ಪುರಾಣವು ವರ್ತಮಾನದೊಡನೆ ಮತ್ತೆ ಮತ್ತೆ ಕೈ ಕುಲುಕುವ ಊರು ಗೋಕರ್ಣ. ನಾನು ಈ ಊರಿನವನು. ಹುಟ್ಟಿದ ಮೊದಲ ಒಂದು ಒಂದೂವರೆ ವರ್ಷ ಹೊರತುಪಡಿಸಿದರೆ ನಾನು ಈ ಊರಲ್ಲಿ ದೀರ್ಘಕಾಲ ನೆಲೆಸಿದ್ದೇ ಇಲ್ಲ.

ಗೋಕರ್ಣದ ಹೈಸ್ಕೂಲಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆಯವರು ಹತ್ತಿರದ ಹಿರೇಗುತ್ತಿ ಎಂಬ ಹಳ್ಳಿಗೆ ಮುಖ್ಯಾಧ್ಯಾಪಕರಾಗಿ ಹೋದರು. ಅವರದು ನಮ್ಮೂರ ದೇವರ ಹೆಸರೇ ಮಹಾಬಲೇಶ್ವರ. ಹಾಗಾಗಿಯೇ ಇರಬೇಕು, ಗೋಕರ್ಣದ ಹೈಸ್ಕೂಲಲ್ಲಿ ತಂದೆಯವರ ಹಿರಿಯ ಸಹೋದ್ಯೋಗಿಯಾಗಿದ್ದ ಗೌರೀಶ ಕಾಯ್ಕಿಣಿಯವರು ಆಗ ಉದ್ಗರಿಸಿದ್ದರಂತೆ: ನಾವು ದೇವರನ್ನು ಕಳಿಸಿಕೊಟ್ಟು ಮೂರ್ತಿಯನ್ನು ಉಳಿಸಿಕೊಂಡೆವು. ಇದೊಂದು ಹಾಸ್ಯದ ಮಾತು. ಗೋಕರ್ಣದ ಹೈಸ್ಕೂಲಿಗೆ ಮುಖ್ಯಾಧ್ಯಾಪಕರಾಗಿ ಉಳಿದು ಜನಪ್ರೀತಿ ಗಳಿಸಿದವರು ಟಿ.ಸಿ. ಮೂರ್ತಿ ಎಂಬವರು. ಅವೆಲ್ಲ ಇರಲಿ, ದೇವರ ಹೆಸರಿನ ನನ್ನ ತಂದೆಯವರು ಊರದೇವತಾ ಮೂರ್ತಿಗಳ ಚಿತ್ರಗಳೊಂದಿಗೆ ಹಿರೇಗುತ್ತಿಗೆ ಬಂದಿಳಿದರು.

ಸಂಧ್ಯಾವಂದನೆಯ ಮಂತ್ರಗಳ ಆಧಾರದ ಮೇಲೆ ಹೇಳುವುದಾದರೆ ಹಿರೇಗುತ್ತಿ ಮಾತ್ರವಲ್ಲ, ಅದಕ್ಕೂ ಮುಂದಿನ ಊರುಗಳೂ ಗೋಕರ್ಣ ಮಂಡಲ, ಗೋರಾಷ್ಟ್ರ ದೇಶದವು. ನಮ್ಮ ಹಿರೇಗುತ್ತಿಯ ಈಶ್ವರ ದೇವಸ್ಥಾನ, ಈಶ್ವರ ಕೆರೆಗಳೂ ಅದೇ ಶಿವನ ಆವಾಸಸ್ಥಾನಗಳು. ನನ್ನ ತಂದೆಯವರು ಧಾರ್ಮಿಕ ಆಚರಣೆಗಳಲ್ಲಿ ವಿಶ್ವಾಸವಿಟ್ಟವರು. ಶ್ರಾವಣದಲ್ಲಂತೂ ಪ್ರತಿ ಸೋಮವಾರವೂ ಅವರು ಗೋಕರ್ಣದ ಮಹಾಬಲೇಶ್ವರನ ಪೂಜೆ ಮಾಡಿಯೇ ಬರಬೇಕು.

ಎಲ್ಲ ಹಬ್ಬ ಹುಣ್ಣಿಮೆಗಳಿಗೂ ನಾವು ಗೋಕರ್ಣಕ್ಕೆ ಹಾಜರು. ಶಿವನ ಆತ್ಮಲಿಂಗವನ್ನು ತನ್ನ ತಾಯಿಯ ಪೂಜೆಗೆಂದು ಕೈಯಲ್ಲಿ ಹಿಡಿದು ಹೊರಟ ರಾವಣ, ಅಸುರರಿಂದ ಆತ್ಮಲಿಂಗ ರಕ್ಷಿಸಿಕೊಳ್ಳಲು ದೇವತೆಗಳು ಹೂಡಿದ ಯೋಜನೆ, ಅದರಂತೆ ಗಣೇಶ ವಟುರೂಪಿಯಾಗಿ ಸಮುದ್ರ ಬೇಲೆಯ ಬಳಿ ಬಂದು ನಿಂತಿದ್ದು, ರಾವಣ ಸಂಧ್ಯಾವಂದನೆಯ ಸಮಯವಾಯ್ತೆಂದು ಆತ್ಮಲಿಂಗವನ್ನು ವಟುವಿನ ಕೈಯಲ್ಲಿಟ್ಟಿದ್ದು (ಆತ್ಮಲಿಂಗವನ್ನು ಭೂಮಿಯ ಮೇಲೆ ಇರಿಸಬಾರದೆಂದು ಆಗಲೇ ದೇವತೆಗಳು ನಿರ್ಬಂಧಿಸಿದ್ದರು.

ಹಾಗಾಗಿ ಆತ್ಮಲಿಂಗವನ್ನು ರಾವಣ ಯಾರಾದರೊಬ್ಬರು ವಿಶ್ವಾಸಿಕರ ಕೈಯಲ್ಲಿರಿಸಿ ಸಂಧ್ಯಾವಂದನೆ ಪೂರೈಸಬೇಕಾಗಿತ್ತು), ವಟುರೂಪಿ ಗಣೇಶ ಆತ್ಮಲಿಂಗದ ಭಾರವನ್ನು ತಾಳಲಾರೆನೆಂದು ರಾವಣನನ್ನು ಮೂರು ಸಾರಿ ಕೂಗಿ ಅದನ್ನು ಭೂಮಿಯ ಮೇಲೆ ಇರಿಸಿಯೇ ಬಿಟ್ಟಿದ್ದು, ಓಡೋಡಿ ಬಂದ ರಾವಣ ಹತಾಶನಾಗಿ ಭೂಮಿಯೊಳಗಿಳಿಯುತ್ತಿದ್ದ ಆತ್ಮಲಿಂಗ ಎಳೆಯಲು ಹೋಗಿ ಕೆಲ ಚೂರುಗಳನ್ನು ಎಸೆದಿದ್ದು (ಆ ಊರುಗಳು ನಮ್ಮ ಹಿರೇಗುತ್ತಿಯ ಆಚೆ ಈಚೆಗೆಲ್ಲ ಇವೆ), ಗಣೇಶನ ತಲೆಯ ಮೇಲೆ ಗುದ್ದಿದ್ದು.... ಇವೆಲ್ಲ ನನ್ನ ಬಾಲ್ಯದಲ್ಲಿ ಆಗಷ್ಟೇ ಸ್ವಲ್ಪ ದಿನಗಳ ಹಿಂದೆ ನಡೆದ ಘಟನೆಗಳು ಎಂಬಂತಿದ್ದವು. ಅದಕ್ಕೆ ಸಾಕ್ಷಿ ಎಂಬಂತೆ ನಮ್ಮೂರ ಗಣಪತಿಯ ತಲೆಮೇಲೆ ರಾವಣ ಗುದ್ದಿ ಆದ `ಹೊಂಡ'ವಿದೆ. ಭದ್ರಕಾಳಿಯನ್ನು ನೋಡಿದರೆ ಅವಳು ಈಗಲೂ ರಾವಣನನ್ನು ಕೆಕ್ಕರಿಸಿ ನೋಡುವಂತಿದೆ.

ನಮ್ಮ ಮನೆದೇವರು ಪಟ್ಟ ವಿನಾಯಕ. ಆತ್ಮಲಿಂಗವನ್ನು ನಮಗಾಗಿ ರಕ್ಷಿಸಿಕೊಟ್ಟನೆಂದು ದೇವತೆಗಳೆಲ್ಲ ವಿನಾಯಕನನ್ನು ಪಟ್ಟದ ಮೇಲಿರಿಸಿ ಪೂಜೆಗೈದ ಸ್ಥಳವದು. ನಮ್ಮ ಮನೆಯಿರುವ ನಾಗಬೀದಿಯಲ್ಲಿ ನಾಗೇಶ್ವರ ದೇವಾಲಯದಲ್ಲಿ ಪ್ರತಿವರ್ಷವೂ ನಾಗರಪಂಚಮಿಯಂದು ಶಿವ ತನ್ನ ಹೆಂಡತಿಯೊಡನೆ ಹಾಜರು. ವರ್ಷಕಾಲ ತನ್ನ ಸೇವೆ ಸಲ್ಲಿಸುವ ನಾಗರಾಜನಿಗೆ ಅಂದು ಶಿವನೂ ಹಾಲೆರೆಯುವನು! ಉತ್ಸವದ ದಿನಗಳಂದು ಊರಿನೆಲ್ಲೆಡೆ ಪಲ್ಲಕ್ಕಿಯ ಮೇಲೆ ಬಂದು, ಶಿವ ನಮ್ಮ ಪೂಜೆ ಸ್ವೀಕರಿಸುವನು. ಇಂಥ ದೃಶ್ಯಗಳು ಮತ್ತೆ ಮತ್ತೆ ಅಭಿನಯಗೊಳ್ಳುವ ಊರಿನಲ್ಲಿ, ದೇವತೆಗಳು ಆಗಷ್ಟೇ ಬಂದು ಹೋದಂತಿದ್ದ ವಾತಾವರಣದಲ್ಲಿ ನನ್ನ ಮನಸು ಅರಳತೊಡಗಿತು.

ಹಿರೇಗುತ್ತಿಯ ಸನ್ನಿವೇಶವೂ ಇದಕ್ಕಿಂತ ತೀರ ಭಿನ್ನವಾಗಿರಲಿಲ್ಲ. ಅಲ್ಲಿಯ ನಮ್ಮ ಕೇರಿಯ ಬಹುಪಾಲು ಅತಿಬಡತನದ ಕುಟುಂಬಗಳಿಗೂ ಧಾರ್ಮಿಕ ಶ್ರದ್ಧಾಕೇಂದ್ರ ಗೋಕರ್ಣದ ದೇವರುಗಳೇ. ಸ್ಥಳೀಯ ದೇವರುಗಳು ಅಲ್ಲಿಯ ದೇವರು ಪ್ರತಿನಿಧಿಗಳಂತಿದ್ದರು. ಚೌತಿ ಹಬ್ಬ ಬಂದಿತೆಂದರೆ ಹಿರೇಗುತ್ತಿ ಸಂಭ್ರಮಗೊಳ್ಳುತ್ತಿದ್ದ ಬಗೆಯನ್ನು ನೆನೆಯುವುದೂ ಒಂದು ಹಬ್ಬ. ಮನೆಯಂಗಳಗಳಲ್ಲೇ ಊರ ಮಣ್ಣಿನಿಂದಲೇ ಗಣೇಶನು ರೂಪ ತಾಳುತ್ತಿದ್ದನು.

ಶಾಲೆಯ ಮೊದಲರ್ಧ ಮುಗಿಸಿ ಮನೆಯಲ್ಲಿರುತ್ತಿದ್ದ ಮಧ್ಯಾಹ್ನದ ಹೊತ್ತಿನಲ್ಲಿ, ಹೀಗೆ ಮನೆ ಮನೆಯಲ್ಲಿ ಮೂಡುತ್ತಿದ್ದ ಗಣೇಶ ನಮ್ಮ ಕಣ್ಣುಗಳೆದುರೇ ಜನಿಸಿದವನು! ಹೀಗೆ ಗಣೇಶನನ್ನು ತಯಾರಿಸುತ್ತಿದ್ದ ಒಂದು ಮನೆಯಲ್ಲಿ ನಾನು ಇಲಿಯನ್ನು ಕಾಡಿ ಬೇಡಿ ತೆಗೆದುಕೊಂಡಿದ್ದೆ, ನನ್ನ ಆಟಕ್ಕಾಗಿ. ಗಣೇಶ ಕೂತಂತೆ ನಾನೂ ಕೂರಲು ಹೋಗಿ ಆ ಮಣ್ಣಿನ ಇಲಿ ಮಣ್ಣುಪಾಲಾಯಿತು! ಇಂಥದೊಂದು ಚೌತಿಹಬ್ಬದ ಸಡಗರದಲ್ಲೇ ಹಿರೇಗುತ್ತಿಯಿಂದ ಗೋಕರ್ಣಕ್ಕೆ ಹೋದ ನಾನು, `ಗಣೇಶನನ್ನು ನೋಡಲು ಎಲ್ಲರೂ ಬನ್ನಿ' ಎಂಬಂಥದೇನೋ ಸಾಲುಗಳಿರುವ ಒಂದು ಪದ್ಯ ರಚಿಸಿಬಿಟ್ಟೆ!

ಅದನ್ನು ಪಾಟಿಯ ಮೇಲೆ ನಾನು ಬರೆದರೆ ನನ್ನ ಅಕ್ಕ ಅದನ್ನು ತನ್ನ ಕಚ್ಚಾಪಟ್ಟಿಯ ಹಾಳೆಗಳನ್ನು ಹೊಲಿದು ಸಿದ್ಧಪಡಿಸಿದ ಹೊಸದೊಂದು ಪಟ್ಟಿಯಲ್ಲಿ ಪೆನ್ಸಿಲಲ್ಲಿ ಬರೆದುಕೊಟ್ಟಳು. ನಾನೊಬ್ಬ ಕವಿ ಆಗಿಬಿಟ್ಟಿದ್ದೆನೆಂದು ಜಗತ್ತಿಗೆ ಸಾರಿದವಳು ಅವಳೇ! ಪತ್ರಿಕೆಗಳಲ್ಲಿ ಬಂದ ಯಾವುದಾದರೂ ಕವಿತೆಯ ಸಾಲುಗಳನ್ನು ನಾನು ಕದ್ದಿರಬಹುದು ಎಂದು ತಂದೆಯವರು ಅನುಮಾನದಿಂದಲೇ ಎಲ್ಲವನ್ನೂ ಪರಿಶೀಲಿಸಿ ಇದು ಹೊಸ ಕವಿಯ ಸ್ವಂತ ರಚನೆಯೆಂದು ಕೆಲದಿನಗಳ ಬಳಿಕ ತೀರ್ಪು ನೀಡಿದರು.

ಅಂದಿನಿಂದಲೂ ದೇವತೆಗಳು ನನ್ನ ಜೊತೆಗೆ ಇದ್ದಾರೆ. ಕಾಲೇಜು ಓದುವ ದಿನಗಳಂತೂ ಸರಿ, ಮುಂದೆ ನೌಕರಿ ಹಿಡಿದು ಬೆಂಗಳೂರಿಗೆ ಬಂದಾಗಲೂ ನನ್ನೊಡನೆ ಒಂಟಿ ರೂಮಿನಲ್ಲಿಯೂ ದೇವತೆಗಳು ಬಂದು ಕೂತರು. ಅವರೊಡನೆ ಸದಾ ಪ್ರೀತಿಯಿಂದಲೇ ಇದ್ದೇನೆಂದಿಲ್ಲ. ಜೆ.ಕೆ. ಅವರನ್ನು ಓದಿ ಪ್ರಭಾವಿತಗೊಂಡಿದ್ದ ಕೆಲ ವರ್ಷಗಳ ಕಾಲ ಎಲ್ಲ `ನಂಬಿಕೆ' ಕೇಂದ್ರಗಳೊಡನೆ ಸಂಬಂಧ ಕಳೆದುಕೊಂಡಿದ್ದೆ. ಆಗಲೂ ನನ್ನ ರೂಮಿನಲ್ಲಿ ಅವರು ವಾಸವಾಗಿದ್ದನ್ನು ನೆನೆದರೆ ಅಚ್ಚರಿಯಾಗುತ್ತದೆ. ಇವತ್ತಲ್ಲ, ನಾಳೆ ನಮ್ಮ ಮನೆಮಗ ಸರಿಹೋಗುತ್ತಾನೆ ಎಂದು ಹಿರಿಯರು ವಿಶ್ವಾಸ ತಾಳುವಂತೆಯೇ, ದೇವತೆಗಳು ನನ್ನೊಡನೆ ತಾಳ್ಮೆಯಿಂದ ನಡೆದುಕೊಂಡರು. ಇದಕ್ಕಾಗಿ ನಾನು ಅವರಿಗೆ ಸದಾ ಕೃತಜ್ಞನಾಗಿದ್ದೇನೆ.

ಕಾಲೇಜು ಓದುತ್ತಿದ್ದ ದಿನಗಳಲ್ಲೇ ಪರಮಹಂಸರ `ವಚನ ವೇದ' ಓದಿ ಅಚ್ಚರಿಗೊಂಡೆ, ಸಂಭ್ರಮಗೊಂಡೆ. ಇಂಥ ದೈವಮರುಳರೂ ಇರುವರೇ, ಈಗಲೂ ಇರಬಹುದೇ, ನನಗೆ ಸಿಕ್ಕಬಹುದೇ ಎಂದೆಲ್ಲ ಹಂಬಲಿಸ ತೊಡಗಿದೆ. `ವಚನ ವೇದ'ದ ಎಷ್ಟೋ ಸಾಲುಗಳು ಬಾಯಿಪಾಠ ಮಾತ್ರವಲ್ಲ, ಹೃದ್ಗತವೂ ಆಗಿಬಿಟ್ಟಿವೆ.

ಮುಂದೆ ರಮಣರ `ನಾನು ಯಾರು?' ಎಂಬ ಪುಟ್ಟ ಪುಸ್ತಿಕೆ ನನ್ನ ಅನೇಕ ಸಂದೇಹಗಳಿಗೆ ತಾತ್ತ್ವಿಕ ಸಮಾಧಾನ ನೀಡಿತು, ನೀಡಿದೆ. ಆದರೆ ಇವನ್ನೆಲ್ಲ ಪ್ರತ್ಯಕ್ಷವಾಗಿ ನೀವೇ ಹುಡುಕಬಾರದೇಕೆ, ಸ್ವತಃ `ದರ್ಶನ' ಪಡೆಯಲು ಪ್ರಯತ್ನಿಸಬಾರದೇಕೆ, ಎಂದು ನನ್ನನ್ನು ಪ್ರಚೋದಿಸಿದವರು ವೈಯೆನ್ಕೆ. ನನ್ನ ಅದೃಷ್ಟ, ಕೆಲವೇ ವರ್ಷಗಳಲ್ಲಿ ಇಂಥ ಪ್ರಯೋಗಗಳ ಕುರಿತು ನನಗೆ ಮಾರ್ಗದರ್ಶಕರಾಗಬಲ್ಲ ಗೆಳೆಯರೊಬ್ಬರು ದೊರೆತರು. ಅವರು ವಿನಯಶೀಲ ಸಾಧಕರು. ಅವರ ಹೆಸರು ಹೇಳಲು ನನಗೆ ಅನುಮತಿ ಇಲ್ಲ.

ಇವೆಲ್ಲದರ ಒಟ್ಟು ಪರಿಣಾಮವೆಂದರೆ ನನ್ನ ಭಾವಕೋಶದಲ್ಲಿ ಅಪ್ರಜ್ಞೆಯ ಮಟ್ಟದಲ್ಲೇ ದೊಡ್ಡ ಸೆಳೆತವಾಗಿದ್ದ ದೈವಿಕ, ಅನುಭಾವಿಕ ಲೋಕದ ಸಂಗತಿಗಳು ಎಚ್ಚರದಲ್ಲೂ ಮೂರ್ತರೂಪದಲ್ಲೂ ಸ್ಪಷ್ಟ ಆಕೃತಿಗಳನ್ನು ಪಡೆಯತೊಡಗಿದವು. ದೇವತೆಗಳ ಇರುವಿಕೆ, ಬರ ಹೋಗುವಿಕೆ ಹೆಚ್ಚು ನೈಜವೆನಿಸಿತು. ಪೂಜಾತಂತ್ರಗಳಲ್ಲಿ ರಾಕ್ಷಸರು ನಿರ್ಗಮಿಸಲೆಂದೂ, ದೇವತೆಗಳು ಬರಲೆಂದೂ ಘಂಟಾನಾದ ಮಾಡುವ ಕ್ರಮವಿದೆಯಷ್ಟೆ- ಅವಕ್ಕೆಲ್ಲ ಹೊಸವೇ ಅರ್ಥಗಳು ಹೊಳೆಯತೊಡಗಿದವು.

ನಮ್ಮ ಲೋಕ ಸಂಸಾರಕ್ಕೆ ಮಾದರಿಯಾಗಬಲ್ಲ ಸಂಸಾರವೊಂದು ಮೇಲಿದೆ. ಅದು ಶಿವನದ್ದು. ಶಿವೆ ತನ್ನ ಮಗನೊಡನೆ ಚೌತಿ ಹಬ್ಬದಂದು ತವರು ಮನೆಗೆ ಬರುವಳು. ಅದು ನಮ್ಮ ಊರು. ಶಿವನೋ, ಅವನಿಗೆ ಇದೇ ನೆಲೆ ಎಂಬುದಿಲ್ಲ. ಆದರೂ ಅವನು ಗಿರಿಜೆಗೆ, ಮನೆಗೆ ಬಂದಾಗಲೆಲ್ಲ ಹೇಳುವುದುಂಟು- ಗೌರೀ, ನಾನಿನ್ನು ಇಲ್ಲೇ ಇದ್ದು ಬಿಡುತ್ತೇನೆ, ಎಲ್ಲಿಗೂ ಹೋಗುವುದಿಲ್ಲ. ಅವಳಿಗೂ ಗೊತ್ತು, ಇದು ನಿಜವಲ್ಲ. ಇಲ್ಲಿರುವೆ ಎನ್ನುತ್ತಲೇ ನೀನು ಎಲ್ಲೆಲ್ಲೋ ಇರುವೆ ಎನ್ನುವಳು ಗೌರಿ.

ನನ್ನ ಮಡದಿ ಊರಿಗೆ ಹೋದ ದಿನ ರಾತ್ರಿ ಅವನು ನನ್ನೊಡನೆ ಇದ್ದು ನಾನು ಮಾಡಿದ ತಿಂಡಿ, ತೀರ್ಥ ಸ್ವೀಕರಿಸಿ ಮರುದಿನ ಭಸ್ಮ, ತ್ರಿಶೂಲ ಧರಿಸಿ ಹಾರಿಹೋದನು. ಇನ್ನೊಂದು ದಿನ ಚಹಾಕ್ಕೆ ಕಾಮಧೇನುವಿನ ಹಾಲು ತರುವುದಾಗಿ ಹೇಳಿ ಹೋಗಿದ್ದಾನೆ. ಇನ್ನೂ ಬಂದಿಲ್ಲ. ಸೈಕಲ್ ರಿಕ್ಷಾ, ಸ್ಕೂಟರು, ಕಾರುಗಳು ನಂದಿಯ ಅವತಾರಗಳಂತೆ ಕಂಡರೆ, ಹಾರ್ನು, ಬೆಲ್ಲು, ಹಾಡು, ಗದ್ದಲಗಳೂ ಅವನ ಢಮರುಗದ ಓಂಕಾರದಲ್ಲಿ ಲೀನವಾಗಿ ಹೋಗಿವೆ.

ವಿಶ್ವದ ಎಲ್ಲಾ ರಸ್ತೆಗಳೋಟ ಸುಡುಗಾಡಿನ ಕಡೆಗೆ! ಅದೇ ಅವನ ನಿವಾಸ! ಮಗನೊಡನೆ ವಿರಾಮವಾಗಿ ಕುಳಿತು ಸೃಷ್ಟಿಯೆಲ್ಲವನ್ನೂ ತೋರಿಸಿ, ಮಗ `ಚೆನ್ನಾಗಿದೆ' ಎಂದಾಗ, ನಾನೇ ನರ್ಮಿಸಿದ್ದು ಕಣೋ ಎನ್ನುವ ಹೆಮ್ಮೆಯ ಮಾತಾಡುವ ಗೃಹಸ್ಥನವನು. ರೂಪ, ಅರೂಪಗಳು ಅವನ ಸಹಜ ಸ್ಥಿತಿಗಳು. ಭಕ್ತರ ಪೂಜೆಗಳನ್ನು ಸ್ವೀಕರಿಸುವ ಅವನೂ ಕಣ್ಣು ಮುಚ್ಚಿ ಧ್ಯಾನಾಸಕ್ತನಾಗಿ ಕುಳಿತುಬಿಡುವುದುಂಟು. ಅವನು ಇನ್ಯಾರನು ಕುರಿತು ತಪಗೈಯುವನೋ!
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ! ಎಂದು ಬಸವಣ್ಣ ಅವನನ್ನು ನೋಡಿ ನಕ್ಕರು.

ಇಂಥ ಹಾಸ್ಯ ವಿನೋದದ ನುಡಿಗಳನ್ನು ಕೇಳಿ ನಗಲು ಅವನು ಸದಾಸಿದ್ಧ. ಇಂಥ ದೇವರನ್ನು ಪಡೆಯಲೂ ಪುಣ್ಯ ಬೇಕು! ವ್ರತ, ಪೂಜೆ, ಉಪವಾಸಗಳೆಂದು ಬಳಲಿಸದೆ, ಲೋಕದ ರುಚಿಗಳನ್ನು ಕಳೆದುಕೊಳ್ಳದೆ, ಅದೇ ಕ್ಷಣದಲ್ಲಿ ಅತಿವ್ಯಾಮೋಹಿಯೂ ಆಗದೆ, `ಅಂಟಿಕೊಳ್ಳದೆ' ಬದುಕಬಲ್ಲ ಬಗೆಯನ್ನು ಶಿವ ತೋರಿಸುತ್ತಿದ್ದಾನೆ. ಅವನ ಒಡನಾಟದಲ್ಲಿ ಸುಖವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.