ಅಲ್ಲೊಂದು ದೊಡ್ಡ ನದಿ. ಅದರ ಬದಿಯೇ ಪುಟ್ಟ ತೊರೆ. ಆ ತೊರೆಗೋ ಇನಿತೂ ನದಿಯ ಹಂಗಿಲ್ಲ. ಅದು ನಂಬಿರುವುದು ಸಣ್ಣ ಸಣ್ಣ ಹನಿಗಳನ್ನು. ಮುಂದೆ ತೊರೆ ಆ ನದಿಯನ್ನೇ ಕೊಚ್ಚಿಹಾಕಬಹುದು ಅಥವಾ ತಾನೇ ಇನ್ನೊಂದು ಮಹಾನದಿಯಾಗಬಹುದು. ಕನ್ನಡದಲ್ಲಿ ತಯಾರಾಗುತ್ತಿರುವ ಕಿರುಚಿತ್ರಗಳನ್ನು ಸದ್ಯಕ್ಕೆ ಬಿಡುಬೀಸಾಗಿ ಹರಿಯುತ್ತಿರುವ ಪುಟ್ಟ ತೊರೆಗೆ ಹೋಲಿಸಬಹುದೇನೊ? ಒಂದು ಕಾಲಕ್ಕೆ ಕಾಲೇಜುಗಳ ಒಣಚರ್ಚೆಯಲ್ಲಿ ಕಳೆದುಹೋಗುತ್ತಿದ್ದ, ಕಂಪ್ಯೂಟರ್ನಲ್ಲಿ ಸುಮ್ಮನೆ ಕೂತುಬಿಡುತ್ತಿದ್ದ ಕಿರುಚಿತ್ರಗಳಿಗೆ ಈಗ ಸುಗ್ಗಿಕಾಲ. ಸಿನಿಮಾವೊಂದು ಎರಡು ಗಂಟೆಗಳ ಕಾಲ ಹೇಳುವುದನ್ನು ಅಷ್ಟೇ ಮನೋಜ್ಞವಾಗಿ ಕೇವಲ ಹತ್ತು ಇಪ್ಪತ್ತು ನಿಮಿಷಗಳಲ್ಲಿ ಹೇಳಿಬಿಡುವುದು ಕಿರುಚಿತ್ರಗಳ ವೈಶಿಷ್ಟ್ಯ. ಹಾಗಾಗಿಯೇ ಇವುಗಳಿಗೆ ‘ಪಾಕೆಟ್ ಸಿನಿಮಾ’ ಎಂಬ ಮತ್ತೊಂದು ಹೆಸರಿದೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಗಮನಾರ್ಹ ಸಂಖ್ಯೆಯ ಕಿರುಚಿತ್ರಗಳು ಕನ್ನಡದಲ್ಲಿ ತಯಾರಾಗಿವೆ. ಇಂಥ ಚಿತ್ರಗಳನ್ನು ನೋಡಲೆಂದೇ ಹೊಸ ಪ್ರೇಕ್ಷಕವರ್ಗ ಸೃಷ್ಟಿಯಾಗಿದೆ. ಟೀವಿ ನಿಪುಣರು ಕಿರುಚಿತ್ರಗಳ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ‘ಇನ್ ಬೆಂಗಳೂರು’ ವಾಹಿನಿ ಒಂದು ಹೆಜ್ಜೆ ಮುಂದೆಹೋಗಿ ಟಿವಿಯಲ್ಲಿ ಕಿರುಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸಿದೆ. ‘ಶಾರ್ಟ್ ಅಂಡ್ ಸ್ವೀಟ್’ನಂಥ ವಿವಿಧ ಗುಂಪುಗಳು ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿ ಚರ್ಚೆಗೆ ಆಹ್ವಾನಿಸುತ್ತಿವೆ. ಕಿರುಚಿತ್ರಗಳ ಪ್ರಸಾರಕ್ಕೆಂದೇ ‘ಮೀಡಿಯಾ ಮಸ್ತಿ’ಯಂಥ ಚಾನೆಲ್ಗಳನ್ನು ಯೂಟ್ಯೂಬ್ನಲ್ಲಿ ಆರಂಭಿಸಲು ಸಾಧ್ಯವಾಗಿದೆ.

‘ಕ್ಯಾಮೆರಾ ಜನರ ಕೈಗೆ ಬಂದದ್ದೇ ತಡ ಎಲ್ಲರಿಗೂ ತಮ್ಮನ್ನು ಪ್ರದರ್ಶಿಸಿಕೊಳ್ಳುವ ಹುಚ್ಚು ಹೆಚ್ಚಾಯಿತು. ಉತ್ತಮ ಕಥೆಯೊಂದಿಗೆ ಹೆಚ್ಚು ಸೃಜನಶೀಲವಾಗಿ ನಿರೂಪಿಸಿದ್ದು ಕಿರುಚಿತ್ರವಾಯಿತು. ನಮ್ಮಂಥ ಯುವಕರು ಸಿನಿಮಾ ಎಂಬ ಮೌಂಟ್ ಎವರೆಸ್ಟ್ ಏರುವುದು ಕಷ್ಟ ಎಂದು ಭಾವಿಸಿ ಕಿರುಚಿತ್ರ ಎಂಬ ನಂದಿಬೆಟ್ಟ ಹತ್ತಿದ್ದೆವು’ ಎನ್ನುತ್ತಾರೆ ನಿರ್ದೇಶಕ ಪವನ್ ಕುಮಾರ್. ಕೆಲಸದ ಒತ್ತಡದಿಂದ ದೂರವಾಗಲು, ತಮ್ಮ ಕ್ರಿಯಾಶೀಲತೆಯನ್ನು ಹೊರಹಾಕಲು ಕೂಡ ಕಿರುಚಿತ್ರ ಸಹಾಯಕ. ರೈಲ್ವೆ ಇಲಾಖೆಯ ನೌಕರರೇ ಒಗ್ಗೂಡಿ ‘ಯುವ ಆರ್್ಎಂಎಸ್’ ಎಂಬ ಸಂಘಟನೆ ಕಟ್ಟಿದ್ದಾರೆ. ಬಿಡುವಿನ ವೇಳೆ ಕಿರುಚಿತ್ರ ನಿರ್ಮಿಸುವುದು ಇವರ ಹವ್ಯಾಸ. ಕೆಲಸದ ಒತ್ತಡವನ್ನು ನಿವಾರಿಸುವ, ತಮ್ಮೊಳಗಿನ ಸೃಜನಶೀಲತೆಯನ್ನು ಒರೆಗೆ ಹಚ್ಚುವ ಸಾಧನ ಇದು ಎಂದು ಅವರು ನಂಬಿದ್ದಾರೆ.

ಕಿರುಚಿತ್ರ ಎಷ್ಟು ಸಮಾಜಮುಖಿ ಎನ್ನುವುದಕ್ಕೆ ಒಂದೆರಡು ಉದಾಹರಣೆಗಳು ಇಲ್ಲಿವೆ. ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ಲಂಚ, ಆಮಿಷಗಳ ವಿರುದ್ಧ ಜಾಗೃತಿ ಮೂಡಿಸುವ ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ‘ಸ್ಟೀಲ್ ಫ್ಲೈಓವರ್ ಬೇಡ’ ಎಂಬ ಪರಿಸರವಾದಿ ಹೋರಾಟ ಪ್ರಚುರ ಪಡಿಸಲು ಕೂಡ ಕಿರುಚಿತ್ರಗಳ ಆಸರೆ ಬೇಕು. ಚಿತ್ರರಂಗ ಎಂಬ ದೊಡ್ಡ ಕೆರೆಯಲ್ಲಿ ಈಜುವ ಮೊದಲು ಸಣ್ಣ ಕೆರೆ ಹುಡುಕುತ್ತಿರುವವರಿಗೆ, ಕಡಿಮೆ ನೀರು ಹಾಯಿಸಿ ಭಾರಿ ಬೆಳೆ ತೆಗೆಯುವವರಿಗೆ, ನೇಗಿಲು ಇದ್ದೂ ಉಳಲು ಗೊತ್ತಿಲ್ಲದವರಿಗೆ, ನೇಗಿಲು ಕೂಡ ಇಲ್ಲದವರಿಗೆ, ಬೆಳೆದ ಬೆಳೆಯನ್ನು ತಾವೇ ಮಾರುವ ಉತ್ಸಾಹಿಗಳಿಗೆ, ಕಿರುಚಿತ್ರ ಎಂಬುದು ಚಂದದ ಕೃಷಿ.

ಅಲ್ಲದೆ ಇದು ಹೊಸಬರು ಆಡುವ ಅಂಗಳ. ಕಂಡೂ ಕಾಣದಂತಿರುವ ಪ್ರತಿಭೆಗಳ ಕಣಜ. ನಟ ಧನಂಜಯ್ ಇದಕ್ಕೆ ಉತ್ತಮ ಉದಾಹರಣೆ. ನಾಗಾಭರಣರಂಥ ಹಿರಿಯ ನಿರ್ದೇಶಕರ ದೃಷ್ಟಿ ಅವರತ್ತ ಹರಿಯಲು ಸಹಾಯಕವಾಗಿದ್ದು ‘ಜಯನಗರ ಫೋರ್ತ್ ಬ್ಲಾಕ್’ ಎಂಬ 27 ನಿಮಿಷಗಳ ಕಿರುಚಿತ್ರ.

ಯೂಟ್ಯೂಬ್ನಲ್ಲಿ ಅದು ವೈರಲ್ ಆಗಿ ದಶದಿಕ್ಕುಗಳಿಗೂ ಹಬ್ಬಿದ್ದು ಈಗ ಇತಿಹಾಸ. ಸಿಂಗಪುರ, ಅಮೆರಿಕದಲ್ಲಿದ್ದ ಭಾಷೆಯೇ ಗೊತ್ತಿಲ್ಲದ ಜನ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದುಂಟು. ನಾಲ್ಕು ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಕಂಡ ಈ ಚಿತ್ರವನ್ನು ಈಗಲೂ ಜನ ನೋಡುತ್ತಿದ್ದಾರೆ. ನಿರ್ದೇಶಕ ದುನಿಯಾ ಸೂರಿ ಈ ಹಿಂದೆ ಒಂದು ಪ್ರಯೋಗ ಮಾಡಿದ್ದರು. ತಮ್ಮ ಹೊಸಚಿತ್ರಕ್ಕೆ ಬರುವವರು ಮೊದಲು ಕಿರುಚಿತ್ರ ತಯಾರಿಸಿ ತನ್ನಿ ಎಂಬರ್ಥದ ಜಾಹೀರಾತು ನೀಡಿದ್ದರು. ಈ ಯತ್ನ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.

ಐದು ಸಾವಿರದಿಂದ ಐದು ಲಕ್ಷ ರೂಪಾಯಿಯವರೆಗೆ ಬಂಡವಾಳ ಹೂಡಿ ಕಿರುಚಿತ್ರ ತಯಾರಿಸಿದವರು ಇದ್ದಾರೆ. ಗಿರಿರಾಜ್ ನಿರ್ದೇಶನದ ‘ನವಿಲಾದವರು’ ಚಿತ್ರಕ್ಕೆ ಖರ್ಚಾದದ್ದು ಕೇವಲ 35 ಸಾವಿರ ರೂಪಾಯಿ. ಕೋಟಿಗಟ್ಟಲೆ ಬಂಡವಾಳ ಹೂಡಿ ನಷ್ಟ ಅನುಭವಿಸುವುದಕ್ಕಿಂತ ಕಡಿಮೆ ಹಣದಲ್ಲಿ ಸಿನಿಮಾ ಮಾಡಿದ ತೃಪ್ತಿ ಕಿರುಚಿತ್ರಗಳಿಂದ ದೊರೆಯುತ್ತದೆ ಎಂಬುದು ಅನೇಕ ಯುವ ನಿರ್ದೇಶಕರ ಅಭಿಪ್ರಾಯ.

‘ದಿ ಲಾಸ್ಟ್ ಕನ್ನಡಿಗ’ದಂಥ ಪ್ರಯೋಗಾತ್ಮಕ ಕಿರುಚಿತ್ರಗಳನ್ನು ನಿರ್ಮಿಸಿರುವ ನಟಿ ಶ್ರುತಿ ಹರಿಹರನ್ ಕಿರುಚಿತ್ರಗಳ ಹೊಸ ಸಾಧ್ಯತೆಯನ್ನು ಬಿಚ್ಚಿಡುತ್ತಾರೆ. ಅವರ ಪ್ರಕಾರ ‘ಜಾಗತಿಕ ಸಿನಿಮಾ ಮಾರುಕಟ್ಟೆ ಕಿರುಚಿತ್ರಗಳತ್ತ ಹೆಚ್ಚು ಒಲವು ತೋರುತ್ತಿದೆ. ಕನ್ನಡದಲ್ಲಿಯೂ ಈ ಗಾಳಿ ಬೀಸುವ ಕಾಲ ದೂರವಿಲ್ಲ. ಸಂಚಾರ ದಟ್ಟಣೆ, ಕೆಲಸದ ಒತ್ತಡದಲ್ಲಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲಾರ. ಬದಲಿಗೆ ಆತನ ಕೈಯಲ್ಲಿ ಈಗ ಅಂತರ್ಜಾಲವಿದೆ. ಅಲ್ಲಿ ಕಿರುಚಿತ್ರಗಳ ಭಾರೀ ಫಸಲು ಕಾಣುತ್ತಿದೆ’ ಎನ್ನುತ್ತಾರೆ ಅವರು.

‘ಮೊದಲೆಲ್ಲಾ ಸರ್ಕಾರದ ಪ್ರೋತ್ಸಾಹಕ್ಕೆ ಚಿತ್ರರಂಗ ಕಾಯಬೇಕಿತ್ತು. ಬಂಡವಾಳ ತೊಡಗಿಸುವವರು ಹಲವು ನೆಪ ಹೇಳುತ್ತಿದ್ದರು. ಈಗ ಸಿನಿಮಾ ನಿರ್ಮಾಣದ ಸಾಧನಗಳು ಸುಲಭವಾಗಿ ಸಿಗುತ್ತಿವೆ. ಹಾಗಾಗಿ ಕಿರುಚಿತ್ರಗಳಲ್ಲಿ ಪ್ರಯೋಗ ಸಾಧ್ಯವಾಗಿದೆ. ಆದರೆ ಇದು ಅಕಡೆಮಿಕ್ ಆಗಿ ಹೆಚ್ಚು ಬೆಳೆಯಬೇಕು. ಕೇವಲ ಉದ್ಯಮವಾಗಬಾರದು’ ಎನ್ನುವುದು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣರ ವಾದ.

5ನೇ ಪುಟ ನೋಡಿ...

ಕೆಲವರ್ಷಗಳ ಹಿಂದೆ ನಟನೆ ಅರಸಿ ಬರುವವರು ಫೋಟೊಶೂಟ್, ಆಡಿಷನ್ ಎಂದೆಲ್ಲಾ ಪರಿತಪಿಸಬೇಕಿತ್ತು. ಈಗ ಕಾಲ ಬದಲಾಗಿದೆ. ನಿರ್ದೇಶಕರು ಪ್ರತಿಭೆಗಳನ್ನು ಗುರುತಿಸುವುದೇ ಕಿರುಚಿತ್ರಗಳ ಮೂಲಕ. ಹಾಗಾಗಿ ಕಿರುಚಿತ್ರ ಎಂಬುದು ನಟರ ಪೋರ್ಟ್ ಫೋಲಿಯೊ ಕೂಡ. ಈ ಕುರಿತು ಮಾತನಾಡಿದ ಧನಂಜಯ್ – ‘ನಟನೆ ಕಲಿಯುವವರು ಮೊದಲೆಲ್ಲಾ ಕನ್ನಡಿ ಮುಂದೆ ಅಭಿನಯಿಸುತ್ತಿದ್ದರು. ಈಗ ಕಿರುಚಿತ್ರವನ್ನು ಕನ್ನಡಿಯಂತೆ ಬಳಸಬಹುದು. ಚೆನ್ನಾಗಿ ಚಿತ್ರ ಮೂಡಿಬರದಿದ್ದರೆ ಮತ್ತೊಮ್ಮೆ ಚಿತ್ರಿಸಬಹುದು’ ಎನ್ನುತ್ತಾರೆ.

ಮೋಡ ಕಟ್ಟಿದ್ದು ಹೀಗೆ…

ಕನ್ನಡದಲ್ಲಿ ಕಿರುಚಿತ್ರಗಳ ಪ್ರವಾಹ ಸೃಷ್ಟಿಯ ಹಿಂದಿದ್ದ ಭೂಮಿಕೆಯನ್ನು ನಿರ್ದೇಶಕ ಬಿ. ಸುರೇಶ ಹೀಗೆ ಗುರುತಿಸುತ್ತಾರೆ: ಅವುಗಳಲ್ಲಿ ಮೊದಲನೆಯದು ಹೆಚ್ಚಾದ ಕಿರುಚಿತ್ರೋತ್ಸವಗಳ ಸಂಖ್ಯೆ. ಬೆಂಗಳೂರು ನಗರದಲ್ಲಿ ಪ್ರತಿವರ್ಷ 8–9 ಕಿರುಚಿತ್ರೋತ್ಸವಗಳು ನಡೆಯುತ್ತಿವೆ. ಮೈಸೂರು, ಮಂಗಳೂರು, ಶಿವಮೊಗ್ಗ, ಮಣಿಪಾಲದಂಥ ಊರುಗಳಲ್ಲೂ ಕಿರುಚಿತ್ರೋತ್ಸವಗಳನ್ನು ಸಂಘಟಿಸಲಾಗುತ್ತಿದೆ. ಇಲ್ಲಿ ಪ್ರದರ್ಶನ ಮಾತ್ರವಲ್ಲದೇ ಬಹುಮಾನವನ್ನು ಕೊಡುವ ಪರಿಪಾಠವೂ ಇದೆ. ಬೆನ್ನುತಟ್ಟುವ ಇಂಥ ಸಣ್ಣ ಚಟುವಟಿಕೆಗಳು ಕಿರುಚಿತ್ರ ಚಳವಳಿಯನ್ನೇ ಹುಟ್ಟುಹಾಕುವ ಎಲ್ಲ ಲಕ್ಷಣಗಳಿವೆ.

‘ಬೆಂಗಳೂರು ಅಂತರರಾಷ್ಟ್ರೀಯ ಕಿರುಚಲನಚಿತ್ರೋತ್ಸವ’ದ (ಬಿಐಎಸ್ಎಫ್ಎಫ್) ಸಂಘಟಕರಲ್ಲಿ ಆನಂದ್ ವರದರಾಜ್ ಪ್ರಮುಖರು. ಅವರಿಗೆ ನಿರ್ಮಾಪಕರು ಹೊಸ ನಿರ್ದೇಶಕರನ್ನು ಹುಡುಕುವ ವೇದಿಕೆಯಾಗಿ ಕಿರುಚಿತ್ರೋತ್ಸವಗಳು ಕಂಡಿವೆ. ತಮಿಳಿನ ‘ಪಿಜ್ಜಾ’, ‘ಜಿಗರ್ಥಂಡಾ’ ರೀತಿಯ ಹಿಟ್ ಸಿನಿಮಾಗಳನ್ನು ನೀಡಿದವರು ಕಾರ್ತಿಕ್ ಸುಬ್ಬರಾಜ್. ಮೊದಲು ಬೆಂಗಳೂರಿನ ‘ಸುಚಿತ್ರ ಫಿಲ್ಮ್ ಸೊಸೈಟಿ’ ಸಂಘಟಿಸುವ ಕಿರುಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತಿದ್ದ ಕಾರ್ತಿಕ್, ಬಳಿಕ ತಮಿಳು ಚಿತ್ರರಂಗದ ಗಮನ ಸೆಳೆದರು ಎಂಬುದು ಉಲ್ಲೇಖನೀಯ ವಿಚಾರ.

ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಸೃಷ್ಟಿಸಿದ ಉದ್ಯೋಗಾವಕಾಶ ಕಿರುಚಿತ್ರಗಳ ವೈಭವಕ್ಕೆ ಕಾರಣವಾಯಿತು. ಸುಮಾರು 15 ವೃತ್ತಿಪರ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಇ–ಮಾಧ್ಯಮ ವಿಷಯಕ್ಕೆ ಒತ್ತು ನೀಡಿವೆ. ಪ್ರತಿವರ್ಷ ತಲಾ ಒಂದು ಕಾಲೇಜಿನಿಂದ ಸರಾಸರಿ ಇಪ್ಪತ್ತು ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಕಾಲೇಜುಗಳಲ್ಲಿ ಕಿರುಚಿತ್ರಗಳ ನಿರ್ಮಾಣಕ್ಕೆ ಹಿಂದೆಂದಿಗಿಂತ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತರಕಾಲೇಜು ಸ್ಪರ್ಧೆಗಳೂ ಗರಿಬಿಚ್ಚಿವೆ.

ಐಟಿ–ಬಿಟಿ ಉದ್ಯೋಗಿಗಳ ವಾರಾಂತ್ಯದ ಉತ್ಸಾಹ ಕಿರುಚಿತ್ರಗಳ ಬೆಳವಣಿಗೆಗೆ ಇಂಬು ನೀಡಿದೆ. ಇವರಲ್ಲಿ ಅನೇಕರು ಹೊಸಬಗೆಯ ತುಡಿತ ಹೊಂದಿದವರು, ಸ್ವತಃ ಪ್ರೇಕ್ಷಕರಾಗಿದ್ದವರು. ತಾವು ಈವರೆಗೆ ನೋಡಿದ ಸಿನಿಮಾಗಳಿಗಿಂತ ಒಳ್ಳೆಯದನ್ನು ಸೃಷ್ಟಿಸುವ ಕನಸಿನೊಂದಿಗೆ ಅಖಾಡಕ್ಕಿಳಿದವರು. ಪ್ರತಿವಾರ ಸಣ್ಣ ಸಭಾಂಗಣಗಳಲ್ಲಿ ತಮ್ಮ ಚಿತ್ರಗಳನ್ನು ಇವರು ಪ್ರೇಕ್ಷಕರಿಗೆ ಉಣಬಡಿಸುತ್ತಾರೆ. ಇವರಲ್ಲೇ ಮತ್ತೊಂದು ಬಣವಿದೆ. ಅದು ಸಿನಿಮಾ ಕುರಿತು ಚರ್ಚಿಸುವ ಗುಂಪು. ಉದಾಹರಣೆಗೆ ‘ಸಾಂಗತ್ಯ’, ‘ಸಂವಾದ ಡಾಟ್ ಕಾಂ’ನಂಥ ಬ್ಲಾಗು–ಜಾಲತಾಣಗಳಲ್ಲಿ ಸಿನಿಮಾವನ್ನು ಧ್ಯಾನಿಸಿದ್ದು ಕಿರುಚಿತ್ರಗಳ ವಿಫುಲ ಬೆಳೆಗೆ ನೀರೆರೆಯಿತು.

ಅಗಾಧ ಪ್ರಮಾಣದಲ್ಲಿ ಅಕ್ಷರಸ್ಥರು ಸಿನಿಮಾರಂಗಕ್ಕೆ ಇಳಿದದ್ದು ಹೊಸ ಹೊಸ ಪ್ರಯೋಗಗಳನ್ನು ನಡೆಸಲು ಸಾಧ್ಯವಾಯಿತು. ರಾಜ್ಕುಮಾರ್, ಸಿದ್ದಲಿಂಗಯ್ಯ ಯುಗಕ್ಕೆ ಹೋಲಿಸಿದರೆ ಇಂಗ್ಲಿಷ್ ಗೊತ್ತಿಲ್ಲ, ಸಿನಿಮಾ ಭಾಷೆಯ ಅರಿವಿಲ್ಲ ಎಂಬ ಕೀಳರಿಮೆ ಈ ವರ್ಗಕ್ಕೆ ಇರಲಿಲ್ಲ. ತಾಂತ್ರಿಕವಾಗಿ ಹೆಚ್ಚು ಶಕ್ತಿ ಹೊಂದಿದ್ದ ಇವರಿಗೆ ಬೆರಳ ತುದಿಯಲ್ಲೇ ವಿಶ್ವದ ಪ್ರೇಕ್ಷಕರನ್ನು ತಲುಪುವ ಜಾಣ್ಮೆ ತಿಳಿದಿತ್ತು.

ಕಿರುಚಿತ್ರಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನೆಲ್ಲಾ ಸರ್ಕಾರಗಳು ಗಮನಿಸಿದವು. ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಂಥ ಸಂಸ್ಥೆಗಳಿಂದ ಹೊರಬಂದವರಲ್ಲದೆ, ಸಾಮಾನ್ಯರ ಕಿರುಚಿತ್ರಗಳಿಗೂ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗುವಂತಾಯಿತು. ರಾಜ್ಯ ಸರ್ಕಾರ ಕೂಡ ಪ್ರತಿವರ್ಷ ಕಿರುಚಿತ್ರಗಳಿಗೆ ಪ್ರಶಸ್ತಿ ನೀಡಲು ಮುಂದಾಗಿದೆ.

ನವ ಗಾಂಧಿನಗರ!

ಕಿರುಚಿತ್ರಗಳ ಸಂಖ್ಯೆ ಹೆಚ್ಚಲು ವಿಶ್ವಮಟ್ಟದಲ್ಲಾದ ಡಿಜಿಟಲ್ ಕ್ರಾಂತಿಯ ಕೊಡುಗೆ ಅಪಾರ. ಫೇಸ್ಬುಕ್, ಯೂಟ್ಯೂಬ್, ವಿಮಿಯೊನಂಥ ಸಾಮಾಜಿಕ ಜಾಲತಾಣಗಳಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸುವುದು ಸಾಧ್ಯವಾಯಿತು. ಅನೇಕರು ಸ್ಮಾರ್ಟ್ ಫೋನ್ ಮೂಲಕ ಚಿತ್ರ ತಯಾರಿಸಿದರು. ಪ್ರತಿನಿಮಿಷಕ್ಕೆ ಸರಾಸರಿ 60 ಗಂಟೆಗಳ ವಿಡಿಯೊವನ್ನು ವಿಶ್ವದೆಲ್ಲೆಡೆಯಿಂದ ಅಪ್ಲೋಡ್ ಮಾಡಲಾಗುತ್ತಿದೆ ಹಾಗೂ 400 ಕೋಟಿ ವಿಡಿಯೊವನ್ನು ದಿನವೊಂದಕ್ಕೆ ನೋಡಲಾಗುತ್ತಿದೆ ಎಂಬ ಅಂಶವೇ ಜಾಲತಾಣಗಳ ಅಮಿತ ಶಕ್ತಿಯನ್ನು ಹೇಳುತ್ತದೆ. ಕೇವಲ ಒಂದು ಲಿಂಕ್ ಕಳುಹಿಸಿ ವಿಶ್ವದ ಮೂಲೆಮೂಲೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡುವ ಅವಕಾಶವಿದೆ.

ನಿರ್ಮಾಣ, ನಿರ್ದೇಶನ ಸೇರಿ ಬಿ. ಸುರೇಶ ಅವರ ಈವರೆಗಿನ ಒಟ್ಟು ಚಿತ್ರಗಳ ಸಂಖ್ಯೆ ಒಂಬತ್ತು. ಅವುಗಳಲ್ಲಿ ಆರು ಚಿತ್ರಗಳು ಪ್ರೇಕ್ಷಕರನ್ನು ತಲುಪಿದ್ದು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ! ಕೆಲವು ವರ್ಷಗಳ ಹಿಂದೆ ನಟ ಕಮಲಹಾಸನ್ ‘ಡೈರೆಕ್ಟ್ ಟು ಹೋಂ’ ವ್ಯವಸ್ಥೆ ಮೂಲಕ ‘ವಿಶ್ವರೂಪಂ’ ಬಿಡುಗಡೆಗೆ ಯತ್ನಿಸಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಕಾಲ ಎಷ್ಟು ಬೇಗ ಬದಲಾಗುತ್ತದೆ ನೋಡಿ: ವಿಡಿಯೊದಿಂದ ಹಣ ಗಳಿಸುವ ಅವಕಾಶ ಯೂಟ್ಯೂಬ್ ಮೂಲಕ ಈಗ ಸಾಧ್ಯವಾಗಿದೆ. ಫೇಸ್ಬುಕ್ ಕೂಡ ಇದೇ ತಂತ್ರ ಅನುಸರಿಸುತ್ತಿದೆ. ಥಟ್ ಅಂತ ಚಿತ್ರಿಸಿ ಹಣ ಪಡೆವ ವಿಧಾನ ಕಿರುಚಿತ್ರಗಳಿಗೆ ಹೊಸಬಗೆಯ ಆರ್ಥಿಕ ಮೂಲ.

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಟ್ರೇಲರ್ಗಳನ್ನು ಅಪ್ಲೋಡ್ ಮಾಡುವ ಪರಿಪಾಠ ಹೆಚ್ಚಿದೆ. ಇವುಗಳಿಗೂ ದೊಡ್ಡ ವೀಕ್ಷಕವರ್ಗವಿದೆ. ಒಂದೆರಡು ನಿಮಿಷಗಳಲ್ಲಿ ಇಡೀ ಸಿನಿಮಾವನ್ನು ಆಕರ್ಷಕವಾಗಿ ನಿರೂಪಿಸಬೇಕಾದುದು ಟ್ರೇಲರ್ಗಿರುವ ಮಿತಿ ಹಾಗೂ ಶಕ್ತಿ. ಹೀಗೆ ಟ್ರೇಲರ್ಗಳನ್ನು ರೂಪಿಸುವವರು ಹಾಗೂ ಅವುಗಳನ್ನೇ ಹೆಚ್ಚಾಗಿ ನೋಡುವ ವೀಕ್ಷಕರು, ಕೆಲ ನಿಮಿಷಗಳಲ್ಲೇ ಹೇಳಬಹುದಾದ ಕಿರುಚಿತ್ರಗಳ ನಿರ್ಮಾಣಕ್ಕೆ ಮುಂದಾದರು. ದೃಶ್ಯಮಾಧ್ಯಮದಲ್ಲಾಗುತ್ತಿರುವ ಇಂಥ ಪಲ್ಲಟವನ್ನು ಗಮನಿಸಿದರೆ ಗಾಂಧಿನಗರ ಎಂಬ ಪರಿಕಲ್ಪನೆಯೇ ಕೆಲವು ವರ್ಷಗಳಲ್ಲಿ ಬುಡಮೇಲಾಗುವ ಸಾಧ್ಯತೆಗಳಿವೆ ಎಂಬ ಅನಿಸಿಕೆ ಹಲವರದು.

ಎರಡು ಮದುವೆಯ ಘಟನೆ ಹೇಳುವ ‘ಸುಳ್ಳೇ ಸತ್ಯ’, ವಿಚಿತ್ರ ತಿರುವುಗಳ ‘ಚೌಕಬಾರ’, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗಮನ ಸೆಳೆದ ‘ನೂರು ರುಪಾಯಿ’, ಪಿಜ್ಜಾ ಡೆಲಿವರಿ ಹುಡುಗನ ದಿನಚರಿ ಬಿಚ್ಚಿಡುವ ‘ಫಟಿಂಗ’, ಯಮಕಿಂಕರರ ಆಗಮನವಾಗುವ ‘ಯಾರಿವರು?’, ಹೆಣ್ಣಿನ ನೋವುಗಳ ‘ನೀಚ’, ಬೊಂಬೆ ಮಾಡುವ ಬಾಲಕನ ‘ಪ್ರೆಸೆಂಟ್ ಸರ್’ ಮುಂತಾದವು ಕನ್ನಡ ಕಿರುಚಿತ್ರಗಳ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿವೆ. ಆದರೆ, ಕಿರುಚಿತ್ರಗಳ ಬೆಳವಣಿಗೆಯನ್ನು ಗಮನಿಸುತ್ತಿರುವ ಬಹುತೇಕರು ಕನ್ನಡ ಕಿರುಚಿತ್ರಗಳ ಹೂರಣದ ಕುರಿತು ಉತ್ಸಾಹದಿಂದ ಪ್ರತಿಕ್ರಿಯಿಸುವುದಿಲ್ಲ.

ಹಿಂದಿ, ಇಂಗ್ಲಿಷ್ ಚಿತ್ರಗಳಲ್ಲಿ ಕಾಣಿಸುವಂಥ ಕಥೆ ಇಲ್ಲಿಲ್ಲ. ತಮಿಳು, ಮಲಯಾಳಂನಲ್ಲಿ ಕಿರುಚಿತ್ರಗಳೇ ಹಿರಿತೆರೆಗೆ ಸ್ಫೂರ್ತಿಯಾಗಿವೆ. ಕನ್ನಡದಲ್ಲಿ ಬೆರಳೆಣಿಕೆಯ ಉತ್ತಮ ಚಿತ್ರಗಳನ್ನು ಬಿಟ್ಟರೆ ಜೊಳ್ಳೇ ಹೆಚ್ಚು ಎಂಬ ಅಭಿಪ್ರಾಯವಿದೆ. ಗಟ್ಟಿಕತೆಗಳನ್ನು ಹೇಳಲು ಕನ್ನಡ ಕಿರುಚಿತ್ರಗಳಿಗೆ ಸಾಧ್ಯ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

‘ಕೆಲವರಂತೂ ಹಿರಿತೆರೆಯನ್ನೇ ನಕಲು ಮಾಡುವ ಭರದಲ್ಲಿ ಹಾಡು–ನೃತ್ಯಗಳನ್ನು ಸೇರಿಸುತ್ತಾರೆ. ದ್ವಂದ್ವಾರ್ಥದ ಡೈಲಾಗ್ಗಳು ಇಲ್ಲಿಯೂ ತುಂಬಿವೆ. ಆದರೆ ಸಿನಿಮಾದ ಭಾಷೆಯೇ ಬೇರೆ, ಕಿರುಚಿತ್ರದ ಭಾಷೆಯೇ ಬೇರೆ. ಇಲ್ಲಿ ಚುಟುಕಾಗಿ ಮನಮಿಡಿಯುವಂತೆ ಹೇಳಬೇಕು’ ಎನ್ನುತ್ತಾರೆ ‘ಜಯನಗರ ಫೋರ್ತ್ ಬ್ಲಾಕ್’ ಕಿರುಚಿತ್ರದ ಮೂಲಕ ಬೆಳಕಿಗೆ ಬಂದ ನಿರ್ದೇಶಕ ಡಿ. ಸತ್ಯಪ್ರಕಾಶ್.

ಚಿತ್ರ ವಿಶ್ಲೇಷಕ ಕೆ.ಎಲ್. ಚಂದ್ರಶೇಖರ ಐಜೂರ್ ಅವರಿಗೆ ಕಿರುಚಿತ್ರಗಳಲ್ಲಿ ಮೂಡಿಬರುತ್ತಿರುವ ಕಥೆಯ ಕುರಿತು ಸಾಕಷ್ಟು ಆಕ್ಷೇಪಗಳಿವೆ. ‘ತಂತ್ರಜ್ಞಾನದ ಜೊತೆ ಜೊತೆಗೆ ಗಟ್ಟಿ ಕಥೆಯನ್ನು ಹೇಳುವಂತಾಗಬೇಕು. ಕನ್ನಡದ ಬಹುತೇಕ ಕಿರುಚಿತ್ರಗಳಿಗೆ ಕಥೆ ಇನ್ನೂ ಒಲಿದಿಲ್ಲ. ಅಪಕ್ವ ಕಥೆಗಳೇ ಇವುಗಳನ್ನು ಆವರಿಸಿವೆ’ ಎಂಬ ಕೊರಗು ಅವರದು. ಕಿರುಚಿತ್ರ ನಿರ್ಮಿಸಿದ ಮಾತ್ರಕ್ಕೆ ಬಂಡವಾಳ ಹರಿದು ಬರುತ್ತದೆ ಎಂದೇನೂ ಅಲ್ಲ. ಪ್ರತಿ ಸಿನಿಮಾಕ್ಕೂ ನಿರ್ಮಾಪಕರನ್ನು ಹುಡುಕಲೇ ಬೇಕು. ಹಣವೇ ಮೊದಲು, ಸೃಜನಶೀಲತೆ ನಂತರದ್ದು ಎಂಬ ಸವಾಲೂ ಇದೆ.

ಕಿರುಚಿತ್ರಕ್ಕೆ ಶರಣೆಂದ ಹಿರಿತೆರೆ
ದೇಶದಲ್ಲಂತೂ ಈಗ ಕಿರುಚಿತ್ರಗಳ ಮಹಾ ಪ್ರವಾಹ. ‘ಅಂಬಾನಿ ದಿ ಇನ್ವೆಸ್ಟರ್’, ‘ಶಾರ್ಟ್ಸ್’, ‘ಕ್ಯಾಮರಾ’, ‘ಬೈಪಾಸ್’, ‘ಸೆಲ್ಫಿ’ – ಹೀಗೆ ಸಾರ್ವಕಾಲಿಕ ಅತ್ಯುತ್ತಮ ಕಿರುಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಟಿ ರಾಧಿಕಾ ಆಪ್ಟೆ ಕಿರುಚಿತ್ರಗಳಿಗೆ ಅನ್ವರ್ಥನಾಮವೇ ಆಗಿದ್ದಾರೆ. ಅವರ ‘ಅಹಲ್ಯಾ’, ‘ದಟ್ ಡೇ ಆಫ್ಟರ್ ಎವೆರಿಡೇ’,‘ದಿ ಕಾಲಿಂಗ್’, ‘ಕೃತಿ’ಯಂಥ ಚಿತ್ರಗಳನ್ನು ಸಿನಿಮಾ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಬೆಂಗಾಳಿ ಭಾಷೆಯ ‘ಅಹಲ್ಯಾ’ ಈಗಿನ ಸಿನಿಮಾ ಪರಿಭಾಷೆಗೆ ಸವಾಲೆಸೆದಿದೆ. ಸ್ವತಃ ‘ಇಂಟೀರಿಯರ್ ಕೆಫೆ ನೈಟ್’ ಕಿರುಚಿತ್ರದಲ್ಲಿ ತೊಡಗಿಕೊಂಡಿದ್ದ ನಟ ನಾಸಿರುದ್ದೀನ್ ಷಾ ಇತ್ತೀಚೆಗೆ ‘ಕಿರುಚಿತ್ರಗಳಿಂದ ತಾರೆಯರು ದೂರ ಉಳಿಯಲಿ’ ಎಂದು ಬಯಸಿದ್ದರು.

ಆ ಹೊತ್ತಿಗೆ ಮನೋಜ್ ಭಾಜಪೇಯಿ, ರವೀನಾ ಟಂಡನ್, ಸೌಮಿತ್ರ ಚಟರ್ಜಿ, ರಾಧಿಕಾ ಆಪ್ಟೆ, ಕಲ್ಕಿ ಕೊಚ್ಲಿನ್ ರೀತಿಯ ಖ್ಯಾತನಾಮರು ಕಿರುಚಿತ್ರ ಪ್ರವೇಶಿಸಿದ್ದರು. ಹಾಗೆ ಬರುವ ನಟರು, ತಂತ್ರಜ್ಞರು ಕಿರುಚಿತ್ರಗಳ ಪರಿಭಾಷೆಯನ್ನೇ ಬದಲಿಸುವುದು ಮಾತ್ರವಲ್ಲ ಹೊಸಬರಿಗೆ ಅವಕಾಶ ಇಲ್ಲವಾಗಬಹುದು ಎಂಬ ಆತಂಕ ಅವರ ಮಾತಿನಲ್ಲಿತ್ತು.

ತೆಲುಗಿನ ‘ವೆಂಕಟಾದ್ರಿ ಎಕ್ಸ್ ಪ್ರೆಸ್’ ಚಿತ್ರ ನಿರ್ದೇಶಿಸಿದ ಮೆರ್ಲಪಾಕ ಗಾಂಧಿ ಬೆಳಕಿಗೆ ಬಂದಿದ್ದೇ ‘ಕರ್ಮರಾ ದೇವುಡ’ ಎಂಬ ಕಿರುಚಿತ್ರದ ಮೂಲಕ. ಸುಜಿತ್ ಸೇನ್, ಬಾಲಾಜಿ ಮೋಹನ್, ವಿರಿಂಚಿ ವರ್ಮ ಹೀಗೆ ಕಿರುಚಿತ್ರಗಳು ಸೃಜಿಸಿದ ಪ್ರತಿಭೆಗಳ ದೊಡ್ಡ ಪಟ್ಟಿಯೇ ಇದೆ.

ಚರಿತ್ರೆಯ ಕಾಲಲ್ಲಿ ‘ಕಿರು’ಗೆಜ್ಜೆ
ವಿಶ್ವದ ಸಿನಿಮಾ ಇತಿಹಾಸ ಆರಂಭವಾಗುವುದೇ ಕಿರುಚಿತ್ರಗಳಿಂದ. ಮೂಕಿಯುಗದ ಬಹುತೇಕ ಸಿನಿಮಾಗಳು ಕಿರುಚಿತ್ರಗಳೇ ಆಗಿದ್ದವು. ಮೂರು ಗಂಟೆಗೂ ಹೆಚ್ಚು ಅವಧಿಯ ‘ದಿ ಬರ್ತ್ ಆಫ್ ಎ ನೇಷನ್’ನಂಥ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಅಂದು ಕೂಡ ಸಿದ್ಧರಿರಲಿಲ್ಲ. ಹಾಗೆಂದೇ ಚುಟುಕು ಕಾಮಿಡಿಗಳು ಮುನ್ನೆಲೆಗೆ ಬಂದವು. ಚಾರ್ಲಿ ಚಾಪ್ಲಿನ್, ಲಾರೆಲ್ ಮತ್ತು ಹಾರ್ಡಿ ಹಾಗೂ ಬಸ್ಟರ್ ಕೀಟನ್ ಅವರ ವೃತ್ತಿಜೀವನ ಆರಂಭಕ್ಕೆ ಕಾರಣ ಕಿರಚಿತ್ರಗಳು. ಈಗಿನಂತೆ ಆಗಲೂ ಕಿರುಚಿತ್ರ ನಿರ್ಮಿಸಿ ಬಳಿಕ ಫೀಚರ್ ಫಿಲ್ಮ್ಗಳಿಗೆ ಬಡ್ತಿ ಪಡೆದ ನಟರು ನಿರ್ದೇಶಕರಿದ್ದಾರೆ.

ಭಾರಿ ಜನಪ್ರಿಯತೆ ಪಡೆದ ಅನಿಮೇಷನ್ ಚಿತ್ರಗಳು ಗಾತ್ರದಲ್ಲಿ ಪುಟಾಣಿಗಳೇ!. ‘ಟಾಂ ಅಂಡ್ ಜೆರ್ರಿ’, ‘ಮಿಕ್ಕಿ ಮೌಸ್’ ಸರಣಿ ಇಂಥ ಪ್ರಮುಖ ಪ್ರಯೋಗಗಳು. ಈಗ ‘ಕಿರು–ಕಿರುಚಿತ್ರ’ಗಳ ಕಾಲ. ಕೇವಲ ಮೂರು ನಿಮಿಷಗಳಲ್ಲೇ ಪೂರ್ಣಗೊಳ್ಳುವ ಇವುಗಳನ್ನು ಅತಿ ಕಿರುಚಿತ್ರ ಎಂದೂ ಕರೆಯುತ್ತಾರೆ. ಇವುಗಳ ಪ್ರದರ್ಶನಕ್ಕಾಗಿ ಪ್ಯಾರಿಸ್ನಲ್ಲಿ ಪ್ರತಿವರ್ಷ ಚಿತ್ರೋತ್ಸವ ನಡೆಯುತ್ತದೆ. ಒಂದು ನಿಮಿಷದ ಅವಧಿಯ ಚಿತ್ರಗಳನ್ನು ಪ್ರದರ್ಶಿಸಲೆಂದೇ ‘ಫಿಲ್ಮಿನಿಟ್’ ಎಂಬ ಚಿತ್ರೋತ್ಸವ ಹುಟ್ಟಿಕೊಂಡಿದೆ.

ನಿರ್ಮಾಪಕರೇ ನಿಮ್ಮೆಡೆಗೆ!
ನಿರ್ದೇಶಕರು ಮೊದಲೆಲ್ಲಾ ಸ್ಕ್ರಿಪ್ಟ್ ಹಿಡಿದು ನಿರ್ಮಾಪಕರ ಮನೆ ಬಾಗಿಲು ಬಡಿಯಬೇಕಿತ್ತು. ಈಗ ಎಲ್ಲಾ ಅದಲು ಬದಲು. ನಿಮ್ಮಲ್ಲೊಂದು ಕಥೆ ಇದ್ದರೆ ಅದನ್ನು ಸ್ಥೂಲವಾಗಿ ಶೂಟ್ ಮಾಡಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬಹುದು. ಅಂಥ ಕಿರುಚಿತ್ರಗಳು ಮುಂದೆ ವಿಸ್ತಾರ ರೂಪು ಪಡೆದು ಹಿರಿತೆರೆಯಲ್ಲಿ ಮಿಂಚಿವೆ. ಉದಾಹರಣೆಗೆ ಭಾರಿ ಜನಮನ್ನಣೆಗಳಿಸಿದ ತಮಿಳು ಸಿನಿಮಾ ‘ಪನ್ನಾಯಡುಂ ಪದ್ಮಿನಿಯುಂ’ ಮೊದಲು ಕಿರುಚಿತ್ರ ರೂಪದಲ್ಲಿತ್ತು.

ಸಿನಿಮಾ ಮಾಡಲು ಹಣ ಇರಲಿಲ್ಲ. ತಕ್ಷಣ ನಿರ್ದೇಶಕ ಅರುಣ್ ಕುಮಾರ್ ಕಥೆಯನ್ನು ಕಿರುಚಿತ್ರ ಮಾಡಿ ‘ಯೂಟ್ಯೂಬ್’ನಲ್ಲಿ ತೇಲಿಬಿಟ್ಟರು. ಆ ಕಿರುಚಿತ್ರ ನಿರ್ಮಾಪಕರನ್ನಷ್ಟೇ ಅಲ್ಲ ತಮಿಳಿನ ಅನೇಕ ತಂತ್ರಜ್ಞರು, ಕಲಾವಿದರ ಗಮನ ಸೆಳೆಯಿತು. ಚಿತ್ರದ ಕಥೆ, ನಿರೂಪಣಾ ಶೈಲಿಗೆ ಮನಸೋತ ಅವರೆಲ್ಲ ಅದನ್ನು ಹಿರಿತೆರೆಗೆ ತಂದರು. ಈ ರೀತಿ ಕಿರುಚಿತ್ರಗಳ ಮೂಲಕ ಬೆಳ್ಳಿತೆರೆ ಪ್ರವೇಶಿಸುವವರ ಸಂಖ್ಯೆ ತಮಿಳು ಹಾಗೂ ಮಲಯಾಳಂನಲ್ಲಿ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.