‘ಗೇ’ ವ್ಯಕ್ತಿಗಳ ಬದುಕಿನ ಬಗ್ಗೆ ಸಮಾಜಕ್ಕೆ ಇರುವ ಕುತೂಹಲ, ಅಜ್ಞಾನ, ಭಯ ಅಷ್ಟಿಷ್ಟಲ್ಲ. ಸಮಾಜದ ಈ ಅಜ್ಞಾನ – ಆತಂಕಗಳು ‘ಗೇ’ಗಳ ಬದುಕಿನಲ್ಲಿ ನಗುವನ್ನೂ ಅಳುವನ್ನೂ ಉಂಟುಮಾಡುತ್ತವೆ. ತಮ್ಮ ಬದುಕಿನಲ್ಲಿ ಎದುರಾದ ಅಂಥ ತಮಾಷೆಯ ಪ್ರಸಂಗಗಳನ್ನು ಕಥೆಗಾರ ವಸುಧೇಂದ್ರ ನೆನಪು ಮಾಡಿಕೊಂಡಿದ್ದಾರೆ.

‘ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ’ ಎನ್ನುವುದು ಕವಿ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವನದ ಮೊದಲ ಸಾಲು. ಹಲವು ಅರ್ಥಗಳನ್ನು ಹೊಳೆಸುವ ಈ ಸಾಲನ್ನು ನಾನು, ಬದುಕಿನಲ್ಲಿ ಕಡಲಿನಷ್ಟು ದುಃಖವಿದ್ದರೂ ಎಲ್ಲೋ ಒಂದೆಡೆ ಸಂತೋಷದ ಹಾಯಿದೋಣಿಯೂ ತೇಲುತ್ತಿರುತ್ತದೆ ಎಂದು ಅರ್ಥಮಾಡಿಕೊಂಡಿದ್ದೇನೆ. ಇದು ‘ಗೇ’ ಜನರ ಬದುಕಿನಲ್ಲಿಯೂ ಸತ್ಯ. ಬಹುಸಂಖ್ಯಾತರ ರೂಢಿಗತ ಜಗತ್ತಿನಲ್ಲಿ ವಿಭಿನ್ನವಾಗಿ ಬದುಕುವ ಅಲ್ಪಸಂಖ್ಯಾತ ಜನರು ಅವರಾದ್ದರಿಂದ, ಬದುಕಿನುದ್ದಕ್ಕೂ ನೋವನ್ನು ಅನುಭವಿಸುತ್ತಲೇ ಹೋಗುತ್ತಾರೆ. ಆದರೆ ಅದೇ ವಿಶಿಷ್ಟತೆಯಿಂದಾಗಿ ಅವರ ಜೀವನದಲ್ಲಿ ಹಲವು ತಮಾಷೆಯ ಪ್ರಸಂಗಗಳು ಬಂದು ಹೋಗುತ್ತವೆ. ಅವುಗಳನ್ನು ಉದಾಹರಣೆ ಸಮೇತ ನಾನು ತಿಳಿಸದಿದ್ದರೆ ನೀವು ಊಹೆ ಮಾಡಿಕೊಳ್ಳುವುದು ಕಷ್ಟ.

ತೊಂಬತ್ತರ ದಶಕದ ಆರಂಭದ ವರ್ಷಗಳಲ್ಲಿ ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಹುಡುಕಾಡುತ್ತಿದ್ದೆ. ದಕ್ಷಿಣ ಭಾರತದ ಜನರು ಬ್ರಹ್ಮಚಾರಿಗಳಿಗೆ ಮನೆಯನ್ನು ಬಾಡಿಗೆಗೆ ಕೊಡಲು ಹಿಂಜರಿಯುತ್ತಾರೆ. ಅವರೆಲ್ಲಿ ತಮ್ಮ ಮಗಳನ್ನೋ ಅಥವಾ ಹೆಂಡತಿಯನ್ನೋ ಮರುಳು ಮಾಡಿಬಿಡುತ್ತಾರೋ ಎಂಬ ವಿಚಿತ್ರ ಭಯ ಅವರಿಗಿರುತ್ತದೆ. ನಾನು ಬಹಳ ಕಷ್ಟಪಟ್ಟು ಹುಡುಕಿದ ನಂತರ ಜಯನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಕೊಡಲು ಒಬ್ಬ ಯಜಮಾನ ಸಿದ್ಧನಾದ. ಆ ಮನೆಗೆ ಬೆಳಕು ಸರಿಯಾಗಿ ಬರುತ್ತಿರಲಿಲ್ಲವಾದ್ದರಿಂದ, ಗೃಹಸ್ಥರು ಯಾರೂ ಮನೆಯನ್ನು ಒಪ್ಪಿರಲಿಲ್ಲ. ನನಗೆ ವಾಸಿಸಲು ಮನೆಯೊಂದು ಸಿಕ್ಕರೆ ಸಾಕಿತ್ತು. ಆದ್ದರಿಂದ ವ್ಯವಹಾರ ಕುದುರಿತು. ಆದರೂ ಯಜಮಾನನಿಗೆ ಬ್ರಹ್ಮಚಾರಿಯೊಬ್ಬನಿಗೆ ಮನೆಯನ್ನು ಕೊಡಲು ಅಳುಕಿತ್ತು.

ಮೇಲಿನ ಮನೆಯಲ್ಲಿ ಯಜಮಾನ ಮತ್ತವನ ಸಂಸಾರವಿತ್ತು. ಆತನಿಗೆ ಸುಂದರಿಯಾದ ಮಗಳು ಮತ್ತು ಹೆಂಡತಿಯೂ ಇದ್ದರು. ಆದ್ದರಿಂದ ಯಜಮಾನ ಹೆದರಿಕೆಯಿಂದಲೇ ಬ್ರಹ್ಮಚಾರಿಯೊಬ್ಬನಿಗೆ ಮನೆ ಕೊಡಲು ಒಪ್ಪಿದ್ದ. ಬಾಡಿಗೆ ಒಪ್ಪಂದದ ಪತ್ರಗಳಿಗೆ ಸಹಿ ಹಾಕುವ ಮೊದಲು ಯಾವುದಕ್ಕೂ ಇರಲಿ ಎಂದು ನೇರವಾಗಿ ನನಗೆ ಹೇಳಿ ಬಿಟ್ಟ. “ನೋಡ್ರಿ, ನೀವು ಒಳ್ಳೆ ಜನ ಅಂತ ನಂಗೆ ಅನ್ನಿಸ್ತಾ ಇರೋದಕ್ಕೆ ಮನೆ ಬಾಡಿಗೆಗೆ ಕೊಡ್ತಾ ಇದೀನಿ. ಆದರೆ ಮನೆಗೆ ನೀವು ಹುಡುಗಿಯರನ್ನ ಕರಕೊಂಡು ಬರುವಂತಿಲ್ಲ” ಎಂದು ಧೈರ್ಯವಹಿಸಿ ಹೇಳಿದ. ನನಗೆ ಅವನ ಆತಂಕವನ್ನು ಕಂಡು ವಿಪರೀತ ನಗು. ಆದರೆ ಅದನ್ನು ಹೊರಹಾಕಿದರೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎಂದು ಗೊತ್ತಿತ್ತು.

ಆದ್ದರಿಂದ ಗಂಭೀರವದನನಾಗಿ “ಸಾರ್, ದೇವರಾಣೆಗೂ ಯಾವತ್ತೂ ಹುಡುಗಿಯರನ್ನ ಮನೆಗೆ ಕರೆದುಕೊಂಡು ಬರೋದಿಲ್ಲ” ಎಂದು ಪ್ರಮಾಣ ಮಾಡಿದೆ. ಆತನಿಗೆ ಸ್ವಲ್ಪ ಸಮಾಧಾನವಾಯ್ತು. ಆದರೆ ನಾನು ತಮಾಷೆಯ ಲಹರಿಯಲ್ಲಿದ್ದೆ. “ಸಾರ್, ಗಂಡುಹುಡುಗರನ್ನ ಮನೆಗೆ ಕರಕೊಂಡು ಬಂದ್ರೆ ನಿಮಗೇನೂ ಅಡ್ಡಿ ಇಲ್ವಲ್ಲಾ?” ಎಂದು ಅತ್ಯಂತ ಸಂಭಾವಿತನ ಧ್ವನಿಯಲ್ಲಿ ಕೇಳಿದೆ. ಆತನಿಗೆ ನನ್ನ ಮಾತಿನ ಗೂಢಾರ್ಥ ತಿಳಿಯುವುದಾದರೂ ಹೇಗೆ? “ಅಡ್ಡಿ ಇಲ್ಲ... ಗಂಡುಹುಡುಗರು ಯಾರಾದ್ರೂ ಬರಬೋದು” ಎಂದು ಹೇಳಿದ. ಮುಗುಳ್ನಕ್ಕು ಪತ್ರಕ್ಕೆ ಸಹಿ ಹಾಕಿದೆ. “ತನ್ನಂತೆ ಜಗವ ಬಗೆದೊಡೆ ಕೈಲಾಸ” ಎಂದು ಸರ್ವಜ್ಞ ಮಹಾಕವಿ ಹೇಳಿದ್ದರೂ, ಬಹಳ ಸಂದರ್ಭದಲ್ಲಿ ಅದಕ್ಕೆ ವಿರುದ್ಧವಾಗಿ ಆಲೋಚಿಸಬೇಕಾಗುತ್ತದೆ. ಎಲ್ಲರ ಬದುಕನ್ನೂ ನಮ್ಮ ಕನ್ನಡಕದ ಮೂಲಕವೇ ನೋಡಿದರೆ ಹೇಗೆ?

‘ಗೇ’ ಹುಡುಗರು ಭಾರತದಲ್ಲಿ ತಮ್ಮ ಲೈಂಗಿಕತೆಯನ್ನು ಅಷ್ಟೊಂದು ಸುಲಭವಾಗಿ ಎಲ್ಲರೊಡನೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಆ ಕಾರಣದಿಂದಾಗಿ ಬಹುತೇಕರು ಅವರನ್ನು ತಮ್ಮ ಅನುಭವಗಳ ಹಿನ್ನೆಲೆಯಲ್ಲೇ ನೋಡಿ ಪ್ರಮಾದವನ್ನು ಊಹಿಸಿಕೊಳ್ಳುತ್ತಿರುತ್ತಾರೆ. ಅಂತಹ ಮತ್ತೊಂದು ಉದಾಹರಣೆಯನ್ನು ನನ್ನ ಬಾಲ್ಯದ ಒಂದು ಅನುಭವದಿಂದ ನಿಮಗೆ ಕೊಡಬಲ್ಲೆ. ಆಗ ನನಗೆ ಸುಮಾರು ಹದಿನೆಂಟು ವರ್ಷವೆಂದು ನೆನಪು. ಉತ್ತರ ಕರ್ನಾಟಕದಲ್ಲಿ ಮದುವೆಗಳನ್ನು ಮೂರು ನಾಲ್ಕು ದಿನಗಳ ಕಾಲ ನಡೆಸುವ ಸಂಪ್ರದಾಯವಿತ್ತು. ಆದರೆ ಈಗಿನಂತೆ ದುಂದುವೆಚ್ಚ ಮಾಡುತ್ತಿರಲಿಲ್ಲ. ಮದುವೆಯ ಸಮಾರಂಭಕ್ಕೆ ಬಂಧು–ಬಳಗ ನೆಂಟರಿಷ್ಟರೂ ಬರುತ್ತಿದ್ದರು. ಗಂಡು ಮತ್ತು ಹೆಣ್ಣಿನ ಕಡೆಯ ಜನರೆಲ್ಲಾ ಸೇರಿರುತ್ತಿದ್ದರಿಂದ ಎಲ್ಲರ ಪರಿಚಯವೂ ನಮಗೆ ಇರುತ್ತಿರಲಿಲ್ಲ.

ಇಂತಹ ಒಂದು ಮದುವೆಗಾಗಿ ನಾನು ಬಳ್ಳಾರಿಗೆ ಹೋಗಿದ್ದೆ. ಆ ಮದುವೆಯಲ್ಲಿ ಗುಲ್ಬರ್ಗಾ ಕಡೆಯಿಂದ ಒಂದು ಸಂಸಾರ ಬಂದಿತ್ತು. ತಂದೆ ಮತ್ತು ಆತನ ಮಗ ಹಾಗೂ ಮಗಳು – ಮೂವರೂ ಬಂದಿದ್ದರು. ಈ ಮಗನಿಗೆ ಸುಮಾರು ಇಪ್ಪತ್ತರ ವಯಸ್ಸಿರಬೇಕು. ನೋಡಲು ತುಂಬಾ ಸುಂದರವಾಗಿದ್ದ. ಆದ್ದರಿಂದ ಕಣ್ಣು ಕೀಳದಂತೆ ಅವನನ್ನು ನೋಡುತ್ತಿದ್ದೆ. ಅವನು ಎಲ್ಲೇ ಹೋದರೂ ಹಿಂಬಾಲಿಸುತ್ತಿದ್ದೆ. ಆದರೆ ಆ ಹುಡುಗ ಮಾತ್ರ ನನಗೆ ಸೊಪ್ಪು ಹಾಕಲಿಲ್ಲ. ಮದುವೆಯ ಹಿಂದಿನ ರಾತ್ರಿ ಒಂದು ವಿಶೇಷ ಘಟನೆ ನಡೆಯಿತು. ಸಾಮಾನ್ಯವಾಗಿ ಮದುವೆಗೆ ಬಂದವರಿಗಾಗಿ ಪ್ರತ್ಯೇಕ ರೂಮುಗಳು ಅಲ್ಲಿ ಇರುವುದಿಲ್ಲ. ರಾತ್ರಿ ಮಲಗುವುದಕ್ಕೆ ದೊಡ್ಡ ಜಮುಖಾನವೊಂದನ್ನು ಹಾಸಿ, ಸಾಲಾಗಿ ಎಲ್ಲರೂ ಮಲಗಿಬಿಡುತ್ತಾರೆ. ಆ ದಿನ ನಾನು ಮಲಗಿದ ಪಕ್ಕದಲ್ಲಿ ನನ್ನ ದೂರದ ಸಂಬಂಧದ ಅಜ್ಜಿಯೊಬ್ಬರು ಮಲಗಿದ್ದರು.

ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿಯಿದ್ದ ಕಾರಣ ತಮ್ಮ ಹತ್ತಿರ ಮಲಗಿಸಿಕೊಂಡು ಏನೇನೋ ಕತೆಗಳನ್ನು ಹೇಳುತ್ತಾ ಹಾಗೇ ನಿದ್ದೆಗೆ ಜಾರಿದ್ದರು. ಆಕೆಯ ಪಕ್ಕದಲ್ಲಿ ಆ ಸುಂದರ ಹುಡುಗನ ತಂಗಿಯು ಮಲಗಿದ್ದಳು. ಆಕೆ ನೋಡಲು ಸುಂದರಳೋ ಅಲ್ಲವೋ ಎನ್ನುವ ತರ್ಕ ಮಾಡುವ ಶ್ರಮವನ್ನು ನಾನು ತೆಗೆದುಕೊಂಡಿರಲಿಲ್ಲ. ಆಕೆಯ ಅಪ್ಪ ಮತ್ತು ಅಣ್ಣ ಮಾತ್ರ ಎಲ್ಲಿಯೋ ಹೊರಗೆ ತಿರುಗಾಡಲು ಹೋಗಿದ್ದರು. ರಾತ್ರಿ ಹತ್ತು ಗಂಟೆಯ ಸಮಯವಿರಬೇಕು. ನಂಗಿನ್ನೂ ಸ್ವಲ್ಪ ಸ್ವಲ್ಪ ಎಚ್ಚರವಿತ್ತು. ನನ್ನ ಪಕ್ಕ ಮಲಗಿದ್ದ ಅಜ್ಜಿಯು ಅದೇ ತಾನೇ ಮೂತ್ರವಿಸರ್ಜಿಸಲೆಂದು ಎದ್ದು ಹೊರಗೆ ಹೋಗಿದ್ದಳು. ಆ ಸಮಯಕ್ಕೆ ಸರಿಯಾಗಿ ಅಪ್ಪ–ಮಗ ಅಲ್ಲಿಗೆ ಬಂದರು. ಅಪ್ಪನಿಗೆ ಅಲ್ಲಿನ ದೃಶ್ಯವನ್ನು ಕಂಡು ಎದೆ ಒಡೆದುಹೋಯ್ತು. ವಯಸ್ಸಿಗೆ ಬಂದ ಹುಡುಗನ ಪಕ್ಕ ತನ್ನ ಮಗಳು ಮಲಗಿದ್ದನ್ನು ಕಂಡು ಯಾವ ತಂದೆಗೆ ತಾನೆ ಪಿತ್ತ ಕೆರಳುವದಿಲ್ಲ?

“ಅದಕ್ಕೇ ನಾನು ಹೇಳೋದು... ಯಾವ ಹುಡುಗರನ್ನೂ ನಂಬಬಾರದು ಅಂತ. ನಿನ್ನ ತಂಗಿಗೆ ಎಷ್ಟು ಹೇಳಿದ್ರೂ ಬುದ್ಧಿ ಬರಂಗಿಲ್ಲ ನೋಡು... ನೋಡಲ್ಲಿ ಆ ಹುಡುಗ ಮಾಡ್ತಾ ಇರೋ ಚೇಷ್ಟೆ! ಹೋಗು, ನೀನು ಅವರಿಬ್ಬರ ಮಧ್ಯ ಮಲಕ್ಕೋ...” ಎಂದು ಮಗನಿಗೆ ಹೇಳಿದರು. ಆ ಸುಂದರ ಕಾಯದ ಹುಡುಗ ಅಪ್ಪನ ಮಾತನ್ನು ಶಿರಸಾವಹಿಸಿ ಪಾಲಿಸಿದ. ನನ್ನ ಪಕ್ಕ ಬಂದು ಮಲಗಿಕೊಂಡ. ನನಗೆ ಪೂರ್ತಿ ಎಚ್ಚರವಾಗಿ ಹೋಯ್ತು. ಎದೆ ಬಡಿದುಕೊಳ್ಳಲಾರಂಭಿಸಿತು. ಅನಂತರ ಆ ತಂದೆ ಬೇರೆಲ್ಲೋ ಹೊರಟು ಹೋದರು. ಸ್ವಲ್ಪ ಹೊತ್ತಿಗೆ ಅಜ್ಜಿ ಅಲ್ಲಿಗೆ ಬಂದವಳು ತನ್ನ ಜಾಗದಲ್ಲಿ ಯಾರೋ ಮಲಗಿರುವುದನ್ನು ಕಂಡು, ಬೇರೆ ಜಾಗವನ್ನು ಹುಡುಕಿಕೊಂಡು ಹೊರಟಳು. ಹತ್ತು ನಿಮಿಷಕ್ಕೆ ಯಾರೋ ದೀಪವನ್ನು ಆರಿಸಿದರು. ಮುಂದೆ ನಡೆದದ್ದನ್ನು ನೀವು ಕೇಳುವುದೂ ತಪ್ಪು, ನಾನು ಹೇಳುವುದೂ ತಪ್ಪು!

‘ಗೇ’ ಗಳ ಬದುಕಿನ ಬಗ್ಗೆ ಓದಿ ತಿಳಿದುಕೊಂಡಿರದಿದ್ದರೆ ಅಥವಾ ಅಂತಹವರು ನಿಮ್ಮ ಸ್ನೇಹವಲಯದಲ್ಲಿ ಇರದಿದ್ದರೆ ಸಾಮಾನ್ಯವಾಗಿ ನಿಮಗೆ ‘ಹೋಮೋಫೋಬಿಯಾ’ ಇರುವ ಸಾಧ್ಯತೆ ಹೆಚ್ಚು. ಆಗದ–ಹೋಗದ ಅನಾಹುತಗಳನ್ನು ಊಹಿಸಿಕೊಂಡು ಅನವಶ್ಯಕವಾಗಿ ಬಳಲುವಿರಿ. ಬೇರೆಲ್ಲ ಫೋಬಿಯಾಗಳಂತೆ ಇಲ್ಲಿಯೂ ನಿಮ್ಮ ಭಯಕ್ಕೆ ಯಾವುದೇ ಬುನಾದಿ ಇರುವುದಿಲ್ಲ. ಆದರೆ ಆ ಹೆದರಿಕೆಯಿಂದ ಬಳಲಿ ಸುಸ್ತಾಗುವ ಪರಿ ಮಾತ್ರ ವಿಚಿತ್ರವಾದದ್ದು ಮತ್ತು ತೀವ್ರವಾದದ್ದು. ಅದು ಕೆಲವೊಮ್ಮೆ ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಂತಹ ಒಂದು ಅನುಭವವನ್ನು ಹೇಳಿದರೆ ನಿಮಗೆ ಅದರ ಕಲ್ಪನೆ ಬರುತ್ತದೆ.

ನಾನೊಮ್ಮೆ ಕೈಲಾಶ–ಮಾನಸ ಸರೋವರ ಯಾತ್ರೆಗೆ ಹೋಗಿದ್ದೆ. ಭಾರತ ಸರ್ಕಾರದವರೇ ಪ್ರೋತ್ಸಾಹಿಸಿ ನಡೆಸುವ ಅತಿ ಮಹತ್ವದ, ಬಹುಕಷ್ಟದ ಯಾತ್ರೆ ಇದಾಗಿದೆ. ಇದೊಂದು ಅತ್ಯುತ್ತಮ ಹಿಮಾಲಯ ಚಾರಣವೂ ಹೌದು. ಸುಮಾರು ಮೂವತ್ತು ದಿನಗಳ ಕಾಲ, 258 ಕಿಲೋಮೀಟರ್ ದೂರವನ್ನು ಹಿಮಾಲಯದ ಬೆಟ್ಟಗುಡ್ಡಗಳಲ್ಲಿ ನಡೆಯಬೇಕು. ಆರ್ಭಟದಿಂದ ಮದವೇರಿ ಹರಿಯುವ ಮಹಾಕಾಳಿ ನದಿಯಗುಂಟ ಸಾಗುವ ಈ ಚಾರಣ ನನ್ನ ಬದುಕಿನ ಅವಿಸ್ಮರಣೀಯ ಅನುಭವಗಳಲ್ಲಿ ಒಂದು. ಈ ಚಾರಣಕ್ಕೆ ದೇಶದ ಎಲ್ಲಾ ಭಾಗಗಳಿಂದಲೂ ಜನರು ಬರುತ್ತಾರೆ. ವಿದೇಶದಲ್ಲಿ ನೆಲೆಸಿರುವ ಕೆಲವು ಭಾರತೀಯರೂ ಸೇರಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈಶ್ವರನ ಭಕ್ತಿಯಿಂದಲೇ ಈ ಯಾತ್ರೆಗೆ ಬರುವವರು ಹೆಚ್ಚು.

ಆದರೆ ಚಾರಣದ ಬಗ್ಗೆ ಉತ್ಸಾಹವನ್ನಿಟ್ಟುಕೊಂಡಿರುವ ನನ್ನಂತಹವರೂ ಒಂದಿಬ್ಬರು ಬಂದಿರುತ್ತಾರೆ. ಬೇರೆ ಬೇರೆ ಮಾತೃಭಾಷೆಯ ಜನರು ಸೇರಿರುವ ಕಾರಣವಾಗಿ ಸಾಮಾನ್ಯವಾಗಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಇಲ್ಲಿ ಎಲ್ಲರೂ ಮಾತನಾಡುತ್ತಾರೆ. ಬೆಂಗಳೂರಿನಿಂದ ಕಾಳಪ್ಪ ಎನ್ನುವ ಐವತ್ತು ದಾಟಿದ ಹಿರಿಯರೊಬ್ಬರು ಈ ಚಾರಣಕ್ಕೆ ಬಂದಿದ್ದರು. ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ ಇವರು, ತಮ್ಮ ದೇಹಾರೋಗ್ಯವನ್ನು ಅಷ್ಟೇನೂ ಚೆನ್ನಾಗಿ ಕಾಪಾಡಿಕೊಂಡಿರದಿದ್ದ ಕಾರಣ ಸ್ವಲ್ಪ ಸ್ಥೂಲಕಾಯದವರಾಗಿದ್ದರು. ಅವರು ಈ ಯಾತ್ರೆಯನ್ನು ಆದಷ್ಟು ಕುದುರೆಯ ಮೇಲೆ ಕುಳಿತೇ ಮಾಡಿದರು. ಕೆಲವೊಂದು ಸಂದರ್ಭಗಳಲ್ಲಿ ನಡೆಯುವ ದಾರಿಯು ವಿಪರೀತ ಕಿರಿದಾಗಿದ್ದು, ಪಕ್ಕದ ಮಹಾಕಣಿವೆಯ ಆಳದಲ್ಲಿ ಮಹಾಕಾಳಿ ಸೊಕ್ಕಿನಿಂದ ಹರಿಯುತ್ತಿದ್ದಳು.

ಇದು ಅತ್ಯಂತ ಅಪಾಯಕಾರಿ ದಾರಿಯಾಗಿದ್ದು, ಕುದುರೆಯ ಮೇಲೆ ಹೋಗಲು ಯಾತ್ರೆಯ ಮಾರ್ಗದರ್ಶಿಗಳು ಒಪ್ಪಿಗೆ ಕೊಡುತ್ತಿರಲಿಲ್ಲ. ಅಂತಹ ಹೊತ್ತಿನಲ್ಲಿ ನಡೆಯಲೇಬೇಕಾಗುತ್ತಿತ್ತು. ಆಗ ಕಾಳಪ್ಪನವರು ತುಂಬಾ ತೊಂದರೆಗೆ ಒಳಗಾಗುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನೋವಾದ ಕಾಲುಗಳನ್ನು ತಾವೇ ಒತ್ತಿಕೊಳ್ಳುತ್ತಾ, ಒಬ್ಬರೇ ಕುಳಿತು ಅಳುತ್ತಿದ್ದರು. ಆಗ ನಾನು ಅವರಿಗೆ ಸಮಾಧಾನ ಮಾಡುತ್ತಿದ್ದೆ. ನನಗೆ ಮತ್ತು ಅವರಿಗೆ ಒಳ್ಳೆಯ ಗೆಳೆತನ ಮೂಡಲು ನಮ್ಮ ಮಾತೃಭಾಷೆ ಕಾರಣವಾಗಿತ್ತು. ಕಾಳಪ್ಪನವರಿಗೆ ಕನ್ನಡ ಬಿಟ್ಟರೆ ಮತ್ತೊಂದು ಭಾಷೆ ಬರುತ್ತಿರಲಿಲ್ಲ. ಮೈಸೂರು ಸೀಮೆಯವರಾದ್ದರಿಂದ ಹಿಂದಿ ಗೊತ್ತಿರಲಿಲ್ಲ. ಡಿಗ್ರಿ ಮಾಡಿದ್ದರಾದರೂ, ರಾಜ್ಯ ಸರ್ಕಾರದ ಕೆಲಸವನ್ನೆಲ್ಲಾ ಕನ್ನಡದಲ್ಲೇ ಮಾಡುತ್ತಾರಾದ್ದರಿಂದ ಅವರಿಗೆ ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಮಾತನಾಡಲು ಬರುತ್ತಿರಲಿಲ್ಲ.

ಆದ್ದರಿಂದ ಸಂಪೂರ್ಣವಾಗಿ ನನ್ನ ಮೇಲೆ ಅವಲಂಬಿತರಾಗಿದ್ದರು. ಯಾವುದೋ ಸುಂದರ ದೃಶ್ಯವನ್ನು ನೋಡಿ “ಎಂಥಾ ಸೊಗಸಾಗೈತಲ್ಲ!” ಎನ್ನುವದಕ್ಕಾಗಲಿ, ಕಾಲುನೋವು ಹೆಚ್ಚಾದಾಗ “ಈ ವಯಸ್ಸಿನಾಗೆ ನಂಗೆ ಈ ಯಾತ್ರೆ ಹುಚ್ಚು ಯಾಕೆ ಬೇಕಿದ್ದೀತು ಹೇಳ್ರಿ?” ಎಂದು ಅಳುವುದಕ್ಕಾಗಲಿ ನಾನೇ ಬೇಕಿತ್ತು. ಆ ಮೂವತ್ತು ದಿನಗಳಲ್ಲಿ ಅಪರೂಪವಾಗಿ ಹೋಗಿದ್ದ ಕನ್ನಡ ಭಾಷೆಯು ಅವರ ಮೂಲಕವಾದರೂ ಕಿವಿಗೆ ಬೀಳುತ್ತದಲ್ಲಾ ಎನ್ನುವ ಕಾರಣದಿಂದ ನಾನೂ ಅವರೊಡನೆ ಖುಷಿಯಿಂದಲೇ ಒಡನಾಡುತ್ತಿದ್ದೆ. ಈ ದಾರಿಯುದ್ದಕ್ಕೂ ಟಿಬೆಟ್ ಮತ್ತು ಭಾರತದ ಕಾವಲು ಪಡೆಯ ಯೋಧರಿಗಾಗಿ ನಿರ್ಮಿಸಿದ ಅನೇಕ ಪುಟ್ಟ ಪುಟ್ಟ ಕ್ಯಾಂಪ್ಸೈಟ್ಗಳಿದ್ದವು. ಇವುಗಳನ್ನೇ ನಮ್ಮ ರಾತ್ರಿಯ ವಾಸಕ್ಕೆ, ಊಟ–ಉಪಚಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಈ ಕ್ಯಾಂಪ್ಸೈಟ್ಗಳಲ್ಲಿ ಸಾಕಷ್ಟು ಪುಟ್ಟ ಪುಟ್ಟ ಟೆಂಟ್ಗಳಿರುತ್ತಿದ್ದವು.

ಸಾಮಾನ್ಯವಾಗಿ ಒಂದು ಟೆಂಟ್ನಲ್ಲಿ ನಾಲ್ಕೈದು ಜನರು ಮಲಗುತ್ತಿದ್ದೆವು. ಭಾಷೆಯ ದೆಸೆಯಿಂದಾಗಿ ನನ್ನ ಮೇಲೆ ಸಾಕಷ್ಟು ಅವಲಂಬಿತರಾದ ಕಾಳಪ್ಪ, ನನ್ನ ಜೊತೆಯಲ್ಲಿ ಒಂದೇ ಟೆಂಟ್ನಲ್ಲಿ ಇರಲು ಇಷ್ಟ ಪಡುತ್ತಿದ್ದರು. ರಾತ್ರಿ ಬಹಳ ಹೊತ್ತು ನಾವು ಕನ್ನಡದಲ್ಲಿ ಮಾತನಾಡುತ್ತಾ ನಿದ್ದೆ ಹೋಗುತ್ತಿದ್ದೆವು. “ಬಸ್ ಕರೋ ಆಪ್ಕಿ ಕಾನಡಿ... ಬ್ವಕ್ ಬ್ವಕ್ ಬ್ವಕ್...” ಎಂದು ಉತ್ತರ ಭಾರತದ ಟೆಂಟ್ವಾಸಿಗಳು ನಮ್ಮ ಮಾತನ್ನು ಹಂಗಿಸುತ್ತಿದ್ದರು. ಇಂತಹ ಕ್ಯಾಂಪ್ಸೈಟ್ಗಳಲ್ಲಿ ಸಾಮಾನ್ಯವಾಗಿ ಯಾರಾದರೂ ಮಸಾಜ್ ಮಾಡುವ ವ್ಯಕ್ತಿಗಳಿರುತ್ತಿದ್ದರು. ಇಪ್ಪತ್ತು ರೂಪಾಯಿ ಕೊಟ್ಟರೆ ಸಾಕು, ಅತ್ಯಂತ ಕಾಳಜಿಯಿಂದ ಒಂದು ತಾಸು ಮಸಾಜ್ ಮಾಡುತ್ತಿದ್ದರು. ಯಾತ್ರೆ ಶುರುವಾದ ಎರಡನೆಯ ದಿನ ಬರಿಗಾಲಲ್ಲಿ ಒಂದೈದು ಕಿಲೋಮೀಟರ್ ನಡೆದ ಕಾಳಪ್ಪ ಒಂದೇಸಮನೆ ನೋವಿನಿಂದ ಅಳುತ್ತಿದ್ದರು.

ಅವರಿಗೆ ಮಸಾಜ್ ಮಾಡಿಸಿಕೊಳ್ಳಲು ನಾನೇ ಸಲಹೆ ಕೊಟ್ಟೆ. ಅವರಿಗೂ ನನ್ನ ಸಲಹೆ ಇಷ್ಟವಾಯ್ತು. “ಒಂದು ಇಪ್ಪತ್ತು ರೂಪಾಯಿ ಅಲ್ವೇನ್ರಿ? ಹೋದರೆ ಹೋಯ್ತು” ಎಂದು ಪಟ್ಟೆಪಟ್ಟೆಯ ಸಡಿಲ ಚಡ್ಡಿಯನ್ನು ಧರಿಸಿ, ಮಸಾಜ್ ಮಾಡಿಸಿಕೊಳ್ಳಲು ಸಿದ್ಧವಾದರು. ಆ ಕ್ಯಾಂಪ್ಸೈಟ್ನಲ್ಲಿ ಸುಮಾರು ಅರವತ್ತು ವರ್ಷದ ನಡುಪ್ರಾಯದವನೊಬ್ಬ ಮಸಾಜ್ ಮಾಡುತ್ತಿದ್ದ. ಕಾಳಪ್ಪನಿಗೆ ಮಸಾಜ್ ಮಾಡಬೇಕೆನ್ನುವ ನಿರ್ದೇಶನವನ್ನು ಅವನಿಗೆ ಕೊಟ್ಟು, ನಾನು ಮೆಸ್ಗೆ ತಿನ್ನಲು ಹೊರಟುಹೋದೆ. ರೂಮಿನಲ್ಲಿ ಕಾಳಪ್ಪ ಮತ್ತು ಆ ಮಸಾಜ್ ಮಾಡುವ ಮುದುಕ ಮಾತ್ರ ಇದ್ದರು. ನಾನು ಮೆಸ್ನಿಂದ ವಾಪಾಸು ಟೆಂಟ್ಗೆ ಬಂದಾಗ ಕಾಳಪ್ಪ ಅತ್ಯಂತ ಅಸಹ್ಯ, ದುಃಖದಿಂದ ಹಾಸಿಗೆಯ ಮೇಲೆ ಕುಳಿತಿದ್ದರು. ಏನಾಗಿಹೋಯಿತೋ ಎಂಬ ಆತಂಕ, ಅಚ್ಚರಿ ನನಗೆ.

“ನನ್ನ ಮರ್ಯಾದೆ ಎಲ್ಲಾ ಕಳೆದುಬಿಟ್ಟ ರೀ ಆ ಮುದುಕ” ಎಂದು ದುಃಖಿಸಲಾರಂಭಿಸಿದರು. ನನಗೆ ನಡೆದ ಸಂಗತಿಯೇನೆಂದು ತಿಳಿಯಲಿಲ್ಲ. “ಯಾವ ಬಾಯಿಂದ ಅಂತಹ ಹೊಲಸು ಸಂಗತಿ ಹೇಳಲಿ ಕಣ್ರೀ...” ಎಂದು ನಡೆದದ್ದನ್ನು ಹೇಳುವುದಕ್ಕೇ ಕಾಳಪ್ಪ ನಿರಾಕರಿಸಿದರು. ಸ್ವಲ್ಪ ಹೊತ್ತು ಅವರನ್ನು ಸಮಾಧಾನ ಪಡಿಸಿದ ಮೇಲೆ, ಸಿಟ್ಟಿನಿಂದಲೇ ನಡೆದ ಸಂಗತಿಯನ್ನು ಚುಟುಕಾಗಿ ಹೇಳಿದರು. ಕಾಲಿಗೆ ಎಣ್ಣೆ ಹಚ್ಚಿ ತಿಕ್ಕುತ್ತಾ ಆ ಮಸಾಜ್ ಮಾಡುವ ಮನುಷ್ಯ, ಒಂದು ಹೊತ್ತಿನಲ್ಲಿ ಅವರ ಚಡ್ಡಿಯೊಳಕ್ಕೆ ಕೈಹಾಕಿ, ಅವರ ಮರ್ಮಾಂಗವನ್ನು ಹಿಚುಕಿಬಿಟ್ಟಿದ್ದ. ಅನಾಹುತವಾದಂತೆ ಇವರು ಕೂಗಾಡಿ ಎದ್ದುಬಿಟ್ಟಿದ್ದರು. ಆತ ಹೆದರಿಕೊಂಡು ಓಡಿಹೋಗಿದ್ದ. ಆತ ನಿಜಕ್ಕೂ ಅವರ ಮರ್ಮಾಂಗವನ್ನು ಹಿಚುಕಿದ್ದನೋ ಅಥವಾ ತೊಡೆಯ ತನಕ ಕೈಹಾಕಿ ಮಸಾಜ್ ಮಾಡುವಾಗ ಇವರು ಹಾಗೆ ಊಹಿಸಿಕೊಂಡಿದ್ದರೋ ಗೊತ್ತಿಲ್ಲ.

ಕಾಳಪ್ಪ ವಿಪರೀತ ಹೆದರಿಕೆಯಿಂದ ಮತ್ತು ಅಸಹ್ಯದಿಂದ ನಡುಗುತ್ತಿದ್ದರು. ಆವತ್ತಿನಿಂದ ಅವರಿಗೆ ಹೋಮೋಫೋಬಿಯಾ ಶುರುವಾಯ್ತು ನೋಡಿ. ಯಾರೇ ಅಪರಿಚಿತರನ್ನು ಕ್ಯಾಂಪ್ಸೈಟಿನಲ್ಲಿ ನೋಡಿದರೂ, ಅವರು ‘ಗೇ’ ಇರಬಹುದು ಎಂದು ಭಾವಿಸುತ್ತಿದ್ದರು. ನನ್ನ ಜೊತೆಯನ್ನು ಬಿಟ್ಟು ಅತ್ತಿತ್ತ ಕದಲುತ್ತಿರಲಿಲ್ಲ. ತಮಾಷೆಯೆಂದರೆ ರಾತ್ರಿಯ ಹೊತ್ತು ಅವರ ಪಕ್ಕ ನಾನಲ್ಲದೆ ಬೇರೆ ಯಾರೂ ಮಲಗಕೂಡದು ಎಂದು ಕಟ್ಟಳೆ ವಿಧಿಸಿಬಿಟ್ಟರು. ಮೂವತ್ತು ದಿನಗಳ ಕಾಲ ಅವರು ನನ್ನ ಪಕ್ಕವೇ ನೆಮ್ಮದಿಯಿಂದ ನಿದ್ರಿಸುತ್ತಿದ್ದರು. ರಾತ್ರಿ ಯಾವಾಗಲೋ ಒಮ್ಮೆ ಮೂತ್ರಕ್ಕೆ ಎದ್ದಾಗಲೂ, ಗಾಢವಾಗಿ ಮಲಗಿದ್ದ ನನ್ನನ್ನು ಎಬ್ಬಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. “ನೀವು ನನ್ನ ಜೊತೆ ಇದ್ದೀರ ಅಂತ ನಾನು ಬದುಕಿಕೊಂಡೆ ಕಣ್ರೀ... ಇಲ್ಲಾ ಅಂದ್ರೆ ನನ್ನ ಗತಿ ಏನಾಗ್ತಿತ್ತು?” ಎಂದು ನನ್ನಲ್ಲಿ ಹತ್ತಾರು ಬಾರಿ ಹೇಳಿದರು.

ನಾನು ‘ಗೇ’ ಎನ್ನುವ ಸಂಗತಿಯನ್ನು ಅಲ್ಲಿ ಯಾರಿಗೂ ಹೇಳಿರಲಿಲ್ಲ. ಅದರ ಅವಶ್ಯಕತೆಯೂ ನನಗೆ ಕಂಡಿರಲಿಲ್ಲ. ಆದರೆ ಕಾಣದ ‘ಗೇ’ ಮನುಷ್ಯನನ್ನು ಊಹಿಸಿಕೊಂಡು ನಡುಗುತ್ತಾ, ನಿಜವಾದ ‘ಗೇ’ ಪಕ್ಕವೇ ಮಲಗಿ ಸುರಕ್ಷತಾಭಾವವನ್ನು ಅನುಭವಿಸಿದ ಕಾಳಪ್ಪ ನನಗೆ ತಮಾಷೆಯನ್ನು ನೀಡಿದ್ದರು. ಬೆಂಗಳೂರಿಗೆ ಬಂದ ಮೇಲೆ ವಿಮಾನ ನಿಲ್ದಾಣದಲ್ಲಿ ತಮ್ಮ ಪತ್ನಿಗೆ ನನ್ನನ್ನು ಪರಿಚಯಿಸಿ, “ಇವರು ಇಲ್ಲಾ ಅಂದಿದ್ರೆ ನಾನು ನಿಂಗೆ ಸಿಗ್ತಾ ಇರಲಿಲ್ಲ ಕಣೇ... ಇಲ್ಲೆಲ್ಲಾ ಆ ವಿಷಯ ಬೇಡ. ಮನೆಗೆ ಹೋದ ಮೇಲೆ ಹೇಳ್ತೀನಿ” ಎಂದು ಗದ್ಗದಿತರಾಗಿ ಹೇಳಿದ್ದರು. ಸರಿಯಾದ ಪ್ರಪಂಚಜ್ಞಾನವಿಲ್ಲದವರನ್ನು ‘ಹೋಮೋಫೋಬಿಯಾ’ ಯಾವ ರೀತಿಯಲ್ಲಿ ಕಾಡುತ್ತದೆ ಎನ್ನುವುದಕ್ಕೆ ಕಾಳಪ್ಪ ಅತ್ಯುತ್ತಮ ಉದಾಹರಣೆಯಾಗಿ ನನಗೆ ಕಾಣುತ್ತಾರೆ.

‘ಹೋಮೋಫೋಬಿಯಾ’ ಎನ್ನುವುದು ಕೇವಲ ಇತರ ಜನರಿಗೆ ಮಾತ್ರ ಆಗುವ ಭಯವಲ್ಲ. ಸ್ವತಃ ‘ಗೇ’ ಜನರೇ ಈ ಕಲ್ಪಿತ ಭಯದಿಂದ ವಿಪರೀತವಾಗಿ ಬಳಲುತ್ತಾರೆ. ಅವರಿಗೂ ಮಾಹಿತಿಯ ಕೊರತೆ ಮತ್ತು ಆ ಜಗತ್ತಿನೊಡನೆ ನಂಟಿಲ್ಲದಿರುವ ಸಂಗತಿಯೇ ಆ ಭಯದ ಮೂಲವಾಗಿರುತ್ತದೆ. ನಾನು ‘ಮೋಹನಸ್ವಾಮಿ’ ಪುಸ್ತಕ ಬರೆಯುವುದಕ್ಕೆ ಮುಂಚೆ ಕೇವಲ ಕೆಲವೇ ಲೈಂಗಿಕ ಅಲ್ಪಸಂಖ್ಯಾತರ ಮುಂದೆ ನನ್ನ ಲೈಂಗಿಕತೆಯ ವಿಷಯವನ್ನು ತೆರೆದಿಟ್ಟಿದ್ದೆ. ಅಪರಿಚಿತ ‘ಗೇ’ ಜನರನ್ನು ಕಂಡರಂತೂ ಭಯವೇ ಆಗುತ್ತಿತ್ತು. ಇನ್ನು ಹಿಜ್ಡಾ ಮಂದಿಯನ್ನು ಧೈರ್ಯದಿಂದ ಮಾತಾಡಿಸಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಒಮ್ಮೆ ಪುಸ್ತಕವನ್ನು ಬರೆದು, ನನ್ನ ಹೆಸರಿನಲ್ಲಿಯೇ ಪ್ರಕಟಿಸಬೇಕೆಂದು ನಿರ್ಧರಿಸಿದೆನೋ ಆಗ ನನಗೆ ನಾನೇ ಧೈರ್ಯ ತೆಗೆದುಕೊಂಡೆ.

ನನ್ನ ಖಾಸಾ ಗೆಳೆಯರಿಗೆ ಮತ್ತು ಸಹೋದರಿಯರಿಗೆ ಖುದ್ದಾಗಿ ಭೇಟಿಯಾಗಿ ಹೇಳಲಾರಂಭಿಸಿದೆ. ಪ್ರತಿಯೊಬ್ಬರೂ ನನ್ನನ್ನು ಪ್ರೀತಿಯಿಂದಲೇ ಸ್ವೀಕರಿಸಿದರು. ‘ಲೈಂಗಿಕತೆ ಎನ್ನುವುದು ವೈಯಕ್ತಿಕ ವಿಷಯ; ನಮ್ಮ ಗೆಳೆತನ ಇವೆಲ್ಲವನ್ನೂ ಮೀರಿದ್ದು’ ಎಂದು ವಿಶ್ವಾಸದಿಂದ ಮಾತನಾಡಿದರು. ಆದರೆ ರೋಹಿತ್ ರಾಮಯ್ಯ ಎನ್ನುವ ಗೆಳೆಯನ ಪ್ರತಿಕ್ರಿಯೆ ಮಾತ್ರ ಅತ್ಯಂತ ವಿಶೇಷವಾಗಿತ್ತು. ಈ ಗೆಳೆಯನ ಜೊತೆಗೆ ನಾನು ಪ್ರತಿನಿತ್ಯ ಸ್ಕ್ವಾಷ್ ಆಟ ಆಡುತ್ತಿದ್ದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಈತನಿಗೆ ವಿಪರೀತ ಅಭಿಮಾನ. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಸಾಕಷ್ಟು ವರ್ಷ ಅಮೆರಿಕದಲ್ಲಿದ್ದು, ಈಗ ಮಕ್ಕಳಿಗೆ ಕನ್ನಡ ಸಂಸ್ಕೃತಿಯ ಪರಿಚಯವಾಗಲೆಂದು ಇಲ್ಲಿಯೇ ಬಂದು ನೆಲೆಸಿದ್ದಾನೆ. ಈತನಿಗೆ ನನ್ನ ಬಗ್ಗೆ ವಿಶೇಷ ಹೆಮ್ಮೆಯಿದೆ.

ಸಾಕಷ್ಟು ಪುಸ್ತಕಗಳನ್ನು ಬರೆದಿದ್ದೇನೆ ಎಂದು ನನಗೆ ಗೌರವವನ್ನು ಕೊಡುತ್ತಾನೆ. ಅವನಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಆಸೆ ವಿಪರೀತವಾಗಿದೆ. ಆದರೆ ಯಾಕೋ ಯಾವುದೂ ಕೈಗೂಡಿಲ್ಲ. ಪ್ರತಿನಿತ್ಯ ಐದು ತಾಸು ಬೆಂಗಳೂರಿನ ರಸ್ತೆಗಳ ಟ್ರಾಫಿಕ್ನಲ್ಲಿ ಕಳೆದು, ಹತ್ತು ಗಂಟೆ ಆಫೀಸಿನಲ್ಲಿ ಕಳೆದರೆ ಯಾವುದಕ್ಕೆ ತಾನೆ ಸಮಯವಿರುತ್ತದೆ? ಒಂದು ದಿನ ಸ್ಕ್ವಾಷ್ ಆಟ ಆಡಿದ ನಂತರ, “ಸ್ವಲ್ಪ ನಿನ್ನೊಡನೆ ಖಾಸಾ ವಿಷಯ ಮಾತಾಡಬೇಕು ರೋಹಿತ್” ಎಂದ ಹೇಳಿ ನನ್ನ ಹೊಸಪುಸ್ತಕ ಮತ್ತು ನನ್ನ ಲೈಂಗಿಕತೆಯ ಕುರಿತು ಮಾತನಾಡಿದೆ. ನನ್ನ ಮಾತಿನಲ್ಲಿ ಒಂದು ರೀತಿಯ ವಿಷಾದ, ಅಸಹಾಯಕತೆ ಇಣುಕಿತ್ತು. ಆತ ಎಲ್ಲವನ್ನೂ ಕೇಳಿಸಿಕೊಂಡು ಬಹಳ ಗಂಭೀರನಾಗಿಬಿಟ್ಟ. ಆಮೇಲೆ “ನಂಗೆ ಈವಾಗ ಗೊತ್ತಾಯ್ತು ಕಣೋ, ನೀನು ಯಾಕೆ ಬದುಕಿನಲ್ಲಿ ಇಷ್ಟು ಯಶಸ್ವಿಯಾಗಿದೀಯಾ ಅಂತ...

ಪುಸ್ತಕ ಬರೀತೀಯಾ, ಟ್ರೆಕ್ಕಿಂಗ್ ಮಾಡ್ತೀಯಾ, ಯಾವ ಊರಿಗೆ ಬೇಕೋ ಅಲ್ಲಿಗೆ ಹೋಗ್ತೀಯಾ, ಮನಸ್ಸಿಗೆ ಹಿಡಿಸಲಿಲ್ಲ ಅಂತ ಕೆಲಸ ಬಿಡ್ತೀಯಾ... ಅದಕ್ಕೆಲ್ಲಾ ನೀನು ‘ಗೇ’ ಅನ್ನೋದೇ ಕಾರಣ ಕಣೋ... ಎಂಥಾ ಅದೃಷ್ಟ ನಿನ್ನದು... ನಾವು ನೋಡು, ಹಗಲು–ರಾತ್ರಿ ದುಡುದು ಸಾಯಬೇಕು. ಮನೆಗೆ ಎಷ್ಟು ಸಂಪಾದನೆ ಮಾಡಿ ತಂದು ಹಾಕಿದ್ರೂ ಸಾಕಾಗಲ್ಲ. ಮಕ್ಕಳ ಫೀಜು, ಹೆಂಡತಿ ಬಟ್ಟೆ–ಬರೆ, ಕಾರು–ಬಂಗಲೆ ಅಂತೆಲ್ಲಾ ಸಾಲ ಮಾಡ್ಕೊಂಡು... ಥೂ, ಹೊಲಸು ಜೀವನ ನಮ್ದು... ಯಾವ ಬೋಳೀ ಮಗ ಮದುವೆ, ಮಕ್ಕಳು ಅಂತೆಲ್ಲಾ ಮಾಡಿಟ್ಟಾನೋ ಅವನನ್ನ ಗುಂಡಿಕ್ಕಿ ಹೊಡೀಬೇಕು... ನಾನು ನಿನ್ನ ತರಹ ‘ಗೇ’ ಆಗಿ ಹುಟ್ಟಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು... ನಿನ್ನ ತರಹಾನೇ ಬದುಕಿನಲ್ಲಿ ಯಶಸ್ವಿಯಾಗಿ ಬಿಡ್ತಿದ್ದೆ...” ಎಂದೆಲ್ಲಾ ದೊಡ್ಡ ಧ್ವನಿಯಲ್ಲಿ ನನ್ನ ಅದೃಷ್ಟವನ್ನು ಕೊಂಡಾಡಲು ಶುರು ಮಾಡಿಬಿಟ್ಟ.

ನನಗೆ ದೇವರಾಣೆಗೂ ಇಂತಹ ಹೊಗಳಿಕೆಯನ್ನು ಸ್ವೀಕರಿಸುವ ಮನಸ್ಥಿತಿ ಇರಲಿಲ್ಲ. ಆದರೆ ಅವನ ಮಾತಿಗೆ ಅಡ್ಡಿ ಪಡಿಸಬಾರದು ಎನ್ನುವ ಕಾರಣದಿಂದ “ಹೌದು ಹೌದು” ಎಂದು ಗೋಣು ಹಾಕಿಬಿಟ್ಟೆ. ನನ್ನದು ಶಾಪಗ್ರಸ್ತ ಬದುಕು ಎಂದು ಹಲವಾರು ಸಲ ಅಂದುಕೊಂಡಿದ್ದೆ. ಇಲ್ಲಿ ಈತ ಅದನ್ನೇ ವರಪ್ರಸಾದ ಎಂದು ಹೇಳುತ್ತಿರುವನಲ್ಲ ಅಂತ ವಿಚಿತ್ರ ರೋಮಾಂಚನ ಆಗಿಬಿಟ್ಟಿತ್ತು. ‘ಮೋಹನಸ್ವಾಮಿ’ ಪುಸ್ತಕ ಬಿಡುಗಡೆಯಾದ ಮೇಲಂತೂ ವಿಶೇಷ ಅನುಭವಗಳು ನನಗಾಗಿವೆ. ಈ ಎಲ್ಲಾ ಅನುಭವಗಳು ನಾಡಿನ ಜನರಲ್ಲಿ ‘ಗೇ’ ಬದುಕಿನ ಬಗ್ಗೆ ಇರುವ ಕುತೂಹಲ, ಅಜ್ಞಾನ, ಭಯ ಇತ್ಯಾದಿ ಸಂಗತಿಗಳನ್ನು ತೋರಿಸಿಕೊಟ್ಟಿವೆ. ಅದರ ಜೊತೆಗೆ ಗುಪ್ತವಾಗಿ ಬದುಕುತ್ತಿರುವ ನಾಡಿನ ಅನೇಕ ‘ಗೇ’ ಜನರ ನೋವು, ನಲಿವುಗಳ ದರ್ಶನ ನನಗೆ ಮಾಡಿಕೊಟ್ಟಿವೆ.

ಒಂದು ರೀತಿಯಲ್ಲಿ ನನಗೆ ಹೊಸ ಜಗತ್ತನ್ನು, ಹೊಸ ಬದುಕನ್ನು ನೀಡಿವೆ. ಈಗಾಗಲೇ ನಾನು ಸುಮಾರು ಹದಿನೈದು ವರ್ಷಗಳಿಂದ ಕನ್ನಡದಲ್ಲಿ ಕತೆ, ಪ್ರಬಂಧಗಳನ್ನು ಬರೆಯುತ್ತಿದ್ದೆನಾದ ಕಾರಣ, ಎಲ್ಲಾ ಲೇಖಕರಿಗೂ ಇರುವಂತೆ ನನಗೂ ಒಂದು ಪುಟ್ಟ ಓದುಗ ವರ್ಗವಿತ್ತು. ಅಲ್ಲಿಯವರೆಗೆ ನಾನು ನನ್ನ ಬಾಲ್ಯದ ರಸ ಅನುಭವಗಳ ಬಗ್ಗೆಯೋ, ನನ್ನ ಅಮ್ಮನ ಬದುಕು ಮತ್ತು ಬವಣೆಯ ಕುರಿತೋ, ಬ್ರಾಹ್ಮಣ ಮಡಿಹೆಂಗಸರ ಸಂಕಷ್ಟಗಳ ಕುರಿತೋ ಅಥವಾ ಬೆಂಗಳೂರಿನ ಒತ್ತಡದ ಬದುಕಿನ ಬಗ್ಗೆಯೋ ಬರೆದಿದ್ದೆ. ಓದುಗರು ಅವನ್ನೆಲ್ಲಾ ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿದ್ದರು. ಸಾಕಷ್ಟು ಜನ ನನ್ನ ಜೊತೆ ಫೋನಿನಲ್ಲಿ ಮಾತನಾಡುವುದೋ, ಮೆಸೇಜ್ ಅಥವಾ ಇ–ಮೇಲ್ ಕಳುಹಿಸುವುದೋ ಮಾಡುತ್ತಿದ್ದರು. ಅವರೆಲ್ಲಾ ‘ಮೋಹನಸ್ವಾಮಿ’ ಪುಸ್ತಕದ ವಿಷಯವನ್ನು ಓದಿ ಕಂಗಾಲಾಗಿ ಹೋದರು. ಅವರ ಆತಂಕ ಹಲವು ರೀತಿಯಲ್ಲಿ ಪ್ರಕಟವಾದವು.

ಮಲ್ಲೇಶ್ವರಂ ಕಡೆಯ ಹಿರಿಯ ಮಹಿಳೆಯೊಬ್ಬರು ನನಗೆ ಫೋನಾಯಿಸಿದ್ದರು.

“ಈವತ್ತು ಏನು ವಿಶೇಷ ಗೊತ್ತಾ?”

“ಇಲ್ಲ ಮೇಡಂ, ನೀವೇ ಹೇಳಬೇಕು”.

“ನಮ್ಮ ಮದುವೆಯಾಗಿ ಇಪ್ಪತ್ತೈದು ವರ್ಷ ಆಯ್ತು”.

“ತುಂಬಾ ಸಂತೋಷ. ಅಭಿನಂದನೆಗಳು ಮೇಡಂ”.

“ನಮ್ಮ ಯಜಮಾನರು ನನಗೆ ಏನು ಉಡುಗೊರೆ ತರ್ತಾ ಇದಾರೆ ಗೊತ್ತಾ?”

“ನೀವೇ ಹೇಳಿ...”.

“ನಿಮ್ಮ ‘ಮೋಹನಸ್ವಾಮಿ’ ಪುಸ್ತಕ ಕೊಂಡು ತರೋದಕ್ಕೆ ಮೆಜೆಸ್ಟಿಕ್ಗೆ ಹೋಗಿದಾರೆ. ನಿಮ್ಮ ಪುಸ್ತಕ ಅಂದ್ರೆ ನಂಗೆ ತುಂಬಾ ಇಷ್ಟ ಅಂತ ಅವರಿಗೆ ಚೆನ್ನಾಗಿ ಗೊತ್ತು”.

“ಓಹ್! ಹೌದಾ... ಸಂತೋಷ”.

“ಮೋಹನಸ್ವಾಮಿ ಅಂದ್ರೆ ಶ್ರೀಕೃಷ್ಣನ ಮತ್ತೊಂದು ಹೆಸರು. ಶ್ರೀಕೃಷ್ಣ ನನ್ನ ಇಷ್ಟದ ದೇವರು. ಅವನ ಬಗ್ಗೆ ನೀವು ಖಂಡಿತಾ ಇಷ್ಟರಲ್ಲೇ ಪುಸ್ತಕ ಬರೀತೀರಾ ಅಂತ ನಂಗೆ ಗೊತ್ತಿತ್ತು...”.

ನನಗೆ ಬಾಯಲ್ಲಿ ಕ್ರಿಕೆಟ್ ಬಾಲ್ ಸಿಕ್ಕಿಕೊಂಡ ಹಾಗಾಯ್ತು. ಪುಸ್ತಕದ ಕುರಿತು ಹೇಳಬೇಕೋ, ಬೇಡವೋ ಗೊತ್ತಿಲ್ಲ. ಈ ಹೊತ್ತಿನಲ್ಲಿ ಸುಮ್ಮನಿರುವುದು ಸೂಕ್ತ ಎಂದು ಬಾಯಿ ಬಿಗಿದುಕೊಂಡಿದ್ದೆ. ಎರಡೇ ದಿನಕ್ಕೆ ಅವರಿಂದ ಫೋನ್ ಬಂತು. ಆ ಕಡೆಯಿಂದ ಮುಸಿಮುಸಿ ಅಳುವ ಸದ್ದು ಬಹಳ ಕಾಲ ಕೇಳಿಸಿತು.

“ನೀವು ಈ ತರಹ ಮೋಸ ಮಾಡ್ತೀರ ಅಂತ ಅಂದುಕೊಂಡಿರಲಿಲ್ಲ... ಯಾಕೆ ಇಂಥಾ ಹೊಲಸು ಸಂಗತಿಗಳನ್ನು ಬರೆದ್ರಿ...” ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು.

“ಸಾರಿ ಮೇಡಂ... ನಿಮಗೆ ಪುಸ್ತಕ ಇಷ್ಟ ಆಗಿಲ್ಲ ಅಂದ್ರೆ ಪೂರ್ತಿ ಓದೋದು ಬೇಡ. ಲೇಖಕನ ಎಲ್ಲಾ ಪುಸ್ತಕಗಳು ಇಷ್ಟ ಆಗಬೇಕು ಅಂತೇನೂ ಇಲ್ಲ...” ಎಂದೆಲ್ಲಾ ಹೇಳಿ ಸಮಾಧಾನಪಡಿಸಿದೆ.

ಮೈಸೂರು ಕಡೆಯ ವೈದ್ಯೆಯೊಬ್ಬರು ಮಾತ್ರ ನನ್ನನ್ನು ದಂಗುಪಡಿಸುವಂತಹ ಪ್ರಶ್ನೆಯನ್ನು ಕೇಳಿಬಿಟ್ಟರು. ಇವರು ಸಾಕಷ್ಟು ಸಾಹಿತ್ಯದಲ್ಲಿ ತೊಡಗಿಸಿಕೊಂಡವರು ಮತ್ತು ಸ್ತ್ರೀವಾದಿ. ತಾವು ನಾಡಿನ ಪ್ರಗತಿಪರ ಮಹಿಳೆಯರಲ್ಲಿ ಒಬ್ಬರು ಎಂದು ಗುರುತಿಸಿಕೊಳ್ಳುತ್ತಾರೆ. ಅವರು ಪುಸ್ತಕವನ್ನು ಓದಿದ ಮೇಲೆ ಫೋನಾಯಿಸಿದ್ದರು.

“ಒಂದು ವೈಯಕ್ತಿಕ ವಿಷಯ ಕೇಳ್ತೀನಿ, ತಪ್ಪು ತಿಳ್ಕೋಬೇಡಿ” ಎಂದು ನಾಂದಿ ಹಾಡಿದರು.

“ಕೇಳಿ ಮೇಡಂ, ಹೇಳೋ ಸಂಗತಿಯಾಗಿದ್ರೆ ಖಂಡಿತಾ ಹೇಳ್ತೀನಿ”

“ನೀವು ‘ಗೇ’ ಅಂತ ಗೊತ್ತಾದ ತಕ್ಷಣ ‘ಅದನ್ನ’ ಕತ್ತರಿಸಿಕೊಂಡು ಬಿಟ್ರಾ?”

ನಾನು ಕಕ್ಕಾಬಿಕ್ಕಿಯಾಗಿಬಿಟ್ಟೆ. ಅವರ ಮನಸ್ಸಿನಲ್ಲಿ ‘ಗೇ’ ಮನುಷ್ಯನ ಬಗ್ಗೆ ಇರುವ ಕಲ್ಪನೆಯನ್ನು ಕಂಡು ನಗುಬಂತು.

“ನಾನ್ಯಾಕೆ ಕತ್ತರಿಸಿಕೊಳ್ಳಲಿ ಮೇಡಂ? ‘ಅದು’ ಇಲ್ಲ ಅಂದ್ರೆ ಬದುಕು ನಡೆಸೋದು ಹೇಗೆ? ನೀವು ಹೇಗೂ ವೈದ್ಯರಿದ್ದೀರಿ. ಏನಾದ್ರೂ ಪ್ಲಾಸ್ಟಿಕ್ ಸರ್ಜರಿ ಮಾಡಿ ಇನ್ನೊಂದನ್ನ ಅಂಟಿಸ್ತೀನಿ ಅಂದ್ರೂ ನಾನು ರೆಡಿ. ಬದುಕನ್ನು ಇನ್ನಷ್ಟು ಸುಖಿಸೋದಕ್ಕೆ ನಾನು ತಯಾರಾಗಿದೀನಿ” ಎಂದು ಹೇಳಿದೆ. ಅವರಿಗೆ ವಿಷಯವನ್ನು ಸರಿಯಾಗಿ ತಿಳಿಸಿ ಹೇಳುವಷ್ಟರಲ್ಲಿ ನನಗೆ ಸುಸ್ತಾಗಿ ಹೋಯ್ತು. ವೃತ್ತಿಯಲ್ಲಿ ವೈದ್ಯರಾದ, ಸಾಹಿತ್ಯದ ಒಡನಾಟವಿರುವ, ಉನ್ನತ ವರ್ಗದ ಜನರದೇ ಈ ಪಾಡಾದರೆ ಉಳಿದವರಿಗೆ ಏನು ತಾನೇ ಗೊತ್ತಿರಲು ಸಾಧ್ಯ? ಖಂಡಿತವಾಗಿಯೂ ಅವರನ್ನು ನಾನು ದೂರುವಂತಿರಲಿಲ್ಲ. ಅವರು ಸಮಾಜದ ಪ್ರಸ್ತುತ ಸ್ಥಿತಿಯ ಪ್ರತೀಕವಾಗಿದ್ದರು. ಆದರೂ ಆಕೆಗೆ ನನ್ನ ಮಾತು ಸಮಾಧಾನ ಕೊಡಲಿಲ್ಲ.

“ನೀವು ಏನೇ ಹೇಳಿ, ನಂಗ್ಯಾಕೋ ಇದೆಲ್ಲಾ ನಿಸರ್ಗಕ್ಕೆ ವಿರುದ್ಧವಾದದ್ದು ಅನ್ನಿಸುತ್ತಪ್ಪಾ...” ಎಂದು ರಾಗ ತೆಗೆದರು.

“ಮೇಡಂ, ನೀವೊಬ್ಬ ಸ್ತ್ರೀವಾದಿ ಅಂತ ಹೇಳ್ಕೋತೀರ. ಸ್ತ್ರೀ ಚಳವಳಿಗೂ, ಲೈಂಗಿಕ ಅಲ್ಪಸಂಖ್ಯಾತರ ಚಳವಳಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಸಮಾಜದಲ್ಲಿನ ಲಿಂಗ ತಾರತಮ್ಯದ ಶೋಷಣೆಯನ್ನು ವಿರೋಧಿಸಲೆಂದೇ ಹುಟ್ಟಿಕೊಂಡಿದ್ದು. ನೀವು ‘ಗೇ’ಯೊಬ್ಬನನ್ನು ವಿರೋಧಿಸಿದರೆ, ‘ಸ್ತ್ರೀವಾದಿ’ ಎಂದು ಹೇಳಿಕೊಳ್ಳಲು ಅನರ್ಹರಾಗುತ್ತೀರಿ”. ಆಕೆಗೆ ನನ್ನ ಮಾತು ಸಿಟ್ಟು ತರಿಸಿತು. ಫೋನ್ ಕತ್ತರಿಸಿಬಿಟ್ಟರು.

ಸುಮಾರು ಅರವತ್ತೈದು ವರ್ಷದ ಹಿರಿಯರೊಬ್ಬರು ನನ್ನ ಜೊತೆ ಕೆಲಸ ಮಾಡುತ್ತಾರೆ. ದೇವತಾ ಪೂಜೆ, ಭಜನೆ, ಭಗವದ್ಗೀತೆ, ಸೊಗಸಾದ ಭೋಜನ – ಇತ್ಯಾದಿಗಳು ಇವರಿಗೆ ಇಷ್ಟ. ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆ ಒಂದಿರಲಿ’ ಎಂದು ಯಾವಾಗಲೂ ಹೇಳುತ್ತಾ, ಬಹು ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಇವರಿಗೆ ಮೂಲತಃ ‘ಗೇ’ ಬದುಕು ಇಷ್ಟವಾಗಲ್ಲ. ಆದ್ದರಿಂದ ನನ್ನ ಪುಸ್ತಕವೂ ಇಷ್ಟವಾಗಿರಲಿಲ್ಲ. ಆದರೆ ಅವರು ವಿನೂತನ ಬಗೆಯಲ್ಲಿ ಪುಸ್ತಕದ ಮಹತ್ವವನ್ನು ತಿಳಿಸಿದರು. “ನೀನು ಹೇಳೋ ಬದುಕು ನಂಗೆ ಒಪ್ಪಿಗೊಳ್ಳೋದು ಕಷ್ಟ ಆಗ್ತದಪ್ಪಾ... ಆದರೆ ಅಂತಹವರು ಇದ್ದಾರೆ ಅನ್ನೋದು ಸತ್ಯ ಅನ್ನಿಸುತ್ತೆ... ಕನ್ನಡದವರ ಸಮಸ್ಯೆ ಏನಾಗಿತ್ತು ಗೊತ್ತಾ? ಅಂತಹವರನ್ನ ಏನಂತ ಕರೀಬೇಕು ಅನ್ನೋದೇ ತಿಳೀತಿದ್ದಿಲ್ಲ. ಈ ಇಂಗ್ಲೀಷಿನ ‘ಗೇ’ ಅನ್ನೋ ಪದ ನಮಗೆ ಒಗ್ಗಲ್ಲ.

ಇನ್ನು ಮುಂದೆ ಅವರನ್ನೆಲ್ಲಾ ‘ಮೋಹನಸ್ವಾಮಿ’ಗಳು ಅಂತ ಕರೀಬೋದು ನೋಡು. ನಿನ್ನ ಪುಸ್ತಕ ಕನ್ನಡ ಭಾಷೆಗೆ ಒಂದು ಸೊಗಸಾದ ಪದವನ್ನು ಕೊಟ್ಟುಬಿಟ್ಟಿದೆ” ಅಂತ ಹೇಳಿದರು. ಅವರು ಪುಸ್ತಕವನ್ನು ಒಪ್ಪಿಕೊಳ್ಳದಿದ್ದರೂ, ತಮಗನ್ನಿಸಿದ ಒಂದು ಧನಾತ್ಮಕ ಸಂಗತಿಯನ್ನು ಹಂಚಿಕೊಂಡಿದ್ದು ನನಗೆ ಬಹಳ ಇಷ್ಟವಾಯ್ತು. ಈ ಪುಸ್ತಕ ಹೊರಬಂದ ನಂತರ ಸಾಕಷ್ಟು ಜನರು ನನ್ನನ್ನು ಭೇಟಿಯಾಗಲು ಇಷ್ಟ ಪಡುತ್ತಿದ್ದರು. ಜೊತೆಗೆ ನಾನೂ ಬೇರೆ ಊರುಗಳಿಗೆ ಹೋದಾಗ ಅಲ್ಲಿರುವ ‘ಗೇ’ ಜನರನ್ನು ಭೇಟಿಯಾಗಿ, ಅವರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ‘ಗೇ ಡೇಟಿಂಗ್ ಆಪ್ಗಳು’ ಈ ಭೇಟಿಗೆ ತುಂಬಾ ಸಹಾಯ ಮಾಡುತ್ತಿದ್ದವು. ಈ ಪುಸ್ತಕ ಬಿಡುಗಡೆಯಾದ ಹೊತ್ತಿನಲ್ಲಿಯೇ ದೇಶದಲ್ಲಿ ‘ಆರ್ಟಿಕಲ್ 377’ ಹೆಚ್ಚಾಗಿ ಚರ್ಚೆಗೆ ಬಂದಿತ್ತು.

ಸರ್ವೋತ್ತಮ ನ್ಯಾಯಲಯವು ಲೈಂಗಿಕ ಅಲ್ಪಸಂಖ್ಯಾತರ ಸಮಾಗಮವನ್ನು ಪಾತಕ ಎಂದು ಹೇಳಿ, ತನ್ನನ್ನು ಸಮರ್ಥಿಸಿಕೊಳ್ಳತೊಡಗಿತ್ತು. ಆದ್ದರಿಂದ ಇಡೀ ಲೈಂಗಿಕ ಅಲ್ಪಸಂಖ್ಯಾತರ ಗುಂಪಿನಲ್ಲಿ ಈ ವಿಷಯವೇ ಹೆಚ್ಚಾಗಿ ಚರ್ಚೆಗೆ ಬರುತ್ತಿತ್ತು. ಬೆಂಗಳೂರಿನಲ್ಲಂತೂ ನಮ್ಮ ಸಮುದಾಯದಲ್ಲಿ ಆಕ್ರೋಶ, ಹತಾಶೆ, ದುಃಖ, ನಿರಾಸೆ – ಎಲ್ಲವೂ ಮಡುವುಗಟ್ಟಿದ್ದವು. ಅದೇ ಹೊತ್ತಿನಲ್ಲಿ ನಾನೊಮ್ಮೆ ಹೊಸಪೇಟೆಗೆ ಹೋದೆ. ಅಲ್ಲಿ ಸಕ್ರಿಯವಾಗಿರುವ ಒಬ್ಬ ‘ಗೇ’ ಮನುಷ್ಯನನ್ನು ಕಾಫಿಗೆ ಆಹ್ವಾನಿಸಿದೆ. ಆತ ಸಂತೋಷದಿಂದಲೇ ಒಪ್ಪಿಕೊಂಡು ಬಂದ. ಅದೂ ಇದೂ ಮಾತನಾಡಿದ ಬಳಿಕ “ಆರ್ಟಿಕಲ್ 377 ಬಗ್ಗೆ ನಿನ್ನ ನಿಲುವೇನು?” ಎಂದು ಕೇಳಿದೆ. ಅದಕ್ಕೆ ಆತ “ಹಾಗಂದ್ರೆ ಏನು?” ಎಂದು ಪ್ರಾಮಾಣಿಕವಾಗಿ ಕೇಳಿದ.

ನಾವೆಲ್ಲಾ ಬೆಂಗಳೂರಿನಲ್ಲಿ ವೀರಾವೇಶದಿಂದ ಮಾತನಾಡುವ ವಿಷಯ ಇವನಿಗೆ ಗೊತ್ತೇ ಇಲ್ಲವೆನ್ನುವ ಸಂಗತಿ ನನಗೆ ಅತ್ಯಾಶ್ಚರ್ಯವನ್ನು ಉಂಟು ಮಾಡಿತ್ತು. ಆದರೆ ಅದನ್ನು ವ್ಯಕ್ತಪಡಿಸಿ, ಅವನನ್ನು ಅವಮಾನಿಸದೆ, ನಿಧಾನವಾಗಿ ಆ ವಿಷಯದ ಬಗ್ಗೆ ಸ್ಥೂಲವಾಗಿ ತಿಳಿಸಿಕೊಟ್ಟೆ. “ಒಂದು ವೇಳೆ ನೀನು ಮತ್ತು ನಿನ್ನ ಗೆಣೆಕಾರ ಸೆಕ್ಸ್ನಲ್ಲಿ ತೊಡಗಿಸಿಕೊಂಡಿರುವಾಗ ಪೋಲೀಸರ ಕೈಗೆ ಸಿಕ್ಕಿಬಿದ್ದರೆ, ಅವನು ನಿನ್ನನ್ನು ಅಪರಾಧಿ ಎಂದು ಪರಿಗಣಿಸಿ ಕಂಬಿ ಎಣಿಸುವಂತೆ ಮಾಡಬಹುದು” ಎಂದು ಹೇಳಿದೆ. ಅದಕ್ಕವನು ನಕ್ಕು “ಸಾರ್, ನಿಜ ಹೇಳ್ತೀನಿ. ಪೋಲಿಸ್ ಬಗ್ಗೆ ನನಗೆ ಅಂತಹ ಭಯ ಏನೂ ಇಲ್ಲ. ಒಂದು ವೇಳೆ ಸಿಕ್ಕಿ ಬಿದ್ದರೂ ಒಂದೈವತ್ತು ರೂಪಾಯಿ ಕೊಟ್ಟರೆ ಪಾಪ ಬಿಟ್ಟುಬಿಡ್ತಾರೆ. ಆದರೆ ಅಂತಹ ಹೊತ್ತಿನಲ್ಲಿ ನನ್ನ ಹೆಂಡತಿಯ ಕೈಗೆ ಸಿಕ್ಕಿಬಿದ್ದರೆ ಜೀವನ ಪೂರ್ತಿ ಬರ್ಬಾದ್ ಆಗಿಬಿಡುತ್ತೆ.

ಹಂಗೆ ಆಗದೇ ಇರೋದಕ್ಕೆ ಏನಾದ್ರೂ ಕಾನೂನು ಮಾಡಿಸೋಕೆ ಸಾಧ್ಯಾನಾ ಸಾರ್?” ಎಂದು ಕೇಳಿ ನನ್ನ ವಿಕೆಟ್ ತೆಗೆದುಕೊಂಡುಬಿಟ್ಟ. ನಾನು ಮುಂದೆ ಆರ್ಟಿಕಲ್ 377 ಬಗ್ಗೆ ಸೊಲ್ಲೆತ್ತದೆ, ಸುಮ್ಮನೆ ಅವನ ಮಾತುಗಳನ್ನು ಕೇಳುತ್ತಾ ಕುಳಿತುಕೊಂಡೆ. ‘ಮೋಹನಸ್ವಾಮಿ’ ಪುಸ್ತಕದಿಂದ ಯಾರಿಗೆ ಉಪಕಾರವಾಯ್ತೋ ಯಾರಿಗೆ ಅಪಕಾರವಾಯ್ತೋ ನನಗೆ ಗೊತ್ತಿಲ್ಲ. ಆದರೆ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಯನ್ನು ಅದು ತಂದುಬಿಟ್ಟಿತು. ಮೈಮೇಲೆ ಹೊತ್ತಿದ್ದ ಭಾರವನ್ನು ಇಳಿಸಿಬಿಟ್ಟು ನಿರಾಳವಾಗುವ ಪರಿಯನ್ನು ಪದಗಳಲ್ಲಿ ಹಿಡಿದು ವಿವರಿಸುವುದು ಕಷ್ಟ. ಅದರ ಬದಲು ಒಂದು ಉದಾಹರಣೆಯನ್ನು ನಿಮಗೆ ಹೇಳಿದರೆ ಅರ್ಥ ಮಾಡಿಕೊಳ್ಳುವಿರೆಂಬ ವಿಶ್ವಾಸ ನನ್ನದು. ನನ್ನ ಧ್ವನಿ ಹೆಣ್ಣಿನ ಧ್ವನಿಯನ್ನು ಹೋಲುತ್ತದೆ. ಚಿಕ್ಕಂದಿನಿಂದಲೂ ಇದು ಹೀಗೇ ಇದೆ.

ನಾನು ಎಷ್ಟೇ ಬದಲಾಯಿಸಲು ಪ್ರಯತ್ನ ಪಟ್ಟರೂ ಅದು ಬದಲಾಗಲಿಲ್ಲ. ನನ್ನ ರಕ್ತದ ಗುಂಪಿನಂತೆಯೇ ಅದೂ ನನ್ನೊಂದಿಗೆ ಸೇರಿಕೊಂಡು ಬಿಟ್ಟಿದೆ. ಸಾಯುವ ತನಕವೂ ಅದು ನನ್ನ ಜೊತೆಯಲ್ಲಿಯೇ ಇರುತ್ತದೆ. ಈ ಕಾರಣದಿಂದಾಗಿ ನಾನು ಬಹಳಷ್ಟು ಮುಜುಗರವನ್ನು ಅನುಭವಿಸುತ್ತಿದ್ದೆ. ನಾನೊಂದು ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಾಸಿಸುತ್ತಿದ್ದೇನೆ. ನನಗೆ ಯಾವುದಾದರೂ ಕೊರಿಯರ್ ಬಂದರೆ ಗೇಟ್ನಲ್ಲಿ ಸೆಕ್ಯೂರಿಟಿ ಆಫೀಸಿನಿಂದ ಕೊರಿಯರ್ ಹುಡುಗ ಫೋನ್ ಮಾಡುತ್ತಾನೆ. ಅವನು “ಹಲೋ” ಎಂದ ತಕ್ಷಣ ನಾನೂ “ಹಲೋ, ಹೇಳಪ್ಪಾ...” ಎನ್ನುತ್ತೇನೆ. ನನ್ನ ಹೆಣ್ಣಿನ ಧ್ವನಿಯನ್ನು ಆಲಿಸಿದ ಆ ಹುಡುಗರು ತಕ್ಷಣ “ಮೇಡಂ, ನಿಮಗೊಂದು ಕೊರಿಯರ್ ಬಂದಿದೆ. ತಂದು ಕೊಡಬಹುದಾ ಮೇಡಂ?” ಎಂದು ಕೇಳುತ್ತಿದ್ದರು. ನನ್ನನ್ನು “ಮೇಡಂ...” ಎಂದು ಅವರು ಕರೆದಿದ್ದಕ್ಕೆ ತುಂಬಾ ಸಿಟ್ಟು ಬರುತ್ತಿತ್ತು.

ಅದು ಎಷ್ಟು ಕಿರಿಕಿರಿ ಮಾಡುತ್ತಿತ್ತೆಂದರೆ, ಇಡೀ ದಿನ ನಾನು ಅಸಹನೆಯಿಂದ ಒದ್ದಾಡುತ್ತಿದ್ದೆ. ನನ್ನೆಲ್ಲಾ ಕೆಲಸಗಳನ್ನು ಮಾಡುವುದು ಬಿಟ್ಟು ಖಿನ್ನತೆಗೆ ಜಾರುತ್ತಿದ್ದೆ. ಕೆಲವೊಮ್ಮೆ ಆ ಹುಡುಗರ ಮೇಲೆ “ಮೇಡಂ ಅಲ್ಲ... ಇದು ಸಾರ್ ಮಾತಾಡ್ತಿರೋದು... ಅಷ್ಟೂ ಗೊತ್ತಾಗಲ್ವಾ?” ಎಂದು ರೇಗುತ್ತಿದ್ದೆ. ಅವರು “ಸಾರಿ ಮೇಡಂ... ಸಾರಿ ಸಾರ್...” ಅಂತೆಲ್ಲಾ ಗಾಬರಿಯಿಂದ ಬಡಬಡಿಸುತ್ತಿದ್ದರು. ಈಗ ಆ ಸಮಸ್ಯೆಯಿಂದ ಪಾರಾಗಿದ್ದೇನೆ. ಈ ಕೊರಿಯರ್ ತರುವವರು ಸಾಮಾನ್ಯವಾಗಿ ಹದಿನೆಂಟು ಇಪ್ಪತ್ತು ವರ್ಷದ ಸುಂದರ ಹುಡುಗರು. ಅವರು “ಹಲೋ ಮೇಡಂ...” ಅಂದ ತಕ್ಷಣ ನನಗೆ ಸಿಟ್ಟು ಬರುವದಿಲ್ಲ. “ಯೆಸ್ ಯೆಸ್... ಮೇಡಂ ನಾನು ನಿನಗಾಗಿಯೇ ಮನೇಲಿ ಕಾಯ್ತಾ ಇದ್ದೀನಿ... ದಯವಿಟ್ಟು ಬಾ” ಎಂದು ಹೇಳಿ ನಗುತ್ತೇನೆ.

ಆ ಹುಡುಗ ಮನೆಗೆ ಬಂದು ಬೆಲ್ ಮಾಡಿದ ತಕ್ಷಣ ನಾನೇ ಬಾಗಿಲನ್ನು ತೆರೆದು “ಕೊರಿಯರ್ ಬಂದಿದೆಯೇನಪ್ಪಾ?” ಎಂದು ಕೇಳಿದ ತಕ್ಷಣ ಅವನಿಗೆ ನನ್ನ ಧ್ವನಿ ಗುರುತು ಸಿಕ್ಕು ನಡೆದ ಪ್ರಮಾದ ಗೊತ್ತಾಗುತ್ತದೆ. “ಸಾರಿ ಸಾರ್... ಐ ಆಂ ವೆರಿ ಸಾರಿ... ನಾನು ಮೇಡಂ ಅಂತ ಕನ್ಫ್ಯೂಜ್ ಮಾಡಿಕೊಂಡು ಬಿಟ್ಟೆ...” ಎಂದು ಬಡಬಡಿಸುತ್ತಾನೆ. ನನಗೆ ಒಳಗೊಳಗೇ ನಗು. ಆ ಸುಂದರ ತರುಣನ ಒದ್ದಾಟ, ಬಡಬಡಿಕೆ ಎಲ್ಲವನ್ನೂ ನೆನಸಿಕೊಂಡು ಇಡೀ ದಿನ ಸಂತೋಷದ ಭಾವದಲ್ಲಿ ತೇಲುತ್ತೇನೆ. ಒಂದು ಪುಸ್ತಕ ಒಬ್ಬ ಲೇಖಕನಿಗೆ ಇದಕ್ಕಿಂತಲೂ ದೊಡ್ಡ ಬಹುಮಾನ ಕೊಡಲು ಸಾಧ್ಯವಿದೆಯೆ? ಇವೆಲ್ಲಾ ಸಂಗತಿಗಳು ಕೇವಲ ‘ನಗೆಯ ಹಾಯಿದೋಣಿ’ ಮಾತ್ರವಾಗಿವೆ. ಇದನ್ನೊಂದೇ ಹೇಳಿಬಿಟ್ಟು, ‘ಅಳುವ ಕಡಲ’ ಬಗ್ಗೆ ಬರೆಯದೇ ಹೋದರೆ ತಪ್ಪಾಗುತ್ತದೆ.

ಆದರೆ ‘ಅಳುವ ಕಡಲ’ ಆಳ, ಅಗಲ, ಆರ್ಭಟಗಳ ಬಗ್ಗೆ ಹೇಳಲು ನನಗೆ ಶಕ್ಯವಿಲ್ಲ. ಅದು ನನ್ನ ಸಾಮರ್ಥ್ಯವನ್ನು ಮೀರಿದ್ದು. ಆದರೆ ಆ ಕಡಲಿನ ನೀರಿನ ಒಂದು ಹನಿಯನ್ನು ಮಾತ್ರ ನಿಮಗೆ ಸಿಂಪಡಿಸಿ ವಿರಮಿಸುತ್ತೇನೆ. ಅದು ನಿಮಗೆ ಕಡಲಿನ ಅಗಾಧತೆಯನ್ನು ಪರಿಚಯಿಸುತ್ತದೆ ಎಂಬುದು ನನ್ನ ನಂಬಿಕೆ. ‘ಮೋಹನಸ್ವಾಮಿ’ ಪುಸ್ತಕ ಬಿಡುಗಡೆಯಾದ ಮೇಲೆ ಹಲವಾರು ತಾಯಂದಿರು ನನ್ನನ್ನು ಹುಡುಕಿಕೊಂಡು ಬಂದಿದ್ದರು. ಹೆಚ್ಚು ಕಡಿಮೆ ತಮ್ಮ ಮಗ ‘ಗೇ’ ಆಗಿರಬಹುದೇ ಅಥವಾ ಆಗಿದ್ದಾನೆ ಎನ್ನುವುದು ಅವರ ಸಂಕಟವಾಗಿರುತ್ತಿತ್ತು. ಸಾಧ್ಯವಾದಷ್ಟು ಸಹಾನುಭೂತಿಯಿಂದ ಅವರ ಮಾತುಗಳನ್ನು ಕೇಳಿಸಿಕೊಂಡು, ನನಗೆ ತಿಳಿದಷ್ಟು ಮಾಹಿತಿಯನ್ನು ಅವರಿಗೆ ನೀಡಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದೆ.

ಅವರಲ್ಲಿ ಒಬ್ಬ ತಾಯಿಯ ಮಾತುಗಳು ಈಗಲೂ ನನ್ನನ್ನು ಕಾಡುತ್ತಿವೆ. ಆಕೆಯ ಅತ್ಯಂತ ಬುದ್ಧಿವಂತ ಮಗ ತಾನು ‘ಗೇ’ ಎನ್ನುವ ಸಂಗತಿಯನ್ನು ಅಮ್ಮನಿಗೆ ತಿಳಿಸಿಬಿಟ್ಟಿದ್ದಾನೆ. ಈಗ ಅದನ್ನಾಕೆ ತನ್ನ ಗಂಡನಿಗೆ ತಿಳಿಸುವ ಜವಾಬ್ದಾರಿಯಲ್ಲಿ ಕಂಗೆಡುತ್ತಿದ್ದಾಳೆ. ಕ್ಷತ್ರಿಯ ವಂಶದ ಆ ಪತಿಗೆ ತಮ್ಮ ಕುಟುಂಬದ ಪುರುಷತ್ವದ ಬಗ್ಗೆ ಬಹಳ ಹೆಮ್ಮೆಯಿದೆ. ರಸ್ತೆಯಲ್ಲಿ ತಮ್ಮ ಕಾರಿಗೆ ಯಾರಾದರೂ ಅವರ ಗಾಡಿಯನ್ನು ತಾಕಿಸಿಬಿಟ್ಟರೆ, ಕೆಳಕ್ಕೆ ಇಳಿದು ಹೋಗಿ, ಅವರ ಕೆನ್ನೆಗೆ ಎರಡು ಬಾರಿಸಿ ಬುದ್ಧಿ ಹೇಳಿ, ಹಣವನ್ನು ವಸೂಲಿ ಮಾಡುವ ಗಂಡಸ್ತನ ಆತನಿಗಿದೆ. ತನ್ನ ವಂಶದ ಹಿರಿಯರು ಎಷ್ಟು ಸೂಳೆಯರನ್ನು ಮಡಗಿದ್ದರೆಂಬುದನ್ನು ಬಹು ಹೆಮ್ಮೆಯಿಂದ ಗೆಳೆಯರ ಮುಂದೆ ಹೇಳಿಕೊಳ್ಳುತ್ತಾನೆ.

“ನನ್ನ ಮುಂದೆ ವಿಷಯ ಹೇಳಿ ನನ್ನ ಮಗ ನಿರಾಳ ಆಗಿಬಿಟ್ಟ ಸಾರ್. ಈಗ ನಾನು ಹಗಲು–ರಾತ್ರಿ ನಿದ್ದೆ ಇಲ್ಲದೆ ಒದ್ದಾಡ್ತಾ ಇದೀನಿ. ಅವನು ಗೇ ಅಂತ ನಂಗೇನೂ ಅಷ್ಟು ಬೇಜಾರಿಲ್ಲ ಸಾರ್. ಆದರೆ ಅವರಪ್ಪಗೆ ಈ ವಿಷಯ ಹೇಳಿದ್ರೆ, ನಾನು ಅವನನ್ನ ಸರಿಯಾಗಿ ಬೆಳೆಸಲಿಲ್ಲ ಅಂತ ಹೇಳಿ ತಪ್ಪನ್ನು ನನ್ನ ಮೇಲೆ ಹೊರಿಸಿಬಿಡ್ತಾರೆ. ನಂಗೆ ಹೊಡೆಯೋದು ಬಡಿಯೋದು ಶುರು ಮಾಡಿಬಿಡ್ತಾರೆ. ಅದನ್ನು ನೆನಸಿಕೊಂಡು ಭಯ ಪಡ್ತಾ ಇದೀನಿ. ಬೆಳೆಸೋದರಲ್ಲಿ ನಾನೇನು ತಪ್ಪು ಮಾಡಿದೆ ಅಂತ ನಂಗೆ ಈಗಲೂ ಗೊತ್ತಾಗ್ತಾ ಇಲ್ಲ ಸಾರ್”. ಈ ಮಾತನ್ನು ಹೇಳುವಾಗ ಆಕೆ ಕಣ್ಣೀರು ಹಾಕಿದ್ದಳು. ಆಕೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನನ್ನ ಕಣ್ಣುಗಳೂ ಮಂಜಾಗಿದ್ದವು. ಕಡಲಿನ ಆಳ–ಅಗಲಗಳು ನಾವು ಊಹಿಸಿದ್ದಕ್ಕಿಂತಲೂ ಬಹುದೊಡ್ಡದಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.