ಗೆಳೆಯ ಮೋಹಿತ್ ಮತ್ತು ನಾನು, ಕ್ರೊಯೇಷಿಯಾದ ‘ಡುಬ್ರಾವ್ನಿಕ್’ ಎಂಬ ಊರಿಗೆಹೋಗಲು ತಿಂಗಳ ಮುಂಚೆಯೇ ನಾಲ್ಕು ದಿನ ರಜೆ ತೆಗೆದುಕೊಂಡಾಗಿತ್ತು. ಕ್ರೊಯೇಷಿಯಾ ದೇಶದ ತುಂಬೆಲ್ಲ ದ್ವೀಪದಂತೆ ಬೆಳೆದು ನಿಂತಿರುವ ನಗರಗಳೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ವಿಶ್ವಪ್ರಸಿದ್ಧವಾದ ‘ಗೇಮ್ ಆಫ್ ಥ್ರೋನ್ಸ್’ ಎಂಬ ಇಂಗ್ಲಿಷ್ ಧಾರಾವಾಹಿಯ ಐತಿಹಾಸಿಕ ದೃಶ್ಯಗಳು ಚಿತ್ರೀಕರಣಗೊಂಡ ನಂತರವೇ, ಡುಬ್ರಾವ್ನಿಕ್ ಅತಿ ದೊಡ್ಡ ಪ್ರವಾಸಿ ತಾಣವಾಗಿ ಬೆಳೆದದ್ದು. ಏಳು ಸಾಮ್ರಾಜ್ಯಗಳು ನಡೆಸುವ ಈ ಐತಿಹಾಸಿಕ ಯುದ್ಧಭೂಮಿಯ ಕಥಾನಕಕ್ಕೆ, ಈ ನಗರದ ಪ್ರತಿ ಜಾಗವೂ ವೇದಿಕೆಯಾಗಿ ನಿಂತಿದೆ. ಆ ಧಾರಾವಾಹಿಯ ಅಭಿಮಾನಿಗಳಾದ ನಮಗಂತೂ, ಉತ್ಸಾಹ ಸ್ವಲ್ಪ ಹೆಚ್ಚೇ ಇತ್ತೇನೋ.

ಹಂಗೇರಿಯಿಂದ ಇಲ್ಲಿಗೆ ಒಂದೇ ವೈಮಾನಿಕ ಹಾದಿ. ಟರ್ಕಿಯ ರಾಜಧಾನಿ ಇಸ್ತಾಂಬುಲ್ ಮುಖಾಂತರ ಸಾಗಬೇಕು. ಬಸ್ಸಿನ ವ್ಯವಸ್ಥೆ ಕೂಡ ಇದೆ. ಆದರೆ ಪ್ರಯಾಣದ ಸಮಯ ಹೆಚ್ಚು. ಇಸ್ತಾಂಬುಲ್ ಮುಖಾಂತರ ಹೊರಟ ವಿಮಾನದ ಚಾಲಕನಿಗೆ ಈ ದ್ವೀಪದಲ್ಲಿ ವಿಮಾನ ಚಲಾಯಿಸುವುದೇ ಮೋಜು ಎಂದು ಕಾಣುತ್ತದೆ. ಒಮ್ಮೆಗೇ ವೇಗವಾಗಿ ಕಡಲ ಸಮೀಪಕ್ಕೆ ಸಾಗಿ, ಮತ್ತೆ ಧುತ್ತೆಂದು ಮುಗಿಲಿನೆತ್ತರಕ್ಕೆ ಹಾರಿ, ಹಕ್ಕಿಯಂತೆ ಸಾಹಸ ಮಾಡುತ್ತಿದ್ದ. ಆದರೆ ಒಳಗೆ ಕುಳಿತವರ ಜೀವ ಝಲ್ ಎನ್ನುತ್ತಿತ್ತು. ನಿಲ್ಲಿಸುವಾಗಲೂ ಜೋರಾಗಿ ಭೂಮಿಗೆ ಅಪ್ಪಳಿಸಿ, ತನ್ನ ಪ್ರತಿಭೆ ತೋರಿದ್ದ.

ಏರ್‌ಪೋರ್ಟಿನಿಂದ ನಗರಕ್ಕೆ ಹೊರಟಾಗ ಮುಸ್ಸಂಜೆಯಾಗಿತ್ತು. ಆರಂಭದಿಂದಲೂ ಎತ್ತರವನ್ನೇ ಏರುತ್ತಿದ್ದ ಬಸ್ಸು, ಪರ್ವತಾರೋಹಣದ ಅನುಭವ ನೀಡುತ್ತಿತ್ತು. ಮೂರು ರಾತ್ರಿಗೆಂದು ಬುಕ್ ಮಾಡಿದ್ದ, ಪುಟ್ಟ ವಠಾರಕ್ಕೆ ಬಂದು ತಲುಪಿದ್ದೆವು. ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಎಂಬ ಮಾತಿಗೆ ಉಪಮೆ ಎಂಬಂತೆ ಕಟ್ಟಿದ್ದ ಆ ಪುಟ್ಟ ಮನೆಯಲ್ಲಿ ಇದ್ದದ್ದು ಅಜ್ಜ ಅಜ್ಜಿ ಮಾತ್ರ. ಇದ್ದ ಮೂವರು ಮಕ್ಕಳಲ್ಲಿ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಇನ್ನೊಬ್ಬ ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದ. ಬರುತ್ತಿದ್ದ ಚೂರು ಪಾರು ಇಂಗ್ಲಿಷಿನಲ್ಲಿಯೇ ಹೆಚ್ಚು ಹೆಚ್ಚು ಮಾತನಾಡಲು ಹವಣಿಸುತ್ತಿದ್ದ ತಾತನದ್ದು ಒಂಟಿತನದ ಬೇಗುದಿಯೋ, ಜೀವನೋತ್ಸಾಹದ ಪರಮಾವಧಿಯೋ ತಿಳಿಯಲೇ ಇಲ್ಲ .

ನಗರ ಸುತ್ತಲು ಆರಂಭಿಸುವಾಗ ಇರುಳು ಕವಿದಿತ್ತು. ಅಜ್ಜನ ಮನೆಯಿಂದ ‘ಓಲ್ಡ್ ಸಿಟಿ’ಗೆ ಎರಡು ಮೈಲು. ಕಡಲ ನೀರಿನಲ್ಲಿ ಹುಣ್ಣಿಮೆಯ ಚಂದಿರನ ಪ್ರತಿಬಿಂಬ ಕಾಣುತ್ತಿತ್ತು. ಸಾಗರದಲ್ಲಿ ಈಜಿ ದಣಿದು ಬಂದು ಕಿನಾರೆಯಲ್ಲಿ ನಿಂತ ದೋಣಿಗಳು, ಅಲ್ಲಲ್ಲಿ ಕಾಣುವ ಪಾರ್ಟಿ ಹಾಲುಗಳು, ಇಂಪಾಗಿ ಕೇಳುತ್ತಿದ್ದ ಸಂಜೆ ಸಂಗೀತ ಮೇಳಗಳು, ತಂಪಾಗಿ ತೂಗುತ್ತಿದ್ದ ತೆಂಗಿನ ಮರಗಳನ್ನೆಲ್ಲ ದಾಟಿ ಬಂದರೆ ನಗರದ ಮಹಾದ್ವಾರ ಕಾಣುತ್ತದೆ. ಮಹಾದ್ವಾರದಿಂದ ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ, ಬೆಳಕು ಬೀರುತ್ತಿದ್ದ ಬೀದಿಗಳು ಕಂಡವು. ಬಿಳಿ ಸುಣ್ಣದ ಕಲ್ಲಿನಲ್ಲಿ ಕಟ್ಟಿದ ರಸ್ತೆಗಳು, ಬೀದಿ ದೀಪಗಳ ಅನಂತ ಬಿಂಬಗಳಾಗಿ ಪ್ರತಿಫಲಿಸುತ್ತಿದ್ದವು.

ಸ್ಟ್ರಾಡನ್ ಸ್ಟ್ರೀಟ್

ಹಗಲಿನಲ್ಲಿ ಪುರಾತನ ನಗರಿಯ ಮೂಲಹಾದಿಯಾಗಿ, ಜನಪ್ರವಾಹದಿಂದ ತುಂಬಿಕೊಳ್ಳುವ ಸ್ಟ್ರಾಡನ್ ಬೀದಿ ಇರುಳು ಕವಿಯುತ್ತಿದ್ದಂತೆ ಪ್ರೇಮಿಗಳ ತಾಣವಾಗಿ ಬದಲಾಗುತ್ತದೆ. ಸರಿಸುಮಾರು 500 ವರ್ಷಗಳ ಮುಂಚೆ ಕಟ್ಟಿದ ಈ ಬಿಂಬಮಯ ಬೀದಿ, 300 ಮೀಟರ್ ದೂರ ವಿಸ್ತರಿಸಿ ನಿಂತಿದೆ. 1667ರ ಮಹಾ ಭೂಕಂಪನಕ್ಕೂ ನಲುಗದ ಸ್ಟ್ರಾಡನ್, ಯೂರೋಪಿನ ಅತಿ ಸುಂದರವಾದ ಬೀದಿಗಳಲ್ಲಿ ಉನ್ನತ ಸ್ಥಾನ ಪಡೆದಿದೆ. ರಸ್ತೆ ಬದಿಯ ಹೋಟೆಲ್ಲಿನ ಸ್ಯಾಂಡ್‌ವಿಚ್ ಮತ್ತು ಲೆಮನೆಡ್ ಸವಿಯುತ್ತ, ದೂರದಲ್ಲೆಲ್ಲೋ ನುಡಿಸುತ್ತಿದ್ದ ವಯಲಿನ್‌ನ ನಾದಕ್ಕೆ ಕಿವಿಯೊಡ್ಡಿ, ಮೋಡಗಳ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ಚಂದಿರನನ್ನು ನೋಡುತ್ತಾ ಕುಳಿತರೆ ಸಾಕು - ಆ ರಾತ್ರಿ ನೆನಪಿನ ದೋಣಿಯಾಗಿ, ಮನದ ಕಡಲಲ್ಲಿ ಶಾಶ್ವತವಾಗಿ ನೆಲೆಯೂರಿ ನಿಂತಂತೆಯೇ.

ಇರುಳು ಕಳೆದು ಮರುದಿನ ಮುಂಜಾನೆಗೇ ಮಳೆಯ ದರ್ಶನವಾಗಿತ್ತು. ಮಳೆ ನಿಂತ ಮೇಲೆ, ಮತ್ತೆ ಪಯಣ ಆರಂಭ. ಇಲ್ಲಿ ಕಡಲ ಬಣ್ಣ ಕಡುನೀಲಿ. ಎಲ್ಲ ದ್ವೀಪಗಳಂತೆ ಇಲ್ಲಿಯೂ ದೋಣಿಗಳದ್ದೇ ದರ್ಬಾರು. ಮುಖ್ಯರಸ್ತೆಯ ಬಾಡಿಗೆಲ್ಲ ಪುಟ್ಟ ಪುಟ್ಟ ಕಡಿದಾದ ಓಣಿಗಳು. ಒಂದೆಡೆ ಹತ್ತಿದರೆ ಮತ್ತೊಂದೆಡೆ ಇಳಿಯಬಹುದು. ಹೆಜ್ಜೆಹೆಜ್ಜೆಗೂ ಹಸಿರ ಹಾಸು. ನಗರದಲ್ಲಿದ್ದರೂ ಹಳ್ಳಿಯಲ್ಲಿ ಓಡಾಡಿದ ಅನುಭವವಾಗುತ್ತಿತ್ತು. ಸ್ವಲ್ಪ ದೂರ ಸಾಗಿದರೆ ದೂರದ ಕಡಲಿಗೆ ಅಂಟಿಕೊಂಡಂತಹ ಒಂದು ಮನಮೋಹಕ ಕಟ್ಟಡ. ದಡದಿ ನಿಂತ ಹಡಗಿನಂತೆ ಕಾಣುತ್ತಿದ್ದರೂ ಅದು ಹೋಟೆಲ್ ಎಂದು ತಿಳಿದಾಗ ನಮಗೆ ಅಚ್ಚರಿಯೋ ಅಚ್ಚರಿ.

ಮಹಾಗೋಡೆಗಳು

ಒಟ್ಟೋಮನ್ ಸಾಮ್ರಾಜ್ಯದ ಆಕ್ರಮಣವನ್ನು ತಡೆಯಲು ಕಟ್ಟಿದ ನಗರದ ಮಹಾಗೋಡೆಗಳು ಕಡಲ ಅಲೆಗಳ ಹೊಡೆತಕ್ಕೂ, ಬಂದೆರಗುವ ಭೂಕಂಪನಕ್ಕೂ ಸಡ್ಡು ಹೊಡೆದು ನಿಂತಿವೆ. ಏಳನೇ ಶತಮಾನದಲ್ಲಿಯೇ ನಿರ್ಮಾಣಗೊಂಡ ಈ ಗೋಡೆಗಳು 14ನೇ ಶತಮಾನದಲ್ಲಿ ಪುನರ್‌ವಿನ್ಯಾಸಗೊಂಡಿವೆ. ಮಹಾದ್ವಾರಕ್ಕೆಬರುವ ಮುನ್ನವೇ ಬಲಬದಿಗೆ ಸಿಗುವ ಮೆಟ್ಟಿಲುಗಳನ್ನು ಹತ್ತಿ ಸಾಗಬೇಕು. ‘ಬೊಕಾರ್ ಫೋರ್ಟ್ರೆಸ್’ ಎಂಬ ಎತ್ತರದ ಜಾಗ ತಲುಪಿದ ನಂತರ ಒಮ್ಮೆ ಸುತ್ತ ಕಣ್ಣು ಹಾಯಿಸಲೇಬೇಕು. ಗಣತಿಗೆ ಸಿಗದಷ್ಟು ವಿಸ್ತರಿಸಿದ ಕಡಲು, ಅದಕ್ಕಂಟಿಕೊಂಡ ಮಹಾಗೋಡೆಗಳು, ಕೋಟೆ ಕೊತ್ತಲಗಳು, ಹಸಿರು ಗುಡ್ಡಗಳ ಮೇಲಿನ ಪುಟ್ಟಪುಟ್ಟ ಹೆಂಚಿನ ಮನೆಗಳು... ಯಾವುದೋ ಕಿನ್ನರ ಲೋಕಕ್ಕೆ ಕಾಲಿಟ್ಟ ಅನುಭವ. ರಕ್ಷಣೆಗೆಂದು ಬಳಸಿದ ಆಯುಧಗಳ ಸಂಗ್ರಹ ನೋಡಿಯೇ ತಿಳಿಯಬಹುದು, ನಗರದ ಗಟ್ಟಿತನಕ್ಕೆ ಸೆಡ್ಡು ಹೊಡೆದ ಧೀರರಿಲ್ಲ ಎಂಬುದನ್ನು.

ಫೈಲ್ ಗೇಟ್ ಎಂದು ಕರೆಯಲ್ಪಡುವ ಇಲ್ಲಿಯ ಮಹಾದ್ವಾರವನ್ನು ‘ಡಬಲ್ ಡಿಫೆನ್ಸ್’ ತಂತ್ರಜ್ಞಾನದಿಂದ ಮಾಡಲಾಗಿದೆ. ಅತಿಥಿಗಳ ಪ್ರವೇಶಕ್ಕಷ್ಟೇ ಅಲ್ಲದೆ, ಶತ್ರುಗಳನ್ನು ತಡೆಹಿಡಿಯುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಮಹಾದ್ವಾರದಿಂದ ಒಳಹೊಕ್ಕಾಗ ನೋಟವೇ ಬದಲಾಗಿತ್ತು. ಸ್ಟ್ರಾಡನ್ ಬೀದಿಯ ಇಕ್ಕೆಲದಲ್ಲಿ ಪ್ರವಾಸಿಗರ ಗೊಂದಲ, ಖರೀದಿ, ಕೂಗಾಟ, ಛಾಯಾಗ್ರಹಣ ಎಲ್ಲವೂ ಮೋಜಿನಿಂದ ಸಾಗಿದ್ದವು. ಮೂಲೆಯೊಂದರಲ್ಲಿ ಮಾಜಿ ಚೆಸ್ ಚಾಂಪಿಯನ್ ಒಬ್ಬ ಮಕ್ಕಳೊಡನೆ ಆಡುತ್ತ ಕುಳಿತಿದ್ದ. ಇನ್ನೊಂದೆಡೆ ಕಿನ್ನರಿಯೊಬ್ಬಳು ಹಕ್ಕಿಯ ಗೂಡನ್ನು ನೋಡುತ್ತಾ ನಿಂತಿದ್ದಳು. ಮತ್ತೆಲ್ಲೋ ಮಗುವೊಂದು ಮಾತನಾಡುವ ಗಿಳಿಗೆ ಕಿವಿಯೊಡ್ಡಿ ನಗುತ್ತಿತ್ತು. ಸಲಾಕೆಯೊಂದನ್ನು ಹಿಡಿದು ಐತಿಹಾಸಿಕ ನಾಣ್ಯಗಳನ್ನು ತಯಾರಿಸುವ ಕುಶಲಕರ್ಮಿಗಳು ದಾರಿಯುದ್ದಕ್ಕೂ ಕಾಣಸಿಗುತ್ತಾರೆ. ಗೇಮ್ ಆಫ್ ಥ್ರೋನ್ಸ್‌ನಾಣ್ಯಗಳು, ಸಾಮ್ರಾಜ್ಯದ ಕೀ ಚೈನ್, ಶೂಟಿಂಗ್‌ಗೆ ಬಳಸಿದ ವಸ್ತುಗಳು, ದುಬಾರಿ ಬೆಲೆಗೆ ಮಾರಾಟವಾಗುತ್ತವೆ.

ಸ್ಟ್ರಾಡನ್ ಇಕ್ಕೆಲದಲ್ಲಿ ಪುಟ್ಟ ಪುಟ್ಟ ಓಣಿಗಳಿವೆ. ಪ್ರತಿ ಓಣಿಯಲ್ಲೂ ಕಲ್ಲಿನ ಕೆಂಪು ಕೆಂಪು ಮನೆಗಳಿವೆ. ಇವೇ ಕಡಿದಾದ ಓಣಿಗಳು ಹಿಂದಿರುವ ಗುಡ್ಡವನ್ನು ಸೇರುತ್ತವೆ. ಗುಡ್ಡದ ಮೇಲೆ ಮತ್ತೊಂದಷ್ಟು ಮಂದಿ. ಹೀಗೆ ಮಜಲುಗಳಲ್ಲಿ ವಿಭಜಿತಗೊಂಡಿರುವ ಬದುಕಲ್ಲಿ, ಉದ್ಯಾನವನಗಳಿಗೆ ಎಲ್ಲಿಲ್ಲದ ಪ್ರಾಮುಖ್ಯವಿದೆ. ಎಲ್ಲ ಮನೆಗಳ ಸುತ್ತಲೂ ಹಬ್ಬಿದ ಬಳ್ಳಿಗಳು, ಅರಳಿ ನಿಂತ ಹೂದೋಟ. ಒಂದು ಪಕ್ಕದ ಓಣಿಯ ಪುಟ್ಟ ಅಂಗಡಿಯಲ್ಲಿ ಗೇಮ್ ಆಫ್ ಥ್ರೋನ್ಸ್‌ನ ಕಬ್ಬಿಣದ ಸಿಂಹಾಸನವಿದೆ. ಅಂಗಡಿಯಲ್ಲಿ ಏನಾದರೂ ಕೊಂಡರೆ ಮಾತ್ರ ಕುಳಿತುಕೊಳ್ಳುವ ಅವಕಾಶವಿರುತ್ತದೆ. ಗೇಮ್ ಆಫ್ ಥ್ರೋನ್ಸ್ ಚಿತ್ರೀಕರಣಗೊಂಡ ಜಾಗಗಳನ್ನು ಗುರುತಿಸಿ, ಅದರ ಅಭಿಮಾನಿಗಳಿಗೆಂದೇ ವಿಶೇಷ ಗೈಡ್ ವ್ಯವಸ್ಥೆಯೂ ಇದೆ.

ಕಡಲ ಅಧಿಪತ್ಯ

ಸಾಮ್ರಾಜ್ಯ ಎಷ್ಟೇ ಗಟ್ಟಿಯಾಗಿದ್ದರೂ, ಇಲ್ಲಿ ಕಡಲಿನದೇ ಅಧಿಪತ್ಯ. ಸ್ಟ್ರಾಡನ್ ಬೀದಿಯನ್ನು ದಾಟಿ ಎರಡನೇ ದ್ವಾರದಿಂದ ನುಗ್ಗಿದರೆ, ಅಲ್ಲಿ ಕಡಲ ಲೋಕವೊಂದು ನಮ್ಮನ್ನು ಬರಮಾಡಿಕೊಳ್ಳುತ್ತದೆ. ಕಡಲ ಕಿನಾರೆಯಲ್ಲಿ ದೇಶದ ಇತಿಹಾಸ ಕಟ್ಟುವಲ್ಲಿ ಭಾಗಿಯಾದ ನೂರೆಂಟು ಸುಂದರ ದೋಣಿಗಳು ಕಾಣಸಿಗುತ್ತವೆ. ಅಂತೆಯೇ ಸಾಹಸಿಗರ ನೆನಪಿಗೆಂದು ಕಟ್ಟಿದ ಮೂರ್ತಿಗಳು. ಹೀಗೆಯೇ ಮುಂದೆ ಸಾಗಿದರೆ ನಶಿಸಿಹೋದ ರಾಜಮನೆತನಗಳ ಕಥೆ ಪ್ರತಿ ಕಲ್ಲಿನಲ್ಲೂ ಬಿಂಬಿತವಾಗುತ್ತದೆ. ದೂರದಲ್ಲಿ ಮತ್ತೊಂದು ದ್ವೀಪವಿದೆ. ಅಲ್ಲೊಂದು ಸುಂದರ ಉದ್ಯಾನವಿದೆ. ಕೇಬಲ್ ಕಾರ್ ಮುಖಾಂತರ ಉದ್ಯಾನಕ್ಕೆ ಸಾಗಿ ಬರುವ ವ್ಯವಸ್ಥೆಯೂ ಇದೆ. ಮಹಾಗೋಡೆಗಳಿಗೆ ಬಂದು ಅಪ್ಪಳಿಸುವ ನೀರಿಗೂ, ದೂರದಲ್ಲಿ ಸಾಹಸ ನಡೆಸುವ ಕಡಲ ಒಲವಿನ ಜೋಡಿಗೂ ಹೇಳತೀರದ ಸೆಣಸಾಟ.

ಕೋಟೆ ಕೊತ್ತಲಗಳಲ್ಲಿ ಬದುಕು

ಇದು ಕೋಟೆಗಳಿಂದ ತುಂಬಿದ ಪುರಾತನ ನಗರಿ. ಪ್ರತಿ ದಿಕ್ಕಿನ ಆಕ್ರಮಣಕ್ಕೂ ಒಂದು ಕೋಟೆ ಕಟ್ಟಲಾಗಿದೆ. ಮಿನ್ಸೇಟಾ ಕೋಟೆ ಭೂ-ಯುದ್ಧಗಳಿಂದ ರಕ್ಷಣೆ ನೀಡಿದರೆ, ಲಾರೆನ್ಸ್ ಮತ್ತು ಬೋಕರ್ ಕೋಟೆಗಳು ಕಡಲ ಆಕ್ರಮಣಗಳಿಗೆ ಸೆಡ್ಡು ಹೊಡೆದು ನಿಂತಿವೆ. ಮತ್ತಷ್ಟು ರಕ್ಷಣೆಗೆ ರವೆಲಿನ್ ಮತ್ತು ಸೆಂಟ್ ಜಾನ್ ಕೋಟೆಗಳನ್ನೂ ಕಟ್ಟಲಾಗಿದೆ. ಮಹಾಗೋಡೆಗಳು, ಕೋಟೆ ಕೊತ್ತಲಗಳು ಎಲ್ಲವೂ ಕಲ್ಲಿನಿಂದ ನಿರ್ಮಾಣಗೊಂಡಿರುವುದರಿಂದ, ನಿರ್ಮಾಣದ ವೇಳೆ ಕಲ್ಲಿನ ಕೊರತೆಯಾಗಿತ್ತಂತೆ. ಪ್ರವಾಸಿಗರೆಲ್ಲರೂ ಒಂದೊಂದು ಕಲ್ಲನ್ನು ತರಲೇಬೇಕೆಂದು ರಾಜನ ಅಪ್ಪಣೆಯನ್ನೂ ಹೊರಡಿಸಲಾಗಿತ್ತಂತೆ. ಎತ್ತರೆತ್ತರಕೆ ನಿಂತ ಈ ಕೋಟೆಗಳ ಕಾಲುದಾರಿಗಳನ್ನು ಪ್ರವಾಸಿಗರ ವಿಹಾರ ತಾಣವಾಗಿ ಪರಿವರ್ತಿಸಲಾಗಿದೆ.

ಪ್ರತಿ ಕೋಟೆಯೂ ಮತ್ತೊಂದು ಕೋಟೆಗೆ ದಾರಿಯಾಗುತ್ತದೆ ಹಾಗೂ ಪ್ರತಿ ಕೋಟೆಯಿಂದ ಮಹಾಗೋಡೆಯ ದೈತ್ಯ ಆಕಾರ ಕಣ್ಣಿಗೆ ಕಾಣುತ್ತದೆ. ಕೋಟೆಗಳ ಎತ್ತರದ ಬಂಡೆಗಲ್ಲುಗಳ ಮೇಲಿಂದ ನೀರಿಗೆ ಧುಮುಕುವ ಸಾಹಸಿ ಈಜುಗಾರರನ್ನು ನೋಡಲು ಜನಸಾಗರವೇ ಸೇರುತ್ತದೆ. ಮುಂದೆ ಸಾಗಿದಂತೆಲ್ಲ ಪುರಾತನ ನಗರಿ ಅಗೋಚರವಾಗುತ್ತ, ಆಧುನಿಕ ನಗರವೊಂದು ತೆರೆದುಕೊಳ್ಳುತ್ತದೆ. ಕಡಲ ಕಿನಾರೆಯಲ್ಲಿ ಹೊಚ್ಚ ಹೊಸ ಆಧುನಿಕ ಹಡಗುಗಳು ಕಣ್ಣಿಗೆ ಬೀಳುತ್ತವೆ. ಅಜಗಜಾಂತರವಿರುವ ಪುರಾತನ ಮತ್ತು ನವ್ಯ ಮಾದರಿಗಳ ನಡುವೆ ಸ್ನೇಹಪರ ಜನಜೀವನ ಮಾದರಿಯಾಗಿ ಕಾಣುತ್ತದ.

ಅಡ್ರಿಯಾಟಿಕ್ ಮುತ್ತು

ಇತಿಹಾಸದ ತೆಕ್ಕೆಯಲ್ಲೇ ಬೆಳೆದ ಈ ನಗರದ ದಿಟ್ಟ ಬದುಕು ಒಂದು ಸುಂದರ ಕಥಾನಕದಂತಿದೆ. 7ನೇ ಶತಮಾನದಲ್ಲಿ ಬೆಳಕಿಗೆ ಬಂದ ಈ ನಗರ ಕಲ್ಲಿನ ದ್ವೀಪ ಎಂದೇ ಕರೆಯಲ್ಪಡುತ್ತಿತ್ತು. ತದನಂತರ ಹಲವಾರು ಏಳುಬೀಳುಗಳನ್ನು ಕಂಡು, 14 ರಿಂದ 18ನೇ ಶತಮಾನದವರೆಗೂ ಸ್ವತಂತ್ರ ಆಳ್ವಿಕೆಯಲ್ಲಿತ್ತು. ಅದೇ ಕಾರಣಕ್ಕಾಗಿಯೇ ಹಲವಾರು ಬಾರಿ ವೈರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಮೊದಲು ಪೋರ್ಚುಗೀಸರ ದಾಳಿಯಿಂದ ತತ್ತರಿಸಿದ ನಗರಿ, 16ನೇ ಶತಮಾನದ ಭೂಕಂಪನದ ನಂತರ ನೆಲಕ್ಕುರುಳಿತ್ತು.

ಒಟ್ಟೋಮನ್ ಯುದ್ಧ, ನೆಪೋಲಿಯನ್ ಆಕ್ರಮಣ, ಇಟಲಿಯನ್ನರ ಆಕ್ರಮಣ - ಹೀಗೆ ಈ ಸುಂದರ ದ್ವೀಪ ಎದ್ದುನಿಲ್ಲುವ ಮುನ್ನವೇ ನೆಲಕಚ್ಚಿ ಹೋಗುತ್ತಿತ್ತು. ಎಲ್ಲ ಆಕ್ರಮಣಗಳಿಗೂ ಸೆಡ್ಡು ಹೊಡೆದು, ಕಲ್ಲಿನ ಕೋಟೆಯಾಗಿ ನಿಂತ ಡುಬ್ರಾವ್ನಿಕ್, ಎರಡನೇ ಮಹಾಯುದ್ಧದಲ್ಲಿ ಮತ್ತೆ ಮಾರಣಹೋಮವೊಂದಕ್ಕೆ ಸಿಲುಕಿತ್ತು, ಕ್ರೋಯೇಷಿಯನ್ ವಾರ್ ಎಂಬ ಆಂತರಿಕ ಜಗಳಕ್ಕೂ ಬಲಿಯಾಗಿ, 1992ರಲ್ಲಿ ಸಂಪೂರ್ಣವಾಗಿ ಸ್ವತಂತ್ರಗೊಂಡಿತು.

ಇಷ್ಟೆಲ್ಲಾ ನೋವು ಕಂಡ ನಗರಿ ಈಗ ಹೂದೋಟದಂತೆ ಅರಳಿ ನಿಂತಿದೆ. ಇದರ ಚೆಲುವಿಗೆ ಮಾರುಹೋಗದ ಕವಿಗಳೇ ಇಲ್ಲ. ಪ್ರಖ್ಯಾತ ಪ್ರೇಮಕವಿ ಬೈರನ್ ಈ ನಗರವನ್ನು ‘ಪರ್ಲ್ ಆಫ್ ದಿ ಅಡ್ರಿಯಾಟಿಕ್’ ಎಂದು ವರ್ಣಿಸಿದ. ಅರಳಿ ನಿಂತ ಈ ಕಡಲ ಮುತ್ತನ್ನೊಮ್ಮೆ ಕಣ್ತುಂಬಿಕೊಳ್ಳಬೇಕು. ಕಲ್ಲುಗಳು ಹೇಳುವ ಸಾಹಸಗಾಥೆಯನ್ನು, ಮತ್ತೊಮ್ಮೆ ಕಿವಿಗೊಟ್ಟು ಕೇಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.