ರಾಜಾ ರವಿವರ್ಮ ಕರ್ನಾಟಕದ ಕಲಾವಿದ ಅಲ್ಲ ಮತ್ತು ಸಂಬಾನಂದ ಮೋನಪ್ಪ ಪಂಡಿತ್ (ಎಸ್.ಎಂ. ಪಂಡಿತ್) ಅವರು ನಮ್ಮ ನಾಡಿನ ಕಲಾವಿದರು. ಈ ವಿಷಯಗಳಲ್ಲಿರುವ ಸಾಮ್ಯತೆ ಎಂದರೆ, ಬಹುಮಂದಿಗೆ ಈ ಎರಡೂ ವಿಷಯಗಳು ತಿಳಿದಿಲ್ಲ ಮತ್ತು ತಿಳಿದವರು ಒಪ್ಪುವುದು ಸುಲಭವೂ ಅಲ್ಲ. ‘ದೀಪ ಹಿಡಿದ ಹೆಂಗಸು’ ರವಿವರ್ಮನ ಚಿತ್ರ ಎನ್ನುವಂತಹ ಐತಿಹ್ಯಗಳೂ (ಹರ್ಡಂಕರ್ ಎನ್ನುವ ಕಲಾವಿದ ರಚಿಸಿದ ಚಿತ್ರವಿದು) ಎಲ್ಲೆಡೆ– ವೆಬ್ ಜಗತ್ತಿನಲ್ಲೂ– ಜನಜನಿತವಾದ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಎಸ್.ಎಂ. ಪಂಡಿತ್ ಅವರು ಕಲ್ಬುರ್ಗಿಯಲ್ಲಿ ಜನಿಸಿ (1916-93), ಮುಂಬಯಿಯಲ್ಲಿ ಈಗ ‘ಬಾಲಿವುಡ್’ ಎಂದು ಗುರ್ತಿಸಲಾಗುವ ಚಿತ್ರಜಗತ್ತಿನ ಸಿನಿಮಾ ಪೋಸ್ಟರ್ಗಳನ್ನು ವರ್ಣಮಯವಾಗಿ ರೂಪಿಸಿಕೊಟ್ಟ ಅಪ್ರತಿಮ ಕಲಾವಿದ ಎಂಬ ವಿಷಯವನ್ನು ಗ್ರಹಿಸಬೇಕಿದೆ.

ರವಿವರ್ಮ ಬದುಕಿದ್ದಿದ್ದರೆ, 20ನೇ ಶತಮಾನದ ಸ್ವತಂತ್ರ ಭಾರತದ ಪ್ರಚಲಿತ ನಂಬಿಕೆಗಳ ಜಗತ್ತನ್ನು ಹೇಗೆ ರೂಪಿಸುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರರೂಪದಂತೆ ಬಾಳಿಬದುಕಿದವರು ಈ ನಮ್ಮ ಪಂಡಿತರು. ಇದು ಅವರ ಸೋಲೂ ಹೌದು, ಗೆಲುವೂ ಹೌದು. ರವಿವರ್ಮನ ಉತ್ತರಾಧಿಕಾರಿಯಾಗಿ ಗುರ್ತಿಸಿಕೊಂಡ ಒಬ್ಬನೇ ಕಲಾವಿದ ವರ್ಮರ ಪ್ರತಿಭೆ ಹಾಗೂ ಪ್ರಭಾವಳಿಯನ್ನು ಮೀರಿ ಬೆಳೆದರೆ ಎನ್ನುವ ಪ್ರಶ್ನೆಗೆ ಉತ್ತರ ದೊರಕಿಸಿಕೊಡದೆ ಹೋದುದಕ್ಕೆ ಮಾತ್ರ ಸ್ವತಃ ಅವರು ಹೇಗೆ ಕಾರಣರೋ ಹಾಗೆಯೇ ಸಮಾಜಶಾಸ್ತ್ರದ ಅಧ್ಯಯನದ ಸೋಲೂ ಹೌದಾಗಿದೆ. ಒಂದರ್ಥದಲ್ಲಿ ಅಮೇರಿಕದ ನಾರ್ಮನ್ ಬ್ರೈಸನ್ನನ ಸಾಮಾಜಿಕ ಚಿತ್ರಗಳ ಪೂರ್ವಜರಂತೆ ಎಸ್.ಎಂ. ಪಂಡಿತ್ ತಮ್ಮ ಚಿತ್ರಗಳ ಮೂಲಕ ಭಾಸವಾಗುತ್ತಾರೆ.

ತೈಲವರ್ಣ, ಪೋಸ್ಟರ್ ಮುಂತಾದ ಮಾಧ್ಯಮಗಳಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಿನಿಮಾತ್ಮಕ ದೃಶ್ಯಗಳನ್ನು ಆಕರ್ಷಕ ರೂಪಿಸಿದ ಪಂಡಿತರು– ‘ಫಿಲ್ಮ್ ಇಂಡಿಯ’ ಪತ್ರಿಕೆಯ ಪ್ರಮುಖ ಇಲಸ್ಟ್ರೇಟರ್ ಆಗಿದ್ದವರು. ಅಪರಿಗ್ರಹವ್ರತ ಪಾಲಕರಾಗಿದ್ದ ಕಲಾವಿದ ಕೆ.ವೆಂಕಟಪ್ಪನವರಿಗೂ ಇವರಿಗೂ ಇರುವ ಸಾಮ್ಯತೆ ಎಂದರೆ ತಮ್ಮ ಸುತ್ತಮುತ್ತಲೂ ಪ್ರಚಲಿತವಾಗಿದ್ದ ವೈರುಧ್ಯಗಳನ್ನು ಒಮ್ಮೆಲೇ ಸೃಜನಾತ್ಮಕವಾಗಿ ಪರಿವರ್ತಿಸಿಬಿಟ್ಟಿದ್ದು. ವೆಂಕಟಪ್ಪನವರು ಅಪರಿಗ್ರಹ ಹಾಗೂ ಹಾಲಿವುಡ್ ಸಿನಿಮಾದ ಆಕರ್ಷಣೆಗಳನ್ನು ಒಟ್ಟಿಗೆ ತಮ್ಮ ವ್ಯಕ್ತಿತ್ವದಲ್ಲಿ ಅರಗಿಸಿಕೊಂಡಿದ್ದರೆ, ಕಲಬುರ್ಗಿಯ ಪಂಡಿತರು ಪುರಾಣ ಹಾಗೂ ಸಿನಿಮಾಗಳನ್ನು ಒಂದೇ ಆಯಾಮದಲ್ಲಿರಿಸಿ, ಅವುಗಳ ನಡುವಣ ಅಪರೂಪದ ಸಾಮ್ಯತೆಗಳನ್ನು ತಮ್ಮ ಚಿತ್ರಗಳ ಮೂಲಕ ಅನಾವರಣಗೊಳಿಸಿದ್ದರು. ಅಥವಾ ಸಿನಿಮಾ ಎಂಬುದು ಸಮಕಾಲೀನ ಜಾನಪದ ಎಂದು ನಿರೂಪಿಸಿದ್ದರು.

ನಾಟಕಕಾರ್ತಿ ಅನುರಾಧಾ ಕಪೂರರು ತಮ್ಮ ಲೇಖನವೊಂದರಲ್ಲಿ, ಪುರಾಣದ ಸೌಮ್ಯಾವತಾರಿ ಶ್ರೀರಾಮನು ಹೇಗೆ ಬಲಪಂಥೀಯ ರಾಜಕಾರಣದಿಂದಾಗಿ ಉಗ್ರ ಶಿವನ ರೂಪ ಧರಿಸಿದನೆಂದು ವಿವರಿಸುತ್ತಾರೆ. ಅವರ ಸಾದ್ಯಂತವಾದ ವಾದಕ್ಕೆ ಸಾಕ್ಷಿಯಾಗಿ ಒದಗಿಬಂದದ್ದು ಪಂಡಿತರ ಶಿವ ಮತ್ತು ರಾಮರ ಚಿತ್ರಗಳೇ. ಪಂಡಿತ್ ಅವರು, ಕಪ್ಪುಬಿಳುಪಿನ ಛಾಯಾಚಿತ್ರ ಪತ್ರಿಕೋದ್ಯಮದ ಕಾಲದಲ್ಲೇ ವರ್ಣಮಯ ಸಿನಿಮಾ ಪೋಸ್ಟರ್ಗಳ ಸಂಪ್ರದಾಯದ ಹರಿಕಾರರಾಗಿದ್ದವರು. ವಿಶೇಷವೆಂದರೆ, ಪಾರ್ಸಿ ನಾಟಕಗಳನ್ನು ಆಧರಿಸಿದ ರವಿವರ್ಮನ ಚಿತ್ರಗಳನ್ನು ಆಧರಿಸಿ ಭಾರತೀಯ ಸಿನಿಮಾವು ಶಾಸ್ತ್ರೀಯ ಸಂಯೋಜನೆ, ವರ್ಣಮೇಳ ಮುಂತಾದುವನ್ನು, ಕ್ಯಾಮರ ಶಾಟ್ಸ್ಗಳನ್ನು ದಶಕಗಳ ಕಾಲ ರೂಪಿಸಿಕೊಂಡಿತ್ತು. ಈ ಸಿನಿಮಾತ್ಮಕ ಭಾಷೆಯನ್ನು ಮುಂದುವರಿಸುವಂತೆ ಹಾಲಿವುಡ್ ವರ್ಣಮೇಳ ಹಾಗೂ ಬಾಲಿವುಡ್ ಸಾಮಾಜಿಕ ಚಿತ್ರಗಳ ಚಿತ್ರಿಕೆ(ಪೋಸ್ಟರ್)ಗಳನ್ನು ಪಂಡಿತರು ಒಟ್ಟುಗೂಡಿಸಿದರು.

ತಮ್ಮ ಇಪ್ಪತ್ತನೇ ವಯಸ್ಸಿಗೆ ಮುಂಬಯಿಯ ‘ನೂತನ್ ಕಲಾಶಾಲೆ’ಯಲ್ಲಿ ದಂಡಾವತಿಮಠ ಅವರ ಬಳಿ, ನಂತರ ‘ಜೆ.ಜೆ. ಕಲಾಶಾಲೆ’ಯ ದುರಂಧರರ ಬಳಿ ಕಲಿತ ಪಂಡಿತರು ‘ಫಿಲ್ಮ್ ಇಂಡಿಯ’ ಪತ್ರಿಕೆಗೆ ರೂಪಿಸಿಕೊಟ್ಟ ಮುಖಪುಟ ಚಿತ್ರಗಳು ಇಂದಿಗೂ ಸಂಗ್ರಹಯೋಗ್ಯವಾಗಿವೆ. ಆ ಚಿತ್ರಗಳು ಲಂಡನ್ನಿನ ವಿಕ್ಟೋರಿಯ ಆಲ್ಬರ್ಟ್ ಸಂಗ್ರಹಾಲಯಗಳಲ್ಲಿಯೂ ಸಂಗ್ರಹವಾಗಿವೆ. ಲಂಡನ್ನ ‘ರಾಯಲ್ ಅಕಾಡೆಮಿ ಆಫ್ ಆರ್ಟ್’ನ ಗೌರವಾನ್ವಿತ ಸದಸ್ಯತ್ವವೂ ಇವರಿಗೆ ದೊರಕಿತ್ತು. ಭಾರತೀಯನೊಬ್ಬನಿಗೆ ಇಂತಹ ಗೌರವ ದೊರಕಿದ್ದು ಅಪರೂಪ (ನಂತರದ ವರ್ಷಗಳಲ್ಲಿ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ, ಆರ್.ಕೆ. ಲಕ್ಷ್ಮಣ್, ಭುಪೇನ್ ಕಾಕ್ಕರ್ ಅಂತಹವರಿಗೆ ಇಂತಹ ವಸಾಹತೀಕೃತ ಪ್ರತಿಭೆಗಳ ಪುನಶ್ಚೇತನದ ಯತ್ನಗಳಿಗೆ ಮಾನ್ಯತೆ ದೊರಕಿದ್ದಿದೆ).

ಗ್ರೇಟಾ ಗಾರ್ಬೋ, ಪೃಥ್ವೀರಾಜ್ ಕಪೂರ್ ಮುಂತಾದ ಸ್ಥಳೀಯ ಹಾಗೂ ಭೌಗೋಳಿಕ ವ್ಯಕ್ತಿತ್ವಗಳ ಚಿತ್ರಗಳನ್ನು ಒಟ್ಟಾಗಿ ನಿರೂಪಿಸಿಕೊಟ್ಟ ಎಸ್.ಎಂ. ಪಂಡಿತರ ಜನಪ್ರಿಯ ಚಿತ್ರಗಳೆಂದರೆ ನಮ್ಮಲ್ಲಿ ಇಂದಿಗೂ ಮನೆಮಾಡಿರುವ ವಿವೇಕಾನಂದ ಹಾಗೂ ಗಾಂಧೀಜಿಯವರ ಭಾವಚಿತ್ರಗಳು ಹಾಗೂ ಆ ಭಾವಚಿತ್ರಗಳ ಕ್ಯಾಲೆಂಡರ್ಗಳು. ಈಗ ಮದ್ಯವಯಸ್ಕರಾಗಿರುವವರಿಗೆ ಈ ಸ್ಮರಣೆ ಅನಿವಾರ್ಯ ಕೂಡ.

ತಮ್ಮದೇ ಸ್ಟುಡಿಯೋವನ್ನು ಮುಂಬಯಿಯಲ್ಲಿ ಆರಂಭಿಸಿದ್ದ ಪಂಡಿತರು ಮುದ್ರಣಸಂಸ್ಥೆಗಳಿಗೆ, ಕ್ಯಾಲೆಂಡರ್ ಸಂಪ್ರದಾಯಕ್ಕೆ ಪೂರಕವಾದ ಚಿತ್ರಗಳನ್ನು ಚಿತ್ರಿಸಿಕೊಟ್ಟು ಜನಮನದಲ್ಲಿ ಉಳಿಯುವಂತಹ ದೃಶ್ಯಭಾಷೆಯೊಂದನ್ನು ರೂಪಿಸಿಕೊಂಡಿದ್ದರು, ಅದು ಜನಮನವನ್ನು ತಲುಪುವಂತೆಯೂ ಮಾಡಿದ್ದರು. ಆದರೆ, ಇವರು ಇಷ್ಟು ಜನಪ್ರಿಯವಾದುದಕ್ಕೋ ಏನೋ, ಪಂಡಿತ ಮತ್ತು ಪಾಮರ ಇಬ್ಬರನ್ನೂ ಇವರು ತಲುಪದೆ, ಜನಪರ– ಜನಪ್ರಿಯ– ಅಧಿಕಾರದ ಆಯಾಮಗಳನ್ನು ಮಾತ್ರ ಅವರ ಪ್ರತಿಭೆ ತಲುಪಿವಂತಾಯಿತು.

‘ಡಾಕ್ಟರ್ ಕೋಟ್ನೀಸ್ ಕಿ ಅಮರ್ ಕಹಾನಿ’ (1946), ‘ಬರ್ಸಾತ್’ (1949) ಮುಂತಾದ ಸಿನಿಮಾಗಳಿಗೆ ಪೂರ್ಣಪ್ರಚಾರ ಸಾಮಗ್ರಿಯನ್ನು ತಯಾರಿಸಿದ ಪಂಡಿತರು, ಗೋವಾದ ಕಲಾವಿದ ರಘುಬೀರ್ ಮುಲ್ಗಾವ್ಕರ್ ಅವರೊಂದಿಗೆ ಒಟ್ಟುಗೂಡಿ ಬಾಲಿವುಡ್ ತಯಾರಿಕಾ ಸಂಪ್ರದಾಯವೊಂದನ್ನು ಮುಂದುವರೆಸಿದರು. ದೃಶ್ಯಕಲೆಗೂ ಸಿನಿಮಾ ಮಾಧ್ಯಮಕ್ಕೂ ಇರುವ ಅಪೂರ್ವ ನಂಟಿನ ಕಥನವಿದು. ರವಿವರ್ಮ ಹಾಗೂ ದಾದಾಸಾಹೇಬ್ ಅವರುಗಳೂ ಇದೇ ರೀತಿ ಒಟ್ಟುಗೂಡಿಯೇ ಮುದ್ರಣ ಸಂಸ್ಥೆಯನ್ನು ಅರ್ಧಶತಮಾನದ ಹಿಂದೆ ನಡೆಸುತ್ತಿದ್ದರು ಹಾಗೂ ಇಬ್ಬರೂ ಬೇರೆಯಾದಾಗ ವೃತ್ತಿಪರವಾದ ಗುಟ್ಟನ್ನು ಹೊರಗೆಡಹಬಾರದೆಂಬ ಆಣೆಯೊಂದಿಗೆ ಪರಸ್ಪರ ದೂರವಾದರು.

ಕಲಾಶಾಲೆಯಲ್ಲಿ ಕಲಿಯದ ವರ್ಮ ಕಲಾವಿದರಾದರು, ‘ಜೆ.ಜೆ. ಕಲಾಶಾಲೆ’ಯಲ್ಲಿ ಕಲಿತ ದಾದಾಸಾಹೇಬ್ ಸಿನಿಮಾ ಮಾಧ್ಯಮದಲ್ಲಿ ತೊಡಗಿಕೊಂಡರು. ಇದೇ ‘ಜೆ.ಜೆ. ಕಲಾಶಾಲೆ’ಯಲ್ಲಿ ಕಲಿಯುವ ಆಸೆಯಿಂದ ಕರ್ನಾಟಕದ ದಂಡಾವತಿಮಠರು ಆರಂಭಿಸಿದ್ದ ‘ಬಡವರ ಜೆ.ಜೆ. ಶಾಲೆ’ಯಾದ ‘ನೂತನ್ ಕಲಾಶಾಲೆ’ಯಲ್ಲಿ ಪಂಡಿತರು ಕಲಿತರು. ಹೀಗೆ, 20ನೇ ಶತಮಾನದ ಆರಂಭ ಭಾಗದಲ್ಲಿ ಹಲವು ಘಟನಾವಳಿಗಳ ಪುನರಾವತಾರಕ್ಕೆ ಸಾಕ್ಷಿ ಹಾಗೂ ಪಾತ್ರಧಾರಿಗಳಾಗುವ ಭಾಗ್ಯವನ್ನು ಎಸ್.ಎಂ.ಪಂಡಿತ್ ಅವರು ಪಡೆದುಕೊಂಡಿದ್ದರು.

ತಮ್ಮದೇ ಆದ ಒಂದು ಕಲಾವಲಯವನ್ನು ರೂಪಿಸಿದ ಅಗ್ಗಳಿಕೆಯ ಎಸ್.ಎಂ. ಪಂಡಿತ್ ಅವರ ಜನ್ಮಶತಮಾನೋತ್ಸವ ವರ್ಷವಿದು. ಅಧ್ಯಯನ ಹಾಗೂ ಮಾನ್ಯತೆಗೆ ಯೋಗ್ಯರಾದ ಪಂಡಿತ್ ಅವರು ವಿಮರ್ಶೆಯ ಪಂಜಿನೊಳಕ್ಕೆ ಇನ್ನೂ ಸಿಲುಕಿಕೊಂಡಿಲ್ಲ– ಕರ್ನಾಟಕದ ಮತ್ತೊಬ್ಬ ಕಲಾವಿದ ಸ್ವೆಟಸ್ಲಾವ್ ರೋರಿಕರಂತೆ. ಸೃಜನಶೀಲ ಕಲಾವಿದನೊಬ್ಬನಿಗೆ ಲಭಿಸಬಹುದಾದ ಎಲ್ಲ ಮಾನ್ಯತೆಗಳಲ್ಲಿ ಶ್ರೇಷ್ಠವಾದುದು ‘ವಿಮರ್ಶಾತ್ಮಕ ಸ್ವೀಕೃತಿ’ ಎನ್ನುವುದಾದರೆ ಪಂಡಿತರಿಗೆ ಇನ್ನೂ ಅದರಲ್ಲಿ ಪ್ರವೇಶ ದೊರಕಿಲ್ಲ. ಎನ್.ಜಿ.ಎಂ.ಎ (ಆಧುನಿಕ ಕಲೆಗಳ ರಾಷ್ಟ್ರೀಯ ಸಂಗ್ರಹಾಲಯ) ಮಾನ್ಯತೆಯೂ ಅಷ್ಟೇನೂ ಹತ್ತಿರವಿಲ್ಲ.

ವೆಂಕಟಪ್ಪ, ಹೆಬ್ಬಾರ್ ಮುಂತಾದವರಿಗೆ ಸರ್ಕಾರೀ ಮಾನ್ಯತೆಯ ಸಂಗ್ರಹಾಲಯವಿದ್ದಲ್ಲಿ, ರಾಜ್ಯದ ಉತ್ತರಭಾಗದ ಪಂಡಿತರಿಗೆ ಆ ಅವಕಾಶವೂ ಇಲ್ಲ. ‘ಎಲ್ಲೆಡೆ ಸಲ್ಲುವವರಿಗೆ ಇಲ್ಲಿ ಮಾನ್ಯತೆ ಇಲ್ಲ’ ಎಂಬುದು ಕರ್ನಾಟಕದ ಕಲಾ ಇತಿಹಾಸದ ಮಟ್ಟಿಗೆ ಸತ್ಯವಾದ ವಿಚಾರವೇ ಆಗತೊಡಗಿದೆ. ಪಂಡಿತರ ಪ್ರತಿಭೆ ಕೇವಲ ರವಿವರ್ಮರ ಜನಪ್ರಿಯತೆಯ ನೆರಳು ಮಾತ್ರವಾಗಿರದೆ, ಸ್ವಾತಂತ್ರೋತ್ತರ, ಸಮಕಾಲೀನ ಜನಪ್ರಿಯ ದೃಶ್ಯಕಲಾ ಪ್ರಕಾರದ ಸ್ಥಳೀಯ ಅವತರಣಿಕೆಯೂ ಹೌದಾಗಿದೆ. ನಾಜಿಗಳಿಗೆ ನೀಶೆಯೆಂಬ ತತ್ವಶಾಸ್ತ್ರಜ್ಞನ ಚಿಂತನೆಗಳು ಒದಗಿಬಂದಂತೆ, ಎಸ್.ಎಂ. ಪಂಡಿತರ ಪೌರಾಣಿಕ ಚಿತ್ರಗಳೂ ಸಹ ಹಿಂದುತ್ವದ ಬಲಪಂಥದ ವಾದಕ್ಕೆ ಆಕಸ್ಮಿಕವಾಗಿ ನೀರೆರೆಯುತ್ತಿದ್ದಲ್ಲಿ, ಅದಕ್ಕೊಂದು ವಿಮರ್ಶೆ – ವಿಶ್ಲೇಷಣೆ ರೂಪದ ಮುಕ್ತಿಯ ಅವಶ್ಯಕತೆಯ ತುರ್ತು ಅಗತ್ಯವೂ ಪ್ರಸ್ತುತ ಇದೆ.

‘ಲಲಿತಕಲಾ ಅಕಾಡೆಮಿ’ ಹಾಗೂ ‘ಕನ್ನಡ ಸಂಸ್ಕೃತಿ ಇಲಾಖೆ’ಗಳಂತವು ಮಾಡಬೇಕಿರುವುದು ಬೆಳಕಿಗೆ ಚೌಕಟ್ಟು ತೊಡಿಸುವುದಲ್ಲ, ಅದರ ಪ್ರಖರತೆಯನ್ನು ಸ್ಪಷ್ಟವಾಗಿ ಪ್ರತಿಫಲಿಸಬಲ್ಲ ಸಾಧನವನ್ನು ಸಾರ್ವಜನಿಕರಿಗೆ ಅನುವು ಮಾಡಿಕೊಡುವುದಾಗಿದೆ. ಜನ್ಮ ಶತಮಾನೋತ್ಸವ ಸಂದರ್ಭ ಎಸ್.ಎಂ. ಪಂಡಿತ್ ಅವರನ್ನು ಕನ್ನಡ ಕಲಾವಲಯ ಮತ್ತೆ ನೆನಪಿಸಿಕೊಳ್ಳಲು ಹಾಗೂ ಹೊಸ ಕಾಲದ ಬೆಳಕಿನಲ್ಲಿ ಅವರನ್ನು ಸಹೃದಯರಿಗೆ ಮುಖಾಮುಖಿ ಆಗಿಸಲು ಒಂದು ಸೃಜನಶೀಲ ನೆಪವಾಗಿ ಒದಗಿಬರಬೇಕಾಗಿದೆ.

ಎಸ್.ಎಂ. ಪಂಡಿತರ ಹೆಜ್ಜೆಗುರುತು
*1916: ಕಲ್ಬುರ್ಗಿದ ಕಲ್ಲಮ್ಮ ಮತ್ತು ಮೋನಪ್ಪ ದಂಪತಿಯ ಪುತ್ರನಾಗಿ ಮಾರ್ಚ್ 25ರಂದು ಜನನ.
*1930: ಮದರಾಸಿನ ‘ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್’ನಿಂದ ಡಿಪ್ಲೊಮ.
*1937: ಮುಂಬಯಿಯ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್’ನಿಂದ ಡಿಪ್ಲೊಮ.
*1944: ‘ಫಿಲ್ಮ್ ಇಂಡಿಯ’ ನಿಯತಕಾಲಿಕೆಯ ವಿನ್ಯಾಸಕ್ಕೆ ಕೆನಡಾದ ಟೊರಾಂಟೊದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರಶಸ್ತಿ.
*1978: ಲಂಡನ್ನಲ್ಲಿ ಮೊದಲ ಬಾರಿಗೆ ಎಸ್.ಎಂ. ಪಂಡಿತ್ ಅವರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ.
*1978: ಲಂಡನ್ನ ‘ರಾಯಲ್ ಸೊಸೈಟಿ ಆಫ್ ಆರ್ಟ್ಸ್’ನ ಫೆಲೋಶಿಫ್ ಗೌರವ.
*1983: ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ
*1984: ರಾಜ್ಯೋತ್ಸವ ಪ್ರಶಸ್ತಿ
*1986: ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್.
*1991: ಮುಂಬಯಿಯ ‘ಜಹಾಂಗೀರ್ ಆರ್ಟ್ ಗ್ಯಾಲರಿ’ಯಲ್ಲಿ ಏಕವ್ಯಕ್ತಿ ಪ್ರದರ್ಶನ.
*1993: ಮಾರ್ಚ್ 30ರಂದು ನಿಧನ.

ಶತಮಾನೋತ್ಸವ ಸಂಭ್ರಮ
ಕಲ್ಗುರ್ಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಅ. 11ರಂದು ಬೆಳಗ್ಗೆ 11ಕ್ಕೆ ‘ಎಸ್.ಎಂ. ಪಂಡಿತ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ಡಾ. ಜೆ.ಎಸ್. ಖಂಡೇರಾವ್ ಅವರು ರಚಿರುವ ಎಸ್.ಎಂ. ಪಂಡಿತರ ಭಾವಚಿತ್ರ ಅನಾವರಣಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.