ನನ್ನ ಗೆಳೆಯನೊಬ್ಬ ಹೇಳಿದ್ದು. ಆತನ ವಿದ್ಯಾರ್ಥಿ ಜೀವನದಲ್ಲಿ ನಡೆದ ಪ್ರಸಂಗ. ಆತ ತನ್ನ ಗೆಳೆಯರೊಡನೆ ರಜೆಗೆಂದು ಉತ್ತರ ಕರ್ನಾಟಕದ ಕಡೆ ಪ್ರವಾಸ ಹೊರಟಿದ್ದ. ದಾರಿಮಧ್ಯೆ ಹಳ್ಳಿಯಲ್ಲಿ ಗೆಳೆಯನೊಬ್ಬನ ಮನೆಯಲ್ಲಿ ಊಟದ ವ್ಯವಸ್ಥೆಯಿತ್ತು. ಇವರು ಐವರು ಗೆಳೆಯರಿದ್ದರು. ಅದು ಮಡಿವಂತರ ಮನೆ. ಊಟಕ್ಕೇಳಿಸಿದಾಗ ಅಲ್ಲಿ ನಾಲ್ಕು ಎಲೆಗಳು ಒಂದು ಪಂಕ್ತಿಯಲ್ಲಿ, ಸ್ವಲ್ಪ ದೂರದಲ್ಲಿ ಮತ್ತೊಂದು ಎಲೆಯನ್ನು ಪ್ರತ್ಯೇಕವಾಗಿ ಹಾಕಲಾಗಿತ್ತು.

ಹಿರಿಯರೊಬ್ಬರು ಬಂದು ಈತನತ್ತ ನೋಡಿ ಆ ಪ್ರತ್ಯೇಕ ಎಲೆಯಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಉಳಿದವರನ್ನು ಅತ್ತ ಕರೆದರು. ಅವರೆಲ್ಲ ಒಂದೇ ಸಮುದಾಯಕ್ಕೆ ಸೇರಿದವರು. ಈತನೊಬ್ಬ ಅನ್ಯ ಸಮುದಾಯದವ. ಈತನಿಗೆ ಒಂದು ರೀತಿ ಮುಜುಗರವಾಯಿತು. ಕರೆದುಕೊಂಡು ಹೋಗಿದ್ದ ಗೆಳೆಯನೂ ತಲೆ ತಗ್ಗಿಸಿದ್ದ. ಹಿರಿಯರ ಮಾತು! ಎಲ್ಲರೂ ಸುಮ್ಮನಿದ್ದರು. ಸರಿ ಊಟವಾಯಿತು. ಒಳಗಿನಿಂದ ಬಂದ ಅಜ್ಜಿ ಎಲೆಯನ್ನು ತೆಗೆಯಲು ಆತನಿಗೆ ಸೂಚಿಸಿದರು. ಉಳಿದವರ ಎಲೆಯನ್ನು ಮನೆಯವರೇ ತೆಗೆದರು. ಈತನಿಗೆ ಅಪಮಾನವೆನ್ನಿಸಿತು. ಗೆಳೆಯರತ್ತ ನೋಡಿದರೆ ಅವರು ಅಲ್ಲಿರಲಿಲ್ಲ. ಧುಮುಗುಡುತ್ತಲೇ ಎಲೆ ತೆಗೆದು ಹೊರಗೆ ಬಿಸಾಕಿ ಬರುವಷ್ಟರಲ್ಲಿ ಆತ ಊಟ ಮಾಡಿದ ಜಾಗದಲ್ಲಿ ಒಂದಿಷ್ಟು ಸಗಣಿಯಿತ್ತು. ಗೋಮಯ ಹಾಕಲು ಅದೇ ಅಜ್ಜಿ ಈಗ ಆಜ್ಞಾಪಿಸಿದರು. ಈತನಿಗೆ ಮೈ ಉರಿಯತೊಡಗಿತು. ಆ ಜಾಗಕ್ಕೆ ಸಗಣಿ ಬಳಿದು ಹೊರಬಂದ. ಆತನ ಬದುಕಿನಲ್ಲಿ ಮೊದಲ ಸಲ ಕೀಳ್ತನದ ಅನುಭವವಾಗಿತ್ತು.

ಈ ಘಟನೆ ಉಲ್ಲೇಖಿಸುತ್ತಾ ಆತ ಹೇಳಿದ: ನಮ್ಮ ಮನೆಯಲ್ಲಿಯೂ ಇಂತಹ ಘಟನೆಗಳು ಆಗಾಗ ನಡೆಯುತ್ತಿತ್ತು. ನಮ್ಮದೂ ಮಡಿವಂತ ಕುಟುಂಬ. ಮನೆಯಲ್ಲಿ ಕಟ್ಟುನಿಟ್ಟಿನ ಸಂಪ್ರದಾಯದ ಆಚರಣೆ. ಅನ್ಯ ಸಮುದಾಯದವರು ಬಂದರೆ ಇದೇ ರೀತಿಯ ನಡವಳಿಕೆಯಿತ್ತು. ಆಗ ನನಗೇನೂ ಅನ್ನಿಸುತ್ತಿರಲಿಲ್ಲ. ಅಷ್ಟೇಕೆ ನಮ್ಮ ಮನೆಯ ಕೆಳವರ್ಗದ ಕೆಲಸದಾಳು ಬೊಗಸೆಯೊಡ್ಡಿದರೆ ಮೇಲಿನಿಂದ ಕಿಂಚಿತ್ತೂ ತಾಕದಂತೆ ರೊಟ್ಟಿಯನ್ನು, ಎಸೆಯುವ ರೀತಿಯಲ್ಲಿ ನಾನೇ ಕೊಡುತ್ತಿದ್ದೆ. ಆಗಲೂ ನನಗೆ ಅದು ಸಹಜವೆನ್ನಿಸಿತ್ತು. ಆದರೆ, ಈಗ ನನ್ನನ್ನು ಅವರು ನಡೆಸಿಕೊಂಡ ರೀತಿಯಿಂದಾಗಿ ಮೈ ಉರಿಯಿತು. ಅಪಮಾನದಿಂದ ಕುದಿಯುತ್ತಿದ್ದೆ. ಹಾಗಾದರೆ ನಾವು ನಮ್ಮ ಮನೆಯಲ್ಲಿ ಮಾಡುತ್ತಿದ್ದುದು ಏನು? ನೊಂದವರ ನೋವ ನೋಯದವರೆತ್ತ ಬಲ್ಲರು?

ಸಾಮಾಜಿಕ ಚಲನೆ ಬಗ್ಗೆ ಯೋಚಿಸುವಾಗ ಸಹಜವೆಂಬಂತೆ ಗೆಳೆಯ ಹೇಳಿದ ಈ ಪ್ರಸಂಗ ನೆನಪಿಗೆ ಬಂದಿತು. ಕುವೆಂಪು ಎಪ್ಪತ್ತರ ದಶಕದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಉದ್ಘಾಟಿಸಿ ಮಾಡಿದ ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಎಂಬ ಉಪನ್ಯಾಸದಲ್ಲಿ ಸಾಮಾಜಿಕ ಚಲನೆಯನ್ನು ಕುರಿತು ಹೀಗೆ ಹೇಳುತ್ತಾರೆ:

‘ಹುಲಿಯನ್ನು ಕೊಲ್ಲುತ್ತೇನೆ’ ಎಂದು ಹುಲಿ ಅಲ್ಲಿರುವಾಗ ಒಂದಿಷ್ಟು ಕಲ್ಲು ತೆಗೆದುಕೊಂಡು ಸರಿಯಾಗಿ ತಲೆಗೆ ಗುರಿಯಿಟ್ಟು ಹೊಡೆಯುತ್ತೇನೆಂದರೆ ಏಟು ಬಿದ್ದ ಕೂಡಲೇ ಅದು ಬಂದು ಆಮ್ ಅಂತ ನಿಮ್ಮನ್ನು ಅಪ್ಪಳಿಸಿ ಒಂದೇ ಬಾರಿಗೆ ಪೂರೈಸುತ್ತದೆ. ಅದನ್ನು ಹೊಡೆಯಬೇಕಾದರೆ ನೀವು ಜೋಡು ನಳಿಗೆ ತೋಟಾ ಕೋವಿ ಇಟ್ಟುಕೊಂಡು ಬಿಲ್ಲೆತ್ತಿ ಎಳೆದುಕೊಳ್ಳಬೇಕು. ಹಾಗೆ ಗುರಿಯಿಟ್ಟು ತಲೆಗೆ ಹೊಡೆದರೆ ಒಂದೇ ಹೊಡೆತಕ್ಕೆ ಅದು ಬೀಳಬೇಕು. ಅದು ಬಿಟ್ಟು ಗಾಯ ಮಾಡಿ ಬಿಡೋದಲ್ಲ.

ಹಾಗೆಯೇ ಈ ಪುರೋಹಿತಶಾಹಿ ಹುಲಿಯಂತೆ. ಇದಕ್ಕೆ ಸಣ್ಣಪುಟ್ಟ ಕಲ್ಲನ್ನು ಜೇಬಿನಲ್ಲಿ ಇಟ್ಟುಕೊಂಡು ಹೋಗಿ ಹೊಡೆಯುತ್ತೇನೆಂದರೆ ಹುಡುಗಾಟದ ಕೆಲಸವಲ್ಲ. ಅದನ್ನು ಹೊಡೆಯಬೇಕಾದರೆ ನಾವು ಮದ್ದುಗುಂಡುಗಳನ್ನೆ ತಯಾರು ಮಾಡಬೇಕು. ನಾವು ಹೇಳುವಂತಹ ಮದ್ದುಗುಂಡು ರೂಪಕವಾದದ್ದು ಅಂತಿಟ್ಟುಕೊಂಡರೆ ವಾಚ್ಯವಾಗಿಯೇ ಹೊಡೆಯಬೇಕು ಅಂತ ಅಲ್ಲ. ಆದರೆ, ಈ ವಿಚಿತ್ರ ಬೇಟೆಯಲ್ಲಿ ಮೊದಲು ಗುಂಡು ತಗುಲಬೇಕಾದದ್ದು ಹುಲಿಯ ತಲೆಗಲ್ಲ, ನಿಮ್ಮ ತಲೆಗೇ! ತಲೆ... ತಲೆ... ತಲೆ... ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು.

ಕುವೆಂಪು ತಲೆ ತಲೆ... ತಲೆ... ಎಂದು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಗುಂಡು ಬೀಳಬೇಕಾದ್ದು ಹುಲಿಯ ತಲೆಗೆ ಮಾತ್ರವಲ್ಲ. ಹುಲಿ ಹೊಡೆಯುವವನ ತಲೆಗೂ. ಇಬ್ಬರ ತಲೆಯಲ್ಲೂ ಬದಲಾವಣೆ ಸಂಭವಿಸಬೇಕು. ಸಾಮಾಜಿಕ ಚಲನೆಯ ಸ್ವರೂಪವನ್ನು ಕುವೆಂಪು ಪ್ರಜ್ಞೆಯ ನೆಲೆಯಲ್ಲಿ ಗುರುತಿಸುತ್ತಿದ್ದಾರೆ. ಈ ರೂಪಕವನ್ನೇ ಸ್ವಲ್ಪ ವಿಸ್ತರಿಸುವುದಾದರೆ ದಲಿತರ ಬಗ್ಗೆ ಭಾರತದ ಇಬ್ಬರು ಮಹಾನ್ ಚಿಂತಕರಾದ ಗಾಂಧಿ, ಅಂಬೇಡ್ಕರ್ ಅವರ ಆಲೋಚನೆಯ ಸ್ವರೂಪವನ್ನೂ ಇದು ಹೇಳುತ್ತದೆ.

ಗಾಂಧಿ– ಅಂಬೇಡ್ಕರ್ ಇಬ್ಬರೂ ದಲಿತರ ಪರ. ಆದರೆ ಗಾಂಧಿ ಮೇಲುನೆಲೆಯಲ್ಲಿ ನಿಂತು ದಲಿತರ ಪರ ಮಾತನಾಡಿದರು. ಅವರ ದನಿಯಲ್ಲಿ ಅನುಕಂಪದ ಎಳೆಯಿತ್ತು. ಗಾಂಧಿ ಅಸ್ಪೃಶ್ಯತೆಯ ಸಮಸ್ಯೆ ಕಂಡದ್ದು, ಅರ್ಥೈಸಿದ್ದು ಹಿಂದೂ ಧರ್ಮದ ಚೌಕಟ್ಟಿನಲ್ಲಿ. ಅವರ ಪ್ರಕಾರ ಅಸ್ಪೃಶ್ಯತೆ ಹಿಂದೂ ಧರ್ಮದ ಒಂದು ದೊಡ್ಡ ಕಳಂಕ. ಇದಕ್ಕಿರುವ ಪರಿಹಾರ ಸವರ್ಣೀಯ ಸಮಾಜದ ಹೃದಯ ಪರಿವರ್ತನೆ. ಇದನ್ನೇ ಅನಂತಮೂರ್ತಿ ಮೇಲುವರ್ಗದಲ್ಲಿರಬೇಕಾದ ಅಪರಾಧಿ ಪ್ರಜ್ಞೆ ಎಂದು ಗುರುತಿಸಿದ್ದು.

ಕುವೆಂಪು ಹೇಳುವಂತೆ ಪುರೋಹಿತಶಾಹಿಗಳನ್ನು ಈ ಅಪರಾಧಿ ಪ್ರಜ್ಞೆ ಕಾಡಬೇಕು. ನನ್ನ ಗೆಳೆಯನನ್ನು ಕಾಡಿದ ಹಾಗೆ. ಗಾಂಧಿಗಿದ್ದದ್ದು ಸಹಾನುಭೂತಿಯ ಸಂವೇದನೆ. ದಲಿತರೂ ಹಿಂದೂ ಧರ್ಮದ ಒಂದು ಭಾಗ ಎಂಬ ಭಾವ. ಈ ಸಹಾನುಭೂತಿಯ ನೆಲೆಯಿಂದಲೇ ದಲಿತರನ್ನು ಗಾಂಧಿ ‘ಹರಿಜನ’ ಎಂದರು. ಹೊಸ ತಲೆಮಾರಿನ ದಲಿತ ಯುವಕರಿಗೆ ಇದರಿಂದಲೇ ಗಾಂಧಿಯ ಬಗ್ಗೆ ಅಸಮಾಧಾನ. ಹೊಲೆಯ, ಮಾದಿಗ ಅಂತ ಕರೆದರೆ ನಮಗೆ ಹಿಂಸೆಯ ಅಪಮಾನದ ಅರಿವಾದರೂ ಆಗುತ್ತಿತ್ತು. ‘ಹರಿಜನ’ ಎಂದು ಕರೆಯುವುದು ನಮ್ಮೊಳಗಿನ ಅಪಮಾನದ ಸಿಟ್ಟನ್ನೂ ಇಲ್ಲವಾಗಿಸಿ ನಮ್ಮನ್ನು ನಿಷ್ಕ್ರಿಯರಾಗಿಸುವ ಕ್ರಮ ಎಂಬುದು ಅವರ ಆರೋಪ.

ಅಂಬೇಡ್ಕರ್ ದಲಿತರ ಚಿಂತನೆ ದಲಿತ ಸಮಾಜದ ಒಳಗಿನಿಂದಲೇ ಮೂಡಿದ್ದು. ಗಾಂಧಿಗಿಂತ ಭಿನ್ನ. ತನಗಾದ ಅಪಮಾನದಿಂದ ಸಿಡಿದೆದ್ದ ಅನುಭವದ ಸಿಟ್ಟಿನಿಂದ ರೂಪುಗೊಂಡದ್ದು. ಗಾಂಧೀಜಿ ದಲಿತರ ಸ್ವಸಂಘಟನೆ ಮತ್ತು ಹೋರಾಟಕ್ಕಿಂತ ಸವರ್ಣೀಯ ಸಮಾಜದ ಹೃದಯ ಪರಿವರ್ತನೆಗೆ ಹೆಚ್ಚು ಒತ್ತು ನೀಡಿದರು. ದಲಿತರನ್ನು ಹಿಂದೂ ಸಮಾಜದ ಒಂದು ಭಾಗವಾಗಿಯೇ ಸ್ವೀಕರಿಸಿ, ಅಲ್ಲಿಯೇ ಅವರಿಗೆ ಉಚಿತ ಸ್ಥಾನ ಕಲ್ಪಿಸಲು ಹೆಣಗಿದರು.

ಆದರೆ, ಅಂಬೇಡ್ಕರ್ ಹಿಂದೂ ಧರ್ಮವನ್ನು ಗಾಂಧಿಗಿಂತ ಭಿನ್ನವಾಗಿ ಗ್ರಹಿಸಿದರು. ಅವರ ‘ಫಿಲಾಸಫಿ ಆಫ್ ಹಿಂದೂಯಿಸಂ’ ಈ ದೃಷ್ಟಿಯಿಂದ ಮಹತ್ವದ ಕೃತಿ. ಅವರ ಪ್ರಕಾರ ಅಸ್ಪೃಶ್ಯತೆ ಮತ್ತು ಜಾತಿಪದ್ಧತಿ ಹಿಂದೂ ಧರ್ಮದ ಅವಿಭಾಜ್ಯ ಸಂಗತಿಗಳು. ಇವೆರಡನ್ನು ತೆಗೆದುಬಿಟ್ಟರೆ ಹಿಂದೂ ಧರ್ಮಕ್ಕೆ ಅಸ್ತಿತ್ವವೇ ಇಲ್ಲ. ಮಾನವೀಯ ಮೌಲ್ಯಗಳಿಗಾಗಲೀ, ಸಹೋದರತೆ, ಸಮಾನತೆ ಎಂಬ ತತ್ವಗಳಿಗಾಗಲೀ ಅಲ್ಲಿ ಸ್ಥಾನವೇ ಇಲ್ಲ. ಕೋಟ್ಯಂತರ ದಲಿತರನ್ನು ಹಿಂದೂ ಸಮಾಜ ನಡೆಸಿಕೊಳ್ಳುತ್ತಿರುವುದೇ ಇದಕ್ಕೆ ಪ್ರತ್ಯಕ್ಷ ಪುರಾವೆ. ಹಿಂದೂ ಧರ್ಮದ ಚೌಕಟ್ಟಿನಲ್ಲೇ ಉಳಿದರೆ ದಲಿತರು ಯಾವಾಗಲೂ ಅಧೀನ ಪ್ರಜೆಗಳಾಗಿಯೇ ಇರಬೇಕಾಗುತ್ತದೆ ಎಂಬುದು ಅಂಬೇಡ್ಕರ್ ವಾದ. ಹೀಗಾಗಿಯೇ ಗಾಂಧಿ ಅವರ ಪ್ರಾಮಾಣಿಕತೆಯನ್ನು ಗೌರವಿಸಿಯೂ ಅವರ ವಾದವನ್ನು ಅಂಬೇಡ್ಕರ್ ಒಪ್ಪುವುದಿಲ್ಲ. ಗಾಂಧಿಯ ಅನುನಯದ ಮಾರ್ಗಕ್ಕಿಂತ ಇದು ಭಿನ್ನ ನಿರಾಕರಣೆಯ ಪ್ರತಿಭಟನೆಯ ಹಾದಿ.

ಸಿದ್ಧಲಿಂಗಯ್ಯ ಅವರು ಗಾಂಧಿ ಮತ್ತು ಅಂಬೇಡ್ಕರ್ ನಿಲುವನ್ನು ಹೀಗೆ ವಿವರಿಸುತ್ತಾರೆ: ಅಜ್ಜ ಮೊಮ್ಮಗನಿಗೆ ಹೇಳುತ್ತಾನೆ- ನಮ್ಮ ಕಾಲದಲ್ಲಿ ಮಹಾತ್ಮಗಾಂಧಿ ಅಂತ ಒಬ್ಬರು ಇದ್ದರು. ಅವರು ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ್ಯ ತಂದುಕೊಟ್ಟರು. ನಾವು ಈಗ ಇರುವ ಸ್ಥಿತಿಗತಿಗೆ ಗಾಂಧಿಯೇ ಕಾರಣ.

ಅದೇ ಅಂಬೇಡ್ಕರ್ ಬಗ್ಗೆ ಮೊಮ್ಮಗ ಅಜ್ಜನಿಗೆ ಹೇಳುತ್ತಾನೆ- ಅಜ್ಜ, ನೀನು ಚಿಕ್ಕವನಿದ್ದಾಗ ಅಂಬೇಡ್ಕರ್ ಅಂತ ನಮ್ಮವರೊಬ್ಬರು ಇದ್ದರು. ಅವರು ನಮ್ಮ ಜನಾಂಗಕ್ಕಾಗಿ ಹೋರಾಡಿದರು. ನಾವು ಇರುವ ಸ್ಥಿತಿಗೆ ಅಂಬೇಡ್ಕರ್ ಕಾರಣ. ಇದನ್ನು ಉಲ್ಲೇಖಿಸುತ್ತಾ ದೇವನೂರ ಮಹಾದೇವ– ಗಾಂಧಿ ಬಗ್ಗೆ ಹಣ್ಣು ಹೀಚಿಗೆ ಹೇಳಿದರೆ, ಅಂಬೇಡ್ಕರ್ ಬಗ್ಗೆ ಹೀಚು ಮಾಗಿದ ಹಣ್ಣಿಗೆ ಹೇಳುತ್ತದೆ. ಮೊದಲನೆಯದರಲ್ಲಿ ನಿಧಾನತೆ ಇದ್ದರೆ ಎರಡನೆಯದರಲ್ಲಿ ವೇಗ ಇದೆ. ಈ ನಡಿಗೆಯಿಂದಾಗಿಯೇ ಒಂದೇ ಆಶಯ ಪರಸ್ಪರ ವಿರುದ್ಧವಾಗಿ ಕಾಣಲೂಬಹುದು ಎನ್ನುತ್ತಾರೆ.

ಮುಂದುವರೆದು ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ, ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ, ಅಂಬೇಡ್ಕರ್‌ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ, ಇಬ್ಬರೂ ಮಾಡುತ್ತಿದ್ದುದು ಒಂದೇ ಕೆಲಸವಲ್ಲವೇ?

ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಒಂದು ಹೊರಗಿನದು. ಪಾಪಪ್ರಜ್ಞೆಯ ಅರಿವಿನಿಂದ ಮೂಡಿದ್ದು. ಮತ್ತೊಂದು ಒಳಗಿನಿಂದಲೇ, ಅಪಮಾನದ ಬೆಂಕಿಯಲ್ಲಿ ಕುದಿದು ಸ್ವಾಭಿಮಾನದಿಂದ ಸಿಡಿದದ್ದು.

ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ಶ್ರೇಣೀಕರಣ ವ್ಯವಸ್ಥೆಯ ಅಸಮಾನತೆ ಪ್ರಶ್ನೆ ಸಂವೇದನಾಶೀಲ ಮನಸ್ಸುಗಳನ್ನು ನಿರಂತರವಾಗಿ ಕಾಡುತ್ತಲೇ ಬಂದಿದೆ. ಪಂಪ ಕರ್ಣನ ಮೂಲಕ ಈ ಪ್ರಶ್ನೆ ಕೇಳುತ್ತಾನೆ. ದುರ್ಯೋಧನ ಭೀಷ್ಮರಿಗೆ ಸೇನಾಧಿಪತಿಯ ಪಟ್ಟ ಕಟ್ಟುವಾಗ ಕರ್ಣ ಅದನ್ನು ಸಕಾರಣವಾಗಿಯೇ ವಿರೋಧಿಸುತ್ತಾನೆ.

ಮುಂದೆ ವಚನಕಾರರಲ್ಲಿ ವ್ಯವಸ್ಥೆಯ ಬಗೆಗಿನ ವಿರೋಧ ಇಡೀ ಚಳವಳಿಯ ಕೇಂದ್ರಕ್ಕೆ ಬಂದಿತು. ಬಸವಣ್ಣ ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯ ಮೇಲ್ತುದಿಯಲ್ಲಿರುವವನಿಗೂ, ಈ ವ್ಯವಸ್ಥೆಯ ಕೆಳತುದಿಯಲ್ಲಿರುವವನಿಗೂ ಅರ್ಥಪೂರ್ಣ ಸಂಬಂಧ ಕಲ್ಪಿಸಲು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹೋರಾಟ ಆರಂಭಿಸುತ್ತಾನೆ.

ಜನ ಬದುಕಬೇಕು ಎಂದು ಕಾವ್ಯವನ್ನು ಬರೆದ ರಾಘವಾಂಕನಲ್ಲಿ ಇದೇ ಸಮಸ್ಯೆ ಮತ್ತಷ್ಟು ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಕುಲದ ಸಮಸ್ಯೆಯೇ ಹರಿಶ್ಚಂದ್ರಕಾವ್ಯದ ಮೂಲದ್ರವ್ಯ. ಸತ್ಯಪರಿಪಾಲನೆಗಾಗಿ ಹರಿಶ್ಚಂದ್ರ ಏನೆಲ್ಲ ಪಾಡು ಪಡುತ್ತಾನೆ ಎಂದು ಮೇಲ್ನೋಟಕ್ಕೆ ಕಂಡರೂ ಆತನ ಮೂಲ ಸಮಸ್ಯೆ ಕುಲದ ಪ್ರಶ್ನೆಯೇ ಆಗಿದೆ.

ಕನಕದಾಸನಂತೂ ತನ್ನ ‘ರಾಮಧಾನ್ಯ ಚರಿತೆ’ಯ ವಸ್ತುವನ್ನಾಗಿ ಇದೇ ಪ್ರಶ್ನೆಯನ್ನು ಆರಿಸಿಕೊಳ್ಳುತ್ತಾನೆ. ಅಲ್ಲಿ ವ್ರೀಹಿ ಮೇಲುವರ್ಗವನ್ನು ಪ್ರತಿನಿಧಿಸಿದರೆ, ನರೆದಲಗ ಕೆಳವರ್ಗದ ಪ್ರತಿನಿಧಿ. ಅವರಿಬ್ಬರ ಜಗಳದಲ್ಲಿ ಕಡೆಗೆ ರಾಘವ ನರೆದಲಗದ ಪರ ನಿಂತು ಅದಕ್ಕೆ ರಾಘವ ಎಂಬ ತನ್ನ ಹೆಸರು ನೀಡುತ್ತಾನೆ. ಅದರ ಸಂಕ್ಷಿಪ್ತ ರೂಪವೇ ಮುಂದೆ ರಾಗಿ ಎಂದಾಗುತ್ತದೆ. ವರ್ಣ ಸಂಘರ್ಷಸದ ರೂಪಕ ಕಾವ್ಯವೇ ‘ರಾಮಧಾನ್ಯ ಚರಿತೆ’.

ಆಧುನಿಕ ಸಾಹಿತ್ಯದಲ್ಲೂ ಶಿವರಾಮ ಕಾರಂತರ ಚೋಮ, ಕುವೆಂಪು ಅವರ ಗುತ್ತಿ ಹಾಗೂ ದೇವನೂರ ಮಹಾದೇವ ಅವರ ಸಾಕವ್ವ ಈ ಸಮಸ್ಯೆಯ ಪ್ರಾತಿನಿಧಿಕ ಪಾತ್ರಗಳು. ಈ ಮೂವರೂ ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಣೆಯ ಬೇರೆ ಬೇರೆ ನೆಲೆಗಳನ್ನು ಪ್ರತಿನಿಧಿಸುತ್ತಾರೆ.

ಚೋಮನಿಗೆ ತಾನು ಸ್ವಂತ ಬೇಸಾಯಗಾರನಾಗಬೇಕೆಂಬ ಹಂಬಲ. ಅದಕ್ಕಾಗಿ ಬದುಕಿಡೀ ಆತ ಬವಣೆ ಪಡುತ್ತಾನೆ. ಚೋಮನ ಬದುಕಿನ ದುರಂತದ ಹಿನ್ನೆಲೆಯಲ್ಲಿ ಅನುಭವಕ್ಕೆ ಬರುವ ಸಹಾನುಭೂತಿಯ ಸಂವೇದನೆ ಗಾಂಧಿಯ ರೀತಿಯದು.

‘ಒಡಲಾಳ’ದ ಸಾಕವ್ವ ಕಳೆದುಹೋದ ತನ್ನ ಹುಂಜವನ್ನು ಹುಡುಕಲು ಮೊಮ್ಮಗ ಶಿವೂನನ್ನು ಕರೆದುಕೊಂಡು ಹೊರಡುತ್ತಾಳೆ. ಹಾದಿಯಲ್ಲಿ ಅವರಿಬ್ಬರ ಮಾತುಕತೆ ನಡೆಯುತ್ತದೆ. ಆ ಸಂದರ್ಭದಲ್ಲಿ ಸಾಕವ್ವ ಹೇಳುತ್ತಾಳೆ: ಯಮಧರ್ಮ ಎದುರಿಗೆ ಬಂದು ಮುದುಕಿಯ ಧೈರ್ಯ ಮೆಚ್ಚಿ ಏನು ವರ ಬೇಕೋ ಅಂತ ಕೇಳಿಕೋ ಎಂದಾಗ ಸಾಕವ್ವ ನೋಡು ಸ್ವಾಮಿ... ನನ್ನ ಮೊಮ್ಗೂಸು ನರಲೋಕದಲಿ ರಾಜ್‌ಭಾರ ಮಾಡುವಂಥ ವರಕೊಡು... ಅಷ್ಟು ಸಾಕು ಅಂತೀನಿ ಎನ್ನುತ್ತಾಳೆ. ಇದು ಸಾಮಾಜಿಕ ಚಲನೆಯ ಮತ್ತೊಂದು ಮಹತ್ವದ ಪಲ್ಲಟ. ಸಾಕವ್ವ ಕಾಣುವ ಈ ಕನಸು ಬದಲಾದ ಸಂದರ್ಭವನ್ನು ಸೂಚಿಸುತ್ತದೆ. ಇದು ಗಾಂಧಿಗಿಂತ ಭಿನ್ನವಾದ ಅಂಬೇಡ್ಕರ್ ಮಾದರಿ.

ಹೀಗೆ ಜಡಗೊಂಡ ಸಾಮಾಜಿಕ ವ್ಯವಸ್ಥೆಯನ್ನು ಚಲನಶೀಲಗೊಳಿಸಲು ಸಂವೇದನಾಶೀಲ ಮನಸ್ಸುಗಳು ಮತ್ತೆ ಮತ್ತೆ ಪ್ರಯತ್ನಿಸಿದರೂ ವಾಸ್ತವದಲ್ಲಿ ನಮ್ಮ ಸಾಮಾಜಿಕ ರಚನೆಯ ಮೂಲ ವಿನ್ಯಾಸದ ಸ್ವರೂಪದಲ್ಲಿ ಅಂತಹ ಮಹತ್ವದ ಬದಲಾವಣೆಯಾದಂತೆ ಕಾಣಿಸುತ್ತಿಲ್ಲ. ಇಂತಹ ಎಚ್ಚರದ ಪ್ರಜ್ಞೆಯನ್ನು ಯಥಾಸ್ಥಿತಿ ಬಯಸುವ ಸಾಂಸ್ಥಿಕ ರೂಪದ ವ್ಯವಸ್ಥೆ ಸದಾ ನಿಯಂತ್ರಿಸುತ್ತಲೇ ಇರುತ್ತದೆ. ಮಾತ್ರವಲ್ಲ, ಅಂತಹ ಜಾಗೃತ ಪ್ರಜ್ಞೆಗೆ ಮಂಕು ಕವಿಯುವಂತೆ ಮಾಡುತ್ತದೆ. ಮಂಕು ಕವಿದ ಪ್ರಜ್ಞೆಯೇ ಮುಂಚೂಣಿಯಲ್ಲಿ ನಿಂತಾಗ ಚಲನೆಯ ಗತಿ ಮುಂದುಹಿಂದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.