‘ಬಿಸಿಲು’ ಎಂಬ ಮೂರು ಅಕ್ಷರದ ಕನ್ನಡ ಪದವನ್ನು ಬಾಯಿಮಾತಿನಲ್ಲಿ ಕೇಳಲು, ಓದಲು ಬಲು ಚಂದ. ಬೆಳಗಿನ ಜಾವದಲ್ಲಿ ಸೂರ್ಯ ಮೂಡುವ ವೇಳೆಯ ಕಂದು ಬಣ್ಣದ ಬಿಸಿಲಿಗೆ ‘ಎಳೆಬಿಸಿಲು’ ಎನ್ನುತ್ತೇವೆ. ಸೂರ್ಯಾಸ್ತದ ಸಮಯದಲ್ಲಿ ಕಾಣುವ ಬಿಸಿಲನ್ನು ‘ಹೂಬಿಸಿಲು’ ಎನ್ನುತ್ತೇವೆ. ಚಳಿಗಾಲಕ್ಕಿಂತ ಮೊದಲು ನಡುಹಗಲನ್ನು ದಾಟಿ ಕಾಣುವ ಬಿಸಿಲನ್ನು ‘ಮಾಗಿಬಿಸಿಲು’ ಎನ್ನುತ್ತೇವೆ.

ಚಳಿಗಾಲದ ಚಳಿಯನ್ನು ಮೈಮನಸ್ಸಿನಿಂದ ಓಡಿಸುವ ಬಿಸಿಲನ್ನು ‘ಚುರುಚುರು ಬಿಸಿಲು’ ಎನ್ನುತ್ತೇವೆ. ಮನೆಜಂತೆಯ ಗವಾಕ್ಷಿ ಮುಚ್ಚಿದರೂ ತೂತುಗಳಿಂದ ಬಿಸಿಲು ಒಳಗೆ ಇಳಿದು ಕಾಣುವುದನ್ನು ‘ಬಿಸಿಲಕೋಲು’ ಎನ್ನುತ್ತೇವೆ. ಬೇರೆ ಬೇರೆ ಪ್ರಾಂತಗಳಲ್ಲಿ ಸ್ಥಳೀಯವಾಗಿ ಹೊತ್ತಿಗೊಂದು ದೇಶಿಯ ಹೆಸರನ್ನು ಹೊಂದಿರುವ ಬಿಸಿಲು ಪಡೆದಿರುವ ಎಲ್ಲ ಪದಗಳೂ ಸೃಜನಾತ್ಮಕವಾಗಿವೆ.

ಅನ್ನಲು, ಕೇಳಲು ಈ ಎಲ್ಲ ಪದಗಳು ಮುದ ನೀಡುತ್ತವೆ. ಆದರೆ ಈಗ (ತಾತ್ಕಾಲಿಕವಾಗಿ) ಈ ಅನೇಕ ಬಿಸಿಲುಗಳನ್ನು ಮರೆಯಾಗಿಸಿ ಬಿಸಿಲು ಈಗ ಜನರ ಬಾಯಲ್ಲಿ ‘ಉರಿಬಿಸಿಲು’, ‘ಬೆಂಕಿಬಿಸಿಲು’, ‘ಕೊಳ್ಳಿಬಿಸಿಲು’, ‘ಕೆಂಡಬಿಸಿಲು’ ಎಂಬ ನಾನಾ ಹೆಸರುಗಳನ್ನು ಹೊತ್ತು ಅಪರಾಧಿ ಸ್ಥಾನದಲ್ಲಿ ನಿಂತಿದೆ.

ಸರಿಯಾಗಿ ಈ ವರ್ಷ ಶಿವರಾತ್ರಿಗೇ ಶಿವಶಿವ ಅನ್ನುವಂತಾಯಿತು, ಬಿಸಿಲಿನ ರುಚಿ. ಶಿವರಾತ್ರಿಯಿಂದ ಸುರಿಯಲು ನಿಂತ ಬಿಸಿಲು 44ರಿಂದ 45 ಡಿಗ್ರಿ ಸೆಲ್ಷಿಯಸ್ ಸರಾಸರಿ ನಮ್ಮ ಪ್ರಾಂತ್ಯದಲ್ಲಿದೆ. ಹಂಪಿಯ ನಮ್ಮ ಕನ್ನಡ ವಿ.ವಿ.ಯ ಕ್ಯಾಂಪಸ್ ಸಾವಿರಾರು ಗಿಡಮರಗಳಿಂದ ತುಂಬಿದ್ದರೂ ಈ ವರ್ಷ ನಡುಹಗಲು ಹನ್ನೆರಡು ಗಂಟೆಯಿಂದ ಬಿಸಿಲನ್ನು ಸಹಿಸುವುದೇ ಅಸಾಧ್ಯವಾಯಿತು.

ಸಂಜೆ ಕ್ಯಾಂಪಸ್ಸಿನಿಂದ ಬೈಕಿನಲ್ಲಿ ಮನೆಗೆ ಹೊರಟರೆ ಬಿಸಿಲಿನಲ್ಲಿ ಕಾಯ್ದ ಗಾಳಿ ಮುಖಕ್ಕೆ ಬಿಸಿಯಾಗಿ ಬಡಿಯುತ್ತಿತ್ತು. ಬಿಸಿಲ ಪ್ರದೇಶವೆಂದು ನಮ್ಮ ಭಾಗದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಕಚೇರಿಗಳ ಕೆಲಸದ ಸಮಯ ಬೆಳಗಿನ ಎಂಟು ಗಂಟೆಯಿಂದ ನಡುಹಗಲು ದಾಟುವ ಹೊತ್ತಿನವರೆಗೆ. ಆದರೆ ಬಿಸಿಲು ಬೆಂಕಿಯಾಗುವುದೇ ಎಂಟು ಗಂಟೆಯಿಂದ. ಸಿಬ್ಬಂದಿಗಳು ಕಚೇರಿಗಳನ್ನು ಸೇರಿಕೊಳ್ಳುವುದೇ ‘ಉಶ್’ ಎನ್ನುತ್ತ ಬೆವರು ಒರೆಸಿಕೊಳ್ಳುತ್ತಲೇ. ಒದ್ದೆಯಾದ ಬಟ್ಟೆಯೊಳಗಿನ ಮೈಹೊತ್ತುಕೊಂಡು ಬಂದು ಫ್ಯಾನ್ ಗಾಳಿಗೆ ಐದ್ಹತ್ತು ನಿಮಿಷ ಗರ ಬಡಿದವರಂತೆ ಕೂತುಬಿಡುತ್ತಾರೆ.

ಸರ್ಕಾರದ, ಕೆಪಿಟಿಸಿಎಲ್ ಕೃಪೆಯಿಲ್ಲದೆ ಕರೆಂಟು ಹೋಗಿ, ಫ್ಯಾನ್ ತಿರುಗದಿದ್ದರೆ ಕಚೇರಿ ಸಿಬ್ಬಂದಿಯ ಅವಸ್ಥೆ ದೇವರೇ ಬಲ್ಲ. ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರ ಗತಿ ಇನ್ನೂ ಕೆಟ್ಟದು. ಐದು ನಿಮಿಷಕ್ಕೆ ಆಗುವ ಕೆಲಸಕ್ಕೆ ಐದು ದಿನ ತಿರುಗುವ ಗ್ರಹಚಾರ ತಪ್ಪುವುದಿಲ್ಲ. ನಮ್ಮ ಕಡೆಯ ಜನರು ‘ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗುವುದರಲ್ಲಿ ಕುರಿ, ಕೋಣ, ಕೋಳಿ ಬೀಳ್ತವ್ರಿಯಪ್ಪ’ ಅನ್ನುತ್ತಾರೆ.

ಬಿಸಿಲಿನ ಧಗೆ ತಡೆಯದೆ, ಬೆವರುವ ದೇಹವನ್ನು ತಂಪಾಗಿಸಲು ರಸ್ತೆ ಬದಿಯಲ್ಲಿ ಮಾರುವ ಸೋಡ, ಲಿಂಬುರಸ, ಶರಬತ್ತು, ಐಸ್‌ಕ್ರೀಮ್ ಮುಂತಾದ ಪಾನೀಯಗಳನ್ನು ಸೇವಿಸಿ ಮತ್ತಷ್ಟು ಧಗೆಯನ್ನೇ ಕೊಂಡುಕೊಳ್ಳುತ್ತಾರೆ. ಮನೆಯಿಂದ ನೀರು ತಂದು ಕುಡಿದು ಬಿಸಿಲಿನ ಬೇಗೆಯನ್ನು ತಡೆದುಕೊಳ್ಳುವ ಹುಷಾರಿತನ ನಮ್ಮ ಕಡೆಯ ಮಂದಿಗಿರುವುದಿಲ್ಲ.

ಇನ್ನೂ ಭೀಕರವೆಂದರೆ, ನಮ್ಮ ಪ್ರಾಂತದಲ್ಲಿ ಯಾವುದೇ ಹಳ್ಳಿ, ತಾಲ್ಲೂಕು, ಜಿಲ್ಲೆಗಳಲ್ಲಿ ಸಂಜೆಯಾದರೆ ಸಾಕು ಓಣಿಗೆ ನಾಲ್ಕು ಮಿರ್ಚಿ, ಭಜಿ, ವಡೆ ಕರಿಯುವ ಕಡಾಯಿಗಳು ಕಾಣಿಸಿಕೊಳ್ಳುತ್ತವೆ. ಮೆಣಸಿನಕಾಯಿ, ಬದನೇಕಾಯಿ, ಟೊಮ್ಯಾಟೊ ಮುಂತಾದ ಭಜಿಗಳನ್ನು ಉರಿ ಬಿಸಿಲಿಗೆ ಬಳಲಿದವರೆಲ್ಲ ಪರಿಹಾರ ಎಂಬಂತೆ ತಿನ್ನದಿದ್ದರೆ ಜನರಿಗೆ ರಾತ್ರಿ ಸುಖನಿದ್ದೆ ಬರುವುದಿಲ್ಲವೋ ಏನೋ!

ಎಣ್ಣೆಯಲ್ಲಿ ಕರಿಯುವ ಒಂದೊಂದು ಮಿರ್ಚಿ ಕಡಾಯಿಗಳ ಮುಂದೆ ಜನ ಮುಕ್ಕರಿರುತ್ತಾರೆ. ಓಣಿಗೆ ನಾಲ್ಕು ಅಂಗಡಿಗಳಿದ್ದರೂ ಸಾಲುವುದಿಲ್ಲ. ಮಿರ್ಚಿ ಕರಿಯುವವರೇ ಬೇಸರಪಟ್ಟು ಅಂಗಡಿ ಮುಚ್ಚುತ್ತಾರೆ.

ರಣಬಿಸಿಲಿನಲ್ಲಿಯೇ ಮದುವೆಗಳು, ಜಾತ್ರೆಗಳು ನಡೆಯುವುದು ಜಾಸ್ತಿ. ಜಯಂತಿಗಳು, ಸಾಹಿತ್ಯ, ಕಲೆಯ ಸಂಬಂಧಿ ಕಾರ್ಯಕ್ರಮಗಳ ಭರಾಟೆ ಈ ಉರಿಬಿಸಿಲಿನಲ್ಲಿ. ನಿಗಿನಿಗಿ ಬಿಸಿಲಿಗೂ ಮದುವೆ, ಚುನಾವಣೆ, ಜಾತ್ರೆಗಳಿಗೆ ಏನೋ ಬಿಡದ ನಂಟಿದೆ! ನಮ್ಮ ಪ್ರಾಂತದಲ್ಲಿ ನಡೆಯುವ ಮದುವೆಗಳು ಸುಧಾರಿಸಿಲ್ಲ. ಇನ್ನೂ ನೂರಕ್ಕೆ ಎಪ್ಪತ್ತು ಮದುವೆಗಳು ನಡೆಯುವುದು ಗುಡಿಗಳಲ್ಲೇ.

ತಮ್ಮ ತಮ್ಮ ಮನೆದೇವರ ದೇವಸ್ಥಾನಗಳಲ್ಲೇ ಮದುವೆಗಳನ್ನು ನಡೆಸುತ್ತಾರೆ. ತಮ್ಮ ಊರುಗಳಿಂದ ಗೊತ್ತು ಮಾಡಿದ ದೇವಸ್ಥಾನಗಳಿಗೆ ಊರಮಂದಿಯನ್ನು, ಬೀಗರು–ಬಿಜ್ಜರನ್ನು ಕರೆದುಕೊಂಡು ಹೋಗುವುದು ಲಾರಿ, ಟ್ರ್ಯಾಕ್ಟರ್, ವ್ಯಾನ್, ಬಂಡಿಗಳಲ್ಲಿ. ತೆರೆದ ವಾಹನಗಳಲ್ಲಿ ಮದುವೆಗೆ ಜನರನ್ನು ತುಂಬಿಕೊಂಡು ಉರಿಬಿಸಿಲಿನಲ್ಲಿ ಪ್ರಯಾಣಿಸುತ್ತಾರಲ್ಲ, ಈ ಪ್ರಯಾಣವನ್ನು ಅನುಭವಿಸಿಯೇ ಸವಿಯಬೇಕು.

ಹೆಂಗಸರು, ಗಂಡಸರು, ವಯಸ್ಸಾದವರು, ಮಕ್ಕಳು– ಲಾರಿಯಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಆಡು, ಕುರಿಗಳಂತೆಯೇ ತುಂಬಿರುತ್ತಾರೆ. ಧಗೆಗೆ ಮಕ್ಕಳು ಒದರುತ್ತಿರುತ್ತವೆ. ತಾಯಂದಿರಿಗೋ ಮದುವೆಗೆ ಹೋಗುವ ಖುಷಿ. ಇಂಥ ಮದುವೆ ಪ್ರಯಾಣಗಳನ್ನು ನಿಷೇಧಿಸಲಾಗಿದೆ. ಮುರಿದು ಮದುವೆ ಮಾಡುವುದೇ ನಮ್ಮವರಿಗೆ ಸುಖ. ಮದುವೆಗಳ ಕಾಲದಲ್ಲಿ ಯಾವ ಹಳ್ಳಿಗಳಲ್ಲಿ, ನಗರಗಳಲ್ಲಿ ನೋಡಿದರೂ ಲಾರಿ, ಟ್ರ್ಯಾಕ್ಟರ್, ವ್ಯಾನ್ ಮತ್ತು ಬಂಡಿಗಳಲ್ಲಿ ಮದುವೆಗೆ ಪ್ರಯಾಣಿಸುವ ದೃಶ್ಯಗಳು ಕಾಣುವುದು ಸಹಜ.

ಈ ಪ್ರಯಾಣ ಸುರಕ್ಷಿತವಲ್ಲವೆಂದು ಎಲ್ಲರಿಗೂ ಗೊತ್ತು. ಅಪಘಾತಗಳಾಗಿ ದುರಂತ ಸಂಭವಿಸಿರುವ ಅನುಭವಗಳಿದ್ದರೂ ದೇವರ ಮೇಲೆ ಭಾರ ಹಾಕಿಬಿಡುತ್ತಾರೆ. ಹಾಗೆ ನೋಡಿದರೆ ಬಂಡಿಗಳೇ ಸುರಕ್ಷಿತ ಅನ್ನಬೇಕು. ಸರ್ಕಾರಿ ಬಸ್ಸುಗಳು ಬಾಡಿಗೆಗೆ ಸಿಗುತ್ತವೆ. ಅವುಗಳಿಗಿರುವ ನಿಯಮಗಳಿಂದ ಮತ್ತು ಆರ್ಥಿಕ ಭಾರ ಜಾಸ್ತಿಯಾಗುವುದರಿಂದ ಬಡವರು ಸರ್ಕಾರಿ ಬಸ್ಸುಗಳ ಗೋಜಿಗೆ ಹೋಗುವುದಿಲ್ಲ.

ಇನ್ನು ಜಾತ್ರೆಗಳ ಸಂಭ್ರಮ ಬೇರೆ ತೆರನಾದುದು. ನಮ್ಮ ಕಡೆ ಊರಿಗೊಂದು ಜಾತ್ರೆ. ಇವು ಶುರುವಾಗುವುದೇ ಉರಿ ಬೇಸಿಗೆಯಲ್ಲಿ. ಜಾತ್ರೆ ಎಂದರೆ ತೇರೆಳೆಯುವುದನ್ನು ನೋಡಿ ಕಾಯಿ, ಹಣ್ಣು, ಉತ್ತತ್ತಿ ಎಸೆದು ಬರುವುದಷ್ಟೇ ಅಲ್ಲ! ಜಾತ್ರೆಗಳೆಂದರೆ ಬಯಲ ಮಾಲ್‌ಗಳು! ಅಲ್ಲಿ ನಾನಾ ವ್ಯಾಪಾರಗಳು ನಡೆಯುತ್ತವೆ. ಕಾಲು ಶತಮಾನದ ಹಿಂದೆ (ಕೆಲವು ಕಡೆ ಈಗಲೂ) ಹಳ್ಳಿಗರು ತಮ್ಮ ವರ್ಷದ ವ್ಯಾಪಾರವನ್ನು, ಕೊಡುಕೊಳ್ಳುವುದನ್ನು ಮಾಡುವುದೇ ಈ ಜಾತ್ರೆಗಳಲ್ಲಿ. ಕೆಲವು ಜಾತ್ರೆಗಳು ಕೆಲವೊಂದು ವ್ಯಾಪಾರಗಳಿಗಾಗಿ ವಿಶೇಷವಾಗಿರುತ್ತವೆ.

ಬಳೆ, ಹೇರ್‌ಪಿನ್, ರಿಬ್ಬನ್‌ಗಳಿಂದ ಹಿಡಿದು ಕೂದಲುಗಳಿಂದ ಮಾಡಿದ ಜಡೆ ಗೊಂಡೆಗಳವರೆಗೆ; ಪಾತ್ರೆ ಪಗಡೆಗಳಿಂದ, ಉಡುಗೆ ತೊಡುಗೆಗಳಿಂದ ಹಾಸಿ ಹೊದೆಯುವ ಗುಡಾರ, ಜಮಖಾನ, ಕಂಬಳಿವರೆಗೆ; ವಿಭೂತಿ ರುದ್ರಾಕ್ಷಿಗಳಿಂದ ಉಡುದಾರಗಳವರೆಗೆ; ಆಟದ ಸಾಮಾನುಗಳ ಪ್ಲಾಸ್ಟಿಕ್ ಲೋಕವೇ ಜಾತ್ರೆಯಲ್ಲಿ ಒಡೆದು ಕಾಣುತ್ತವೆ. ಶ್ರೀಶೈಲದ ಜಾತ್ರೆಗೆ ಹೋದವರು ಆಕರ್ಷಕ ಬಡಿಗೆಗಳನ್ನು ಕೊಂಡು ತರುತ್ತಾರೆ.

ದನಗಳ ಜಾತ್ರೆಗಳಂತೂ ಉರಿಬಿಸಿಲಿನಲ್ಲಿ ತಿಂಗಳಾನು ತಿಂಗಳು ನಡೆಯುತ್ತವೆ. ಎತ್ತುಗಳನ್ನು ಕೊಂಡು ತರುವುದಿದ್ದರೆ ರೈತರು ಜಾತ್ರೆಯಲ್ಲಿ ವಾರ ಹದಿನೈದು ದಿನವಿರುವುದರಿಂದ, ಹೋಗಿ ಮೊದಲು ಟೆಂಟ್ ಹೊಡೆಯುತ್ತಾರೆ. ಮನೆಯ ಯಜಮಾನರು, ಆಳುಗಳು, ಎತ್ತುಗಳ ಸುಳಿ ನೋಡುವ ಪರಿಣತರು, ಅಡುಗೆ ಮಾಡುವ ಗಂಡಸರು ಎಲ್ಲ ಸೇರಿಕೊಂಡು ಜಾತ್ರೆಯಲ್ಲಿ ತಳ ಊರುತ್ತಾರೆ.

ನಿತ್ಯ ಅವರ ಕೆಲಸವೆಂದರೆ ಮಾರಲು ಬಂದಿರುವ ಎತ್ತುಗಳ ಸುಳಿಗಳನ್ನು ಪರೀಕ್ಷಿಸುತ್ತ, ನಡುನಡುವೆ ಅಡುಗೆ ಮಾಡಿಕೊಂಡು ಉಂಡು ಕಾಲ ಕಳೆಯುವುದು. ಜಾತ್ರೆ ಮುಗಿಯುತ್ತ ಬಂದರೆ ಖರೀದಿಗಳ ಭರಾಟೆ ಜಾಸ್ತಿ. ಕೊಂಡ ಎತ್ತುಗಳನ್ನು ಊರಲ್ಲಿ ಮೆರವಣಿಗೆ ಮಾಡುವುದು ಇನ್ನೂ ಜೋರು.

ಇದೆಲ್ಲವೂ ನಡೆಯುವುದು ಉರಿಬಿಸಿಲಲ್ಲಿಯೇ! ಈಗಲೂ ಈ ಜನರು ಉರಿಬಿಸಿಲು, ಕೊಳ್ಳಿಬಿಸಿಲಿನಲ್ಲಿಯೇ ಮದುವೆ, ಜಾತ್ರೆಗಳಲ್ಲಿ ಉಮೇದಿಯಿಂದ ಪಾಲ್ಗೊಳ್ಳುವುದನ್ನು ನೋಡಿದರೆ ಬೆರಗಾಗುತ್ತದೆ. ಆದರೂ ವಾಂತಿ, ಭೇದಿಗೆ ಬಲಿಯಾಗಿ ಸತ್ತವರೂ ಇದ್ದೇ ಇರುತ್ತಾರೆ. ಸರ್ಕಾರ ಜಾತ್ರೆಗಳಲ್ಲಿ ಜನರಿಗೆ ನೀರು, ಔಷಧ ಒದಗಿಸಲು ಸಾಧ್ಯವಾಗುವುದಿಲ್ಲ. ಇನ್ನು ನೆರಳನ್ನು ಒದಗಿಸಲಾದೀತೆ?

ಈ ವರ್ಷ ಬಿಸಿಲು ಹೆಚ್ಚಲಿಕ್ಕೆ ಕಾರಣಗಳನ್ನು ಪರಿಸರ ತಜ್ಞರು ಮೇಲಿಂದ ಮೇಲೆ ಹೇಳುತ್ತಲೇ ಬಂದಿದ್ದಾರೆ. ಸಾಮಾನ್ಯರಾದ ನಮ್ಮ ಕಣ್ಣಿಗೆ ಸಾಕಷ್ಟು ಕಾರಣಗಳು ಕಾಣುತ್ತವೆ. ಹಳ್ಳಿ, ಹೋಬಳಿ, ಪಟ್ಟಣ, ತಾಲ್ಲೂಕು, ಜಿಲ್ಲಾಕೇಂದ್ರಗಳಲ್ಲಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಹಳೆಮರಗಳನ್ನು ಕಡೆದಿದ್ದೆಷ್ಟು?

ಗ್ರಾಮೀಣ ರಸ್ತೆಗಳೆಂದು ಅಲ್ಲಿರುವ ಮರಗಳನ್ನು ಕಡಿಯುವುದು ನಡೆಯುತ್ತದೆಯೇ ಹೊರತು ಮತ್ತೆ ಗಿಡ ನೆಡುವುದು ತೀರಾ ಕಮ್ಮಿ. ರಿಂಗ್‌ರೋಡ್ ಕಲ್ಪನೆ ಬಂದ ಮೇಲೆ ಪಟ್ಟಣ, ನಗರಗಳಲ್ಲಿ ಊರನ್ನು ಮಧ್ಯ ಮಾಡಿಕೊಂಡು ಊರ ಸುತ್ತ ಸುತ್ತುವ ಜೋಡಿ ರಸ್ತೆಗಳ ನಿರ್ಮಾಣವೋ ಅಗಲೀಕರಣವೋ ನಡೆಯುತ್ತಿದೆ. ಎಲ್ಲ ಊರುಗಳಲ್ಲಿ ಅಂದರೆ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಊರ ಅಂಚಿನಲ್ಲಿ ಮೂರೋ ನಾಲ್ಕೋ ದಶಕಗಳಿಂದ ಬೆಳೆದು ನಿಂತ ಮರಗಳನ್ನು ಕಡಿಯಲಾಗಿದೆ.

ರಸ್ತೆಗಳ ಅಗಲೀಕರಣದ ನೆಪದಲ್ಲಿ ಗಿಡಮರಗಳು ನಾಶವಾಗಿವೆ. ಕಟ್ಟಡಗಳೂ ಉರುಳಿವೆ. ಅಗಲೀಕರಣಗೊಂಡ ರಸ್ತೆಗಳ ಅಂಚಿನಲ್ಲಿ ಗಿಡಗಳನ್ನು ನೆಡಲು ಜಾಗವೇ ಇಲ್ಲ. ಕಾಲುದಾರಿಯಷ್ಟು ಮಣ್ಣಿನ ಜಾಗವೇ ಇಲ್ಲದ್ದರಿಂದ ಗಿಡಗಳನ್ನು ನೆಡಲಾಗುವುದಿಲ್ಲ. ಸರ್ಕಾರ ತೋರಿಕೆಗೆ ಗಿಡ ನೆಡುವ ಶಾಸ್ತ್ರ ಮಾಡುತ್ತಿದೆ. ಕಳೆದ ಅರ್ಧ ದಶಕದಿಂದ ರಿಂಗ್‌ರೋಡಿನ ಕಲ್ಪನೆ, ಊರು ಪಟ್ಟಣಗಳಲ್ಲಿ ರಸ್ತೆ ಅಗಲೀಕರಣದಿಂದ ಉರುಳಿದ ಗಿಡಮರಗಳಿಗೆ ಲೆಕ್ಕ ಇಟ್ಟವರಾರು?

ಪಶು–ಪಕ್ಷಿ, ಪ್ರಾಣಿಸಂಕುಲ ಎಲ್ಲಿಗೆ ಹೋಗಿ ವಾಸ ಮಾಡಬೇಕು? ಗಿಡಮರಗಳಿಲ್ಲದ ಊರುಗಳಲ್ಲಿ ಬರೀ ಮನೆಗಳಿದ್ದರೆ ಮನುಷ್ಯ ವಾಸಿಸಲು ಸಾಧ್ಯವೇ? ಈಗೀಗ ಹಳ್ಳಿಗಳಲ್ಲಿ ಮಣ್ಣಿನಮನೆಗಳೇ ಮಾಯವಾಗಿವೆ. ಮಣ್ಣಿನಮನೆಗಳು ತಂಪು. ಆದರೆ ನಮ್ಮ ಹಳ್ಳಿಗರಿಗೂ ಅಂಕಣಗಳ ಮನೆ ಬೇಡವಾಗಿದೆ. ಬೆಡ್‌ರೂಮ್‌ಗಳ ಸಿಮೆಂಟಿನ ಮನೆಗಳೇ ಬೇಕು. ಈ ಸಿಮೆಂಟಿನ ಮನೆಗಳ ಹಾವಳಿಯಿಂದ ಬಿಸಿಲು ತಡೆಯಲು ಸಾಧ್ಯವಾಗುತ್ತಿಲ್ಲ.

ಹೊಸಪೇಟೆಯಿಂದ ಹಂಪೆಗೆ ಹೋಗುವ ಕಮಲಾಪುರದ ರಸ್ತೆ ಅಗಲೀಕರಣಕ್ಕೆ ಒಳಗಾಗಿ ಸುಮಾರು 10 ಕಿ.ಮೀ. ದಾರಿಯುದ್ದಕ್ಕೂ ಮೂರು ನಾಲ್ಕು ದಶಕಗಳಿಂದ ಇದ್ದ ಮರಗಳನ್ನು ಕಡಿಯಲಾಯಿತು. ರಸ್ತೆಯೇನೋ ಅಗಲವಾಯಿತು. ಟಾರ್‌ರಸ್ತೆ ಈ ಬಿಸಿಲಿಗೆ ಕಾಯ್ದು ರಣರಣ ಅನ್ನುತ್ತಿದೆ. ದನಕರುಗಳು ನಡೆದು ಹೋಗಲು ಅಂಜುವಷ್ಟು ರಸ್ತೆ ಸುಡುತ್ತಿರುತ್ತದೆ.

ತಾಲ್ಲೂಕು ಕೇಂದ್ರಗಳಲ್ಲಿ ಹೊಸ ಬಡಾವಣೆಗಳನ್ನು ನೋಡಬೇಕು. ಬಿಸಿಲಿಗೆ ಸುಡುಗಾಡುಗಳಂತೆ ಭೀಕರವಾಗಿ ಕಾಣುತ್ತವೆ. ಬಡಾವಣೆಗಳ ರಸ್ತೆಗಳು ಮೊದಲೇ ಚಿಕ್ಕವು. ಬಡಾವಣೆಗಳನ್ನು ಮಾಡುವವರು ತಮ್ಮ ಸೈಟ್‌ಗಳ ಆಕರ್ಷಣೆಗಾಗಿ ಗಿಡಗಳನ್ನು ನೆಡಿಸಿರುತ್ತಾರೆ. ಆದರೆ, ಸೈಟ್ ಕೊಂಡು ಮನೆ ಕಟ್ಟಿಸುವವರು ಮಾಡುವ ಮೊದಲ ಕೆಲಸವೆಂದರೆ, ಸೈಟ್ ಮುಂದಿನ ಚಿಕ್ಕಮರಗಳನ್ನು ಕಡಿಸುವುದು.

ಸೈಟ್‌ಗಳ ಮುಂದೆ ಇರುವ ಚಿಕ್ಕರಸ್ತೆಯನ್ನು ಒತ್ತಿ ಮನೆಯ ಗೇಟನ್ನು ಇಡುವುದು. ರಸ್ತೆ ಒತ್ತಿದರೆ ದಾರಿ ಉಳಿಯುವುದಿಲ್ಲ. ದಾರಿ ದೊಡ್ಡದು ಮಾಡಲು ಅಷ್ಟಿಷ್ಟು ಬೆಳೆದಿರುವ ಗಿಡಗಳನ್ನು ಕಡಿಯುವುದು. ಎದುರಿಗೆ ಕಾರು ಬಂದರೆ, ಇನ್ನೊಂದು ಕಾರಿಗೆ ಹಾಯ್ದು ಹೋಗಲು ರಸ್ತೆಯೇ ಇರುವುದಿಲ್ಲ.

ಇನ್ನೂ ದುರಂತವೆಂದರೆ ಮನೆಯಲ್ಲಿ ಕಾರು ನಿಲ್ಲಿಸಿಕೊಳ್ಳಲು ಜಾಗ ಮಾಡಿಕೊಂಡಿರುವುದಿಲ್ಲ. ಕಾರು ಕೊಳ್ಳುವುದನ್ನು ಬಿಡುವುದಿಲ್ಲ. ಕೊಂಡುತಂದ ಕಾರನ್ನು ತಮ್ಮ ಮನೆಯ ಮುಂದಿನ ಚಿಕ್ಕರಸ್ತೆಯಲ್ಲೇ ನಿಲ್ಲಿಸಿಕೊಳ್ಳುತ್ತಾರೆ. ಹೋಗುವ ಬರುವ ಇತರರ ವಾಹನಗಳಿಗೆ ದಾರಿಯಿರುವುದಿಲ್ಲ. ನಿತ್ಯ ಜಗಳಗಳು ಸಾಮಾನ್ಯ.

ಇನ್ನೊಂದು ಅನುಭವವಿದೆ. ಈ ಉರಿಬಿಸಿಲಲ್ಲಿ ಬೀದಿ ದನಕರುಗಳು ಬಿಸಿಲಿಗೆ ಬಸವಳಿದು ಚಿಕ್ಕಮರ ಕಂಡರೆ ಬಂದು ಮಲಗುತ್ತವೆ. ಕಾರಿನ ಮಾಲೀಕರು ಮಲಗಿದ ದನಕರಗಳನ್ನು ಬಡಿದು ಓಡಿಸಿ, ತಮ್ಮ ಅಮೂಲ್ಯ ಕಾರನ್ನು ಗಿಡದ ನೆರಳಿಗೆ ನಿಲ್ಲಿಸಿ ಖುಷಿ ಪಡುತ್ತಾರೆ. ಕೆಲವು ದನಗಳು ಬೇಗ ಏಳುವುದಿಲ್ಲ. ಬಿಸಿಲಿಗಂಜಿ ಮರದ ನೆರಳಿಗೇ ಬಂದು ಮಲಗಿರುತ್ತವೆ. ಓಡಿಸಲು ಕೋಲುಗಳನ್ನು ಇಟ್ಟುಕೊಂಡಿರುತ್ತಾರೆ, ಕಾರಿನ ಭೂಪರು.

ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರು ಬಿಸಿಲಿಗಂಜಿ ನೆರಳಿಗೆ ಗಾಡಿ ನಿಲ್ಲಿಸಲು ಗಿಡದ ನೆರಳುಗಳನ್ನು ಹುಡುಕುವ ಪರಿಸ್ಥಿತಿ ಬಂದಿದೆ. ನಡುಹಗಲಿನಲ್ಲಿ ಕೆಲವು ರಸ್ತೆಗಳು ಈ ಬಿಸಿಲಿಗೆ ಖಾಲಿಖಾಲಿ. ರಜೆ ಇದ್ದರೂ ಶಾಲಾಕಾಲೇಜಿನ ಮಕ್ಕಳು ಆಟವಾಡಲು ಮೈದಾನಕ್ಕೆ ಇಳಿಯಲು ಸಂಜೆ ಐದರತನಕ ಕಾಯುತ್ತಿವೆ.

ಇನ್ನು ಕರೆಂಟನ್ನು ನಂಬುವಂತಿಲ್ಲ. ಮನೆಯಿದ್ದರೇನು? ಮನೆಯಲ್ಲಿ ಫ್ಯಾನ್‌ಗಳು, ಎ.ಸಿ.ಗಳು, ಇನ್‌ವರ್ಟರ್ ಇದ್ದರೇನು ಬಂತು – ಕರೆಂಟು ಇಲ್ಲದಿದ್ದರೆ?

ಬಳ್ಳಾರಿ, ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ಹೆಚ್ಚಳಕ್ಕೆ ಇನ್ನೊಂದು ಕಾರಣ ಸೇರಿಕೊಂಡಿದೆ. ಕಳೆದ ವರ್ಷ ಮಳೆಯಿರಲಿಲ್ಲ. ತುಂಗಭದ್ರಾ ಡ್ಯಾಮ್ ತುಂಬಲಿಲ್ಲ. ಒಂದು ಬೆಳೆ ಬೆಳೆಯಲು ಮಾತ್ರ ನೀರು ಸಿಕ್ಕವು. ಎರಡನೆಯ ಬೆಳೆಗೆ ನೀರಿಲ್ಲ. ತುಂಗಭದ್ರಾ ಡ್ಯಾಮಿನಿಂದ ರಾಯಚೂರಿನವರೆಗೆ ಸುಮಾರು 200 ಕಿ.ಮೀ. ದೂರದ ದಾರಿಯುದ್ದಕ್ಕೂ ಅಗಲಕ್ಕೂ ಯಾವ ಬೆಳೆಯಿಲ್ಲ! ಖಾಲಿ ಖಾಲಿ ಹೊಲಗಳು. ಬಿಸಿಲಿಗೆ ಕಾಯ್ದು ಚಣಚಣ ಅನ್ನುತ್ತಿವೆ. ಬಸ್ಸಿನಲ್ಲಿ ಕುಳಿತು ಹೊರನೋಡಿದರೆ ಹಸಿರು ಕಾಣುವ ಬದಲು ಈ ವರ್ಷ ಬಿಸಿಲ್ಗುದುರೆಗಳು ಕಾಣುತ್ತಿವೆ.

ಹಗಲೋ ರಾತ್ರಿಯೋ ಯಾವಾಗಲೂ ಬಯಲೇ ಕಾಯ್ದಿರುತ್ತದೆ. ಬಯಲಿಗೆ ಬಂದರೆ ಗಾಳಿಯ ಅನುಭವವೇ ಆಗುವುದಿಲ್ಲ. ಅನೇಕ ತಾಸುಗಳವರೆಗೆ ನಿಂತು ನೋಡಿದರೆ ಎತ್ತೆತ್ತಲೂ ಬರೀ ಲ್ಯಾಂಡ್‌ಸ್ಕೇಪ್. ಬಯಲು ಕೂಡ ಉಸಿರುಗಟ್ಟಿ ನಿಂತಂತೆ ಕಾಣುತ್ತದೆ. ಇನ್ನು ಮನೆ, ಕಟ್ಟಡ, ರೈಲು, ಬಸ್ ನಿಲ್ದಾಣಗಳಲ್ಲಿ ಫ್ಯಾನ್ ಕೆಳಗಡೆ ಕುಳಿತರೆ ಬಿಸಿಗಾಳಿ ಮೈಯಿಗೆ ಸುರಿದ ಅನುಭವವಾಗುತ್ತದೆ.

ರಾತ್ರಿ ಮೈಯಿಗೆ ನೀರು ಹಾಕಿಕೊಂಡು ಮಲಗಬೇಕೆಂದರೂ ನೀರು ಬಿಸಿ ಇರುತ್ತವೆ. ಅತಿಯಾದ ಮಾತು ಎಂದರೂ ಪರವಾಗಿಲ್ಲ. ನಡುಹಗಲಿನಲ್ಲಿ ಕರೆಂಟು ಇಲ್ಲದಾಗ ಮೈಯಿಗೆ ನೀರು ಹಾಕಿಕೊಂಡು ತಂಪಾಗಬೇಕೆಂದು ಶವರ್‌ನಿಂದ ನೀರು ಬಿಟ್ಟರೆ ಒಂದೆರಡು ನಿಮಿಷಗಳ ಕಾಲ ನೀರು ಮೈಯಿಗೆ ಬೀಳುವ ಅನುಭವವೇ ಆಗುವುದಿಲ್ಲ.

ಮನೆಯ ಒಳಗಡೆ ಬಟ್ಟೆ ತೊಳೆದು ಒಣಗಲು ಹಾಕಿದರೆ ಹತ್ತು ನಿಮಿಷದಲ್ಲಿ ಒಣಗುತ್ತವೆ. ಅಷ್ಟೇ ಅಲ್ಲ, ಮನೆಯೊಳಗೆ ಒಣಗಲು ಹಾಕಿದ್ದರೂ ಬಿಸಿಲಿನ ಕಾವಿಗೆ ಬಟ್ಟೆಗಳ ಬಣ್ಣ ಮಾಸುತ್ತದೆ. ಬೆಂಗಳೂರು–ಮೈಸೂರಿನ ಅತಿಥಿಯೊಬ್ಬರು ‘ಮನೆಯಲ್ಲಿದ್ದರೂ ಈ ಬೇಸಿಗೆಯಲ್ಲಿ ಬಟ್ಟೆಗಳು ಬಣ್ಣ ಕಳೆದುಕೊಳ್ಳುತ್ತವೆ ನೋಡಿ’ ಎಂದರು.

ಬಯಲಲ್ಲಿರುವ ಪಕ್ಷಿಸಂಕುಲ, ಕೀಟಸಂಕುಲ, ಪ್ರಾಣಿಸಂಕುಲಗಳ ಗತಿಯೇನು? ನೀರೂ ಇಲ್ಲ, ನೆರಳೂ ಇಲ್ಲ. ಆಹಾರಕ್ಕೇನು ಮಾಡುತ್ತವೆ? (ಹೊಲಗಳಲ್ಲಿ ಕಾಳುಕಡಿಗಳ ಬೆಳೆಯೇ ಇಲ್ಲ) ಕೇಳಲು ಮನುಷ್ಯನಿಗೆ ಬಾಯಿದೆ. ಇವುಗಳಿಗೆ ಅದೂ ಇಲ್ಲ. ಹುಟ್ಟಿಸಿದ ದೇವರು... ಎಂದು ಸಮಾಧಾನಿಗಳಾಗಬೇಕೆ?

ಈ ಬಿಸಿಲು ಇನ್ನೂ ಏನೇನು ದಾಖಲೆ ಮಾಡುತ್ತದೋ ಸೂರ್ಯದೇವನಿಗೇ ಗೊತ್ತು. ಉರಿಬಿಸಿಲಿಗೆ, ರಣಬಿಸಿಲಿಗೆ ಬಸವಳಿದವರಲ್ಲಿ ಬಡವರು, ದಲಿತರು, ದುಡಿವ ಮಹಿಳೆಯರು, ಇವರ ಮಕ್ಕಳು ಸೇರಿರುತ್ತಾರೆ ಎಂಬುದು ಸತ್ಯ. ಕೆಲವು ಕಡೆ ಮಳೆಯೇ ಬರಲಿಲ್ಲ. ಆದರೆ, ಗುಡುಗು ಸಿಡಿಲಿಗೆ ಜೀವಗಳು ನೆಲಕ್ಕುರುಳಿದ ಉದಾಹರಣೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.