ್ದಾಗ ಮೂತ್ರ ಕುಡಿಯುತ್ತಿದ್ದೆ! ಯಾವುದೋ ಅಗ್ಗದ ಪ್ರಚಾರ ತಂತ್ರದ ಗುರಿಯಿಟ್ಟುಕೊಂಡು, ಇಂತಹ ಸಾಲಿನಿಂದ ಬರವಣಿಗೆ ಪ್ರಾರಂಭಿಸುತ್ತಿದ್ದೇನೆ ಅಂದುಕೊಳ್ಳಬೇಡಿ. ನನ್ನ ಜೀವನದ ಮೂರು ಮುಖ್ಯ ಪದರದಗಳನ್ನು ನಿಮ್ಮೆದುರಿಗೆ ತೆರೆದಿಡುವುದು ಇಲ್ಲಿಯ ಉದ್ದೇಶ ಹಾಗೂ ಮೊದಲನೇ ಪದರದ ಈ ಅತಿ ಮುಖ್ಯ ಸಂಗತಿಯನ್ನು ಹೇಳದೇ ಮುಂದುವರಿಯಲು ಸಾಧ್ಯವೇ ಇಲ್ಲ.

ಹೌದು, ನಾನು ಹತ್ತೋ-ಹನ್ನೊಂದೋ ವರ್ಷದವನಿದ್ದಾಗ ನನಗೆ ಭಯಂಕರ ಹೊಟ್ಟೆಬೇನೆ ಹಾಗೂ ಆಮಶಂಕೆ ರೋಗವಾಗಿ ಅನೇಕ ವೈದ್ಯರ ಹತ್ತಿರ ತೋರಿಸಿದರೂ ಗುಣವಾಗದೇ, ಇನ್ನು ನಾನು ಬದುಕಲೇ ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ಹೋಗುತ್ತಿರುವಾಗ ಒಬ್ಬ ವೈದ್ಯರು ಸಲಹೆ ನೀಡಿದರಂತೆ– ‘ಆತನಿಗೆ ಅವನದೇ ಮೂತ್ರ ಕುಡಿಸಿ!’. ಯಾವ ಪುಣ್ಯಾತ್ಮ ವೈದ್ಯರವರೋ ಗೊತ್ತಿಲ್ಲ; ಅವರ ಬಾಯಿ ಸಿಹಿಯಾಗಿರಲಿ. ಅದನ್ನು ‘ಯೂರಿನ್ ಥೆರಪಿ’ ಅನ್ನುತ್ತಾರಂತಲೂ, ಸ್ವಮೂತ್ರ ಸೇವನೆಯಿಂದ ಆಮಶಂಕೆಯಷ್ಟೇ ಅಲ್ಲ, ಯಾವ ರೋಗ ರುಜಿನಗಳೂ ತಟ್ಟುವುದಿಲ್ಲ, ಆಯುಷ್ಯ ವೃದ್ಧಿಯಾಗುತ್ತದೆ ಎನ್ನುವುದು ಮನದಟ್ಟಾದಮೇಲೆ ನನಗೆ ಮೂತ್ರಪಾನ ಮಾಡಿಸುವ ಕಾಯಕ ಮನೆಯಲ್ಲಿ ಪ್ರಾರಂಭವಾಯಿತು.

ಬೆಳಿಗ್ಗೆ ಹಾಸಿಗೆಯಿಂದ ಎದ್ದು ಕಣ್ಣುಜ್ಜಿಕೊಳ್ಳುತ್ತಾ ಪಾಯಖಾನೆಗೆ ಹೋದರೆ ಬಾಗಿಲಲ್ಲೇ ಅಪ್ಪ ಕೈಲೊಂದು ಲೋಟ ಹಿಡಿದು ನಿಂತಿರುತ್ತಿದ್ದರು. ದಿನಕ್ಕೆ ಎಷ್ಟು ಸಾಧ್ಯವೋ ಅಷ್ಟು ಬಾರಿ ಮೂತ್ರ ಕುಡಿಯಬೇಕಿತ್ತು. ಹೆಚ್ಚು ಕುಡಿದರೆ ಹೆಚ್ಚು ಒಳ್ಳೆಯದು ಅಂತಾ. ಹೀಗಾಗಿ ನನಗೆ ಮೂತ್ರ ಮಾಡುವುದೆಂದರೇ ಭಯವಾಗುತ್ತಿತ್ತು. ಅಕ್ಕ ನನ್ನ ಮೂತ್ರಪಾನದ ಮೇಲ್ವಿಚಾರಕಿಯಾಗಿದ್ದಳು. ನಾನು ಕದ್ದು ಮುಚ್ಚಿ ಹಿತ್ತಲ ಸಂದಿಯಲ್ಲೆಲ್ಲಾದರೂ ಮೂತ್ರ ಮಾಡಲು ಹೋದರೆ, ಆಕೆ ನೋಡಿ, ‘ಅಮ್ಮಾ ತಮ್ಮ ಉಚ್ಚೆ ಮಾಡಾಕುಂತವ್ನೇ..sss’ ಎಂದು ಚೀರಿಬಿಡುತ್ತಿದ್ದಳು. ಅದನ್ನು ಕೇಳಿದ್ದೇ ತಡ, ಅಮ್ಮ ತಾನು ಮಾಡುವ ಕೆಲಸವನ್ನು ಅರ್ಧಕ್ಕೇ ಬಿಟ್ಟು, ಮಗ ಬಾವಿಯಲ್ಲೇ ಬಿದ್ದನೇನೋ ಎನ್ನುವಂತಹ ಆತುರದಲ್ಲಿ, ಮೂತ್ರಕ್ಕೆಂದೇ ಮೀಸಲಾಗಿಟ್ಟ ‘ಉಚ್ಚೆ ಲೋಟ’ವನ್ನು ಎತ್ತಿಕೊಂಡು ಓಡೋಡಿ ಬರುತ್ತಿದ್ದಳು.

ಬಂದವಳೇ ಲೋಟವನ್ನು ಕೆಳಗೆ ಹಿಡಿದು, ‘ಇಷ್ಟಾದರೂ ಉಳಿದಿದೆಯಲ್ಲ... ಕುಡಿ’ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಳು.
ಏನೇ ಹೇಳಿ, ದಿನದ ಉಳಿದ ಹೊತ್ತಿನಲ್ಲಿ ಬರುವ ಮೂತ್ರಕ್ಕಿಂತ, ಮುಂಜಾನೆಯ ‘ಫ್ರೆಶ್’ ಮೂತ್ರದ ರುಚಿ ಸಹಿಸಲಸಾಧ್ಯವಾದದ್ದು. ದಿನವಿಡೀ ತಿಂದು ರಾತ್ರಿಯೆಲ್ಲಾ ಜಠರ ಒದ್ದಾಡಿ ಜೀರ್ಣಿಸಲಾಗದ ಕಲ್ಮಶವೆಲ್ಲಾ ಮುಂಜಾನೆಯ ಮೂತ್ರದಲ್ಲಿ ಒತ್ತೊಟ್ಟಿ ಬರುತ್ತದೋ ಕಾಣೆ; ಅದರ ವಾಸನೆ, ಒಗರು, ಘಾಟು... ಆ ಸೃಷ್ಟಿಕರ್ತ ಬ್ರಹ್ಮನೂ ಕುಡಿಯಲಾರ. ಮೂತ್ರದ ಬಣ್ಣ, ವಾಸನೆ ನೋಡಿಯೇ ನಾನು ಅದರ ರುಚಿಯ ಪ್ರಮಾಣವನ್ನು ಕಂಡು ಹಿಡಿಯುವಷ್ಟು ಪರಿಣಿತನಾಗಿದ್ದೆ.

ಘಾಟು ವಾಸನೆಯದಾಗಿದ್ದು ಹಳದೀ ಬಣ್ಣದ್ದಾಗಿದ್ದರೆ, ಅತೀ ಕೆಟ್ಟ ರುಚಿ. ನಿರಭ್ರವಾಗಿ ನೀರಿನ ಬಣ್ಣ ಹೊಂದಿದ್ದರೆ ತುಸು ಪರವಾಗಿಲ್ಲ. ದಿನವಿಡೀ ಹೆಚ್ಚೆಚ್ಚು ನೀರು ಕುಡಿಯುತ್ತಿದ್ದರೆ ಮೂತ್ರ ಹೆಚ್ಚು ನಿರ್ಮಲವಾಗಿರುತ್ತದೆ ಎಂಬುದನ್ನು ನಾನು ಕಂಡುಹಿಡಿದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಹೆಚ್ಚು ಮೂತ್ರ ಬರುತ್ತಿತ್ತು, ಕಷ್ಟ ನೋಡಿ! ಅನಾರೋಗ್ಯದ ನಿಮಿತ್ತ ಮನೆಯಿಂದ ಹೊರಗೆ ಹೋಗಬಾರದಾದ್ದರಿಂದ, ಯಾರಿಗೂ ಗೊತ್ತಾಗದಂತೇ ಮೂತ್ರ ವಿಸರ್ಜನೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಸಾಲದೆಂಬಂತೆ, ಓದಲಾಗದೇ ಶಾಲೆ ಬಿಟ್ಟಿದ್ದ ನನ್ನಕ್ಕ ಗೂಢಚಾರಿಣಿಯಂತೆ ನನ್ನ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದಳು.

ಕೆನೆಕೆನೆದು ವಾಂತಿ ಮಾಡಿದಂತೆ, ಎಚ್ಚರ ತಪ್ಪಿ ಬಿದ್ದವನಂತೆ, ಗಂಟಲಲ್ಲಿ ಮೂತ್ರ ಸಿಕ್ಕಿಹಾಕಿಕೊಂಡು ಉಸಿರಾಡಲಾಗದವನಂತೆ; ಹೀಗೇ ನಾನಾ ನಾಟಕಗಳನ್ನು ಮಾಡಿದರೂ ಮೂತ್ರ ಕುಡಿಯುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾನು ಹೆಚ್ಚು ಪ್ರತಿರೋಧ ತೋರಿದಂತೆ, ನನಗೆ ಕುಡಿಸಬಹುದಾದ ಹೊಸ ಹೊಸ ಪ್ರಯೋಗಗಳು ಸೃಷ್ಟಿಯಾಗುತ್ತಿದ್ದವು. ನನ್ನ ಮೂಗು ಹಿಡಿದು ಕುಡಿಸುವುದು, ಮತ್ತಷ್ಟು ನೀರು ಸೇರಿಸಿ ಹೆಚ್ಚು ತೆಳುವಾಗಿಸಿ ಕುಡಿಸುವುದು, ಸಾಲದೆಂಬಂತೆ ಸಕ್ಕರೆ ಸೇರಿಸಿ ಚಮಚದಿಂದ ಕದಡಿಕೊಡುವವರೆಗೂ ಪ್ರಯತ್ನಗಳು ನಡೆಯುತ್ತಿದ್ದವು.

ಬಾಯಿ ತೆರೆದರೆ ಪಕ್ಕದವರಿಗೆ ಮೂತ್ರದ ವಾಸನೆ ರಾಚೀತೋ ಎಂದು ಭಯ ಪಡುವ, ತೇಗು ಬಂದರೆ ಹೊಟ್ಟೆಯ ಒಳಗಿನದು ಗಂಟಲಿಂದ ಹೊರಬಂದೀತೋ ಎಂದು ಆತಂಕ ಪಡುವುದೆಲ್ಲ; ಮೂತ್ರಪಾನ ರೂಢಿಯಾದಂತೆ ಕಡಿಮೆಯಾದೀತೆಂದುಕೊಳ್ಳಬೇಡಿ ನೀವು. ನನಗೆ ಸಮಾಧಾನ ಮಾಡಲೆಂದು ನನ್ನ ಅಪ್ಪ ‘ಈ ದೇಶದ ಪ್ರಧಾನಮಂತ್ರಿಯಾಗಿದ್ದ ಮುರಾರ್ಜಿ ದೇಸಾಯಿಯೇ ಮೂತ್ರ ಕುಡಿಯುತ್ತಿದ್ದರು’ ಎಂದು ಆಗಾಗ ಹೇಳುತ್ತಿದ್ದುದು ನೆನಪಿದೆ. ನಾನು ಮುರಾರ್ಜಿ ದೇಸಾಯಿಯನ್ನು ನೋಡಿರಲಿಲ್ಲ. ಆ ಮುಖವನ್ನು ಅತಿ ಸುಲಭದಲ್ಲಿ ಹುಡುಕಿ ತೆಗೆಯಬಹುದಾದ ಗೂಗಲ್ ಯುಗವೂ ಅದಾಗಿರಲಿಲ್ಲ.

ಮುರಾರ್ಜಿ ದೇಸಾಯಿ ಅನ್ನುವ ವ್ಯಕ್ತಿಯೋರ್ವನ ಮುಖ ಹೇಗಿರಬಹುದು ಎಂದು ಊಹಿಸಿಕೊಂಡಾಗಲೆಲ್ಲ ನನಗೆ; ಚಂದಮಾಮದಲ್ಲಿ ನೋಡಿದ ಉದ್ದನೆಯ ಗದ್ದದ, ಮುಖದ ತುಂಬಾ ಮೊಡವೆಗಳುಳ್ಳ ಕಪ್ಪನೆಯ ಮಾಂತ್ರಿಕನ ಮುಖವೇ ನೆನಪಿಗೆ ಬರುತ್ತಿತ್ತು!
ಅಪ್ಪನಿಗೆ ಯಾವಾಗಿನಿಂದ ಕುಡಿಯುವ ಚಟ (ಮೂತ್ರವಲ್ಲ ಮಾರಾಯ್ರೇ, ಮದ್ಯ) ಶುರುವಾಯಿತು ಎಂಬುದು ನೆನಪಿಲ್ಲ. ದಿನವೆಲ್ಲಾ ಚೆನ್ನಾಗೇ ಇರುತ್ತಿದ್ದ ಆತ ರಾತ್ರಿ ಮಾತ್ರ ಕುಡಿದು ಬರುತ್ತಿದ್ದ. ಕೊನೆಕೊನೆಗೆ ಅದು ಅತಿಯಾಗಿ, ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದುಕೊಂಡೇ, ತೂರಾಡುತ್ತಾ ರೇಗಾಡುತ್ತಾ ಮನೆ ಪ್ರವೇಶಿಸಲು ಪ್ರಾರಂಭಿಸಿದ.

ಮನೆಯೊಳಗೆ ಬರುತ್ತಲೇ ಆತ ವಾಂತಿ ಮಾಡಿಕೊಳ್ಳುವುದು, ಬೀಳುವುದು ಮಾಮೂಲಾಗಿತ್ತು. ಅಮ್ಮ ಆತನ ಕೈಯಲ್ಲಿಯ ಸಾರಾಯಿ ಬಾಟಲಿಯನ್ನು ಕಸಿದು ಅಡುಗೆಮನೆಯ ಕಪಾಟಿನಲ್ಲಿ ಬಚ್ಚಿಡುತ್ತಿದ್ದಳು. ಕುಡಿದು ಬಂದ ಆತ ಎಷ್ಟೋಬಾರಿ ನಿಂತಲ್ಲೇ ಉಚ್ಚೆ ಹೊಯ್ದುಬಿಡುತ್ತಿದ್ದ. ಅದಕ್ಕೆಂದೇ ಅಮ್ಮ ಮತ್ತೊಂದು ಪಾತ್ರೆ ಎತ್ತಿಟ್ಟಿದ್ದಳು. ಅಪ್ಪ ಮೂತ್ರ ಸುರಿಸುವ ಸೂಚನೆ ಸಿಕ್ಕ ಕೂಡಲೇ ಓಡಿಹೋಗಿ ಪಾತ್ರೆಯನ್ನು ತಂದು, ಮೂತ್ರ ಹಿಡಿದು ಪಾಯಖಾನೆಗೆ ಚೆಲ್ಲುತ್ತಿದ್ದಳು. ಹೀಗೇ ಮನೆಯಲ್ಲಿ ಮೂತ್ರಕ್ಕೆಂದೇ ಮೀಸಲಾಗಿಟ್ಟ ಎರಡು ಪಾತ್ರೆಗಳಾದವು. ಅಕ್ಕ ಮಾತ್ರ, ಅಪ್ಪ ಮನೆ ಹೊಕ್ಕುತ್ತಿರುವಂತೆಯೇ ಬಚ್ಚಲ ಮನೆಗೆ ಹೋಗಿ ಬಾಗಿಲು ಹಾಕಿಕೊಂಡುಬಿಡುತ್ತಿದ್ದಳು.

ಆಕೆ ಅಪ್ಪನಿಗೆ ಹೆದರಿ ಹಾಗೆ ಮಾಡುತ್ತಾಳೆ ಎಂದು ಅಂದುಕೊಳ್ಳಬಹುದಾದರೂ; ಅಪ್ಪನ ವಾಂತಿ ಉಚ್ಚೆಗಳನ್ನೆಲ್ಲಾ ಸ್ವಚ್ಛ ಮಾಡುವಲ್ಲಿ ಅಮ್ಮನಿಗೆ ಸಹಾಯ ಮಾಡುವುದರಿಂದ ತಪ್ಪಿಸಿಕೊಳ್ಳಲೆಂದೇ ಆಕೆ ಹಾಗೆ ಮಾಡುತ್ತಿದ್ದಳು ಎಂದು ನನಗೆ ಅನುಮಾನ.
ಒಂದು ದಿನ ಹೀಗಾಯಿತು. ಅಪ್ಪ ತೂರಾಡುತ್ತ ಒಳಗೆ ಬಂದ. ಅಕ್ಕ ಮಾಮೂಲಿನಂತೆ ಬಚ್ಚಲು ಸೇರಿಕೊಂಡಳು. ಕಾಲುಗಳನ್ನು ಅಗಲ ಮಾಡಿ, ತಲೆ ಕೆಳಗೆ ಹಾಕಿ ಏನೇನೋ ಬಡಬಡಿಸುತ್ತ ನಿಂತ ಅಪ್ಪನ ಭಂಗಿಯನ್ನು ನೋಡುತ್ತಲೇ; ಈತ ಈಗ ಮೂತ್ರ ಮಾಡುತ್ತಾನೆಂದು ಅಮ್ಮನಿಗೆ ತಿಳಿದು, ಲಗುಬಗನೆ ಪಾತ್ರೆಯನ್ನು ತಂದು ಕೆಳಗೆ ಹಿಡಿದಳು.

ನಾನು ಎದುರಲ್ಲೇ ನೋಡುತ್ತಾ ನಿಂತದ್ದನ್ನು ಗಮನಿಸಿದ ಅಪ್ಪ, ‘ಲೋಫರ್... ಇವತ್ತು ಉಚ್ಚೆ ಕುಡದ್ಯೋ ಇಲ್ವೋ...’ ಎಂದು ತೊದಲುತ್ತ ಕೇಳಿದ. ನಾನು ಉತ್ತರಿಸದೇ ಹಾಗೆಯೇ ನಿಂತಿದ್ದೆ. ‘ಕುಡದ್ಯೇನೋ...?’ ಎತ್ತರದ ದನಿಯಲ್ಲಿ ಕೇಳಿದ. ನಾನು ಸುಮ್ಮನಿದ್ದೆ. ಕೋಪ ನೆತ್ತಿಗೇರಿ, ಅಮ್ಮನ ಕೈಲಿದ್ದ ಪಾತ್ರೆಯನ್ನು ಕಿತ್ತುಕೊಂಡು ‘ಬೊಗಳಲೇ ಬೇವರ್ಸಿ’ ಎಂದು ಕಿರುಚುತ್ತ ಮೂತ್ರವನ್ನು ನನ್ನ ಮುಖಕ್ಕೆ ಎರಚಿದ. ಅಪ್ಪನನ್ನು ಅಲ್ಲೇ ಬಿಟ್ಟು, ‘ಅಯ್ಯೋ...’ ಅನ್ನುತ್ತಾ ನನ್ನತ್ತ ಧಾವಿಸಿ ಬಂದ ಅಮ್ಮ ತನ್ನ ಸೆರಗಿನಿಂದ ಮುಖ ಕುತ್ತಿಗೆಯೆಲ್ಲಾ ಒರೆಸಿ ನನ್ನನ್ನು ಬರಸೆಳೆದು ತಬ್ಬಿಕೊಂಡಳು. ಅಪ್ಪ ಅಲ್ಲೇ ಕುಸಿದು ಬಿದ್ದು ಏನೇನೋ ತಡಬಡಿಸುತ್ತಿದ್ದ.

ಸಾಧ್ಯವಾದಷ್ಟೂ ಹಗಲಲ್ಲಿ ಮೂತ್ರ ಕಟ್ಟಿಕೊಂಡಿರುತ್ತಿದ್ದ ನಾನು, ರಾತ್ರಿ ಎಲ್ಲರೂ ಮಲಗಿದ ಮೇಲೆ ಎದ್ದುಹೋಗಿ ಮಾಡಿಬರುತ್ತಿದ್ದೆ. ಆದಿನ ರಾತ್ರಿ ಸದ್ದಿಲ್ಲದಂತೆ ಎದ್ದು ಕತ್ತಲಲ್ಲಿ ಮೂತ್ರ ಮಾಡಲು ಹೋಗುತ್ತಿದಾಗ ಅಡುಗೆ ಮನೆಯಲ್ಲಿ ಕಂಡ ದೃಶ್ಯ ನನ್ನನ್ನು ಬೆಚ್ಚಿ ಬೀಳಿಸಿತು. ಅಮ್ಮ, ಕಪಾಟಿನಲ್ಲಿ ಅಡಗಿಸಿಟ್ಟಿದ್ದ ಸಾರಾಯಿ ಬಾಟಲಿಯಲ್ಲಿ ಉಳಿದಿದ್ದ ಮದ್ಯವನ್ನು, ತಲೆ ಮೇಲೆತ್ತಿ ಕಣ್ಮುಚ್ಚಿ ಗಟಗಟನೆ ಕುಡಿಯುತ್ತಿದ್ದಳು! ಅಪ್ಪ ಬರುತ್ತಿದ್ದಂತೇ ಆತನ ಕೈಲಿದ್ದ ಬಾಟಲಿ ಕಸಿದು ಅದನ್ನು ಕಪಾಟಿನಲ್ಲಿ ಇಡುತ್ತಿದ್ದುದರ ಮತ್ತೊಂದು ಕಾರಣ ನನಗಾಗ ತಿಳಿದಿತ್ತು.

ಪದರ–2
ಇದನ್ನು ಅಬುಧಾಭಿ ಅನ್ನುತ್ತಾರೆ. ಸಿವಿಲ್ ಇಂಜಿನಿಯರ್ ಆದ ನನಗೆ ಇಲ್ಲಿ ಒಳ್ಳೆಯ ನೌಕರಿ ಸಿಕ್ಕಿದೆ. ಇಲ್ಲಿಯ ತಳಕುಬಳಕು, ಝಗಮಗಗಳ ನಡುವೆ, ಮೋಜು ಮಸ್ತಿಯೊಡನೆ ಜೀವನ ಮಜವಾಗಿದೆ. ನೀರಿಗಿಂತ ‘ಪೆಪ್ಸಿ’ ಕಡಿಮೆ ಬೆಲೆಗೆ ಸಿಗುವ ರಾಷ್ಟ್ರವಿದು. ಇಲ್ಲಿ ಬಾವಿ ತೋಡಿದರೆ ನೀರು ಬರುವುದಿಲ್ಲ; ಎಣ್ಣೆ ಬರುತ್ತದೆ. ಇವರಿಗೆ ನೀರು ಬೇಕಿಲ್ಲ. ಒಂದು ತೊಟ್ಟು ಎಣ್ಣೆ ಕೊಟ್ಟು, ನಾವು ಹತ್ತು ಬ್ಯಾರೆಲ್ ನೀರು ಕೊಂಡುಕೊಳ್ಳುತ್ತೇವೆ ಎಂಬ ಸೊಕ್ಕಿವರಿಗೆ. ಉಳಿದವರಿಗೆ ನೀರು ಬೇಕಿಲ್ಲ. ಅವರು ಒಂದು ತೊಟ್ಟು ಎಣ್ಣೆಗಾಗಿ ಹತ್ತು ಬ್ಯಾರೆಲ್ ನೀರು ಸುರಿಯಲಿಕ್ಕೂ ಸಿದ್ಧ. ಯಾಕೆಂದರೆ ಎಣ್ಣೆ ಈ ಹೊತ್ತಿನ ಅನಿವಾರ್ಯತೆ; ನೀರಲ್ಲ.

ಇಲ್ಲಿ ಎಲ್ಲ ಕಟ್ಟಡಗಳಿಗೂ ಫಳಫಳ ಹೊಳೆಯುವ ಗಾಜುಗಳೇ ಬೇಕು. ಗಾಜುಗಳು ಬೆಳಕನ್ನು ಪ್ರತಿಫಲಿಸುತ್ತವೆ. ಈಗಾಗಲೇ ಬಿಸಿಲಿಂದ ಬೆಂದ ವಾತಾವರಣಕ್ಕೆ ಮತ್ತಷ್ಟು ಬಿಸಿಯನ್ನು ಸೇರಿಸುತ್ತವೆ. ಆಫೀಸು, ಕಾರು, ಮನೆ, ಹೊಟೇಲುಗಳ ಒಳಗೆಲ್ಲ ಸದಾ ತಂಪಾಗೇ ಇರಬೇಕು. ಅದಕ್ಕೆ ಎ.ಸಿ ಇದೆ. ಅದು ನಾಲ್ಕು ಗೋಡೆಗಳ ಒಳಗಿನ ಬಿಸಿಯನ್ನು ಎಳೆದೆಳೆದು ಅದರೊಡನೆ ತನ್ನ ಯಂತ್ರದ ಕಾವನ್ನೂ ಸೇರಿಸಿ ದುಪ್ಪಟ್ಟು ಶಾಖವನ್ನು ಹೊರ ವಾತಾವರಣಕ್ಕೆ ಚೆಲ್ಲುತ್ತದೆ. ಜೊತೆಗೊಂದಿಷ್ಟು ರಾಸಾಯನಿಕ ವಿಷವನ್ನೂ. ಹೊರಗಿರುವವರು ಎಷ್ಟೇ ಬೇಯಲಿ, ಒಳಗೆ ತಾವು ನೆಮ್ಮದಿಯಿಂದ ತಂಪಾಗಿರಬೇಕು ಅಷ್ಟೇ. ಆದಾಗ್ಯೂ, ಹೊರಗೆ ಬಿಸಿಲಲ್ಲಿ ಕೆಲಸ ಮಾಡುವವರು, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಫಿಲಿಪೈನ್ಸ್, ಇಂಡೋನೇಷಿಯಾದಂತ ಬಡ ರಾಷ್ಟ್ರಗಳಿಂದ ಬಂದ ಕಾರ್ಮಿಕರು.

ವಿಪರ್ಯಾಸವೆಂದರೆ ಇವರ ಈ ಅಹಂಕಾರವನ್ನು ಅಳುವವನು ಮತ್ತೊಬ್ಬನಿದ್ದಾನೆ. ಅವನೇ ಅಮೇರಿಕಾ. ದಾಸ್ಯವೆನ್ನುವುದು ವಿವಿಧ ರೂಪದಲ್ಲಿ ಬರುತ್ತದೆನ್ನುವುದಕ್ಕೇ ಇದೇ ಉದಾಹರಣೆ. ನೆಲ ಇವರದು, ನೆಲದೊಳಗಿನ ತೈಲ ಇವರದು. ಆದರೆ ನೆಲವನ್ನು ಕೊರೆದು ತೈಲವನ್ನು ಹೊರತೆಗೆಯುವ ತಂತ್ರಗಾರಿಕೆ ಇವರಿಗೆ ಗೊತ್ತಿಲ್ಲ. ಅದನ್ನು ಅಮೇರಿಕಾ ಎಂಬ ದೇಶ ಮಾಡುತ್ತದೆ. ಇವರ ಜುಟ್ಟು ಅವರ ಕೈಯಲ್ಲೇ. ಇವರ ತೈಲ ಬಾವಿಗಳನ್ನೂ ಅಮೇರಿಕಾವೇ ನಿಯಂತ್ರಿಸುತ್ತದೆ. ಇಲ್ಲಿಯ ಜನಸಾಮಾನ್ಯ ಅರಬನಿಗೆ ಅಮೇರಿಕಾ ಅಂದರೆ ಮಹಾದ್ವೇಷ. Chevrolet Camaro ಕಾರಲ್ಲಿ ಕುಳಿತು, ಹೆಮಿಲ್ಟನ್ ವಾಚು ಕಟ್ಟಿದ ಕೈಯಲ್ಲಿ ಕೋಕ್ ಬಾಟಲಿ ಹಿಡಿದು, ಅವನೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡಿದ ಭಾರತೀಯನಿಗೆ ಆತ ಅತೀ ಹಮ್ಮಿನಿಂದ ನಿಂದ ಹೇಳುತ್ತಾನೆ– ‘ಲಾ ತಹ್ದೋತ್ ಇಂಗ್ಲಿಸ್… ದಿಸ್ ನಾಟ್ ಅಮೆರಿಕಿ’ (ಇಂಗ್ಲೀಷಿನಲ್ಲಿ ಮಾತನಾಡಬೇಡ, ಇದು ಅಮೇರಿಕವಲ್ಲ).

ನನ್ನ ಜೋರ್ಡಾನೀ ಗೆಳೆಯ ಹಮೀದನಿಗೆ Dune Bashingನ ಹುಚ್ಚು. ಅಂದರೆ ಮರಳುಗಾಡಿನ ಮಧ್ಯದಲ್ಲಿಯ ಎತ್ತರದ ಮರಳು ಬೆಟ್ಟದಿಂದ ಕಾರನ್ನು ಶರವೇಗದಲ್ಲಿ ಕೆಳಕ್ಕೆ ಓಡಿಸುವುದು. ಐಷಾರಾಮ ಜೀವನದ ಎಲ್ಲ ಅಗತ್ಯಗಳೂ ಪೂರೈಕೆಯಾದ ಮೇಲೆ ಇಂತಹ ಹುಚ್ಚುಗಳು ಅನಿವಾರ್ಯ. ಹೀಗೊಂದು ದಿನ ನಾನು ಮತ್ತು ಹಮೀದ್, ಆತನ ಲ್ಯಾಂಡ್ ಕ್ರೂಸರ್ ಗಾಡಿಯಲ್ಲಿ ಹತ್ತಿರದ ಪ್ರಖ್ಯಾತ ಮರುಭೂಮಿಯಾದ ‘ಅಲ್-ಖಾತಿಮ್’ಗೆ Dune Bashing ಮಾಡಲೆಂದು ಹೋದೆವು. ಅಬುಧಾಭಿಯ ಸುತ್ತಮುತ್ತಲಿನ ಡ್ಯೂನ್ ಭಾಷಿಂಗ್ ತಾಣಗಳಲ್ಲಿ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಜನದಟ್ಟಣೆಯಿರುತ್ತದೆ. ಆದರೆ ಅಲ್-ಖಾತಿಮ್ ಘನಘೋರ ಮರುಭೂಮಿಯಾದ್ದರಿಂದ ಅಲ್ಲಿ ಜನ ವಿರಳ.

ಎತ್ತರದ ದಿಬ್ಬದಿಂದ ಕಾರಿನ ಗಾಲಿ ಮರಳಿನ ಮೇಲೆ ಅತ್ತಿತ್ತ ಓಲಾಡುತ್ತಾ ಕೆಳಜಾರುವ ರೋಮಾಂಚನವನ್ನು; ಕೂಗಾಡುತ್ತಾ, ಕೇಕೆ ಹಾಕುತ್ತಾ ಅನುಭವಿಸುತ್ತಿರುವುದರ ನಡುವೆ ಏನಾಯಿತೋ; ಕಾರಿನ break-fail ಆಗಿರಬಹುದು! ಅದು ಇಳಿಜಾರು ಮುಗಿದರೂ ನಿಲ್ಲದೇ, ಭೀಕರ ಶಬ್ದ ಮಾಡುತ್ತಾ ಒಂದೇ ಸಮನೆ ಓಡತೊಡಗಿತು. ಅತ್ತಿತ್ತ ಓಡುತ್ತಾ ಎತ್ತರೆತ್ತರಕ್ಕೆ ಜಿಗಿಯುತ್ತಾ ಮುನ್ನುಗ್ಗುತ್ತಿರುವ ಗಾಡಿಯನ್ನು ನಿಲ್ಲಿಸಲು ಏನೇ ಮಾಡಿದರೂ ಸಾಧ್ಯವಾಗಲಿಲ್ಲ. ಹೀಗೇ ಹತ್ತಾರು ಕಿಲೋಮೀಟರುಗಳು ಚಲಿಸಿರಬಹುದು; ಗಾಡಿ ಯಾವುದೋ ಮರಳ ಕಂದಕದೊಳಕ್ಕೆ ಜಾರುತ್ತಾ ಜಾರುತ್ತಾ ಕೊನೆಗೆ ನೆಲಕ್ಕೆ ಮೂತಿ ತಾಗಿಸಿ ಮುಗ್ಗರಿಸಿ ಬಿದ್ದುಬಿಟ್ಟಿತು.

ಕೆಲ ಹೊತ್ತು ಗಾಳಿಯಲ್ಲಿ ಗರ್ರನೆ ತಿರುಗಿದ ಚಕ್ರ ಸ್ತಬ್ಧವಾಯಿತು. ಗಟ್ಟಿಮುಟ್ಟಾದ ಕಾರಾದ್ದರಿಂದ ಅದೃಷ್ಟವಶಾತ್ ನನಗೂ ಹಮೀದನಿಗೂ ಸಣ್ಣಪುಟ್ಟ ಗಾಯಗಳ ವಿನಃ ಮತ್ತೇನೂ ಆಗಲಿಲ್ಲ. ನಾವು ಹೆಚ್ಚು ಭಯಭೀತರಾದದ್ದು ಕಾರಿನಿಂದ ಹೊರಬಂದ ಮೇಲೆಯೇ. ಮರುಭೂಮಿಯ ನಡುವೆ ಕಳೆದುಹೋದ ನಮಗೆ ಅಲ್ಲಿಂದ ಹೊರ ಬೀಳುವ ಯಾವ ಸಾಧ್ಯತೆಗಳೂ ತೋಚಲಿಲ್ಲ. ನಂತರ ಸುಮಾರು ಮೂವತ್ತು ತಾಸುಗಳ ಕಾಲ ನಾವು ಅಲ್ಲಿಂದ ಹೊರಬೀಳಲು ಮಾಡಿದ ಪ್ರಯತ್ನಗಳನ್ನೆಲ್ಲ ಹೇಳಹೊರಟರೆ ಅದೇ ದೊಡ್ಡ ಕಥೆಯಾದೀತು. ಮರುಭೂಮಿಯ ಕರಾಳತೆ ಹೇಗಿರುತ್ತದೆ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ.

ಯಾವುದೋ ಸಿನಿಮಾದಲ್ಲಿ, ನಾಯಕ ನಾಯಕಿ ಕುಣಿಯುತ್ತಿರುವ ಹಿನ್ನೆಲೆಯಲ್ಲಿ ಕಾಣುತ್ತಿರುವ ಕೆಂಪು ಮಣ್ಣಿನ ಹಾಸು; ಅಥವಾ ಯಾವುದೋ ಫೋಟೋಗ್ರಫಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಒಂಟೆಗಳ ಸಾಲಿನ ಚಿತ್ರ; ಅಥವಾ ಹೆಚ್ಚೆಂದರೆ ರಾಜಾಸ್ತಾನವೋ, ಇನ್ಯಾವುದೋ ಮರಳುಗಾಡು ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಮರುಭೂಮಿಯಲ್ಲಿ ಒಂದು ರಾತ್ರಿ ಟೆಂಟ್ ಹಾಕಿ ಉಳಿದುಕೊಂಡ ಅನುಭವ ಅಥವಾ ಕಲ್ಪನೆಗಳನ್ನು ಮೀರಲಾರದು ನಿಮ್ಮ ಮರುಭೂಮಿ. ನಡುರಾತ್ರಿಯ ಚಂದಿರನ ಬಿಸಿಲಿನಲ್ಲಿ ಬೀಸಿದ ಗಾಳಿ ಕೂಡ ಬಿಸಿಯೇ. ಆದಾಗ್ಯೂ, ಗಾಳಿ ಬೀಸಿದರೆ ತುಸು ಹಿತವೆನ್ನಿಸುತ್ತಿತ್ತು; ಜೊತೆಗೆ ಭಯವೂ ಆಗುತ್ತಿತ್ತು. ಹೀಗೇ ಸಣ್ಣಗೆ ಶುರುವಾದ ಗಾಳಿ ನೋಡ ನೋಡುತ್ತಿರುವಂತೆಯೇ ಬಿರುಗಾಳಿಯಾಗಿ, ಮತ್ತೆಲ್ಲಿಯದೋ ಮರಳನ್ನು ಹೊತ್ತು ತಂದು ನಾವಿರುವ ಬೃಹತ್ ಕಂದಕವನ್ನು ಕ್ಷಣಮಾತ್ರದಲ್ಲಿ ಮುಚ್ಚಿ ಹೋಗಿಬಿಟ್ಟರೆ! ಗಾಳಿ ಬೇಕು, ಆದರೆ ಬೇಡವೇ ಬೇಡ ಎನ್ನುವ ಸ್ಥಿತಿ.

ಗಂಟಲಿಗೆ ತೊಟ್ಟು ನೀರಿಲ್ಲದೇ ಬಸವಳಿದ ನಾನು, ತಡ ಮಾಡದೇ ಕಾರಿನಲ್ಲೇ ಬಿದ್ದಿದ್ದ ಖಾಲಿ ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ ಅದನ್ನೇ ಗಟಗಟನೆ ಕುಡಿದುಬಿಟ್ಟೆ! ಇದನ್ನು ನೋಡಿದ ಹಮೀದ್ ಅವಕ್ಕಾಗಿ ಹೋದ. ‘ನೀನೂ ಕುಡಿ, ಬೇರೆ ದಾರಿಯಿಲ್ಲ’ ಎಂದೆ. ಸತ್ತರೂ ಸಾಧ್ಯವಿಲ್ಲವೆಂದ. ನಂತರ, ಕಾರಿನ ಟ್ಯಾಂಕಿನಲ್ಲಿ ಉಳಿದಿದ್ದ ಪೆಟ್ರೋಲನ್ನೇ ಹೊರತೆಗೆದು ಅದನ್ನೇ ಕುಡಿಯಲು ಪ್ರಯತ್ನಿಸಿದ; ಹೊಟ್ಟೆಯಲ್ಲಿದ್ದದ್ದನ್ನೆಲ್ಲಾ ಹೊರ ಕಕ್ಕಿದ. ನಮ್ಮ ಗಂಟಲ ನಾಳವನ್ನು ತೇವವಾಗಿಟ್ಟು ತುಸು ಹೊತ್ತು ಜೀವವನ್ನು ಹಿಡಿದಿಡಬಹುದಾದ ದ್ರಾವಣವೆಂದರೆ ಮೂತ್ರವೊಂದೇ ಎಂಬುದು ನನಗೆ ಮನವರಿಕೆಯಾಯಿತು.

ಹೋಗುವಾಗ ಭರಪೂರ ತಿಂಡಿ ತಿನಿಸುಗಳನ್ನು ಕಟ್ಟಿಕೊಂಡು ಹೋಗಿದ್ದರಿಂದ ಕಾರಿನಲ್ಲಿ ಪಾತ್ರೆಗಳಿಗೇನೂ ಕೊರತೆಯಿರಲಿಲ್ಲ. ಪೆಟ್ರೋಲ್ ಇದ್ದ ಮೇಲೆ ಬೆಂಕಿ ಹೊತ್ತಿಸುವುದೇನೂ ಕಷ್ಟವಲ್ಲ. ಹಮೀದನಿಗೆ ಪಾತ್ರೆಯೊಂದರಲ್ಲಿ ಮೂತ್ರ ಹೊಯ್ಯುವಂತೆ ಹೇಳಿ, ಅದನ್ನು ಬೆಂಕಿಯ ಮೇಲಿಟ್ಟು ಕುದಿಸಿ, ಅದರ ಮೇಲೊಂದು ಸ್ಟೀಲ್ ತಾಟೊಂದನ್ನು ಹಿಡಿದು, ಮೂತ್ರ ಕುದಿದು ಏಳುತ್ತಿರುವ ಆವಿ ಮೇಲಿನ ತಾಟಿನಲ್ಲಿ ಘನೀಭವಿಸಿ, ಅಲ್ಲಿ ದೊರಕುವ ನೀರ ಹನಿಗಳಿಂದ ಗಂಟಲ ಪಸೆ ನೀಗಿಸಿಕೊಳ್ಳಲು ನಾವು ಪ್ರಯತ್ನಿಸಿದೆವು. ಎಷ್ಟೋ ಸಮಯದ ನಂತರ ಆಕಾಶದಲ್ಲಿ ಹಾರಾಡುತ್ತಿರುವ ಮಿಲಿಟರಿ ಹೆಲಿಕಾಪ್ಟರೊಂದು ನಮ್ಮನ್ನು ನೋಡಿ, ಅದರಲ್ಲಿಯ ವ್ಯಕ್ತಿ ದೇವದೂತನಂತೆ ಕೆಳಕ್ಕಿಳಿದು ನಮ್ಮನ್ನು ಅಲ್ಲಿಂದ ಪಾರು ಮಾಡದೇ ಇರುತ್ತಿದ್ದರೆ ಈ ನನ್ನ ಕಥೆಯನ್ನು ನೀವಿಂದು ಓದಲಾಗುತ್ತಿರಲಿಲ್ಲ.

ಎಷ್ಟೇ ಬಾಹ್ಯ ಸುಖಗಳಿದ್ದರೂ ದೇಹ ವಾಂಛೆ ತೀರದಿದ್ದರೆ ಮನವೂ ಮರುಭೂಮಿಯೇ. ಇದನ್ನೆಲ್ಲ ಹೇಳಿದರೆ ಸಭ್ಯಸ್ಥರಾದ ನೀವು ಅಸಹ್ಯ ಪಟ್ಟುಕೊಳ್ಳುತ್ತೀರೆಂದು ನನಗೆ ಗೊತ್ತು. ಆದರೂ ನನಗೆ ಹೇಳದೇ ವಿಧಿಯಿಲ್ಲ. ಮನದ ಮಲಿನ ಹೊರ ಹಾಕಿದರಷ್ಟೇ ಮನಸ್ಸು ಶುದ್ಧ. ಅಲ್ಲದೇ ತಪ್ಪೊಪ್ಪಿಗೆಗಿಂತ ದೊಡ್ಡ ಪ್ರಾಯಶ್ಚಿತ್ತ ಮತ್ಯಾವುದಿದೆ ಹೇಳಿ? ನನಗೆ, ಅತ್ಯದ್ಭುತವೆನ್ನುವ ಅಂಗಸೌಷ್ಟವ ಹೊಂದಿರುವ, ಬಂಗಾರದ ಮೈಕಾಂತಿಯ, ಕಂದು ಕೂದಲಿನ ರಷ್ಯನ್ ತರುಣಿಯರೆಂದರೆ ಸಿಕ್ಕಾಪಟ್ಟೆ ಆಕರ್ಷಣೆ.

ಒಂದು ಕಾಲದಲ್ಲಿ ಜಗತ್ತಿನ ದೊಡ್ಡಣ್ಣನಿಗೆ ಸೆಡ್ಡು ಹೊಡೆದು ಮೆರೆದ ರಷ್ಯಾ ಎಂಬ ರಾಷ್ಟ್ರ ಛಿದ್ರವಾಗಿ, ಆರ್ಥಿಕವಾಗಿ ಕುಸಿದು, ಅಲ್ಲಿಯ ಅನೇಕ ಹೆಂಗಳೆಯರು ಹೊಟ್ಟೆಪಾಡಿಗಾಗಿ ದೇಶ ತೊರೆದು ದುಬೈ, ಅಬುಧಾಭಿಯಂಥ ಶ್ರೀಮಂತ ದೇಶಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದರ ಬಗ್ಗೆ ನನಗೆ ಅನುಕಂಪವಿದೆ. ಆದರೆ ಆ ಅನುಕಂಪ ಅವರೆಡೆಗಿನ ಸೆಳೆತವನ್ನು ಕಡಿಮೆ ಮಾಡಿಲ್ಲ. ಬಹುದಿನದ ಆಸೆಯನ್ನು ಪೂರೈಸಿಕೊಳ್ಳಲೇಬೇಕೆಂದು ಅಂದು ನಾನು ಎಲ್ಲ ಪೂರ್ವ ವ್ಯವಹಾರಗಳನ್ನೂ ಮುಗಿಸಿ ಚಂದದ ರಷ್ಯನ್ ಮಹಿಳೆಯೊಬ್ಬಳೊಡನೆ ಹೊಟೇಲಿನ ಕೋಣೆ ಸೇರಿಕೊಂಡೆ.

ಸುಖದ ಉತ್ತುಂಗದ ನಡುವಿನಲ್ಲಿ ಆಕೆಗೇನಾಯಿತೋ ಏನೋ, ನಾನೇನೋ ಮಾಡಲು ಹೋಗಿದ್ದು ಆಕೆಗೆ ವಿಕೃತವೆನಿಸಿ ಅವಮಾನವಾಯಿತೋ ಕಾಣೆ; ಆಕೆ ಅತೀವ ಅಸಮಾಧಾನ ತೋರುತ್ತ, ಮಾಡುತ್ತಿರುವ ಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿ, ಚೀರುತ್ತಾ ಚಂಗನೆ ನನ್ನ ಮೈಮೇಲೆರಗಿ ಕುಳಿತು ಮುಖಕ್ಕೆ ರಾಚುವಂತೆ ಮೂತ್ರ ವಿಸರ್ಜಿಸಿಬಿಟ್ಟಳು! ನಾನು ಮುಖ ಕಿವುಚಿಕೊಂಡು ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ. ಅಂಗಾತ ಹರಡಿದ್ದ ನನ್ನ ಎರಡೂ ಕೈಗಳ ಮೇಲೆ ಕಾಲನ್ನು ಆಕೆ ಒತ್ತಿ ಇಟ್ಟಿದ್ದರಿಂದ ನನಗೆ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಕಡಿಮೆಯೇ ಇತ್ತು. ನಂತರ ನಾನು ಕಣ್ತೆರೆಯುತ್ತಿರುವಂತೆ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದ ಆಕೆ ರಷ್ಯನ್ ಭಾಷೆಯಲ್ಲಿ ಯರ್ರಾಬಿರ್ರಿ ಬೈಯತೊಡಗಿದಳು. ನನಗೇನೂ ಅರ್ಥವಾಗಲಿಲ್ಲ.

ದುಂಡನೆಯ ಚಂದದ ಮುಖದಲ್ಲಿ ಕ್ರೋಧವನ್ನು ಅವಾಹಿಸಿಕೊಂಡು, ಕೂದಲುಗಳೆಲ್ಲಾ ಬೀಸುತ್ತಿರುವ ಗಾಳಿಗೆ ಹಿಂದಕ್ಕೆ ಹಾರುತ್ತಿರುವ ಸಾಕ್ಷಾತ್ ದೇವಿಯಂತೆಯೇ ಆಕೆ ನನಗೆ ಕಂಡಳು. ಈ ಅನಿರೀಕ್ಷಿತ ಅನಪೇಕ್ಷಿತ ಘಟನೆಯಿಂದ ನಾನು ಚೇತರಿಸಿಕೊಳ್ಳುವ ಮೊದಲೇ ಆಕೆ ತನ್ನ ಬಟ್ಟೆ ಧರಿಸಿ, ವೆನಿಟಿ ಬ್ಯಾಗ್ ಎತ್ತಿಕೊಂಡು ಕೋಣೆಯ ಬಾಗಿಲನ್ನು ಧಡ್ಡನೆ ಬಡಿದು ಹೊರಟುಹೋದಳು. ಮುಖದ ಮೇಲೆ ಮೂತ್ರ ಹೊಯ್ಯುವುದೆಂದರೆ, ಅದಕ್ಕಿಂತ ಅವಮಾನ ಮತ್ಯಾವುದೂ ಇಲ್ಲ ಅಂದುಕೊಂಡಿರಬೇಕು ಆಕೆ. ಅವಳಿಗೇನು ಗೊತ್ತು; ನನಗೇನೂ ಅನ್ನಿಸಲೇ ಇಲ್ಲವೆಂದು. ಚಿಕ್ಕದೊಂದು ಅಚಾತುರ್ಯದಿಂದಾಗಿ ರಾತ್ರಿಯಿಡೀ ದೊರಕಬಹುದಾಗಿದ್ದ ಸುಖ ಕೈತಪ್ಪಿ ಹೋದದ್ದಲ್ಲದೇ, ದುಡ್ಡೂ ಹೋದದ್ದಕ್ಕೆ ಹೊಟ್ಟೆ ತೊಳಸಿದಂತಾಯ್ತು ನನಗೆ.

ನಾನು ಇಂದಿಗೂ ಯೋಚಿಸುತ್ತೇನೆ. ಆಕೆ ಅದ್ಯಾಕೆ ಹಾಗೆ ವರ್ತಿಸಿದಳು? ಮಾಡಬಾರದ್ದಂತದ್ದೇನೂ ನಾನು ಮಾಡಿರಲಿಲ್ಲ. ದೇಶ ಭಾಷೆ ಸಂಸ್ಕೃತಿಗನುಗುಣವಾಗಿ ಪ್ರತಿ ಕ್ರಿಯೆಗೂ ಅದರದೇ ಆದ ಔಚಿತ್ಯವಿರುತ್ತದೆಯೇ? ನಮಗೆ ಸಹ್ಯವಾದದ್ದು ಆ ದೇಶದವರಿಗೆ ಅಸಹ್ಯವಾಗಿರಬಹುದೇ? ಹಾಗಾದರೆ; ವೇಶ್ಯೆಯೆಂದ ಮೇಲೆ, ಹಣ ನೀಡಿದ ಮೇಲೆ, ಎಲ್ಲವೂ ಸಿಂಧು, ಏನೂ ಮಾಡಬಹುದು, ಅವಳ ಮೇಲಿನ ಸಂಪೂರ್ಣ ಅಧಿಕಾರ ನನ್ನದೇ ಎನ್ನುವ ನನ್ನ ಭಾವನೆಯಲ್ಲೇ ಕುಂದಿತ್ತೇ? ಅಥವಾ ಮೊದಲೇ ಈ ವಿಷಯ ಮಾತಾಡಿ ಒಪ್ಪಿಗೆ ಪಡೆದುಕೊಳ್ಳಬೇಕಿತ್ತೇ? ಅಥವಾ ಇದು ಇವರ ಮಾಮೂಲೀ ವಿದ್ಯೆಯೇ... ಹೀಗೆ ಸಣ್ಣ ವಿಷಯಕ್ಕೂ ಅವಮಾನಗೊಂಡವರಂತೆ ನಟಿಸಿ, ಗಿರಾಕಿ ಪ್ರತಿರೋಧಿಸಲೂ ಆಗದಂತ ಪ್ರಸಂಗ ಸೃಷ್ಟಿಸಿ, ಹಣ ಕಿತ್ತು, ನೀಡಬೇಕಾದದ್ದನ್ನು ನೀಡದೇ ತಪ್ಪಿಸಿಕೊಳ್ಳುವ ವ್ಯವಸ್ಥಿತ ಜಾಲವೇ? ಅಂದಹಾಗೆ, ಬಯ್ಯುವಾಗ ಆಕೆ ಕೇವಲ ಅವಾಚ್ಯ ಶಬ್ದಗಳನ್ನು ಮಾತ್ರ ಉಪಯೋಗಿಸಿದ್ದಲ್ಲ. ಆಕೆ ಮತ್ತೇನನ್ನೋ ಹೇಳಿದಳು.

ಅಷ್ಟಿಷ್ಟು ಇಂಗ್ಲಿಷ್ ಬರುತ್ತಿದ್ದರೂ ಆಕೆ ಯಾಕೆ ರಷ್ಯನ್ ಭಾಷೆಯಲ್ಲಿಯೇ ನನಗೆ ಬೈದು ಹೋದಳು? ನನಗೆ ಅರ್ಥವಾಗಲಿಕ್ಕಿಲ್ಲ ಎಂಬುದು ಅವಳಿಗೆ ಆ ಉದ್ವೇಗದಲ್ಲಿ ಮರೆತು ಹೋಯಿತೇ? ಅದೇನನ್ನು ಆಕೆ ಹೇಳಿರಬಹುದು...? ನನಗೆ ನೆನಪಿದೆ. ಆಕೆ ಹೋದ ನಂತರ ತುಂಬಾ ಹೊತ್ತು ನಾನು ಹಾಗೆಯೇ ಮಲಗಿದ್ದೆ. ಮುಖದ ಮೇಲಿಂದ ಹರಿದು, ಕುತ್ತಿಗೆಯ ಹಿಂಬದಿಗೂ ಪಸರಿಸಿದ್ದ ಮೂತ್ರ ಮುಖಕ್ಕೆ ಬಡಿಯುತ್ತಿದ್ದ ಎ.ಸಿ.ಯ ಗಾಳಿಗೆ ಅಲ್ಲೇ ಒಣಗಿ ತುಸು ಕಿರಿ ಕಿರಿಯಾಗುತ್ತಿದ್ದಂತೆ, ಪಕ್ಕದಲ್ಲಿಯ ಹಾಸಿಗೆಯನ್ನೆತ್ತಿ ಒರೆಸಿಕೊಂಡು ಹಾಗೆಯೇ ನಿದ್ದೆ ಹೋಗಿದ್ದೆ.

ಎಚ್ಚರಾಗುತ್ತಿದ್ದಂತೆ ನನಗೆ, ಮನೆಬಿಟ್ಟು ಓಡಿಹೋದ ನನ್ನ ಅಕ್ಕ ನೆನಪಾಗಿದ್ದಳು! ಅಕ್ಕ ಯಾರೊಡನೆಯೋ ಓಡಿಹೋಗಿದ್ದೋ ಅಥವಾ ಅವಳನ್ನು ಯಾರಾದರೂ ವಂಚನೆಯಿಂದ ಅಪಹರಿಸಿಕೊಂಡು ಹೋದರೋ, ಅಥವಾ ಎಲ್ಲೋ ಹೋಗಿ ಆತ್ಮಹತ್ಯೆ ಮಾಡಿಕೊಂಡಳೋ ಅನ್ನುವುದು ಕೊನೆವರೆಗೂ ಗೊತ್ತಾಗಿರಲಿಲ್ಲ. ನಾನು ಮಾತ್ರ; ಊರಲ್ಲಿ ಒಳ್ಳೆಯ ಜನರು ಓಡಾಡಬಾರದು ಎಂದು ನಿಗದಿಯಾಗಿದ್ದ ಬೀದಿಯಲ್ಲಿ ಅಪ್ಪಿ ತಪ್ಪಿ ನಡೆದು ಹೋಗುವ ಪ್ರಸಂಗ ಬಂದಾಗಲೆಲ್ಲ, ಅಲ್ಲಿಯ ಮನೆಯ ಕಿಟಕಿಯಲ್ಲಿ, ಬಾಗಿಲ ಸಂದಿಯಲ್ಲಿ ಅಕ್ಕನ ಮುಖ ಕಂಡೀತೋ ಎಂದು ಕದ್ದು ಮುಚ್ಚಿ ನೋಡುತ್ತಿದ್ದುದು ನೆನಪಿದೆ.

ಪದರ–3
ನಾನೀಗ ಬೆಂಗಳೂರಿನಲ್ಲಿದ್ದೇನೆ. ಸರಿಸುಮಾರು ಹದಿನೈದು ವರ್ಷಗಳ ನಂತರ ನೋಡುತ್ತಿರುವ ಬೆಂಗಳೂರು ಈಗ ಮೊದಲಿನಂತಿಲ್ಲ. ಈ ನಗರವೆಂದರೆ ಹಾಗೇನೇ. City life is millions of people being lonesome together ಎಂದು ಹೆನ್ರಿ ಡೇವಿಡ್ ಹೇಳಿದ್ದು ನೆನಪಿಗೆ ಬರುತ್ತಿದೆ. ಇಲ್ಲಿ ನಮ್ಮ ಪ್ರತಿ ಸಮಸ್ಯೆಗೂ ಪರಿಹಾರವಿದೆ. ಅದು ಹೊಸ ಹೊಸ ಪರಿಹಾರ ನೀಡುವ ನೆವದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಹೋಗುತ್ತದೆ. ಹಾಗೂ ಇಲ್ಲಿಯ ಜನರೆಲ್ಲ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತ, ಪರಿಹಾರಕ್ಕಾಗಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಾ ಜೀವನಪರ್ಯಂತ ಓಡುತ್ತಲೇ ಇರುತ್ತಾರೆ.

ಇದೊಂದು ಕೊನೆಯಿಲ್ಲದ ಹುಚ್ಚು ಓಟ. ಶಹರವೆಂದರೆ ಪ್ರತಿ ಕ್ಷಣದ ಧಾವಂತ. ಮೂಲಕ್ಕೆ ಹೋಗಿ ನೋಡಿದರೆ ಅಬುಧಾಭಿಗೂ ಇಲ್ಲಿಗೂ ಅಂಥ ವ್ಯತ್ಯಾಸವೇನಿಲ್ಲ. ಆ ದೇಶದವರು ತಾವು ಸುಖವಾಗಿ ಹವಾ ನಿಯಂತ್ರಿತ ಕೋಣೆಯ ಒಳಗೆ ಕುಳಿತು, ಬಡ ರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಬಿಸಿಲಿನ ಬೇಗುದಿಗೆ ತಳ್ಳುತ್ತಿದ್ದರು. ಇಲ್ಲಿ ನಮ್ಮದೇ ಭಾರತದಲ್ಲಿ ಏನಾಗುತ್ತಿದೆ? ನಾವೂ ಸಿಕ್ಕಸಿಕ್ಕಲ್ಲಿ ನಮ್ಮ ಸುತ್ತ ನಾಲ್ಕು ಗೋಡೆಗಳನ್ನು ಕಟ್ಟಿಕೊಂಡು, ಒಳಗಿನ ಬಿಸಿಯನ್ನು ಹೊರಹಾಕುತ್ತಿದ್ದೇವೆ. ಒಂದೇ ವ್ಯತ್ಯಾಸವೆಂದರೆ, ಅವರು ಹೊರಗಿನವರ ಮೇಲೆ ಬಿಸಿಯೆರಚುತ್ತಿದ್ದಾರೆ. ನಾವು ನಮ್ಮವರ ಮೇಲೇ ಎರಚುತ್ತಿದ್ದೇವೆ.

ದೇಶ, ಪ್ರಾಂತ್ಯ , ಚರ್ಮ, ಬಣ್ಣ, ಜಾತಿ, ಪಂಗಡ, ಭಾಷೆ– ಇವುಗಳಿಗೆಲ್ಲ ಮೀರಿದ ಭೂಮಿಯ ಮೇಲಿನ ಒಂದೇ ಒಂದು ವಿಂಗಡನೆಯೆಂದರೆ ಬಡವ ಮತ್ತು ಬಲ್ಲಿದ ಎಂಬುದು ಮಾತ್ರವೇ? ಹೌದೆನಿಸುತ್ತದೆ... ಇರಲಿ ಬಿಡಿ; ಇವೆಲ್ಲ ನನ್ನ ಇತ್ತೀಚಿನ ಆಲೋಚನೆಗಳು. ಇದರ ನಡುವೆ ನನ್ನ ಮೂರನೇ ಹಾಗೂ ಕೊನೆಯ ಪದರದ ಸಂಗತಿಯೊಂದನ್ನು ನಾನು ಹೇಳಲೇ ಇಲ್ಲ.
ಮೂರು ವರ್ಷಗಳ ನಿರಂತರ ಶ್ರಮದದಿಂದ ನಾನು, ಅತೀ ಕಡಿಮೆ ದರದಲ್ಲಿ ಮನೆ ಕಟ್ಟಲು ಸಹಾಯಕವಾಗಬಹುದಾದ product ಒಂದನ್ನು ಕಂಡುಹಿಡಿದಿದ್ದೇನೆ.

ಈ ಕಾಂಕ್ರೀಟ್ ಕಂಬಗಳು, ಇಟ್ಟಿಗೆಯ ಗೋಡೆಗಳ ಬದಲಾಗಿ ಈ ಪ್ರಾಡಕ್ಟಿನ ಉಪಯೋಗದಿಂದ; ಕಡಿಮೆಯೆಂದರೂ ಇಪ್ಪತ್ತು ಲಕ್ಷ ರೂಪಾಯಿಯಾಗುವ ಮನೆ ನಿರ್ಮಾಣ, ಐದಾರು ಲಕ್ಷ ವೆಚ್ಚದಲ್ಲಿ ಮುಗಿದುಬಿಡಬಹುದು! ಇದೊಂದು, ಇದುವರೆಗೂ ಯಾರೂ ಕಂಡುಹಿಡಿಯದ ಅಮೋಘ ಸಂಶೋಧನೆ. ಆದರೆ ಇದನ್ನು ಕಂಡುಹಿಡಿದದ್ದೇ ಒಂದು ಸಮಸ್ಯೆಯಾಗಿಬಿಟ್ಟಿದೆ. ನಾನು ಕೆಲಸ ಮಾಡುತ್ತಿರುವ ಕಂಪನಿ, ನನ್ನ ಈ ಉತ್ಪನ್ನಕ್ಕೆ ಪೇಟಂಟ್ ತೆಗೆದುಕೊಳ್ಳುವ ಹುನ್ನಾರದಲ್ಲಿದೆ. ಇದನ್ನು ನಾನು ಬಲವಾಗಿ ವಿರೋಧಿಸುತ್ತಿದ್ದೇನೆ.

ನನ್ನ ಪರಿಶ್ರಮ, ಬುದ್ಧಿವಂತಿಕೆಯಿಂದ ತಯಾರಾದ ವಸ್ತುವಿಗೆ ಕಂಪನಿಯೊಂದು ಪೇಟಂಟ್ ಪಡೆದು ಲಾಭವನ್ನೆಲ್ಲ ಹೊಡೆದುಕೊಳ್ಳುವುದೆಂದರೇನು? ಆದರೆ ಕಂಪನಿಯ ವಾದ ಬೇರೆಯೇ ಇದೆ– ನನ್ನ ಸಂಶೋಧನೆಗಾಗಿ ಅವರು ಲಕ್ಷಾಂತರ ಖರ್ಚು ಮಾಡಿದ್ದಾರೆ. ಹತ್ತಾರು ಬಾರಿ ವಿದೇಶಗಳಿಗೆ ಕಳಿಸಿದ್ದಾರೆ. ಸಂಶೋಧನೆಗೆ ಬೇಕಾದ ಅನುಕೂಲಗಳನ್ನೆಲ್ಲಾ ಅವರೇ ಪೂರೈಸಿದ್ದಾರೆ. ನಾನು ಬೇರೆಯದೇ ವರಸೆ ಹಿಡಿದಿದ್ದೇನೆ– ಇದನ್ನು ಕಂಡುಹಿಡಿದಿದ್ದೇ ಅದು ಜನಸಾಮಾನ್ಯರಿಗೆ ತಲುಪಲೆಂದು. ಅದನ್ನು ತನ್ನ ಸ್ವಂತ ಸೊತ್ತಾಗಿಸಿಕೊಂಡು ಬರೀ ಲಾಭವನ್ನೇ ನೋಡಿದರೆ ನನ್ನ ಪರಿಶ್ರಮವೆಲ್ಲ ವ್ಯರ್ಥ.

ಜಿದ್ದು ಬಿಡದ ನಾನು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಹೆಚ್ಚು ಕಡಿಮೆ ಎರಡು ವರ್ಷದಿಂದ ಕೇಸ್ ನಡೆಯುತ್ತಿದೆ. ಕಂಪನಿಯವರೂ, ನಾನೂ ಇಬ್ಬರೂ ಬೇಸತ್ತಿದ್ದೇವೆ. ಈ ನಡುವೆ ಮತ್ಯಾರೋ ಇಂತಹುದೇ ಇನ್ನೊಂದು ಪ್ರಾಡಕ್ಟ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟರೆ, ಈ ನಮ್ಮ ಜಗಳವೆಲ್ಲ ನೀರಲ್ಲಿ ಹೋಮ ಮಾಡಿದಂತೆಯೇ ಎಂಬುದು ಇಬ್ಬರಿಗೂ ತಿಳಿದಿದೆ. ಹಾಗಾಗಿ ಕಂಪನಿಯವರು ಸಂಧಾನಕ್ಕೆ ಬಂದಿದ್ದಾರೆ. ಆಗುವ ಲಾಭದಲ್ಲಿ ಅರ್ಧದಷ್ಟು ನನಗೆ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವಿಟ್ಟಿದ್ದಾರೆ. ನಾನೂ ದುರಾಸೆಯ ಮನುಷ್ಯನಲ್ಲ; ಎಲ್ಲ ಲಾಭ ನನಗೇ ಸಿಗಬೇಕೆಂಬ ಅತಿಯಾಸೆಯಿಲ್ಲ. ಒಪ್ಪಿಕೊಂಡಿದ್ದೇನೆ.

ಪದರಗಳೆಲ್ಲ ಹರಿದಮೇಲೆ...
ನಾನೀಗ ಬದುಕಿಲ್ಲ. ‘ನಾನು ಸತ್ತಿದ್ದೇನೆ’ ಎಂದು ಕೂಗಿ ಕೂಗಿ ಹೇಳಿದ್ದು ನಿಮಗೆ ಕೇಳಿಸಿತೇ? ಕೇಳಿಸಿರಲಿಕ್ಕಿಲ್ಲ. ಯಾಕೆಂದರೆ ಇಲ್ಲಿ ಸಾವೆಂಬುದು ಗಾಳಿಯಂತೆ, ಅದು ಎಲ್ಲೆಲ್ಲೂ ಇದೆ, ಆದರೆ ಯಾರಿಗೂ ಕಾಣುತ್ತಿಲ್ಲ. ಇಲ್ಲಿ ಪ್ರತಿ ದಿನ, ಪ್ರತಿ ಕ್ಷಣ, ಪ್ರತಿಯೊಬ್ಬರೂ ಸಾಯುತ್ತಲೇ ಇರುತ್ತಾರೆ; ಆದರೆ ಅದನ್ನು ಯಾರೂ ಗಮನಿಸುವುದಿಲ್ಲ. ಅದಕ್ಕೇ ನಾನು ಸತ್ತಿದ್ದೇನೆಂದು ಕೂಗಿ ಹೇಳುತ್ತಿರುವುದು. ನನ್ನ ದೇಹದಿಂದ ಆತ್ಮ ವಿಸರ್ಜಿತವಾಗಿದೆ. ಅಥವಾ ಆತ್ಮ ನನ್ನನ್ನು ವಿಸರ್ಜಿಸಿದೆ.

‘ವಿಸರ್ಜನೆ’ ಎನ್ನುವುದು, ಕಲ್ಮಶವನ್ನು, ಅಪ್ರಿಯವಾದುದನ್ನು ದೂರಮಾಡುವುದಕ್ಕೆ ಮಾತ್ರ ಬಳಸುವ ಪದವೇ? ಮೂತ್ರ ವಿಸರ್ಜನೆ, ಮಲ ವಿಸರ್ಜನೆ, ಕಸ ವಿಸರ್ಜನೆ... ಹಾಗಾದರೆ ಅಸ್ಥಿ ವಿಸರ್ಜನೆ, ಗಣೇಶ ವಿಸರ್ಜನೆ ಅಂತಲೂ ಹೇಳುತ್ತಾರಲ್ಲ? ಅವೂ ಕೂಡ ಸಂಭ್ರಮ ಮುಗಿದಮೇಲೆ ಬಳಸಲಾರದ ನಿರುಪಯೋಗಿ ವಸ್ತುಗಳೇ ಅಂತಲೇ? ನಾನು ಜಿಜ್ಞಾಸೆಗೆ ಒಳಗಾಗುತ್ತೇನೆ; ನನಗೆ ವ್ಯಾಕರಣ ಗೊತ್ತಿಲ್ಲ.
ನನ್ನಿಂದ ವಿಸರ್ಜಿತವಾದ ಆತ್ಮ (ಅಲ್ಲಲ್ಲ, ನನ್ನನ್ನು ವಿಸರ್ಜಿಸಿದ ಆತ್ಮ) ನನ್ನಲ್ಲಿಲ್ಲದಿದ್ದರೂ, ನನ್ನನ್ನು ಮಾತ್ರ ಬಿಟ್ಟಿಲ್ಲ. ಅದು ಅತ್ತಿತ್ತ ಸುಳಿದಾಡುತ್ತ ನನ್ನನ್ನು ಕಾಡುತ್ತದೆ.

ನಾನು, ಅತ್ಯಂತ ದಟ್ಟಣೆಯ ಶಬ್ದಾತಿರೇಕದ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡು ಏದುಸಿರು ಬಿಡುತ್ತಿರುವಾಗ ನನ್ನ ತಲೆಯ ಹಿಂದೆ ಬಂದು ನಿಂತು– ‘ನನಗೆ ಕಣ್ಣು ಮುಚ್ಚಿದರೆ, ಜುಳು ಜುಳು ಹರಿಯುವ ನೀರಿನ ಸಂಗೀತ ಕೇಳುತ್ತೆ; ನಿನಗೆ ಕೇಳುತ್ತಾ..?’ ಎಂದು ಹಂಗಿಸುತ್ತದೆ. ‘ಹುಡುಕಾಡಿ ಹೋಗಿ ಹಸಿರು ಮರದ ಕೊಂಬೆಗೆ ನೇತುಹಾಕಿಕೊಂಡಿದ್ದೆ, ಬೇಕಾದರೆ ನನ್ನನ್ನು ಪ್ರೇತಾತ್ಮವೆನ್ನು...’ ಎನ್ನುತ್ತಾ ಗಹಗಹಿಸಿ ನಗುತ್ತದೆ. ‘ಪ್ರೇತಾತ್ಮ’ವೆಂದೇಕೆ ಅನ್ನುತ್ತಾರೆ? ಆತ್ಮವೊಂದು ಪ್ರೇತವಾದರೆ ಅದನ್ನು ಹಾಗನ್ನುತ್ತಾರಾ? ಅಥವಾ ಮನುಷ್ಯನ ದೇಹಕ್ಕೆ ಆತ್ಮವಿದ್ದಂತೆ, ಪ್ರೇತಕ್ಕೂ ಆತ್ಮವಿರುತ್ತದಾ? ಆ ಪ್ರೇತವೂ ಕೊನೆಗೊಮ್ಮೆ ತನ್ನ ಆತ್ಮವನ್ನು ವಿಸರ್ಜಿಸುತ್ತಾ ಅಥವಾ ಆತ್ಮ ಪ್ರೇತವನ್ನು ವಿಸರ್ಜಿಸುತ್ತಾ? ನಾನು ಚಿಂತಿತನಾಗುತ್ತೇನೆ; ನನಗೆ ಧರ್ಮ ಸೂಕ್ಷ್ಮಗಳು ಗೊತ್ತಿಲ್ಲ.

ಅದೇನೇ ಇರಲಿ, (ಇಂಥ ಅಸಂಬದ್ಧಗಳನ್ನು ನೀವೂ ಒಪ್ಪುವುದಿಲ್ಲ ಎನ್ನುವುದು ನನಗೆ ಗೊತ್ತು) ಸದ್ಯಕ್ಕೆ; ಆತ್ಮ, ಚೇತನ, ಸತ್ವ ವಿಸರ್ಜಿತ ಈ ನನ್ನ ಹೆಣ– ಬೆಂಗಳೂರಿನಲ್ಲಿ ವಿಲೇವಾರಿಯಾಗದೇ, ವಿಲೇವಾರಿಯಾದರೂ ವಿಸರ್ಜಿತವಾಗದೇ, ವಿಸರ್ಜಿತವಾದರೂ ವಿವರ್ಜಿತವಾಗದೇ ಕಂಡಕಂಡಲ್ಲಿ ದಿಬ್ಬ–ದಿಣ್ಣೆಯಾಗಿ ಬಿದ್ದಿರುವ ಕಸದ ರಾಶಿಯ ನಡುವೆ ಕೊಳೆತು ನಾರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.