ಗೋಧಿ ಬಣ್ಣದ, ದುಂಡನೆಯ ಮುಖದ ಅಸ್ಗರ್ ಅಲಿ, ಹೊಳಪು ಕಂಗಳ ಹುಡುಗ. ಸರಕಾರಿ ಹೈಸ್ಕೂಲಿನ ಒಂಬತ್ತನೆ ತರಗತಿಯಲ್ಲಿ ಕಲಿಯುತ್ತಿದ್ದು, ಓದು–ಬರಹದಲ್ಲಿ ಜಾಣನೂ ವಿಧೇಯನೆಂದು ಶಿಕ್ಷಕರ ಮೆಚ್ಚುಗೆ ಗಳಿಸಿದ್ದ. ಹೆಚ್ಚುಕಡಿಮೆ ಜೀವಪುರದ ಜನಕ್ಕೆ ಪ್ರೀತಿಯ ಹುಡುಗನೆನಿಸಿದ್ದ.

ಕೋಳಿ ಕೂಗುವ ಮುನ್ನವೆ ಹಾಸಿಗೆ ಬಿಟ್ಟೇಳುತ್ತಿದ್ದ ಅಸ್ಗರ್ಅಲಿ, ಮುಖ ತೊಳೆದು ಸೈಕಲ್ ಏರಿ, ನೇರವಾಗಿ ಬಸ್ನಿಲ್ದಾಣಕ್ಕೆ ಹೊರಟು, ಅಲ್ಲಿ ಪೇಪರ್ ಏಜಂಟರುಗಳಿಂದ ಪತ್ರಿಕೆಗಳನ್ನು ಪಡೆದು, ಮತ್ತೆ ಮನೆಗೆ ಬರುವನು. ಅಷ್ಟರಲ್ಲಿ ಅವನ ಅಬ್ಬಾ-ಅಮ್ಮಾ ಹಾಲಿನ ಪಾಕೀಟುಗಳನ್ನು ಟ್ರೇಗೆ ತುಂಬಿಟ್ಟಿರುವರು. ಟ್ರೇಗಳನ್ನು ಸೈಕಲ್ ಕ್ಯಾರಿಯರಿಗೇರಿಸಿ, ಹ್ಯಾಂಡಲ್ಗಳಿಗೆ ಪತ್ರಿಕೆಗಳ ಬ್ಯಾಗ್ ಇಳಿಬಿಟ್ಟು ಸೈಕಲ್ ಏರುವನು. ‘ಹುಷಾರು ಬೇಟಾ’ ಅಂತ ಅಬ್ಬಾ–ಅಮ್ಮಾ ಕಾಳಜಿ ವ್ಯಕ್ತಪಡಿಸುವರು.
ಸರಿಯಾದ ವೇಳೆಗೆ ಗ್ರಾಹಕರಿಗೆ ಹಾಲಿನ ಪಾಕೀಟು, ಪತ್ರಿಕೆ ತಲುಪಿಸಬೇಕೆನ್ನುವ ತುಡಿತ ಹುಡುಗನದು. ಬ್ರಾಹ್ಮಣರ ಅಗ್ರಹಾರ, ಲಿಂಗಾಯತರ ಓಣಿ, ಮುಸ್ಲಿಮರ ಕಿಲ್ಲಾ, ಕ್ರಿಶ್ಚಿಯನ್ರ ಚರ್ಚ್ ಆವರಣ, ವಿಸ್ತೀರ್ಣ ಬಡಾವಣೆಗಳ ಗೊತ್ತುಪಡಿಸಿದ ಮನೆಗಳೆದುರು ಸೈಕಲ್ ನಿಲ್ಲಿಸಿ ಬೆಲ್ ಬಾರಿಸುವನು. ಬಾಗಿಲು ತೆರೆಯುತ್ತಿದ್ದಂತೆ ಒಳಗೆ ಬೆಳಕಿನೊಂದಿಗೆ, ಅಸ್ಗರ್ಅಲಿಯ ಮುಗುಳ್ನಗೆ ಮತ್ತು ‘ಅಕ್ಕಾವರೆ, ಅಂಕಲ್–ಅಂಟಿ, ಅಜ್ಜಾ–ಅಜ್ಜಿ, ನಾನಾ–ನಾನಿ, ಮಾಮಾ–ಮಾಮಿ, ಚಾಚಾ–ಚಾಚಿ, ಆಪಾ’ ಎಂಬ ಸಂಬೋಧನೆಯ ಅಕ್ಕರದ ಕಲರವ ತೂರಿ ಬಂದು ಮನಸ್ಸು ಆಹ್ಲಾದಗೊಳಿಸುವುದು. ಯಾರಿಗೂ ಬೇಸರ ಮಾಡದೆ, ತೃಪ್ತಿಪಡಿಸಿ ಮನೆಗೆ ಬಂದು, ಸ್ನಾನ ಮಾಡಿ, ಅಮ್ಮಾ ಕೊಟ್ಟ ತಿಂಡಿ ತಿಂದು, ಚಹ ಕುಡಿದು, ಬೆನ್ನಿಗೆ ಸ್ಕೂಲ್ ಬ್ಯಾಗ್ ಹಾಕಿ, ಪ್ರಾರ್ಥನೆಗೆ ಹಾಜರಾಗುವನು. ಇದು ಅಸ್ಗರ್ಅಲಿಯ ದಿನಚರಿ. ದೇವರ ಮೇಲಿನ ಹೂವು ತಪ್ಪಬಹುದು, ಆದರೆ ಅಸ್ಗರ್ಅಲಿಯ ದಿನಚರಿ ನಿಲ್ಲುವುದಿಲ್ಲ. ಎರಡು ವರ್ಷಗಳಿಂದ ಹುಡುಗ ಈ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿರುವನು.

ಅವನ ಅಬ್ಬಾ ಹಸನ್ಬಾಷಾ. ಅರವತ್ತೈದರ ವಯಸ್ಸಿನವನು. ಸಾಮಾನ್ಯ ಎತ್ತರದ ತೆಳ್ಳಗಿನ ಕೆಂಪು ಶರೀರ. ಅಂತಃಕರಣದ ಕನ್ನಡಿಯಂತಿರುವ ಮುಖ. ಧ್ವನಿ ತುಂಬ ಮಧುರ, ಮಾತು ಮೃದು, ಹಿತಕರ. ಹತ್ತನೇ ತರಗತಿಯ ಓದಿಗಿಂತ ಲೋಕಾನುಭವದ ಪರಿಜ್ಞಾನ ಪಕ್ವವಾಗಿ ಜಮಾತು ಮತ್ತು ಇತರೆ ಸಮಾಜಗಳಿಗೆ ಬೆಳಕಾಗಿ ಪರಿಣಮಿಸಿದೆ. ಎಲ್ಲರೊಂದಿಗೆ ಬೆರೆಯುವ ಸ್ವಭಾವ. ಬಿಕ್ಕಟ್ಟಿನ ಸಂದರ್ಭಗಳಿಗೆ ಸಹಾನುಭೂತಿಯಿಂದ ತೆರೆದುಕೊಳ್ಳುವ ಧಾವಂತ. ಸಂಕಷ್ಟಗಳಿಗೆ ಮಿಡುಕುವ ಮಾನವೀಯತೆ. ಮನುಷ್ಯತ್ವದ ಕಾಳಜಿಯಿಂದಾಗಿ ಹಸನ್ಬಾಷಾನ ಬದುಕು ಜೀವಪುರದೊಂದಿಗೆ ಸಾತತ್ಯಗೊಂಡಿದೆ. ಕುಲಕರ್ಣಿ ಬಾಬುರಾವ್, ಬಣಜಿಗರ ಶಂಬಣ್ಣ, ಪಂಚಮಸಾಲಿ ಸಂಗಣ್ಣ, ಹಿರೇಮಠದ ಈರಯ್ಯ, ಮರಾಠರ ಮಾಧವರಾವ್, ಬಸವರಡ್ಡಿ, ನೇಕಾರ ಮಲ್ಲೇಶಪ್ಪ, ಕ್ರಿಶ್ಚಿಯನ್ರ ಜಾರ್ಜ ಫರ್ನಾಂಡೀಸ್, ಜೈನರ ಬಾಹುಬಲಿ ಹೀಗೆ ಅವನ ಒಡನಾಡಿಗಳ ಪಟ್ಟಿ ಹನುಮಂತನ ಬಾಲ. ಇವರೆಲ್ಲ ಬೇರೆಬೇರೆ ಉದ್ಯೋಗ, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೂ, ಭೇಟಿಯಾದಾಗಲೊಮ್ಮೆ ಏಕವಚನದಲ್ಲಿ ಮಾತಾಡಿಕೊಳ್ಳುವರು. ಹಸನ್ಬಾಷಾ ಮುಂದಕ್ಕೆ ಓದಿದ್ದರೆ, ಸರಕಾರಿ ಸೇವೆಯಲ್ಲಿರಬಹುದಾಗಿತ್ತು. ಅವನ ಬಾಬಾ ಮಲಿಕಸಾಬ ಬೆನ್ನು ನೋವಿನಿಂದ ಹಾಸಿಗೆ ಹಿಡಿದ ಮೇಲೆ, ಮನೆಯ ಹೊಣೆಗಾರಿಕೆ ಅವನ ಹೆಗಲಿಗೇರಿತ್ತು.

ನೇಕಾರಿಕೆ ಮನೆಯ ಉದ್ಯೋಗವಾಗಿತ್ತು. ಪರಂಪರಾಗತವಾಗಿ ಹಿರಿಯರು ರೇಶ್ಮೆ ಪಟಗಾ ನೇಯುತ್ತಿದ್ದರು. ಮಲಿಕಸಾಬ ಪಟಗಾ ನೇಯುವುದರಲ್ಲಿ ನೈಪುಣ್ಯ ಸಾಧಿಸಿ, ಪ್ರಸಿದ್ಧಿಯಾಗಿದ್ದ. ಅವನು ನೇಯ್ದ ಪಟಗಾಗಳು ದೇಶದ ಮೂಲೆಮೂಲೆಗೂ ಹೋಗುತ್ತಿದ್ದವು. ಗ್ರಾಮೀಣ ಪುರುಷರ ತಲೆಗೆ ಭೂಷಣವಾಗಿ, ಮಾರ್ಕೆಟ್ ಭರ್ಜರಿಯಾಗಿತ್ತು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ, ಒಬ್ಬ ಸಿರಿವಂತರು, ಮಲಿಕಸಾಬನಿಗೆ ಹೇಳಿ ರೇಶ್ಮೆ ಪಟಗಾವೊಂದನ್ನು ನೇಯಿಸಿದ್ದರು. ಅದನ್ನು ಮಹಾತ್ಮಾ ಗಾಂಧಿ ಅವರಿಗೆ ಉಡುಗೊರೆಯಾಗಿ ಕೊಡುವ ಉದ್ದೇಶವಿತ್ತು. ಹೀಗಾಗಿ ತಾನು ನೇಯ್ದ ಪಟಗಾ ಗಾಂಧೀಜಿಯವರ ತಲೆಯನ್ನು ಅಲಂಕರಿಸುತ್ತದೆಂಬ ಅಭಿಮಾನದಿಂದ ಮಲಿಕಸಾಬ ಅದನ್ನು ಬಹಳ ಉಮೇದಿನಿಂದ ನೇಯ್ದು ಕೊಟ್ಟಿದ್ದ. ಗಾಂಧೀಜಿ ಆ ಪಟಗಾ ಧರಿಸಿದ್ದರು. ಅದು ಕ್ಷಣ ಮಾತ್ರ. ಅರೆಬತ್ತಲೆ ಫಕೀರನಾಗಿದ್ದ ಗಾಂಧೀಜಿ ಪಟಗಾವನ್ನು ಬಡವನೊಬ್ಬನಿಗೆ ಕೊಟ್ಟುಹೋಗಿದ್ದರು. ತನ್ನ ಶ್ರಮದ ಈ ಸಾರ್ಥಕ ಸಂಗತಿಯನ್ನು ಮಲಿಕಸಾಬ ಆಗಾಗ ನೆನಪಿಸಿಕೊಳ್ಳುತ್ತಿದ್ದ.

ಅವನ ಪರಿಶ್ರಮ, ಪ್ರಾಮಾಣಿಕತೆ ನಿರಂತರವಾಗಿತ್ತು. ಆದರೆ ಬದುಕು ಊರ್ಧ್ವಗೊಂಡಿರಲಿಲ್ಲ. ಅವನ ಶ್ರಮದಿಂದ ಉದ್ಧಾರವಾದವರು ಊರಿನ ಬಂಡವಾಳದಾರರು. ಅವನು ಮಗ್ಗದ ಕುಣಿಯಲ್ಲಿ ಕುಳಿತು ನೇಯುತ್ತಲೇ ಇದ್ದ. ಬಂಡವಾಳದಾರರು ಮಹಡಿ ಮೇಲೆ ಮಹಡಿ ಕಟ್ಟುತ್ತಲೇ ಇದ್ದರು. ಅಲ್ಲಿ ಮಹಾಲಕ್ಷ್ಮೀ ಕಾಲಿಗೆ ಗೆಜ್ಜೆಕಟ್ಟಿಕೊಂಡು ಕುಣಿಯುತ್ತಲೇ ಇದ್ದಳು. ಅವರು ಝಣಝಣ ಕಾಂಚಾಣ ಎಣಿಸುತ್ತಲೇ ಇದ್ದರು.

ಮನೆ ಮಂದಿಯೊಂದಿಗೆ ಅಹರ್ನಿಶಿ ದುಡಿದರೂ ಮಲಿಕಸಾಬನದು ಫಕೀರನ ಸ್ಥಿತಿ. ಬೇನೆ ಬಳಲಿಕೆಗಳು ಅವನ ಸೊತ್ತಾಗಿ ಮಗ್ಗದೊಳಗೆ ಸಂಸಾರದ ಲಾಳಿ ಚಲಿಸುತ್ತಿತ್ತು. ಐದು ಜನ ಹೆಣ್ಣುಮಕ್ಕಳು. ಅವರ ನಿಕಾಹ್ ನೆರವೇರಿಸುವಷ್ಟರಲ್ಲಿ ಮಲಿಕಸಾಬನ ನರನಾಡಿಗಳ ಜೀವದ್ರವ್ಯ ಬತ್ತಿಹೋಗಿತ್ತು. ಬೆನ್ನುನೋವು ಅಸಾಧ್ಯವಾಗಿ ಒಬ್ಬನೇ ಮಗ ಹಸನ್ಬಾಷಾನನ್ನು ಮಗ್ಗದಲ್ಲಿ ಕುಳ್ಳಿರಿಸಿ ಅವನು ಹಾಸಿಗೆಗೆ ಒರಗಿದ್ದ. ಹಂಗಾಮಿನ ತರುಣ ಹಸನ್ಬಾಷಾ ಉತ್ಸಾಹದ ಬುಗ್ಗೆಯಂತೆ, ರೇಷ್ಮೆ ಎಳೆಗಳಲ್ಲಿ ಲಾಳಿಯನ್ನು ಓಡಿಸಿದ್ದೇ ಓಡಿಸಿದ್ದು, ಉದ್ದುದ್ದ ಪಟಗಾ ನೇಯ್ದಿದ್ದೇ ನೇಯ್ದದ್ದು. ಮಗನ ಬದುಕಿನ ಬಗ್ಗೆ ಭರವಸೆ ಹುಟ್ಟಿದ್ದೇ, ಮಲಿಕಸಾಬ, ವಹಿದಾಳೊಂದಿಗೆ ಅವನ ನಿಕಾಹ್ ನೆರವೇರಿಸಿ ತನಗಿನ್ನು ಯಾವ ಆಸೆಗಳಿಲ್ಲವೆನ್ನುವಂತೆ ಕಣ್ಮುಚ್ಚಿದ್ದ.

ಗರೀಬಿಯನ್ನು ಪಲ್ಲಟಿಸಲು ಹಸನ್ಭಾಷಾ ಹೋರಾಡುತ್ತಲೇ ಇದ್ದ. ಅವನ ಮೇಲೆ ಅಲ್ಲಾಹನ ಕರುಣೆ ಸ್ಫುರಿಸಲು ಅಮ್ಮಾ ಸೈರಾಬಿ ಪ್ರಾರ್ಥಿಸುತ್ತಲೇ ಇದ್ದಳು. ವಹಿದಾ ಗಂಡನ ಉಸಿರಿನೊಂದಿಗೆ ಉಸಿರು ಬೆರೆಸುತ್ತ, ಬೆವರು ಹನಿಸುತ್ತ ಮೂರು ಹೆಣ್ಣು, ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡಿದ್ದಳು. ಚಂದದ ರೇಷ್ಮೆ ಪಟಗಾಗಳು ಕುಟುಂಬಕ್ಕೆ ಮಟನ್, ಚಿಕನ್, ಫಿಶ್ ಬಿರಿಯಾನಿ ಮೆಲ್ಲುವ ಸುಖ ನೀಡದಿದ್ದರೂ, ರೊಟ್ಟಿ–ಚಟ್ನಿಗಂತೂ ಕೊರತೆ ಮಾಡಿರಲಿಲ್ಲ. ಆದರೆ ಪ್ರವರ್ಧಮಾನಗೊಳ್ಳುತ್ತಿದ್ದ ಮಕ್ಕಳೊಂದಿಗೆ ಜಮಾನಾ ಕೂಡಾ ಆಧುನಿಕತೆಗೆ ತೆರೆದುಕೊಳ್ಳುತ್ತ ಬೆರಗು ಹುಟ್ಟಿಸತೊಡಗಿತ್ತು. ಪಟಗಾಪ್ರಿಯರ ಸಂಖ್ಯೆ ಕಮ್ಮಿಯಾಗುತ್ತ ಬಂದು, ಹೊಸತಲೆಮಾರಿನವರ ವೇಷ–ಭೂಷಣಗಳು ಫ್ಯಾಶನ್ ಮಾದರಿಗಳಾಗಿ, ಪಟಗಾ ಉದ್ಯಮವು ಕುಸಿಯತೊಡಗಿತು. ಡಿಸೈನ್ ರುಮಾಲುಗಳು ಮಾರ್ಕೆಟ್ಟಿಗೆ ಬಂದು, ಮದುವೆ, ಉತ್ಸವ, ಸಮಾರಂಭ, ಮೆರವಣಿಗೆಗಳ ಆಕರ್ಷಣೆಯ, ತತ್ಕಾಲದ ವಸ್ತುಗಳಾಗಿ ವಿಜೃಂಭಿಸುತ್ತಿರುವಂತೆ, ಹಸನ್ಬಾಷಾನ ಮಗ್ಗದ ಸದ್ದು ಕ್ಷೀಣಿಸಲಾರಂಭಿಸಿ ಕೊನೆಗೂ ಸ್ಥಗಿತಗೊಂಡಿತು.

ರೊಟ್ಟಿ–ಚಟ್ನಿಗೂ ತತ್ವಾರ ಎನ್ನುವ ಸ್ಥಿತಿ. ಮದುವೆ ವಯಸ್ಸಿಗೆ ಬೆಳೆದುನಿಂತ ಹೆಣ್ಣುಮಕ್ಕಳು. ಮತ್ತೊಬ್ಬರ ಹತ್ತಿರ ಯಾಚಿಸುವುದಕ್ಕೆ ಇಷ್ಟಪಡದ ಸ್ವಾಭಿಯಾನ ಹಸನ್ಬಾಷಾನ ಸಂಸಾರವನ್ನು ತಹತಹಿಸತೊಡಗಿತ್ತು. ಕೆಲಸವನ್ನು ಹುಡುಕಿಕೊಂಡು ಹೋಗುವ ಧಾವಂತ. ಓದು-ಬರಹ ಅವನ ಸಹಾಯಕ್ಕೆ ಬಂದು, ಜನರಿಗೆ ಅರ್ಜಿ ಬರೆದುಕೊಡುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸದಲ್ಲಿ ತೊಡಗಿ ಅವನ ನಿಟ್ಟುಸಿರು ಕೊಂಚ ತಣ್ಣಗಾಗಿತ್ತು.

ಶಂಬಣ್ಣಾ, ಸಂಗಣ್ಣರ ಸಲಹೆ ಮೇರೆಗೆ ಮನೆಯ ಮುಂದಿನ ಬಂಕ್ದಲ್ಲಿ ಬೀಡಿ ದುಖಾನ್ ಪ್ರಾರಂಭಿಸಿದ ಹಸನ್ಬಾಷಾನಿಗೆ ಒಂದು ಕಡೆಗೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಯಿತು. ಶಂಬಣ್ಣ, ಸಂಗಣ್ಣ ದುಖಾನ್ ಶುರುಮಾಡಲು, ತಾವು ಸದಸ್ಯರಾಗಿದ್ದ ಬ್ಯಾಂಕಿನಿಂದ ಹಸನ್ಬಾಷಾನಿಗೆ ಲೋನ್ ಕೊಡಿಸಿದ್ದರು. ದುಖಾನ್ ವ್ಯಾಪಾರ ದಿನದಿನಕ್ಕೂ ವರ್ಧಿಸಿತು. ಮಕ್ಕಳ ತಿಂಡಿ–ತಿನಿಸು, ಬಾಳೆಹಣ್ಣು, ಮ್ಯಾಗಜಿನ್ಗಳು, ಸ್ಟೇಶನರಿ ವಸ್ತುಗಳು ಗಿರಾಕಿಗಳನ್ನು ಆಕರ್ಷಿಸಿ, ಹಸನ್ಬಾಷಾನ ಬದುಕನ್ನು ಅರಳಿಸಿದವು. ಮೂವರು ಹೆಣ್ಣುಮಕ್ಕಳನ್ನು ಸಾಲುಸಾಲಾಗಿ ಧಾರೆಯೆರೆದುಕೊಟ್ಟು ತನ್ನ ಎದೆಯ ಭಾರವನ್ನು ಹಗುರುಮಾಡಿಕೊಂಡ. ಆದರೆ ನಿರಾಳವೆನ್ನುವಂತಿರಲಿಲ್ಲ.

ಅಂಗಡಿಗೆ ಮಾಲು ತುಂಬಬೇಕು. ಸಂಸಾರದ ಗಾಡಿಯೋಡಿಸಬೇಕು. ಬ್ಯಾಂಕಿನ ಅಸಲು–ಬಡ್ಡಿ ತುಂಬಬೇಕು. ಹೆಣ್ಣುಮಕ್ಕಳ ಬಸಿರು–ಬಯಕೆ–ಬಾಣಂತನ ಎಲ್ಲದಕ್ಕೂ ದುಖಾನ್ ವ್ಯವಹಾರವೇ ಆಧಾರ. ಉಪವಾಸವಿದ್ದರೂ ಚಿಂತೆಯಿಲ್ಲ, ತಾನು ಸಾಲದಿಂದ ಮುಕ್ತನಾಗಬೇಕು ಅಂದುಕೊಳ್ಳುತ್ತಿದ್ದ ಹಸನ್ಬಾಷಾ. ಹಿರಿಯಮಗ ಅದೀಬ್ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು, ಮುಂದೆ ಓದುವುದಿಲ್ಲವೆಂದು ಕುಳಿತಾಗ, ಹಸನ್ಬಾಷಾನ ಗೆಳೆಯ ಬಾಹುಬಲಿ ಹುಡುಗನನ್ನು ತನ್ನ ಮೊಬಾಯಿಲ್ ಅಂಗಡಿಯಲ್ಲಿರಿಸಿಕೊಂಡು ಔದಾರ್ಯತೋರಿದ.

ತನ್ನ ಐದು ಹೊತ್ತಿನ ನಮಾಜು, ಅಮ್ಮಾ ಸೈರಾಬಿಯ ದುಆ, ಹೆಂಡತಿ ವಹಿದಾಳ ಸಹನೆ, ಸಹಕಾರ ಹಸನ್ಬಾಷಾನ ಜಿಂದಗಿಯನ್ನು ಫಿರ್ದೌಸ್ ಅತ್ತರ್ನಂತೆ ಘಮಘಮಿಸತೊಡಗಿತು. ಅವನ ಇಮಾನ್ (ಸತ್ಯವಿಶ್ವಾಸ) ಗುಣವು ಈ ಪರಿಮಳದ ಒಳತಿರುಳಾಗಿ ಜೀವಪುರವನ್ನು ಪ್ರಭಾವಿಸಿತ್ತು. ತನ್ನ ಅಬ್ಬಾನ ಪಡಿಯಚ್ಚನಂತಿದ್ದ ಅಸ್ಗರ್ಅಲಿ, ತನ್ನ ವಿನಯಶೀಲತೆಯಿಂದ ಊರಿನವರ ಗಮನಸೆಳೆದಿದ್ದ.

ಗೆಳೆಯ ಬಸವರೆಡ್ಡಿ ತನ್ನ ಬಂಧುಗಳ ಡೇರಿ ಹಾಲಿನ ಏಜನ್ಸಿಯನ್ನು, ಹಸನ್ಬಾಷಾನಿಗೆ ಕೊಡಿಸಿದ್ದ. ಅಸ್ಗರ್ಅಲಿ ತಾನು ಪೇಪರ್ ಹಂಚುತ್ತಿದ್ದ ಮನೆಗಳಿಗೆ ಹಾಲಿನ ಪಾಕೀಟು ಪೂರೈಸತೊಡಗಿದ. ಕೆಲಸಕ್ಕೆ ಹೋಗುವವರು, ವಯಸ್ಸಾದವರು, ರೋಗಗ್ರಸ್ತರು ಅಸ್ಗರ್ಅಲಿಗೆ ಇತರೆ ಕೆಲಸಗಳನ್ನು ಹೇಳುವರು. ಮೆಡಿಕಲ್ ಶಾಪ್ನಿಂದ ಔಷಧಿಯೋ, ಮಾರ್ಕೆಟಿನಿಂದ ತರಕಾರಿಯೋ, ಕಿರಾಣಿ ಸಾಮಗ್ರಿನೋ, ಲೈಟ್ ಬಿಲ್ ತುಂಬುವುದೋ, ಬ್ಯಾಂಕಿಗೆ ಹಣ ಕಟ್ಟುವುದೋ, ಯಾವುದೇ ಕೆಲಸವಿರಲಿ ಹುಡುಗ ನಗುತ್ತಲೇ ಮಾಡುವನು. ಕೆಲಸಕ್ಕೆ ಪ್ರತಿಯಾಗಿ ಯಾರಾದರೂ ಹಣ ಕೊಡಲು ಬಂದರೆ ‘ನಾನು ಮಾಡ್ತಿರೋದು ಸಣ್ಣ ಕೆಲಸ. ರೊಕ್ಕಾ ತಗೊಂಡ್ರೆ ಅದಕ್ಕೆ ಕಿಮ್ಮತ್ತು ಇರೋದಿಲ್ಲ’ ಎಂದು ನಿರಾಕರಿಸುವನು. ತಿನಿಸು ಕೊಡಲು ಬಂದರೆ ‘ಮನೆಯಲ್ಲಿ ಅಮ್ಮಾ, ನಾಷ್ಟಾ ತಯಾರು ಮಾಡಿರ್ತಾಳೆ’ ಅಂತ ನಯವಾಗಿ ನಿರಾಕರಿಸುವನು. ಅಶಕ್ತರಿಗೆ ಊರುಗೋಲಾಗುವ, ಬಳಲುವವರಿಗೆ ಸಹಾಯಹಸ್ತ ಚಾಚುವ ಅಸ್ಗರ್ ಅಲಿಯನ್ನು ಎಲ್ಲರೂ ಕೊಂಡಾಡುವರು. ಹಿರಿಯರು ‘ನೀನು ದೊಡ್ಡ ಮನುಷ್ಯನಾಗ್ತಿಯಪ್ಪ’ ಎಂದರೆ, ಹೆಣ್ಣುಮಕ್ಕಳು ‘ನಿನ್ನನ್ನು ಹಡೆದವರು ಪುಣ್ಯವಂತರು’ ಅಂತ ಹೆಮ್ಮೆ ಅಭಿವ್ಯಕ್ತಿಸುವರು. ಜನರ ಕಣ್ಮಣಿಯಾದ ಮಗನ ವಿಚಾರ ತಿಳಿದು ಅವರ ಅಬ್ಬಾ, ಅಮ್ಮಾ, ನಾನಿ ಸಂತೋಷಪಡುವರು.

ಜನ ಪ್ರೀತಿಯಿಂದ ಹುಡುಗನನ್ನು ಅಸ್ಗರ್ ಎಂದು ಕರೆಯುವರು. ಹೆಂಗಸರು ‘ಅಸ್ಗರ್ ಬಹಳ ಚಲೋ ಹುಡುಗ ನೋಡ್ರಿ’ ಅಂತ ಎದೆಯಾಳದ ಮಾತಾಡಿದರೆ, ಹಿರಿಯರು ‘ನಮ್ಮವ ಹಾಲಿನ ಹುಡುಗ’ ಅಂತ ಕರುಳ ಸಂಬಂಧ ಭಾವ ವ್ಯಕ್ತಪಡಿಸುವರು. ಯಾಕೋ ಪುರೋಹಿತರ ಜಾನಕಮ್ಮನಿಗೆ ಅಸ್ಗರ್ನನ್ನು ಕಂಡರೆ ಸಿಡಿಮಿಡಿ. ಬೆಳಿಗ್ಗೆ ಅಸ್ಗರ್ ಅಜ್ಜಿ, ಪೇಪರು, ಹಾಲು ಎಂದು ಸೈಕಲ್ ಬೆಲ್ ಬಾರಿಸಿದರೆ ‘ರಾಮರಾಮಾ, ನಂದೆಂಥ ಪ್ರಾರಬ್ಧ ಈ ಮುಪ್ಪಾವಸ್ಥಿಯೊಳಗ, ದಿವಸಾ ಮುಸಲರ ಹುಡುಗ ತಂದುಕೊಡುವ ಹಾಲಿನ್ಯಾಗ ಚಹ ಕುಡಿಯೋಹಾಂಗಾತು’ ಅಂತ ಗೊಣಗುಟ್ಟುವಳು. ‘ನೀನ ಎದ್ದುಹೋಗಿ ಹಾಲು ತಗೊಂಡು ಬಾ ಅಂದರೆ ಕಿವಿಗೆ ಹಾಕಿಕೊಳ್ಳೊದಿಲ್ಲ ಗೋಪಾಲ’ ಎಂದು ಇಂಜಿನಿಯರ್ ಮಗನನ್ನು ಬೈದುಕೊಳ್ಳುತ್ತ ಹಾಲಿನ ಪಾಕೀಟಿನ ಮೇಲೆ ಒಂದು ಬಿಂದಿಗೆ ನೀರು ಸುರಿಯುವಳು. ಸರಕಾರಿ ಹೈಸ್ಕೂಲಿನ ಟೀಚರಾದ ಸೊಸೆ ಮಂದಾಕಿನಿ, ‘ಹಾಲು ಪಾಕೀಟನ್ಯಾಗ ಇರ್ತದ ಬಿಡ್ರಿ. ಅದಕ್ಯಾಕ ಅಷ್ಟು ನೀರು ವೇಸ್ಟು ಮಾಡ್ತೀರಿ?’ ಎನ್ನುವಳು. ‘ಗಂಡಾ–ಹೆಂಡ್ತಿ ಕೂಡಿ ನನ್ನ ಧರ್ಮಾ, ಜಾತಿ ಕೆಡಿಸಲಿಕ್ಕೆ ಹತ್ತೀರಿ’ ಎಂದು ದೂಷಿಸುವಳು ಜಾನಕಮ್ಮ. ‘ಹುಡುಗನ ಜಾತಿ ಹಾಲಿನೊಳಗ ಸೇರಿರತದೇನು? ಮೊದ್ಲ ಈ ಹಾಲು ಎಲ್ಲಿಂದ ಬರ್ತದ ಅಂತ ತಿಳ್ಕೋರಿ’ ಎಂದು ಅತ್ತೆಯನ್ನು ತಿವಿದು ಹಾಲಿನ ಪಾಕೀಟನ್ನು ಒಳಗೆ ಒಯ್ಯುತ್ತಿದ್ದಳು ಮಂದಾಕಿನಿ. ಜಾನಕಮ್ಮನ ಗೊಣಗಾಟ ಅಸ್ಗರ್ಅಲಿಗೆ ಸೋಜಿಗವನ್ನುಂಟು ಮಾಡುತ್ತಿತ್ತು.

ಇದೇ ಅನುಭವ ಅವನಿಗೆ ಶೀಲವಂತರೋಣಿಯ ಗುರುಸಂಗಪ್ಪ ಶೆಟ್ಟರ ಮನೆಯಲ್ಲೂ ಆಗುತ್ತಿತ್ತು. ಶೆಟ್ಟರ ಹೆಂಡತಿ ಚೆನಮಲ್ಲವ್ವ, ಅಸ್ಗರ್ಅಲಿ ಕೈಯಿಂದ ಹಾಲಿನ ಪಾಕೀಟು ಇಸಿದುಕೊಂಡದ್ದೆ ‘ನಾನು ದಿನಾ ಒಟಗುಡುದ ಆತು. ಕಪ್ಪುಕಡಿ ತಿನ್ನೋ ಹುಡುಗನ ಕೈಯಿಂದ ಹಾಲು ತರಿಸೋದು ಬ್ಯಾಡ ಅಂದ್ರೂ ಕೇಳಂಗಿಲ್ಲ’ ಎಂದು ಅಸಮಾಧಾನದಿಂದ ಕುದಿಯುತ್ತಿದ್ದರೆ, ಶೆಟ್ಟರು ಪೇಪರ ಮೇಲೆ ಕಣ್ಣಾಡಿಸುತ್ತ ‘ನಿನ್ನ ಇಬ್ಬರೂ ಸುಪುತ್ರರು ಧಾಬಾದಾಗ ಮಣ್ಣುಮಸಿ ತಿಂದು ಬರ್ತಾರ. ಅದನ್ನು ಹ್ಯಾಂಗ ಸಹಿಸಿಕೊಂತಿ?’ ಎಂದು ಹೆಂಡತಿಯ ಬಾಯಿ ಮುಚ್ಚಿಸುವರು.

ಮನುಷ್ಯರ ಜಾತಿ ಸೂಕ್ಷ್ಮಗಳು ತನ್ನ ಅರಿವಿಗೆ ಬರದಿದ್ದರೂ ಅಸ್ಗರ್ಅಲಿ ಈ ಸಂಗತಿಗಳನ್ನು ತನ್ನ ಅಮ್ಮಾ ಮತ್ತು ನಾನಿ ಎದುರು ಪ್ರಸ್ತಾಪಿಸುತ್ತಿದ್ದ. ‘ಇರೋತನಕ ಚಂದಾಗಿ ಜಿಂದಗಿ ಮಾಡೋದು ಬಿಟ್ಟು ಭೂಮಿನ ಜಹನ್ನಮ್ ಮಾಡ್ತಾರೆ’ ಎಂದು ಸೈರಾಬಿ ತಳಮಳಿಸುವಳು. ವಹಿದಾ ಮಗನ ತಲೆ ನೇವರಿಸಿ ‘ಅವರು ಏನಾದ್ರೂ ಅಂದ್ಕೊಳ್ಳಲಿ ಬೇಟಾ, ನೀನು ಮಾತ್ರ ದೂಸರಿ ಮಾತಾಡಬ್ಯಾಡ. ಮನಸ್ಸಿಗೆ ಅವರ ಮಾತನ್ನು ಹಚ್ಗೋಬ್ಯಾಡ’ ಅಂತ ತಿಳಿ ಹೇಳುವಳು.

ಸ್ಕೂಲಿನಲ್ಲಿ ಅವನಿಗೆ ಎಲ್ಲಾ ಧರ್ಮದ ಸಹಪಾಠಿಗಳಿದ್ದರು. ಎಲ್ಲರೂ ಕೂಡಿ ನಕ್ಕುನಲಿಯೋರು, ಮಾತಾಡೋರು. ಇತಿಹಾಸ ಬೋಧಿಸುವ ಶಿಕ್ಷಕರೊಬ್ಬರು ಮಾತ್ರ ಅಸ್ಗರ್ ಅಲಿಯನ್ನು ‘ಏ ಸಾಬಾ’ ಅಂತ ಕರೆದು ಮುಜುಗರ ಹುಟ್ಟಿಸೋರು. ಪಾಠ ಹೇಳುವಾಗ ಆವೇಶಕ್ಕೊಳಗಾಗಿ ‘ಮುಸಲರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದರು. ದೇವಾಲಯ ಕೆಡವಿ ಮಸೀದಿ ಕಟ್ಟಿದರು’ ಅಂತ ಒತ್ತಿ ಹೇಳೋರು. ಎಲ್ಲರಂತೆ ಸ್ವಚ್ಛಂದವಾಗಿ ಇರಬೇಕೆಂದರೆ ಕೆಲವರು ಪರಕೀಯನಂತೆ ನೋಡುವ, ಮನಸ್ಸು ಮುದುಡುವಂತೆ ಮಾತಾಡುವ ವಿಚಿತ್ರ ಪ್ರಸಂಗಗಳು ಹುಡುಗನನ್ನು ಆವರಿಸಿಕೊಂಡು ಸಂದಿಗ್ಧ ಸಂಕಟಗಳನ್ನುಂಟು ಮಾಡುತ್ತಿದ್ದವು. ಆಗೆಲ್ಲ ಅವನು ತನ್ನ ಅಬ್ಬಾನ ಹತ್ತಿರ ಕುಳಿತು ‘ಅಬ್ಬಾ ಈ ಮಂದಿ ಹಿಂಗ್ಯಾಕ ಮಾಡ್ತಾರ?’ ಎಂದು ಮುಗ್ಧವಾಗಿ ಕೇಳುವನು.

ಹಸನ್ಬಾಷಾ ವಿಷಾದ ವ್ಯಕ್ತಪಡಿಸುತ್ತಿದ್ದ.
‘ನಮ್ಗ ಹಿಂದಿ ಕಲಿಸುವ ಪದ್ಮಿನಿ ಟೀಚರ ಪಾಠ ಮಾಡುವಾಗ ಹೇಳ್ತಾರ. ಮಾನವರೆಲ್ಲ ಒಂದ ಅಂತ. ಎಲ್ಲಾರೂ ಉಸಿರಾಡಿಸುವ ಗಾಳಿ ಒಂದ. ನಡೆದಾಡುವ ಭೂಮಿ, ನೆಲ ಒಂದ, ಕುಡಿವ ನೀರು ಒಂದ ಅಂತ’.
‘ಅವರು ಹೇಳೋದೆಲ್ಲ ಖರೆ ಬೇಟಾ’.
‘ಮತ್ತ ಮಂದಿ ಒಬ್ಬರನ್ನೊಬ್ಬರನ ಮೇಲು ಕೀಳು ಅಂತ ಯಾಕೆ ನೋಡ್ತಾರೆ ಅಬ್ಬಾ?’.

‘ಅವರಿಗೆ ಮನುಷ್ಯನ ಧರ್ಮ ಅರ್ಥ ಆಗಿಲ್ಲ ಬೇಟಾ. ಇಕ್ಬಾಲ್ರು ಹೇಳಿದ್ದಾರಲ್ಲ. ಮಜಹಬ್ ನಹೀಂ ಸಿಖಾತಾ ಆಪಸ್ ಮೇ ಬೈರ್ ರಖ್ನಾ ಅಂತ. ಪರಸ್ಪರ ಹಗೆತನ ಇರಿಸಬೇಕಂತ ಯಾವ ಧರ್ಮವೂ ಬೋಧಿಸೋದಿಲ್ಲ. ಇದನ್ನು ಎಲ್ಲರೂ ಹಾಡ್ತಾರ, ಮಾತಾಡ್ತಾರ. ಆದ್ರ ಹಾಂಗ ನಡಕೋನುದಿಲ್ಲ’.

‘ಹೀಂಗಾದ್ರ ಮನುಷ್ಯರ ಗತಿಯೇನು ಅಬ್ಬಾ?’
‘ಸೈತಾನನು ಅಲ್ಲಾಹನ ಮಹಾವಿದ್ರೋಹಿ ಆಗಿದ್ದಾನೆ ಬೇಟಾ. ಅವನು ಧರ್ಮ ಮತ್ತು ದೇವರ ಮಾರ್ಗದಲ್ಲಿರುವವರ ದಾರಿ ತಪ್ಪಿಸ್ತಾನೆ. ಹಾಗಂತ ಈ ಭೂಮಿ ಮ್ಯಾಲೆ ಸೈತಾನರೇ ಅದಾರಂತ ತಿಳಿಬಾರ್ದು. ಒಳ್ಳೆಯ ಮನುಷ್ಯರೂ ಇದ್ದಾರೆ. ಅವರೊಳಗ ದೇವರು ಅಡಗಿ ಕುಳಿತಾನ. ಸೈತಾನರಿಗೆ ಅವನೇ ಬುದ್ಧಿ ಕಲಿಸ್ತಾನ. ಅವನ ಕಣ್ಣು ತಪ್ಪಿಸಿ ಉಳಕೊಳ್ಳೋರು ಯಾರೂ ಇಲ್ಲ. ಆದ್ರ ನಾವು ಕೆಡುಕನ್ನು ತಡಿಬೇಕು. ಒಳ್ಳೇದಕ ಪ್ರೋತ್ಸಾಹ ಕೊಡಬೇಕು’. ಹಸನ್ಬಾಷಾನ ಮಾತುಗಳು ಅಸ್ಗರ್ಅಲಿಯ ಮನಸ್ಸಿಗೆ ಸಮಾಧಾನ ನೀಡುತ್ತಿದ್ದವು. ಅವನ ಪುಟ್ಟ ಹೃದಯದ ಕತ್ತಲಿನ ಪರದೆ ಸರಿದು, ಬೆಳಕಿನ ಜೀವಕ್ಕೆ ಅಭಯದ ದಾರಿ ಗೋಚರಿಸುತ್ತಿತ್ತು.

ಗ್ರಾಹಕರಿಗೆ ಕೆಟ್ಟ ಸರಕು ನೀಡಿ, ಹೆಚ್ಚು ಲಾಭ ಪಡೆದು, ಧರ್ಮನಿಷಿದ್ಧ ಸಂಪಾದನೆ ಮಾಡುವ ದುರ್ಬುದ್ಧಿ ಹಸನ್ಬಾಷಾನಿಗಿರಲಿಲ್ಲ. ಈ ಗುಣದಿಂದಾಗಿ ಅವನಲ್ಲಿ ಜನ ವಿಶ್ವಾಸವಿರಿಸಿಕೊಂಡಿದ್ದರು. ಇದರಿಂದ ವ್ಯಾಪಾರವು ಚೆನ್ನಾಗಿದ್ದು, ಅವನ ಸಮಾಧಾನದ ಬದುಕು, ಗೆಳೆಯರಿಗೂ ಸಂತೋಷ ತಂದಿತ್ತು.

ಜೀವಪುರದಲ್ಲಿ ವಿಘ್ನಸಂತೋಷಿಗಳಿದ್ದರು. ಮುಖವಾಡಗಳ ಮರೆಯಲ್ಲಿ ಅವರಿಂದ ಅಧ್ವಾನಗಳು ಸಂಭವಿಸುತ್ತಿದ್ದವು. ಸಮೃದ್ಧಿ ಹಾದಿಯಲ್ಲಿದ್ದ ಹಸನ್ಬಾಷಾನ ದುಖಾನ್ ವ್ಯವಹಾರ ಅವರ ನಿದ್ದೆಗೆಡಿಸಿದ್ದವು. ಒಂದಿನ ಬೆಳಗಾಗುವಷ್ಟರಲ್ಲಿ, ಅವನ ದುಖಾನದೆದುರೆ ಹೊಸಪಾನ್ ಅಂಗಡಿ ಶುರುವಾಗಿತ್ತು. ಮತ್ತೆ ಪೈಪೋಟಿಗಿಳಿದಂತೆ ನಾಲ್ಕಾರು ಅಂಗಡಿಗಳು ಸಾಲಾಗಿ ತೆರೆದುಕೊಂಡಿದ್ದವು. ನಿಗದಿಪಡಿಸಿದ ರೇಟಿಗಿಂತಲೂ, ಕಮ್ಮಿ ರೇಟಿಗೆ ವಸ್ತುಗಳನ್ನು ಮಾರಾಟ ಮಾಡುವ, ಹಾಲಿನ ಪಾಕೀಟು ಕೊಡುವ ಮೂಲಕ ಹಸನ್ಬಾಷಾನ ಕಡೆಯ ಗಿರಾಕಿಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಅವರ ತಂತ್ರಗಾರಿಕೆ ಸಫಲಗೊಂಡಿತ್ತು. ‘ನನ್ನ ಭಾಗ್ಯ ನನಗೆ, ಅವರ ಭಾಗ್ಯ ಅವರಿಗೆ, ಎಲ್ಲರ ಮೇಲೆ ದೇವರಿದ್ದಾನೆ’ ಅಂದುಕೊಂಡು ಹಸನ್ಬಾಷಾ ತನ್ನ ಪಾಡಿಗೆ ತಾನಿದ್ದ. ಹಾಕಿದ ಬಂಡವಾಳಕ್ಕೆ ಲಾಭವಾಗದಿದ್ದರೆ ವ್ಯಾಪಾರದ ಗಮ್ಮತ್ತಾದರೂ ಏನು? ಅಕ್ಷರಶಃ ಅವರಿಗೆ ಲುಕ್ಸಾನದ ಬಿಸಿ ತಾಗತೊಡಗಿ, ನಕಲಿ ವಸ್ತುಗಳನ್ನು ಗ್ರಾಹಕರಿಗೆ ಕೊಡತೊಡಗಿದರು. ಹಾಲಿನ ಪ್ರಮಾಣದಲ್ಲೂ ಮೋಸವಾಗಿ ಗಿರಾಕಿಗಳು ತಕರಾರು ಶುರುವಿಟ್ಟುಕೊಂಡರು. ಗ್ರಾಹಕರು ಎಚ್ಚೆತ್ತುಕೊಳ್ಳುತ್ತಿರುವಂತೆ, ಮತ್ಸರಕ್ಕೆಂದು ತೆರೆದುಕೊಂಡಿದ್ದ ಅಂಗಡಿಗಳು ಒಂದೊಂದಾಗಿ ಬಾಗಿಲು ಮುಚ್ಚಿಕೊಂಡವು.

ಶಾಬಾನ್ ತಿಂಗಳು ಕಳೆದು ರಮ್ಜಾನ್ ಕಾಲಿಟ್ಟಿತು.
ಅಸ್ಗರ್ಅಲಿ ರೋಜಾ ಹಿಡಿದ. ಈ ಉಪವಾಸದ ತಿಂಗಳೆಂದರೆ ಸಂಭ್ರಮ ಅವನಿಗೆ. ಅರಿವು ಬಂದಾಗಿನಿಂದ ಹುಡುಗ ಉಪವಾಸದ ವ್ರತ ಆಚರಿಸುತ್ತ ಬರುತ್ತಿರುವನು. ಸಹರಿ ಮಾಡಿ, ನಿಯತ್ತು ಹೇಳಿ ರೋಜಾ ಹಿಡಿದನೋ ಲವಲವಿಕೆಯನ್ನು ಮೈತುಂಬಿಕೊಂಡು, ಇಡೀ ದಿನ ಪಾದರಸದಂತೆ ಓಡಾಡಿಕೊಂಡಿರುವುದು ಹುಡುಗನ ಸ್ವಭಾವ.
ಮಾಸಾಂತ್ಯದವರೆಗೂ ಅಸ್ಗರ್ಅಲಿಗೆ ನಿದ್ದೆಯೆನ್ನುವುದು ಅಪರೂಪ. ಇಷಾ ನಮಾಜಿನ ಬಳಿಕ ಮೂರು ತಾಸು ನಿದ್ರೆ ಮಾಡಿದರೆ ತೀರಿತು. ರಾತ್ರಿ ಸಹರಿ ಪಾರ್ಟಿಯೊಂದಿಗೆ ತಿರುಗಾಡಿಕೊಂಡಿರುವನು. ಹಾಗೂ ಬೈಠಕ್ನಲ್ಲಿ ಪಾಲ್ಗೊಳ್ಳುವನು. ಹಿಂದೂಗಳ ಗಲ್ಲಿಗಳಲ್ಲಿರುವ ಮುಸ್ಲಿಮರು ಬೈಠಕ್ಗಳನ್ನು ಏರ್ಪಡಿಸುವರು. ಅದರೆ ಸೊಗಡು ಸವಿದ ಹಿಂದೂಗಳು, ಹಾಡುಗಾರರಿಗೆ ಚಹಾಪಾನಿ ವ್ಯವಸ್ಥೆ ಮಾಡುವರು. ರೋಜಾ ಬಿಡುವ ಕಾಲಕ್ಕೆ ಮಸೀದಿಗೆ ಹಣ್ಣು–ಹಂಪಲ, ಖಜೂರು, ಮಿಠಾಯಿ ಕಳಿಸುವರು. ಕೆಲವರು ಶ್ರದ್ಧೆಯಿಂದ ಉಪವಾಸ ಆಚರಿಸುವರು. ರಮ್ಜಾನ್ ಈದ್ ದಿನ ನಮಾಜು ಮುಗಿಸಿ ಬಂದ ಕೂಡಲೇ ಅಸ್ಗರ್ಅಲಿ ಸ್ಟೀಲ್ ಡಬ್ಬಾಗಳಲ್ಲಿ ಸುರಕುಂಬಾ ತುಂಬಿ ತಂದು ಹಿಂದೂಗಳ ಮನೆಮನೆಗೂ ಕೊಡುವನು. ಅವನ ಪ್ರೀತಿಗೆ ಮಣಿದ ಅವರು ಸುರಕುರಮಾ ಕುಡಿದು ತಣಿವರು. ಹಸನ್ಬಾಷಾನ ಗೆಳೆಯರು ಮನೆಗೆಬಂದು, ಈದ್ ಶುಭಾಶಯ ಹೇಳಿ, ಊಟ ಮಾಡಿಕೊಂಡು ಹೋಗುವ ರೂಢಿಯಿತ್ತು.

ಮಾನವೀಯತೆ ಮತ್ತು ಸಾಮಾರಸ್ಯದ ಈ ಸಂಬಂಧ ಕೆಲವರ ಉರಿಗಣ್ಣಿಗೆ ಕಾರಣವಾಗದೆ ಇರಲಿಲ್ಲ. ಹಸನ್ಬಾಷಾನ ದುಖಾನ್ ವ್ಯವಹಾರವನ್ನು ದುಸ್ತರಗೊಳಿಸಲು, ಸ್ಪರ್ಧೆಯೊಡ್ಡಿ ಅಂಗಡಿ ಪ್ರಾರಂಭಿಸಿ, ಕೈಸುಟ್ಟುಕೊಂಡವರಂತೂ ಅವನ ವಿರುದ್ಧ ಅಗ್ನಿಕುಂಡದಂತೆ ನಿಗಿನಿಗಿಸಿಸುತ್ತಿದ್ದರು.

ಆ ಉರಿಗೆ ಆಜ್ಯವೋ ಎನ್ನುವಂತೆ, ದೇಶದ ಉತ್ತರ ಭಾಗದ ರಾಜ್ಯವೊಂದರ ಊರಿನಲ್ಲಿ ಕೋಮುಗಲಭೆ ಘಟಿಸಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಅವರಲ್ಲಿ ತಮ್ಮ ಕಡೆಯವರು ಹೆಚ್ಚು ಅಪಾಯಕ್ಕೊಳಗಾದವರೆಂಬ ಊಹಾಪೋಹಗಳೊಂದಿಗೆ ಮತೀಯವಾದಿಗಳು ಪ್ರತಿಭಟನಾ ಮೆರವಣಿಗೆ ಶುರುವಿಟ್ಟುಕೊಂಡರು. ರಾಷ್ಟ್ರವ್ಯಾಪಿಯಾಗಿ ಬೆಳೆದ ಈ ಪ್ರತಿಭಟನೆಯಿಂದ ಜೀವಪುರ ಕೂಡ ಉದ್ವಿಗ್ನಗೊಂಡಿತು.

ಉಪವಾಸದ ಹತ್ತನೆಯ ದಿನ. ಭಯಂಕರವೂ, ಅಶ್ಲೀಲವೂ ಆದ ಘೋಷಣೆಗಳನ್ನು ಕೂಗುತ್ತ, ವಿಕಾರದ ಸೊಲ್ಲೆತ್ತುತ್ತಿರುವಂತೆ ಕಲ್ಲುಗಳು ತೂರಿ ಬಂದಿದ್ದವು. ಕಲ್ಲಿಗೆ ಪ್ರತಿಕಲ್ಲು. ಪೋಲೀಸರು ಲಾಠಿ ಬೀಸಲಾರಂಭಿಸಿದರು. ಕ್ರೂರಿಗಳು ಹಿಂಸಾತ್ಮಕ ಕ್ರಿಯೆಗಿಳಿದರು. ಅವಕಾಶವಾದಿಗಳು ಅಂಗಡಿ ದೋಚತೊಡಗಿದರು. ಭೀತಿಭರಿತರಾಗಿ ದಿಕ್ಕು ದಿಕ್ಕಿಗೂ ಚದುರಿದರು ಜನ. ಮಕ್ಕಳ ರೋದನ, ಹೆಂಗಳೆಯರ ಚೀತ್ಕಾರ. ಊರಲ್ಲಿ ಕರ್ಫ್ಯೂ ವಿಧಿಸಿದ ಪೋಲಿಸರು, ಸಿಕ್ಕಸಿಕ್ಕವರನ್ನು ವಾಹನದೊಳಗೆ ತುಂಬಿ ತುಂಬಿ ಒಯ್ದರು.
ಗುಡಿಗಳಲ್ಲಿ ಮಂತ್ರೋಚ್ಚಾರಗಳು ಕೇಳಿಸಲಿಲ್ಲ. ಮಸೀದೆಗಳಲ್ಲಿ ಆಜಾನ್ ಮೊಳಗಲಿಲ್ಲ, ಚರ್ಚಿನ ಗಂಟೆಯ ಸದ್ದೂ ಇಲ್ಲ. ಎರಡು ದಿನ ಸ್ಮಶಾನ ಮೌನ. ಸಾವು-ನೋವು ಸಂಭವಿಸಲಿಲ್ಲ ಎನ್ನುವುದಷ್ಟೇ ಸಮಾಧಾನ. ಬೀಸುವ ಗಾಳಿಗೆ, ಬೆಳಗುವ ಸೂರ್ಯನಿಗೆ, ಹೊಳೆವ ನಕ್ಷತ್ರಗಳಿಗೆ ಕರ್ಫ್ಯೂ ಅಡ್ಡಿಯಾಗಲಿಲ್ಲ.

ಮೂರನೆಯ ದಿನಕ್ಕೆ ಕರ್ಫ್ಯೂ ಸಡಿಲುಗೊಂಡು, ಬೀದಿಗಳಲ್ಲಿ ಜನ ಕಾಣಿಸಿಕೊಂಡದ್ದು ದೈನಂದಿನ ವ್ಯವಹಾರಕ್ಕೆ ತೆರೆದುಕೊಂಡ ಊರಿನ ಬದುಕು ಉಲ್ಲಸಿತವಾಗುತ್ತಿರುವಂತೆ, ಯುವಕನೊಬ್ಬನ ಅನಾಥ ಶವವೊಂದು, ಬಸ್ನಿಲ್ದಾಣದ ಪಕ್ಕದ ಜಾಲಿ ಪೊದೆಗಳ ನಡುವೆ ಕಂಡು ಬಂದು ತಲ್ಲಣ ಸೃಷ್ಟಿಸಿತು. ಮತೀಯವಾದಿಗಳು ಪುನಃ ಗಲಭೆಗೆ ಸಜ್ಜಾದರು. ಪೋಲಿಸರು ಕೂಡಲೇ ಜಾಗೃತರಾಗಿ, ಶವ ಪರೀಕ್ಷೆ ನಡೆಸಿದರು. ಸತ್ತ ಯುವಕ ಜೀವಪುರದವನಾಗಿರಲಿಲ್ಲ. ಅವನ ಜೇಬಿನಲ್ಲಿ ಸಿಕ್ಕ ವಿಳಾಸವಿರದ ಪ್ರೇಮಪತ್ರಗಳು, ದೇಹದ ಮೇಲಿನ ಗಾಯಗಳು ಅವನ ಸಾವನ್ನು ಸಾಕ್ಷೀಕರಿಸುವಂತಿದ್ದವು. ದೇಹ ಕೊಳೆಯತೊಡಗಿದ್ದನ್ನು ಗಮನಿಸಿದ ಪೊಲಿಸರು, ಅನಾಥ ಶವವನ್ನು ಮಣ್ಣಲ್ಲಿ ಹೂಳಿ ಮುಂದಿನ ತನಿಖೆಗೆ ತೊಡಗಿಕೊಂಡರು.

ಸಹರಿ ಪಾರ್ಟಿಯ ಬೈಠಕ್ ಮುಗಿಸಿ ಬಂದಿದ್ದ ಅಸ್ಗರ್ಅಲಿ ಆಕಳಿಸುತ್ತಿದ್ದ. ನಿದ್ದೆಯನ್ನು ಅಪೇಕ್ಷಿಸಿ ಅವನ ಕಣ್ರೆಪ್ಪೆಗಳು ಮುಚ್ಚಲು ಕಾತರಿಸುತ್ತಿದ್ದವು. ಅವನ ಅಮ್ಮಾ ಸಹರಿ ಮಾಡಲು ಕೂಗಿದ್ದಳು. ಮುಖ ತೊಳೆದು ಬಂದವನು. ಅರ್ಧ ರೊಟ್ಟಿ ತಿಂದು ನೀರು ಕುಡಿದಿದ್ದ. ಅವನ ಅಣ್ಣ ಅದೀಬ್ ಉಪವಾಸದ ನಿಯತ್ತು ಹೇಳಿ ಮುಗಿಸುವಷ್ಟರಲ್ಲಿ, ಹಾಲಿನ ಗಾಡಿ ಬಂದಿತ್ತು. ಹಸನ್ಬಾಷಾ ಲೆಕ್ಕಮಾಡಿ, ಹಾಲಿನ ಟ್ರೇ ಇಳಿಸಿಕೊಂಡು, ಗಿರಾಕಿಗಳಿಗೆ ಪಾಕೀಟು ವಿತರಿಸತೊಡಗಿದ. ಅಸ್ಗರ್ಅಲಿ, ಸೈಕಲ್ ಕ್ಯಾರಿಯರ್ ಮೇಲೆ ಹಾಲಿನ ಟ್ರೇ ಇಟ್ಟು, ಬಸ್ನಿಲ್ದಾಣಕ್ಕೆ ಬಂದು, ಪೇಪರಗಳನ್ನು ಬ್ಯಾಗಿಗೆ ಹಾಕಿಕೊಂಡು ಪೆಡಲ್ ತುಳಿಯತೊಡಗಿದ.

ಕತ್ತಲು ಇನ್ನು ದಟ್ಟವಾಗಿತ್ತು. ‘ಈಗಿನವು ದೊಡ್ಡ ರಾತ್ರಿಗಳು’ ಎಂದಿದ್ದ ತನ್ನ ಅಮ್ಮಾಳ ಮಾತನ್ನು ನೆನಪಿಸಿಕೊಂಡು ಕತ್ತಲಿನ ದಾರಿಯನ್ನು ಅವನು ಕ್ರಮಿಸತೊಡಗಿದ್ದ. ಅರ್ಧ ಕಿಲೋಮಿಟರ್ ನಿರ್ಜನ ಪ್ರದೇಶ ದಾಟಿದರೆ ದೊಡ್ಡ ಬಡಾವಣೆ. ಪೇಪರು, ಹಾಲು ತೆಗೆದುಕೊಳ್ಳುವವರು ಅಲ್ಲಿಯೇ ಹೆಚ್ಚು. ಅಸ್ಗರ್ ಅಲಿ ಜೋರಾಗಿ ಪೆಡಲ್ ತುಳಿದಿದ್ದ.

ಯಾರೋ ಬಲವಾಗಿ ಸೈಕಲ್ಲಿಗೆ ಒದ್ದಂತಾಯಿತು. ಕೆಳಗೆ ಬಿದ್ದ ಹುಡುಗ ‘ಅಯ್ಯೋ ಅಮ್ಮಾ...’ ಅಂದಿದ್ದ. ಮುಸುಕು ಹೊದ್ದವರು, ಹಾಲಿನ ಟ್ರೇಗಳನ್ನು ನೆಲಕ್ಕೆ ಒಗೆದು ಹಾಲಿನ ಪಾಕೀಟುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಒಬ್ಬ ಬ್ಯಾಗಿನಿಂದ ಪೇಪರ್ ತೆಗೆದು ಗಾಳಿಗೆ ತೂರಿದ್ದ. ‘ಅಯ್ಯೋ ಹಾಲು... ಪೇಪರು...’ ಎಂದು ಚೀತ್ಕರಿಸಿದ ಅಸ್ಗರ್ನ ಬಳಿ ಬಂದ ಇನ್ನೊಬ್ಬ, ಅವನ ಬಾಯಿಯನ್ನು ತನ್ನ ಹಸ್ತದಿಂದ ಗಟ್ಟಿಯಾಗಿ ಮುಚ್ಚಿದ. ಮತ್ತೊಬ್ಬ ಓಡಿ ಬಂದು, ಸಣ್ಣ ಚಾಕುವಿನಿಂದ ಹುಡುಗನ ಹೊಟ್ಟೆ, ತೋಳು, ಕೈಗಳನ್ನು ಇರಿದ. ಬೆದರಿದ ಹುಲ್ಲೆಯಂತಾದ ಅಸ್ಗರ್ ಪ್ರಜ್ಞಾಹೀನನಾಗಿ ಕೆಳಕ್ಕೆ ಕುಸಿದ. ಅವನ ದೇಹದಿಂದ ರಕ್ತ ಹರಿಯತೊಡಗಿತು. ಆ ಮುಸುಕುಧಾರಿಗಳು ಸೈಕಲ್ ಅನ್ನು ನುಜ್ಜುಗುಜ್ಜು ಮಾಡಿ ತೆಗ್ಗಿನೊಳಗೆ ಎಸೆದು ಪರಾರಿಯಾದರು.

ಬೆಳಕು ಹರಿಯುತ್ತಿದ್ದಂತೆ ವಾಕಿಂಗ್ ಬಂದಿದ್ದ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಇಂಜಿನೀಯರ್ ಹುಡುಗನ ದೇಹ ಕಣ್ಣಿಗೆ ಬಿದ್ದದ್ದೆ ಗಾಬರಿಯಾದರು. ಇವನು ನಮ್ಮ ಹಾಲಿನ ಹುಡುಗ! ಎಂದು ಉದ್ಗರಿಸಿದ ಪ್ರಿನ್ಸಿಪಾಲ್ ಶಿವಾನಂದ ಪಾಟೀಲರು ಹುಡುಗ ಸೈಕಲ್ ಮ್ಯಾಲಿಂದ ಬಿದ್ದಾನೋ, ಯಾರಾದರೂ ಅಟ್ಯಾಕ್ ಮಾಡಿದರೋ? ಎಂದು ಅನುಮಾನಿಸುತ್ತಿರಬೇಕಾದರೆ, ಇಂಜಿನಿಯರ್ ದೇವಣ್ಣ ಜಾಲವಾದಿಯವರು ಕೂಡಲೇ ಮನೆಗೆ ಪೋನಾಯಿಸಿ, ತಮ್ಮ ಕಾರು ತರಿಸಿಕೊಂಡರು.

ಅಸ್ಗರ್ಅಲಿಯನ್ನು ಸರಕಾರಿ ಆಸ್ಪತ್ರೆಗೆ ಸೇರಿಸುತ್ತಿದ್ದಂತೆ ಸುದ್ದಿ ತಿಳಿದ ಜನ ಧಾವಿಸಿ ಬಂದರು. ವೈದ್ಯರು ಹುಡುಗನ ಜೀವ ಉಳಿಸಲು ಹೋರಾಡತೊಡಗಿದರು. ಹಸನ್ ಬಾಷಾನ ಕುಟುಂಬದವರು ಕಣ್ಣೀರು ಸುರಿಸುತ್ತ, ದೇವರಲ್ಲಿ ಪ್ರಾರ್ಥಿಸತೊಡಗಿದ್ದರು. ವೈದ್ಯರು ರಕ್ತ ಬೇಕು ಅಂದದ್ದೇ, ಹತ್ತಾರು ಜನ ಹಿಂದೂ–ಮುಸ್ಲಿಮ ಹುಡುಗರು ಮುಂದೆ ಬಂದರು.

ಅಸ್ಗರ್ ಅಲಿಯ ದೇಹ ಸೇರಿದ ರಕ್ತ ಮನುಷ್ಯತ್ವದ್ದು! ಅದು ಒಬ್ಬ ಹಿಂದೂವಿನದು, ಒಬ್ಬ ಮುಸ್ಲಿಮನದು ಎಂದು ಬೇರ್ಪಡಿಸುವಂತಿರಲಿಲ್ಲ. ಆ ರಕ್ತವು ಕೆಂಪು ಕೆಂಪಾಗಿ, ಜೀವಕಣವಾಗಿ ಅಸ್ಗರ್ ಅಲಿಯ ಧಮನಿಧಮನಿಗಳಲ್ಲಿ ಹರಿದು ಅವನುಸಿರಿಗೆ ಪುಷ್ಟಿ ನೀಡತೊಡಗಿತು.

ಹುಡುಗನ ಮೇಲೆ ದಾಳಿ ಮಾಡಿದ ಮುಸುಕುಧಾರಿಗಳು ಯಾರು? ಅವರು ಒಳಗಿನವರೋ; ಹೊರಗಿನವರೋ? ಯಾತಕ್ಕಾಗಿ ದಾಳಿ ಮಾಡಿದರು? ಪೊಲೀಸರು ದುಷ್ಕರ್ಮಿಗಳ ತಲಾಶಕ್ಕೆ ಎಲ್ಲಾ ಕಡೆಗೂ ಜಾಲ ಹರಡಿದರು.

ಅಮವಾಸ್ಯೆಯ ಮೂರನೇ ದಿನ ಚಂದ್ರದರ್ಶನವಾಗಿ, ಊರಿನಲ್ಲಿ ರಮ್ಜಾನ್ ಹಬ್ಬದ ಸಡಗರಕ್ಕೆ ಕಳೆಯೇರಿತು. ಮಸೀದೆಗಳ ಮೀನಾರುಗಳು ರಂಗುರಂಗಿನ ವಿದ್ಯುತ್ ಬೆಳಕಿನಿಂದ ಕಂಗೊಳಿಸಿದವು. ತಮ್ಮ ಹಸ್ತಗಳಲ್ಲಿ ಮೆಹಂದಿ ಚಿತ್ತಾರ ಬಿಡಿಸಿಕೊಂಡ ಮಕ್ಕಳು, ತಂಪಾದ ಇರುಳಿನ ಬೀದಿಗಳ ತುಂಬಾ ಹರುಷದಿಂದ ಓಡಾಡತೊಡಗಿದರು. ಮುಸ್ಲಿಮರ ಮನೆಯ ಬಾಗಿಲುಗಳು ಹಗಲಿನಂತೆ ತೆರೆದುಕೊಂಡೇ ಇದ್ದವು. ಮ್ಯೂಜಿಕ್ ಪ್ಲೇಯರ್ನಲ್ಲಿ ಸೂಸಿಬರುತ್ತಿದ್ದ ಅಲ್ಲಾಹನ ಗುಣಗಾನವನ್ನು ಆಸ್ವಾದಿಸುತ್ತ ಹೆಣ್ಣುಮಕ್ಕಳು ಸುರಕುರಮಾ ತಯಾರಿಸುವಲ್ಲಿ ಮಗ್ನರಾಗಿದ್ದರು.

ಪ್ರಶಾಂತವಾದ ಹಕ್ಕಿಗಳ ಕಲರವದೊಂದಿಗೆ ಸೂರ್ಯನ ಬೆಳಕು ಊರಿನ ಮೈಮನಸ್ಸುಗಳನ್ನು ಆಹ್ಲಾದಗೊಳಿಸಿತು. ಈದುಲ್ ಫಿತರ್ ನಮಾಜಿಗಾಗಿ ಮುಸ್ಲಿಮರು ತಂಡೋಪತಂಡವಾಗಿ ಈದಗಾ ಮೈದಾನದ ಕಡೆಗೆ ಅಲ್ಲಾಹ್ನ ಸ್ತುತಿಸುತ್ತ ಹೊರಟರು. ಬಡಾವಣೆಯ ಜನ ಹಾಲಿನ ಹುಡುಗನನ್ನು ನೆನಪಿಸಿಕೊಂಡರು. ಅವನು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ, ಆಸ್ಪತ್ರೆಗೆ ಬಂದ ಅವರು ಕಂಬನಿ ಮಿಡಿದಿದ್ದರು. ಹುಡುಗ ಬದುಕಲೆಂದು ತಮ್ಮ ತಮ್ಮ ಮನೆದೇವರುಗಳಿಗೆ ಮೊರೆಹೋಗಿದ್ದರು. ಅಸ್ಗರ್ಅಲಿ ಆರಾಮಾಗಿ ಮನೆಗೆ ಮರಳಿರುವ ಸಂಗತಿ ಅವರಿಗೆ ಹೆಚ್ಚು ಸಂತೋಷವನ್ನುಂಟು ಮಾಡಿತ್ತು.

ಮಧ್ಯಾಹ್ನವಾಗುತ್ತಿದ್ದಂತೆ ಅಸ್ಗರ್ಅಲಿ ತನ್ನ ಅಣ್ಣ ಅದೀಬ್ನೊಂದಿಗೆ ಬಂದು, ಹಾಲು, ಪೇಪರು ಕೊಡುವ ಮನೆಮನೆಗೂ ಭೇಟಿಮಾಡಿ ಈದ್ ಶುಭಾಶಯ ಹೇಳಿದ. ಅಸ್ಗರ್ ಅಲಿಯ ಹೊಸಬಟ್ಟೆ, ಪೂಸಿಕೊಂಡ ಗಂಧದೆಣ್ಣೆಯ ಸುವಾಸನೆ, ಕಣ್ಣುಗಳ ಕಾಂತಿ ಹೆಚ್ಚಿಸಿದ ಸುರಮಾ, ಮುಖವನ್ನು ತುಂಬಿ ತುಳುಕಿಸುತ್ತಿದ್ದ ನಗು ಜನರನ್ನು ಖುಷಿಗೊಳಿಸಿದ್ದವು. ಅವರು ಅವನನ್ನು ಪ್ರೀತಿಯಿಂದ ತಬ್ಬಿಕೊಂಡು ಹಬ್ಬದ ಶುಭಾಶಯ ಹೇಳಿದರು. ಅಸ್ಗರ್ ಅಲಿ ತಾನು ಮನೆಯಿಂದ ತಂದಿದ್ದ ಸುರುಕುರಮಾ ಕುಡಿಯಲು ಕೊಟ್ಟ. ಸುರುಕುರಮಾದಲ್ಲಿ ಹಾಲಿನ ಹುಡುಗನ ಒಲವು ಕೆನೆಗಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.