ಅಮೆರಿಕದಲ್ಲಿನ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಕ್ರೂಸ್ ಯಾನವೂ ಒಂದು. ಸಮುದ್ರದ ಮೇಲಿನ ಮೂರ್ನಾಲ್ಕು ದಿನಗಳ ಈ ಪ್ರವಾಸ ಪರ್ಯಾಯ ಸ್ವರ್ಗದಂತೆ ಕಾಣಿಸುತ್ತದೆ. ಆದರೆ, ಕ್ರೂಸ್‌ಗಳಲ್ಲಿನ ಕಾರ್ಮಿಕರನ್ನು ಮಾತನಾಡಿಸಿದರೆ, ಅವರ ಠಾಕುಠೀಕು ಸಮವಸ್ತ್ರದೊಳಗಿನಿಂದ ಆರ್ದ್ರ ಕಥೆಗಳು ಹೊರಬೀಳುತ್ತವೆ.

ಸುಖದ ಸುಪ್ಪತ್ತಿಗೆ ಕೂಡ ಬಂದೀಖಾನೆ ಆಗಬಹುದಾದ ಸೋಜಿಗಕ್ಕೆ ಉದಾಹರಣೆಯಂತಿರುವ ಈ ಕಥನಗಳಲ್ಲಿ ಭಾರತೀಯ ಧ್ವನಿಗಳೂ ಸೇರಿಕೊಂಡಿವೆ.

ಕ್ರೂಸ್, ಸಮುದ್ರಯಾನ ಅಥವಾ ನಾವೆಯಾನ– ಈ ಎಲ್ಲ ಬಗೆಯ ವಿಹಾರ ಪ್ರವಾಸಗಳಿಗೆ ಹೋಲಿಸಿದರೆ ನಿಸ್ಸಂಶಯವಾಗಿ ಸ್ವರ್ಗಸದೃಶ ಪ್ರವಾಸ ಎಂದರೆ ಕ್ರೂಸ್! ನೀವು ಊಹಿಸಿದ್ದು, ಕಲ್ಪಿಸಿಕೊಳ್ಳದ್ದು, ಎಲ್ಲೋ ಕೇಳಿದ್ದು, ಮತ್ತೆಲ್ಲೋ ಓದಿದ್ದು ಎಲ್ಲ ಸುಖವನ್ನೂ ಒಂದೇ ಕಡೆ ರಾಶಿ ರಾಶಿ ತುಂಬಿ ನಿಮಗೆ ಎಷ್ಟು ಬೇಕಾದರೂ ಮೊಗೆದುಕೊಳ್ಳಲು ಬಿಟ್ಟಂತೆ ಇರುವ ಪ್ರಯಾಣವಿದು. ನಾಲ್ಕೈದು ದಿನಗಳ ಅಪ್ಪಟ ನಿರಾಳತೆ, ಬಯಸಿದ್ದು ಬೆರಳ ತುದಿಯಲ್ಲಿ ಎಂಬಂಥ ಅನುಕೂಲತೆ.

ಐಷಾರಾಮೀ ಹಡಗಿನ ಸಮುದ್ರಯಾನ ಅಮೆರಿಕೆಯಲ್ಲಿ ಬಹು ಜನಪ್ರಿಯ ಪ್ರವಾಸೀ ಆಕರ್ಷಣೆ. ಇಲ್ಲಿನ ಉಷ್ಣ ಹವಾಮಾನದ ರಾಜ್ಯವಾದ ಫ್ಲೋರಿಡಾ ಇಂಥ ಪ್ರವಾಸಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಕೇಂದ್ರಗಳಲ್ಲಿ ಮುಖ್ಯವಾದುದು. ಇಲ್ಲಿಂದ ಬಹಾಮಾಸ್ ಮತ್ತು ಕೆರೇಬಿಯನ್ ದ್ವೀಪ ಸಮೂಹಗಳ ನಡುವೆ ತೇಲಾಡುವ ಬಹಳಷ್ಟು ಬಗೆಯ ಸಮುದ್ರಯಾನ ಒದಗಿಸುವ ನಾವೆಕಂಪನಿಗಳಿವೆ.

ಮೂರು ದಿನಗಳಿಂದ ಹಿಡಿದು ಹತ್ತು ದಿನಗಳವರೆಗಿನ ಬಗೆಬಗೆಯ ದ್ವೀಪದರ್ಶನ, ಡಾಲ್ಫಿನ್‌ಗಳೊಂದಿಗೆ ಈಜಾಟ, ಮೀನುಗಳೊಂದಿಗೆ ಒಡನಾಟ, ಸ್ಕೂಬ, ಸ್ನಾರ್ಕಲ್ ಎಂದು ಸಾಗರಜೀವ ಸಂಕುಲದ ವಿವಿಧ ಆಕರ್ಷಣೆ ಈ ಪ್ರವಾಸಗಳ ಬಹುಮುಖ್ಯ ಭಾಗ. ಇನ್ನೊಂದು ಮುಖ್ಯವಿಚಾರವೆಂದರೆ ಆಹಾರಭಾಗ್ಯ! ಇಲ್ಲಿ ತಿಂಡಿ ತಿನಿಸುಗಳ ಉಪಚಾರಕ್ಕೆ ಲೆಕ್ಕವಿಲ್ಲ. ಅಳತೆಯೂ ಇಲ್ಲ. ದಿನದ ಇಪ್ಪತ್ನಾಲ್ಕು ಗಂಟೆ ತಿನ್ನುತ್ತೇನೆ ಎಂದು ಪಣ ತೊಟ್ಟು ಕೂತರೂ ತಿಂದು ಮುಗಿಸಲಾಗುವುದಿಲ್ಲ.

ಹಣ್ಣುಹಂಪಲುಗಳ ರಾಶಿಯಿಂದ ಹಿಡಿದು ಮೀನು ಮಾಂಸಗಳ ಖಾದ್ಯದ ಸಾಲುಗಳು ಎಲ್ಲ ಊಟದ ಕೋಣೆಗಳಲ್ಲಿ. ಮಧ್ಯರಾತ್ರಿ ಒಂದು ಗಂಟೆಗೆ ಮನರಂಜನೆ, ಸಿಹಿ ತಿನಿಸುಗಳ ಬಫೆ ಬಡಿಸುತ್ತಾರೆ. ಊಟದ ಹೊತ್ತಿಗೆ ಯಾವ ಬಗೆಯ ಆಹಾರ ಪದಾರ್ಥ ಬೇಕೆಂದರೂ ಲಭ್ಯವಿದೆ ಇಲ್ಲಿ. ಸಸ್ಯಾಹಾರಿಗಳಿಗೆ ಸ್ವಲ್ಪ ಮುಜುಗರವೆನಿಸಿದರೂ ಆಹಾರಕ್ಕೆ ಬರವೇ ಇಲ್ಲ.

ಸುಮಾರು 2,000ದಿಂದ 4,000 (ಹಡಗಿನ ಕೆಲಸಗಾರರೂ ಸೇರಿ) ಜನರು ಮುಕ್ತವಾಗಿ ಸರಿದಾಡುವಂತಹ ಸ್ವರ್ಗಲೋಕದಲ್ಲಿ ಏನಿದೆ, ಏನಿಲ್ಲ! ವ್ಯಾಯಾಮ ಮಾಡಲು ಜಿಮ್, ಓಡಲು ಟ್ರ್ಯಾಕ್, ಬಿಸಿಲು ಕಾಯಿಸಲು ಪ್ರತ್ಯೇಕ ಡೆಕ್, ಕುಡಿದು ಕುಣಿಯಲು ಪಬ್ಬುಗಳು, ಡಾನ್ಸ್ ಬಾರುಗಳು, ಕೊಳ್ಳುಬಾಕರಿಗಾಗಿ ಶಾಪಿಂಗ್ ಮಾಲ್, ಸಿನಿಮಾ ಹಾಲ್, ಸಂಗೀತ–ನಾಟಕಗಳಿಗೆ ಥಿಯೇಟರ್, ಬಗೆಬಗೆಯ ರೆಸ್ತೋರೆಂಟುಗಳು, ಈಜುಕೊಳಗಳು, ಹಾಟ್ ಟಬ್, ಸ್ಪಾ, ನೀರಾಟಕ್ಕೆ ವಾಟರ್ ಪಾರ್ಕ್, ಮಕ್ಕಳಿಗಾಗಿ ಆಟದ ಕೋಣೆಗಳು, ಮನರಂಜನೆಯ ಹಲವು ಬಗೆ ಇಲ್ಲಿ.

ಇಷ್ಟೆಲ್ಲಾ ನಿರ್ವಹಿಸಲು ಎಷ್ಟು ಜನ ಬೇಕಾದೀತು ಅಲ್ಲವೇ? ಇದೆಲ್ಲ ಸ್ವರ್ಗಸುಖವನ್ನು ಶಿಪ್ಪಿಂಗ್ ಕಂಪನಿಗಳು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದಾದರೂ ಹೇಗೆ? ಉತ್ತರವಿರುವುದು ಚಕಚಕನೆ ವಿವಿಧ ಆಕಾರಗಳಲ್ಲಿ ಹಣ್ಣು ಹೆಚ್ಚಿ ನಗುವ ಆಕೆಯ ತುಟಿಗಳಲ್ಲಿ. ಅಲ್ಲಿ ಈಜುಕೊಳದ ಬಳಿ ಟವೆಲ್ ಹಿಡಿದು ನಿಂತಿರುವ ಹುಡುಗನ ಕಂಗಳಲ್ಲಿ. ಕಡಾಯಿಯಿಂದ ಇಷ್ಟೆತ್ತರ ನೂಡಲ್ಸ್ ಹಾರಿಸಿ ಮತ್ತೆ ಪಟ್ ಎಂದು ಹಿಡಿಯುವವನ ಕೈಗಳಲ್ಲಿ. ದಿನವೂ ದಿಂಬಿನ ಮೇಲೆ ಆನೆ, ಹಕ್ಕಿ, ಬಾತುಗಳಂತೆ ಟವೆಲ್ ಮಡಚಿಡುವ ಆಕೆಯ ಮೌನದಲ್ಲಿ. ಇವುಗಳನ್ನೆಲ್ಲ ಅವಲೋಕಿಸುವಾಗ ಪರಿಚಿತ ಎಂಬಂತಹ ಮುಖಗಳು ಎದುರಾಗುತ್ತಲೇ ಇರುತ್ತವೆ. ಅವರ ಕಂಗಳಲ್ಲೇನೋ ಕಥೆಯಿದೆ ಎಂಬಂತೆ ಭಾಸವಾಗುತ್ತವೆ.

ಎಲ್ಲಿಂದಲೋ ಬಂದವರು!
ಶಿಪ್ಪಿಂಗ್ ಕಂಪನಿಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕ ವರ್ಗ ಜಾಗತಿಕವಾಗಿ ಹಿಂದುಳಿದ, ಆರ್ಥಿಕವಾಗಿ ಮುಂದುವರೆಯುತ್ತಿರುವ ದೇಶಗಳಿಂದ ಬಂದವರು.

ರೊಮೇನಿಯ, ಕ್ರೊಯೇಶಿಯ, ಫಿಲಿಪೀನ್ಸ್, ಭಾರತಗಳಿಂದ ಬಂದ ಅಸಂಖ್ಯ ಜನರು ಇಲ್ಲಿ ಸಿಗುತ್ತಾರೆ. ಅವರಿಗೆ ‘ಶಿಪ್ಪಿಂಗ್ ವೀಸಾ’ ಎಂಬ ವೀಸಾದ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಹಡಗು ಬಂದರಿಗೆ ಬಂದಿಳಿದರೂ ಅವರು ಹಡಗು ಬಿಟ್ಟು ಹೋಗುವಂತಿಲ್ಲ. ಹೋದರೂ ಅವರೊಡನೆ ಒಬ್ಬ ಉಸ್ತುವಾರಿಯವನಿದ್ದು, ನಿರ್ದಿಷ್ಟ ಕಡೆಗಳಿಗಷ್ಟೇ ಕರೆದುಕೊಂಡು ಹೋಗಿಬರುತ್ತಾನೆ. ನಮ್ಮ ತೇಲಾಡುವ ಸ್ವರ್ಗ ಮೂರು ದಿನಗಳಿಗೆ ಮುಗಿದರೆ, ಇವರ ಬಂಧನದ ಬದುಕು ಅನವರತ ತೇಲುತ್ತ ಸಾಗುವುದು.

ನಾವು ಹಡಗಿನ ರಮ್ಯ ಲೋಕಕ್ಕೆ ಕಾಲಿಡುತ್ತಿದ್ದಂತೆ ಸ್ವಾಗತ ಕೋರುವ ಗೂಡಿನಲ್ಲಿ ಗಂಟುಮುಖದ ಶುಭ್ರಶ್ವೇತ ಸಮವಸ್ತ್ರಧಾರಿಯೊಬ್ಬ ಕೊಂಚವೇ ನಗುತ್ತ ಕೊನೆಯ ಕೀ ಕೊಟ್ಟ. ಅವನ ಎದೆಯ ಮೇಲಿದ್ದ ಅಪ್ಪಟ ಗೋವನ್ ಹೆಸರನ್ನು ಓದಿ ಆಶ್ಚರ್ಯವೂ ಸಂತೋಷವೂ ಆಗಿ ತಡೆಯದೆಯೇ ಕೇಳಿಯೇ ಬಿಟ್ಟೆವು– “ತುಮಿ ಗೊವೆಂಚಿ ಕೈ ಜಲೇ?” ಸೊಟ್ಟ ನಗೆ ಇಷ್ಟಗಲವಾಗಿ ಮುಖದ ಗಂಟೆಲ್ಲ ಕರಗಿ ಕೊನೆಗೆ ನಮ್ಮ ಎಲ್ಲ ಚೆಕ್ ಇನ್ ಕೆಲಸ ಸುಸೂತ್ರ!

ನಾವಿನ್ನೂ ಅದೇ ಗುಂಗಿನಲ್ಲಿ ನಾವೆಯ ಸಿಂಹಾವಲೋಕನ ನಡೆಸಿ ಈಜುಕೊಳಕ್ಕೆ ಬಂದಾಗ ಅಲ್ಲಿದ್ದ ಆ ಟವೆಲ್ ಹಂಚುತ್ತಿದ್ದ ಹುಡುಗ. ಪೀಟರ್ ಗೊನ್ಸಾಲ್ವಿಸ್ ಎನ್ನುವುದು ಅವನ ಅಂಗಿಯ ಮೇಲಿನ ಹೆಸರು. ಆದರೆ ನೋಡಲೋ, ಅಪ್ಪಟ ಭಾರತೀಯ ಮುಖ. ಹಲವು ದಕ್ಷಿಣ ಅಮೆರಿಕನ್ನರು ಕೂಡ ಹಾಗೆಯೇ ಕಾಣುವುದರಿಂದ ನಾವು ನಮ್ಮಲ್ಲಿಯೇ ಮಾತನಾಡಿಕೊಳ್ಳುವಾಗ, ಪಪ್ಪಾ ಕೇಳಿಯೇ ನೋಡುವ ಎನ್ನಿಸಿ– “ತುಕ್ ಕೊಂಕಣಿ ಎತ್ ರೆ?’’ ಎಂದರು. ಆ ಹುಡುಗನ ಕಣ್ಣ ಮಿಂಚು ಇನ್ನೂ ಕಣ್ಣು ಕುಕ್ಕುವಷ್ಟು ನೆನಪಿದೆ.

ನನ್ನ ಮರೆತುಹೋದ ಹರಕು ಕೊಂಕಣಿಯನ್ನು ಮತ್ತೆ ಕಲಿಯಬೇಕೆನ್ನಿಸಿಬಿಟ್ಟಿತು. ಎಷ್ಟೆಲ್ಲಾ ಹೊತ್ತು ಪಪ್ಪ–ಅಮ್ಮನೊಡನೆ ಹರಟಿ ಹಗುರಾದ ಅವನು ಕೂಡ ಗೋವಾದವನು. ಈ ಕೆಲಸಕ್ಕೂ ಮುನ್ನ ಮುಂಬೈನ ಒಂದು ಮೀನುಗಾರಿಕಾ ಕಂಪನಿಯಲ್ಲಿದ್ದವನು ವಯಸ್ಸಾದ ಬಡ ಅಮ್ಮ–ಅಪ್ಪನಿಗಾಗಿ ಡಾಲರಿನ ಪರಿಮಳವ ಆಘ್ರಾಣಿಸಬಂದಿದ್ದ. ಆತನ ಸಂಬಳ ತೀರಾ ಕಮ್ಮಿ. ಕೇಳಿ ಆಶ್ಚರ್ಯವಾಯಿತು.

ಅದರಲ್ಲೂ ಅವನು ಟವಲ್ ಬಾಯ್. ಮೊದಲನೇ ವರ್ಷದ ತೀರ ಕೆಳದರ್ಜೆಯ ಕಾರ್ಮಿಕ. ಆರು ತಿಂಗಳಿಂದ ಹಡಗಿನಲ್ಲಿದ್ದ. ತೀರ ಹೋಂ ಸಿಕ್ ಆಗಿದ್ದ. ಕೆಲಸದಿಂದ ಬಿಡುವಾದಾಗೆಲ್ಲ ಪಪ್ಪ–ಅಮ್ಮನನ್ನು ಹುಡುಕಿಕೊಂಡು ಬಂದು ಕೊಂಕಣಿಯಲ್ಲಿ ಹಲುಬಿ ಹೋಗುತ್ತಿದ್ದ. ಅಲ್ಲಿಂದ ಆ ಹಡಗಿನ ಸ್ವರ್ಗದ ಪರಿಕಲ್ಪನೆಯೇ ನನ್ನ ಕಣ್ಣಲ್ಲಿ ಬದಲಾಗಿ ಹೋಯಿತು.

ಸ್ವರ್ಗದಲ್ಲಿನ ಕೇವಲ ಮನುಷ್ಯರು!
ನಮ್ಮ ರೂಮಿನಲ್ಲಿ ನಾವು ದಿನವೂ ಬರುವಷ್ಟರಲ್ಲಿ ಎಲ್ಲ ಚೊಕ್ಕಟವಾಗಿ ಮಡಚಿ ಶುಚಿಗೊಳಿಸಿದ ಹಾಸಿಗೆಯ ಮೇಲೆ ಹಕ್ಕಿಯೋ, ಆನೆಯೋ ಆಗಿ ಟವಲ್ಲೊಂದು ಕೂತಿರುತ್ತಿತ್ತು. ಒಮ್ಮೆ ಕಾದು ಕುಳಿತು ಆ ಕಲಾತ್ಮಕ ಕೈಗಳನ್ನು ಹಿಡಿದೆ. ಅವೋ ಮಣಿಪುರದ ಮುಗ್ಧೆಯ ಮುದ್ದು ಕೈಗಳು. ಹರಕು ಮುರುಕು ಹಿಂದಿಯಲ್ಲಿ ಖುಷಿಯಿಂದ ಹರಟಿದಳು. ಮೂರು ವರ್ಷದಿಂದ ಕೆಲಸಕ್ಕಿದ್ದಾಳೆ. ಈ ನಡುವೆ ಒಮ್ಮೆಯಷ್ಟೇ ಮನೆಗೆ ಹೋಗಿ ಬಂದಿದ್ದಾಳೆ.

ಅವಳೂ ನೆಲ ಒರೆಸುವ ಕೆಲಸ ಆರಂಭಿಸಿ ಈಗ ಸ್ವಲ್ಪ ಮೇಲು ಸ್ತರಕ್ಕೆ ಬಡ್ತಿ ಹೊಂದಿದ್ದಾಳೆ. ಅವಳ ಸಂಬಳವೂ ಹೇಳಿಕೊಳ್ಳುವಂತೆ ಇರಲಿಲ್ಲ. ಇನ್ನೂ ಏನೇನೋ ಕೇಳುವುದಿತ್ತು ನನಗೆ. ಆದರೆ, ‘ನಾವಿಲ್ಲಿ ತುಂಬಾ ಹೊತ್ತು ಹರಟಿದರೆ ಬೈಸಿಕೊಬೇಕು, ಆಯ್ತಾ, ನಾಳೆ ಸಿಗುವೆ’ ಎನ್ನುತ್ತಾ ಹಾರಿ ಹೋದಳು.

ಮೂರು ಹೊತ್ತೂ ನೀರಾಟ, ಊಟವೆಂದರೆ ಐಸ್‌ಕ್ರೀಮ್ ಆಗಿಹೋಗಿದ್ದ ಅಲ್ಲಿನ ನೂರಾರು ಮಕ್ಕಳಿಗೆ ಒಂದು ನಿಮಿಷ ಕೂಡ ಐಸ್‌ಕ್ರೀಮ್ ಖಾಲಿ ಆಗದಂತೆ ರೊಮೇನಿಯನ್ ಸುಂದರಿಯೊಬ್ಬಳು ವಿಕ್ರಂ ಬೇತಾಳದ ಕಥೆಯಂತೆ ಸದಾ ತುಂಬಿಡುತ್ತಿದ್ದಳು. ಅವಳ ಇಂಗ್ಲಿಷ್ ನನಗೆ ತಿಳಿಯದು, ನನಗೆ ರೊಮೇನಿಯನ್ ಬಾರದು. ಆದರೂ ಅವಳ ಕಥೆ ಬಹಳ ಬೇರೆಯೇನಿರಲಿಲ್ಲ.

‘ದಿನವಿಡೀ ಐಸ್‌ಕ್ರೀಮ್ ತರೋದು, ತುಂಬೋದು, ಇದೇ ಕೆಲಸ ದಿನವೂ ಮಾಡಲು ಬೋರ್ ಆಗೋದಿಲ್ಲವೇ?’ ಎಂದಿದ್ದಕ್ಕೆ ಅವಳೋ ಸೀದಾ ಸೀದಾ ಹೇಳಿಬಿಟ್ಟಳು. ‘ನನಗೊಬ್ಬ ಅಪ್ಪನಿದ್ದಿರಬೇಕು, ಇಲ್ಲದಿದ್ದರೆ ನಾ ಹುಟ್ಟುತ್ತಿರಲಿಲ್ಲ ಅಲ್ಲವೇ, ರೊಮೇನಿಯದಲ್ಲಿ ನಾವೆಷ್ಟು ಬಡವರು ಎಂದರೆ, ನಾನಿಲ್ಲಿ ಐಸ್‌ಕ್ರೀಮ್ ತುಂಬಿ ನನ್ನ ತಂಗಿ–ಅಮ್ಮನ ಹೊಟ್ಟೆ ತುಂಬದಿದ್ದರೆ, ಅವರಿಬ್ಬರೂ ಮತ್ತೆ ಅಪ್ಪನಿಲ್ಲದ ಮಕ್ಕಳ ಹಡೆಯಬೇಕಾಗುತ್ತೆ. ಅದಕ್ಕಿಂತ ಇದೇ ಚಂದ ಇದೆ ಅಲ್ಲವ? ನೋಡು ಆ ಮಕ್ಕಳ ಬಾಯಿಗೆ ಮೆತ್ತಿಕೊಂಡಿರುವ ಐಸ್‌ಕ್ರೀಮ್ ಚಂದ ನೋಡು’.

ಅಂದಹಾಗೆ, ಈ ಕ್ರೂಸ್‌ನವರದೆಲ್ಲ ಹೀಗೆಯೇ ಅಲ್ಲ, ಇವರಲ್ಲೂ ಚಂದದ ಕಥೆಗಳಿವೆ, ಅಪರೂಪದ ಪ್ರೇಮಿಗಳಿದ್ದಾರೆ. ವಿದ್ಯಾವಂತರಾದರೆ ಉತ್ತಮ ದರ್ಜೆ ಮತ್ತು ಸಂಬಳವೂ ಇದೆ. ಆದರೆ ಎಲ್ಲರ ಹಿಡಿದಿಟ್ಟ ಸರಪಳಿಯೂ ಸಮುದ್ರವೇ, ಸಂಬಂಧವೂ ಸಮುದ್ರವೇ.

ಅಲ್ಲಿನ ಫಾರ್ಮಲ್ ಬಾಂಕ್ವೆಟ್ ಊಟದ ಸಂಪೂರ್ಣ ಮೇಲುಸ್ತುವಾರಿ ಅಧಿಕಾರಿ ಲೂಸಿ ದಿನವೂ ಸಂಜೆ ಊಟದ ಹಾಲಿನ ಬಳಿಯಲ್ಲೇ ನಗುಸೂಸಿ ಸ್ವಾಗತ ಕೋರುತ್ತಾಳೆ. ಅವಳಿಗೂ ಯಾರಲ್ಲಾದರೂ ತನ್ನ ಕಥೆ ಹೇಳಿಕೊಳ್ಳಬೇಕೆಂಬ ಹಂಬಲವಿದೆ. ಅವಳು ಅಲ್ಲಿ ಹನ್ನೆರಡು ವರ್ಷದಿಂದ ಕೆಲಸ ಮಾಡುತ್ತಿದ್ದಾಳೆ. ತರಕಾರಿ ಹೆಚ್ಚುವ ಕೆಲಸಕ್ಕೆ ಸೇರಿಕೊಂಡವಳು ಅವಳು.

ದುಡಿಮೆ, ದಕ್ಷತೆಯಿಂದ ಇಡೀ ಹಡಗಿನ ಊಟದ ಮೇಲುಸ್ತುವಾರಿ ಅವಳದೀಗ. ಅವಳು ಖುಷಿಯಿಂದಲೇ ಹಂಚಿಕೊಂಡ ಕಥೆಯಿದು. ಲೂಸಿಯ ಗಂಡ ಕೂಡ ಇದೇ ಹಡಗಿನಲ್ಲಿ ಒಬ್ಬ ಮುಖ್ಯ ಅಡಿಗೆಯವ. ಆಕೆಗೊಬ್ಬ ಮಗಳಿದ್ದಾಳೆ, ಎಂಟು ವರ್ಷದವಳು. ಫಿಲಿಪೀನ್ಸಿನಲ್ಲಿ ಅಜ್ಜಿಯ ಜತೆಯಿದ್ದಾಳೆ. ಮಗಳಿಗೆ ಅಪ್ಪ ಅಮ್ಮ ಸಿಗುವುದೇ ಅಪರೂಪ.

‘ನೀವಿಬ್ಬರೂ ಮಗಳನ್ನು ಬಿಟ್ಟು ಬಂದರೆ ಕಷ್ಟವಲ್ಲವೇ? ಒಬ್ಬರಾದರೂ ಶಿಪ್ಪಿಂಗ್ ಬದಲು ಬೇರೆ ಕೆಲಸ ಮಾಡಿದರೆ ಒಳ್ಳೆಯದಲ್ಲವೇ?’ ಎಂದೆ.

ಲೂಸಿ ಅದೇ ಮೋಹಕ ನಗುವಿನೊಂದಿಗೆ ಹೇಳಿದಳು. ‘ನೀ ಹೇಳುವುದು ನಿಜ. ಆದರೆ ವಿಚಾರ ಮಾಡು, ಈ ಹಡಗಿನಲ್ಲಿ ವರ್ಷವಿಡೀ ಇರಬೇಕು. ಕೆಳದರ್ಜೆಯವರಿಗೆಲ್ಲ ಅಷ್ಟೊಂದು ರಜೆ ಕೂಡ ಸಿಗುವುದಿಲ್ಲ. ಸುಖ ಸಂಪತ್ತು ಎಷ್ಟಿದ್ದರೂ ಅದೇ ಜನ, ಅದೇ ಜೀವನ ಎಂಬಂತೆ ಬಂಧನವಾದಾಗ ಮನಸ್ಸು ಅದನ್ನು ಭೇದಿಸಿ ಓಡಬೇಕು ಎಂದು ಬಯಸುತ್ತೆ. ಅದರಲ್ಲೂ ಇಂಥ ಜೀವನದಲ್ಲಿ ಬಹುಬೇಗ ಒಂಟಿತನ ಕಾಡುತ್ತೆ. ನಾಳೆ ನೀನೆ ಸೂಕ್ಷ್ಮವಾಗಿ ನೋಡು, ಇಲ್ಲಿ ಎಷ್ಟೆಲ್ಲಾ ಜನರಿಗೆ ಅಫೇರ್ ಇದೆ ಗೊತ್ತಾ? ಅದು ತಪ್ಪಲ್ಲ. ಇಲ್ಲಿನ ಒಂಟಿತನಕ್ಕೆ ಒಂದು ಸಂಗಾತಿ ಬೇಕು.

ದೇಹಕ್ಕಿಂತ ಹೆಚ್ಚಾಗಿ ಮನಸ್ಸಿಗೆ ಬೇಕು. ಇಲ್ಲಿ ಕೆಲಸ ಮಾಡುವವರು ಇಲ್ಲಿನವರನ್ನೇ ಕಟ್ಟಿಕೊಳ್ಳುವುದು ಒಳಿತು. ಇಲ್ಲದಿದ್ದರೆ ಆ ಮದುವೆಗೆ ಅರ್ಥವಿಲ್ಲ, ನಿಲ್ಲುವುದೂ ಇಲ್ಲ. ನಾನು ಕೂಡ ಅಫೇರ್ ಮಾಡಿಕೊಳ್ಳುತ್ತಿದ್ದೆನೋ ಏನೋ, ನನ್ನ ಗಂಡ ಇಲ್ಲಿಲ್ಲದಿದ್ದರೆ! ನಾವಿಬ್ಬರೂ ರಜೆಯನ್ನೂ ಬೇರೆ ಬೇರೆ ಸಮಯದಲ್ಲಿ ಪಡೆದುಕೊಂಡು ಮಗಳ ಜೊತೆ ಒಬ್ಬರಾದರೂ ಹೆಚ್ಚಿನ ಸಮಯ ಕಳೆಯುವಂತೆ ನೋಡಿಕೊಳ್ಳುತ್ತೇವೆ.

ಈಗ ಇಬ್ಬರೂ ಹೆಚ್ಚಿನ ದರ್ಜೆಯ ಹುದ್ದೆಯಲ್ಲಿರುವುದರಿಂದ ಕೈತುಂಬ ಸಂಬಳವಿದೆ. ಮಗಳನ್ನು ಅತ್ಯುತ್ತಮ ಶಾಲೆಗೇ ಸೇರಿಸಿದ್ದೇವೆ. ಅವಳು ಓದಲಿ, ತುಂಬಾ ತುಂಬಾ ಓದಲಿ. ನಮ್ಮ ಪ್ರೀತಿ ಸಿಗದಿದ್ದರೆ ಏನು ಮಹಾ ನಷ್ಟವಲ್ಲ ಬಿಡು. ಅವಳಾದರೂ ಮುಂದೆ ಹೀಗೆ ಕಷ್ಟಪಡುವುದು ಬೇಡ ಅಲ್ಲವೇ?’.
ನಕ್ಕು ನಿಡುಸುಯ್ದೆ. ಲೂಸಿ ಮಾತ್ರ ಅದೇ ನಗುವಿನಲ್ಲೇ ಇದ್ದಳು. ಅಂದಿನ ಸಂಜೆಯ ಸಂಗೀತ ನಾಟಕದ ನರ್ತಕಿ ಮರುದಿನ ಬೆಳಿಗ್ಗೆ ಒಬ್ಬ ಸುಂದರ ಯುವಕ ವೇಟರ್‌ನೊಂದಿಗೆ ಈಜುಕೊಳದಲ್ಲಿ ಕಾಣಿಸಿಕೊಂಡಳು. ನನಗೆ ಲೂಸಿ ನೆನಪಾದಳು.

ಬದುಕು ಒಂದು ಜಾದೂ...
ಹಡಗು ಬಹಾಮಾಕ್ಕೆ ಬಂದು ತಂಗಿದಾಗ, ನನ್ನ ಪಾಸ್ ಪೋರ್ಟ್ ನೋಡಿ ‘ನಮಸ್ತೆ’ ಎಂದವ ಮರ್ಚಂಟ್ ನೆವಿಯ ಮುಂಬೈ ವಾಸಿ. ಎಲ್ಲೆಲ್ಲಿ ಶಾಪಿಂಗ್ ಮಾಡಬೇಕು, ಎಲ್ಲಿಲ್ಲಿ ಏನು ಖರೀದಿಸಬಾರದು ಎಂಬೆಲ್ಲ ಸಲಹೆಗಳನ್ನು ಕೇಳದೆಯೇ ಕೊಟ್ಟ. ಆ ಸಂಜೆ ಹಡಗಿನಲ್ಲೊಂದು ಮ್ಯಾಜಿಕ್ ಶೋ. ಕಣ್ ಕಟ್ಟುವಿಕೆಯ ಕಲೆಯನ್ನು ಕಣ್ಮುಚ್ಚದೆ ನೋಡುತ್ತಿದ್ದರು ಎಲ್ಲರೂ.

ಶೋ ಮುಗಿಸಿ ಊಟಕ್ಕೆ ಕುಳಿತಾಗ ಆತ ಹಲವರ ಮೇಜಿಗೂ ಬಂದು ಏನೇನೋ ಮಾಯ ಮಾಡಿ ತೋರಿಸುತ್ತಿದ್ದ. ನಾವೋ ಇಡೀ ಹಡಗು ನಮ್ಮದೆಂಬಂತೆ ಕಚಪಚ ನಗು–ಹರಟೆ ನಡೆಸಿದ್ದೆವು. ಆತ ನಮ್ಮ ಟೇಬಲ್ಲಿಗೂ ಬಂದು, ‘ನಿಮಗೆ ಮ್ಯಾಜಿಕ್ ತೋರಿಸ್ಲಾ’ ಎಂದು ಕನ್ನಡದಲ್ಲಿ ಕೇಳಿದ! ಅವನ ಹೆಸರು ಮಿಥುನ್, ಮಲ್ಲೇಶ್ವರಂ ಹುಡುಗ. ಇಂಜಿನಿಯರಿಂಗ್ ಮುಗಿಸಲಾರದೆ ಅರ್ಧಕ್ಕೆ ಬಿಟ್ಟು ಮ್ಯಾಜಿಷಿಯನ್ ಆದವ.

“ಏನ್ ಮಾಡೋದು ಸಾರ್. ಆಗ ಹುಡುಗುಬುದ್ಧಿ. ಸರೀಗ್ ಓದಲಿಲ್ಲ. ಬಟ್ ಇಲ್ಲಿ ಒಂಥರಾ ಚೆನ್ನಾಗಿದೆ. ಫ್ರೀಯಾಗಿದೆ. ನಿಮ್ಮಂತವರು ಕನ್ನಡದಲ್ಲಿ ಮಾತಾಡೋದು ಕೇಳಿದಾಗ ಖುಷಿಯಾಗುತ್ತೆ. ಅಮ್ಮ ಹುಡುಗಿ ಫೋಟೋಸ್ ಕಳಿಸ್ತಿದಾರೆ, ಮದ್ವೆ ಮಾಡ್ಕೋ ಅಂತ ಒಂದೇ ಸಮ ತಲೆ ತಿಂತಾರೆ” ಎಂದು ಪಕ್ಕದ ಕುರ್ಚಿ ಎಳೆದು ಅಲ್ಲೇ ಕೂತು ಮುಂದುವರೆಸಿದ.

“ನೋಡಿ ನೀವೇ ಹೇಳಿ, ಇಲ್ಲಿ ಕೆಲಸ ಮಾಡ್ತಾ ಬೆಂಗಳೂರಲ್ಲಿರೋ ಹುಡುಗೀನ ಮದ್ವೆ ಮಾಡ್ಕೊಳಕಾಗತ್ತ? ನಾನು ಮದ್ವೆ ಮಾಡ್ಕೊಂಡ್ರೂ ಜೀವನ ಮಾಡಕ್ಕಾಗತ್ತ? ಒಂದೋ ನಾನು ಕೆಲಸ ಬಿಡಬೇಕು, ಇಲ್ಲವೇ ಬೇರೆ ತರಾ ಹುಡುಗಿ ನೋಡ್ಕೋಬೇಕು. ಕೆಲಸ ಬಿಡ್ತೀನಿ ಅನ್ಕೊಳ್ಳಿ, ಈ ಮ್ಯಾಜಿಕ್ ಮಾಡಾರಿಗೆಲ್ಲ ನಮ್ ಜನ ಎಷ್ಟು ದುಡ್ಡು ಕೊಡ್ತಾರೆ? ಇಲ್ಲಿ ಫ್ಯೂಚರ್ ಇದೆ ಅನ್ಸುತ್ತೆ. ನನ್ನ ಪರ್ಸನಾಲಿಟಿಗೆ ಶಿಪ್ಪಿಂಗ್ ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರೀನಲಿ ಬೆಳೀಬಹುದು ಅನ್ಸುತ್ತೆ. ಇಲ್ಲಾಂದ್ರೆ ಇನ್ನೊಂದಷ್ಟು ವರ್ಷ ಇಲ್ಲಿ ದುಡ್ಡು ಮಾಡ್ಕೊಂಡು ಕೆಲಸ ಬಿಟ್ಟು ಏನೋ ಬಿಜಿನೆಸ್ ಮಾಡ್ತೀನಿ.

ಇದೆಲ್ಲ ಶ್ರಾವಣ ಶುಕ್ರವಾರ ಅಂತ ಓಡಾಡೋ ಅಮ್ಮಂಗೆ ಹೆಂಗೆ ಗೊತ್ತಾಗ್ ಬೇಕು ಸಾ. ಏನೋ ಸಖತ್ ಖುಶಿಯಾಯ್ತು ನಿಮ್ಮನ್ನೆಲ್ಲ ನೋಡಿ. ಕನ್ನಡದವರು ಸಿಗೋದು ಕಡಿಮೆ ಗೊತ್ತಾ. ತೆಲುಗಿನವರು, ಗುಜರಾತಿಗಳು ತುಂಬಾ ಬರ್ತಾರೆ. ನಾಳೇನೂ ಶೋಗೆ ಬನ್ನಿ ಆಯ್ತಾ, ಸಿಗ್ತೀನಿ”. ಥೇಟ್ ಬೆಂಗಳೂರಿನ ಸ್ಟೈಲ್‌ನಲ್ಲಿ ಕನ್ನಡದಲ್ಲಿ ಮಳೆಗರೆದು ಹೋದ.

ಇನ್ನೊಬ್ಬ ಅಪ್ಪಟ ತಮಿಳಿನಲ್ಲಿ ಮಾತಾಡುವ ವೇಟರ್, ದಕ್ಷಿಣ ಆಫ್ರಿಕಾದವನು. ಅಪ್ಪ ಕರಿಯ, ಅಮ್ಮ ತಮಿಳು. ಇನ್ನೊಬ್ಬ ಅವನ ಜೊತೆಯಲ್ಲೇ ಐದು ವರ್ಷದಿಂದ ಕೆಲಸ ಮಾಡುತ್ತಿರುವ ಮಲೇಷಿಯಾದ, ಅಪ್ಪಟ ಏಷ್ಯನ್ ಮುಖದ ವೇಟರ್ ಕೂಡ ನಿರರ್ಗಳವಾಗಿ ತಮಿಳಿನಲ್ಲಿ ಕುಶಲ ವಿಚಾರಿಸುತ್ತಿದ್ದ. ಅವರಿಬ್ಬರಿಗೂ ನಾವೊಂದಿಷ್ಟು ಕನ್ನಡ ಉರುಹೊಡಿಸುವಾಗ, ಮಾರುತಿ ಕೋಳಿ ಎಂಬವ ಓಡೋಡಿ ಬಂದು ‘ಚೆನ್ನಾಗಿ ಕಳಲಿಸಿ, ನನಗಂತೂ ಇವರಿಗೆ ಮರಾಟಿ ಕಳಿಸಲಾಗಲಿಲ್ಲ’ ಎಂದು, ‘ಕನ್ನಡ ಅರ್ಥ ಆಗುತ್ತೆ ನಂಗೆ’ ಎಂದು ಹಿಂದಿಯಲ್ಲಿ ಹೇಳಿದ! ‘ನನ್ನಪ್ಪನಿಗೆ ಪೋಲಿಯೋ.

ಆದರೆ ಮೀನುಗಾರಿಕೆ’ ಎಂದು ಅದೇ ಹೆಳವ ಕಾಲಿನಲ್ಲೇ ಹೆಣಗಿದ. ‘ನಮ್ಮ ಸಮಾಜದಲ್ಲಿ ಹೆಂಗಸರೇ ಗಟ್ಟಿಗಿತ್ತಿಯರು. ಸಮುದ್ರ ಎಂದರೆ ನಂಗೆ ಮನೆಯಿದ್ದಂಗೆ, ಮುಂಬೈ ಕಡಲೇನು, ಬಹಾಮ ತಡಿಯೇನು ಎಲ್ಲ ನೀರೂ ಒಂದಕ್ಕೊಂದು ಸೇರಿಕೊಳ್ಳುವುದೇ ಅಲ್ಲವೇ ಕೊನೆಯಲ್ಲಿ’ ಎಂದು ವೇದಾಂತ ಹೇಳಿ ನಕ್ಕು ಹೋದ.

ಜಾಗತಿಕ ಕುಟುಂಬ!
ಹಡಗಿನಲ್ಲಿ ಕಾರ್ಮಿಕ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುವಾಗೆಲ್ಲ ಅವರು ಸಮುದ್ರ ಸಂಬಂಧಿ ಕುಟುಂಬದವರಾದಲ್ಲಿ ಹೆಚ್ಚಿನ ಆದ್ಯತೆಯಿದೆ. ಅದು ಎಲ್ಲೂ ಬರೆದಿಡುವ ನಿಯಮವಲ್ಲ, ನಾವಿಕರಿಗೆ ನಾವಿಕರ ಮೇಲಿರುವ ಒಂದು ಅಖಂಡ ನಂಬಿಕೆ. ಹಾಗಾಗಿಯೇ ಹಡಗಿನಲ್ಲಿ ಮುಂಬೈ, ಗೋವಾ, ಪಾಂಡಿಚೇರಿಗಳ ಮೀನುಗಾರಿಕೆ ಕುಟುಂಬದ ಬಹಳಷ್ಟು ಜನ ಕಾರ್ಮಿಕರು ಸಿಗುತ್ತಾರೆ.

ಈ ಕ್ರೂಸ್ ಪ್ರಯಾಣದಲ್ಲಿ ಕಂಡಷ್ಟು ಜಗತ್ತು, ಜಾಗತಿಕ ಜನರನ್ನು ನಾನು ಹಿಂದೆಲ್ಲೂ ಕಂಡಿರಲಿಲ್ಲ. ಅಲ್ಲಿದ್ದ ನೌಕರವರ್ಗದ್ದು ಅಕ್ಷರಶಃ ಜಾಗತಿಕ ಕುಟುಂಬ. ಆ ಕುಟುಂಬಕ್ಕೆ ಅದರದ್ದೇ ಆದ ಒಂದು ಹೆಣಿಗೆಯಿತ್ತು, ಹೊಂದಾಣಿಕೆಯಿತ್ತು, ಭೇದವಿತ್ತು, ಪ್ರೇಮವಿತ್ತು.

ಅವರೆಲ್ಲರ ಆ ಬಂಧನದಲ್ಲಿಯೂ ನಗುವಿತ್ತು. ನಮ್ಮನ್ನೆಲ್ಲ ನಗಿಸುವ ಹುಮ್ಮಸ್ಸಿತ್ತು. ನಾಲ್ಕು ದಿನದಲ್ಲಿ ಅವರೆಲ್ಲ ಸೇರಿ ಸೃಷ್ಟಿಸುವ ಆಧುನಿಕ, ಐಷಾರಾಮೀ ಸುಂದರ ಜಗತ್ತಿನ ಅನುಭವ ಸದಾ ಮೆಲಕು ಹಾಕುವಂತಹ ನೆನಪು. ಆದರೆ ಅತಿ ಕಡಿಮೆ ವೇತನದ ಅವರೆಲ್ಲರ ಜೀವನ ನಡೆಯುವುದು ನಾವು ಕೊಡುವ ಟಿಪ್ಸ್‌ಗಳಿಂದ. ನಮ್ಮ ನಾಲ್ಕು ಮಾತುಗಳಿಂದ, ನಮ್ಮ ನಗುವಿನ ಗಳಿಗೆಗಳ ನಡುವೆ ಕೆಲಕ್ಷಣ ಅವರೊಡನೆಯೂ ಸೇರಿ ನಕ್ಕಲ್ಲಿ ನಾವು ಕೊಡುವ ಟಿಪ್ಸ್‌ಗಳಿಗೆ ಸಿಗುವುದಕ್ಕಿಂತ ಹೆಚ್ಚಿನ ಕೃತಜ್ಞತೆ ಅವರ ಕಣ್ಣುಗಳಲ್ಲಿ ಕಾಣುವುದು ಮಾತ್ರ ಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.